ಕಗ್ಗತ್ತಲ ರಾತ್ರಿಯಲ್ಲಿ ಪರಕಾಯ ಪ್ರವೇಶ

ಬಹಳ ಹಳೇ ವಿಚಾರವೇನೂ ಅಲ್ಲ. ಹಾಸ್ಟೆಲ್ಲಿನ ರೂಮಿನ ಹತ್ತಿರ ಪಕ್ಷಿಗಳು ಬಂದು ಕೂರಲು ಶುರು ಮಾಡಿದ್ದವು. ಬೆಳ್ ಬೆಳಿಗ್ಗೆನೇ ರೂಮಿನ ಕಿಟಕಿ ಹತ್ತಿರ ಒಂದೆರಡು ಪಾರಿವಾಳಗಳು ಬಂದು ಕೂರುವುದನ್ನು ಅಭ್ಯಾಸ ಮಾಡಿಕೊಂಡಿದ್ದವು. ಅವಕ್ಕೆ ಹಾಕಲೆಂದೇ ಮೆಸ್ಸಿನ ಒಡೆಯ ಮನೋಹರನ ಬಳಿ ಕಾಳುಗಳನ್ನು ಬೇಡಿ ತಂದಿಟ್ಟಿದ್ದರು ಹುಡುಗಿಯರು.

ಬಹಳ ಹಳೇ ವಿಚಾರವೇನೂ ಅಲ್ಲ. ಹಾಸ್ಟೆಲ್ಲಿನ ರೂಮಿನ ಹತ್ತಿರ ಪಕ್ಷಿಗಳು ಬಂದು ಕೂರಲು ಶುರು ಮಾಡಿದ್ದವು. ಬೆಳ್ ಬೆಳಿಗ್ಗೆನೇ ರೂಮಿನ ಕಿಟಕಿ ಹತ್ತಿರ ಒಂದೆರಡು ಪಾರಿವಾಳಗಳು ಬಂದು ಕೂರುವುದನ್ನು ಅಭ್ಯಾಸ ಮಾಡಿಕೊಂಡಿದ್ದವು. ಅವಕ್ಕೆ ಹಾಕಲೆಂದೇ ಮೆಸ್ಸಿನ ಒಡೆಯ ಮನೋಹರನ ಬಳಿ ಕಾಳುಗಳನ್ನು ಬೇಡಿ ತಂದಿಟ್ಟಿದ್ದರು ಹುಡುಗಿಯರು.

ಕಾಳು ಹಾಕಿದರೆ ಸಮಾಧಾನವಾಗಿ ತಿಂದು ಅಲ್ಲಿ ಇಲ್ಲಿ ಹಾರಾಡುತ್ತಿದ್ದವು. ಅಕಸ್ಮಾತ್ ಕಾಳು ಹಾಕಲು ಮರೆತಿದ್ದರೆ, ಕಾಳು ಹಾಕುವ ತನಕವೂ ಗುಡ್ರುಂಗ್  ಗುಡ್ರುಂಗ್ ಅಂತ ಹೊಳೆಯುವ ಕತ್ತು ಕುಣಿಸುತ್ತಾ ಓಡಾಡುತ್ತಿದ್ದವು. ಒಮ್ಮೊಮ್ಮೆ ಪಾರಿವಾಳಗಳು ಬಂದು ಹೋದ ಮೇಲೆ ಮೆಷ್ ಹಾಕಿದ್ದ ಕಿಟಕಿ ಹತ್ತಿರ ಗಿಳಿಗಳು ಬರುತ್ತಿದ್ದವು. ಗಿಳಿಗೆ ಮೆಣಸಿನಕಾಯಿ ಇಷ್ಟ ಅಂತ ಯಾರೋ ಹೇಳಿದ್ದರು. ಅದಕ್ಕಾಗಿ ಮನೋಹರನ ಹತ್ತಿರ ಕಾಡಿ ಬೇಡಿ ಪ್ರತಿ ದಿನವೂ ಹವಳದಂತೆ ಹೊಳೆಯುತ್ತಿದ್ದ ಕೆಂಪು ಮೆಣಸಿನಕಾಯಿಗಳನ್ನು ತಂದು ಹಾಕುತ್ತಿದ್ದಳು ವಿಜಿ.

ಈ ವ್ಯವಹಾರ ಬಹುತೇಕ ಒಂದು ವಾರ ನಡೆಯಿತು. ದಿನಾ ಮೆಣಸಿನಕಾಯಿ ತೆಗೆದುಕೊಂಡು ಹೋಗ್ತಾಳಲ್ಲ ಎಂದು ಕಿಚಾಯಿಸಲು ಮನೋಹರ ವಿಜಿಯನ್ನು ಕೇಳಿದ. ‘ಏನ್ರೀ ವಿಷಯ? ದಿನಾ ಮೆಣಸಿನ್ಕಾಯಿ ತಗೊಂಡು ಹೋಗ್ತಾ ಇದೀರಾ? ಏನ್ ಮಾಡ್ತಿದೀರಾ ಅವನ್ನು ತಗೊಂಡು?’
‘ಏನೂ ಇಲ್ಲ ಮನೋಹರ್, ಸುಮ್ನೆ!’
‘ಅಹಹಹ! ಅಲ್ರೀ ದಿನಾ ತಗೊಂಡು ಹೋಗ್ತಿದೀರಾ. ಕೇಳಿದ್ರೆ ಏನೂ ಇಲ್ಲ ಅಂತೀರಲ್ಲ?’– ಮನೋಹರನ ಮಾತಿನಲ್ಲಿ ಒಂದು ರೀತಿ ಕುಹಕ ಇದ್ದಂತೆ ಭಾಸವಾಯಿತು. ಅವಳಿಗೆ ತಲೆ ಧಿಂ ಎಂದು ಸಿಟ್ಟು ಏರಿದಾಗಲೆಲ್ಲ ತನ್ನ ಊರಾದ ದಾವಣಗೆರೆ ಆಡು ಮಾತುಗಳೇ ಸರಾಗವಾಗಿ ಬರುತ್ತಿದ್ದವು.

