ಸಂಸತ್‌ ಭವನದಲ್ಲಿ ಪ್ರಧಾನಿ ಭೇಟಿ ಮಾಡಿದ ಚರ್ಚಿಸಿದ ದೇವೇಗೌಡ

ಮಹಾದಾಯಿ: ಪ್ರಧಾನಿಗೆ ದೇವೇಗೌಡ ಆಗ್ರಹ

ಉತ್ತರ ಕರ್ನಾಟಕದ ರೈತರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮಹಾದಾಯಿ ನದಿಯಿಂದ 7 ಟಿಎಂಸಿ ಅಡಿ ನೀರು ಕೊಡಿಸಲು ಕೂಡಲೇ ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತೆ ಆಗ್ರಹಿಸಿದ್ದಾರೆ.

ನವದೆಹಲಿ: ಉತ್ತರ ಕರ್ನಾಟಕದ ರೈತರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮಹಾದಾಯಿ ನದಿಯಿಂದ 7 ಟಿಎಂಸಿ ಅಡಿ ನೀರು ಕೊಡಿಸಲು ಕೂಡಲೇ ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತೆ ಆಗ್ರಹಿಸಿದ್ದಾರೆ.

ಪ್ರಧಾನಿ ಮೋದಿ ಅವರನ್ನು   ಶುಕ್ರವಾರ ಸಂಸತ್‌ ಭವನದಲ್ಲಿ  ಭೇಟಿ ಮಾಡಿದ್ದ ಮಾಜಿ ಪ್ರಧಾನಿ ಸುಮಾರು 15 ನಿಮಿಷ ಮಾತುಕತೆ ನಡೆಸಿದರು. ಉತ್ತರ ಕರ್ನಾಟಕದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ, ರೈತರ ಆತ್ಮಹತ್ಯೆ ಪ್ರಕರಣಗಳು ಹಾಗೂ  14ನೇ ಹಣಕಾಸು ಯೋಜನೆಯಲ್ಲಿ ನಿಗದಿಪಡಿಸಿರುವ ಅನುದಾನ ಮೊದಲಾದ ವಿಷಯಗಳನ್ನು ಕುರಿತು ಅವರು ಚರ್ಚಿಸಿದರು.

ಕಳಸಾ–ಬಂಡೂರಿ ನಾಲಾ ಯೋಜನೆ ಜಾರಿಗೆ ಒತ್ತಾಯಿಸಿ ಉತ್ತರ ಕರ್ನಾಟಕದಲ್ಲಿ ಚಳವಳಿ ಆರಂಭವಾದ ಬಳಿಕ ಪ್ರಧಾನಿ ಅವರನ್ನು ದೇವೇಗೌಡರು ಭೇಟಿ ಮಾಡುತ್ತಿರುವುದು ಇದು ಎರಡನೇ ಸಲ. ಅಕ್ಟೋಬರ್‌ 28ರಂದು ಮೊದಲ ಬಾರಿಗೆ ಅವರು ಮೋದಿ ಅವರ ಜತೆ ಸಮಾಲೋಚನೆ ನಡೆಸಿದ್ದರು. ಉತ್ತರ ಕರ್ನಾಟಕದಲ್ಲಿ ಮೇಲಿಂದ ಮೇಲೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. 9 ತಾಲೂಕಿನಲ್ಲಿ ಕೆಲವು ತಿಂಗಳಿಂದ ಚಳವಳಿ ನಡೆಯುತ್ತಿದೆ. ವಿಳಂಬ ಮಾಡದೆ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕೆಂದು ಗೌಡರು ಪ್ರಧಾನಿಗೆ ಹೇಳಿದ್ದಾರೆ.

ಕರ್ನಾಟಕ ಸರ್ಕಾರ ಏಳು ಟಿಎಂಸಿ ಅಡಿ ನೀರನ್ನು ಮಧ್ಯಂತರ ಪರಿಹಾರವಾಗಿ ನೀಡುವಂತೆ ಮಹಾದಾಯಿ ನ್ಯಾಯಮಂಡಳಿಗೂ ಮನವಿ ಸಲ್ಲಿಸಿದೆ. ಕಾನೂನು ಪ್ರಕ್ರಿಯೆ ಮುಗಿಯಲು ಕಾಲಾವಕಾಶ ಹಿಡಿಯುವುದರಿಂದ ನ್ಯಾಯಮಂಡಳಿಯ ಹೊರಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿರುವುದಾಗಿ ದೇವೇಗೌಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಾನು ಪ್ರಧಾನಿಯಾಗಿದ್ದಾಗ ತಮಿಳುನಾಡು ಸರ್ಕಾರದ ಮನವೊಲಿಸಿ ಕಾವೇರಿ 4ನೇ ಹಂತದ ಯೋಜನೆಗೆ 9 ಟಿಎಂಸಿ ಅಡಿ ನೀರು ಕೊಡಿಸಿದ್ದ ಸಂಗತಿಯನ್ನು ಪ್ರಧಾನಿಯವರ ಗಮನಕ್ಕೆ ತಂದಿದ್ದೇನೆ. ಆಗ ತಮಿಳುನಾಡಿನಲ್ಲಿ ಅಧಿಕಾರದಲ್ಲಿದ್ದ ಡಿಎಂಕೆ ನಮ್ಮ ಮಿತ್ರ ಪಕ್ಷವಾಗಿತ್ತು’ ಎಂದೂ ಅವರು ವಿವರಿಸಿದರು.

