‘ನ್ಯಾಷನಲ್‌ ಹೆರಾಲ್ಡ್‌’: ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರ ಗದ್ದಲ

ನಾಲ್ಕನೇ ದಿನವೂ ಕಲಾಪ ಬಲಿ

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸಮನ್ಸ್‌ ನೀಡಿರುವುದರ ವಿರುದ್ಧ ತಮ್ಮ ಆಕ್ರೋಶ ಮುಂದುವರಿಸಿದ ಕಾಂಗ್ರೆಸ್‌ ಸಂಸದರು, ಸತತ ನಾಲ್ಕನೇ ದಿನವೂ ರಾಜ್ಯಸಭೆಯ ಕಲಾಪಕ್ಕೆ ಅಡ್ಡಿಯುಂಟು ಮಾಡಿದರು.

ನವದೆಹಲಿ (ಪಿಟಿಐ): ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸಮನ್ಸ್‌ ನೀಡಿರುವುದರ ವಿರುದ್ಧ ತಮ್ಮ ಆಕ್ರೋಶ ಮುಂದುವರಿಸಿದ ಕಾಂಗ್ರೆಸ್‌ ಸಂಸದರು, ಸತತ ನಾಲ್ಕನೇ ದಿನವೂ ರಾಜ್ಯಸಭೆಯ ಕಲಾಪಕ್ಕೆ ಅಡ್ಡಿಯುಂಟು ಮಾಡಿದರು.

ಶುಕ್ರವಾರದ ಕಲಾಪ ಪ್ರಾರಂಭದಲ್ಲಿ ಸಭಾಪತಿ ಹಮೀದ್‌ ಅನ್ಸಾರಿ ಅವರು, ಸಂಸತ್‌ ಭವನದ ಮೇಲೆ ನಡೆದ ಉಗ್ರರ ದಾಳಿಯ 14ನೇ ವರ್ಷಾಚರಣೆ ಕುರಿತು ಉಲ್ಲೇಖಿಸಿದರು. ಮರುಕ್ಷಣದಿಂದಲೇ ಕಾಂಗ್ರೆಸ್ ಸದಸ್ಯರು ಗದ್ದಲ ಶುರು ಮಾಡಿದ್ದರಿಂದ ಕಲಾಪವನ್ನು ಪದೇ ಪದೇ ಮುಂದೂಡಲಾಯಿತು.

ಈ ಸಂದರ್ಭದಲ್ಲಿ ಸದನದ ಬಾವಿಗಿಳಿದ ಕಾಂಗ್ರೆಸ್‌ನ ಕೆಲ ಸದಸ್ಯರು  ‘ಮೋದಿ ಸರ್ವಾಧಿಕಾರವನ್ನು ಸಹಿಸುವುದಿಲ್ಲ’, ‘ಹಿಟ್ಲರ್‌ನಂತಹ ಮನೋಭಾವವನ್ನು ಸಹಿಸುವುದಿಲ್ಲ’ ಎಂಬ ಘೋಷಣೆಗಳನ್ನು ಕೂಗಿದರು.

ಸದಸ್ಯರ ಗದ್ದಲದಿಂದಾಗಿ ಉಪಸಭಾಪತಿ ಕುರಿಯನ್ ಅವರು ಸದನವನ್ನು 11.30ರವರೆಗೆ ಮುಂದೂಡಿದರು. ನಂತರವೂ ಪ್ರತಿಭಟನೆ ಮುಂದುವರಿದಾಗ 12 ಗಂಟೆಗೆ ಮುಂದೂಡಲಾಯಿತು. ಬಳಿಕವೂ ಸನ್ನಿವೇಶ ಬದಲಾಗಲಿಲ್ಲ. ಕಾಂಗ್ರೆಸ್‌ ಸದಸ್ಯರು ‘ಹಲ್ಲಾ ಬೋಲ್‌’ (ನಿಮ್ಮ ಧ್ವನಿ ಎತ್ತಿ) ಎಂದು ಘೋಷಣೆ ಕೂಗಿದರು.

