ಪಕೋರಿ ಲಾಲ್‌ಗಳಿಲ್ಲದ ಪಂಚಾಯಿತಿಗಳು

ನಾನಿನ್ನೂ ಯುವಕನಾಗಿದ್ದಿದ್ದರೆ, ಇನ್ನಷ್ಟು ಧೈರ್ಯವೂ ಪಾಂಡಿತ್ಯವೂ ಇದ್ದಿದ್ದರೆ ಈ ಸಾಲುಗಳನ್ನು ನಾನೇ ಬರೆಯುತ್ತಿದ್ದೆ. ಇವುಗಳಲ್ಲಿ ಯಾವೊಂದೂ ನಾನಾಗದೇ ಇರುವುದರಿಂದ ಈ ಮೂರೂ ಆಗಿರುವ ಒಬ್ಬರ ಮಾತುಗಳನ್ನು ಎರವಲು ಪಡೆಯುತ್ತಿದ್ದೇನೆ. ತನ್ನ ಹಿಂದೆ ಅಡಗಿ ಕುಳಿತು ಭಾರತದ ಅತ್ಯುನ್ನತ ನ್ಯಾಯಾಲಯದ ವಿರುದ್ಧ ವಾದಕ್ಕಿಳಿಯುವ ನನ್ನ ವರ್ತನೆಯನ್ನು ಆಕೆ ಅನ್ಯಥಾ ಭಾವಿಸಲಾರರು ಎಂಬ ವಿಶ್ವಾಸ ನನಗಿದೆ.

ನಾನಿನ್ನೂ ಯುವಕನಾಗಿದ್ದಿದ್ದರೆ, ಇನ್ನಷ್ಟು ಧೈರ್ಯವೂ ಪಾಂಡಿತ್ಯವೂ ಇದ್ದಿದ್ದರೆ ಈ ಸಾಲುಗಳನ್ನು ನಾನೇ ಬರೆಯುತ್ತಿದ್ದೆ. ಇವುಗಳಲ್ಲಿ ಯಾವೊಂದೂ ನಾನಾಗದೇ ಇರುವುದರಿಂದ ಈ ಮೂರೂ ಆಗಿರುವ ಒಬ್ಬರ ಮಾತುಗಳನ್ನು ಎರವಲು ಪಡೆಯುತ್ತಿದ್ದೇನೆ. ತನ್ನ ಹಿಂದೆ ಅಡಗಿ ಕುಳಿತು ಭಾರತದ ಅತ್ಯುನ್ನತ ನ್ಯಾಯಾಲಯದ ವಿರುದ್ಧ ವಾದಕ್ಕಿಳಿಯುವ ನನ್ನ ವರ್ತನೆಯನ್ನು ಆಕೆ ಅನ್ಯಥಾ ಭಾವಿಸಲಾರರು ಎಂಬ ವಿಶ್ವಾಸ ನನಗಿದೆ.

ಕಳೆದ ಗುರುವಾರ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಹರಿಯಾಣ ರಾಜ್ಯ ಪಂಚಾಯತ್ ರಾಜ್ ಚುನಾವಣೆಗಳಿಗೆ ಸಂಬಂಧಿಸಿದಂತೆ ರೂಪಿಸಿದ ಕಾನೂನೊಂದನ್ನು ಎತ್ತಿ ಹಿಡಿಯಿತು. ಈ ಕಾನೂನು ಪಂಚಾಯತ್ ಚುನಾವಣೆಗಳಿಗೆ ಸ್ಪರ್ಧಿಸುವುದಕ್ಕೆ ಸಂಕೀರ್ಣ ಎನ್ನಬಹುದಾದ (ನಗರವಾಸಿ ಗಣ್ಯರ ಮಧ್ಯೆ ಜನಪ್ರಿಯವೂ ಆದ) ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅರ್ಹತೆಯನ್ನು ನಿಗದಿ ಪಡಿಸಿದೆ.

