‘ತಾಯಿಬಾಯಿ’ಯ ಮುನ್ನೋಟದ ‘ಆರತಿ’

‘ನವೋದಯ’ ಮತ್ತು ‘ಸುಧಾರಣಾವಾದಗಳು’ ತಮ್ಮೊಡಲಲ್ಲಿ ಇಟ್ಟುಕೊಂಡ ಆಶಯಗಳಿಗೂ ಅವು ತಳೆದ ಸಾಮಾಜಿಕ ರೂಪ ರೂಪಾಂತರಗಳಿಗೂ ಅಂತಿಮವಾಗಿ ಅವು ಮಂಡಿಸಿದ ರಾಜಕೀಯ ವ್ಯಾಖ್ಯಾನಗಳಿಗೂ ಇರುವ ಸಂಬಂಧಾಂತರಗಳು ಆಧುನಿಕ ಭಾರತದ ಕುತೂಹಲಕಾರಿಯಾದ ನಿರ್ಣಾಯಕ ಸಂಗತಿಗಳು.

‘ತಾಯಿಬಾಯಿ’ಯ ಮುನ್ನೋಟದ ‘ಆರತಿ’

‘ನವೋದಯ’ ಮತ್ತು ‘ಸುಧಾರಣಾವಾದಗಳು’ ತಮ್ಮೊಡಲಲ್ಲಿ ಇಟ್ಟುಕೊಂಡ ಆಶಯಗಳಿಗೂ ಅವು ತಳೆದ ಸಾಮಾಜಿಕ ರೂಪ ರೂಪಾಂತರಗಳಿಗೂ ಅಂತಿಮವಾಗಿ ಅವು ಮಂಡಿಸಿದ ರಾಜಕೀಯ ವ್ಯಾಖ್ಯಾನಗಳಿಗೂ ಇರುವ ಸಂಬಂಧಾಂತರಗಳು ಆಧುನಿಕ ಭಾರತದ ಕುತೂಹಲಕಾರಿಯಾದ ನಿರ್ಣಾಯಕ ಸಂಗತಿಗಳು. ಹೆಣ್ಣು – ಅವಳ ಸ್ಥಿತಿಗತಿ – ಅವಳ ಶಿಕ್ಷಣ... ಒಟ್ಟಿನಲ್ಲಿ ಅವಳ ‘ಪಾತ್ರ’ದ ಬಗ್ಗೆ ಸುಧಾರಣಾವಾದದ ವಿಪರ್ಯಾಸಕಾರಿ ನಿಲುವುಗಳನ್ನು ಇನ್ನೂ ಆಳವಾದ ಶೋಧಕ್ಕೆ ಒಡ್ಡಬೇಕಾದ ಅಗತ್ಯವಿದೆ.

ಪಿತೃಸಂಸ್ಕೃತಿಯ ಇಬ್ಬಂದಿತನ ಮತ್ತು ಛದ್ಮವೇಷಗಳ ಅನಾವರಣಕ್ಕೂ ಇದು ಮುಖ್ಯವಾದ ಆಕರ ಕೇಂದ್ರವಾಗಿದೆ. ಪುನರುಜ್ಜೀವನದ ಹರಿಕಾರ ಎನ್ನುವ ಬಿರುದಿನ ರಾಜಾರಾಂ ಮೋಹನರಾಯರು ಹೆಣ್ಣನ್ನು ಕುರಿತು ಹೊಂದಿದ್ದ ದ್ವಂದ್ವಾತ್ಮಕ ಮತ್ತು ಪರಸ್ಪರ ಹೊಂದಲಾರದ ನಿಲುವುಗಳನ್ನು ಇದಕ್ಕೆ ಪ್ರಾತಿನಿಧಿಕ ಉದಾಹರಣೆ ಎನ್ನುವಂತೆ ನೋಡಬಹುದು. ಈ ಮಾತುಗಳನ್ನು ಹೇಳುತ್ತಿರುವಾಗ ಸುಧಾರಣಾವಾದವು ಹೆಣ್ಣಿಗೆ ತೆರೆದ ಮೊದಲ ಹೆಬ್ಬಾಗಿಲನ್ನು ನಿರಾಕರಿಸುತ್ತಿಲ್ಲ. ಬದಲಿಗೆ ಹೆಣ್ಣನ್ನು ಕುರಿತಂತೆ ಬದಲಾಗಬೇಕಾದ ಗಂಡಿನ ದೃಷ್ಟಿಕೋನದ ಮಟ್ಟಿಗೂ ಇದು ಮೊದಲ ಬಾಗಿಲನ್ನು ತೆರೆಯಿತು ಎನ್ನುವುದೂ ಅಷ್ಟೇ ಮಹತ್ವದ ಐತಿಹಾಸಿಕ ಸಂಗತಿಯಾಗಿದೆ. ಹಾಗೆ ನೋಡಿದರೆ ಇದೇ ಅತ್ಯಂತ ಮಹತ್ವದ ಸಂಗತಿ. ಮೌಲ್ಯವ್ಯವಸ್ಥೆಯ ಅಧಿಕಾರ ಕೇಂದ್ರದಲ್ಲಾಗಬೇಕಾದ ಬದಲಾವಣೆಯ ಹೆಜ್ಜೆಗುರುತುಗಳು ಇವು.