‘ಅಣಾ, ಬರೀ ಮೆಣ್ಸಿನ್ಕಾಯ್ ತಗಂಡ್ ಹ್ವಂಟೀನಪಾ. ಯಾಕ ಅಂತ ತಗಂಡ್ ನೀ ಏನ್ ಮಾಡ್ತೀ? ಬೆಳ್ಳಿ ತಗಂಡ್ ಹ್ವಂಟಿಲ್ಲ, ಭಂಗಾರ್ ತಗಂಡ್ ಹ್ವಂಟಿಲ್ಲ. ಬರೇ ಮೆಣ್ಸಿನ್ಕಾಯಿಗೆ ಇಷ್ಟ್ ಕ್ರಾಸ್ ಎಕ್ಸಾಮಿನೇಶನ್ ಮಾಡ್ತೀಯಲ್ಲ? ಏನ್ ನಿಮ್ಮಪ್ಪನ್ ಮನಿ ಆಸ್ತಿ ಅಲ್ಲ ತಗೋ’– ಈ ರೀತಿಯ ಉತ್ತರವನ್ನು ನಿರೀಕ್ಷಿಸದಿದ್ದ ಮನೋಹರನಿಗೆ ಒಂದು ರೀತಿಯಲ್ಲಿ ತಬ್ಬಿಬ್ಬಾಯಿತು.

‘ಅಯ್ಯಾ! ಸುಮ್ನೆ ತಮಾಷೆಗೆ ಕೇಳಿದೆನಪ್ಪ! ಅದ್ಯಾಕ್ರೀ ಹಂಗೆ ಮೆಣ್ಸಿನ್ಕಾಯಿ ಸೀಳಿ ಇನ್ನೆಲ್ಲೋ ಇಟ್ಕೊಂಡೋರ ಥರಾ ಉರೀತೀರಾ? ಏನ್ ಬೇಕಾದ್ರೂ ಮಾಡ್ಕೊಳಿ ಹೋಗಿ!’ ಎಂದು ಬಹಳ ಅಸಮಾಧಾನದಿಂದ ಹೇಳಿದ.

ಯಾವಾಗ ಮನೋಹರ ಕಾದ ಎಣ್ಣೆಗೆ ಬಿದ್ದ ಲವಂಗದ ಹಾಗೆ ಫಡ್ ಅಂತ ಸಿಡಿದನೋ, ಆಗ ವಿಜಿಗೂ ಸ್ವಲ್ಪ ಮನಸ್ಸು ಕಂಟ್ರೋಲಿಗೆ ಬಂತು.

‘ರೂಮ್ ಕಿಟಕಿ ಹತ್ರ ಪಾರಿವಾಳ, ಗಿಳಿ ಬರ್ತವೆ ಮನೋಹರ್. ಅವಕ್ಕೆ ತಿನ್ನಕ್ಕೆ ಕೊಡೋಣಾ ಅಂತ ತಗೊಂಡು ಹೋಗ್ತಿದ್ದೆ’ ಎಂದಳು ವಿಜಿ. ಅವಳು ತಣ್ಣಗಾದದ್ದನ್ನ ಕೇಳಿ ಮನೋಹರನೂ ಸಮಾಧಾನ ವಹಿಸಿದ. ‘ಆಲ್ರೀ, ನಾನ್ಯಾಕೆ ಕೇಳಿದೆ ಅಂದ್ರೆ ಮೊನ್ನೆ ಪೋಸ್ಟ್ ಮ್ಯಾನನ ಸುದ್ದಿ ಆಯ್ತಲ್ಲ? ಅದಾದ ಮೇಲೆ ಹೊಸ ಕಾಟ ಶುರುವಾಗಿದೆ ಗೊತ್ತಾ? ಕಿಟಕಿಯಿಂದ ಹುಡ್ಗೀರ್ ರೂಮ್ ಒಳಕ್ಕೆ ಇಣುಕಿ ನೋಡಿ ಬರ್ತೀವಿ ಅಂತ ಹುಡುಗರು ಬೆಟ್ಸ್ ಕಟ್ಕೊಂಡಿದಾರಂತೆ. ಪಕ್ಕದಲ್ಲಿ ಹೊಸಾ ಹಾಸ್ಟೆಲ್ ಇದೆಯಲ್ಲ, ಅಲ್ಲಿಗೆ ಬರೋಕೆ ಶುರು ಮಾಡಿದ್ದಾರಂತೆ’ ಎಂದ.

