ನ್ಯಾಷನಲ್‌ ಹೆರಾಲ್ಡ್‌ ಹಗರಣ: ಸಂಸತ್‌ನಲ್ಲಿ ಗದ್ದಲ, ನಡೆಯದ ಕಲಾಪ

ಕಾಂಗ್ರೆಸ್-ಬಿಜೆಪಿ ಜಟಾಪಟಿ ತೀವ್ರ

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ ಮಂಗಳವಾರ ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿತು. ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಸಂಸದರು ಲೋಕಸಭೆಯಲ್ಲಿ ನಡೆಸಿದ ಗದ್ದಲದ ನೇತೃತ್ವ ವಹಿಸಿದ್ದರು.

ನವದೆಹಲಿ (ಪಿಟಿಐ): ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ ಮಂಗಳವಾರ ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿತು. ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಸಂಸದರು ಲೋಕಸಭೆಯಲ್ಲಿ ನಡೆಸಿದ ಗದ್ದಲದ ನೇತೃತ್ವ ವಹಿಸಿದ್ದರು.

‘ದ್ವೇಷದ ರಾಜಕಾರಣ’ ನಡೆಸಲಾಗುತ್ತಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್‌ ಸಂಸದರೂ ಪ್ರತಿಭಟನೆ ನಡೆಸಿದರು.

ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಕಾಂಗ್ರೆಸ್‌ ಗದ್ದಲದಿಂದಾಗಿ ಯಾವುದೇ ಕಲಾಪ ನಡೆಯಲಿಲ್ಲ. ‘ನಿರಂಕುಶಾಧಿಕಾರಕ್ಕೆ ಧಿಕ್ಕಾರ, ದ್ವೇಷ ರಾಜಕಾರಣ ನಡೆಯದು’ ಎಂದು ಘೋಷಣೆ ಕೂಗಿ ಕಾಂಗ್ರೆಸ್‌ ಸಂಸದರು ಗದ್ದಲ ಎಬ್ಬಿಸಿದರು.

ಯಾವ ವಿಚಾರಕ್ಕಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂಬುದನ್ನು ಕಾಂಗ್ರೆಸ್‌ನ ಯಾವುದೇ ಸಂಸದರು ಸ್ಪಷ್ಟಪಡಿಸಲಿಲ್ಲ. ಆದರೆ ‘ನ್ಯಾಷನಲ್  ಹೆರಾಲ್ಡ್‌’ ಪ್ರಕರಣದಲ್ಲಿ ಸೋನಿಯಾ ಮತ್ತು ಇತರ ಆರೋಪಿಗಳ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದ ಮರು ದಿನ ಈ ಗದ್ದಲ ನಡೆದಿದೆ.

ಒಂದೇ ದಿನದಲ್ಲಿ ಕಾಂಗ್ರೆಸ್‌ ಸದಸ್ಯರು ಇಷ್ಟೊಂದು ಆಕ್ರೋಶಗೊಳ್ಳಲು ಕಾರಣವಾದ ಅಂಶವಾದರೂ ಏನು ಎಂದು ಪ್ರಶ್ನಿಸಿ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ರಾಜೀವ್ ಪ್ರತಾಪ್‌ ರೂಡಿ ಕೆಣಕಿದರು.

‘ಸಮಸ್ಯೆ ಏನು ಎಂಬುದನ್ನು ತಿಳಿದುಕೊಳ್ಳಲು ದೇಶ ಬಯಸುತ್ತಿದೆ. ಸಮಸ್ಯೆ ಏನು ಎಂಬುದು ಯಾರಿಗೂ ಗೊತ್ತಿಲ್ಲ. ಸಮಸ್ಯೆಯನ್ನು ಆಲಿಸಲು ನಾವು ಸಿದ್ಧರಿದ್ದೇವೆ. ಅವರವರ ಅಸನಗಳಿಗೆ ಹಿಂದಿರುಗಿ ಸಮಸ್ಯೆಯನ್ನು ಹೇಳಲಿ’ ಎಂಬ ರೂಡಿ ಅವರ ಮನವಿಯನ್ನು ಕಾಂಗ್ರೆಸ್‌ ಸಂಸದರು ಕಿವಿಗೇ ಹಾಕಿಕೊಳ್ಳಲಿಲ್ಲ.

‘ಸಮಸ್ಯೆ ಏನು ಎಂಬುದನ್ನು ಹೇಳಿ, ಅದನ್ನು ಕೇಳಲು ಸಿದ್ಧ’ ಎಂಬ ಸ್ಪೀಕರ್‌ ಮನವೊಲಿಕೆಗೂ ಕಾಂಗ್ರೆಸ್‌ ಸದಸ್ಯರು ಬೆಲೆ ನೀಡಲಿಲ್ಲ.

