ಪ್ಯಾರಿಸ್‌ ಹವಾಮಾನ ಶೃಂಗಸಭೆ ಕಲಿಸುತ್ತಿದೆ ಪಾಠ

ಒಮ್ಮೊಮ್ಮೆ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಪ್ರತಿಕ್ರಿಯಿಸುವ ಶಕ್ತಿ ನಮಗಿದೆಯೇ ಎಂಬುದರ ಬಗ್ಗೆಯೇ ಅನುಮಾನಗಳು ಹುಟ್ಟುತ್ತವೆ. ಇದು ಕೇವಲ ಒಂದು ದೇಶಕ್ಕೆ ಇಲ್ಲವೇ ಸಮಾಜಕ್ಕೆ ಸೀಮಿತವಾಗಿರುವ ಸಮಸ್ಯೆಯಲ್ಲ. ಎಲ್ಲ ಮನುಷ್ಯರನ್ನೂ ಕಾಡುವ ಕಾಯಿಲೆಯೆಂದೇ ಅನ್ನಿಸುತ್ತದೆ.

ಒಮ್ಮೊಮ್ಮೆ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಪ್ರತಿಕ್ರಿಯಿಸುವ ಶಕ್ತಿ ನಮಗಿದೆಯೇ ಎಂಬುದರ ಬಗ್ಗೆಯೇ ಅನುಮಾನಗಳು ಹುಟ್ಟುತ್ತವೆ. ಇದು ಕೇವಲ ಒಂದು ದೇಶಕ್ಕೆ ಇಲ್ಲವೇ ಸಮಾಜಕ್ಕೆ ಸೀಮಿತವಾಗಿರುವ ಸಮಸ್ಯೆಯಲ್ಲ. ಎಲ್ಲ ಮನುಷ್ಯರನ್ನೂ ಕಾಡುವ ಕಾಯಿಲೆಯೆಂದೇ ಅನ್ನಿಸುತ್ತದೆ.

ಉದಾಹರಣೆಗೆ ಡೊನಾಲ್ಡ್ ಟ್ರಂಪ್ ಎಂಬ ಅಮೆರಿಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕಳೆದ ಸೋಮವಾರ ಹೇಳಿದ ಮಾತುಗಳನ್ನು ಗಮನಿಸಿ. ಟ್ರಂಪ್ ಹೇಳುತ್ತಾರೆ: ಮುಸ್ಲಿಮರೆಲ್ಲ ಜಿಹಾದಿಗಳು ಮತ್ತು ಅಮೆರಿಕವನ್ನು ದ್ವೇಷಿಸುವವರು. ಹಾಗಾಗಿ ಅವರ ದ್ವೇಷದ ಮೂಲವನ್ನು ಸ್ಪಷ್ಟವಾಗಿ ಅರಿಯುವ ತನಕ ಯಾವ ಮುಸ್ಲಿಮನಿಗೂ ಅಮೆರಿಕವನ್ನು ಪ್ರವೇಶಿಸಲು ಅವಕಾಶ ನೀಡಬಾರದು. 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷದ ಉಮೇದುವಾರನಾಗಲು ಟ್ರಂಪ್ ಕಣದಲ್ಲಿದ್ದಾರೆ. ರಿಪಬ್ಲಿಕನ್ ಪಕ್ಷದ ಮೂರನೇ ಎರಡು ಭಾಗದಷ್ಟು ಮತದಾರರು ಟ್ರಂಪ್‌ ಅವರ ನಿಲುವನ್ನು ಒಪ್ಪುವವರಿದ್ದಾರೆ. ಭಾರತದಲ್ಲೂ ಟ್ರಂಪ್‌ ಅವರ ಮಾತುಗಳಿಗೆ ತಲೆದೂಗುವವರು ಸಿಗುತ್ತಾರೆ.