ಮಾನ್ಯ ನ್ಯಾಯಮೂರ್ತಿಗಳ ತೀರ್ಪಿನ ತಿರುಳು ಇಂತಿದೆ: ದೇಶದ ಎಲ್ಲಾ ಪೌರರಿಗೆ ಇರುವ ಸಾರ್ವತ್ರಿಕ ಮತದಾನದ ಹಕ್ಕು ಮೂಲಭೂತ ಹಕ್ಕುಗಳಲ್ಲಿ ಒಂದು. ಇದರ ಉಲ್ಲಂಘನೆ ಕೂಡದು. ಆದರೆ ಈ ನಿಯಮ ನಿರ್ದಿಷ್ಟ ಜನಪ್ರತಿನಿಧಿ ಸಭೆ ಆಯ್ಕೆಯಾಗಬಯಸುವವರಿಗೆ ಅನ್ವಯಿಸುವುದಿಲ್ಲ.

ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಇದೊಂದು ವಿಶೇಷ ಸವಲತ್ತಿನಂಥದ್ದು (ಇದು ನನ್ನದೇ ಆಯ್ಕೆಯ ಪದ) ಮತ್ತು ಶಾಸನ ಸಭೆಗಳು ಈ ವಿಶೇಷ ಸವಲತ್ತನ್ನು ಯಾರು ಪಡೆಯಬಹುದು ಎಂಬುದನ್ನು ನಿರ್ಧರಿಸಬಹುದು. ಈ ಪ್ರಕರಣದಲ್ಲಿ ಅರ್ಹತೆ ಎಂಬುದು ಮೂಲಭೂತ ಮಟ್ಟದ ಶಿಕ್ಷಣ ಅಥವಾ ಸಾಕ್ಷರತೆ, ಕೆಲ ಷರತ್ತುಗಳಿಗೆ ಅನುಗುಣವಾದ ಋಣಭಾರರಾಹಿತ್ಯ ಮತ್ತು ಶುಚಿತ್ವಕ್ಕೆ ಸಂಬಂಧಿಸಿದ ಕೆಲವು ಸಾಮಾಜಿಕ ಕಟ್ಟುಪಾಡುಗಳಿಗೆ ಸೀಮಿತವಾಗಿದೆ. ಶುಚಿತ್ವಕ್ಕೆ ಸಂಬಂಧಿಸಿದ ಕಟ್ಟುಪಾಡುಗಳು ಮನೆಯಲ್ಲಿ ಶೌಚಾಲಯವಿದೆಯೇ ಅಥವಾ ಬಯಲು ಶೌಚಾಲಯವನ್ನು ಬಳಸಲಾಗುತ್ತಿದೆಯೇ ಎಂಬಂಥವನ್ನು ಒಳಗೊಂಡಿದೆ.

ಭಾರತದಲ್ಲಿ ಅನಿವಾರ್ಯತೆ ಮತ್ತು ಸ್ವಂತ ಆಯ್ಕೆಯ ಕಾರಣಕ್ಕಾಗಿ ಶೇಕಡಾ 60ರಷ್ಟು ಮಂದಿ ಬಯಲು ಶೌಚಾಲಯವನ್ನೇ ಬಳಸುತ್ತಾರೆಂಬ ವಾಸ್ತವವನ್ನೂ ನಾವಿಲ್ಲಿ ಗಮನಿಸಬೇಕು. ನ್ಯಾಯಾಧೀಶರು ಈ ತೀರ್ಪಿನಲ್ಲಿ ಮನಗಾಣಿಸುವಂತೆ ಕಾಣುವ, ಆದರೆ ತಗಾದೆ ತೆಗೆಯಬಹುದಾದ ಸಾಲೊಂದನ್ನು ಬಳಸುತ್ತಾರೆ: ‘ಶಿಕ್ಷಣ ಮನುಷ್ಯನಿಗೆ ಸರಿ ಮತ್ತು ತಪ್ಪು, ಒಳಿತು ಅಥವಾ ಕೆಡುಕಿನ ನಡುವಣ ವ್ಯತ್ಯಾಸವನ್ನು ಗುರುತಿಸುವುದಕ್ಕೆ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ’

