ಜಪಾನ್‌ ಪ್ರಧಾನಿ ಭಾರತ ಪ್ರವಾಸ: ವ್ಯಾಪಾರ, ಹೂಡಿಕೆ ಕ್ಷೇತ್ರಗಳಲ್ಲಿ ಒಪ್ಪಂದ ಸಾಧ್ಯತೆ

ಇಂದು ಮೋದಿ ಜತೆ ಮಹತ್ವದ ಮಾತುಕತೆ

ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರು ಮೂರು ದಿನಗಳ ಭಾರತ ಭೇಟಿಗಾಗಿ ಶುಕ್ರವಾರ ಇಲ್ಲಿ ಬಂದಿಳಿದರು. ಅಬೆ ಹಾಗೂ ಜಪಾನ್‌ನ ಉನ್ನತ ಮಟ್ಟದ ನಿಯೋಗದ ಸದಸ್ಯರನ್ನು ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹಾ ಇಲ್ಲಿನ ಪಾಲಂ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ನವದೆಹಲಿ (ಪಿಟಿಐ): ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರು ಮೂರು ದಿನಗಳ ಭಾರತ ಭೇಟಿಗಾಗಿ ಶುಕ್ರವಾರ ಇಲ್ಲಿ ಬಂದಿಳಿದರು.
ಅಬೆ ಹಾಗೂ ಜಪಾನ್‌ನ ಉನ್ನತ ಮಟ್ಟದ ನಿಯೋಗದ ಸದಸ್ಯರನ್ನು ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹಾ ಇಲ್ಲಿನ ಪಾಲಂ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ಶನಿವಾರ ನಡೆಯಲಿರುವ ಭಾರತ–ಜಪಾನ್‌ ಒಂಬತ್ತನೇ ವಾರ್ಷಿಕ ಸಭೆಯಲ್ಲಿ ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಲಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಈ ವೇಳೆ  ಉಭಯ ನಾಯಕರು ಪರಾಮರ್ಶೆ ನಡೆಸಲಿದ್ದಾರೆ. ವ್ಯಾಪಾರ, ಬಂಡವಾಳ ಹೂಡಿಕೆ ಕ್ಷೇತ್ರಗಳಲ್ಲಿ ಹೊಸ ಒಪ್ಪಂದಗಳಿಗೆ ಎರಡೂ ರಾಷ್ಟ್ರಗಳು ಸಹಿ ಹಾಕಲಿವೆ. 

ಅಪೂರ್ವ ನಾಯಕ: ‘ಅಬೆ ಅವರಿಗೆ ಸ್ವಾಗತ. ಅವರು ‘ಅಪೂರ್ವ ನಾಯಕ’ ಅವರ ಭೇಟಿಯಿಂದ ಭಾರತ ಮತ್ತು ಜಪಾನ್‌ ನಡುವಿನ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ’ ಎಂದು ಪ್ರಧಾನಿ ‘ಟ್ವೀಟ್‌’ ಮಾಡಿದ್ದಾರೆ.

ಸುಷ್ಮಾ ಜತೆ ಮಾತುಕತೆ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ಶುಕ್ರವಾರ ಅಬೆ ಜತೆ ಸುದೀರ್ಘ ಮಾತುಕತೆ ನಡೆಸಿದರು.

ಎರಡೂ ದೇಶಗಳ ಪ್ರಧಾನಿಗಳು ಈ ಹಿಂದಿನ ಭೇಟಿಯ ವೇಳೆ ಮಾಡಿದ್ದ ಒಪ್ಪಂದಗಳು ಮತ್ತು ಅವುಗಳ ಪ್ರಗತಿಯ ಬಗ್ಗೆ ಸುಷ್ಮಾ ಅವರು ಜಪಾನ್‌ ಪ್ರಧಾನಿಗೆ ವಿವರಿಸಿದರು.

‘ಭಾರತಕ್ಕೆ 3ನೇ ಬಾರಿ ಭೇಟಿ ನೀಡಿರುವುದು ಸಂತಸ ಉಂಟು ಮಾಡಿದೆ’ ಎಂದು ಅಬೆ ಅವರು ಸುಷ್ಮಾ ಅವರಿಗೆ ತಿಳಿಸಿದ್ದಾರೆ. ಅದೇ ರೀತಿ ಭಾರತ–ಪಾಕಿಸ್ತಾನ ನಡುವಿನ ಮಾತುಕತೆ ಪ್ರಕ್ರಿಯೆ ಪುನರಾರಂಭಗೊಂಡಿರುವುದನ್ನು ಅಬೆ ಸ್ವಾಗತಿಸಿದ್ದಾರೆ.

ಗೌರವ ಡಾಕ್ಟರೇಟ್ ಪ್ರದಾನ: ಇಲ್ಲಿನ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯವು ಶಿಂಜೊ ಅಬೆ ಅವರಿಗೆ ಶುಕ್ರವಾರ ಅಂತರರಾಷ್ಟ್ರೀಯ ಸಂಬಂಧಗಳ ವಿಷಯಕ್ಕೆ ಸಂಬಂಧಿಸಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿತು.