ಸಾಮಾನ್ಯವಾಗಿ ಈ ಸುಧಾರಣಾವಾದಿ ಮಹಿಳೆಯರ ಸ್ಥಾನಪಲ್ಲಟವನ್ನು ‘ಸತಿಶಿರೋಮಣಿ’ಯಿಂದ ‘ಸಹಧರ್ಮಿಣಿ’ಯ ಬದಲಾದ ಪಾತ್ರವೆಂದು ನಾವು ಗುರುತಿಸಬಹುದು. ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರೂ ಪಾಲ್ಗೊಳ್ಳಬೇಕು ಎನ್ನುವ ಗಾಂಧೀಜಿಯವರ ಒತ್ತಾಸೆಯೂ ಇದರಲ್ಲಿ ಸೇರಿತ್ತು. ಆ ಮಹಿಳೆಯರು ತಮ್ಮ ಗೃಹಸ್ಥ ಧರ್ಮದ ಗಂಧವನ್ನು ತೇಯುತ್ತಲೇ ತಲೆಯ ಮೇಲೆ ಸೆರಗು ಹೊದ್ದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ದೇಶಪ್ರೇಮದ ಮತ್ತು ತಾಯಿನಾಡಿನ ಕರ್ತವ್ಯದ ನಿಭಾವಣೆಯಾಗಿ ಹೆಣ್ಣಿನ ಪಾತ್ರವನ್ನು ಬದಲಾದ ಸ್ವರೂಪದೊಂದಿಗೆ ಪ್ರಸ್ತುತ ಪಡಿಸಲಾಯಿತು.

ಸ್ಥೂಲವಾಗಿ ಹೇಳುವುದಾದರೆ, ಶಿಕ್ಷಣವೋ, ವಿಧವಾ ವಿವಾಹವೋ– ಈ ಯಾವುದನ್ನೂ ತನ್ನಷ್ಟಕ್ಕೆ ತಾನು ಹೆಣ್ಣಿನ ಹಕ್ಕೊತ್ತಾಯ ಎನ್ನುವ ನೆಲೆಯಲ್ಲಿ ಮುನ್ನೆಲೆಗೆ ತರುವಲ್ಲಿ ಪಿತೃಸಂಸ್ಕೃತಿಗಿದ್ದ ವಿರೋಧ ಮತ್ತು ಅಸಹನೆಗಳನ್ನು ದೇಶ ರಕ್ಷಣೆಯ ಕವಚದಲ್ಲಿ ಮುಚ್ಚಲಾಯಿತು. ತುಸು ಧಾರ್ಷ್ಟ್ಯದಲ್ಲಿ ಮುಂದುವರೆದು ಹೇಳಬಹುದಾದರೆ, ಅನೇಕ ನಾಯಕರಿಗೆ ಇದು ತಾತ್ಕಾಲಿವಾದ ಮತ್ತು ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ ಮುಗಿಯಬಹುದಾದ ಹೆಣ್ಣಿನ ಪ್ರಯಾಣವಾಗಿತ್ತು.

ಆದ್ದರಿಂದಲೇ– ಈ ಮೊದಲ ಹೆಜ್ಜೆ ಸಾವಿರ ಹೆಜ್ಜೆಗಳ ಪ್ರಯಾಣವಾಗಲಿ, ಇದು ಹೆಣ್ಣಿನ ‘ಪಾತ್ರ ನಿರ್ವಹಣೆ’ಯನ್ನು ನಭೂತೋ ಎನ್ನುವಂತೆ ಬದಲಾಯಿಸಲಿ ಎಂದು ನಮ್ಮ ನಾಯಕಮಣಿಗಳು ಬಯಸಿದ್ದರೆ? ಇದನ್ನು ತೆರೆದ ಮನಸ್ಸಿನಿಂದ ಒಪ್ಪುವುದು ಅವರಿಗೆ ಸಾಧ್ಯವಿತ್ತೆ? ಅಥವಾ ಇದು ವಸಾಹತುಶಾಹಿಯ ಎದುರಿಗೆ ಮಂಡಿಸಬೇಕಾಗಿದ್ದ ಆಧುನಿಕ ಭಾರತದ ಚಿತ್ರವೊಂದರ ಅನಿವಾರ್ಯ ಆಯಾಮ ಮಾತ್ರವಾಗಿತ್ತೆ? ಎನ್ನುವ ಪ್ರಶ್ನೆಗಳನ್ನು ಕೇಳಲು ಈಗಲೂ ಅವಕಾಶವಿದೆ. ಇದನ್ನು ಹೀಗೂ ಹೇಳಬಹುದು, ‘ನವ ಭಾರತ’ದ ನಕಾಶೆಯಲ್ಲಿ ಹೆಣ್ಣಿನ ಚಲನೆಗಳು ನೇಪಥ್ಯದಿಂದ ಮುನ್ನೆಲೆಗೆ ಬರಬೇಕಾದ್ದರ ಅನಿವಾರ್ಯತೆಯನ್ನು ಒಪ್ಪಿಕೊಳ್ಳುತ್ತಿರುವಾಗಲೂ ಅದಕ್ಕೊಂದು ಲಕ್ಷ್ಮಣ ರೇಖೆಯನ್ನು ಎಳೆಯಲಾಗಿತ್ತೆ? ಈ ಲಕ್ಷ್ಮಣ ರೇಖೆಯೆನ್ನುವುದು ಗಂಡು ಹೆಣ್ಣುಗಳಿಬ್ಬರೂ ಎಳೆದುಕೊಂಡದ್ದಾಗಿತ್ತು ಎನ್ನುವುದನ್ನು ನಾವು ಗಮನಿಸಬೇಕು.

ಈ ಕಾಲಘಟ್ಟದ ಪ್ರಭಾವಿ ಮಹಿಳೆಯರು ಬರೆದಿರುವ ಆತ್ಮಚರಿತ್ರೆಗಳನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ‘ಯಜಮಾನರ’ ಔದಾರ್ಯದಿಂದಾಗಿಯೇ ತಾವು ಹೊಸಿಲನ್ನು ದಾಟಲಾಯಿತು ಎನ್ನುವುದರ ಬಗ್ಗೆ ಅವರಿಗಿರುವ ಕೃತಜ್ಞತೆಯನ್ನು ನೋಡಿದರೆ ಲಕ್ಷ್ಮಣ ರೇಖೆಯ ಎರಡು ತುದಿಗಳು ನಮ್ಮ ಅನುಭವಕ್ಕೆ ಬರುತ್ತವೆ. ಈ ಎಲ್ಲ ಸಂಗತಿಗಳನ್ನೂ ಹೆಣ್ಣಿನ ಮಹಾ ಸಂಘರ್ಷದ ಹಿನ್ನೆಲೆಯಲ್ಲಿ ನೋಡಿದಾಗ ಮಾತ್ರ ಹೆಣ್ಣಿನ ಪ್ರತಿ ಹೆಜ್ಜೆಯ ಬಗೆಗೂ ಗೌರವ ಮತ್ತು ಕೃತಜ್ಞತೆ ಹುಟ್ಟುತ್ತದೆ.