ಶಿಕ್ಷಣ ಎಂಬುದರ ವ್ಯಾಖ್ಯೆ ಏನು? ಪದವಿಯೇ, ಐ.ಕ್ಯು.ಪರೀಕ್ಷೆಯೇ ಅಥವಾ ಪಂಚಾಯಿತಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗಾಗಿ ರೂಪಿಸಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಕ್ಯಾಟ್) ಸಮಾನವಾದ ಪರೀಕ್ಷೆಯೇ? ಪಾಂಡಿತ್ಯ ಮತ್ತು ಆಡಳಿತದ ಗುಣಮಟ್ಟದ ಜೊತೆಗಿನ ಸಂಬಂಧ ಸಂಕೀರ್ಣವಾದುದು. ಸುಪ್ರೀಂ ಕೋರ್ಟ್‌ನ ತೀರ್ಪು ಬಿಜೆಪಿ ಸರ್ಕಾರವೊಂದು ರೂಪಿಸಿದ ಕಾನೂನನ್ನು ಎತ್ತಿಹಿಡಿದಿದೆ.

ಬಿಜೆಪಿಯನ್ನು ಬೆಂಬಲಿಸುವ ‘ಸುಶಿಕ್ಷಿತ’ ನಗರವಾಸಿ ಗಣ್ಯವರ್ಗದ ನಂಬಿಕೆಯಂತೆ ಡಾ.ಮನಮೋಹನ್ ಸಿಂಗ್ ಭಾರತದ ಇತಿಹಾಸದಲ್ಲೇ ಅತಿ ಕೆಟ್ಟ ಸರ್ಕಾರವೊಂದನ್ನು ನಡೆಸಿದರು. ಮತ್ತು ಈಗಿನದ್ದು ಅತ್ಯುತ್ತಮ ಸರ್ಕಾರ. ಈ ನಂಬಿಕೆ ಅಥವಾ ವಾದ ಔಪಚಾರಿಕ ಶಿಕ್ಷಣ/ಜ್ಞಾನದ ತರ್ಕಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎಂಬ ಪ್ರಶ್ನೆ ಇಲ್ಲಿದೆಯಲ್ಲವೇ? ಆದರೆ ನಾವು ಅಲ್ಲಿಯ ತನಕ ಹೋಗಲೇ ಬೇಕಾಗಿಲ್ಲ.

‘ಸರಿ ಮತ್ತು ತಪ್ಪು, ಒಳಿತು ಅಥವಾ ಕೆಡುಕುಗಳ ನಡುವಣ ವ್ಯತ್ಯಾಸವನ್ನು ಗುರುತಿಸುವಷ್ಟು ಶಕ್ತಿ ಪಡೆದಿರುವ’ ಶಿಕ್ಷಣ ಯಾರಿಗಿದೆ ಎಂಬುದನ್ನು ಯಾರು ಗುರುತಿಸುವುದು? ಅತ್ಯಂತ ಸಾಪೇಕ್ಷವಾದ ಈ ವಿಚಾರದಲ್ಲಿ ಕೆಳಗಿನವರ ಕುರಿತು ಮೇಲಿನವರು ನಿರ್ಧಾರ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯ ವಿಧಾನ ಸಭೆ ಪಂಚಾಯತ್ ಸದಸ್ಯರ ಕನಿಷ್ಠ ವಿದ್ಯಾರ್ಹತೆಯ ಕುರಿತಂತೆ ನಿಯಮವೊಂದನ್ನು ರೂಪಿಸಿದೆ. ವಿಪರ್ಯಾಸವೆಂದರೆ ವಿಧಾನಸಭಾ ಸದಸ್ಯರಿಗೆ ಕನಿಷ್ಠ ವಿದ್ಯಾರ್ಹತೆಯ ನಿಯಮಗಳಿಲ್ಲ. ನೀವೀಗ ಹರಿಯಾಣ ರಾಜ್ಯದಲ್ಲಿರುವ ಶೇಕಡಾ 25ರಷ್ಟು ಅನಕ್ಷರಸ್ಥರಲ್ಲಿ ಒಬ್ಬರಾಗಿದ್ದರೆ ವಿಧಾನಸಭೆಗೆ ಆಯ್ಕೆಯಾಗಬಹುದು.

