ಮೋದಿ–ಆರ್‍ಎಸ್‍ಎಸ್: ಐದಂಕದ ನಾಟಕ

ಸಂಘ ಮತ್ತು ವ್ಯಕ್ತಿಯ ನಡುವಣ ಹಗ್ಗಜಗ್ಗಾಟದಲ್ಲಿ ವ್ಯಕ್ತಿಗೆ ಹಿನ್ನಡೆ

ಮೋದಿ–ಆರ್‍ಎಸ್‍ಎಸ್: ಐದಂಕದ ನಾಟಕ

ಹೊಸ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಆರ್ಥಿಕ ಆಧುನಿಕವಾದಿ ಆಗಿದ್ದರೂ ಸಾಂಸ್ಕೃತಿಕವಾಗಿ ರಾಷ್ಟ್ರಿಯ ಸ್ವಯಂಸೇವಕ ಸಂಘದ (ಆರ್‍ಎಸ್‍ಎಸ್) ಪ್ರತಿಗಾಮಿ (ಮಧ್ಯಯುಗೀನ ಎಂದು ಹೇಳಲಾಗದು) ಮನಸ್ಥಿತಿಯ ಬಂದಿ’ ಎಂದು 2014ರ ಸಾರ್ವತ್ರಿಕ ಚುನಾವಣೆಯ ಸ್ವಲ್ಪ ಸಮಯದ ನಂತರ ನಾನು ಬರೆದಿದ್ದೆ. ಮೋದಿ ಅವರ ಮನಸ್ಸು ಮತ್ತು ಆತ್ಮದ ಒಳಗೆ ಈ ಎರಡು ವಿರೋಧಾಭಾಸಕರ ಪ್ರಚೋದನೆಗಳು ಪ್ರಾಬಲ್ಯಕ್ಕಾಗಿ ಹೋರಾಟ ನಡೆಸುತ್ತಿವೆ. ಅವುಗಳಲ್ಲಿ ಗೆಲುವು ಯಾವುದಕ್ಕೆ?

ನರೇಂದ್ರ ಮೋದಿ ಮತ್ತು ಬಿಜೆಪಿಗೆ ಮತ ಹಾಕಿರುವ ಹಲವು ಭಾರತೀಯರು ಈ ಪ್ರಶ್ನೆ ಕೇಳಿದ್ದಾರೆ. ಯುವಕನಾಗಿದ್ದಾಗಲೇ ಮೋದಿ ಅವರು ಆರ್‍ಎಸ್‍ಎಸ್ ಸೇರಿದ್ದರು ಮತ್ತು ರಾಜಕೀಯ ಹಾಗೂ ಸಾಂಸ್ಕೃತಿಕ ಶಿಕ್ಷಣವನ್ನು ಮುಖ್ಯವಾಗಿ ಅವರು ಈ ಸಂಘಟನೆಯಿಂದಲೇ ಪಡೆದುಕೊಂಡಿದ್ದಾರೆ ಎಂಬುದು ಅವರೆಲ್ಲರಿಗೂ ತಿಳಿದಿದೆ. ಆದರೆ ಗುಜರಾತ್ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದ ದೀರ್ಘ ಅವಧಿಯಲ್ಲಿ ಮೋದಿ ಅವರು ಆರ್‍ಎಸ್‍ಎಸ್ ಮತ್ತು ಅದರ ಸಹೋದರ ಸಂಘಟನೆ ವಿಶ್ವ ಹಿಂದೂ ಪರಿಷತ್ತನ್ನು ನಿಧಾನವಾಗಿ ರಾಜ್ಯದಲ್ಲಿ ಮೂಲೆಗುಂಪು ಮಾಡಿದ್ದೂ ಅವರೆಲ್ಲರಿಗೂ ಗೊತ್ತು.

2002ರ ಗುಜರಾತ್ ಗಲಭೆಗಳನ್ನು ಹಿಂದಕ್ಕೆ ತಳ್ಳಿ ತಾವು ವಿಕಾಸ ಪುರುಷ ಎಂಬ ಹೆಸರನ್ನು ಮೋದಿ ಸಂಪಾದಿಸಿಕೊಂಡಿದ್ದಾರೆ. ಸಾರ್ವತ್ರಿಕ ಚುನಾವಣಾ ಪ್ರಚಾರದಲ್ಲಿ ಮೋದಿ ಅವರು ಆರ್‍ಎಸ್‍ಎಸ್‌ನ  ಹೆಗ್ಗುರುತಾದ ಮತ್ತು ಹಿಂದೆ ತಾವೇ ವ್ಯಾಪಕವಾಗಿ ಬಳಸಿಕೊಂಡಿದ್ದ ಧ್ರುವೀಕರಣದ ಮಾತುಗಳನ್ನು ದೂರ ಇರಿಸಿದ್ದು ಅತ್ಯಂತ ಸ್ಪಷ್ಟವಾಗಿ ಗೋಚರವಾಗಿತ್ತು.

