ನವದೆಹಲಿ

‘1.35 ಲಕ್ಷ ಮಹಿಳೆಯರು, 61 ಸಾವಿರ ಮಕ್ಕಳ ನಾಪತ್ತೆ’

ದೇಶದಲ್ಲಿ 1.35 ಲಕ್ಷ ಮಹಿಳೆಯರು ಮತ್ತು 61 ಸಾವಿರ ಮಕ್ಕಳು ನಾಪತ್ತೆಯಾಗಿದ್ದಾರೆ. ದೇಶದಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ 150 ವಿಶೇಷ ತನಿಖಾ ಘಟಕವನ್ನು ರಚಿಸಲು ಅನುಮೋದನೆ ನೀಡಲಾಗಿದೆ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ

ನವದೆಹಲಿ(ಪಿಟಿಐ): ದೇಶದಲ್ಲಿ 1.35 ಲಕ್ಷ ಮಹಿಳೆಯರು ಮತ್ತು 61 ಸಾವಿರ ಮಕ್ಕಳು ನಾಪತ್ತೆಯಾಗಿದ್ದಾರೆ. ದೇಶದಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ 150 ವಿಶೇಷ ತನಿಖಾ ಘಟಕವನ್ನು ರಚಿಸಲು ಅನುಮೋದನೆ ನೀಡಲಾಗಿದೆ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ.

‘ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ 150 ವಿಶೇಷ ತನಿಖಾ ಘಟಕವನ್ನು ರಚಿಸಲು ಗೃಹ ಸಚಿವಾಲಯ ಅನುಮೋದಿಸಿದೆ’ ಎಂದು ಗೃಹ ಖಾತೆ ರಾಜ್ಯ ಸಚಿವ ಹರಿಭಾಯಿ ಅವರು ತಿಳಿಸಿದರು.

ಆಂಧ್ರ ಹೊಸ ರಾಜಧಾನಿಗೆ  ₹ 27,097 ಕೋಟಿ ಅಗತ್ಯ: ಆಂಧ್ರಪ್ರದೇಶದ ಹೊಸ ರಾಜಧಾನಿ ‘ಅಮರಾವತಿ’ ಕಟ್ಟಲು ₹27,097 ಕೋಟಿ ಬೇಕಾಗಲಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಗೃಹ ಖಾತೆಯ ರಾಜ್ಯ ಸಚಿವ ಹರಿಭಾಯಿ  ಪಾರ್ಥಿಭಾಯಿ ಚೌಧರಿ ಅವರು ಲೋಕಸಭೆಗೆ ಈ ಮಾಹಿತಿ ನೀಡಿದರು.

ಆಂಧ್ರಪ್ರದೇಶ ಹೊಸ ರಾಜಧಾನಿ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಈಚೆಗೆ ಶಿಲಾನ್ಯಾಸ ಮಾಡಿದ್ದರು.

ಅಲ್ಪಸಂಖ್ಯಾತ ನಿರಾಶ್ರಿತರಿಗೆ ಭಾರತದಲ್ಲಿ ಜಾಗ: 2014ರ ಡಿ. 31 ಹಾಗೂ ಅದಕ್ಕಿಂತ ಮೊದಲು ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಅಲ್ಪಸಂಖ್ಯಾತ ಜನಾಂಗದ ನಿರಾಶ್ರಿತರು ಇಲ್ಲಿ ನೆಲೆಸಲು ಮಾನವೀಯತೆ ನೆಲೆಗಟ್ಟಿನಲ್ಲಿ ಅವಕಾಶ ನೀಡಲಾಗಿದೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ತಿಳಿಸಿದೆ.

ನಿರಾಶ್ರಿತರು ಸೂಕ್ತ ಪ್ರಯಾಣದ ದಾಖಲೆ ಅಥವಾ ಪಾಸ್‌ಪೋರ್ಟ್ ಹೊಂದಿಲ್ಲದಿದ್ದರೂ ಈ ಅವಕಾಶ ನೀಡಲಾಗಿದೆ. ಈ ಸಂಬಂಧ ಸೆಪ್ಟೆಂಬರ್ 7ರಂದು ಆದೇಶ ಹೊರಡಿಸಲಾಗಿದೆ ಎಂದು ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭಾರತದಲ್ಲಿ ಐಎಸ್‌ ಜಾಲ ಪತ್ತೆ ಕಾರ್ಯ ಶುರು: ಭಾರತದಲ್ಲಿ ಹರಡುತ್ತಿರುವ ಐಎಸ್‌ ಜಾಲವನ್ನು ಪತ್ತೆ ಹಚ್ಚುವ ಕೆಲಸ ಆರಂಭಿಸಲಾಗಿದೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರವು ಮಾಹಿತಿ ನೀಡಿತು.

‘ದೇಶದಲ್ಲಿ ಐಎಸ್ ಜಾಲ ಹರಡದಂತೆ ತಡೆಯುವುದು ಹಾಗೂ ಆಮೂಲಾಗ್ರ ವಾಗಿ ಹತ್ತಿಕ್ಕುವ ಕಾರ್ಯತಂತ್ರಗಳನ್ನು ಜಾರಿಗೊಳಿಸಲಾಗಿದೆ. ಸಂಸ್ಕೃತಿ, ಶಿಕ್ಷಣ ಹಾಗೂ ಔದ್ಯೋಗಿಕ ಚಟುವಟಿಕೆಗಳ ಮೂಲಕ ನಿಗಾ ಇಡಲು ಸರ್ಕಾರ ಯೋಜನೆ ರೂಪಿಸಿದೆ’ ಎಂದು ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಲೋಕಸಭೆಗೆ ತಿಳಿಸಿದರು.

Comments