ಇನ್ನು ಮುಂದೆ ಮೇಲ್ಮನೆ ಇರುವುದು ಹೀಗೇನಾ?...

ಒಂದು ವ್ಯವಸ್ಥೆ ಎಷ್ಟು ಕೆಡಬಹುದು? ಅತಳ ವಿತಳ ಪಾತಾಳ ಎಂದು ಎಷ್ಟು ಕೆಳಕ್ಕೆ ಇಳಿಯಬಹುದು? ಅದಕ್ಕೆ ಒಂದು ಮಿತಿ ಎಂಬುದು ಇರುವಂತೆ ಕಾಣುವುದಿಲ್ಲ. ಎಲ್ಲರೂ ತಮ್ಮ ಶಕ್ತಿ ಮೀರಿ ಅದನ್ನು ಎಷ್ಟು ಕೆಳಕ್ಕೆ ತಳ್ಳಬೇಕೋ ಅಷ್ಟು ಕೆಳಕ್ಕೆ ತಳ್ಳುತ್ತಾರೆ. ಮತ್ತೆ ಅದು ಮೇಲೆ ಬರದಂತೆ ಅದುಮಿ ಹಿಡಿದು ಅಮುಕುತ್ತಾರೆ. ಈಗ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆ ವೈಖರಿ ನೋಡಿದರೆ ಮೇಲ್ಮನೆಯ ಮರ್ಯಾದೆ ಮೂರು ಕಾಸಿಗೆ ಹರಾಜು ಆಗುವ ಕಾಲ ದೂರವೇನೂ ಇಲ್ಲ ಎಂದು ಭಾಸವಾಗುತ್ತದೆ.

ಇನ್ನು ಮುಂದೆ ಮೇಲ್ಮನೆ ಇರುವುದು ಹೀಗೇನಾ?...

ಒಂದು ವ್ಯವಸ್ಥೆ ಎಷ್ಟು ಕೆಡಬಹುದು? ಅತಳ ವಿತಳ ಪಾತಾಳ ಎಂದು ಎಷ್ಟು ಕೆಳಕ್ಕೆ ಇಳಿಯಬಹುದು? ಅದಕ್ಕೆ ಒಂದು ಮಿತಿ ಎಂಬುದು ಇರುವಂತೆ ಕಾಣುವುದಿಲ್ಲ. ಎಲ್ಲರೂ ತಮ್ಮ ಶಕ್ತಿ ಮೀರಿ ಅದನ್ನು ಎಷ್ಟು ಕೆಳಕ್ಕೆ ತಳ್ಳಬೇಕೋ ಅಷ್ಟು ಕೆಳಕ್ಕೆ ತಳ್ಳುತ್ತಾರೆ. ಮತ್ತೆ ಅದು ಮೇಲೆ ಬರದಂತೆ ಅದುಮಿ ಹಿಡಿದು ಅಮುಕುತ್ತಾರೆ. ಈಗ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆ ವೈಖರಿ ನೋಡಿದರೆ ಮೇಲ್ಮನೆಯ ಮರ್ಯಾದೆ ಮೂರು ಕಾಸಿಗೆ ಹರಾಜು ಆಗುವ ಕಾಲ ದೂರವೇನೂ ಇಲ್ಲ ಎಂದು ಭಾಸವಾಗುತ್ತದೆ.