ಅಷ್ಟೇ ಅಲ್ಲ ಪಂಚಾಯಿತಿಗಳಲ್ಲಿ ಇರುವ ನಿಮ್ಮಂಥವರನ್ನು ಚುನಾವಣೆಗೆ ನಿಲ್ಲಲು ಅರ್ಹರಲ್ಲ ಎಂಬ ಕಾನೂನು ರೂಪಿಸಬಹುದು. ಇದು ಲೋಕಸಭೆಗೂ ಅನ್ವಯಿಸುತ್ತದೆ. ಲೋಕಸಭೆಯ 543 ಸದಸ್ಯರಲ್ಲಿ 16 ಮಂದಿ ತಾವು ಮೆಟ್ರಿಕ್ಯುಲೇಶನ್ ತನಕವೂ ಶಿಕ್ಷಣ ಪಡೆದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಇದು ಹರಿಯಾಣದ ವಿಧಾನಸಭೆ ಪಂಚಾಯಿತಿಗಳ ಸದಸ್ಯತ್ವಕ್ಕೆ ನಿಗದಿ ಪಡಿಸಿರುವ ಕನಿಷ್ಠ ಅರ್ಹತೆಗಿಂತ ಕಡಿಮೆ.

ನೊಬೆಲ್ ಮತ್ತು ಮ್ಯಾಗ್ಸಸೇ ಪ್ರಶಸ್ತಿ ವಿಜೇತರನ್ನು ಜನಲೋಕಪಾಲ ತಂಡಕ್ಕೆ ನಾಮನಿರ್ದೇಶನ ಮಾಡಬೇಕೆಂಬ ಅಣ್ಣ ಹಜಾರೆ ಆಂದೋಲನದ ನಿಲುವನ್ನೇ ನಾವು ಪ್ರಶ್ನಿಸಿದ್ದೆವು. ಈಗಾಗಲೇ ಪ್ರಾತಿನಿಧ್ಯದ ಕೊರತೆಯಿಂದ ಬಳಲುತ್ತಿರುವ ಬಹುದೊಡ್ಡ ದುರ್ಬಲ ವರ್ಗವನ್ನು ಮತ್ತಷ್ಟು ದೂರಗೊಳಿಸಿದಂತೆ ಆಗುತ್ತದೆ ಎಂಬುದು ಈ ನಿಲುವಿನ ಹಿಂದಿನ ತರ್ಕವಾಗಿತ್ತು. ಸಂಯುಕ್ತ ಜನತಾದಳದ ಶರದ್ ಯಾದವ್ ಅವರು ಸಂಸದೀಯ ಪ್ರಜಾಪ್ರಭುತ್ವವನ್ನು ಸಮರ್ಥಿಸಿಕೊಂಡು ಮಾಡಿದ ಭಾವಪೂರ್ಣ ಭಾಷಣ ನನಗಿನ್ನೂ ನೆನಪಿದೆ. ನಮ್ಮ ಪ್ರಜಾತಾಂತ್ರಿಕ ಸಂಸ್ಥೆಗಳಿಲ್ಲದೇ ಹೋಗಿದ್ದರೆ ಪಕೋರಿ ಲಾಲ್ ತರಹದವರು ಇಲ್ಲಿ ಕುಳಿತಿರಲು ಸಾಧ್ಯವಿತ್ತೇ? ಎಂದು ಅವರು ಪ್ರಶ್ನಿಸಿದ್ದರು. ಸಮಾಜವಾದಿ ಪಕ್ಷದ ಪಕೋರಿ ಲಾಲ್ ಉತ್ತರ ಪ್ರದೇಶದ ರಾಬರ್ಟ್ಸ್‌ಗನಿ ಕ್ಷೇತ್ರದ ಸಂಸದರು. ಇವರು ಮೆಟ್ರಿಕ್ಯುಲೇಷನ್‌ಗಿಂತ ಕಡಿಮೆ ಶಿಕ್ಷಣ ಪಡೆದವರು.

