ಸಂಸತ್ ಕಲಾಪಕ್ಕೆ ಅಡ್ಡಿ ಕಾಂಗ್ರೆಸ್ ನಡೆ ಸರಿಯಲ್ಲ

ಪ್ರಮುಖ ಮಸೂದೆಗಳು ಸಂಸತ್ ಒಪ್ಪಿಗೆಗೆ ಕಾದಿರುವ ಸಂದರ್ಭದಲ್ಲಿ ಈ ರಾಜಕೀಯ ‘ನಾಟಕ’ವನ್ನು ಯಾರೂ ಒಪ್ಪುವುದು ಸಾಧ್ಯವಿಲ್ಲ. ಕಾಂಗ್ರೆಸ್‌ನ ಹತಾಶ ಮನಸ್ಥಿತಿಗೆ ಇದು ಪ್ರತೀಕ.

‘ನ್ಯಾಷನಲ್ ಹೆರಾಲ್ಡ್’ ಪ್ರಕರಣ ನೆಪವಾಗಿರಿಸಿಕೊಂಡು ಸತತವಾಗಿ ಮೂರನೇ ದಿನವೂ ಸಂಸತ್ ಕಲಾಪಕ್ಕೆ ಕಾಂಗ್ರೆಸ್ ಪಕ್ಷ ಅಡ್ಡಿಪಡಿಸಿರುವುದು ಸಮರ್ಥನೀಯ ವರ್ತನೆಯಲ್ಲ. ನಿಜ. ಈ ಪ್ರಕರಣದ ಬಗ್ಗೆ ತನ್ನದೇ ನಿಲುವು ಹೊಂದಲು ಕಾಂಗ್ರೆಸ್ ಪಕ್ಷಕ್ಕೆ ಸ್ವಾತಂತ್ರ್ಯವಿದೆ. ಆದರೆ ಈ ಪ್ರಕರಣದ ಬಗ್ಗೆ ಕಾನೂನು ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂಬುದು ಕಾಂಗ್ರೆಸ್‌ಗೆ ನೆನಪಿರಬೇಕು.

ಹೀಗಾಗಿ ಪ್ರತಿರೋಧ ತೋರುವುದರಿಂದ ಈ ಪ್ರಕ್ರಿಯೆಯನ್ನು ಮಧ್ಯದಲ್ಲಿ ಸ್ಥಗಿತಗೊಳಿಸುವುದಾಗಲಿ, ಕೈಬಿಡುವುದಾಗಲಿ ಸಾಧ್ಯವೇ ಇಲ್ಲ. ಜೊತೆಗೆ ರಾಷ್ಟ್ರದಲ್ಲಿ ಸುಭದ್ರ ನ್ಯಾಯಾಂಗ ವ್ಯವಸ್ಥೆ ಎಂಬುದು ಇದೆ. ಕಾನೂನಿನ ರೀತಿನೀತಿಗಳಿವೆ. ಈ ಪ್ರಕಾರ, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಹೀಗಿದ್ದೂ ತಮಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾವಿಸಿದಲ್ಲಿ ಉನ್ನತ ನ್ಯಾಯಾಂಗ ವೇದಿಕೆಗಳಲ್ಲಿ ಪರಿಹಾರ ಕೋರಲು ಅವರು ಸ್ವತಂತ್ರರು.

