ಲೋಕಾಯುಕ್ತ ನೇಮಕ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಲಿ

ಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ಒತ್ತಡದ ಪಿಡುಗುಗಳಿಂದ ಮುಕ್ತಗೊಳಿಸುವುದಕ್ಕೆ ಅಗತ್ಯವಿರುವ ಸಾಂಸ್ಥಿಕ ಸುಧಾರಣೆಗಳನ್ನು ತರುವ ಗುರುತರ ಹೊಣೆ ಸರ್ಕಾರದ ಮೇಲಿದೆ.

ನ್ಯಾಯಮೂರ್ತಿ ವೈ.ಭಾಸ್ಕರ ರಾವ್ ಕರ್ನಾಟಕ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಲೋಕಾಯುಕ್ತರ ಪದಚ್ಯುತಿಗಾಗಿ ಆರಂಭಗೊಂಡಿದ್ದ ಸಾಂಸ್ಥಿಕ ಪ್ರಕ್ರಿಯೆಯೊಂದು ಅಪ್ರಸ್ತುತವಾಗಿದೆ. ಆದರೆ ಇದು, ಲೋಕಾಯುಕ್ತ ಕಚೇರಿಯನ್ನೇ ಭ್ರಷ್ಟಾಚಾರದ ನೆಲೆಯನ್ನಾಗಿಸಿಕೊಂಡ ಪ್ರಕರಣದ ತಾರ್ಕಿಕ ಅಂತ್ಯವಲ್ಲ. ಜೊತೆಗೆ ಇಡೀ ಪ್ರಕರಣದ ಸುತ್ತ ಆವರಿಸಿಕೊಂಡಿರುವ ನಿಗೂಢತೆ ಈಗ ಮತ್ತಷ್ಟು ಹೆಚ್ಚಾಗಿದೆ.

ಲೋಕಾಯುಕ್ತ ಸಂಸ್ಥೆಯನ್ನೇ ಭ್ರಷ್ಟಾಚಾರಕ್ಕೆ ಬಳಸಿಕೊಂಡ ಆರೋಪ ಭಾಸ್ಕರ ರಾವ್ ಅವರ ಪುತ್ರ ಅಶ್ವಿನ್‌ ರಾವ್ ಮೇಲಿದೆ. ಇದಕ್ಕೆ ಸಂಸ್ಥೆಯೊಳಗಿನ ಮತ್ತು ಹೊರಗಿನ ಕೆಲವು ವ್ಯಕ್ತಿಗಳೂ ಜೊತೆಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿದೆ. ವಿಶೇಷ ತನಿಖಾ ತಂಡದ ತನಿಖೆಯೂ ಮುಂದುವರಿದಿದೆ.

ಈ ಪ್ರಕರಣದಲ್ಲಿ ಭಾಸ್ಕರ ರಾವ್ ಅವರ ಪಾತ್ರ ಎಷ್ಟಿತ್ತೆಂಬುದು ಇನ್ನಷ್ಟೇ ಬಯಲಾಗಬೇಕಿದೆ. ಈ ನಡುವೆ ರಾಜ್ಯದ ಮಾಜಿ ಕಾನೂನು ಸಚಿವರೊಬ್ಬರು ನೀಡಿರುವ ಹೇಳಿಕೆಯೊಂದು ಲೋಕಾಯುಕ್ತ ಸಂಸ್ಥೆಗೆ ನಡೆಯುವ ನೇಮಕಾತಿಗಳ ಪಾರದರ್ಶಕತೆಯ ಕುರಿತಂತೆ ಹೊಸ ಪ್ರಶ್ನೆಗಳನ್ನು ಎತ್ತಿದೆ. ‘ಭಾಸ್ಕರ ರಾವ್ ಅವರನ್ನೇ ನೇಮಕ ಮಾಡಬೇಕು ಎಂಬರ್ಥದ ಸೂಚನೆ ರಾಜಭವನದಿಂದ ಬಂದಿದ್ದರಿಂದ ಅಂದಿನ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರೆಲ್ಲಾ ಚರ್ಚಿಸಿ ಭಾಸ್ಕರ ರಾವ್ ಅವರ ಹೆಸರನ್ನು ಶಿಫಾರಸು ಮಾಡುವ ನಿರ್ಧಾರ ಕೈಗೊಂಡರು’ ಎಂಬ ಅವರ ಹೇಳಿಕೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕು? ಕರ್ನಾಟಕ ಲೋಕಾಯುಕ್ತ ಕಾಯ್ದೆ, ಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ನಿರ್ವಚಿಸಿದೆ.

