*ನೆಹರೂ ಅವರಿಂದ ಆರಂಭ

ನ್ಯಾಷನಲ್ ಹೆರಾಲ್ಡ್, ಹಗರಣದ ಇತಿಹಾಸ

ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ (ಎಜೆಎಲ್‌) ಕಂಪೆನಿಯನ್ನು ಕಾಂಗ್ರೆಸ್‌ ಪ್ರಾರಂಭಿಸಿದ್ದು 1937ರಲ್ಲಿ. ಈ ಕಂಪೆನಿ 1938ರ ಸೆಪ್ಟೆಂಬರ್‌ 9ರಂದು ಜವಾಹರಲಾಲ್ ನೆಹರೂ ಅವರ ನೇತೃತ್ವದಲ್ಲಿ ಲಖನೌದಲ್ಲಿ ಇಂಗ್ಲಿಷ್‌ ಭಾಷೆಯ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಪ್ರಕಟಣೆ ಆರಂಭಿಸಿತು.

*ನೆಹರೂ ಅವರಿಂದ ಆರಂಭ: ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ (ಎಜೆಎಲ್‌) ಕಂಪೆನಿಯನ್ನು ಕಾಂಗ್ರೆಸ್‌ ಪ್ರಾರಂಭಿಸಿದ್ದು 1937ರಲ್ಲಿ. ಈ ಕಂಪೆನಿ 1938ರ ಸೆಪ್ಟೆಂಬರ್‌ 9ರಂದು ಜವಾಹರಲಾಲ್ ನೆಹರೂ ಅವರ ನೇತೃತ್ವದಲ್ಲಿ ಲಖನೌದಲ್ಲಿ ಇಂಗ್ಲಿಷ್‌ ಭಾಷೆಯ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಪ್ರಕಟಣೆ ಆರಂಭಿಸಿತು. ಬಳಿಕ ನವಜೀವನ್‌ (ಹಿಂದಿ) ಮತ್ತು ಕ್ವಾಮಿ ಆವಾಜ್‌ (ಉರ್ದು) ಪತ್ರಿಕೆಗಳನ್ನು ಆರಂಭಿಸಿತು.

*ಭಾರಿ ದೇಣಿಗೆ, ಆಸ್ತಿ: ನೆಹರೂ ಅವರು ಪ್ರಧಾನಿಯಾಗಿದ್ದಾಗ ನ್ಯಾಷನಲ್‌ ಹೆರಾಲ್ಡ್‌ಗೆ ಭಾರಿ ಪ್ರಮಾಣದ ದೇಣಿಗೆ ಹರಿದುಬರುತ್ತಿತ್ತು. ಅಲ್ಲದೆ, ನೆಹರೂ ಅವರು ಕಂಪೆನಿಗೆ ವಿವಿಧೆಡೆ ಭೂಮಿಯನ್ನೂ ಮಂಜೂರು ಮಾಡಿದ್ದರು. ಎಜೆಎಲ್‌ ಆರ್ಥಿಕ ಸಂಕಷ್ಟಕ್ಕೆ  ಸಿಲುಕಿದ್ದರೂ, ಅದು ಈಗ ಹೊಂದಿರುವ ಆಸ್ತಿಯ ಮೌಲ್ಯ ₹1,600 ಕೋಟಿಯಿಂದ ₹5 ಸಾವಿರ ಕೋಟಿಗಳಷ್ಟಿದೆ.

*2007ರಲ್ಲಿ ಪ್ರಕಟಣೆ ಸ್ಥಗಿತ: 2007ರ ಏಪ್ರಿಲ್‌ 1ರಂದು ತಾತ್ಕಾಲಿಕವಾಗಿ ಪ್ರಕಟಣೆ ಸ್ಥಗಿತಗೊಳಿಸುತ್ತಿರುವುದಾಗಿ ಪತ್ರಿಕೆ ಹೇಳಿತು. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ವೈಫಲ್ಯ ಮತ್ತು ಜಾಹೀರಾತು ಆದಾಯದ ಕೊರತೆ ಎದುರಾಗಿತ್ತು. ಹೀಗಾಗಿ ಎಜೆಎಲ್‌ನ ಮೂರೂ ಪ್ರಕಟಣೆಗಳು ನಿಂತುಹೋದವು. 

