ಸಿವಾನ್

ಶಹಾಬುದ್ದೀನ್‌ಗೆ ಜೀವಾವಧಿ ಶಿಕ್ಷೆ

ಹನ್ನೊಂದು ವರ್ಷಗಳ ಹಿಂದೆ ಸಹೋದರರಿಬ್ಬರನ್ನು ಆ್ಯಸಿಡ್ ಸುರಿದು ಭೀಕರವಾಗಿ ಹತ್ಯೆ ಮಾಡಿದ್ದ ಆರ್‌ಜೆಡಿಯ ಮಾಜಿ ಸಂಸದ ಮೊಹಮದ್ ಶಹಾಬುದ್ದೀನ್ ಮತ್ತು ಇತರ ಮೂವರಿಗೆ ಇಲ್ಲಿಯ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಸಿವಾನ್ (ಪಿಟಿಐ): ಹನ್ನೊಂದು ವರ್ಷಗಳ ಹಿಂದೆ ಸಹೋದರರಿಬ್ಬರನ್ನು ಆ್ಯಸಿಡ್ ಸುರಿದು ಭೀಕರವಾಗಿ ಹತ್ಯೆ ಮಾಡಿದ್ದ ಆರ್‌ಜೆಡಿಯ ಮಾಜಿ ಸಂಸದ ಮೊಹಮದ್ ಶಹಾಬುದ್ದೀನ್ ಮತ್ತು ಇತರ ಮೂವರಿಗೆ ಇಲ್ಲಿಯ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಬಿಹಾರದ ಸಿವಾನ್ ಜಿಲ್ಲೆಯಲ್ಲಿ 2004ರಲ್ಲಿ ನಡೆದ ಹತ್ಯೆ ಪ್ರಕರಣದ ತೀರ್ಪು ನೀಡಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅಜಯ್ ಕುಮಾರ್ ಶ್ರೀವಾಸ್ತವ ಅವರು ಶಹಾಬುದ್ದೀನ್, ಅವರ ಸಹಚರರಾದ ರಾಜಕುಮಾರ್ ಷಾ, ಶೇಖ್ ಅಸ್ಲಂ ಮತ್ತು ಅರಿಫ್ ಹುಸ್ಸೇನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದರು.

ಕೊಲೆ, ಹಣಕ್ಕಾಗಿ ಅಪಹರಣ, ಸಾಕ್ಷಿಗಳ ನಾಶ, ಕ್ರಿಮಿನಲ್ ಸಂಚು ಆಪಾದನೆಗಳು ಸಾಬೀತಾಗಿರುವುದರಿಂದ  ಈ ನಾಲ್ವರೂ ತಪ್ಪಿತಸ್ಥರು ಎಂದು ನ್ಯಾಯಾಧೀಶರು ಕಳೆದ ಬುಧವಾರ ಪ್ರಕಟಿಸಿದ್ದರು. ಆದರೆ ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸಿದರು.
ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ಶಹಾಬುದ್ದೀನ್ ಮತ್ತು ಇತರರು ನ್ಯಾಯಾಲಯದಲ್ಲಿ ಹಾಜರಿದ್ದರು. ಜೀವಾವಧಿ ಶಿಕ್ಷೆಯ ಜತೆಗೆ ಶಹಾಬುದ್ದೀನ್‌ಗೆ `  20 ಸಾವಿರ ದಂಡವನ್ನೂ ವಿಧಿಸಿದೆ.

2004ರ ಆಗಸ್ಟ್  16ರಂದು ಗೋಶಾಲಾ ರಸ್ತೆಯಲ್ಲಿರುವ ಮನೆಯಿಂದ ಚಂದ್ರಶೇಖರ್ ಪ್ರಸಾದ್ ಅವರ ಮೂವರು ಪುತ್ರರನ್ನು ರಾಜಕುಮಾರ್ ಷಾ, ಶೇಖ್ ಅಸ್ಲಂ ಮತ್ತು ಅರಿಫ್ ಹುಸ್ಸೇನ್ ಸೇರಿಕೊಂಡು  ಅಪಹರಿಸಿ ಪ್ರತಾಪಪುರ ಗ್ರಾಮಕ್ಕೆ ಕರೆದೊಯ್ದು  ಗಿರೀಶ್ ಮತ್ತು ಸತೀಶ್ ಮೇಲೆ ಆ್ಯಸಿಡ್ ಸುರಿದಿದ್ದರಿಂದ ಈ ಇಬ್ಬರು ಸಹೋದರರು ಸಾವನ್ನಪ್ಪಿದ್ದರು. ಇನ್ನೊಬ್ಬ ಸಹೋದರ ರಾಜೀವ್ ರೌಶಾನ್ ತಪ್ಪಿಸಿಕೊಂಡಿದ್ದರಿಂದ ಬದುಕಿ ಉಳಿದಿದ್ದ. ನಂತರ ಆತನನ್ನು ಹತ್ಯೆ ಮಾಡಲಾಗಿದೆ.

ಘಟನೆಯ ನಂತರ ಈ ಇಬ್ಬರು ಸಹೋದರರ ದೇಹಗಳು ನಾಪತ್ತೆಯಾಗಿದ್ದವು. ಮೃತರ ತಾಯಿ ಕಲಾವತಿ ದೇವಿ ಶಹಾಬುದ್ದೀನ್‌ನ 3 ಸಹಚರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

Comments