ರಾಜಕೀಯ ಪಾಲ್ಗೊಳ್ಳುವಿಕೆ ಅವಕಾಶಕ್ಕೆ ಕತ್ತರಿ

ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಿದ್ಯಾರ್ಹತೆ ಹೊಂದಿರಬೇಕು ಎಂಬ ಬಗ್ಗೆ ಹರಿಯಾಣ ಸರ್ಕಾರ ತಂದಿರುವ ಕಾನೂನು ತಿದ್ದುಪಡಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇದರಿಂದ ಚುನಾವಣೆಗೆ ಸ್ಪರ್ಧಿಸುವುದು ಮೂಲಭೂತ ಹಕ್ಕಾಗುವುದಿಲ್ಲ. ಎಲ್ಲರಿಗೂ ಸಮಾನವಾಗಿ ಇರುವ ಹಕ್ಕೂ ಆಗುವುದಿಲ್ಲ. ಮೂಲಭೂತ ಹಕ್ಕುಗಳಿಗೆ ಹೊಡೆತ ನೀಡುವಂತಹ ಇಂತಹದೊಂದು ಸುಪ್ರೀಂಕೋರ್ಟ್ ತೀರ್ಪು ಮಾನವ ಹಕ್ಕುಗಳ ದಿನದಂದು (ಡಿಸೆಂಬರ್ 10) ಹೊರಬಿದ್ದಿರುವುದು ವಿಪರ್ಯಾಸ.

ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಿದ್ಯಾರ್ಹತೆ ಹೊಂದಿರಬೇಕು ಎಂಬ ಬಗ್ಗೆ ಹರಿಯಾಣ ಸರ್ಕಾರ ತಂದಿರುವ ಕಾನೂನು ತಿದ್ದುಪಡಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇದರಿಂದ ಚುನಾವಣೆಗೆ ಸ್ಪರ್ಧಿಸುವುದು ಮೂಲಭೂತ ಹಕ್ಕಾಗುವುದಿಲ್ಲ. ಎಲ್ಲರಿಗೂ ಸಮಾನವಾಗಿ ಇರುವ ಹಕ್ಕೂ ಆಗುವುದಿಲ್ಲ. ಕನಿಷ್ಠ ವಿದ್ಯಾರ್ಹತೆ ಇದ್ದರೆ ಮಾತ್ರ ಸ್ಪರ್ಧಿಸಬಹುದಾದಂತಹ ಶಾಸನಬದ್ಧ ಹಕ್ಕಾಗುತ್ತದೆ. ಇದರಿಂದ ಜನಸಂಖ್ಯೆಯ ಬಹಳಷ್ಟು ಮಂದಿ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗುತ್ತಾರೆ. ಆದರೆ ಇಂತಹದೊಂದು ಮಾನದಂಡ ಸಂಸತ್ ಹಾಗೂ ವಿಧಾನಸಭೆ ಸದಸ್ಯರಿಗೆ ನಿಗದಿಯಾಗಿಲ್ಲ ಎಂಬುದನ್ನು ಗಮನಿಸಬೇಕು. ಹೀಗಾಗಿ ಪಂಚಾಯಿತಿ ಚುನಾವಣೆಗಳಿಗೆ ಈ ಹೊಸ ಮಾನದಂಡ ನಿಗದಿಪಡಿಸಿರುವುದು ಏಕೆ ಎಂಬ ಬಗ್ಗೆ ಹಲವಾರು ಪ್ರಶ್ನೆಗಳೇಳುವುದು ಸಹಜ.

ಮೂಲಭೂತ ಹಕ್ಕುಗಳಿಗೆ ಹೊಡೆತ ನೀಡುವಂತಹ ಇಂತಹದೊಂದು ಸುಪ್ರೀಂಕೋರ್ಟ್ ತೀರ್ಪು ಮಾನವ ಹಕ್ಕುಗಳ ದಿನದಂದು (ಡಿಸೆಂಬರ್ 10) ಹೊರಬಿದ್ದಿರುವುದು ವಿಪರ್ಯಾಸ. ಹರಿಯಾಣ ಪಂಚಾಯತ್‌ ರಾಜ್ (ತಿದ್ದುಪಡಿ) ಕಾಯಿದೆ ಅನ್ವಯ, ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಮಾನ್ಯ ವರ್ಗದ ಅಭ್ಯರ್ಥಿ 10ನೇ ತರಗತಿ ತೇರ್ಗಡೆಯಾಗಿರಬೇಕು. ಮಹಿಳಾ ಅಭ್ಯರ್ಥಿ 8ನೇ ತರಗತಿ ಹಾಗೂ ದಲಿತ ಅಭ್ಯರ್ಥಿ 5ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕಾದುದು ಇನ್ನು ಮುಂದೆ ಕಡ್ಡಾಯವಾಗಲಿದೆ.