ಆರ್ಥಿಕ ಆಧುನೀಕರಣದ ಕಾರ್ಯಸೂಚಿಗೆ ಒತ್ತು ನೀಡಿದ್ದೇ 2014ರ ಚುನಾವಣೆಯಲ್ಲಿ ಮೋದಿ ಅವರ ಸ್ಪಷ್ಟ ಗೆಲುವಿನ ಮುಖ್ಯ ಕಾರಣ. ಆರ್ಥಿಕ ಆಧುನಿಕತೆ ಎಂದರೆ, ತಾಂತ್ರಿಕ ಸಂಶೋಧನೆಗಳ ಪೋಷಣೆ, ತಯಾರಿಕೆಯನ್ನು ಮತ್ತೆ ಲಾಭಕರವಾಗಿಸುವುದು, ಉತ್ತಮ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ಮತ್ತು ಸರ್ಕಾರದಲ್ಲಿ ಪಾರದರ್ಶಕತೆ ಹಾಗೂ ದಕ್ಷತೆಯನ್ನು ಹೆಚ್ಚಿಸುವುದಾಗಿ ಅವರು ಪ್ರತಿಪಾದಿಸಿದ್ದರು. ಬಿಜೆಪಿ ಮತ್ತು ಹಿಂದುತ್ವಕ್ಕೆ ನಿಷ್ಠರಾಗಿದ್ದವರು ಮೋದಿ ಅವರಿಗೆ ಮತ ಹಾಕಿದರು. ಬಿಜೆಪಿಯ ಸಾಂಪ್ರದಾಯಿಕ ಮತದಾರರಲ್ಲದ, ಆದರೆ ಯುಪಿಎ ಸರ್ಕಾರದ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಿಂದ ರೋಸಿ ಹೋಗಿದ್ದ ಇತರ ಹಲವರು ಕೂಡ ಮೋದಿ ಅವರ ಪಕ್ಷದ ಪರವಾಗಿ ಮತ ಚಲಾಯಿಸಿದ್ದಾರೆ. ಕೊನೆಯದಾಗಿ, ಮೊದಲ ಬಾರಿಗೆ ಮತ ಚಲಾಯಿಸಿದ್ದ ಯುವ ಜನರು ಮೋದಿ ಅವರ ಆರ್ಥಿಕ ದೃಷ್ಟಿಕೋನ ಹಾಗೂ ಕಾಂಗ್ರೆಸ್‌ನ ಸುಸ್ತಾಗಿ ಹೋಗಿದ್ದ ಹಳೆಯ ಮುಖಗಳಿಗೆ ಬದಲಾಗಿ ವೈಯಕ್ತಿಕವಾಗಿ ಕೆಚ್ಚು ಹೊಂದಿದ್ದ ಮೋದಿ ಅವರನ್ನು ಆಯ್ಕೆ ಮಾಡಿಕೊಂಡಿದ್ದರು.

2014ರ ಚುನಾವಣೆಯಲ್ಲಿ ಮೋದಿ ಅವರು ಗೆದ್ದಿರುವುದರಲ್ಲಿ ಆರ್‍ಎಸ್‌ಎಸ್‌ನ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲ ಎಂದೇ ಹೆಚ್ಚಿನ ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಆದರೆ ಅಲಹಾಬಾದ್ ಮೂಲದ ರಾಜಕೀಯ ಇತಿಹಾಸಕಾರ ಬದರಿ ನಾರಾಯಣ್ ಮಾತ್ರ ಇದಕ್ಕೆ ಅಪವಾದ. ಆರ್‍ಎಸ್‍ಎಸ್ ಕಾರ್ಯಕರ್ತರು ತಳಮಟ್ಟದಲ್ಲಿ ಮತದಾರರ ಮನವೊಲಿಸುವುದಕ್ಕಾಗಿ ರಾತ್ರಿ ಹಗಲು ಹೇಗೆ ಕೆಲಸ ಮಾಡಿದರು ಮತ್ತು ವಿಶೇಷವಾಗಿ ದೊಡ್ಡ ಮತ್ತು ನಿರ್ಣಾಯಕವಾದ ಉತ್ತರ ಪ್ರದೇಶದಲ್ಲಿ ಅವರು ಹೇಗೆ ಪ್ರಚಾರ ಮಾಡಿದರು ಎಂಬುದನ್ನು ‘ಎಕನಾಮಿಕ್ ಎಂಡ್ ಪೊಲಿಟಿಕಲ್ ವೀಕ್ಲಿ’ಯ ತಮ್ಮ ಲೇಖನದಲ್ಲಿ ಬದರಿ ನಾರಾಯಣ್ ದಾಖಲಿಸಿದ್ದಾರೆ. ಅವರು ಮೆರವಣಿಗೆಗಳನ್ನು ನಡೆಸಿದರು, ಸಿನಿಮಾಗಳನ್ನು ತೋರಿಸಿದರು, ವ್ಯಾಪಕವಾಗಿ ಮನೆ ಮನೆ ಪ್ರಚಾರ ನಡೆಸಿದರು ಮತ್ತು ರಾಜ್ಯದ ಎಲ್ಲ ಮೂಲೆಗಳ ಕುಗ್ರಾಮಗಳಿಗೂ ಹೋಗಿ ಪ್ರಚಾರ ನಡೆಸಿದರು. ಕೊನೆಗೆ, ಮತ ಚಲಾವಣೆಯಾಗುವ ಮತಗಟ್ಟೆಗಳಲ್ಲಿ ಕೂಡ ಆರ್‍ಎಸ್‍ಎಸ್ ಕಾರ್ಯಕರ್ತರೇ ಕೆಲಸ ಮಾಡಿದರು ಎಂದು ಲೇಖನದಲ್ಲಿ ವಿವರಿಸಲಾಗಿದೆ.

