ರೈಲುಗಳ ಡಿಕ್ಕಿ: ಚಾಲಕ ಸಾವು

ಹರಿಯಾಣದಲ್ಲಿ ರೈಲುಗಳು ಡಿಕ್ಕಿಯಾಗಿ ಚಾಲಕನೊಬ್ಬ ಸಾವನ್ನಪ್ಪಿದ್ದು ಇಬ್ಬರು ಸಿಬ್ಬಂದಿ ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

ಪಲ್ವಾಲ್‌ , ಹರಿಯಾಣ (ಪಿಟಿಐ): ಹರಿಯಾಣದಲ್ಲಿ ರೈಲುಗಳು ಡಿಕ್ಕಿಯಾಗಿ ಚಾಲಕನೊಬ್ಬ ಸಾವನ್ನಪ್ಪಿದ್ದು ಇಬ್ಬರು ಸಿಬ್ಬಂದಿ ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

ಪಲ್ವಾಲ್‌  ಜಿಲ್ಲೆಯ ಬಾಗೋಲ್‌  ರೈಲು ನಿಲ್ದಾಣದಲ್ಲಿ ಬೆಳಿಗ್ಗೆ 8.30ಕ್ಕೆ  ಸ್ಥಳೀಯ ವಿದ್ಯುತ್‌ ಚಾಲಿತ ರೈಲು (ಇಎಂಯು)  ಲೋಕಮಾನ್ಯ ತಿಲಕ್‌ ಎಕ್ಸ್‌ಪ್ರೆಸ್‌ಗೆ  ಡಿಕ್ಕಿ ಹೊಡೆದಿದೆ.

ಎರಡೂ ರೈಲಿನ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಮಂಜು ಕವಿದಿತ್ತು. ಚಾಲಕನ ಅಜಾಗರೂಕತೆಯೇ ದುರ್ಘಟನೆಗೆ ಕಾರಣ ಎಂದು ಉತ್ತರ ವಿಭಾಗ ರೈಲ್ವೆ ಸಿಆರ್‌ಪಿಒ ನೀರಜ್‌ ಶರ್ಮಾ ತಿಳಿಸಿದ್ದಾರೆ.

ಸ್ಥಳೀಯ ರೈಲಿನ ಚಾಲಕನಿಗೆ ಸಿಗ್ನಲ್‌ ಗುರುತಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಈ ರೈಲು ನಿಂತಿದ್ದ ಎಕ್ಸ್‌ಪ್ರೆಸ್‌ ರೈಲಿಗೆ ಗುದ್ದಿದೆ ಎಂದು ನೀರಜ್‌ ತಿಳಿಸಿದ್ದಾರೆ.

ರೈಲಿಗೆ ಕಾರು ಡಿಕ್ಕಿ–13 ಸಾವು (ರಾಮ್‌ಗಡ–ಜಾರ್ಖಂಡ್‌ ವರದಿ):  ಹೌರಾ–ಭೋಪಾಲ್‌ ಎಕ್ಸ್‌ಪ್ರೆಸ್‌ ರೈಲು ರಾಮ್‌ಗಡ ಜಿಲ್ಲೆಯ ಭುರ್ಖುಂಡಾ ರೈಲು ನಿಲ್ದಾಣದ ಬಳಿ ಮಾನವ ರಹಿತ ಕ್ರಾಸಿಂಗ್‌ ಬಳಿ ರೈಲಿಗೆ ಕಾರು ಡಿಕ್ಕಿ ಹೊಡೆದು ಐದು ಮಕ್ಕಳು ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Comments