ಟ್ರಂಪ್ ಈ ಮಾತುಗಳನ್ನು ಆಡಲು ಕಾರಣ ಅಮೆರಿಕದ ಸಾನ್ ಬರ್ನಾರ್ಡಿನೊ ಎಂಬ (ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ) ನಗರದಲ್ಲಿ ಪಾಕಿಸ್ತಾನಿ ಮೂಲದ ದಂಪತಿ 14 ಜನರನ್ನು ಹತ್ಯೆ ಮಾಡಿದ್ದು ಮತ್ತು ಕಳೆದ ತಿಂಗಳು ಪ್ಯಾರಿಸ್‌ನಲ್ಲಿ ನಡೆದ ಮಾರಣಹೋಮ.
ನನಗೆ ಅರ್ಥವಾಗದಿರುವ ವಿಚಾರವಿದು.

ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ತೀವ್ರ ಬರದ ಪರಿಸ್ಥಿತಿಯನ್ನು ಕ್ಯಾಲಿಫೋರ್ನಿಯಾ ಅನುಭವಿಸುತ್ತಿದೆ. ಕ್ಯಾಲಿಫೋರ್ನಿಯಾ ಸ್ವತಂತ್ರ ರಾಷ್ಟ್ರವಾಗಿದ್ದರೆ ಜಗತ್ತಿನಲ್ಲಿಯೇ ಎಂಟನೆಯ ಕ್ರಮಾಂಕದಲ್ಲಿರುವ ಮತ್ತು ಭಾರತಕ್ಕಿಂತ ದೊಡ್ಡದಾದ ಅರ್ಥವ್ಯವಸ್ಥೆಯನ್ನು ಹೊಂದಿರುತ್ತಿತ್ತು. ಅಲ್ಲದೆ ಕೃಷಿಯಿಂದ ಮಾಹಿತಿ ತಂತ್ರಜ್ಞಾನದವರಗೆ ನಾವು 20ನೇ  ಶತಮಾನದಲ್ಲಿ ಕಂಡ ಮುಖ್ಯ ನಾವೀನ್ಯಗಳು ಕ್ಯಾಲಿಫೋರ್ನಿಯಾದಲ್ಲಿ ರೂಪುಗೊಂಡವು.

ಅಂತಹ ರಾಜ್ಯದಲ್ಲಿ ಅಲ್ಲಿನ ಬದುಕಿನ ವ್ಯವಸ್ಥೆಯನ್ನೇ ಅಲುಗಾಡಿಸುತ್ತಿರುವ ಬರದ ಬಗ್ಗೆ, ಅದರ ಮೂಲ ಕಾರಣವಾದ ಹವಾಮಾನ ವೈಪರೀತ್ಯಗಳ ಬಗ್ಗೆ ಟ್ರಂಪ್ ಆಗಲಿ ಇಲ್ಲವೇ ಇತರ ರಿಪಬ್ಲಿಕನ್ ಪಕ್ಷದ ರಾಜಕಾರಣಿಗಳಾಗಲಿ ಬಾಯಿ ಬಿಡುವುದಿಲ್ಲ. ಪ್ಯಾರಿಸ್ ನಗರದಲ್ಲಿಯೇ ನಡೆಯುತ್ತಿರುವ ಹವಾಮಾನ ವೈಪರೀತ್ಯ ಕುರಿತಾದ 21ನೇ ಸುತ್ತಿನ ಚರ್ಚೆಗಳಿಗೆ ರಚನಾತ್ಮಕವಾಗಿ ಹೇಳಲು ಅವರಲ್ಲಿ ಏನೂ ಇಲ್ಲ. ಆದರೆ ಒಂದು ಭಯೋತ್ಪಾದಕ ಕೃತ್ಯದ ನಂತರ ಮುಸ್ಲಿಮರನ್ನು ಅಮೆರಿಕದೊಳಗೆಯೇ ಸೇರಿಸಬಾರದು ಎಂದು ವಿಷ ಕಾರುತ್ತಾರೆ. ಅಕಸ್ಮಾತ್ ಯಾವಾಗಲಾದರೂ ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡಿದರೆ, ಇವರು ವಿಜ್ಞಾನವನ್ನೇ ಪ್ರಶ್ನಿಸುತ್ತಾರೆ ಮತ್ತು ಹವಾಮಾನದಲ್ಲಾಗುತ್ತಿರುವ ಬದಲಾವಣೆಗಳು ಮನುಷ್ಯನ ಚಟುವಟಿಕೆಗಳಿಂದ ಆಗುತ್ತಿರುವುದು ಎನ್ನುವುದನ್ನೇ ಒಪ್ಪುವುದಿಲ್ಲ.