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ವಿಧಾನಸಭಾಧ್ಯಕ್ಷರು, ವಿಧಾನ ಪರಿಷತ್ತಿನ ಸಭಾಪತಿ ಮತ್ತು ಎರಡೂ ಸದನಗಳ ವಿರೋಧ ಪಕ್ಷದ ನಾಯಕರ ಜೊತೆಗೆ ಸಮಾಲೋಚಿಸಿ ಲೋಕಾಯುಕ್ತರ ಹುದ್ದೆಗೆ ಅರ್ಹ ನ್ಯಾಯಮೂರ್ತಿಗಳ ಹೆಸರನ್ನು ಮುಖ್ಯಮಂತ್ರಿ ಶಿಫಾರಸು ಮಾಡಬೇಕು. ಈ ಶಿಫಾರಸನ್ನು ಪರಿಶೀಲಿಸಿ ರಾಜ್ಯಪಾಲರು ನೇಮಕಾತಿಯ ಔಪಚಾರಿಕತೆಯನ್ನು ಪೂರ್ಣಗೊಳಿಸುತ್ತಾರೆ. ಅಂದರೆ ಲೋಕಾಯುಕ್ತರ ನೇಮಕಾತಿಗೊಂದು ಸ್ಪಷ್ಟ ಸಾಂಸ್ಥಿಕ ಪ್ರಕ್ರಿಯೆ ಇದೆ.

ರಾಜಭವನದಿಂದ ಯಾವುದೇ ಅರ್ಥದ ಸೂಚನೆ ಬಂದರೂ ಅದನ್ನು ಮಾನ್ಯ ಮಾಡಬೇಕಾದ ಅಗತ್ಯ ಸರ್ಕಾರಕ್ಕೆ ಇಲ್ಲ. ಇಲ್ಲಿ ಮತ್ತೊಂದು ಗಮನಾರ್ಹ ವಿಚಾರವೂ ಇದೆ. ಭಾಸ್ಕರ ರಾವ್ ಅವರ ನೇಮಕಾತಿಯ ಸಂದರ್ಭದಲ್ಲಿ ರಾಜಭವನದ ಜೊತೆಗೆ ಆಡಳಿತಾರೂಢ ಸರ್ಕಾರ ಸತತ ಸಂಘರ್ಷದಲ್ಲಿತ್ತು. ನ್ಯಾಯಮೂರ್ತಿ ಸಂತೋಷ ಹೆಗ್ಡೆಯವರ ನಿವೃತ್ತಿಯ ಹಿಂದೆಯೇ ನೇಮಕಗೊಂಡಿದ್ದ ಶಿವರಾಜ್ ಪಾಟೀಲ್ ಅವರು ನಿವೇಶನ ವಿವಾದವೊಂದರ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು. ಭಾಸ್ಕರ ರಾವ್ ಅವರ ವಿರುದ್ಧವೂ ವಕೀಲರ ಸಂಘಟನೆಯೊಂದು ಇದೇ ಆರೋಪವನ್ನು ಹೊರಿಸಿತ್ತು. ಇಷ್ಟಾಗಿ ರಾಜಭವನದ ಒತ್ತಡಕ್ಕೆ ಅಂದಿನ ಸರ್ಕಾರ ಮಣಿದಿದೆ ಎಂಬುದರ ಅರ್ಥವೇನು?