ಹುಡುಗರು ಹುಡುಗಿಯರ ಹಾಸ್ಟೆಲ್ಲಿನ ಬಗ್ಗೆ ಕುತೂಹಲ ಬೆಳೆಸಿಕೊಂಡಷ್ಟು ವಿದ್ಯೆಯ ಬಗ್ಗೆ ಬೆಳೆಸಿಕೊಂಡಿದ್ದರೆ ಭವ್ಯ ಭಾರತ ದೇಶದಲ್ಲಿ ಎಂಥೆಂಥಾ ಪ್ರತಿಭೆಗಳು ರಾರಾಜಿಸಬಹುದಿತ್ತು! ಆದರೆ ಹಾಗಾಗ್ಲಿಲ್ವೇ! ಪಕ್ಕದ ಹಾಸ್ಟೆಲಿಗೆ ಹುಡುಗರು ಬಂದು ರೂಮಿನ ಕಿಟಕಿಯಲ್ಲಿ ನಿಂತು ಇಣುಕಿ ನೋಡೋ ಬೆಟ್ಸ್ ಗೆಲ್ಲುತ್ತಾ ಇರೋದರ ಬಗ್ಗೆ ಮನೋಹರ ವಿಜಿಗೆ ಹೇಳಿದ್ದು ಎರಡು ಕಾರಣಕ್ಕೆ. ಮೊದಲನೇದು, ‘ವಿಷ್ಯ ಗೊತ್ತಿರ್ಲಿ’ ಅಂತ. ಈ ‘ವಿಷ್ಯ ಗೊತ್ತಿರ್ಲಿ’ ಎನ್ನುವಷ್ಟು ದೇಶಾವರಿ ಕಾರಣ ಜನಗಳ ಸಮಯ ಎಷ್ಟು ತಿಂದುಹಾಕುತ್ತದೆ, ಅಷ್ಟು ಹೊತ್ತಿನಲ್ಲಿ ದೇಶದ ದುಡಿಮೆ ಮಟ್ಟ ಎಷ್ಟು ಹೆಚ್ಚಬಹುದು ಎನ್ನುವುದನ್ನು ಯಾರಾದರೂ ಆರ್ಥಿಕ ತಜ್ಞರು ಲೆಕ್ಕ ಹಾಕಿದರೆ ಎದೆ ಒಡೆದು ಹೋಗುವಂಥಾ ವಿವರಗಳು ಗೊತ್ತಾಗಬಹುದು. ಈ ‘ವಿಷ್ಯ ಗೊತ್ತಿರ್ಲಿ’ ಎಂಬ ಏಕೈಕ ಕಾರಣವನ್ನು ಮುಂದಿಟ್ಟುಕೊಂಡು ವಿಷಯ ಹೇಳುವವರೂ, ವಿಷಯ ಸಂಗ್ರಹಣೆ ಮಾಡುವವರೂ, ವಿಷಯ ದಾಟಿಸುವವರೂ ಸಾಕಷ್ಟು ಸಮಯಹರಣ ಮಾಡುತ್ತಾ ಜೀವನ ಸವೆಸುತ್ತಾರೆ.

ಅದು ಒತ್ತಟ್ಟಿಗಿರಲಿ. ‘ವಿಷ್ಯ ಗೊತ್ತಿರ್ಲಿ’ ಎಂಬ ಬಹು ಮುಖ್ಯ ಕಾರ್ಯಕಾರಣವೊಂದು ಮೊದಲಾಗಿ, ಹುಡುಗರು ಹಾಸ್ಟೆಲ್ಲಿನ ಕಾಂಪೋಂಡನ್ನು ಹಾರಿ ಕಿಟಕಿಯಲ್ಲಿ ಇಣುಕಿ ನೋಡುತ್ತಾರೆ ಎನ್ನುವ ವಿಷಯ ವಿಜಿ ಮತ್ತು ಸಂಗಡಿಗರಿಗೆ ಮುಟ್ಟಿತು. ಹವಳದಂತೆ ಮಿರುಗುತ್ತಿದ್ದ ಮೆಣಸಿನಕಾಯಿಗಳನ್ನು ಜೋಪಾನವಾಗಿ ಆರಿಸಿಕೊಂಡು ಸ್ಟೋರ್ ರೂಮಿನಿಂದ ಹೊರಗೆ ಬಂದಾಗ ಮನೋಹರ ಅಲ್ಲೇ ನಿಂತಿದ್ದ. ಇವಳು ಹೊರಗೆ ಬಂದ ಮೇಲೆ ಸ್ಟೋರನ್ನು ಲಾಕ್ ಮಾಡಲು ಹೊರಗೆ ಬೀಗದ ಕೈಯನ್ನು ಹಿಡಿದು ಕಾಯುತ್ತಿದ್ದ.

‘ಅಲ್ಲಾ ಮನೋಹರ್, ಆ ಹುಡುಗ್ರು ಬರೋ ವಿಷಯಕ್ಕೂ ನಾನು ಮೆಣ್ಸಿನ್ಕಾಯಿ ತಗೊಂಡು ಹೋಗಕ್ಕೂ ಏನ್ ಸಂಬಂಧ? ಆ ವಿಷಯ ಯಾಕ್ ಹೇಳಿದ್ರಿ?’ ಸೋಜಿಗದಲ್ಲಿ ವಿಜಿ ಕೇಳಿದಳು.

‘ಹುಡುಗ್ರು ನಿಮ್ ರೂಮಿನ ಹತ್ರನೂ ಬಂದಿದ್ರೇನೋ, ಅದಕ್ಕೆ ಕಿಟಕಿ ಹತ್ರ ಇಡಕ್ಕೆ ಮೆಣ್ಸಿನ್ಕಾಯಿ ತಗೊಂಡು ಹೋಗ್ತಿದೀರಾ ಅಂತ ಅಂದ್ಕೊಂಡೆ. ಬಿಡಿ, ನಿಮ್ ರೂಮಿನ್ ಹತ್ರ ಯಾಕ್ ಬರ್ತಾರೆ ಹುಡುಗ್ರು? ಒಬ್ಬೊಬ್ರೂ ರಾಕ್ಷಸಿಯರ ಥರಾ ಇದೀರಾ. ಯಾವಾನಾದ್ರೂ ಒಂದ್ ಪಕ್ಷ ಬರೋ ಧೈರ್ಯ ಮಾಡಿದ್ರೂ ಅವನನ್ನು ಒದ್ದಾಕಕ್ಕೆ ನೀವು ಮೂರ್ ಜನ ಸಾಕೇನೋಪ್ಪ!’ ಎಂದು ಮನೋಹರ ನಗಲು ಶುರು ಮಾಡುವುದಕ್ಕೂ, ಕಿಟಕಿ ಹತ್ತಿರ ಇಟ್ಟ ಅರೆದ ಮೆಣಸಿನಕಾಯಿ ಆತ್ಮರಕ್ಷಣೆಯ ಒಂದು ವಿಧಾನ ಎಂದು ವಿಜಿಗೆ ಅರ್ಥವಾಗುವುದಕ್ಕೂ ಸರಿಯಾಯಿತು. ಯಕಶ್ಚಿತ್ ಮೆಣಸಿನಕಾಯಿ ಹೇಗೆ ಮಾನವರನ್ನು ರಕ್ಷಿಸಲು ಸಾಧ್ಯ ಎಂಬ ಪ್ರಶ್ನೆ ಎದ್ದಿದ್ದೇ ಆದರೆ, ಉತ್ತರ ಇಲ್ಲಿದೆ.