ಮೋದಿ ಅವರ ಹಿಂದೆ ಬಲವಾಗಿ ನಿಲ್ಲುವ ಮೂಲಕ ಗುಜರಾತ್‌ನಲ್ಲಿ ತಮ್ಮನ್ನು ಹೇಗೆ ನಡೆಸಿಕೊಳ್ಳಲಾಗಿತ್ತು ಎಂಬುದನ್ನು ಆರ್‍ಎಸ್‍ಎಸ್ ನಿರ್ಲಕ್ಷಿಸಲು ನಿರ್ಧರಿಸಿತು. ಯುಪಿಎ ಅಷ್ಟೊಂದು ಹೆಸರು ಕೆಡಿಸಿಕೊಂಡಿರುವುದರಿಂದ ಅದೊಂದು ಅತ್ಯುತ್ತಮ ಅವಕಾಶವಾಗಿದ್ದು ಅದನ್ನು ಕೈಬಿಡಬಾರದು ಎಂದು ಆರ್‍ಎಸ್‍ಎಸ್ ನಿರ್ಧರಿಸಿತು. ಇಂತಹ ಮತ್ತೊಂದು ಅವಕಾಶ ಮುಂದಿನ 20 ವರ್ಷಗಳ ಅವಧಿಗೆ ಸಿಕ್ಕದು ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರು ಹೇಳಿದ್ದು ವರದಿಯಾಗಿದೆ. ಏನೇ ಆದರೂ ಮೋದಿ ಅವರು ಆರ್‍ಎಸ್‍ಎಸ್‌ನದೇ ಉತ್ಪನ್ನ. ಇತ್ತೀಚಿನ ವರ್ಷಗಳಲ್ಲಿ ವ್ಯಕ್ತಿ ಮತ್ತು ಸಂಘಟನೆ ಸ್ವಲ್ಪಮಟ್ಟಿಗೆ ದೂರ ದೂರವಾಗಿದ್ದದ್ದು ಹೌದು. ಈಗ ಎರಡೂ ಹಿತಾಸಕ್ತಿಗಾಗಿ ವ್ಯಕ್ತಿ ಮತ್ತು ಸಂಘಟನೆಯನ್ನು ಒಟ್ಟಾಗಿಸುವುದು ಅಗತ್ಯ ಎಂಬುದನ್ನು ಕಂಡುಕೊಳ್ಳಲಾಗಿತ್ತು.

ಚುನಾವಣೆ ಮುಗಿದು ಗೆದ್ದಾದ ಮೇಲೆ ಆರ್‍ಎಸ್‍ಎಸ್ ಮತ್ತು ಎನ್‌ಡಿಎ ಸರ್ಕಾರದ ನಡುವಣ ಸಂಬಂಧ ಏನು? ಹೊಸ ಸರ್ಕಾರದ ಕಾರ್ಯಸೂಚಿಯಲ್ಲಿ ಮೋದಿ ಅವರು ಭರವಸೆ ನೀಡಿದಂತೆ ಆರ್ಥಿಕ ಆಧುನೀಕರಣಕ್ಕೆ ಒತ್ತು ಇದೆಯೇ? ಅಥವಾ ಹಿಂದೂ ಮೂಲಭೂತವಾದಿಗಳು ತಮ್ಮ ಧ್ವನಿಯನ್ನು ಆಲಿಸಬೇಕು (ತಮ್ಮ ಧ್ವನಿ ಪ್ರಬಲವಾಗಿದ್ದಾಗಲೂ) ಎಂದು ಪಟ್ಟು ಹಿಡಿದಿದ್ದಾರೆಯೇ? ಆರಂಭಿಕ ಲಕ್ಷಣಗಳು ಅಷ್ಟೊಂದು ಭರವಸೆದಾಯಕವಾಗಿಲ್ಲ

