ಸೋನಿಯಾ ರಾಜಕೀಯ ತಂತ್ರಗಾರಿಕೆ ಬಹಿರಂಗಪಡಿಸಿದ ಶರದ್‌ ಪವಾರ್‌ ಪುಸ್ತಕ

ನರಸಿಂಹರಾವ್ ಪ್ರಧಾನಿ ಹುದ್ದೆಗೇರಿದ್ದು ಹೇಗೆ?

ಸ್ವತಂತ್ರ ಮನೋಭಾವದ ವ್ಯಕ್ತಿ ಪ್ರಧಾನಿ ಆಗಬಾರದು ಎಂದು ಸೋನಿಯಾ ಬಯಸಿದ್ದರು ಎಂದು ರಾಷ್ಟ್ರೀಯವಾದಿ  ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ತಮ್ಮ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.

ನವದೆಹಲಿ (ಪಿಟಿಐ): ಸ್ವತಂತ್ರ ಮನೋಭಾವದ ವ್ಯಕ್ತಿ ಪ್ರಧಾನಿ ಆಗಬಾರದು ಎಂದು ಸೋನಿಯಾ ಬಯಸಿದ್ದರು ಎಂದು ರಾಷ್ಟ್ರೀಯವಾದಿ  ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ತಮ್ಮ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.

1991ರಲ್ಲಿ ದೆಹಲಿಯ ಜನಪಥ ರಸ್ತೆಯ ನಿವಾಸ ಸಂಖ್ಯೆ 10ರಲ್ಲಿ ನೆಹರೂ–ಗಾಂಧಿ ಕುಟುಂಬದ ಆಪ್ತರು, ಪಿ. ವಿ. ನರಸಿಂಹರಾವ್ ಅವರೇ ಪ್ರಸಕ್ತ ಸನ್ನಿವೇಶದಲ್ಲಿ ಪ್ರಧಾನಿ ಹುದ್ದೆಗೆ ಅರ್ಹ ಎಂದು ಸೋನಿಯಾಗೆ ಮನವರಿಕೆ ಮಾಡುವಲ್ಲಿ ಯಶಸ್ವಿ ಆಗಿದ್ದರಿಂದ ತಮಗೆ ಸಿಗಬಹುದಾಗಿದ್ದ ಅವಕಾಶ ತಪ್ಪಿಹೋಯಿತು ಎಂದು ಪವಾರ್ ತಮ್ಮ ಪುಸ್ತಕ ‘ಲೈಫ್ ಆನ್ ಮೈ ಟರ್ಮ್ಸ್– ಫ್ರಾಮ್ ಗ್ರಾಸ್‌ರೂಟ್ಸ್ ಅಂಡ್ ಕಾರಿಡಾರ್ ಆಫ್ ಪವರ್’ದಲ್ಲಿ ವಿವರಿಸಿದ್ದಾರೆ.

ಪ್ರಧಾನಿ ಹುದ್ದೆಯ ಆಕಾಂಕ್ಷಿ ಆಗಿದ್ದ ಅರ್ಜುನ್ ಸಿಂಗ್ ಅವರು ಜಾಣತಂತ್ರ ಹೂಡುವ ಮೂಲಕ ನರಸಿಂಹರಾವ್ ಹೆಸರನ್ನು ಸೂಚಿಸಿದ್ದರು ಎಂದು ಅಂದಿನ ಘಟನಾವಳಿಗಳನ್ನು ಮೆಲುಕು ಹಾಕಿದ್ದಾರೆ.

ಶರದ್ ಪವಾರ್ ಅವರ 75ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಸೇರಿದಂತೆ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲೂ ಪಕ್ಷದ ಮುಖಂಡರು ತಾವು ಪ್ರಧಾನಿ ಆಗಬೇಕು ಎಂದು ಬಯಸಿದ್ದರೂ ಸೋನಿಯಾ ನಿವಾಸದಲ್ಲಿ ಕೈಗೊಳ್ಳುವ ತೀರ್ಮಾನವೇ ಅಂತಿಮ ಎಂಬ ಅರಿವು ತಮಗಿತ್ತು ಎಂದು ಪವಾರ್ ಹೇಳಿಕೊಂಡಿದ್ದಾರೆ.

ಹಿರಿಯ ಧುರೀಣ ನರಸಿಂಹರಾವ್ ಅವರು ಅನಾರೋಗ್ಯದ ಕಾರಣ ಚುನಾವಣೆಗೆ ಸ್ಪರ್ಧಿಸದೆ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು. ಆದರೂ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಲಾಯಿತು. ಇಲ್ಲಿ ಅರ್ಜುನ್ ಸಿಂಗ್ ಮುಂದಾಲೋಚನೆ ಇತ್ತು. ರಾವ್ ಅವರಿಗೆ ವಯಸ್ಸಾಗಿರುವ ಕಾರಣ ಅವರು ಹೆಚ್ಚು ದಿನ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇಲ್ಲ. ಆಗ ತಾವು ಆ ಹುದ್ದೆಗೆ ಏರಬಹುದು ಎಂಬ ಲೆಕ್ಕಾಚಾರದಿಂದ ಸಿಂಗ್ ಸೋನಿಯಾ ಅವರಿಗೆ ರಾವ್ ಹೆಸರನ್ನು ಸೂಚಿಸಿದ್ದರು ಎಂಬ ಅಂಶವನ್ನು  ಪವಾರ್ ಬಹಿರಂಗಪಡಿಸಿದ್ದಾರೆ.