ಕಾಂಪೋಂಡು ಹಾರಿ, ಕಿಟಕಿ ಹತ್ತಿರ ಬರೋ ಧೀಮಂತರು ಮೊದಲು ಕೈ ಇಡುವುದೇ ಕಿಟಕಿಯ ಕಟ್ಟಿನ ಮೇಲೆ. ಅರೆದ ಮೆಣಸಿನಕಾಯಿಯನ್ನು ಅಲ್ಲೆಲ್ಲ ಹರಡಿಬಿಟ್ಟರೆ ಆಯಿತು. ಹಸಿ ಮೆಣಸಿನಕಾಯಿ, ನೆನೆಸಿ ರುಬ್ಬಿದ ಒಣ ಮೆಣಸಿನಕಾಯಿ, ಮೆಣಸಿನ ಪುಡಿ ಹೀಗೆ ನಾನಾ ವಿಧದ ಖಾರ ಸಾಮಗ್ರಿಗಳ ಬಳಕೆ ಆಗುತ್ತದೆ.

ಎಲ್ಲ ಖಾರದಲ್ಲಿ ಅತಿ ಉತ್ತಮ ಹಾಗೂ ಬಹಳ ಪ್ರಭಾವವುಳ್ಳ ಖಾರ ಎಂದರೆ ಪುಟ್ ಪುಟಾಣಿ ಮೆಣಸಿನಕಾಯಿಯದ್ದು. ಲವಂಗ ಮೆಣಸು ಅಂತ ಕನ್ನಡದಲ್ಲೂ, ಬರ್ಡ್ಸ್ ಐ ಚಿಲ್ಲಿ ಅಂತ ಇಂಗ್ಲೀಷಿನಲ್ಲೂ ಕರೆಸಿಕೊಳ್ಳುವ ಕಾಲಿಂಚು ಗಾತ್ರದ ಹಸಿರು ಕೆಂಪು ಹಳದಿ ಬಣ್ಣಗಳಲ್ಲಿ ಬರುವ ಮೆಣಸು ಇದು. ಇದರ ಉರಿ ಬೆಂಕಿಯನ್ನೂ ಮೀರಿದ್ದು! ಎಲ್ಲಾ ಕಾಯಿಗಳನ್ನೂ ಸೇರಿಸಿ ರುಬ್ಬಿಕೊಂಡು ಕಿಟಕಿ ಹತ್ತಿರ ಇಟ್ಟರೆ ಆತ್ಮ ರಕ್ಷಣೆ ಇನ್ನೂ ಸಮರ್ಥವಾಗಿ ಆಗುತ್ತದೆ.

ಕಿಟಕಿಯಿಂದ ನೋಡಬಯಸುವವರ ಹೆಜ್ಜೆಗಳು ಸರಳ ಮಾದರಿಯಲ್ಲಿ ಕ್ರಮಿಸುತ್ತವೆ. ಕಿಟಕಿ ಕಟ್ಟಿಗೆ ಕೈ ಇಟ್ಟವನ ಬೆರಳುಗಳ ಮುಂದಿನ ನಿಲ್ದಾಣ ಅವನ ಕಣ್ಣಿನ ಸುತ್ತ, ರೂಮಿನೊಳಗೆ ಇದ್ದ ಜನ ಕಾಣಿಸಲಿ ಅಂತ ಹಾವಿನ ಹೆಡೆಯ ಥರಾ ಹಸ್ತವನ್ನು ಅರೆಬಾಗಿಸಿ ಕಣ್ಣುಗಳ ಅಕ್ಕ ಪಕ್ಕ ಇಟ್ಟುಕೊಳ್ಳುತ್ತಾರೆ. ಅಷ್ಟು ಹೊತ್ತಿಗೆ ಖಾರ ಕೈಗೆ ಹತ್ತಿರುತ್ತದೆ. ಹಸೀ ಖಾರವಾಗಿದ್ದರೆ ಉರಿ ತಕ್ಷಣ ಶುರುವಾಗುತ್ತದೆ. ಖಾರ ಸ್ವಲ್ಪ ಒಣಗಿದ್ದರೆ ಉರಿ ಶುರುವಾಗುವುದು ಸ್ವಲ್ಪ ಹೊತ್ತಿನ ನಂತರವಾದರೂ, ಏನು ಹಾಕಿ ತೊಳೆದರೂ ಉರಿ ಕಡಿಮೆಯಾಗಲ್ಲ. ಬೊಬ್ಬೆ ಹೊಡೆಯುವಷ್ಟು ಸಂಕಟವಾಗುತ್ತದೆ. ಇದನ್ನ ಯೋಚಿಸುತ್ತಾ ಇರುವಾಗ ವಿಜಿಗೆ ಮನೋಹರ ಆಡಿದ ಮಾತುಗಳು ತಮಾಷೆಯೆನ್ನಿಸಿದವು.

‘ಹುಡುಗ್ರು ಬರ್ತಾರೆ ಅಂತ ನಮಗೇನೂ ಹೆದರಿಕೆ ಇಲ್ಲ ಬಿಡಿ. ಅದೇ ಥರಾ ಬಾಯ್ ಫ್ರೆಂಡ್ಸ್ ಇಲ್ಲಾ ಅಂದ್ರೆ ಜೀವನದ ಮೇಲಿನ ಆಸಕ್ತಿಯೇನೂ ಕಳೆದು ಹೋಗಲ್ಲ. ನಮ್ಮ ಮಾತು ಹಾಗಿರ್ಲಿ, ನಿಮ್ ಗತಿ ನೋಡ್ರೀ. ತಿಂಗಳುಗಳೇ ಕಳೆದುಹೋದವು ಹುಡ್ಗೀರ್ ಹಾಸ್ಟೆಲಿಗೆ ಬರಕ್ಕೆ ಶುರು ಮಾಡಿ. ಒಂದು ಹುಡ್ಗಿ ಜೊತೆಗೂ ನಿಮ್ ವ್ಯವಹಾರ ಕುದುರಲಿಲ್ವಲ್ಲಾ? ಹೇಳ್ಕೊಳಕ್ಕೆ ಒಂದ್ ಗರ್ಲ್ ಫ್ರೆಂಡೂ ಇಲ್ವಲ್ರೀ! ನಿಮ್ಮದೆಂಥಾ ಬ್ಯಾಡ್ ಲಕ್ಕು ನೋಡಿ! ನದಿ ದಡದಲ್ಲಿ ಮನೆ, ನೀರಿಗೆ ಬರಗಾಲ ಅನ್ನೋ ಹಂಗಾಯ್ತು’ ಎಂದುಬಿಟ್ಟಳು.