ಹೆಣ್ಣಿನ ಸಂಕಥನದಲ್ಲಿ ‘ಸಹ ಪ್ರಯಾಣ’ ಎನ್ನುವುದೊಂದು ಮೂಲ ಸಂಗತಿ ಎನ್ನುವುದನ್ನು ನಾವು ಉದ್ದಕ್ಕೂ ಗಮನಿಸುತ್ತಲೇ ಬಂದಿದ್ದೇವಷ್ಟೇ. ಹೆಣ್ಣಿನ ಬಗೆಗಿರುವ ಪ್ರೀತಿಯನ್ನು ಗೌರವವಾಗಿ, ಅವಳ ಬಗೆಗಿರುವ ಕೃತಜ್ಞತೆ ಮತ್ತು ಕರುಣೆಯನ್ನು ಅವಳ ಪಾತ್ರದ ಅಧಿಕೃತತೆಯಾಗಿ ರೂಪಾಂತರಿಸಿಕೊಳ್ಳುವ ಮಾನವೀಯ ಮತ್ತು ನಾಗರಿಕ ಪ್ರಕ್ರಿಯೆಯಲ್ಲಿ ಹೆಣ್ಣಿನ ಸಂಕಥನ ಆಸಕ್ತವಾಗಿದೆ. ಇಂಥ ಪ್ರಕ್ರಿಯೆಯಲ್ಲಿ ತನ್ನನ್ನು ಅಪಾರ ಶ್ರದ್ಧೆಯಲ್ಲಿ ಮತ್ತು ಮನುಷ್ಯ ಪ್ರೀತಿಯಲ್ಲಿ ತೊಡಗಿಸಿಕೊಂಡ ಸಂಕಲನವೊಂದರ ಬಗ್ಗೆ ಓ.ಎಲ್. ನಾಗಭೂಷಣಸ್ವಾಮಿ ಮೇಷ್ಟ್ರು ನನ್ನ ಗಮನ ಸೆಳೆದರು. ಇದಕ್ಕೆ ಅವರಿಗೆ ನನ್ನ ಕೄತಜ್ನತೆಗಳು. ೧೯೪೧ರಲ್ಲಿ ‘ಮನೋಹರ ಗ್ರಂಥಮಾಲೆ’ಯಿಂದ ಪ್ರಕಟವಾಗಿರುವ ಲೇಖಕಿಯರ ಕಥಾ ಸಂಕಲನ ಇದು. ‘ಆರತಿ’ ಎನ್ನುವ ಹೆಸರಿನ ಈ ಸಂಕಲನ ಅನೇಕ ಕಾರಣಗಳಿಗಾಗಿ ಕುತೂಹಲಕಾರಿಯಾದುದೂ ಮಹತ್ವದ್ದೂ ಆಗಿದೆ.

ಮೊದಲನೆಯ ಮುಖ್ಯ ಕಾರಣವೆಂದರೆ ಇದನ್ನು ಇಬ್ಬರು ಪುರುಷರು ಸಂಪಾದಿಸಿದ್ದಾರೆ ಎನ್ನುವುದು. ಮೇವುಂಡಿ ಮಲ್ಲಾರಿ ಮತ್ತು ಕುಲಕರಣಿ ದತ್ತಾತ್ರೇಯ ಅವರು ಈ ಸಂಕಲನದ ಸಂಪಾದಕರು. ಇದಕ್ಕೆ ಅವರು ಬರೆದಿರುವ ‘ಮುನ್ನೋಟ’ ಎನ್ನುವ ಪ್ರಸ್ತಾವನೆಯೂ ಆಸಕ್ತಿಕರವಾಗಿದೆ ಎನ್ನುವುದು ಇನ್ನೊಂದು ಕಾರಣ. ಮೊದಲ ಘಟ್ಟದ ಲೇಖಕಿಯರು ಎದುರಿಸಿದ ಸವಾಲುಗಳನ್ನು ಇಲ್ಲಿನ ಕಥೆಗಳು ತೆರೆದು ತೋರಿಸುತ್ತವೆ ಎನ್ನುವುದು ಮತ್ತೊಂದು ಕಾರಣ.