ಟ್ರಂಪ್‌ ಅವರಂತಹ ತಿಳಿವಳಿಕೆಯಿಲ್ಲದ ಮನುಷ್ಯರನ್ನು ಟೀಕಿಸುವುದು, ಗೇಲಿ ಮಾಡುವುದು ಸುಲಭ. ಆದರೆ ಇಂದು ಮುಕ್ತಾಯವಾಗಲಿರುವ ಪ್ಯಾರಿಸ್‌ನ ಹವಾಮಾನ ವೈಪರೀತ್ಯ ಶೃಂಗಸಭೆಯ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವ 195  ದೇಶಗಳ ಸಮಾಲೋಚಕರು ಕೂಡ ತಮ್ಮ ಮುಂದಿರುವ ಸವಾಲನ್ನು ಅರಿತವರು, ಜವಾಬ್ದಾರಿಯಿಂದ ನಡೆದುಕೊಳ್ಳುವವರು ಎಂಬ ವಿಶ್ವಾಸವನ್ನು ನಮ್ಮಲ್ಲಿ ಮೂಡಿಸುತ್ತಿಲ್ಲ. ಇವರನ್ನೇನು ಮಾಡುವುದು? ಈ ಸಮಾಲೋಚಕರು ತಮ್ಮ ತಮ್ಮ ದೇಶಗಳ ಸರ್ಕಾರದ ಪ್ರತಿನಿಧಿಗಳು, ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವವರು, ನಿಜ.

ಆದರೆ ಇವರಿಗೆ ಹವಾಮಾನ ವೈಪರೀತ್ಯಗಳು ಮಾನವನ ಚಟುವಟಿಕೆಗಳಿಂದ ಆಗುತ್ತಿರುವುದು ಎನ್ನುವುದು ತಿಳಿದಿದೆ. ಜಗತ್ತಿನ ತಾಪಮಾನವು ಈಗಿನ ಪ್ರಮಾಣದಲ್ಲಿ ಹೆಚ್ಚುವುದು ಮುಂದುವರಿದಲ್ಲಿ ನಮಗೀಗ ರೂಢಿಯಾಗಿರುವ ದೈನಂದಿನ ಬದುಕಿಗೆ ದೊಡ್ಡ ಪ್ರಮಾಣದ ಅಡಚಣೆಗಳಾಗುತ್ತವೆ ಎಂಬುದರ ಬಗ್ಗೆ ಅವರಿಗೆ ಸಂಶಯವಿಲ್ಲ.

ಈ ಬಗೆಯ ಅಡಚಣೆಗಳಿಗೆ ಉದಾಹರಣೆಗಳನ್ನು ಹುಡುಕಲೂ ಹೆಚ್ಚು ಶ್ರಮ ಪಡಬೇಕಿಲ್ಲ. ಈ ವಾರದ ಘಟನೆಗಳನ್ನೇ ಗಮನಿಸಿ. ನೀರಿನಲ್ಲಿ ಮುಳುಗಿದ ಚೆನ್ನೈ. ಕಲ್ಲಿದ್ದಲ ಗಣಿಯಲ್ಲಿ ನಡೆದ ಅನುಭವವನ್ನು ನೀಡುತ್ತಿದ್ದ ಬೀಜಿಂಗ್. ವಾಯುಮಾಲಿನ್ಯವನ್ನು ಹತೋಟಿಗೆ ತರಲು ನಗರದ ಅರ್ಧದಷ್ಟು ಖಾಸಗಿ ವಾಹನಗಳನ್ನು ರಸ್ತೆಗಿಳಿಯಲು ಬಿಡದ ದೆಹಲಿ. ಸ್ವಲ್ಪ ಬೇರೆಯ ರೀತಿಯ, ದೀರ್ಘಕಾಲದ ಪರಿಣಾಮ ತೋರಿಸುವ ಉದಾಹರಣೆಯನ್ನು ಪರಿಗಣಿಸುವುದಾದರೆ, ಈ ವರ್ಷದ ಮಾನ್‍ಸೂನ್‌ನಲ್ಲಾಗಿರುವ ಬದಲಾವಣೆಗಳು ಮತ್ತು ಅದರಿಂದಾಗಿರುವ ನಮ್ಮ ಕೃಷಿ ಕ್ಷೇತ್ರದ ಮೇಲಿನ ಹೊಡೆತವನ್ನು ವಿಚಾರ ಮಾಡಿ. ಭೂಮಿಯ ತಾಪಮಾನ ಹೆಚ್ಚಿದಂತೆ, ಮಾನ್‍ಸೂನ್‌ನ ಪ್ರಮಾಣವನ್ನು ಪ್ರಭಾವಿಸುವ ಪೆಸಿಫಿಕ್ ಸಮುದ್ರದ ವಾತಾವರಣದಲ್ಲಿ ಬದಲಾವಣೆಗಳಾಗುತ್ತವೆ.