ಇದೊಂದು ಸುಪ್ರೀಂ ಕೋರ್ಟ್ ತೀರ್ಪಾಗಿರುವುದರಿಂದ ಇದರ ಪರಿಣಾಮ ಕೆಳಗಿನವರ ಮೇಲಾದಂತೆ ಮೇಲಿನವರ ಮೇಲೂ ಆಗಬಹುದಾದರೆ ಅದರ ಫಲಿತಾಂಶ ಹೇಗಿರಬಹುದು. ಪಕೋರಿ ಲಾಲ್‌ಗಳು ಇಲ್ಲವಾಗುತ್ತಾರೆಯೇ? ಅತ್ಯುತ್ತಮ ಶಿಕ್ಷಣ ಪಡೆದವರು ನಮ್ಮನ್ನು ಪ್ರತಿನಿಧಿಸಬೇಕು ಎಂಬುದು ಪ್ರಶಂಸನೀಯ ಕಲ್ಪನೆ. ಆದರೆ ಪ್ರಜಾಪ್ರಭುತ್ವ ಎಂಬುದು ಮೊದಲೇ ಸರ್ವಸಮರ್ಪಕವಾಗಿ ವಿನ್ಯಾಸಗೊಳಿಸಿದ ವ್ಯವಸ್ಥೆಯಲ್ಲ, ಸರ್ವ ಸಮರ್ಪಕ ಸ್ಥಿತಿಗಾಗಿ ನಿರಂತರವಾಗಿ ಪ್ರಯತ್ನ ನಡೆಸಬೇಕಾದ ವ್ಯವಸ್ಥೆ.

ಬ್ರಿಟಿಷರು 1935ರಲ್ಲಿ ಭಾರತದಲ್ಲಿ ವಯಸ್ಕರಿಗೆ ಮತದಾನದ ಹಕ್ಕನ್ನು ನೀಡಿದಾಗ ಅದಕ್ಕೆ ಕೆಲವು ಕನಿಷ್ಠ ಅರ್ಹತೆಗಳನ್ನು ನಿಗದಿ ಪಡಿಸಿದರು. ಪರಿಣಾಮವಾಗಿ ಒಟ್ಟು ವಯಸ್ಕರಲ್ಲಿ ಕೇವಲ ಶೇಕಡಾ 20ರಷ್ಟು ಅಂದರೆ 3.5 ಕೋಟಿ ಮಂದಿಯಷ್ಟೇ ಮತದಾನದ ಹಕ್ಕು ಪಡೆದರು. ಅದರಲ್ಲಿ ಆರನೇ ಒಂದರಷ್ಟು ಮಾತ್ರ ಮಹಿಳೆಯರಿದ್ದರು. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನ ಈ ಎಲ್ಲಾ ಪರಿಕಲ್ಪನೆಗಳನ್ನು ಮೂಲೆಗೆಸೆಯಿತು. ಅದರಿಂದ ಆರೂವರೆ ದಶಕಗಳ ಅವಧಿಯ ಅವಿಚ್ಛಿನ್ನ ಪ್ರಜಾಪ್ರಭುತ್ವ ನಮ್ಮದಾಗಿದೆ. ಹೌದು, ಕೆಲವು ಮುಜುಗರಕ್ಕೀಡು ಮಾಡುವಂಥ ಅಸಮರ್ಪಕತೆಗಳಿರಬಹುದು. ಆದರೆ ಪ್ರಜಾಪ್ರಭುತ್ವ ಮುಕ್ಕಾಗಿಲ್ಲ.

ಚುನಾಯಿತರಾಗುವವರಿಗೆ ಕನಿಷ್ಠ ಅರ್ಹತೆಗಳಿರಬೇಕೆಂಬ ‘ಗಣ್ಯ ಮನಃಸ್ಥಿತಿ’ಯನ್ನು ಪಾಕಿಸ್ತಾನ ಅನುಸರಿಸಿತು. ಅದರಿಂದ ಏನೇನು ಒಳ್ಳೆಯದಾಯಿತೆಂಬುದು ನಮ್ಮ ಕಣ್ಣೆದುರೇ ಇದೆ. ಈ ಹಗಲುಗನಸನ್ನು ಪಾಕಿಸ್ತಾನದ ಗಣ್ಯರು ಈಗಲೂ ಮತ್ತೆ ಮತ್ತೆ ಕಾಣುತ್ತಲೇ ಇದ್ದಾರೆ.