ಇಡೀ ಸದನವನ್ನು ಹರಾಜಿಗೆ ಇಡುವ ಕೆಲಸವನ್ನು ರಾಷ್ಟ್ರೀಯ ಪಕ್ಷಗಳೇ ಮುಂದೆ ನಿಂತು ಮಾಡುತ್ತಿವೆ. ಏನಾದರೂ ಮಾಡಲಿ, ತನ್ನ ಅಭ್ಯರ್ಥಿ ಗೆಲ್ಲಲಿ ಎಂಬ ಒಂದೇ ಮಂತ್ರಕ್ಕೆ ಎಲ್ಲ ಪಕ್ಷಗಳು ಗಂಟು ಬಿದ್ದಿವೆ. ಯಾರ ಬಳಿ ಹಣದ ಮೂಟೆ ಇದೆಯೋ ಅವರಿಗೆ ಟಿಕೆಟ್‌ ಕೊಡುತ್ತಿವೆ. ಅವರು ಮನಸ್ಸಿಗೆ ಬಂದಂತೆ ಹಣವನ್ನು ಚೆಲ್ಲುತ್ತಿದ್ದಾರೆ. ಚುನಾವಣೆ ಘೋಷಣೆ ಆಗುವುದಕ್ಕಿಂತ ಮುಂಚೆಯೇ ಮತದಾರರ ಮನೆಗೆ ಏನೆಲ್ಲ ‘ಮುಟ್ಟಿಸಬೇಕೋ’ ಅದನ್ನು ‘ಮುಟ್ಟಿಸುವ’ ಕೆಲಸವನ್ನು ಎಲ್ಲ ಪಕ್ಷಗಳ ಅಭ್ಯರ್ಥಿಗಳು ಯಾವ ಲಜ್ಜೆ, ಸಂಕೋಚ ಇಲ್ಲದೆ ಮಾಡಿದ್ದಾರೆ. ವಸ್ತು ಮತ್ತು ಹೆಸರು ಸಮೇತ ಸಿಕ್ಕಿ ಬಿದ್ದವರು, ‘ನಾನು ಕೊಟ್ಟಿಲ್ಲ, ನನ್ನ ಅಭಿಮಾನಿ ಕೊಟ್ಟಿದ್ದಾರೆ’ ಎಂದು ಯಾವ ನಾಚಿಕೆ, ಸಂಕೋಚ ಇಲ್ಲದೆ ಸಮರ್ಥಿಸಿಕೊಂಡಿದ್ದಾರೆ. ಮೊದಲು ಬಹಿರಂಗವಾಗಿಯೇ ನಡೆಯುತ್ತಿದ್ದ ‘ಕಾಣಿಕೆ ಸಮರ್ಪಣೆ’ ಈಗ ಕದ್ದು ಮುಚ್ಚಿ ನಡೆಯುತ್ತಿದೆ.

ಚುನಾವಣೆ ನಡೆಯುತ್ತಿರುವ ಈಗಿನ ಕಾಲಘಟ್ಟ ಹೇಗಿದೆ ಎಂದರೆ ಕೇವಲ ಆರು ತಿಂಗಳ ಹಿಂದೆ ಸರಿ ಸುಮಾರು ಆರು ಸಾವಿರ ಗ್ರಾಮ ಪಂಚಾಯ್ತಿಗಳಿಗೆ ಹೊಸದಾಗಿ ಸದಸ್ಯರು ಆಯ್ಕೆಯಾಗಿದ್ದಾರೆ. ಅವರೂ ತಕ್ಕಮಟ್ಟಿಗೆ ಮತದಾರರ ‘ಕೈ ಬಿಸಿ ಮಾಡಿ’ಯೇ ಆಯ್ಕೆ ಆಗಿದ್ದಾರೆ. ಈಗ ಅವರಿಗೆ ತಾವು ಮತದಾರರಾಗುವ ಅಧಿಕಾರ! ಅವರ ಬೆಲೆಯೂ ನಿಗದಿಯಾಗಿದೆ.

ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿಗಳಿಗೆ ಇನ್ನೇನು ಚುನಾವಣೆ ನಡೆಯುವ ಕಾಲ. ಅಂದರೆ ಎಲ್ಲ ಸದಸ್ಯರ ಅವಧಿ ಇಷ್ಟರಲ್ಲೇ ಮುಗಿಯುತ್ತಲಿದೆ. ಹೋಗುವಾಗ ಅವರೂ ಮತದಾರರಾಗಿ ಒಂದಿಷ್ಟು ಹಣ ಮಾಡಿಕೊಳ್ಳಬಹುದು! ಎಲ್ಲರೂ ಹಣ ತೆಗೆದುಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರಿಗೆ ತಲಾ ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ಹಣ ಕೊಡಲು ಅಭ್ಯರ್ಥಿಗಳು ಸಿದ್ಧರಿದ್ದಾರೆ.