. ಮುಸ್ಲಿಮರು ಮತ್ತು ಕ್ರೈಸ್ತರ ಬಗ್ಗೆ ಹಲವು ಸಂಸದರು ನಿಂದನಾತ್ಮಕವಾಗಿ ಮಾತನಾಡಿದ್ದಾರೆ. ಅವರನ್ನು ಗದರಿಸುವ ಕೆಲಸವನ್ನು ಮೋದಿ ಅವರು ಮಾಡಲಿಲ್ಲ. 21ನೇ ಶತಮಾನದ ಆಸ್ಪತ್ರೆಯೊಂದನ್ನು ಉದ್ಘಾಟಿಸುವಾಗ ಮೋದಿ ಅವರು ಕೂಡ ಪ್ಲಾಸ್ಟಿಕ್ ಸರ್ಜರಿಯನ್ನು ಪ್ರಾಚೀನ ಹಿಂದೂಗಳು ಆವಿಷ್ಕರಿಸಿದ್ದರು ಎಂದು ಹೇಳಿದರು. ನಾಗ್ಪುರದಲ್ಲಿ ಆರ್‍ಎಸ್‍ಎಸ್ ನಡೆಸುವ ಬೇಸಿಗೆ ಶಾಲೆಯಲ್ಲಿ ಇಂತಹ ಅಸಂಬದ್ಧವನ್ನು ಕಲಿಸುತ್ತಾರೆ. ಮೋದಿ ಅವರು ಕೂಡ ಇಲ್ಲಿನ ಪುನಶ್ಚೇತನ ಶಿಬಿರಗಳಿಗೆ ಹೋಗಿದ್ದಾರೆ. ಆದರೆ ಅವರು ಅಲ್ಲಿ ಕಲಿಸುವ ಇಂತಹ ಕಲ್ಪನೆಗಳನ್ನು ಮೀರಿ ಬೆಳೆದಿದ್ದಾರೆ ಎಂದು ಜನರು ಭಾವಿಸಿದ್ದರು.

ಹಿಂದಿರುಗಿ ನೋಡಿದರೆ, ಮೋದಿ ಅವರ ಸರ್ಕಾರದ ಮೊದಲ ವರ್ಷದ ಅವಧಿಯಲ್ಲಿ ಪ್ರಧಾನಿ ಮತ್ತು ಆರ್‍ಎಸ್‍ಎಸ್‌ನವರು ಪರಸ್ಪರರನ್ನು ಪರೀಕ್ಷಿಸಿ ನೋಡುತ್ತಿದ್ದರು ಎಂಬಂತೆ ತೋರುತ್ತದೆ. ಸಂಸ್ಕೃತಿ ಮತ್ತು ಶಿಕ್ಷಣವನ್ನು ಮೋದಿ ಅವರು ಆರ್‍ಎಸ್‍ಎಸ್‌ಗೆ ನೀಡುವ ಮೂಲಕ ಓಲೈಕೆಗೆ ಯತ್ನಿಸಿದ್ದಾರೆ. ಹೀಗಾದರೆ ಅರ್ಥ ವ್ಯವಸ್ಥೆ ಮತ್ತು ವಿದೇಶಾಂಗ ನೀತಿ ಗಟ್ಟಿಯಾಗಿ ತಮ್ಮ ನಿಯಂತ್ರಣದಲ್ಲಿ ಉಳಿಯಬಹುದು ಎಂದು ಅವರು ಭಾವಿಸಿದ್ದರು. ಅರ್ಥ ವ್ಯವಸ್ಥೆಯ ಇನ್ನಷ್ಟು ಉದಾರೀಕರಣ ಮತ್ತು ಜಾಗತಿಕ ಅರ್ಥ ವ್ಯವಸ್ಥೆಯೊಂದಿಗೆ ಇನ್ನೂ ಹೆಚ್ಚಿನ ಸಂಯೋಜನೆಗೆ ಸ್ವದೇಶಿ ಜಾಗರಣ ಮಂಚ್ ವಿರುದ್ಧವಾಗಿದೆ ಎಂಬುದು ಪ್ರಧಾನಿಯವರಿಗೆ ತಿಳಿದಿತ್ತು. ಚೀನಾದ ಜತೆಗೆ ಉತ್ತಮ ಸಂಬಂಧ ಹೊಂದುವುದಕ್ಕೆ ಆರ್‍ಎಸ್‍ಎಸ್ ವಿರುದ್ಧವಾಗಿದೆ ಮತ್ತು ಅಮೆರಿಕದ ಜತೆಗಿನ ಉತ್ತಮ ಸಂಬಂಧದ ಬಗ್ಗೆ ದ್ವಂದ್ವ ಇದೆ ಎಂಬುದು ಪ್ರಧಾನಿ ಅವರಿಗೆ ಗೊತ್ತಿತ್ತು. ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರಗಳ ಅವಕಾಶವನ್ನು ಆರ್‍ಎಸ್‍ಎಸ್‌ಗೆ  ಬಿಟ್ಟುಕೊಟ್ಟರೆ, ತಮಗೆ ಹೆಚ್ಚು ಮುಖ್ಯವಾದ ನೀತಿಗಳಲ್ಲಿ ಆರ್‍ಎಸ್‍ಎಸ್ ಹಸ್ತಕ್ಷೇಪ ಮಾಡದು ಎಂಬ ಆಶಾಭಾವವನ್ನು ಮೋದಿ ಅವರು ಇರಿಸಿಕೊಂಡಿದ್ದರು.