ಕಾನೂನಿನಲ್ಲಿ ಅದಕ್ಕೆ ಅವಕಾಶ ಇದ್ದೇ ಇದೆ. ಆದರೆ ಅದು ಬಿಟ್ಟು ಸಂಸತ್‌ನಲ್ಲಿ ಗದ್ದಲ ಎಬ್ಬಿಸಿ ಸಂಸತ್ ಕಲಾಪವನ್ನು ಬಲಿಗೊಡುತ್ತಾ ಸಾಗುವುದನ್ನು ಜನ ಸಮರ್ಥಿಸುವುದಾದರೂ ಹೇಗೆ? ಅದೂ ಸೇವಾ ಹಾಗೂ ಸರಕು ತೆರಿಗೆ (ಜಿಎಸ್‌ಟಿ) ಮಸೂದೆ ಸೇರಿದಂತೆ ರಾಷ್ಟ್ರದ ಅಭಿವೃದ್ಧಿಗೆ ಅಗತ್ಯವಾದ ಪ್ರಮುಖ ಮಸೂದೆಗಳು ಸಂಸತ್ ಒಪ್ಪಿಗೆಗೆ ಕಾದಿರುವ ಸಂದರ್ಭದಲ್ಲಿ ಈ ರಾಜಕೀಯ ‘ನಾಟಕ’ವನ್ನು ಯಾರೂ ಒಪ್ಪುವುದು ಸಾಧ್ಯವಿಲ್ಲ. ಕಾಂಗ್ರೆಸ್‌ನ ಹತಾಶ ಮನಸ್ಥಿತಿಗೆ ಇದು ಪ್ರತೀಕ.

ನಿಜಕ್ಕೂ ಈ ಪ್ರಕರಣ ಇತ್ಯರ್ಥವಾಗಬೇಕಾಗಿರುವುದು ನ್ಯಾಯಾಲಯದಲ್ಲೇ ಹೊರತು ಸಂಸತ್‌ನಲ್ಲಿ ಅಲ್ಲ ಎಂಬುದನ್ನು ಕಾಂಗ್ರೆಸ್ ಮೊದಲು ಮನಗಾಣಬೇಕು. ಈ ಪ್ರಕರಣದಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹೇಳಿದೆ. ಈ ದಾವೆ ಹೂಡಿರುವ ಸುಬ್ರಮಣಿಯನ್ ಸ್ವಾಮಿ ಬಿಜೆಪಿ ಒಳ ವಲಯದಲ್ಲಿರುವವರು ಎಂಬುದು ನಿಜವಿರಬಹುದು. ಆದರೆ ಇದೇ ವ್ಯಕ್ತಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಹೂಡಿದ್ದ ಮೊಕದ್ದಮೆಯಲ್ಲಿ  ಜಯಲಲಿತಾ ಅವರು ಜೈಲುವಾಸ ಅನುಭವಿಸಬೇಕಾಯಿತು ಎಂಬುದೂ ನಮಗೆ ನೆನಪಿರಬೇಕು.

ಈಗ ‘ನ್ಯಾಷನಲ್ ಹೆರಾಲ್ಡ್’ ಪ್ರಕರಣದಲ್ಲೂ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವುದು ಖಾಸಗಿ ದೂರು. ಆದರೆ ನ್ಯಾಯಾಂಗದ ವಲಯದಲ್ಲಿರುವ ಈ ಖಾಸಗಿ ದೂರನ್ನು ರಾಜಕೀಯಗೊಳಿಸುವ ಕಾಂಗ್ರೆಸ್ ಪ್ರಯತ್ನ ಪಕ್ಷದ ಹತಾಶೆಯನ್ನು ತೋರಿಸುತ್ತದೆ ಅಷ್ಟೆ. ಸುಬ್ರಮಣಿಯನ್ ಸ್ವಾಮಿಯವರ ಖಾಸಗಿ ದೂರಿಗೆ ಕೇಂದ್ರ ಸರ್ಕಾರದ ಬೆಂಬಲವಿದೆ ಎಂಬುದನ್ನು ತೋರಿಸಲು ಯಾವುದೇ ಸಾಕ್ಷ್ಯ ಇಲ್ಲ. ಹೀಗಾಗಿ ಈ ವಿಷಯವನ್ನು ರಾಜಕೀಯಕರಣಗೊಳಿಸುವುದು ಸಲ್ಲದು.