ರಾಜ್ಯಸಭೆಯಲ್ಲೂ ‘ದ್ವೇಷ ರಾಜಕಾರಣ’:  ದೇಶದಲ್ಲಿ ದ್ವೇಷ ರಾಜಕಾರಣದ ವಾತಾವರಣ ಇರುವುದು ನೋವು ತಂದಿದೆ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಹೇಳಿದರು. ಕಳೆದ ಒಂದೂವರೆ ವರ್ಷ ಅವಧಿಯಲ್ಲಿ ಭಾರತವನ್ನು ‘ವಿರೋಧ ಪಕ್ಷ ಮುಕ್ತ’ ದೇಶವನ್ನಾಗಿ ಮಾಡಲು ಸರ್ಕಾರ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎನ್‌ಡಿಎ, ‘ಕಾಂಗ್ರೆಸ್‌ ಮುಕ್ತ ಭಾರತ’ ಎಂಬ ಘೋಷಣೆಯನ್ನು ಹೊರಡಿಸಿತ್ತು. ಇದು ಚುನಾವಣೆ ಸಂದರ್ಭಕ್ಕಷ್ಟೇ ಸೀಮಿತ. ಒಂದು ಬಾರಿ ಸರ್ಕಾರ ರಚನೆಯಾದ ಮೇಲೆ ಅಭಿ ವೃದ್ಧಿ ಮತ್ತು ಬಡತನ ನಿರ್ಮೂಲನೆಗೆ ಗಮನ ಹರಿಸುತ್ತದೆ ಎಂದುಕೊಂಡಿದ್ದೆವು. ಆದರೆ ಸರ್ಕಾರ ಈಗ ಕಾಂಗ್ರೆಸ್‌ ಮುಕ್ತ ಭಾರತ ಅಲ್ಲ, ವಿರೋಧ ಪಕ್ಷ ಮುಕ್ತ ಭಾರತ ಮಾಡಲು ಹೊರಟಿದೆ ಎಂದು ಆಜಾದ್‌ ಟೀಕಿಸಿದರು.

ಕಾನೂನು ಎದುರಿಸಿ: ಜೇಟ್ಲಿ (ಪ್ರಜಾವಾಣಿ ವರದಿ): ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ನಡೆಸುತ್ತಿದೆ ಎಂಬ ಕಾಂಗ್ರೆಸ್‌ ಆರೋಪವನ್ನು ಸರ್ಕಾರ ತಿರಸ್ಕರಿಸಿದೆ. ಸೋನಿಯಾ ಮತ್ತು ರಾಹುಲ್ ಅವರಿಗೆ ನ್ಯಾಯಾಲಯ ನೋಟಿಸ್‌ ನೀಡಿದೆ. ಈಗ ಅವರಿಬ್ಬರೂ ಅನಗತ್ಯ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಕಾಂಗ್ರೆಸ್‌ ಮಾಡಿರುವ ‘ಗಂಭೀರ’ ಆರೋಪದ ಬಗ್ಗೆ ಸದನದಲ್ಲಿ ಚರ್ಚೆಗೆ ಸರ್ಕಾರ ಸಿದ್ಧವಿದೆ. ವಾಸ್ತವಾಂಶವನ್ನು ಸಂಸತ್ತಿನಲ್ಲಿ ಮಂಡಿಸೋಣ ಎಂದು ಜೇಟ್ಲಿ ಹೇಳಿದ್ದಾರೆ.

ಸಂಸತ್‌ ಕಲಾಪಕ್ಕೆ ಕಾಂಗ್ರೆಸ್‌ ಸಂಸದರು ಅಡ್ಡಿಪಡಿಸಿರುವುದನ್ನು ಟೀಕಿಸಿದ ಅವರು, ಸೋನಿಯಾ, ರಾಹುಲ್ ಸೇರಿ ಪಕ್ಷದ ಮುಖಂಡರು ನ್ಯಾಯಾಲಯವನ್ನು ಎದುರಿಸಬೇಕು ಎಂದು ಹೇಳಿದ್ದಾರೆ.

ಇಂತಹ ಪ್ರಕರಣಗಳಲ್ಲಿ ಯಾರು ತಪ್ಪಿತಸ್ಥರು, ಯಾರು ಪ್ರಾಮಾಣಿಕರು ಎಂಬುದನ್ನು ಸಂಸತ್ತು ಅಥವಾ ಮಾಧ್ಯಮಗಳು ನಿರ್ಧರಿಸಲು ಭಾರತ ‘ಹುಸಿ ಜನತಂತ್ರ’ ಅಲ್ಲ ಎಂದು ಜೇಟ್ಲಿ ತಿರುಗೇಟು ನೀಡಿದ್ದಾರೆ.

‘ಖಾಸಗಿ ದೂರು ದಾಖಲಾಗಿದೆ. ಸರ್ಕಾರಕ್ಕೂ ಅದಕ್ಕೂ ಸಂಬಂಧ ಇಲ್ಲ. ಹೈಕೋರ್ಟ್‌ ಅವರ ಅರ್ಜಿಯನ್ನು ವಜಾ ಮಾಡಿ ವಿಚಾರಣೆ ಎದುರಿಸಿ ಎಂದಿದೆ. ಈ ದೇಶದಲ್ಲಿ ಕಾನೂನಿನಿಂದ ಯಾರಿಗೂ ರಕ್ಷಣೆ ಇಲ್ಲ. ಅವರು ಮುಂದಿನ ನ್ಯಾಯಾಲಯದಲ್ಲಿ ಆದೇಶವನ್ನು ಪ್ರಶ್ನಿಸಬಹುದು ಅಥವಾ ವಿಚಾರಣೆ ಎದುರಿಸಬಹುದು’ ಎಂದು ಜೇಟ್ಲಿ ಹೇಳಿದ್ದಾರೆ.

****
ನಾನು ಇಂದಿರಾ ಗಾಂಧಿ ಸೊಸೆ. ನಾನು ಯಾರಿಗೂ ಹೆದರುವುದಿಲ್ಲ.
-ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷೆ

ಕಾಂಗ್ರೆಸ್‌ ಮುಖಂಡರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನೋಟಿಸ್‌ ನೀಡಿದ್ದು ಸರ್ಕಾರವಲ್ಲ, ನ್ಯಾಯಾಂಗ. ಹಾಗಾಗಿ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿ.
-ಅರುಣ್‌ ಜೇಟ್ಲಿ, ಕೇಂದ್ರ ಹಣಕಾಸು ಸಚಿವ

Comments