ಪೆಸಿಫಿಕ್‌ನ ನೀರಿನ ತಾಪಮಾನ ಹೆಚ್ಚಿದಂತೆ, ಭೂಮಿಯ ಪೂರ್ವ ಹಾಗೂ ಪಶ್ಚಿಮದ ಅಂಚುಗಳಲ್ಲಿರುವ ಭಾರತ ಮತ್ತು ಕ್ಯಾಲಿಫೋರ್ನಿಯಾಗಳಲ್ಲಿ ಬೀಳುವ ಮಳೆ ಹಾಗೂ ಹಿಮಗಳ ಪ್ರಮಾಣದಲ್ಲೂ ಬದಲಾವಣೆಗಳಾಗುತ್ತವೆ. ಎರಡೂ ಕಡೆಗಳಲ್ಲಿ ಕೃಷಿ, ಪಶುಪಾಲನೆ ಮತ್ತು ಉದ್ಯಮಗಳ ಮೇಲೆ ಪರಿಣಾಮವಾಗುತ್ತದೆ. ಅಂದರೆ ಹವಾಮಾನ ವೈಪರೀತ್ಯದ ಪರಿಣಾಮವಾಗಿ ದೈನಂದಿನ ಬದುಕನ್ನು ಅಲ್ಲೋಲ ಕಲ್ಲೋಲ ಮಾಡುವ ಅಲ್ಪಾವಧಿಯ ವಿಪತ್ತುಗಳೂ ಸಂಭವಿಸುತ್ತವೆ.

ಜೊತೆಗೆ ದೈನಂದಿನ ಬದುಕಿನ ಅವಶ್ಯಕತೆಗಳನ್ನು ಪೂರೈಸುವ ನಮ್ಮ ಕೃಷಿ ಮತ್ತು ಉತ್ಪಾದನೆಯ ವ್ಯವಸ್ಥೆಗಳಲ್ಲೂ ಅಡಚಣೆಗಳಾಗುತ್ತವೆ. ಇಂತಹ ಪರಿಣಾಮಗಳ ಜೊತೆಗೆ ದೀರ್ಘಾವಧಿಯಲ್ಲಿ ಭೂಮಿಯ ವಿವಿಧೆಡೆಗಳಲ್ಲಿ ಮಂಜುಗಡ್ಡೆ ಕರಗಿ, ನೀರಿನ ಪ್ರಮಾಣ ಹೆಚ್ಚಾದಂತೆ ಸಮುದ್ರತೀರದ ಹಲವಾರು ಪ್ರದೇಶಗಳು ಮತ್ತು ದ್ವೀಪಗಳು ಮುಳುಗುವ  ದೊಡ್ಡ ಅಪಾಯವೂ ಸಂಭವಿಸುತ್ತದೆ. ಇದನ್ನೆಲ್ಲ ಅರಿತಿರುವ ಪ್ಯಾರಿಸ್ ಶೃಂಗಸಭೆಯ ಸಮಾಲೋಚಕರು ಏನು ಸಾಧಿಸುವ ನಿರೀಕ್ಷೆಯಿದೆ?