ತಮ್ಮ ಹೆಸರು ಪ್ರಸ್ತಾಪಕ್ಕೆ ಬಂದಾಗ, ‘ಇನ್ನೂ ಚಿಕ್ಕ ವಯಸ್ಸಾಗಿರುವುದರಿಂದ ಬಹಳ ವರ್ಷಗಳ ಕಾಲ ಪ್ರಧಾನಿ ಹುದ್ದೆಯಲ್ಲೇ ಮುಂದುವರಿಯುತ್ತಾರೆ’ ಎಂದು ಫೋತೆದಾರ, ಆರ್. ಕೆ. ಧವನ್, ಅರ್ಜುನ್ ಸಿಂಗ್ ಮತ್ತು ವಿ. ಜಾರ್ಜ್ ಅವರು ಸೋನಿಯಾ ಅವರಿಗೆ ಹೇಳಿದ್ದರು ಎಂದು ಬರೆದುಕೊಂಡಿರುವ ಪವಾರ್, ರಾವ್ ಅವರನ್ನು ಬೆಂಬಲಿಸುವುದೇ ಸುರಕ್ಷಿತ ಮಾರ್ಗ ಎಂದು ಸಲಹೆ ಮಾಡಿದ್ದರು ಎಂದೂ ಹೇಳಿದ್ದಾರೆ.

ಪ್ರಧಾನಿ ಹುದ್ದೆಗೆ ತಾವು ಪ್ರಬಲ ಆಕಾಂಕ್ಷಿ ಎಂಬ ವಿಚಾರ ತಿಳಿದಿದ್ದ ಸೋನಿಯಾ ಅವರು ಇಂದಿರಾ ಗಾಂಧಿ ಅವರಿಗೆ ಪ್ರಧಾನ ಕಾರ್ಯದರ್ಶಿ ಆಗಿದ್ದ ಅಲೆಕ್ಸಾಂಡರ್ ಅವರನ್ನು ತಮ್ಮ ಬಳಿ ಕಳುಹಿಸಿ ರಾಜಿ ಪ್ರಯತ್ನ ನಡೆಸಿದ್ದರು. ನಂತರ ರಾವ್ ಪ್ರಧಾನಿ ಆದ ಮೇಲೆ ತಮ್ಮನ್ನು ರಕ್ಷಣಾ ಸಚಿವರನ್ನಾಗಿ ಮಾಡಲಾಯಿತು ಎಂಬುದನ್ನು ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿದ್ದರೂ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಅವರು ತಮ್ಮನ್ನು ಕಡೆಗಣಿಸಿದ ರೀತಿ, ಸಂಸತ್ತಿಗೆ ಆಯ್ಕೆಯಾಗದಿದ್ದರೂ ಪಕ್ಷದ ಸಂಸದೀಯ ಪಕ್ಷದ ಮುಖ್ಯಸ್ಥೆಯಾಗಲು ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತಂದಾಗ ತಮಗಾದ ಆಘಾತದ ವಿಚಾರಗಳನ್ನು ಪವಾರ್ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾಗುವಂತೆ ಸೋನಿಯಾಗೆ ಆಹ್ವಾನ ನೀಡಿದ ಕೆಲವೇ ಮುಖಂಡರಲ್ಲಿ ತಾವೂ ಒಬ್ಬರು. ಆದರೂ ನಮ್ಮ ಮಧ್ಯೆ ಮಧುರ ಬಾಂಧ್ಯವ್ಯ ಏರ್ಪಡಲಿಲ್ಲ. ಅವರು ಇಬ್ಬರು ಅಥವಾ ಮೂವರನ್ನು ಮಾತ್ರ ನಂಬಿ ಪಕ್ಷದ ವ್ಯವಹಾರಗಳನ್ನು ನಡೆಸುತ್ತಿದ್ದರು ಎಂದು ಸೋನಿಯಾ ಅವರ ಬಗ್ಗೆ ದೀರ್ಘವಾಗಿಯೇ ಪುಸ್ತಕದಲ್ಲಿ ಬರೆದಿದ್ದಾರೆ.

ಸೋನಿಯಾ ಅವರು ಯಾವತ್ತೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ತಾವು ಏನೇ ಸಲಹೆ ಕೊಟ್ಟರೂ ಅದಕ್ಕೆ ವಿರುದ್ಧವಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಎಂದು ಪವಾರ್ ಕೆಲವು ಉದಾಹರಣೆಗಳ ಸಹಿತ ವಿವರಿಸಿದ್ದಾರೆ.

Comments