ತಾನು ಇಂದಿರಾ ಗಾಂಧಿ ಸೊಸೆ. ಯಾವುದಕ್ಕೂ ಅಂಜುವುದಿಲ್ಲ ಎಂಬಂತಹ ಭಾವಾತಿರೇಕದ ಮಾತುಗಳ ಮೂಲಕ ಸೋನಿಯಾ ಗಾಂಧಿ ಅವರು ಸಾರ್ವಜನಿಕ ಸಹಾನುಭೂತಿ ಪಡೆಯಲು ಯತ್ನಿಸುವ ಕ್ರಮ ಹಾಸ್ಯಾಸ್ಪದ. ಕೋರ್ಟ್ ಸಮನ್ಸ್ ಬಂದ ನಂತರ ರಾಜಕೀಯ ಪ್ರತೀಕಾರದ ವಿಚಾರ ಮಾತನಾಡುವುದು ನ್ಯಾಯಾಂಗದ ಸ್ವಾತಂತ್ರ್ಯವನ್ನು ದೂಷಿಸಿದಂತೆಯೂ ಆಗುತ್ತದೆ.

ಹಾಗೆಯೇ, ‘ರಾಜಕೀಯ ಪ್ರತೀಕಾರ’ ಎಂಬಂಥ ವಾದ ಮಂಡನೆ ಕಾಂಗ್ರೆಸ್‌ಗೆ ರಾಜಕೀಯವಾಗಿ ಒಂದು ಅಸ್ತ್ರವಾಗಬಹುದು ಎಂಬ ವಿಚಾರವೂ ಸಹಜವಾದದ್ದೇ. ಅದರಲ್ಲಿ ತಪ್ಪೇನಿಲ್ಲ. ಆದರೆ ಅದು ಅಸ್ತ್ರ ಆಗಬೇಕಾದುದು ಸಂಸತ್‌ನ ಹೊರಗೆ ಎಂಬಂತಹ ವಿವೇಚನೆ ಇರಬೇಕು. ಬೇಕಿದ್ದರೆ ಈ ವಿಚಾರದ ಬಗ್ಗೆ  ಒಂದು ಆಂದೋಲನವನ್ನೇ ಕಾಂಗ್ರೆಸ್ ನಾಯಕತ್ವ ಹುಟ್ಟುಹಾಕುವುದಕ್ಕೂ ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮುಖ್ಯ ಷೇರುದಾರರಾಗಿರುವ ಸ್ವಯಂಸೇವಾ ಸಂಸ್ಥೆಯಾದ ‘ಯಂಗ್ ಇಂಡಿಯನ್’ ಸಂಸ್ಥೆ, ‘ಅಸೋಸಿಯೇಟೆಡ್ ಜರ್ನಲ್ಸ್ ಪ್ರೈ ಲಿಮಿಟೆಡ್’ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡ ವಹಿವಾಟಿನಲ್ಲಿ ಏನೂ ತಪ್ಪಾಗಿಲ್ಲ ಎಂದಾದರೆ ಅದನ್ನು ಸಾಬೀತುಪಡಿಸಬೇಕಾಗಿರುವುದು ನ್ಯಾಯಾಲಯದಲ್ಲಿ.

ಮೇಲ್ನೋಟಕ್ಕೆ ಅಪರಾಧದ ಸಾಕ್ಷ್ಯ ಇರುವುದರಿಂದ ವಿಚಾರಣಾ ನ್ಯಾಯಾಲಯದ ತೀರ್ಪು ಎತ್ತಿ ಹಿಡಿಯುವುದಾಗಿ ದೆಹಲಿ ಹೈಕೋರ್ಟ್ ಹೇಳಿದೆ. ಇದನ್ನು ಕಾನೂನಾತ್ಮಕವಾಗಿ ನಿರ್ವಹಿಸುವುದೇ ಉತ್ತಮ ಮಾರ್ಗ. ಅದು ಬಿಟ್ಟು, ಸಾರ್ವಜನಿಕ ಹಿತಕ್ಕೆ ಸಂಬಂಧಪಡದ ವಿಚಾರಕ್ಕೆ ಸಂಬಂಧಿಸಿದಂತೆ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದು ಪ್ರಜಾಸತ್ತೆಯ ತತ್ವಗಳಿಗೆ ವಿರುದ್ಧವಾದುದು. ಇದನ್ನು ಯಾವ ಕಾರಣಕ್ಕೂ ಸಮರ್ಥಿಸಲಾಗದು.

Comments