ಹವಾಮಾನ ವೈಪರೀತ್ಯಗಳ ಬಗೆಗಿನ ಚರ್ಚೆ 1992ರಲ್ಲಿ ರಿಯೊ ಡಿ ಜನೈರೊನಲ್ಲಿ ನಡೆದ ಅರ್ಥ್ ಸಮ್ಮಿಟ್‌ನಲ್ಲಿ (ಭೂಮಿ ಶೃಂಗಸಭೆ) ಪ್ರಾರಂಭವಾಯಿತು ಎನ್ನುವುದನ್ನು ನೆನಪಿಸಿಕೊಳ್ಳಿ. ಹಸಿರುಮನೆ (ಗ್ರೀನ್‌ಹೌಸ್‌್) ಅನಿಲಗಳ ಹೊರಸೂಸುವಿಕೆಯನ್ನು ತಡೆಯಲು ಚೌಕಟ್ಟನ್ನು ರೂಪಿಸುವ ಪ್ರಯತ್ನವೂ ಆಗಲೇ ಶುರುವಾಯಿತು. ಪ್ರಾರಂಭದ ನಿಯಮಗಳು ಸಾಲದು ಎಂದು ಹೆಚ್ಚು ಕಠಿಣವಾದ ನಿಯಮಗಳನ್ನು 1997ರಲ್ಲಿ ಕ್ಯೋಟೊದಲ್ಲಿ ರಚಿಸಲಾಯಿತು.

ಹೆಚ್ಚಿನ ಪ್ರಮಾಣದಲ್ಲಿ ಹಸಿರುಮನೆ ಅನಿಲಗಳನ್ನು ಹೊರಸೂಸುತ್ತಿದ್ದ, ಅಭಿವೃದ್ಧಿ ಹೊಂದಿರುವ ದೇಶಗಳಿಗೆ ಅವುಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಹೊಸ ಗುರಿಗಳನ್ನು ನೀಡಲಾಯಿತು. ಜೊತೆಗೆ ಇವುಗಳ ಅನುಷ್ಠಾನ ಕಡ್ಡಾಯವೆಂದು ಅಂತರ ರಾಷ್ಟ್ರೀಯ ಕಾನೂನಿನಡಿಯಲ್ಲಿ ಅವಕಾಶ ಮಾಡಲಾಯಿತು. ಆದರೆ ಅಮೆರಿಕ ಕ್ಯೋಟೊ ಒಪ್ಪಂದವನ್ನು ಅಂಗೀಕರಿಸಲಿಲ್ಲ. ತನ್ನ ನಾಗರಿಕರ ಮೇಲೆ ಹೆಚ್ಚಿನ ಹೊರೆ ಹಾಕಲು ತಾನು ಸಿದ್ಧವಿಲ್ಲ ಎಂದು ಘೋಷಿಸಿ ಕೆನಡಾ 2012ರಲ್ಲಿ ಹೊರಬಂದಿತು. ಕಳೆದ ದಶಕದಲ್ಲಿ ನಡೆದ ಹಲವಾರು ಸುತ್ತಿನ ಚರ್ಚೆಗಳಲ್ಲಿ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ. ಆದರೆ ಈ ನಡುವೆ ಚೀನಾ ಮತ್ತು ಭಾರತಗಳು ಹಸಿರುಮನೆ ಅನಿಲಗಳ ಹೊರಸೂಸುವ ಪ್ರಮುಖ ರಾಷ್ಟ್ರಗಳ ಪಟ್ಟಿಯನ್ನು ಸೇರಿವೆ.