ಯಾವ ದ್ವಂದ್ವ ಮತ್ತು ಶ್ರದ್ಧೆಗಳ ಬಗ್ಗೆ ಆರಂಭದಲ್ಲಿ ಪ್ರಸ್ತಾಪಿಸಲಾಯಿತೋ ಆ ಎಲ್ಲ ಅಂಶಗಳನ್ನೂ ಈ ಪ್ರಸ್ತಾವನೆಯಲ್ಲಿ ಕಾಣಬಹುದು. ಮಹಿಳೆಯರು, ಅವರ ಅಭಿವ್ಯಕ್ತಿ, ಅದಕ್ಕೆ ಸಿಕ್ಕಬೇಕಾದ ಜಾಗ ಮತ್ತು ಮಹತ್ವ– ಈ ಅಂಶಗಳ ಬಗ್ಗೆ ಅಪಾರ ಗೌರವವನ್ನಿಟ್ಟುಕೊಂಡೇ, ಈ ತನಕ ಅವು ಸಿಗದೆ ಹೋದುದರ ಬಗ್ಗೆ ದಟ್ಟ ಅಪರಾಧಿ ಪ್ರಜ್ಞೆಯಲ್ಲಿ ಈ ಪ್ರಸ್ತಾವನೆ ಆರಂಭವಾಗುತ್ತದೆ. ಗೌರಮ್ಮನವರು ಲೇಖಕಿಯರ ಮೊದಲ ಕಥಾ ಸಂಕಲನ ‘ರಂಗವಲ್ಲಿ’ಯನ್ನು ಪ್ರಕಟಿಸಿ, ಅದಕ್ಕೆ ಯಾವ ಮನ್ನಣೆಯೂ ಸಿಗದೆಹೋದುದರ ಬಗ್ಗೆ ವಿಷಾದ ಮತ್ತು ವ್ಯಗ್ರತೆಯಲ್ಲಿ ಆಡಿದ ಮಾತುಗಳಿಗೆ ಪ್ರತಿಕ್ರಿಯೆಯೋ ಎಂಬಂತೆ, ಆದ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನವೋ ಎಂಬಂತೆ ಈ ಸಂಕಲನವಿದೆ.

‘‘ಹಿಂದೊಮ್ಮೆ ಕನ್ನಡ ಸಾಹಿತ್ಯಮಂಡಪದಲ್ಲಿ ‘ರಂಗವಲ್ಲಿ’ಯನ್ನಿಕ್ಕಿದಾಗ, ದಿವಂಗತ ಗೌರಮ್ಮನವರ ‘ಕಂಬನಿ’ಯಿಂದ ಶಾರದೆಯ ಪಾದ ತೊಳೆದಾಗ ನಮ್ಮ ಹೆಣ್ಣು ಮಕ್ಕಳು ಎಷ್ಟೊಂದು ಮುಂದುವರಿಯುವರೆಂಬ ಕಲ್ಪನೆ ನಮಗೆ ಇರಲಿಲ್ಲ’’ ಎನ್ನುತ್ತಲೇ– ‘‘ಇಷ್ಟು ಕಾಲ ಕನ್ನಡ ನಾಡು ತನ್ನ ಹೆಣ್ಣು ಮಕ್ಕಳನ್ನು ಮನೆಯ ಮೂಲೆಯಿಂದ ಹೊರಗೆ ಕರೆಯಲಿಲ್ಲವಲ್ಲ, ಕರೆದು ನುಡಿಯಿಸಲಿಲ್ಲವಲ್ಲ, ಕರೆದು ನುಡಿಯಿಸಿದ್ದರೆ ನಮ್ಮ ಸಾಹಿತ್ಯದ ಹೊಳೆ ಇನ್ನಿಷ್ಟು ತುಂಬಿ ಹರಿಯಬಹುದಾಗಿತ್ತಲ್ಲ, ನಮ್ಮ ಬಾಳು ಇನ್ನಷ್ಟು ರಸಮಯವಾಗಬಹುದಾಗಿತ್ತಲ್ಲ...’’ ಎನ್ನುವ ವಿಷಾದದ ಆತ್ಮವಿಮರ್ಶೆಗೆ ತೊಡಗುತ್ತಾರೆ. ಈ ಆತ್ಮವಿಮರ್ಶೆಯ ಪ್ರಾಮಾಣಿಕತೆ ಓದುಗರನ್ನು ಅನಾಯಾಸವಾಗಿ ತಲುಪುತ್ತದೆ.

ಗಂಡು ಅಧಿಕಾರಕೇಂದ್ರದಿಂದ ಹೊರಗೆ ಬಂದು ತನ್ನನ್ನು ಅವಳ ಪಕ್ಕದಲ್ಲಿ ನಿಲ್ಲಿಸಿಕೊಳ್ಳಲು ನಡೆಸುವ ಈ ಪ್ರಯತ್ನದ ಅಗತ್ಯವನ್ನು ವಿವರಿಸಬೇಕಿಲ್ಲ. ಸುಧಾರಣಾವಾದದ ಹೊರಭಿತ್ತಿಯನ್ನು ಮನೋವಿನ್ಯಾಸದ ಒಳಭಿತ್ತಿಯಾಗಿ ವಿಸ್ತರಿಸಿಕೊಳ್ಳುವ ಈ ಪ್ರಯತ್ನ ಬಹುಮುಖ್ಯವಾದುದು. ಈ ಪ್ರಸ್ತಾವನೆಗೆ ಅವರು ಕೊಟ್ಟಿರುವ ‘ಮುನ್ನೋಟ’ ಶೀರ್ಷಿಕೆಯೂ ಈ ಅಂಶವನ್ನು ಧ್ವನಿಸುತ್ತದೆ. ಪ್ರಸ್ತಾವನೆಯ ಮುಂದುವರಿದ ಭಾಗದಲ್ಲಿ ಒಂದು ಅಪೂರ್ವವೆನಿಸುವ ರೂಪಕ ಪರಿಕಲ್ಪನೆಯನ್ನು ಈ ಸಂಪಾದಕರು ಸೃಷ್ಟಿಸುತ್ತಾರೆ. ಹೆಣ್ಣುಮಕ್ಕಳ ‘ತಾಯಿಬಾಯಿ’ ಎಂದಿನಿಂದಲೂ ಕಥನಕಲೆಗೆ ಆವಾಸವಾಗಿರುವುದು ಎನ್ನುವ ಅಂಶವನ್ನು ಸುದೀರ್ಘವಾಗಿಯೇ ಇವರು ಚರ್ಚಿಸುತ್ತಾರೆ.