ಮನೋಹರ ಪೆಚ್ಚಾಗಿ ಹೆಹೆಹೆಹೆ ಎಂದು ನಕ್ಕ. ‘ಬನ್ನಿ, ನಿಮ್ ಹತ್ರ ಮಾತಾಡ್ಕೊಂಡು ಕೂತ್ರೆ ಕೆಲ್ಸ ಹಾಳು, ತಲೆ ಬೋಳು. ಹೋಗಿ, ಓದೋದು ಬರೆಯೋದು ಏನಾದ್ರೂ ಇದ್ರೆ ನೋಡಿ’ ಎಂದು ಕಳಿಸಿದ. ವಿಜಿ ರೂಮಿಗೆ ವಾಪಾಸು ಬರುತ್ತಿರುವಾಗ ದಾರಿಯಲ್ಲಿ ಇಂದೂ ಸಿಕ್ಕಳು. ಅವಳಿಗೆ ವಿಷಯ ಹೇಳಲಾಗಿ ‘ನಂ ರೂಮ್ ಹತ್ರ ಬಂದ್ರೆ ಅಷ್ಟೇ ನನ್ ಮಗನ್ ಇನ್ನೊಂದ್ ಸಾರಿ ಕಣ್ ತಗ್ದು ನೋಡಿರಬಾರ್ದು ಹಂಗೆ ಕೊಡ್ತೀನಿ’ ಎಂದು ಮುಷ್ಟಿ ಕಟ್ಟುತ್ತಾ ಇಂದುಮತಿ ಹೇಳಿದಳು.

‘ಅಮ್ಮಾ ತಾಯಿ! ಈಗ್ಲೇ ನಂ ರೆಪುಟೇಷನ್ ಅಷ್ಟು ಚೆಂದವಾಗಿ ಇದೆ. ಇನ್ನು ಯಾವನ್ ಜೊತೆಗೋ ಕುಸ್ತಿ ಗಿಸ್ತಿ ಎಲ್ಲ ಮಾಡ್ಬೇಡ ನೀನು. ಹಂಗೇನಾದ್ರೂ ಯಾರಾದ್ರೂ ರೂಮಿನ ಹತ್ರ ಬಂದ್ರೆ ವಾರ್ಡನ್ನಿಗೆ ಹೇಳಿದ್ರಾಯ್ತು’.

‘ಅಹಹಹ! ಸುಮ್ನೆ ಹೇಳಿಬಿಟ್ರೆ ವಾರ್ಡನ್ ಹೆಂಗೇ ನಂಬ್ತಾರೆ? ಮೊದಲು ಅಟೆಂಡರುಗಳಿಗೆ ಈ ವಿಷಯ ತಿಳಿಸಬೇಕು. ಹುಡುಗರು ಬಂದರೆ ಅಟೆಂಡರ್ ಮೋನನೋ ಚಂದ್ರಣ್ಣನೋ ಕಣ್ಣಾರೆ ನೋಡಿ, ಹಿಡಿಯೋಕೆ ಸಾಧ್ಯವಾದರೆ ಹಿಡಿದು ಕೂರಿಸ್ಬೇಕು. ಆಗ ಮಾತ್ರ ಮೇಡಂ ನಂಬೋದು. ಇಲ್ಲಾಂದ್ರೆ ನಮ್ ಕರ್ಮಕ್ಕೆ ಒಳ್ಳೇ ಕೆಲಸಕ್ಕೂ ಗಲಾಟಿ ಆಗುತ್ತೆ’

‘ಹೌದೌದು ಕಣೆ. ಇಬ್ರುಗೂ ಹೇಳ್ಬಿಡಾನ ನಡಿ’ ಎಂದು ಇಂದುಮತಿ ಯುದ್ಧ ಸನ್ನದ್ಧಳಾದಳು. ಇಬ್ಬರು ಅಟೆಂಡರುಗಳಲ್ಲಿ ಚಂದ್ರಣ್ಣ ಧೈರ್ಯವಂತ. ಮೋನ ಪುಕ್ಕಲಾತಿ ಪುಕ್ಕಲ. ಹುಡುಗಿಯರು ವಿಷಯ ಅರುಹಿದ ಮೇಲೆ ಚಂದ್ರಣ್ಣ ಎದೆ ಸೆಟೆಸಿ ‘ಅಯ್ಯ, ಯಾವನ್ ಬತ್ತನೆ ಬರ್ಲಿ’ ಎಂದರೆ, ಮೋನ ‘ಯಾವನಾರೂ ಬಂದ್ರೆ ನೀವೂ ಜ್ವತಿಗ್ ಬರ್ಬೇಕು ಸಪೋಟಿಗೆ. ಇಲ್ಲಾಂದ್ರೆ ನನ್ ವಬ್ಬನ್ ಕೈಲೆ ಹಿಡಿಯದಾಯ್ತದಾ ಯೋಳಿ’ ಎಂದು ಹಲ್ಲು ಗಿಂಜಿದ.