ಪ್ರತಿಭಟನೆಯಿಂದಾಗಿ ಕಾಂಗ್ರೆಸ್‌ ಸಂಸದ ಭಾಸ್ಕರ್ ರಪೊಲು ಅವರು, ಇಂಧನ ಕುರಿತ ಸಂಸದೀಯ ಸ್ಥಾಯಿ ಸಮಿತಿ ವರದಿಯನ್ನು ಪ್ರಸ್ತುತಪಡಿಸಲು ಅವಕಾಶ ನೀಡಲಿಲ್ಲ. ಸದನದ ಬಾವಿಯೊಳಗೆ ಇಳಿದಿದ್ದ ರಪೊಲು ತಮ್ಮ ಸ್ಥಾನಕ್ಕೆ ಮರಳಲು ಒಪ್ಪಲಿಲ್ಲ.

‘ಹೋಗಿ ನಿಮ್ಮ ವರದಿಯನ್ನು ಓದಿ. ಅದು ನಿಮ್ಮ ಕರ್ತವ್ಯ. ನೀವು ಏಕೆ ಅದನ್ನು ಪಾಲಿಸುತ್ತಿಲ್ಲ?’ ಎಂದು ಉಪ ಸಭಾಪತಿ ಪಿ.ಜೆ. ಕುರಿಯನ್‌ ಅವರು ರಪೊಲು ಅವರಿಗೆ ಸೂಚಿಸಿದರು. ಅದಕ್ಕೆ ರಪೊಲು ಕಿವಿಗೊಡಲಿಲ್ಲ.

ಈ ಗದ್ದಲದ ನಡುವೆಯೇ ಮೇಲ್ಮನೆ ಆಯ್ಕೆ ಸಮಿತಿಯ ಭ್ರಷ್ಟಾಚಾರ ತಡೆ ಮಸೂದೆ 2013ಗೆ (ತಿದ್ದುಪತಿ) ಅನುಮೋದನೆ ನೀಡಲಾಯಿತು.

ಕಾಂಗ್ರೆಸ್‌ ಸದಸ್ಯರ ಪ್ರತಿಭಟನೆ ಮಧ್ಯೆ ತೃಣಮೂಲ ಕಾಂಗ್ರೆಸ್‌ನ ಸುಖೇಂದು ಶೇಖರ್‌ ರಾಯ್‌, ಸಿಪಿಎಂನ ತಪನ್ ಕುಮಾರ್‌ ಸೆನ್ ಮತ್ತು ಕೆ.ಕೆ. ರಾಗೇಶ್‌ ಅವರು ಅಸಹಿಷ್ಣುತೆಯ ಕುರಿತ ಘಟನೆಗಳು, ಚಹಾ ತೋಟದ ಕಾರ್ಮಿಕರ ಬೇಡಿಕೆಗಳು ಮತ್ತು ಕೇರಳದ ರಬ್ಬರ್‌ ಕೃಷಿಕರಿಗೆ ವಿಶೇಷ ನೆರವು ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷ ಉಲ್ಲೇಖ ಮಾಡಿದರು. ಈ ಮಧ್ಯೆ, ‘ಊಳಿಡಬೇಡಿ’ ಎಂದು ಸದಸ್ಯರಿಗೆ ಮನವಿ ಮಾಡಿದ ಕುರಿಯನ್, ಊಳಿಡುವುದು ಮನುಷ್ಯರ ಸ್ವಭಾವವಲ್ಲ ಎಂದರು.

ಪ್ರಶ್ನೋತ್ತರ ವೇಳೆಗೆ ಸದನಕ್ಕೆ ಮರಳಿದ ಸಭಾಪತಿ ಹಮೀದ್‌ ಅನ್ಸಾರಿ ಅವರು, ‘ನೀವು ಇದುವರೆಗೆ ಮಾಡಿರುವುದು ಸಾಕು. ದಯವಿಟ್ಟು ಪ್ರಶ್ನೋತ್ತರ ವೇಳೆಗೆ ಅನುವು ಮಾಡಿಕೊಡಿ’ ಎಂದು ಕಾಂಗ್ರೆಸ್‌ ಸದಸ್ಯರಿಗೆ ಮನವಿ ಮಾಡಿದರು.