‘ತಾಯಿಬಾಯಿ’ ಎನ್ನುವುದು ಒಂದು ಪರಿಕಲ್ಪನಾತ್ಮಕ ರೂಪಕವೇ ಆಗಿಬಿಡುವುದು ಅವರು ಕೊಡುವ ವಿವಿರಣೆಯಿಂದ. ಕಲೆಗೂ ಹೆಣ್ಣಿಗೂ ಇರುವ ಜೀವಕೊರಳ ಸಖ್ಯವನ್ನು ತಾತ್ವಿಕವಾಗಿ ಕಟ್ಟಿಕೊಡುವಲ್ಲಿ ಇವರು ಯಶಸ್ವಿಯಾಗದಿದ್ದರೂ ‘ತಾಯಿಬಾಯಿ’ ಎಂದು ಅವರು ಸೃಷ್ಟಿಸುವ ಪದ-ಪರಿಕಲ್ಪನೆಯೇ ಅವರ ನಿಲುವನ್ನು ಸೂಚಿಸುತ್ತದೆ. ಹೆಣ್ಣು ನುಡಿದದ್ದೆಲ್ಲ ಕತೆಯಾಗಿರುವ ಹೆಣ್ಣಿನ ಬಾಯಿಗೆ ಕೈ ಒದಗಿ ಬಂದಿರುವುದೊಂದು ಸೌಭಾಗ್ಯವಲ್ಲವೆ ಎನಿಸುತ್ತದೆ. ಅವಳ ಸಾಹಿತ್ಯವನ್ನು ಹಾಲಕ್ಕಿಯ ಒಸಗೆ ನುಡಿಗೆ ಹೋಲಿಸುವುದೂ ಕೂಡ ಹೆಣ್ಣಿನ ಅಭಿವ್ಯಕ್ತಿಯ ಬಗ್ಗೆ ಈ ಸಂಕಲನದ ಹುಟ್ಟೂ ಇಷ್ಟೇ ಆಸಕ್ತಿಕರವಾಗಿದೆ.

ಲೇಖಕಿಯರಿಗೆಂದೇ ಏರ್ಪಡಿಸಲಾದ ಕಥಾಸ್ಪರ್ಧೆಯಲ್ಲಿ ವಿಜೇತರಾದವರ ಕಥೆಗಳ ಸಂಕಲನ ಇದು. ಸ್ಪರ್ಧೆಯನ್ನು ಈ ಸಂಪಾದಕರು ‘ಮೇಲಾಟ’ ಎಂದು ಕರೆಯುತ್ತಾರೆ. ಇಲ್ಲಿನ ಕಥೆಗಳ ವೈವಿಧ್ಯವನ್ನು ಕುರಿತು ಬರೆಯುವಾಗಲೇ ಇವರ ನಿಜವಾದ ಸತ್ವ ಪರೀಕ್ಷೆ ಎದುರಾಗುತ್ತದೆ. ಕೊನೆಗೂ ಹೆಣ್ಣುಮಕ್ಕಳು ಸಂಸಾರದ ಮತ್ತು ಪರಿಸರದ ಆರೋಗ್ಯವನ್ನು, ಐಕ್ಯತೆಯನ್ನು, ಅದರ ಸೌಷ್ಟವವನ್ನೂ ಕಾಪಾಡಬೇಕಾದವರಲ್ಲವೆ ಎನ್ನುವ ಪ್ರಶ್ನೆ ಇವರನ್ನು ಹಾದು ಹೋಗುತ್ತದೆ. ವಿಘಟನೆಗಿಂತ ಸಂಘಟನೆಯ ಕಡೆಗೆ ಹೆಣ್ಣು ಮಕ್ಕಳ ದೃಷ್ಟಿಕೋನವಿದ್ದರೆ ಅದು ಸರಿಯಾದ ದೃಷ್ಟಿಕೋನವಾಗಿದ್ದೀತು ಎನ್ನುವ ತಮ್ಮ ನಿಲುವನ್ನು ಮೆಲುದನಿಯಲ್ಲಿ ಸೂಚಿಸುತ್ತಾರೆ.

ಆದರ್ಶ ಕುಟುಂಬದ ಮಾತೂ ಬಂದೇ ಬರುತ್ತದೆ. ಕಾಲದ ಅಂತರದಲ್ಲಿ ಇದನ್ನು ಓದುತ್ತಿರುವಾಗ, ಕೊನೆಗೂ ಆದರ್ಶ ಕುಟುಂಬವೆನ್ನುವುದು, ಅದಕ್ಕಾಗಿ ಹೆಣ್ಣು ತೆರಬೇಕಾದ ಬೆಲೆಯೆನ್ನುವುದು ಅವಳು ತಾನಾಗಿ ಏರುವ ಶಿಲುಬೆಯಲ್ಲವೆ ಎನ್ನುವ ಭಾವವೂ ನಮ್ಮನ್ನು ಕಾಡುತ್ತದೆ. ಸಂವೇದನೆಯ ಬದಲಾವಣೆಯೆನ್ನುವ ಕತ್ತಿಯಂಚಿನ ದಾರಿಯ ಪಯಣಿಗರ ಕಷ್ಟ ಸುಖಗಳ ಮತ್ತು ಏರಿಳಿತಗಳ ಕ್ಷಣಗಳಿವು. ಇಲ್ಲೆಲ್ಲ ಮುಖ್ಯವಾಗಬೇಕಾಗಿರುವುದು ಈ ಪ್ರಸ್ತಾವನೆಯುದ್ದಕ್ಕೂ ನಮಗೆ ಕಾಣಿಸುವ ಸಂಪಾದಕರ ತೆರೆದ ಬಾಗಿಲಿನಂತಹ ಮನಸ್ಥಿತಿ.