‘ಥೂ ಮೋನಾ! ಎಂಥಾ ಪುಕ್ಲ ಕಣೋ!’  ಎಂದು ವಿಜಿ ಛೇಡಿಸಿದಳು. ‘ಅದೆಲ್ಲ ಬ್ಯಾಡಿ. ನಮ್ ಸಪೋಟಿಗಿರಿ. ಮುಂದೇನಾಯ್ತದ ನೋಡುಮ’ ಎಂದ ಮೋನ.

ಆವತ್ತು ಸರಿರಾತ್ರಿಯಲ್ಲಿ ರೂಮಿನ ಕಿಟಕಿಯ ಪಕ್ಕ ಚರಪರ ಸದ್ದಾಯ್ತು. ಎದ್ದು ನೋಡೋಣವೆಂದರೆ ಹೊರಗೆ ಗವ್ವೆನ್ನುವ ಕತ್ತಲೆ. ಮೋನನನ್ನು ಎಬ್ಬಿಸಿದರೆ ಬೊಂಬಡ ಬಜಾಯಿಸುತ್ತಾನೆ. ಬೆಳಿಗ್ಗೆ ಬೇರೆಯವರನ್ನ ವಿಚಾರಿಸಿದರೆ ಆಯಿತು ಅಂತ ಸುಮ್ಮನೆ ಮಲಗಿದರು ಈಶ್ವರಿ, ವಿಜಿ ಮತ್ತು ರಶ್ಮಿ. ಹಾಗೆ ಮಲಗಿ ಒಂದು ಇಪ್ಪತ್ತು ನಿಮಿಷವೂ ಕಳೆದಿರಲಿಕ್ಕಿಲ್ಲ. ರಶ್ಮಿ ಎದ್ದು ಕೂತು ‘ಏ! ಅಲ್ನೋಡೂ, ಕಿಟಕಿಯಲ್ಲಿ ಲಿಂಕನ್ ಇದಾನೆ!’ ಎಂದು ಎರಡು ಸಾರಿ ಜೋರಾಗಿ ಹೇಳಿದಳು. ‘ಏನು?’
‘ಅಲ್ಲಿ! ಲಿಂಕನ್’
‘ತಮಾಷೆ ಮಾಡ್ತಿದೀಯಾ?’
‘ಅಲ್ಲಿ ಲಿಂಕನ್ ಇದಾನೆ. ಗಡ್ಡ ಕೂಡ ಇದೆ’
ವಿಜಿಗೆ ಅಷ್ಟು ಹೊತ್ತಿನಲ್ಲಿ ತಮ್ಮ ಕ್ಲಾಸಿನಲ್ಲಿದ್ದ ಅಬ್ರಹಾಂ ಎನ್ನುವ ಹುಡುಗ ನೆನಪಾದ. ಅವನನ್ನು ತಮಾಷೆಗೆ ಲಿಂಕನ್ ಎಂದು ಕರೆಯುತ್ತಿದ್ದುದು ಹೊಳೆದು ಅವನು ಗೋಡೆ ದಾಟಿ ಬಂದದ್ದು ರಶ್ಮಿಗೆ ಕಂಡಿರಬೇಕು ಎಂದುಕೊಂಡಳು. ತಕ್ಷಣ ಹೊರಗೆ ಓಡಿ ಇಂದುಮತಿಯನ್ನು ಎಬ್ಬಿಸಿದಳು. ಕಾರಿಡಾರು ದಾಟುವಾಗ ಯಾರೋ ಕಂಬಳಿ ಬೀಳಿಸಿಕೊಂಡು ಹೋಗಿರುವುದು ಕಾಣಿಸಿತು. ಅದನ್ನ ಎತ್ತಿಕೊಂಡವರೇ ಹೊರಗೆ ಓಡಿ ತಮ್ಮ ರೂಮಿನ ಹಿಂಭಾಗದ ದಿಕ್ಕಿನಲ್ಲಿ ನಿಂತರು. ಕತ್ತಲಲ್ಲಿ ಯಾರೋ ಗೋಡೆ ಪಕ್ಕ ನಿಂತು ಸರಿಯುತ್ತಿರುವುದು ಕಾಣಿಸಿತು. ಯಾರು ಏನು ಎಂದು ಯೋಚಿಸುವಷ್ಟರಲ್ಲಿ ಇಂದುಮತಿ ಅತ್ತ ಓಡಿದಳು. ಆ ವ್ಯಕ್ತಿಗೆ ಗೊತ್ತಾಗುವ ಮುನ್ನ ಅವನ ಮೇಲೆ ಕಂಬಳಿ ಹಾಕಿ ಧಪಧಪ ಗುದ್ದಲು ಶುರು ಮಾಡಿದಳು.

