ತಮಿಳುನಾಡು: ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ

1ಲಕ್ಷ ಟನ್‌ ತ್ಯಾಜ್ಯ ವಿಲೇವಾರಿ ಸವಾಲು

ಮಹಾ ಮಳೆ ನಿಂತು ಬಿಸಿಲೇರುತ್ತಿದ್ದರೂ ಚೆನ್ನೈ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ರಾಶಿ ಬಿದ್ದಿರುವ ಒಂದು ಲಕ್ಷ ಟನ್‌ಗಳಷ್ಟು ತ್ಯಾಜ್ಯವನ್ನು ವಿಲೇವಾರಿ ಸವಾಲು ಸರ್ಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳನ್ನು ಕಾಡಲಾರಂಭಿಸಿದೆ.

ಚೆನ್ನೈ (ಪಿಟಿಐ): ಮಹಾ ಮಳೆ ನಿಂತು ಬಿಸಿಲೇರುತ್ತಿದ್ದರೂ ಚೆನ್ನೈ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ರಾಶಿ ಬಿದ್ದಿರುವ ಒಂದು ಲಕ್ಷ ಟನ್‌ಗಳಷ್ಟು ತ್ಯಾಜ್ಯವನ್ನು ವಿಲೇವಾರಿ ಸವಾಲು ಸರ್ಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳನ್ನು ಕಾಡಲಾರಂಭಿಸಿದೆ.

ಕ್ಷಿಪ್ರವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ, ನಿಯೋಜನೆಗೊಂಡಿರುವ 30ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ಒತ್ತಡ ಹಾಕಲಾಗುತ್ತಿದೆ. ಎಲ್ಲಿ ನೋಡಿದರೂ ಪ್ಲಾಸ್ಟಿಕ್‌ ಚೀಲಗಳು, ಹಾಸಿಗೆಗಳು, ಕೊಳೆಯುತ್ತಿರುವ ಆಹಾರ ಧಾನ್ಯ ಹಾಗೂ ಇತರ ಗೃಹೋಪಯೋಗಿ ಸಾಮಗ್ರಿಗಳೇ ತುಂಬಿಕೊಂಡಿವೆ.

‘ಪಾಲಿಕೆಯ 22,500 ಕಾರ್ಮಿಕರಲ್ಲದೆ ಇತರೆಡೆಗಳಿಂದ ಕರೆಸಿಕೊಂಡಿರುವ 8000ಕ್ಕೂ ಅಧಿಕ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ತ್ಯಾಜ್ಯ ಸಾಗಾಟಕ್ಕೆ 60 ವಾಹನಗಳನ್ನು ನಿಯೋಜಿಸಲಾಗಿದೆ.

ವಿದ್ಯುತ್‌ ಬಿಲ್‌ ಮನ್ನಾ: ಚೆನ್ನೈ, ಕಾಂಚೀಪುರ, ಕಡಲೂರು ಮತ್ತು ತಿರುವಲ್ಲೂರ್‌ನ ಮಳೆ ಹಾಗೂ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಇನ್ನಷ್ಟು ಪರಿಹಾರ ಪ್ರಕಟಿಸಿರುವ ಮುಖ್ಯಮಂತ್ರಿ ಜಯಲಲಿತಾ, ಈ ಜಿಲ್ಲೆಗಳ ಸಂತ್ರಸ್ತರಿಗೆ  ವಿದ್ಯುತ್‌ ಬಿಲ್‌ ಮನ್ನಾ ಮಾಡಿದ್ದಾರೆ.
ಚೆನ್ನೈ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಮಂಗಳವಾರ   ಒಣಹವೆಯಿದ್ದ ಕಾರಣ ಪರಿಹಾರ ಕಾರ್ಯಾಚರಣೆ ಹಾಗೂ ಸಾಂಕ್ರಾಮಿಕ ರೋಗ ತಡೆ ಕಾರ್ಯ ನಿರಾತಂಕವಾಗಿ ಸಾಗಿತು.

ರಜನಿ ತೀರ್ಮಾನ:  ಮೆಗಾಸ್ಟಾರ್‌ ರಜನೀಕಾಂತ್‌ ಅವರು ತಮ್ಮ 64ನೆಯ ಹುಟ್ಟುಹಬ್ಬವನ್ನು ಆಚರಿಸದೇ ಇರಲು ನಿರ್ಧರಿಸಿದ್ದಾರೆ.
ಸಾಮಾನ್ಯವಾಗಿ ಅವರ ಹುಟ್ಟುಹಬ್ಬವನ್ನು ಜಾತ್ರೆಯೋಪಾದಿಯಲ್ಲಿ  ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ತಮಿಳುನಾಡಿನಾದ್ಯಂತ ಮಳೆ ಮತ್ತು ಪ್ರವಾಹದಿಂದಾಗಿ ಎದುರಾಗಿರುವ ದುಸ್ಥಿತಿಯ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ತಮ್ಮ ಹುಟ್ಟುಹಬ್ಬ ಆಚರಿಸುವುದಕ್ಕಿಂತ ಸಂತ್ರಸ್ತರಿಗೆ ಪರಿಹಾರ ಕಾರ್ಯದಲ್ಲಿ ಕೈಜೋಡಿಸುವುದು ಹೆಚ್ಚು ಅವಶ್ಯ ಎಂದು  ಅವರು ವಿನಂತಿಸಿದ್ದಾರೆ.