ಪ್ರಧಾನ ಮಂತ್ರಿ ಮತ್ತು ಆರ್‍ಎಸ್‍ಎಸ್ ನಡುವಣ ಹಗ್ಗಜಗ್ಗಾಟದಲ್ಲಿ ಮೊದಲಿಗೆ ತಲೆ ಬಾಗಿದ್ದು ಪ್ರಧಾನಿ ಅವರೇ. ಮೊದಲ ಸುತ್ತಿನಲ್ಲಿ ಸಚಿವರು ಮತ್ತು ಸಂಸದರು ದ್ವೇಷಪೂರಿತ ಹೇಳಿಕೆಗಳನ್ನು ನೀಡಿದಾಗ ಅವರನ್ನು ಯಾರೂ ತರಾಟೆಗೆ ತೆಗೆದುಕೊಳ್ಳಲಿಲ್ಲ. ಹಾಗಾಗಿ ಎರಡನೇ ಸುತ್ತಿನ ತಂಡ ಅವರನ್ನು ತಕ್ಷಣವೇ ಸೇರಿಕೊಂಡಿತು. ಮೂರನೇ ದರ್ಜೆ ಇತಿಹಾಸಕಾರರೊಬ್ಬರನ್ನು ಐಸಿಎಚ್‍ಆರ್‌ಗೆ ಮತ್ತು ಬಿ ದರ್ಜೆಯ ನಟರೊಬ್ಬರನ್ನು ಎಫ್‌ಟಿಐಐಗೆ ಮುಖ್ಯಸ್ಥರಾಗಿ ನೇಮಿಸುವ ಅವಕಾಶವನ್ನು ಇದು ಆರ್‍ಎಸ್‍ಎಸ್‌ಗೆ ಒದಗಿಸಿತು. ಈ ನಡೆ ಸರ್ಕಾರಕ್ಕೆ ಇನ್ನಷ್ಟು ಕೆಟ್ಟ ಪ್ರಚಾರ ನೀಡಿತು. ಆರ್‍ಎಸ್‍ಎಸ್‌ ಮೆಚ್ಚಿನ ಸಂಸ್ಕೃತಿ ಸಚಿವರು ಹಲವು ವಿಚಿತ್ರ ಹೇಳಿಕೆಗಳನ್ನು ನೀಡಿದರು. ಅದಕ್ಕೆ ಪ್ರತಿಫಲವಾಗಿ ಅವರಿಗೆ ನವದೆಹಲಿಯಲ್ಲಿನ ಭವ್ಯ ಬಂಗಲೆಗಳಲ್ಲಿ ಒಂದನ್ನು ನೀಡಲಾಯಿತು.