ವಿಜಿ ತಬ್ಬಿಬ್ಬಾಗಿ ನಿಂತಳು. ಎಲ್ಲವೂ ತನ್ನ ಆಲೋಚನೆ ಮೀರಿ ನಡೆಯುತ್ತಿರುವಾಗ ಮನುಷ್ಯನಿಗೆ ಸಾಮಾನ್ಯ ಪ್ರತಿಕ್ರಿಯೆ ಹೊರಡುವುದು ಸಾಧ್ಯವಿಲ್ಲದ ಮಾತು. ಹೊಡೆಸಿಕೊಳ್ಳುತ್ತಿದ್ದ ವ್ಯಕ್ತಿ ಮೊದಲಿಗೆ ಹೆದರಿಕೊಂಡಂತೆ ಕಂಡರೂ ಆಮೇಲೆ ಕೂಗಿಕೊಳ್ಳಲು ಶುರು ಮಾಡಿದ. ವಿಜಿಗೆ ಈ ಧ್ವನಿ ಪರಿಚಿತ ಎನ್ನಿಸಿತು. ಬೆಳಕಿನ ವೇಗದಲ್ಲಿ ಓಡಿದವಳೇ ಇಂದುಮತಿಯನ್ನು ಎಳೆದುಕೊಂಡು ಹಾಸ್ಟೆಲಿನ ಒಳಕ್ಕೆ ಓಡಿ ಐದಾರು ಸೆಕೆಂಡುಗಳಲ್ಲಿ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡರು. ಎರಡು ನಿಮಿಷ ಕೂತು ಸುಧಾರಿಸಿಕೊಂಡರು. ಇಂದುಮತಿಗೆ ವಿಜಿಯನ್ನು ಚಟ್ನಿ ಮಾಡಿಬಿಡಬೇಕೆನ್ನಿಸುವಷ್ಟು ಕೋಪ ಬಂತು. ‘ಕತ್ತೆ ಲೌಡಿ! ಯಾಕೇ ಕರ್ಕೊಂಡು ಬಂದೆ ಒಳಗೆ?’
‘ಬೋಳಿ! ಉಪಕಾರ ಮಾಡಿದ್ದೀನಿ. ನನ್ ಕಾಲಿಗೆ ಬೀಳು!’
‘ಎತ್ತ್ ಜಾಡಿಸಿ ವದ್ದಾ ಅಂದ್ರೆ ಹಂಗೇ ಕಳ್ಳೆಲ್ಲಾ ಪಚ್ಚಿ ಆಗ್ಬೇಕು. ಕಳ್ಳನ್ನ ಹಿಡೀತಿದ್ರೆ ಕೆಲಸ ಕೆಡ್ಸಿದ್ದೂ ಅಲ್ದೆ ಉಪ್ಕಾರ ಮಾಡಿದೀನಿ ಅಂತ ಬೇರೆ ಹೇಳ್ತೀಯಾ?’
‘ಇಂದೂ ನೀನ್ ಹಿಡೀತಿದ್ದದ್ದು ಕಳ್ಳನ್ನ ಅಲ್ಲ ಕಣೇ, ಮೋನನ್ನ!’
‘ಅಯ್ಯೋ ಬಡ್ಡೆತ್ತದ್ದೆ! ಅವ್ನೇನು ಮಾಡ್ತಿದ್ದ ಅಲ್ಲಿ?’
‘ರಾತ್ರಿ ಅವ್ನು ಹಾಸ್ಟೆಲ್ ಹೊರಗೆ ಉಚ್ಚೆ ಮಾಡಕ್ಕೆ ಹೋಗ್ತಾನೆ’
‘ಯಾಕೆ ಇಲ್ಲಿ ಬಾತ್ರೂಮಿಲ್ವಾ?’
‘ಇದೆ. ಆದ್ರೆ ಅವ್ನಿಗೆ ಅದ ಉಪಯೋಗಿಸಕ್ಕೆ ಹೆದ್ರಿಕೆ ಅಂತಿದ್ದ’
‘ಅಲ್ಲಾ ಕಣೇ ಕತ್ತೆಮುಂಡೆ! ಯಾವನೋ ಕಂಡ ಅಂತ ತಾನೇ ನೀನು ಎಬ್ಬಿಸಿದ್ದು ನನ್ನ?’
‘ಹೌದು. ರಶ್ಮಿ ಕಿಟಕೀಲಿ ಲಿಂಕನ್ ಇದಾನೆ ಅಂದ್ಲು ಅದಕ್ಕೆ ಗಾಬರಿ ಆಯಿತು. ಬಂದೆ’
ರೂಮಿನಲ್ಲಿ ಇಷ್ಟೆಲ್ಲಾ ರಾಮಾಯಣ ನಡೆಯುತ್ತಿದ್ದರೂ ಈಶ್ವರಿ, ರಶ್ಮಿ ಚೂರೂ ಅರಿವಿಲ್ಲದಂತೆ ಗಾಢ ನಿದ್ದೆ ಮಾಡಿದ್ದರು. ‘ಎಬ್ಸು ಅವ್ಳನ್ನ ಕೇಳನ’ ರಶ್ಮಿಯನ್ನು ಬಹಳ ಕಷ್ಟಪಟ್ಟು ಎಬ್ಬಿಸಿದಳು ವಿಜಿ. ರಶ್ಮಿಗೆ ನಿದ್ದೆ ತಿಳಿಯಾಗಲಿಲ್ಲ. ‘ಲಿಂಕನ್ ಎಲ್ಲಿದಾನೆ ಕೇಳೇ ಲೌಡೀನಾ’ ಎಂದಳು ಇಂದು.

‘ಅಲ್ಲೇ ಇದಾನೆ. ಅಲ್ಲೇ ವೈಟ್ ಹೌಸಲ್ಲಿ. ಅಮೆರಿಕ ಪ್ರೆಸಿಡೆಂಟ್ ಅಲ್ವಾ ಅವ್ನು?’
ಇಂದು ರಶ್ಮಿಯನ್ನ ದಿಟ್ಟಿಸಿ ನೋಡಿದಳು. ಅವಳ ಕಣ್ಣು ಗಾಜಿನಂತಿದ್ದವು. ವಿಜಿಯ ಕಡೆ ತಿರುಗಿದಳು.

‘ಸಾರಿ ಕಣೇ ಇಂದೂ... ಇವಳಿಗೆ ನಿದ್ದೇಲಿ ಮಾತಾಡೋ ಅಭ್ಯಾಸ ಇದೆ. ನನಗೆ ಹೆದರಿಕೇಲಿ ಮರೆತುಹೋಗಿತ್ತು’
‘ವತ್ತಾ ವದ್ದ ಅಂದ್ರೆ ಹೊಟ್ಟೆ ಮಡುಚ್ಕೊಂಡು ಬಿಡ್ಬೇಕ್. ಆಟ ಕಟ್ತಿದೀಯಾ?’ ಕೇಳಿದಳು ಇಂದೂ.

‘ಇಲ್ಲಾ ಕಣೆ ನಿಜವಾಗ್ಲೂ. ಬೇಕಾರೆ ನೋಡು. ಅವ್ಳು ಮಾತಾಡಲ್ಲ’ ವಿಜಿ ಹೇಳಿದಳು.