ಸಮಾನತೆಯ ಹಕ್ಕಿಗೆ ಬಿದ್ದ ಹೊಡೆತ ಇದು. ಇದರಿಂದ  ಕನಿಷ್ಠ ಶೇ 70ರಷ್ಟು ಮಂದಿ ಅಭ್ಯರ್ಥಿಗಳಾಗಬಹುದಾದವರು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿನಿಂದ ವಂಚಿತರಾಗುತ್ತಾರೆ. ಹರಿಯಾಣದ ಗ್ರಾಮೀಣ ಬಡಜನರು, ಮಹಿಳೆಯರು, ದಲಿತರು ರಾಜಕೀಯವಾಗಿ ಸಶಕ್ತರಾಗಬಹುದಾದ ಅವಕಾಶಗಳಿಗೆ ತೆರೆಬೀಳುತ್ತದೆ ಎಂಬುದು ದುರದೃಷ್ಟಕರ. ಇಂತಹ ಷರತ್ತು ವಿಧಿಸುವುದರಿಂದ ಶಿಕ್ಷಣದ ಮಹತ್ವವನ್ನು ಹರಡಿದಂತಾಗುತ್ತದೆ ಎಂಬುದು ಹರಿಯಾಣ ಸರ್ಕಾರದ ಸಮರ್ಥನೆ.

ರಾಜಕೀಯ ಆಡಳಿತ ವ್ಯವಸ್ಥೆಯಲ್ಲಿ ವಿದ್ಯಾವಂತರು ಇರಬೇಕು ಎಂಬಂತಹ ಅಪೇಕ್ಷೆಯಲ್ಲಿ ತಪ್ಪೇನೂ ಇಲ್ಲ. ಆದರೆ ಭಾರತದ ವಾಸ್ತವ ಸ್ಥಿತಿಗತಿಯನ್ನು ಹೇಗೆ ಕಡೆಗಣಿಸುತ್ತೀರಿ? ಪ್ರಾಥಮಿಕ ಶಿಕ್ಷಣ ಸೌಲಭ್ಯ ಅಥವಾ ಗುಣಮಟ್ಟದ ಶಿಕ್ಷಣ ಎಲ್ಲರನ್ನೂ ತಲುಪದಂತಹ ಸಾಮಾಜಿಕ ವ್ಯವಸ್ಥೆ ನಮ್ಮದು. ಬಡ, ಶ್ರೀಮಂತ, ನಗರ, ಗ್ರಾಮ ಎಂಬಂತಹ ಭೇದಭಾವಗಳು ಬೇರೆ ಇವೆ. 2011ರ ಜನಗಣತಿಯ ಪ್ರಕಾರ ಹರಿಯಾಣದಲ್ಲಿ ಸಾಕ್ಷರತೆ ಪ್ರಮಾಣ ಶೇ 76ರಷ್ಟಿದೆ. ದಲಿತರ ಸಾಕ್ಷರತೆ ಪ್ರಮಾಣ ಇನ್ನೂ ಕಡಿಮೆ, ಶೇ 65ರಷ್ಟಿದೆ ಅಷ್ಟೆ ಎಂಬುದು ಕಹಿ ವಾಸ್ತವ.

ಗ್ರಾಮೀಣ ಬಡಜನರನ್ನು ರಾಜಕೀಯ ಪ್ರಕ್ರಿಯೆಯಿಂದ ಹೊರಗಿರಿಸಲು ಕಾರಣವಾಗಬಹುದಾದ ಈ ತೀರ್ಪು ಪ್ರಜಾಸತ್ತೆಯ ಆಶಯಗಳಿಗೆ ವಿರೋಧವಾದುದು. ಆದರೆ, ನಾಗರಿಕರ ಸಾಮಾಜಿಕ ಹಾಗೂ ಆರ್ಥಿಕ ಹಕ್ಕುಗಳನ್ನು ಸಮಾಜದಲ್ಲಿ ಬೇರೂರಿಸುವ ಹಾಗೂ ವಿಸ್ತರಿಸುವಂತಹ ಕಾರ್ಯಚಟುವಟಿಕೆಗಳಿಗೆ ಸುಪ್ರೀಂಕೋರ್ಟ್‌ನ ಅನೇಕ ತೀರ್ಪುಗಳು ಕಾರಣವಾಗಿವೆ ಎಂಬುದನ್ನು ಇದೇ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕು. ಹೀಗಿದ್ದೂ, ಸದ್ಯದ ತೀರ್ಪು, ಜನರ ರಾಜಕೀಯ ಭಾಗವಹಿಸುವಿಕೆಯ ಅವಕಾಶವನ್ನು ಸೀಮಿತಗೊಳಿಸುವಂತಾಗಿರುವುದು ದುರದೃಷ್ಟಕರ.