2002ರ ಚುನಾವಣೆಯ ಸಂದರ್ಭದಲ್ಲಿ  ಸ್ಪರ್ಧಿಸುವವರಿಗೆ ಕನಿಷ್ಠ ಪದವಿ ಇರಬೇಕೆಂಬ ನಿಯಮವನ್ನು ಪರ್ವೇಜ್ ಮುಷರ್ರಫ್ ಜಾರಿಗೆ ತಂದರು. ಆಮೇಲೆ ಧಾರ್ಮಿಕ ನಾಯಕರ ಒತ್ತಡಕ್ಕೆ ಮಣಿದು ‘ಮದ್ರಸಾ ಸನ್ನದ್’ (ಡಿಪ್ಲಮೊ)ಗಳೂ ಪದವಿಗೆ ಸಮಾನ ಎಂದು ನಿಯಮವನ್ನು ಬದಲಾಯಿಸಿದರು. ಮುಷರ್ರಫ್ ಪದಚ್ಯುತಿಯ ನಂತರ ನಡೆದ ನಿಜವಾದ ಚುನಾವಣೆಗಳಲ್ಲಿ ಈ ಎಲ್ಲವನ್ನೂ ರದ್ದು ಮಾಡಲಾಯಿತು. ಬ್ಯಾಂಕುಗಳ ಸಾಲ ಮರು ಪಾವತಿ ಮಾಡದೇ ಇರುವವರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವ ಪ್ರಯೋಗವನ್ನೂ ಪಾಕಿಸ್ತಾನ ಮಾಡಿತ್ತು. ಇದರಿಂದ ಅದ್ಭುತ ಫಲಿತಾಂಶಗಳೇನೂ ಬರಲಿಲ್ಲ.

ಹರಿಯಾಣ ಸರ್ಕಾರ ರೂಪಿಸಿದ ಕಾನೂನನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ನ ತೀರ್ಪು ಸಹಕಾರ ಸಂಘಗಳಿಂದ ಪಡೆದಿರುವ ಸಾಲ ಮರುಪಾವತಿಸದವರು ಮತ್ತು ವಿದ್ಯುತ್ ಬಿಲ್ ಪಾವತಿಸದವರನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಿರುವುದನ್ನು ಉಲ್ಲೇಖಿಸುತ್ತಾ ಎಲ್ಲಾ ಚುನಾವಣೆಗಳೂ ದುಬಾರಿ ಖರ್ಚಿನ ಸಂಗತಿಗಳು.

ತನ್ನ ಎಲ್ಲಾ ಸಾಲಗಳನ್ನು ತೀರಿಸಿದ ಬಳಿಕವಷ್ಟೇ ಜನಪ್ರತಿನಿಧಿಯಾಗುವ ಕುರಿತು ಆಲೋಚಿಸಿದರೆ ಸಾಕು ಎಂದಿದೆ. ನೈತಿಕವಾಗಿ ಇದೊಂದು ಒಳ್ಳೆಯ ತರ್ಕ. ಆದರೆ ಇದನ್ನು ಭಾರೀ ಪ್ರಮಾಣದ ಸಾಲ ಮರುಪಾವತಿಸಬೇಕಾಗಿರುವ ವಿಜಯ್ ಮಲ್ಯ ಅವರಿಗೆ ಮೊದಲು ಅನ್ವಯಿಸಬೇಕೋ ಅಥವಾ ಸಾಲ ಪಡೆದು ಖರೀದಿಸಿದ ಜಾನುವಾರು ಅಂತ್ರಾಕ್ಸ್‌ನಿಂದ ಸತ್ತು ಹೋದದ್ದರಿಂದ ಸಾಲ ಮರುಪಾವತಿಸಲಾಗದ ದಲಿತ ಮಹಿಳೆಗೆ ಅನ್ವಯಿಸಬೇಕೋ?