ದಾದ್ರಿ ಘಟನೆಯ ಹೊತ್ತಿಗಾಗಲೇ ಆರ್‍ಎಸ್‍ಎಸ್ ನೇಪಥ್ಯದಿಂದ ಅತ್ಯಂತ ಶಕ್ತಿಯುತವಾಗಿಯೇ ಹೊರಗೆ ಬಂದಿತ್ತು. ಇದು ತಮ್ಮ ಸರ್ಕಾರ ಮತ್ತು ಸರ್ಕಾರ ಏನು ಮಾಡಬೇಕು ಎಂಬುದನ್ನು ಹೇಳುವವರು ತಾವೇ ಎಂಬುದನ್ನು ಆರ್‍ಎಸ್‍ಎಸ್ ಗಟ್ಟಿಯಾಗಿ ನಂಬಿತ್ತು. ಮೊಹಮ್ಮದ್ ಇಕ್ಲಾಕ್ ಹತ್ಯೆಯನ್ನು ಆಗಲೇ ಪ್ರಧಾನಿಯವರು ಖಂಡಿಸಿದ್ದರೆ ಅಥವಾ ಇನ್ನೂ ಉತ್ತಮ ಎಂದರೆ, ಬಲಿಯಾದ ವ್ಯಕ್ತಿಯ ಮನೆಗೆ ಹೋಗುವ ನೈತಿಕ ಧೈರ್ಯವನ್ನು ತೋರಿದ್ದರೆ, ಮೇಲುಗೈಯನ್ನು ಹಿಂದುತ್ವವಾದಿಗಳಿಂದ ಕಸಿದುಕೊಳ್ಳುವ ಅವಕಾಶ ಮೋದಿ ಅವರಿಗೆ ದೊರೆಯುತ್ತಿತ್ತು. ಮೋದಿ ಅವರು ಹಾಗೆ ಮಾಡಲಿಲ್ಲ. ಎಲ್ಲಕ್ಕಿಂತ ಕೆಟ್ಟದಾಗಿ, ಬಿಹಾರ ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ಜನಾಂಗೀಯವಾದಿ ನಿಲುವು ತಳೆಯುವಂತೆ ಅವರ ಮನವೊಲಿಸಲಾಯಿತು. ಬಡ ಮುಸ್ಲಿಮರ ವಿರುದ್ಧ ಬಡ ದಲಿತರನ್ನು ಎತ್ತಿಕಟ್ಟುವ ಅವರ ಯತ್ನ ಖಂಡನೀಯ. ಬಿಜೆಪಿಗೆ ಮತ ನೀಡದವರು ಪಾಕಿಸ್ತಾನದ ಕೈಗೊಂಬೆಗಳು ಎಂಬ ಪಕ್ಷದ ಅಧ್ಯಕ್ಷರ ಹೇಳಿಕೆಯಂತೂ ಇನ್ನಷ್ಟು ಆಘಾತಕಾರಿ.

ಬಿಹಾರದ ಮತ ಎಣಿಕೆ ಮುಗಿದ ಕೂಡಲೇ ಪ್ರಧಾನಿಯವರು ವಿದೇಶ ಪ್ರವಾಸಕ್ಕೆ ಹೋದರು. ಎಂದಿನಂತೆ ಅಲ್ಲಿನ ಭ್ರಮಾಧೀನ ಅನಿವಾಸಿ ಭಾರತೀಯರ ಸಮೂಹವನ್ನು ಉದ್ದೇಶಿಸಿ ಮಾತನಾಡಿದರು. ನಿಸ್ಸಂಶಯವಾಗಿ, ಬಿಹಾರದ ಮತದಾರರು ಪೆಟ್ಟು ನೀಡಿದ ಅಹಂಗೆ ಇದು ಉತ್ತೇಜನ ನೀಡಿತು. ಬಿಹಾರದಲ್ಲಿ ಏನು ತಪ್ಪಾಯಿತು ಎಂಬುದನ್ನು ವಿಶ್ಲೇಷಿಸಲು ದೇಶದಿಂದ ದೇಶಕ್ಕೆ ಹಾರುತ್ತಿರುವ ಮೋದಿ ಅವರಿಗೆ ಸಮಯ ಅಥವಾ ನಿಜವಾಗಿಯೂ ಆಸಕ್ತಿ ಇದೆಯೇ? ಅಷ್ಟೊಂದು ಭಾರಿ ಬಹುಮತದಿಂದ ಅಧಿಕಾರಕ್ಕೆ ಬಂದ ಸರ್ಕಾರ ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ಈ ರೀತಿಯಲ್ಲಿ ಶರಣಾಗಲು ಕಾರಣವೇನು ಎಂಬುದನ್ನು ಕೇಳಿಕೊಳ್ಳುವ ವ್ಯವಧಾನ ಮೋದಿ ಅವರಿಗೆ ಇದೆಯೇ?