ಕೊಡಗಿನ ಗೌರಮ್ಮನವರ ಕಥೆಗಳಿಗಿರುವ ಐತಿಹಾಸಿಕ ಮಹತ್ವವನ್ನು ನಾವು ಇತ್ತೀಚೆಗೆ ಮತ್ತೆ ಮತ್ತೆ ಚರ್ಚಿಸುತ್ತಿರುವ ಹೊತ್ತಿನಲ್ಲಿ ಈ ಸಂಕಲನದ ಪ್ರೇರಣೆಯೇ ಗೌರಮ್ಮನವರಾಗಿರುವುದು, ಗೌರಮ್ಮನವರ ಪ್ರಸ್ತಾಪ ಉದ್ದಕ್ಕೂ ಆಗುವುದರ ಜೊತೆಗೇ ಗೌರಮ್ಮನವರೇ ನಾಯಕಿಯೂ ಮಾದರಿಯೂ ಆಗಿರುವ ಒಂದು ಕಥೆಯೂ ಇರುವುದು ಕಾಕತಾಳೀಯವಲ್ಲ ಎಂದೇ ನನಗನ್ನಿಸುತ್ತದೆ. ‘ಹೆಣ್ಣೆಂಬ ಸಹಾನುಭೂತಿಯಿಂದಲ್ಲ, ನಿಜವಾದ ಗುಣದಿಂದ ಹೆಂಗಸು ಹೆಸರಾಗಬೇಕು’ ಎನ್ನುವ ಗೌರಮ್ಮನವರ ಆಶಯವನ್ನು ಸಂಪಾದಕರು ಸರಿಯಾಗಿಯೇ ‘ಗೌರವದ ಬಯಕೆ’ ಎಂದು ಗುರುತಿಸಿದ್ದಾರೆ.

ಈ ಪ್ರಸ್ತಾವನೆಯ ಇನ್ನೊಂದು ಮಹತ್ವದ ಸಂಗತಿಯೆಂದರೆ ಹೆಣ್ಣಿನ ಅನುಭವಲೋಕವನ್ನು ಸಮಾನಪಾತಳಿಗೆ ತರುವಲ್ಲಿ ಇವರಿಗಿರುವ ನಂಬಿಕೆ. ಹೆಣ್ಣಿನ ಅನುಭವಲೋಕವನ್ನು ಸಾಮಾನ್ಯವಾಗಿ ಶ್ರೇಣೀಕರಣದಲ್ಲಿ ನೋಡುವುದೊಂದು ಮೌಲ್ಯವೇ ಆಗಿ ಇನ್ನೂ ಮುಂದುವರಿದಿರುವ ಈ ಕಾಲಮಾನದ ಹಿನ್ನೆಲೆಯಲ್ಲಿ ನೋಡಿದಾಗಲೂ ‘ಆರತಿ’ಯ ಸಂಪಾದಕರಿಗಿರುವ ಈ ಎಚ್ಚರ ಮತ್ತು ನಂಬಿಕೆ ನಮ್ಮಲ್ಲಿ ಸಂತೋಷ ಮತ್ತು ಸಮಾಧಾನವನ್ನು ಹುಟ್ಟಿಸುತ್ತದೆ. ಬಹಳ ಮುಖ್ಯವಾಗಿ ಇದರಲ್ಲಿ ‘ಹೆಣ್ಣಿನ ಕಣ್ಣಿ’ನ ಪ್ರಸ್ತಾಪವಿದೆ. ಹೆಣ್ಣಿಗೇ ವಿಶಿಷ್ಟವಾದ ಅನುಭವಲೋಕದ ಜೊತೆಗೇ ಒಟ್ಟೂ ಬದುಕನ್ನು ಹೆಣ್ಣಿನ ಕಣ್ಣಿನಿಂದ ನೋಡಬೇಕಾದ ಅಗತ್ಯವನ್ನು ಈ ಸಂಕಲನದ ಮೂಲಕ ಅವರು ಪ್ರತಿಪಾದಿಸುತ್ತಾ ಹೋಗುತ್ತಾರೆ. ಬದುಕಿನ ಸಮಗ್ರ ನೋಟಕ್ಕೆ ಗಂಡು ಹೆಣ್ಣಿನ ಎರಡು ನೋಟಗಳೂ ಎಷ್ಟು ಮುಖ್ಯ ಎನ್ನುವುದನ್ನು ಕುರಿತ ಸಂಪಾದಕರ ಗ್ರಹಿಕೆ ಆ ಕಾಲಕ್ಕಿರಲಿ, ಈ ಕಾಲಕ್ಕೂ ಕ್ರಾಂತಿಕಾರಕವೆಂದೇ ಅನಿಸುತ್ತದೆ.

ಇಷ್ಟಾಗಿ ಕೊಡಗಿನ ಗೌರಮ್ಮನವರು ತಮ್ಮ ಸಂಕಲನಕ್ಕೆ ‘ರಂಗವಲ್ಲಿ’ಯೆಂದು ಹೆಸರು ಕೊಟ್ಟರೆ ಇವರು ‘ಆರತಿ’ ಎನ್ನುವ ಶೀರ್ಷಿಕೆಯನ್ನು ಆರಿಸಿಕೊಂಡಿದ್ದಾರೆ. ರಂಗವಲ್ಲಿ ಶೀರ್ಷಿಕೆಯು ಹೆಣ್ಣಿನ ‘ಸಂಯೋಜಿತ’, ‘ಅಭಿಜಾತ’ ಎನ್ನಬಹುದಾದ ವ್ಯಕ್ತಿತ್ವವನ್ನು ಅದ್ಭುತವಾಗಿ ಹೇಳುತ್ತದೆ. ಕಲೆಯೊಂದಿಗಿನ ಅವಳ ಸಂಬಂಧವನ್ನೂ ಅವಳ ವ್ಯಕ್ತಿತ್ವವು ಹಲವು ಸಮಾನ ಆದ್ಯತೆಯ ಪಾತ್ರಗಳ ಸಂಯೋಜನೆಯಾಗಿಯೇ ಪಡೆಯುವ ಅನನ್ಯ ವ್ಯಕ್ತಿತ್ವದ ಚಹರೆಯನ್ನು ಮೂಲತಃ ಕಲೆ ಮತ್ತು ಪರಿಣತಿಯ ಅಭಿವ್ಯಕ್ತಿಯಾಗಿರುವ ‘ರಂಗೋಲಿ’ ಸಮರ್ಥವಾಗಿ ಅಭಿವ್ಯಕ್ತಿಸುತ್ತದೆ.