ಕಾಂಗ್ರೆಸ್‌ ಸಂಸದ ವಿಜಯ್ ಜವಹರಲಾಲ್‌ ದಾರ್ದಾ ಅವರು, ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಪ್ರಸ್ತಾಪಿಸಿದರು. ಆದರೆ ಅದಕ್ಕೆ ಉತ್ತರ ನೀಡಬೇಕಾದ ಸಚಿವ ರಾಮ್ ವಿಲಾಸ್‌ ಪಾಸ್ವಾನ್‌ ಸದನದಲ್ಲಿ ಇರಲಿಲ್ಲ.

ಈ ಮಧ್ಯೆ ಕಾಂಗ್ರೆಸ್‌ ಸದಸ್ಯರು ಕೂಗಾಟ ಮುಂದುವರಿಸಿದರು. ‘ಇದು ಸರಿಯಲ್ಲ. ದಯವಿಟ್ಟು ಮಾಡಬೇಡಿ’ ಎಂ ಸಭಾಪತಿ ಅವರ ಮನವಿಯನ್ನು ಅವರು ಲೆಕ್ಕಿಸಲಿಲ್ಲ.

ಹೀಗಾಗಿ ಕಲಾಪವನ್ನು ಮುಂದೂಡಲಾಯಿತು. ಪುನಃ ಸದನ ಸೇರಿದಾಗ ಎರಡು ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಿತು. ಆದರೆ ಪ್ರತಿಭಟನೆ ಮುಂದುವರಿದ ಕಾರಣ ಕಲಾಪವನ್ನು ಮತ್ತೆ ಮುಂದೂಡಬೇಕಾಯಿತು.

‘ಔಷಧ ಕೊಡಲಿ’
‘ಇಂದಿಗೆ ಒಂದು ವಾರ ಕಳೆದಿದೆ. ಈ ಮುಂಚೆ ಅವರು ಘೋಷಣೆಗಳನ್ನು ಕೂಗುತ್ತಿದ್ದರು. ಈಗ ಕೇವಲ ‘ಹೋ ಹೋ’ ಎಂದು ಕೂಗುತ್ತಿದ್ದಾರೆ. ಕಾಂಗ್ರೆಸ್‌ ಸದಸ್ಯರ ಗಂಟಲಿನ ಸ್ಥಿತಿ ಬಗ್ಗೆ ತುಂಬಾ ಕಳವಳ ಉಂಟಾಗುತ್ತಿದೆ. ಅವರ ನಮಗೆ ಬಗ್ಗೆ ಮರುಕವೂ ಮೂಡುತ್ತಿದೆ. ತಮ್ಮ ಪಕ್ಷದ ಸದಸ್ಯರ ಗಂಟಲು ಸರಿಯಾಗುವಂತೆ ವಿರೋಧ ಪಕ್ಷದ ನಾಯಕರು ಔಷಧ ತಂದುಕೊಡಲಿ’ ಎಂದು ಮುಖ್ತಾರ್‌ ಅಬ್ಬಾಸ್‌ ನಕ್ವಿ ಅಣಕವಾಡಿದರು.

* ಮೇಲ್ಮನೆಯಲ್ಲಿ ಕೇಳಿಬರುತ್ತಿರುವ ಧ್ವನಿಗಳು ಪ್ರಾಣಿ ಸಂಗ್ರಹಾಲಯದಲ್ಲಿ ಕೇಳಿಸುವ ಕೂಗಿನಂತಿದೆ
-ಮುಖ್ತಾರ್‌ ಅಬ್ಬಾಸ್‌ ನಕ್ವಿ
ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ

Comments