ಆರ್‍ಎಸ್‍ಎಸ್ ಜತೆಗೆ ಮೋದಿ ಅವರ ಸಂಬಂಧ ಉತ್ತಮಗೊಂಡಿರುವುದು ದೇಶಕ್ಕೆ ಅನುಕೂಲಕರವಾಗಿ ಕೆಲಸ ಮಾಡಿಲ್ಲ ಎಂಬುದು ಈ ವೀಕ್ಷಕನ ಅಭಿಪ್ರಾಯ. ಅರ್ಥವ್ಯವಸ್ಥೆ ಮತ್ತು ವಿದೇಶಾಂಗ ನೀತಿಯಲ್ಲಿ ತಮ್ಮ ದಾರಿಗೆ ಅಡ್ಡ ಬರಲಿಕ್ಕಿಲ್ಲ ಎಂಬ ಆಶಾವಾದದಿಂದ ಸಂಸ್ಕೃತಿ ಮತ್ತು ಶಿಕ್ಷಣವನ್ನು ಮೋದಿ ಅವರು ಆರ್‍ಎಸ್‍ಎಸ್‌ಗೆ ನೀಡಿದರು. ಆದರೆ, ಮಹೇಶ್ ಶರ್ಮಾ ಮತ್ತು ಸ್ಮೃತಿ ಇರಾನಿ ಅವರಂತಹ ಸಚಿವರು ನಡೆಸುತ್ತಿರುವ ಕೇಡೆನಿಸುವ ಕುಚೇಷ್ಟೆಗಳು ಇಡೀ ಸರ್ಕಾರದ ವಿಶ್ವಾಸಾರ್ಹತೆಯನ್ನೇ ಕೆಡಿಸಿವೆ. ಯೋಗಿ ಆದಿತ್ಯನಾಥ ಮತ್ತು ಸಾಕ್ಷಿ ಮಹಾರಾಜ್ ಅವರಂತಹ ಸಂಸದರ ಹೇಳಿಕೆಗಳೂ ಇದೇ ಪರಿಣಾಮವನ್ನು ಉಂಟು ಮಾಡಿವೆ.

ನರೇಂದ್ರ ಮೋದಿ ಮತ್ತು ಆರ್‍ಎಸ್‍ಎಸ್ ನಡುವೆ ನಡೆಯುತ್ತಿರುವುದು ದೀರ್ಘವಾದ ನಾಟಕ; ಅದರ ಐದು ಅಂಕಗಳನ್ನು ಮಾತ್ರ ನಾವು ಈವರೆಗೆ ನೋಡಿದ್ದೇವೆ. ಅಂಕ ಒಂದರಲ್ಲಿ ಸಂಘ ಸೇರಿದ್ದ ಬಾಲ ನರೇಂದ್ರ ಮುಂದಿನ ಸುಮಾರು 20 ವರ್ಷಗಳವರೆಗೆ ಅದಕ್ಕೆ ವಿಧೇಯವಾಗಿದ್ದರು. ಎರಡನೇ ಅಂಕದಲ್ಲಿ ನರೇಂದ್ರ ಮೋದಿ ಅವರನ್ನು ಆರ್‍ಎಸ್‍ಎಸ್ ಮತ್ತು ಬಿಜೆಪಿ ನಡುವಣ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಲು ನಿಯೋಜಿಸಲಾಯಿತು. ಮೂರನೇ ಅಂಕದಲ್ಲಿ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿಯಾಗಿ ಕಳುಹಿಸಲಾಯಿತು. ಅಲ್ಲಿ ಅವರು ತಮ್ಮದೇ ವ್ಯಕ್ತಿತ್ವ ರೂಢಿಸಿಕೊಂಡು ಸಂಘದ ನೆರಳಿನಿಂದ ಹೊರಬಂದು ಗಟ್ಟಿಯಾಗಿ ಬೆಳೆದರು.

ಮೊದಲ ಮೂರು ಅಂಕಗಳಿಗೆ ಹೋಲಿಸಿದರೆ ನಾಲ್ಕನೇ ಅಂಕ ಚಿಕ್ಕದು ಮತ್ತು ಹೆಚ್ಚು ತೀವ್ರವಾದುದು. ಇದು ಸಾರ್ವತ್ರಿಕ ಚುನಾವಣಾ ಪ್ರಚಾರದ ಅವಧಿಯನ್ನು ಒಳಗೊಂಡಿದೆ. ಈ ಅಂಕದಲ್ಲಿ ಮೋದಿ ಅವರು ಮತದಾರರಿಗೆ ಆಕರ್ಷಕ ಮತ್ತು ಭರವಸೆದಾಯಕ ಮುಖವನ್ನು
ಒದಗಿಸಿದರೆ, ತಳಮಟ್ಟದಲ್ಲಿ ಅವರ ಪರವಾಗಿ ಆರ್‍ಎಸ್‍ಎಸ್ ಸದ್ದಿಲ್ಲದೆ ಕೆಲಸ ಮಾಡಿತು. ಹೊಸ ಸರ್ಕಾರ ರಚನೆಯೊಂದಿಗೆ ಐದನೇ ಅಂಕ ಆರಂಭಗೊಂಡಿತು. ಆರ್‍ಎಸ್‍ಎಸ್ ನಿಧಾನವಾಗಿ ಪ್ರಧಾನಿ ಅವರ ಮೇಲೆ ತನ್ನ ಪ್ರಭಾವವನ್ನು ಹೇರತೊಡಗಿತು.