ಬಳಿಕ ಮಾತನಾಡಿದ ಅಬೆ ಅವರು, ಭಾರತ–ಜಪಾನ್‌ ಮೂಲಭೂತ ಮೌಲ್ಯಗಳನ್ನು ಹಂಚಿಕೊಂಡಿವೆ. ಹೀಗಾಗಿ ಪ್ರಸಕ್ತ ಶತಮಾನದಲ್ಲಿ ಏಷ್ಯಾ ಹಾಗೂ ಜಾಗತಿಕವಾಗಿ ಉಭಯ ದೇಶಗಳ ನಡುವಣ ಎಲ್ಲಾ ವಿಭಾಗಗಳಲ್ಲಿನ ಸಹಕಾರವು ಮಹತ್ವದ್ದಾಗಿರಲಿದೆ. ಈ ದೃಷ್ಟಿಕೋನದಿಂದ ಶನಿವಾರ ನಡೆಯಲಿರುವ ಮೋದಿ ಜತೆಗಿನ ಮಾತುಕತೆಯ ಅವಕಾಶವನ್ನು, ದ್ವಿಪಕ್ಷೀಯ ಸಂಬಂಧವನ್ನು ಉನ್ನತ ನೆಲೆಯಲ್ಲಿ ವಿಸ್ತರಿಸುವ ಕುರಿತಾಗಿ ಬಳಸಿಕೊಳ್ಳಲಿದ್ದೇನೆ’ ಎಂದರು.

ಬುಲೆಟ್‌ ರೈಲು ಯೋಜನೆ: ಒಪ್ಪಂದ ಇಂದು
ನವದೆಹಲಿ (ಪಿಟಿಐ):
ಮುಂಬೈ– ಅಹಮದಾಬಾದ್‌ ನಡುವೆ ಸಂಪರ್ಕ ಕಲ್ಪಿಸುವ ಬುಲೆಟ್‌ ರೈಲು ಯೋಜನೆ ಒಪ್ಪಂದಕ್ಕೆ ಭಾರತ–ಜಪಾನ್‌ ಶನಿವಾರ ಸಹಿ ಹಾಕಲಿವೆ.

‘ರೈಲ್ವೆಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಎರಡೂ ದೇಶಗಳ ಪ್ರಧಾನಿಗಳು ಮಾತುಕತೆ ನಡೆಸಲಿದ್ದಾರೆ. 

ರೈಲ್ವೆಯ ಸುಧಾರಣೆಗೆ ಜಪಾನ್‌ ನೆರವು ನೀಡಲಿದೆ. ವಿಶೇಷ ಯೋಜನೆಗಳಿಗೂ (ಬುಲೆಟ್‌ ರೈಲು) ಆ ದೇಶ ಸಹಾಯ ಮಾಡಲಿದೆ’ ಎಂದು ರೈಲ್ವೆ ಸಚಿವ ಸುರೇಶ್‌ ಪ್ರಭು ಶುಕ್ರವಾರ ಹೇಳಿದರು.

ಬುಲೆಟ್‌ ರೈಲು ಯೋಜನೆಯ ಒಟ್ಟು ವೆಚ್ಚ ₹ 98 ಸಾವಿರ ಕೋಟಿ ಆಗಿದ್ದು, ಇದರಲ್ಲಿ ಶೇ 81 ರಷ್ಟು ಮೊತ್ತವನ್ನು ಜಪಾನ್‌ ಬಂಡವಾಳವಾಗಿ ಹೂಡಲಿದೆ.

ಮುಂಬೈ–ಅಹಮದಾಬಾದ್‌ ನಡುವಿನ 503 ಕಿ.ಮೀ. ದೂರ ಕ್ರಮಿಸಲು ಈಗ ಎಂಟು ಗಂಟೆಗಳು ಬೇಕು. ಬುಲೆಟ್‌ ರೈಲು ಆರಂಭವಾದರೆ ಕೇವಲ ಮೂರು ಗಂಟೆಗಳಲ್ಲಿ ಈ ದೂರ ಕ್ರಮಿಸಲು ಸಾಧ್ಯ.

ಇಂದು ವಾರಾಣಸಿಗೆ
ವಾರಾಣಸಿ (ಪಿಟಿಐ):
ಶಿಂಜೊ ಅಬೆ ಮತ್ತು ಪ್ರಧಾನಿ ಮೋದಿ ಶನಿವಾರ  ವಾರಾಣಸಿಗೆ ಭೇಟಿ ನೀಡಲಿದ್ದಾರೆ. ವಾರಾಣಸಿಯನ್ನು ಜಪಾನ್‌ನ ಕ್ಯೋಟೊ ನಗರದ ಮಾದರಿಯಲ್ಲಿ ಸ್ಮಾರ್ಟ್‌ ಸಿಟಿಯಾಗಿ ಅಭಿವೃದ್ಧಿಪಡಿಸುವ ಸಂಬಂಧ ಈಗಾಗಲೇ ಎರಡೂ ದೇಶಗಳ ನಡುವೆ ಒಪ್ಪಂದ ನಡೆದಿದೆ. ಆದ್ದರಿಂದ ಅಬೆ ಅವರ ಭೇಟಿಗೆ ಹೆಚ್ಚಿನ ಮಹತ್ವ ಲಭಿಸಿದೆ.

ದಶಾಶ್ವಮೇಧ ಘಾಟ್‌ನಲ್ಲಿ ನಡೆಯಲಿರುವ ‘ಗಂಗಾ ಆರತಿ’ಯಲ್ಲಿಯೂ ಪಾಲ್ಗೊಳ್ಳಲಿದ್ದಾರೆ.

Comments