ಹರಿಯಾಣದ ಜನತೆಯನ್ನೇ ಸೋಲಿಸಿದ ರಾಜಕಾರಣಿಗಳು ಹರಿಯಾಣ್ವಿಗಳಿಗೆ ಮಾಡಿದ ಅವಮಾನ ಈ ಕಾನೂನು. ತಲಾ ಆದಾಯವನ್ನಷ್ಟೇ ಪರಿಗಣಿಸುವುದಾದರೆ ಇದು ಭಾರತದ ಅತಿ ದೊಡ್ಡ ಶ್ರೀಮಂತ ರಾಜ್ಯ. ಆದರೆ ಸಾಮಾಜಿಕ ಅಭಿವೃದ್ಧಿಯ ಸೂಚ್ಯಂಕಗಳೆಲ್ಲವೂ ಅವಮಾನಕಾರಿ ಎನ್ನುವಷ್ಟು ಕೆಳ ಮಟ್ಟದಲ್ಲಿವೆ. ಇಲ್ಲಿನ ಲಿಂಗಾನುಪಾತ ಕೇವಲ 879. ಸಾಕ್ಷರತೆಯ ಮಟ್ಟ ಅದರಲ್ಲೂ ವಿಶೇಷವಾಗಿ ಮಹಿಳೆಯ ಸಾಕ್ಷರತೆಯ ಮಟ್ಟವಂತೂ ಪಾತಾಳದಲ್ಲಿದೆ.

ಹೆಣ್ಣು ಭ್ರೂಣ ಹತ್ಯೆ ಬಹಳ ವ್ಯಾಪಕವಾಗಿರುವ ರಾಜ್ಯಗಳಲ್ಲಿ ಹರಿಯಾಣಕ್ಕೆ ಮುಖ್ಯ ಸ್ಥಾನವಿದೆ. ಇಲ್ಲಿ ಆಡಳಿತ ನಡೆಸುವುದು ಖಾಫ್ ಪಂಚಾಯತ್‌ಗಳು. ಇವುಗಳನ್ನು ಪ್ರಶ್ನಿಸುವ ಧೈರ್ಯ ಯಾವ ಚುನಾಯಿತ ಪ್ರತಿನಿಧಿಗೂ ಇಲ್ಲ. ಬೂದಿ ಬಾಬಾಗಳಿಲ್ಲಿ ತಮ್ಮನ್ನು ತಾವೇ ದೇವರೆಂದು ಘೋಷಿಸಿಕೊಂಡು ತಮ್ಮ ಬೃಹತ್ ಸಾಮ್ರಾಜ್ಯಗಳನ್ನು ನಿರ್ವಹಿಸುತ್ತಾರೆ. ಆಗೀಗ ಈ ನಿರ್ವಹಣೆ ಜೈಲಿನಿಂದಲೂ ನಡೆಯುವುದುಂಟು. ಹಿಸ್ಸಾರ್‌ನ ರಾಮ್‌ಪಾಲ್ ಮಹಾರಾಜ್ ಇದಕ್ಕೊಂದು ಉದಾಹರಣೆ ಮಾತ್ರ.

ಮೂಲಭೂತ ಶಿಕ್ಷಣ ಮತ್ತು ಶುಚಿತ್ವವನ್ನು ನೀಡಲಾಗದ ಶ್ರೀಮಂತ ರಾಜ್ಯವೊಂದು ಶಿಕ್ಷಣವಿಲ್ಲ, ಶುಚಿತ್ವವಿಲ್ಲ ಎಂಬ ಕಾರಣಕ್ಕೆ  ಜನರನ್ನು ಚುನಾವಣೆಗಳಿಂದ ದೂರವಿಡುವ ವಿಪರ್ಯಾಸ ಇಲ್ಲಿನದ್ದು. ನನಗೆ ದಿಲೀಪ್ ಕುಮಾರ್ ಅಭಿನಯದ ‘ಸಗೀನಾ’ ಚಿತ್ರದ ‘ಸಾಲಾ ಮೇ ತೋ ಸಾಹಿಬ್ ಬನ್‌ಗಯಾ’ ಹಾಡು ಮತ್ತೆ ನೆನಪಾಗುತ್ತಿದೆ.