ಎಲ್ಲರನ್ನೂ ಒಳಗೊಳ್ಳುವಂತಹ ಸಮಾಜದ ನಿರ್ಮಾಣ ಪ್ರಜಾಪ್ರಭುತ್ವ ಹೊಂದಿರುವಂತಹ ಆದರ್ಶ. ಸಾರ್ವತ್ರಿಕ ಮತದಾನದ ಹಕ್ಕು ನೀಡಿದ ಸಂದರ್ಭದಲ್ಲಿ, ಅನಕ್ಷರಸ್ಥ ಮತದಾರರಿಂದ ಶಾಸನಸಭೆಗಳ ಗುಣಮಟ್ಟ ಕಡಿಮೆಯಾಗಬಹುದೆಂಬ ಭೀತಿ ವ್ಯಕ್ತವಾಗಿದ್ದೂ ಉಂಟು. ಆದರೆ ನಮ್ಮ ಸಂವಿಧಾನ ನಿರ್ಮಾತೃಗಳು ಜನರ ಬಗ್ಗೆ ನಂಬಿಕೆ ಇರಿಸಿದ್ದರು.

ಕಾನೂನು ವ್ಯವಸ್ಥೆಯನ್ನು ಎತ್ತಿ ಹಿಡಿಯುವುದಕ್ಕೆ, ಪ್ರತಿ ವ್ಯಕ್ತಿಯ ಹಾಗೂ ಎಲ್ಲಾ ಧರ್ಮ, ವರ್ಗಗಳ ಜನರ ಹಕ್ಕುಗಳನ್ನು ರಕ್ಷಿಸಲು ಸುಪ್ರೀಂಕೋರ್ಟ್ ಬದ್ಧವಾಗಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಕೆಲ ದಿನಗಳಲ್ಲೇ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಹೇಳಿದ್ದರು. ಆದರೆ ಅವರು ಈ ಮಾತುಗಳನ್ನಾಡಿದ ಕೆಲವೇ ದಿನಗಳಲ್ಲಿ ಎಲ್ಲಾ ವರ್ಗಗಳ ಜನರ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗುವಂತಹ ತೀರ್ಪು ಸುಪ್ರೀಂ ಕೋರ್ಟ್‌ನಿಂದ ಹೊರಬಿದ್ದಿದೆ.

ಈ ಹಿಂದೆಯೂ ಸರಪಂಚ್ ಹುದ್ದೆಗೆ 2 ಮಕ್ಕಳ ನಿಯಮವನ್ನು ಹರಿಯಾಣ ಪಂಚಾಯತ್‌ ಕಾಯಿದೆಯಲ್ಲಿ ಕಡ್ಡಾಯ ಮಾಡಿದ್ದನ್ನೂ ಸುಪ್ರೀಂ ಕೋರ್ಟ್ ಊರ್ಜಿತಗೊಳಿಸಿತ್ತು. ಆದರೆ ಈ ಬಗೆಯ ನಿರ್ಬಂಧಗಳು, ರಾಜಕೀಯ ಭಾಗವಹಿಸುವಿಕೆಯ ಅವಕಾಶಗಳನ್ನು ಸಮಾಜದಲ್ಲಿನ ದುರ್ಬಲ ವರ್ಗಗಳಿಗೆ ಮೊಟಕು ಮಾಡಿದಂತಾಗುತ್ತದೆ. ಸ್ಪರ್ಧಿಸುವ ಹಕ್ಕಿಗೆ ನಿರ್ಬಂಧ ಹೇರುವುದಕ್ಕಿಂತ ಸುಶಿಕ್ಷಿತ ಅಥವಾ ಅಶಿಕ್ಷಿತ ಅಭ್ಯರ್ಥಿಗಳ ಗೆಲ್ಲುವಿಕೆಯ ಸಾಧ್ಯತೆಯನ್ನು ನಿರ್ಧರಿಸುವ ಹಕ್ಕನ್ನು ಮತದಾರರಿಗೇ ಬಿಟ್ಟಿದ್ದರೆ ಒಳ್ಳೆಯದಿತ್ತು.

Comments