ಆದ್ದರಿಂದಲೇ ‘ರಂಗೋಲಿ’ ಕೇವಲ ಶೀರ್ಷಿಕೆ ಮಾತ್ರವಾಗದೆ ಅನನ್ಯತೆಯ ಪ್ರತಿಮೆಯೂ ಆಗುತ್ತದೆ. ‘ಆರತಿ’ ಎನ್ನುವ ಶೀರ್ಷಿಕೆಯು ಅವಳ ವ್ಯಕ್ತಿತ್ವದ ಪ್ರಭೆಯನ್ನು ಹೇಳುತ್ತಲೇ ಅದಕ್ಕಿರುವ ಆಲಂಕಾರಿಕ ವ್ಯಕ್ತಿತ್ವದ ಆಯಾಮವನ್ನೂ ಅದು ಸಹಜ ಎನ್ನುವುದಕ್ಕಿಂತ ಪಿತೃಸಂಸ್ಕೃತಿಯ ಅಪೇಕ್ಷಿತ ನೆಲೆ ಎನ್ನುವುದನ್ನೂ ಸೂಚಿಸುತ್ತದೆಯೆ? ದೀಪಾವಳಿಯ ಸಂದರ್ಭದಲ್ಲಿ ಪ್ರಕಟವಾದ ಈ ಸಂಕಲನಕ್ಕೆ ‘ಆರತಿ’ ಎನ್ನುವ ಹೆಸರು ಸಹಜವಾದ ಆಯ್ಕೆಯೂ ಆಗಿದ್ದಿರಬೇಕು.

ಈ ಸಂಕಲನದ ಕಥೆಗಳಲ್ಲಿ ಒಂದು ಸಾಮಾನ್ಯ ಗುಣವಿದೆ. ಅದನ್ನು ಹೆಣ್ಣು ತಾನು ಯಾರು ಎನ್ನುವ ಪ್ರಶ್ನೆಗೆ ಹುಡುಕಿಕೊಂಡ, ಹುಡುಕಿಕೊಳ್ಳುತ್ತಿರುವ ಉತ್ತರವಾಗಿಯೂ ನೋಡಬಹುದೆನಿಸುತ್ತದೆ. ‘ರಂಗೋಲಿ’ಯ ಪ್ರತಿಮೆಯಲ್ಲಿಯೇ ಇದನ್ನು ಮುಂದುವರಿಸುವುದಾದರೆ, ತನ್ನ ಸಂಯೋಜಿತ ವ್ಯಕ್ತಿತ್ವದ ಮತ್ತು ಪಾತ್ರಗಳ ಸಂಯೋಜನೆಯಲ್ಲಿ ತನ್ನನ್ನು ತಾನು ಹುಡುಕಿ ಕಟ್ಟಿಕೊಳ್ಳುವ ಮೊದಲ ಮತ್ತು ಆತ್ಯಂತಿಕ ಪ್ರಯತ್ನದಲ್ಲಿ ಇಲ್ಲಿನ ಕಥೆಗಳಿವೆ. ಗಂಡನ್ನೂ ಮೌಲ್ಯವ್ಯವಸ್ಥೆಯನ್ನೂ ‘ಅನುಸರಿಸುವುದೇ’ ಜೀವನದ ದಾರಿಯಾಗಿರುವ ಹೆಣ್ಣು ಈ ಎಲ್ಲದರ ಒಳಗೂ ಆಚೆಗೂ ಎಲ್ಲೋ ಅಸ್ಪಷ್ಟವಾಗಿರುವ ತನ್ನ ರೂಪು ರೇಖೆಗಳನ್ನು ನಿಧಾನವಾಗಿ ಗುರುತಿಸಿಕೊಳ್ಳುತ್ತಾ ಚುಕ್ಕೆಯಿಂದ ಚುಕ್ಕೆಯನ್ನು ಸರಳ ಮತ್ತು ವಕ್ರ ರೇಖೆಗಳ ಮೂಲಕ ಸೇರಿಸಿಕೊಳ್ಳುತ್ತಾ ತನ್ನನ್ನು ತಾನೇ ನಿರ್ಮಿಸಿಕೊಳ್ಳುತ್ತಾ ಹೋಗುವ ಸ್ವ–ವ್ಯಕ್ತಿಚಿತ್ರದ ಹಾಗಿವೆ ಇಲ್ಲಿನ ಬಹುತೇಕ ಕಥೆಗಳು.

ಹೆಚ್. ಸುಮಿತ್ರಮ್ಮ, ವಾಣಿ, ಕುಸುಮ ದೇಶಪಾಂಡೆ. ಗೀತಾ ಕುಲಕರ್ಣಿ, ರತ್ನಾಬಾಯಿ, ವಸಂತಾದೇವಿ, ಸರಸ್ವತಿಬಾಯಿ, ಶಾಂತಾದೇವಿ ಮತ್ತು ದೇವಾಂಗನಾಶಾಸ್ತ್ರಿ ಅವರುಗಳ ಕಥೆಗಳು ಈ ಸಂಕಲನದಲ್ಲಿವೆ. ಕರ್ನಾಟಕದ ಎಲ ಭಾಗಗಳ ಪ್ರತಿನಿಧಿಗಳು ಈ ಸಂಕಲನದಲ್ಲಿರುವುದು ಮತ್ತೊಂದು ವಿಶೇಷ. ಎಲ್ಲ ಕಥೆಗಳನ್ನೂ ಚರ್ಚಿಸುವುದು ಅಸಾಧ್ಯವಾದುದರಿಂದ, ವಾಣಿಯವರು ಬರೆದ ‘ಕನಸೋ ನೆನಸೋ’ ಕಥೆಯನ್ನು ಮಾತ್ರ ಸಂಕ್ಷಿಪ್ತವಾಗಿ ಚರ್ಚಿಸುತ್ತೇನೆ. ಇಬ್ಬರು ಕತೆಗಾರ್ತಿಯರ ನಡುವಿನ ಸಂವಾದವಾಗಿ ಈ ಕಥೆ ಬೆಳೆಯುತ್ತಾ ಹೋಗುತ್ತದೆ.