*ಸೋನಿಯಾ, ರಾಹುಲ್‌ರಿಂದ ವೈಐಎಲ್‌ ಸ್ಥಾಪನೆ: 2011ರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಲಾ ಶೇ 38ರಷ್ಟು ಷೇರು ಹೂಡಿಕೆ ಮಾಡಿ ಯಂಗ್ ಇಂಡಿಯಾ ಲಿಮಿಟೆಡ್‌ (ವೈಐಎಲ್‌) ಎಂಬ ಕಂಪೆನಿ ಪ್ರಾರಂಭಿಸಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಆಸ್ಕರ್ ಫರ್ನಾಂಡಿಸ್‌ ಮತ್ತು ಮೋತಿಲಾಲ್‌ ವೋರಾ ಈ ಕಂಪೆನಿಯ ಆಡಳಿತ ಮಂಡಳಿಯಲ್ಲಿದ್ದಾರೆ. ವೋರಾ ಮತ್ತು ಫರ್ನಾಂಡಿಸ್‌ ತಲಾ ಶೇ 24ರಷ್ಟು ಷೇರುಗಳನ್ನು ಹೊಂದಿದ್ದಾರೆ.

*ಖರೀದಿ: ನಷ್ಟದಲ್ಲಿದ್ದ ಎಜೆಎಲ್‌ಅನ್ನು ₹90.21 ಕೋಟಿ ಮೊತ್ತಕ್ಕೆ ಈ ಕಂಪೆನಿ ಖರೀದಿಸಿತು. ಇದರಲ್ಲಿ ₹50 ಲಕ್ಷ ಮೊತ್ತವನ್ನು ಕಾಂಗ್ರೆಸ್‌ ತನ್ನ ಖಜಾನೆಯಿಂದಲೇ ವರ್ಗಾಯಿಸಿತು. ಎಜೆಎಲ್‌ ಒಡೆತನದಲ್ಲಿದ್ದ ಹೆರಾಲ್ಡ್‌ ಹೌಸ್‌ನ ನವೀಕರಣಕ್ಕೆ ವೈಐಎಲ್‌ ₹1 ಕೋಟಿ ನೆರವು ನೀಡಿತು.

*ಅವ್ಯವಹಾರ ಆರೋಪ: ಎಜೆಎಲ್‌ನ ಖರೀದಿ ವ್ಯವಹಾರದಲ್ಲಿ ಭಾರಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ 2012ರ ಜೂನ್‌ನಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಿಚಾರಣೆಗೆ ಹಾಜರಾಗುವಂತೆ 2014ರ ಜೂನ್‌ 26ರಂದು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಎಲ್ಲಾ ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿತು. ಈ ಸಮನ್ಸ್‌ಗೆ ದೆಹಲಿ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ತನಿಖೆಗೆ ತಡೆಯಾಜ್ಞೆ ಕೋರಿ 2015ರ ಜನವರಿಯಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿಪಿ. ವಾಯಿಶ್‌ ಬೇರೆ ಪೀಠಕ್ಕೆ ವರ್ಗಾಯಿಸಿದ್ದರು. 

*ಪ್ರಕರಣದ ಆರೋಪಿಗಳು: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್‌ ಮುಖಂಡರಾದ ಮೋತಿ ಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್‌, ಪತ್ರಕರ್ತ ಸುಮನ್ ದುಬೆ, ದೂರಸಂಪರ್ಕ ಎಂಜಿನಿಯರ್‌ ಸ್ಯಾಮ್‌ ಪಿತ್ರೊಡ ಮತ್ತು ಯಂಗ್ ಇಂಡಿಯಾ ಲಿಮಿಟೆಡ್‌

*ಇ.ಡಿ.ಯಿಂದ ತನಿಖೆ: ಈ ತನಿಖೆಯನ್ನು ನಡೆಸುತ್ತಿದ್ದ ಜಾರಿ ನಿರ್ದೇಶನಾಲಯ (ಇ.ಡಿ) 2015ರ ಆಗಸ್ಟ್‌ 18ರಂದು ತಾಂತ್ರಿಕ ಕಾರಣಗಳಿಂದ ತನಿಖೆಯನ್ನು ನಿಲ್ಲಿಸುವುದಾಗಿ ಹೇಳಿತು. ಈ ತನಿಖೆಯನ್ನು ಮತ್ತೆ ಆರಂಭಿಸುವುದಾಗಿ ಇಡಿ 2015ರ ಸೆಪ್ಟೆಂಬರ್ 18ರಂದು ಪ್ರಕಟಿಸಿತು.

Comments