ಮೊನ್ನೆ ಮೊನ್ನೆಯಷ್ಟೇ ಲೋಕಾಯುಕ್ತದ ಬದಲಿಗೆ ಲೋಕಪಾಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಈಗಿನ ಆಡಳಿತಾರೂಢರು ಹೇಳಿದ್ದರು. ವೈ.ಭಾಸ್ಕರ ರಾವ್ ಅವರ ರಾಜೀನಾಮೆಯ ನಂತರ ಮಾತನಾಡಿರುವ ಕಾನೂನು ಸಚಿವರು ಇನ್ನೊಂದು ತಿಂಗಳಲ್ಲಿ ಲೋಕಾಯುಕ್ತರನ್ನು ನೇಮಿಸಲಾಗುವುದು ಎಂದಿದ್ದಾರೆ. ಇದು ಲೋಕಪಾಲ್ ವ್ಯವಸ್ಥೆಯ ದೌರ್ಬಲ್ಯಗಳ ಕುರಿತು ಚರ್ಚೆ ಆರಂಭವಾದುದರ ಪರಿಣಾಮವೆಂಬಂತೆ ಕಾಣಿಸುತ್ತದೆ. ಲೋಕಾಯುಕ್ತ ಸಂಸ್ಥೆ ದುರ್ಬಲವಾಗುತ್ತಿದ್ದರೆ, ಭ್ರಷ್ಟಾಚಾರ ನಿಯಂತ್ರಣಕ್ಕೆ ಮೀಸಲಾಗಿರುವ ಸಂಸ್ಥೆಯೇ ಭ್ರಷ್ಟಾಚಾರದ ನೆಲೆಯಾಗುತ್ತಿದ್ದರೆ ಅದರ ನೈತಿಕ ಹೊಣೆ ಕೇವಲ ಆಡಳಿತಾರೂಢರಿಗಷ್ಟೇ ಇರುವುದಿಲ್ಲ.

ಲೋಕಾಯುಕ್ತರನ್ನು ನೇಮಿಸುವ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರವಿರುವ ವಿರೋಧ ಪಕ್ಷಗಳದ್ದೂ ಇರುತ್ತದೆ ಎಂಬ ಅಂಶವನ್ನು ಮರೆಯಲು ಸಾಧ್ಯವಿಲ್ಲ. ಹಾಗೆಯೇ ಭಾಸ್ಕರ ರಾವ್ ಅವರ ರಾಜೀನಾಮೆಯೊಂದಿಗೆ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ಕೊನೆಗೊಂಡಿವೆ ಎಂದು ಭಾವಿಸಲು ಸಾಧ್ಯವಿಲ್ಲ. ಭಾಸ್ಕರ ರಾವ್ ಅವರ ಪುತ್ರ ಮತ್ತಿತರರ ಕುರಿತಂತೆ ಎಸ್‌ಐಟಿ ನಡೆಸುತ್ತಿರುವ ತನಿಖೆಯನ್ನು ಒಂದು ತಾರ್ಕಿಕ ಅಂತ್ಯಕ್ಕೆ ತಲುಪಿಸಬೇಕಾಗಿರುವ ಗುರುತರ ಹೊಣೆ ಸರ್ಕಾರದ ಮೇಲೆ ಇದೆ.

ಈ ಭ್ರಷ್ಟರ ತಂಡಕ್ಕೆ ಸಂಸ್ಥೆಯ ಮುಖ್ಯಸ್ಥನ ಸ್ಥಾನದಲ್ಲಿದ್ದವರ ಬೆಂಬಲವಿದ್ದರೆ ಅದೂ ತನಿಖೆಯಲ್ಲಿ ಬಯಲಾಗಬೇಕಿದೆ. ಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ‘ರಾಜಭವನದ ಒತ್ತಡ’ದಂಥ ಪಿಡುಗುಗಳಿಂದ ಮುಕ್ತಗೊಳಿಸುವುದಕ್ಕೆ ಅಗತ್ಯವಿರುವ ಸಾಂಸ್ಥಿಕ ಸುಧಾರಣೆಗಳನ್ನು ತರುವ ಗುರುತರ ಹೊಣೆಯೂ ಈಗಿನ ಸರ್ಕಾರದ ಮೇಲಿದೆ. ಪ್ರಾಮಾಣಿಕರಷ್ಟೆ ಇಂತಹ ಸಂಸ್ಥೆಗಳ ಚುಕ್ಕಾಣಿ ಹಿಡಿಯುವಂತಾಗಬೇಕು. ಅಷ್ಟೇ ಅಲ್ಲ, ಈ ಹಿಂದೆ ಬಂದ ಒತ್ತಡದ ಕುರಿತಂತೆ ಸ್ಪಷ್ಟನೆಗಳನ್ನು ನೀಡುವ ಜವಾಬ್ದಾರಿ ಭಾಸ್ಕರ ರಾವ್ ಅವರ ನೇಮಕಾತಿಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲರ ಮೇಲೂ ಇದೆ.

Comments