ಇಂದು ನಾವು ಕ್ರಿಯಾಶೀಲರಾಗಲೇಬೇಕು ಎಂಬ ಅರಿವಿದ್ದ ಕಾರಣದಿಂದ ಪ್ಯಾರಿಸ್ ಶೃಂಗಸಭೆಯಿಂದ ಕೆಲವು ನಿರೀಕ್ಷೆಗಳಿದ್ದವು. ಇದಕ್ಕೆ ಕಾರಣ ಚೀನಾ ಸಹ ತನ್ನ ಹೊರಸೂಸುವಿಕೆಯ ಪ್ರಮಾಣವನ್ನು ಕಡಿಮೆ ಮಾಡಲು ಶೃಂಗಸಭೆಗೆ ಮೊದಲೇ ಒಪ್ಪಿಗೆ ನೀಡಿತ್ತು. ಆದರೆ ಪ್ಯಾರಿಸ್‌ನಲ್ಲಿ ಚರ್ಚೆಯಾಗಬೇಕಿದ್ದ ನಿರ್ಣಾಯಕ ವಿಷಯಗಳ ಬಗ್ಗೆ ಹೆಚ್ಚಿನ ಪ್ರಗತಿಯಾಗಿಲ್ಲ. ತಾಪಮಾನ ಹೆಚ್ಚಳ 2 ಡಿಗ್ರಿ ಹೆಚ್ಚಬೇಕೊ ಇಲ್ಲವೇ 1.5 ಡಿಗ್ರಿಯೋ ಹಾಗೂ ಈ ಹೆಚ್ಚಳವನ್ನು ಯಾವ ಕಾಲಘಟ್ಟದಿಂದ (ಕೈಗಾರಿಕಾ ಕ್ರಾಂತಿಗೆ ಮೊದಲಿನ ಅಥವಾ ಇತ್ತೀಚಿನ ದಿನಗಳ ತಾಪಮಾನ) ಅಳೆಯಬೇಕು ಎಂಬುದರ ಬಗ್ಗೆ ಒಮ್ಮತ ಮೂಡಿಲ್ಲ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳೂ ತಮ್ಮ ಹೊರಸೂಸುವಿಕೆಯ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಈಗ ವಾದಿಸುತ್ತಿರುವ ಪಶ್ಚಿಮದ ಮುಂದುವರಿದ ದೇಶಗಳು ತಮ್ಮ ಮೇಲೆ ಹೆಚ್ಚಿನ ಮಿತಿಗಳನ್ನು ಹಾಕಿಕೊಳ್ಳಲು ಉತ್ಸುಕವಾಗಿಲ್ಲ. ಐತಿಹಾಸಿಕವಾಗಿ ಭೂಮಿಯ ತಾಪಮಾನ ಹೆಚ್ಚಲು ಕಾರಣವಾಗಿರುವ ಈ ದೇಶಗಳು ಅದನ್ನು ಸರಿಪಡಿಸಲು ತಾವು ಒದಗಿಸಬೇಕಿರುವ ಧನಸಹಾಯವನ್ನು ನೀಡಲು ಹಿಂಜರಿಯುತ್ತಿವೆ. ಕೊಡಲೊಪ್ಪಿದ್ದ ಹಣವನ್ನೂ ನೀಡುತ್ತಿಲ್ಲ.

ಹಸಿರು ತಂತ್ರಜ್ಞಾನಗಳ ವರ್ಗಾವಣೆ ಮಾಡುವಾಗ, ತಮಗೆ ಲಾಭವಾಗಬೇಕು ಎಂದೂ ನಿರೀಕ್ಷಿಸುತ್ತಾರೆ. ಪಶ್ಚಿಮದ ದೇಶಗಳ ಜೀವನಮಟ್ಟದಲ್ಲಿ ಹೆಚ್ಚಿನ ವ್ಯತ್ಯಾಸವಾಗಬಾರದು ಮತ್ತು ಅಲ್ಲಿನ ಪ್ರಜೆಗಳ ಮೇಲೆ ತೆರಿಗೆಯ ಇಲ್ಲವೇ ಬೆಲೆ ಹೆಚ್ಚಳದ ಹೊರೆಯಾಗಬಾರದು ಎಂಬ ಅಪೇಕ್ಷೆಯೂ ಇದೆ. ಇದಕ್ಕೆ ಪ್ರತಿಯಾಗಿ ತಮ್ಮ ಪ್ರಜೆಗಳಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಹೆಣಗುತ್ತಿರುವ ಅಭಿವೃದ್ಧಿಶೀಲ ದೇಶಗಳು ತಾವು ಕಲ್ಲಿದ್ದಲು ಮತ್ತಿತರ ಇಂಧನಗಳ ಬಳಕೆಯನ್ನು ಮಿತಿಗೊಳಿಸಲು ಸಿದ್ಧವಿಲ್ಲ. ಈ ಗುಂಪಿನಲ್ಲಿ ಕಲ್ಲಿದ್ದಲಿನ ಬಳಕೆಯನ್ನು ತ್ವರಿತವಾಗಿ ಹೆಚ್ಚಿಸಿಕೊಳ್ಳುತ್ತಿರುವ ಭಾರತವೂ ಸೇರಿದೆ. ಹಾಗಾಗಿ ಪ್ಯಾರಿಸ್‌ನಲ್ಲಿ ಪರಿಹಾರ ಕಂಡುಕೊಳ್ಳಬೇಕಿದ್ದ ವೈರುಧ್ಯಗಳು ಬಹುಶಃ ಬಗೆಹರಿಸಲಾರದಂತಹವು.