‘ನನ್ನ ಮನವಿಯನ್ನು ಮೋದಿ ಅವರು ಸಮಾಧಾನದಿಂದ ಕೇಳಿಸಿಕೊಂಡಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತಾರೆಂಬ ವಿಶ್ವಾಸವಿದೆ’ ಎಂದೂ ದೇವೇಗೌಡರು ನುಡಿದರು.
ಮಹಾದಾಯಿ ನದಿಯಲ್ಲಿ ನಮ್ಮ ಪಾಲು 27 ಟಿಎಂಸಿ ಅಡಿ. ಮಧ್ಯಂತರ ಪರಿಹಾರವಾಗಿ ಕೊಡುವ ಏಳು ಟಿಎಂಸಿ ಅಡಿ ನೀರನ್ನು ನ್ಯಾಯಮಂಡಳಿ ಅಂತಿಮ ತೀರ್ಪಿನಲ್ಲಿ ಕಡಿತ ಮಾಡಲು ಅವಕಾಶವಿದೆ ಎಂದೂ ದೇವೇಗೌಡರು ಅಭಿಪ್ರಾಯಪಟ್ಟರು.

ರೈತರ ಸಂಕಷ್ಟ: ರೈತರು ಚಿನ್ನ ಅಡವಿಟ್ಟು ಸಾಲ ತೆಗೆದುಕೊಂಡಿದ್ದಾರೆ. ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಿಮ್ಮ ಸರ್ಕಾರ ಕೃಷಿಕರ ಹಿತ ಕಾಪಾಡುತ್ತಿಲ್ಲ ಎಂಬ ಭಾವನೆ ಬಂದಿದೆ ಎಂದೂ ಪ್ರಧಾನಿ ಅವರಿಗೆ ಮನವರಿಕೆ ಮಾಡಿರುವುದಾಗಿ ಸ್ಪಷ್ಟಪಡಿಸಿದರು.

ಹಾಸನಕ್ಕೆ ಐಐಟಿ ಮಂಜೂರು ಮಾಡುವಂತೆಯೂ ದೇವೇಗೌಡರು ಒತ್ತಾಯಿಸಿದರು. ಐಐಟಿಗಾಗಿ ರೈತರಿಂದ 1080 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಹದಿನೈದು ಲಕ್ಷ ಪರಿಹಾರ ಕೊಟ್ಟು ವಶಪಡಿಸಿಕೊಂಡಿರುವ ಭೂಮಿಯ ಬೆಲೆ ಈಗ ಕೋಟ್ಯಂತರ ರೂಪಾಯಿ ಆಗಲಿದೆ. ಐಐಟಿ ಬರದಿರುವುದರಿಂದ ರೈತರು ಜಮೀನು ವಾಪಸ್‌ ಕೇಳುತ್ತಿದ್ದಾರೆ. ಮುಂಬರುವ ದಿನಗಳಲ್ಲಾದರೂ ಐಐಟಿ ಮಂಜೂರು ಮಾಡುವಂತೆ ಅವರು ಒತ್ತಾಯಿಸಿದರು.

‘ನ್ಯಾಷನಲ್‌ ಹೆರಾಲ್ಡ್‌’ ಪ್ರಕರಣ ಮುಂದಿಟ್ಟುಕೊಂಡು ಸಂಸತ್‌ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ ನಾಯಕರ ವರ್ತನೆಗೆ  ದೇವೇಗೌಡರು ಬೇಸರ ವ್ಯಕ್ತಪಡಿಸಿದರು. ತಮ್ಮ ಮೇಲಿನ ಆರೋಪಗಳಿಗೆ ಕಾನೂನು ಹೋರಾಟದ ಮೂಲಕ ಉತ್ತರಿಸಬೇಕೇ ವಿನಾ ಸಂಸತ್ತಿನ ಕಲಾಪಕ್ಕೆ ಅಡ್ಡಿ ಮಾಡಬಾರದು. ಕಲಾಪಕ್ಕೆ ಹಾಳಾಗುತ್ತಿರುವುದರಿಂದ ಮನಸಿಗೆ ನೋವಾಗಿದೆ ಎಂದರು.

ಕೇವಲ ಊಹಾಪೋಹ
ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಬದಲಿಗೆ ಎಚ್‌.ಡಿ. ರೇವಣ್ಣ ಅವರನ್ನು ತಾವು ಬೆಳೆಸುತ್ತಿರುವುದಾಗಿ ಕೇಳಿಬರು ತ್ತಿರುವ ಮಾತುಗಳು ಊಹಾ ಪೋಹ. ಕುಮಾರಸ್ವಾಮಿ ಅವರಿಗೆ ಅವರದೇ ವರ್ಚಸ್ಸಿದೆ. ಮುಖ್ಯಮಂತ್ರಿ ಆಗಿದ್ದಾಗ ಒಳ್ಳೆ ಕೆಲಸ ಮಾಡಿ ಜನಪ್ರಿಯರಾಗಿದ್ದಾರೆ ಎಂದು ದೇವೇಗೌಡರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರೇವಣ್ಣ ಹಾಸನದಲ್ಲೇ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಹಾಸನದಲ್ಲೇ ಇದ್ದುಕೊಂಡು ಉಳಿಯುವುದಾಗಿ ಹೇಳಿದ್ದಾರೆ ಎಂದೂ ಖಚಿತಪಡಿಸಿದರು.

Comments