ನವದೆಹಲಿ

ದೆಹಲಿ ಮಾಲಿನ್ಯ: ಡೀಸೆಲ್‌ ಕಾರು ನೋಂದಣಿ ಇಲ್ಲ

ರಾಷ್ಟ್ರೀಯ ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ನಿಯಂತ್ರಿಸಲು ಕಠಿಣ ಕ್ರಮಕ್ಕೆ ಮುಂದಾಗಿರುವ ಹಸಿರು ನ್ಯಾಯ ಪೀಠ, ಡೀಸೆಲ್‌ ಚಾಲಿತ ಹೊಸ ಕಾರುಗಳ ನೋಂದಣಿ ಮತ್ತು ಹತ್ತು ವರ್ಷಕ್ಕೂ ಹಳೆಯ ಡೀಸೆಲ್ ಕಾರುಗಳ ನೋಂದಣಿ ಪರಿಷ್ಕರಣೆ ನಿಷೇಧಿಸಿ ಶುಕ್ರವಾರ ಆದೇಶ ನೀಡಿದೆ.

ನವದೆಹಲಿ (ಪಿಟಿಐ): ರಾಜಧಾನಿ ನವದೆಹಲಿಯಲ್ಲಿ ಇನ್ನು ಡೀಸೆಲ್‌ನಿಂದ ಓಡುವ ಹೊಸ ಕಾರುಗಳು ರಸ್ತೆಗೆ ಇಳಿಯುವಂತಿಲ್ಲ. 

ರಾಜಧಾನಿಯಲ್ಲಿ ವಾಯು ಮಾಲಿನ್ಯದ ಪ್ರಮಾಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಹಸಿರು ನ್ಯಾಯ ಪೀಠ, ಡೀಸೆಲ್‌ ಚಾಲಿತ ಹೊಸ ಕಾರುಗಳ ನೋಂದಣಿ ಮತ್ತು ಹತ್ತು ವರ್ಷಕ್ಕೂ ಹಳೆಯ ಡೀಸೆಲ್ ಕಾರುಗಳ ನೋಂದಣಿ ಪರಿಷ್ಕರಣೆಯನ್ನು ನಿಷೇಧಿಸಿ ಶುಕ್ರವಾರ ಆದೇಶ ನೀಡಿದೆ.

ರಾಜಧಾನಿಯಲ್ಲಿ ದಿನ ಬಿಟ್ಟು ದಿನ ವಾಹನಗಳನ್ನು ಚಾಲನೆ ಮಾಡಲು ಅವಕಾಶ ನೀಡುವ ದೆಹಲಿ ಸರ್ಕಾರದ ಸೂತ್ರವನ್ನು ಪ್ರಶ್ನಿಸಿರುವ ನ್ಯಾಯಪೀಠ, ಇದು ಉದ್ದೇಶಿತ ಗುರಿಯನ್ನು ಸಾಧಿಸಲಾರದು ಎಂದು ಅಭಿಪ್ರಾಯಪಟ್ಟಿದೆ.

‘ದೆಹಲಿಯ ಗಾಳಿಯ ಗುಣಮಟ್ಟವನ್ನು ಮಲಿನಗೊಳಿಸುವಲ್ಲಿ ವಾಹನಗಳ ಪಾತ್ರವನ್ನು ಗಂಭೀರವಾಗಿ ಪರಿಗಣಿ­ಸಬೇಕಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ, ದೆಹಲಿಯಲ್ಲಿ ಹಳೆಯ ಅಥವಾ ಹೊಸ ಡೀಸೆಲ್‌ ವಾಹನಗಳು ನೋಂದಣಿಯಾಗಲು ಅವಕಾಶ ನೀಡಬೇಕೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದೆ.