ಅಪಾಯ ಗಂಭೀರ, ಪರಿಣಾಮಗಳು ಘನಘೋರವೆಂದು ಅರಿತಾಗ ಏನಾದರೂ ಪರಿಹಾರ ದೊರಕಬಹುದೇನೊ ಎಂದು ಆಶಿಸಿದ್ದವರಿಗೆ ಪ್ಯಾರಿಸ್ ಕೆಲವು ಪಾಠಗಳನ್ನೂ ಒದಗಿಸುತ್ತಿದೆ. ಬುಧವಾರ ಬಿಡುಗಡೆಯಾದ ಕರಡು ಹೇಳಿಕೆಯಲ್ಲಿ ಎಲ್ಲ ದೇಶಗಳ ಮೇಲೂ ಪ್ರತ್ಯೇಕಗೊಳಿಸಿದ ಜವಾಬ್ದಾರಿಯನ್ನು ಹಾಕಿ, ತಮ್ಮ ಸಾಮರ್ಥ್ಯ ಮತ್ತು ಸಂದರ್ಭಕ್ಕನುಗುಣವಾಗಿ ಕ್ರಮ ತೆಗೆದುಕೊಳ್ಳಲು ಒಪ್ಪಲಾಗಿದೆ. ಆದರೆ ಏನನ್ನು ಸಾಧಿಸಬೇಕು, ಹಣಕಾಸಿನ ಕೊಡುಗೆ ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ಸಿಗಬೇಕಾದ ಪರಿಹಾರದ ಪ್ರಶ್ನೆ ಇತ್ಯಾದಿಗಳ ವಿಚಾರದಲ್ಲಿ ನಿರ್ದಿಷ್ಟ ಗುರಿಗಳ ಕುರಿತಾಗಿ ಸಂಧಾನ ಮುಂದುವರಿದಿದೆ. ಹೆಚ್ಚಿನ ಆಶಾವಾದವನ್ನು ಇರಿಸಿಕೊಳ್ಳಲು ಕಾರಣಗಳಿಲ್ಲ.

ಇಂದಿನ ತುರ್ತು ಭಿನ್ನವಾದುದು. ಸರಳವಾಗಿ ಹೇಳುವುದಾದರೆ ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ಇನ್ನು ಮುಂದೆ ತೇಪೆ ಹಾಕುವ ಕೆಲಸ ಸಾಲುವುದಿಲ್ಲ. ಕೋಟ್ಯಂತರ ಬದುಕುಗಳನ್ನು ಜಗತ್ತಿನೆಲ್ಲೆಡೆ ಬದಲಿಸುವ ಶಕ್ತಿಯುಳ್ಳ ಈ ಸಮಸ್ಯೆ ಅತ್ಯಂತ ಗಂಭೀರವಾದುದು ಎಂದಾದರೆ ನಾವಿಂದು ಆಧುನಿಕ ಬದುಕಿನ ಕ್ರಮವನ್ನೇ ಮರುಚಿಂತಿಸಬೇಕಾಗಿರುವ ಅನಿವಾರ್ಯತೆಯಿದೆ.