ಮೋದಿ, ಆರ್‍ಎಸ್‍ಎಸ್ ನಾಟಕದ ಐದನೇ ಅಂಕ ಪೂರ್ಣಗೊಳ್ಳಲು ಇನ್ನು ಮೂರು ವರ್ಷಗಳಿವೆ. ಪ್ರಧಾನಿ ಅವರು ಸಂಪೂರ್ಣವಾಗಿ ಆರ್‍ಎಸ್‍ಎಸ್ ಒತ್ತಡಕ್ಕೆ ಮಣಿಯುವ ಸಂಭವ ಕಡಿಮೆ; ಹಾಗೆಯೇ ವ್ಯವಸ್ಥೆಯನ್ನು ತಮ್ಮ ಪರವಾಗಿ ಪರಿವರ್ತಿಸಿಕೊಳ್ಳುವಲ್ಲಿ ಮೋದಿ ಅವರು ಯಶಸ್ವಿಯಾಗುವ ಸಾಧ್ಯತೆಯೂ ಕಡಿಮೆ. ಈ ಸಂದರ್ಭದಲ್ಲಿ ಹಾಗೆ ಮಾಡಬೇಕಾದ ಅಗತ್ಯ ಯಾವುದೇ ಪ್ರಮಾಣದಲ್ಲಿ
ಯಾದರೂ ಇದೆ ಎಂದು ಅವರು ಭಾವಿಸುತ್ತಲೂ ಇಲ್ಲ ಅನಿಸುತ್ತದೆ.

ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಬಹುತ್ವ ಮತ್ತು ಸಹಿಷ್ಣುತೆಯ ವಾತಾವರಣ ಅಗತ್ಯ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ವಾದಿಸಿದ್ದಾರೆ. ಆದರೆ ಇದೇ ನಂಬಿಕೆಯನ್ನು ಪ್ರಧಾನಿ ಅವರೂ ಹೊಂದಿರುವಂತೆ ಕಾಣಿಸುತ್ತಿಲ್ಲ. ಅವರು ಸಾಂಸ್ಕೃತಿಕ ಪ್ರತಿಗಾಮಿತನ ತೋರುತ್ತಲೇ ಆರ್ಥಿಕ ವಿಚಾರದಲ್ಲಿ ಆಧುನಿಕತೆ ತರಲು ಯತ್ನಿಸುತ್ತಿದ್ದಾರೆ. ಒಂದೇ ಸಮಯದಲ್ಲಿ ಅವರು ಸವಾರಿ ಮಾಡುತ್ತಿರುವ ಎರಡು ಕುದುರೆಗಳಲ್ಲಿ ಒಂದು ಅವರನ್ನು ಮುಂದಕ್ಕೂ ಮತ್ತೊಂದು ಹಿಂದಕ್ಕೂ ಎಳೆಯುತ್ತಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಲೆನಿನ್‍ ಬದಲಿಗೆ ಭಗತ್‍ ಸಿಂಗ್‍ ಯಾಕಾಗದು?

ಗುಹಾಂಕಣ
ಲೆನಿನ್‍ ಬದಲಿಗೆ ಭಗತ್‍ ಸಿಂಗ್‍ ಯಾಕಾಗದು?

16 Mar, 2018
ಪ್ರಸಿದ್ಧಿಯ ಜತೆಗೇ ಇದೆ ವಿಶ್ವಾಸಾರ್ಹತೆಯ ಹೊಣೆ

ಗುಹಾಂಕಣ
ಪ್ರಸಿದ್ಧಿಯ ಜತೆಗೇ ಇದೆ ವಿಶ್ವಾಸಾರ್ಹತೆಯ ಹೊಣೆ

2 Mar, 2018
‘ಜೋಳಿಗೆದಾಸ’ ಅರ್ಥಶಾಸ್ತ್ರಜ್ಞನ ಜತೆಗೊಂದು ದಿನ

ಗುಹಾಂಕಣ
‘ಜೋಳಿಗೆದಾಸ’ ಅರ್ಥಶಾಸ್ತ್ರಜ್ಞನ ಜತೆಗೊಂದು ದಿನ

16 Feb, 2018
ಬುಡಕಟ್ಟು ಬದುಕಿಗಾಗಿ ಸೆಣಸಿದ ಆದಿವಾಸಿ

ಗುಹಾಂಕಣ
ಬುಡಕಟ್ಟು ಬದುಕಿಗಾಗಿ ಸೆಣಸಿದ ಆದಿವಾಸಿ

2 Feb, 2018
ಕೊಹ್ಲಿ: ಶ್ರೇಷ್ಠತೆ ಮೇಲೆ ಸೊಕ್ಕಿನ ನೆರಳು

ಗುಹಾಂಕಣ
ಕೊಹ್ಲಿ: ಶ್ರೇಷ್ಠತೆ ಮೇಲೆ ಸೊಕ್ಕಿನ ನೆರಳು

19 Jan, 2018