ಈ ಹಾಡಿನ ಒಂದು ಸಾಲು ಹೀಗಿದೆ ‘ತುಮ್ ಲಂಗೋಟಿ ವಾಲ ನಾ ಬದ್ಲಾ ಹೈ, ನಾ ಬದ್ಲೇಗಾ, ತುಮ್ ಸಬ್ ಕಾಲಾ ಲೋಗೇ ಕಿ ಕಿಸ್ಮತ್ ಹಮ್ ಸಾಲಾ ಬದ್ಲೇಗಾ’ (ಲಂಗೋಟಿಯಲ್ಲಿರುವ ನೀವು ಬದಲಾಗಿಲ್ಲ. ಬದಲಾಗುವುದೂ ಇಲ್ಲ. ಆದರೆ ಈಗ ನಾನು ನಿಮ್ಮ ಯೋಗವನ್ನು ಹೇಗೆ ಬದಲಾಯಿಸುತ್ತೇನೆ ನೋಡಿ). ಒಂದು ತರ್ಕಕ್ಕೆ ಸಂಪೂರ್ಣ ಮಾರುಹೋಗುವುದರ ಅಪಾಯಗಳ ಅರಿವು ನನಗೂ ಇದೆ. ಮಾನ್ಯ ನ್ಯಾಯಮೂರ್ತಿಗಳೇ ತಾವು ಒಳ್ಳೆಯ ಉದ್ದೇಶದಿಂದಲೇ ಸಗೀನಾದ ಹಾಡಿನಲ್ಲಿ ಧ್ವನಿಸುತ್ತಿರುವ ಮನಸ್ಥಿತಿಯನ್ನು ಸ್ಥಿರೀಕರಿಸಿದ್ದೀರಿ ಎಂದು ಹೇಳಲೇಬೇಕಾಗಿದೆ.

ಲೇಖನದ ಆರಂಭದಲ್ಲಿ ನಾನು ನನಗಿಂತ ಸಣ್ಣ ವಯಸ್ಸಿನ, ಹೆಚ್ಚು ಧೈರ್ಯವೂ ಪಾಂಡಿತ್ಯವೂ ಇರುವ ಒಬ್ಬಾಕೆಯ ಸಾಲುಗಳನ್ನು ಕದ್ದು ಆ ಮಾತುಗಳ ಹಿಂದೆ ಅಡಗಿಕೊಂಡು ವಾದಿಸುತ್ತೇನೆ ಎಂದಿದ್ದೆ. ಆಕೆಯ ಹೆಸರು ಅರ್ಪಿತಾ ಫುಕಾನ್ ಬಿಸ್ವಾಸ್. ಈ ಮೇಧಾವಿ ಸಮಾಜ ಶಾಸ್ತ್ರಜ್ಞೆ ಪೋವೈನ ಐಐಟಿಯಲ್ಲಿ ಸಂಶೋಧನಾ ವಿದ್ಯಾರ್ಥಿ.

ಇಂದು ಮುಂಜಾನೆ ಅರ್ಪಿತಾ ತಮ್ಮ ಸರಣಿ ಟ್ವೀಟ್‌ಗಳಲ್ಲಿ ಒಳಿತು ಕೆಡುಕಿನ ನಡುವಣ ವ್ಯತ್ಯಾಸವನ್ನು ಗ್ರಹಿಸುವುದಕ್ಕೆ ಬೇಕಿರುವ ಶಕ್ತಿಯನ್ನು ಶಿಕ್ಷಣ ಮಾತ್ರ ನೀಡುತ್ತದೆ, ಜನಪ್ರತಿನಿಧಿಯಾಗುವುದಕ್ಕೆ ಆಡಳಿತ ಕೌಶಲವಿರಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಆಕೆ ಈ ಟ್ವೀಟ್‌ಗಳಿಗೆ #Trumpaway ಎಂಬ ಹ್ಯಾಷ್‌ಟ್ಯಾಗ್ ಬಳಸಿದ್ದಾರೆ.

ಮಾನ್ಯ ನ್ಯಾಯಮೂರ್ತಿಗಳೇ, ನಾನೀಗ ಭಂಡ ಧೈರ್ಯ ಮಾಡಿ ತಮ್ಮ ಆದೇಶ  ಸಮಾಜವನ್ನು ಡೊನಾಲ್ಡ್ ಟ್ರಂಪ್ ದೃಷ್ಟಿಯಲ್ಲಿ ನೋಡುತ್ತಿದೆ ಎಂದು ಹೇಳಲೇ?

ಹಾಗೆ ಹೇಳಲಾರೆ. ಅರ್ಪಿತಾರನ್ನು ಮುಂದಿಟ್ಟುಕೊಂಡು ಅವರೇ ಈ ಮಾತುಗಳನ್ನು ಹೇಳಿದರು ಎನ್ನುತ್ತೇನೆ.

  (ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

Comments