ಪ್ಯಾರಿಸ್‌ನಲ್ಲಿ ಇದಾಗಬೇಕಿತ್ತು ಆದರೆ ಆಗಲಿಲ್ಲ ಎಂಬುದಂತೂ ಸುಸ್ಪಷ್ಟ. ಪಶ್ಚಿಮದ ರಾಷ್ಟ್ರಗಳು ತಮ್ಮ ಜೀವನಮಟ್ಟ ಕಡಿಮೆಯಾಗಬಾರದೆಂದರೆ, ಚೀನಾ, ಭಾರತ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಪಶ್ಚಿಮದ ಜೀವನಮಟ್ಟ ಮತ್ತು ಶೈಲಿ ತಮಗೆ ಆದರ್ಶವೆಂದು ಒಪ್ಪಿಯಾಗಿದೆ. ಇಂಗಾಲದ ಇಂಧನಗಳ ಬಳಕೆಯಿಲ್ಲದೆ ಅಭಿವೃದ್ಧಿ ಸಾಧಿಸುವ ಮಾರ್ಗಗಳು ನಮಗಿಂದು ಇನ್ನೂ ಗೊತ್ತಿಲ್ಲ. ಹಾಗಾಗಿ ತಾಪಮಾನ ಹೆಚ್ಚಳ ಮತ್ತು ಹವಾಮಾನ ವೈಪರೀತ್ಯಗಳ ಸವಾಲನ್ನು, ನಾಗರಿಕತೆಯ ಆದ್ಯತೆಗಳನ್ನು ಮರುಚಿಂತಿಸದೆ, ಕೇವಲ ತಂತ್ರಜ್ಞಾನಗಳ ಮೂಲಕವೇ ಪರಿಹರಿಸಬಹುದು ಎಂಬ ಭರವಸೆಯಿಲ್ಲ.

Comments
ಈ ವಿಭಾಗದಿಂದ ಇನ್ನಷ್ಟು
ಸಂವಿಧಾನದ ಕೇಂದ್ರದಲ್ಲಿರುವುದು ವ್ಯಕ್ತಿ ಸ್ವಾತಂತ್ರ್ಯ

ನಿಜದನಿ
ಸಂವಿಧಾನದ ಕೇಂದ್ರದಲ್ಲಿರುವುದು ವ್ಯಕ್ತಿ ಸ್ವಾತಂತ್ರ್ಯ

26 Jan, 2018

ನಿಜದನಿ
ಮಹಾರರು ಎದುರಿಸುವ ಪರೀಕ್ಷೆ ರಾಜ ಮನೆತನಗಳಿಗಿಲ್ಲ

ರಾಷ್ಟ್ರಪ್ರೇಮವನ್ನು ‘ದುರ್ಜನರು ಕಡೆಯಲ್ಲಿ ಆಶ್ರಯಿಸುವ ವಿದ್ಯಮಾನ’ ಎನ್ನುತ್ತಾನೆ ಸ್ಯಾಮ್ಯುಯೆಲ್ ಜಾನ್ಸನ್. ನಾವು ಆ ಅತಿಗೆ ಹೋಗಬೇಕಿಲ್ಲ....

12 Jan, 2018
ಹೆಗಡೆ ಮಾತುಗಳು ಮನದಾಳದ ಅಭಿವ್ಯಕ್ತಿ

ನಿಜದನಿ
ಹೆಗಡೆ ಮಾತುಗಳು ಮನದಾಳದ ಅಭಿವ್ಯಕ್ತಿ

29 Dec, 2017
ಬಹು ಸಾಂಸ್ಕೃತಿಕತೆ ಮತ್ತು ಹಿಂದೂ ರಾಷ್ಟ್ರೀಯವಾದ

ನಿಜದನಿ
ಬಹು ಸಾಂಸ್ಕೃತಿಕತೆ ಮತ್ತು ಹಿಂದೂ ರಾಷ್ಟ್ರೀಯವಾದ

15 Dec, 2017
ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ನಿಲುವು: ತಪ್ಪೇನಿದೆ?

ನಿಜದನಿ
ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ನಿಲುವು: ತಪ್ಪೇನಿದೆ?

30 Nov, 2017