‘ಪ್ರಕರಣದ ಎಲ್ಲಾ ಅರ್ಜಿದಾರರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ, ದೆಹಲಿಯಲ್ಲಿ ಹತ್ತು ವರ್ಷ ಹಳೆಯ ಮತ್ತು ಹೊಸ ಡೀಸೆಲ್‌ ಕಾರುಗಳನ್ನು ನೋಂದಣಿ ಮಾಡಬಾರದು ಎಂಬುದಾಗಿ ನಿರ್ದೇಶಿಸುತ್ತೇವೆ’ ಎಂದು ನ್ಯಾಯಮಂಡಳಿ ಅಧ್ಯಕ್ಷ, ನ್ಯಾಯಮೂರ್ತಿ ಸ್ವತಂತ್ರ ಕುಮಾರ್‌ ಅವರ ನೇತೃತ್ವದ ಪೀಠ ಆದೇಶಿಸಿತು.

ತಮ್ಮ ಇಲಾಖೆಗಳಿಗೆ ಡೀಸೆಲ್‌ ವಾಹನಗಳನ್ನು ಖರೀದಿಸಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಯಮಂಡಳಿ ಸೂಚಿಸಿತು.

ರಾಜಧಾನಿಯಲ್ಲಿ ಹತ್ತು ವರ್ಷಕ್ಕೂ ಹಳೆಯದಾದ ಎಲ್ಲಾ ರೀತಿಯ ಡೀಸೆಲ್ ವಾಹನಗಳ ಓಡಾಟಕ್ಕೆ ಅವಕಾಶ ನೀಡಬಾರದು ಎಂದು ಹಸಿರು ನ್ಯಾಪೀಠ ಏಪ್ರಿಲ್ 7ರಂದು ಆದೇಶಿಸಿತ್ತು.

ದೆಹಲಿಯ ವಾಯುಮಾಲಿನ್ಯಕ್ಕೆ ಡೀಸೆಲ್ ಕಾರುಗಳೇ ಪ್ರಮುಖ ಕಾರಣ ಎಂದಿದ್ದ ಪೀಠ, ಪರಿಸ್ಥಿತಿ ಅಪಾಯಕಾರಿ ಮಟ್ಟಕ್ಕೆ ತಲುಪುತ್ತಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿ ರುವುದರಿಂದ ಜನರು ದೆಹಲಿಯನ್ನು ತೊರೆಯುವುದು ಸೂಕ್ತ ಎಂದು ಸಲಹೆ ನೀಡಿತ್ತು. ಇದಕ್ಕೂ ಮುನ್ನ, 15 ವರ್ಷಕ್ಕೂ ಹಳತಾದ ಎಲ್ಲಾ ವಾಹನಗಳ ಮೇಲೆ ನಿಷೇಧ ಹೇರಿದ್ದ ಪೀಠ, ನಗರದ ರಸ್ತೆಗಳಲ್ಲಿ ಈ ವಾಹನಗಳು ಸಂಚಾರ ನಡೆಸಲು ಅವಕಾಶ ನೀಡಬಾರದು ಎಂದು ಸೂಚಿಸಿತ್ತು.

ಅಧ್ಯಯನದ ಬಳಿಕ ಕ್ರಮ: ಸರ್ಕಾರ ಹೊಸ  ಡೀಸೆಲ್‌ ಕಾರುಗಳ ನೋಂದಣಿಯನ್ನು ತತ್‌ಕ್ಷಣದಿಂದಲೇ ನಿಲ್ಲಿಸಬೇಕು ಎಂಬ ಹಸಿರು ನ್ಯಾಯಪೀಠದ ಆದೇಶದ ಕುರಿತು ಅಧ್ಯಯನ ನಡೆಸಲಾಗುವುದು ಎಂದು ದೆಹಲಿ ಸರ್ಕಾರ ತಿಳಿಸಿದೆ.
****
ದಿನ ಬಿಟ್ಟು ದಿನ ವಾಹನ ಸಂಚಾರಕ್ಕೆ ಅವಕಾಶ ನೀಡುವ ಸೂತ್ರ ಯಶಸ್ವಿಯಾಗುವುದು ಅನುಮಾನ. ಇದು ಎರಡು ಕಾರುಗಳನ್ನು ಹೊಂದಲು ಜನರನ್ನು ಪ್ರೇರೇಪಿಸುತ್ತದೆ
-ನ್ಯಾ. ಸ್ವತಂತ್ರಕುಮಾರ್‌, ಹಸಿರು ನ್ಯಾಯಪೀಠ

Comments