ಇದ್ದಕ್ಕಿದ್ದಂತೆ ಇಂದು ನಗಲು ಶುರು ಮಾಡಿದಳು. ವಿಜಿಯೂ ಪಕಪಕ ನಕ್ಕಳು. ರಶ್ಮಿ ಮಗ್ಗುಲು ತಿರುಗಿ ಮಲಗಿದಳು. ಎಲ್ಲರೂ ಮಲಗಿದರು. ಬೆಳಿಗ್ಗೆ ಟೀ ತರಲು ಹೋದ ರಶ್ಮಿ ವಾಪಾಸು ಬಂದು ಮೋನನನ್ನು ನಿನ್ನೆ ರಾತ್ರಿ ಯಾವುದೋ ಮೋಹಿನಿ ದೆವ್ವ ಮೆಟ್ಟಿಕೊಂಡ ಕಥೆ ಹೇಳಿದಳು. ಇಂದುಮತಿ, ವಿಜಿ ರಶ್ಮಿಯನ್ನು ಕೇಳಿದರು.

‘ನಿನ್ಗೆ ನಿದ್ದೇಲಿ ಮಾತಾಡೋ ಅಭ್ಯಾಸ ಇದೆಯಾ?’
‘ಈಗ ಬರೀ ಮಾತಾಡ್ತೀನಿ. ಮೊದಲೆಲ್ಲಾ ನಡ್ಕೊಂಡು ದೂರ ಹೋಗಿಬಿಡ್ತಿದ್ದೆ’
‘ನಿನ್ನನ್ನು ಇಲ್ಲಿಗೆ ಕಳಿಸಿದ ನಿಮ್ಮಪ್ಪ ಅಮ್ಮ ಭಾಗ್ಯವಂತರು ಬಿಡು. ನಮ್ ಕರ್ಮ ಅಷ್ಟೇ!’

Comments
ಈ ವಿಭಾಗದಿಂದ ಇನ್ನಷ್ಟು

ಮಿರ್ಚಿ-ಮಂಡಕ್ಕಿ
ಗಮ್ಯದಿಂದ ಗಮ್ಯಕ್ಕೆ ನಡೆದರೆ ಪಯಣ ಬದಲಾಗುತ್ತಾ?

ಗಾಂಜಾ... ಆ ಮಾಯಾಲೋಕ... ಅದರ ತಾಕತ್ತೇ ಬೇರೆ. ಒಮ್ಮೆ ಅದನ್ನು ಸವಿದುಬಿಟ್ಟರೆ ಅದನ್ನು ಮೀರಿಸಿದ ಅನುಭವ ಇನ್ನೊಂದಿಲ್ಲ... ಹೀಗೆಲ್ಲ ವರ್ಣನಾತೀತವಾದ ಮಾತುಗಳನ್ನು ಕೇಳಿದ್ದ ವಿಜಿ,...

10 Nov, 2016

ಮಿರ್ಚಿ-ಮಂಡಕ್ಕಿ
ನೀರು, ಜಿಲೇಬಿ ಮತ್ತು ಕಪ್ಪೆ...

ಹುಸೇನ ತಂದುಕೊಟ್ಟ ಸಾಸಿವೆ ಕಾಳಿನಂಥ ಗಾಂಜಾ (ಭಂಗಿಯ ಅಣ್ತಮ್ಮ) ಸಾವಿಲ್ಲದ ಮನೆಯ ಬೋನದಂತಿತ್ತು. ಬೋನ ಅಂದರೆ ಅನ್ನ ಅಂತ ನಿಮಗೆ ಗೊತ್ತಲ್ಲ? ಆ ಕ್ಷುಲ್ಲಕ...

3 Nov, 2016
ಸೊಪ್ಪಿನ ಚಟವ ಮೀರಿದ ಬಂಧವಿಲ್ಲ ಕಾಣಿರೋ!

ಮಿರ್ಚಿ-ಮಂಡಕ್ಕಿ
ಸೊಪ್ಪಿನ ಚಟವ ಮೀರಿದ ಬಂಧವಿಲ್ಲ ಕಾಣಿರೋ!

27 Oct, 2016

ಮಿರ್ಚಿ-ಮಂಡಕ್ಕಿ
ನೀರ ಮೇಲಣ ಹರಿಗೋಲು ಸುಳ್ಳಲ್ಲ ಹರಿಯೇ!

‘ನೀನ್ ಕೇಳ್ತಿದೀಯಾ ಅಂತ ಹೇಳ್ತೀನಿ. ಸೀರೆ ಅಂಗಡೀಗೋ, ಬಟ್ಟೆ ಅಂಗಡೀಗೋ ಹೋದರೆ ಕಣ್ಣಿಗೆ ಚಂದ ಕಂಡ ಬಟ್ಟೆನೆಲ್ಲಾ ಕೊಂಡ್ಕೋತೀವ? ಕೆಲವೊಂದ್ಸಾರಿ ಮೆಚ್ಚಿಗೆ ಆಗಿದ್ದು ದುಬಾರಿ...

20 Oct, 2016

ಮಿರ್ಚಿ-ಮಂಡಕ್ಕಿ
ನೆಲ ಕಳ್ಕೊಂಡೋರ ಸಂಕಟವೂ, ನೆಲೆ ಇಲ್ಲದೋರ ದುಃಖವೂ...­­

‘ರಾತ್ರಿಯೆಲ್ಲ ರಾಮಾಯ್ಣ ಕೇಳಿ ಬೆಳಿಗ್ಗೆದ್ದು ರಾಮನಿಗೂ ಸೀತೆಗೂ ಏನ್ ಸಂಬಂಧ ಅಂದ್ರಂತೆ. ಇಷ್ಟೊತ್‌ವರೆಗೆ ಹೇಳಿದ್ನಲ್ಲ ನನಗೆ ಕೆಲಸಕ್ಕೆ ಬರೋಕೆ ಸಾಧ್ಯವಿಲ್ಲ ಅಂತ... ಅಂದ್ರೆ ಐ...

13 Oct, 2016