ಹೆಣ್ಣು ಹೊರ ಜಗತ್ತಿಗೆ ನಿರ್ಭಿಡೆಯಿಂದ, ನಿಸ್ಸಂಕೋಚವಾಗಿ ತೆರೆದುಕೊಳ್ಳುವ ಅಗತ್ಯವನ್ನು ಏಕಕಾಲಕ್ಕೆ ತನಗೂ ಲೋಕಕ್ಕೂ ಕಾಣಿಸಿಕೊಡುವ ಆಶಯದ ಈ ಕಥೆ, ಬೃಂದಾವನವೋ ಕೊಡಗೋ ಎಲ್ಲಾದರಾಗಲೀ ಹೆಣ್ಣು ಲೋಕದೊಂದಿಗೆ ಸಹಜವಾಗಿ ಬೆರೆಯುತ್ತಾ ಆನಂದಿಸುತ್ತಾ ಹೋಗಬೇಕು ಎನ್ನುವುದನ್ನು ಒಬ್ಬರು ಇನ್ನೊಬ್ಬರಿಗೆ ಹೇಳುತ್ತಾ ಹೋಗುವ ತಂತ್ರದಲ್ಲಿ ನಿರೂಪಣೆಗೊಂಡಿದೆ. ಇಬ್ಬರಿಗೂ ಗೊತ್ತಿರುವ, ಇಬ್ಬರಿಗೂ ಆಸೆಯಿರುವ ಆದರೆ ಏನೋ ಒಂದು, ಎಲ್ಲೋ ಒಂದು ಕಡೆ ತಮ್ಮನ್ನು ಮೂರನೆಯ ಕಣ್ಣಿನ ಹಾಗೆ ನಿಯಂತ್ರಿಸುತ್ತಾ ಹೋಗುತ್ತಿದೆ ಎನ್ನುವ ಸತ್ಯ ಮತ್ತು ಭ್ರಮೆ ಎರಡರಿಂದಲೂ ಪಾರಾಗಿ ಬದುಕಿನ ಅನಂತತೆಯ ಕಡೆಗೆ ‘ಲಘಿಮಾ ಕೌಶಲ’ದಿಂದ ಜಿಗಿಯುವ ಹಂಬಲವನ್ನು ಈ ಕಥೆ ಹೆಣ್ಣಿನ ದೈನಿಕದ್ದೋ ಎನ್ನುವ ಧಾಟಿಯಲ್ಲಿಯೂ ಮಿಕ್ಕು ಮೀರಿ ಹೋಗುವ ಉತ್ಕಟತೆಯಲ್ಲಿಯೂ ಸಾಧಿಸುತ್ತದೆ. ‘ಬೆಳದಿಂಗಳಿನಲ್ಲಿ ಈಜುವುದನ್ನು ಕಲಿಯಬೇಕು ನಾವು’ ಎನ್ನುವುದಂತೂ ಇದರ ಪರಮೋತ್ಕರ್ಷದ ಹಾಗೆ ಕಾಣಿಸುತ್ತದೆ. ಸ್ವಾತಂತ್ರ್ಯಪೂರ್ವದ ಈ ಸಂಕಲನ ಹೆಣ್ಣಿನ ಅಭಿವ್ಯಕ್ತಿಯ ಸ್ವಾತಂತ್ರ್ಯೋತ್ಸವದ ಉದ್ಘಾಟನೆಯಂತೆ ಕಾಣಿಸುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು
ಅರಿವು ಸೋಂಕಿದ ಬಳಿಕ... ಕೃತಜ್ಞತೆಯ ಕಣ್ಣೀರು

ಅರಿವು ಸೋಂಕಿದ ಬಳಿಕ... ಕೃತಜ್ಞತೆಯ ಕಣ್ಣೀರು

27 Dec, 2015
ಸಾಲುಗಳ ನಡುವೆ ಓದಿದರೆ...

ಸಾಲುಗಳ ನಡುವೆ ಓದಿದರೆ...

29 Nov, 2015
ಕಾವ್ಯ: ಬಿಡುಗಡೆಯ ಬಾಗಿಲು

ಕಾವ್ಯ: ಬಿಡುಗಡೆಯ ಬಾಗಿಲು

15 Nov, 2015
ಅವಳ ಕಾವ್ಯ, ಅವಳ ಭಾಷೆ

ಅವಳ ಕಾವ್ಯ, ಅವಳ ಭಾಷೆ

25 Oct, 2015

ಸ್ತ್ರೀವಾದ ಎನ್ನುವ ಲೋಕಮೀಮಾಂಸೆ

ನಾಗರಿಕತೆಯು ಸೃಷ್ಟಿಸಿರುವ ಯಾವುದೇ ತಾತ್ವಿಕತೆಯೂ ಅಂತಿಮವಾಗಿ ಉದ್ದೇಶಿಸಿರುವುದು ಆತ್ಮಗೌರವ, ಸಮಾನಪಾತಳಿ ಮತ್ತು ವಿಕೇಂದ್ರಿಕರಣವನ್ನು ಎಂದು ಸ್ಥೂಲಚೌಕಟ್ಟಿನಲ್ಲಿ ಗುರುತಿಸಲು ಸಾಧ್ಯವಿದೆಯಷ್ಟೆ.

11 Oct, 2015