ಚೆನ್ನೈ ವ್ಯಕ್ತಿಯ ಶವ ರಾಮೇಶ್ವರಂನಲ್ಲಿ ಪತ್ತೆ: ಚೆನ್ನೈನ ವ್ಯಕ್ತಿಯೊಬ್ಬರ ಕಳೇಬರವು ಶ್ರೀಲಂಕಾದ ಟ್ರಿಂಕೋಮಲಿ ಕಡಲತೀರದಲ್ಲಿ ಮಂಗಳವಾರ ಪತ್ತೆಯಾಗಿದ್ದು, ತಮಿಳುನಾಡಿನಿಂದ ಪ್ರವಾಹದ ವೇಳೆ ಕೊಚ್ಚಿಕೊಂಡು ಬಂದಿರಬೇಕು ಎಂದು ಶಂಕಿಸಲಾಗಿದೆ.

ಮೀನುಗಾರರಿಗೆ ದೊರೆತ ಈ ಶವವು ಮಳೆಯ ಸಂದರ್ಭದಲ್ಲಿ ನಾಪತ್ತೆಯಾಗಿದ್ದ   ಚೆನ್ನೈನ ಕಾಮರಾಜ ನಗರದ ಎನ್‌ಜಿಒ ಕಾಲೋನಿಯ ಪೂಮಿ ದೊರೈ ಎಂಬವರದ್ದೆಂದು ಗುರುತಿಸಲಾಗಿದೆ.

ರಾಹುಲ್  ಭೇಟಿ: ಪ್ರವಾಹ ಪೀಡಿತ ತಮಿಳುನಾಡು ಮತ್ತು ಪುದುಚೇರಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಭೇಟಿ ನೀಡಿದ್ದರು.

ಮಗುವಿಗೆ ಮುಸ್ಲಿಂ ಯುವಕನ ಹೆಸರು: ಮಹಾ ಮಳೆ ಮತ್ತು ಪ್ರವಾಹದ ವೇಳೆ ಕುತ್ತಿಗೆ ಮಟ್ಟದ ನೀರಿನಲ್ಲಿ ಪ್ರಸವ ವೇದನೆಯಿಂದ ನೆರವಿಗಾಗಿ ಬೊಬ್ಬಿಡುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಮುಸ್ಲಿಂ ಯುವಕನ ಹೆಸರನ್ನೇ ತಮ್ಮ ನವಜಾತ ಶಿಶುವಿಗೆ ಇರಿಸುವ ಮೂಲಕ ಹಿಂದೂ ದಂಪತಿ ತಮ್ಮ ರಕ್ಷಕನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮಳೆಯಿಂದ ತತ್ತರಿಸಿದ್ದ ಉರಾಪಾಕ್ಕಂನ ಚಿತ್ರಾ–ಮೋಹನ್‌ ದಂಪತಿ ತಮ್ಮ ಹೆಣ್ಣು ಮಗುವಿಗೆ ‘ಯೂನಸ್‌’ಎಂದು ಹೆಸರಿಟ್ಟಿದ್ದಾರೆ.
ಡಿಸೆಂಬರ್‌ ಎರಡರಂದು ಮಳೆ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಎಂಬಿಎ ಪದವೀಧರ ಯೂನಸ್‌ ಅವರಿಗೆ ಉರಪಾಕ್ಕಂನ ಮನೆಯೊಂದರಿಂದ ಆಕ್ರಂದನ ಕೇಳಿ ಬಂದಾಗ ಮಹಿಳೆಯೊಬ್ಬರು ಬಹುತೇಕ ನೀರಿನಲ್ಲಿ ಮುಳುಗಡೆಯಾಗುವ ಹಂತದಲ್ಲಿದ್ದುದನ್ನು ಗಮನಿಸಿದ್ದರು.

ನೆರವಿಗಾಗಿ ಅವರು ಕೂಗುತ್ತಿದ್ದಾರೆಂದು ಮೊದಲು ಭಾವಿಸಿದರೂ ಅದು ಹೆರಿಗೆ ನೋವು ಎಂದು ಅರಿವಾಗುತ್ತಲೇ ಅವರನ್ನು ದೋಣಿಯ ಮೂಲಕ ಸಮೀಪದ ಪೆರುಂಗಾಲತೂರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು.

Comments