ಗ್ರಾಮ ಪಂಚಾಯ್ತಿ ಸದಸ್ಯರೇ ದೊಡ್ಡ ಸಂಖ್ಯೆಯಲ್ಲಿ ಇರುವ ಮತದಾರರು. ಅವರ ಸಂಖ್ಯೆಯೇ ಒಂದು ಲಕ್ಷ ದಾಟುತ್ತದೆ. ಅವರ ಜೊತೆಗೆ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಸದಸ್ಯರೂ ಈ ಚುನಾವಣೆಯಲ್ಲಿ ಮತದಾರರು. ಇವರನ್ನು ನ್ಯಾಯವಾಗಿ ಯಾರು ಪ್ರತಿನಿಧಿಸಬೇಕು? ರಿಯಲ್‌ ಎಸ್ಟೇಟ್‌ ಉದ್ಯಮಿಗಳೇ, ಭೂ ಮಾಲೀಕರೇ? ಸಿನಿಮಾ ನಿರ್ಮಾಪಕರೇ? ಹೋಟೆಲ್‌ ಉದ್ಯಮಿಗಳೇ? ಎಲ್ಲದಕ್ಕೂ ಒಂದು ಅರ್ಹತೆ ಎಂದು ಇರುವುದು ಬೇಡವೇ? ನಿಯಮವಾಗಿ ಅರ್ಹತೆ ಬೇಕಿಲ್ಲದೇ ಇರಬಹುದು. ಆದರೆ, ನ್ಯಾಯವಾಗಿ ಇರಬೇಕಲ್ಲ? ಯಾವ ಒಂದು ರಾಜಕೀಯ ಪಕ್ಷವೂ ಭಿನ್ನವಾಗಿ ಯೋಚನೆ ಮಾಡದೇ ಇರುವುದು ಸೋಜಿಗವಾಗಿದೆ. ಒಬ್ಬರನ್ನು ಒಬ್ಬರು ಮೀರಿಸುವಂತೆ ಶ್ರೀಮಂತ ಕುಳಗಳನ್ನೇ ಹಿಡಿದುಕೊಂಡು ಬಂದು ಟಿಕೆಟ್‌ ಕೊಟ್ಟು ಕಣಕ್ಕೆ ಇಳಿಸಿವೆ. ಎಲ್ಲವೂ ಒಂದು ಅಸಹ್ಯ ಪ್ರಹಸನದಂತೆ ಕಾಣುತ್ತಿದೆ.

ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ತರುವಾಗ ಸ್ಥಳೀಯ ಸಂಸ್ಥೆಗಳು ಸಮರ್ಥವಾಗಿ ಆಡಳಿತ ನಡೆಸಿದರೆ ವಿಧಾನಸೌಧದ ಮೇಲಿನ ಹೊರೆ ಕಡಿಮೆ ಆಗುತ್ತದೆ ಎಂಬ ಆಶಯವಿತ್ತು. ಈ ತಳಮಟ್ಟದ ಸಂಸ್ಥೆಗಳಿಗೆ ವಿಧಾನಸೌಧದ ಮಟ್ಟದಲ್ಲಿ ಧ್ವನಿಯೊದಗಿಸಬೇಕು ಎಂದು ಸಂವಿಧಾನಕ್ಕೆ ತಿದ್ದುಪಡಿ ತರುವುದಕ್ಕಿಂತ ಮುಂಚೆಯೇ ಮೇಲ್ಮನೆಯಲ್ಲಿ ಪ್ರಾತಿನಿಧ್ಯ ಕಲ್ಪಿಸಲಾಗಿತ್ತು. ಅಂದರೆ ಶಾಸನ ಮಾಡಿದವರ, ಶಾಸನಸಭೆಗಳನ್ನು ರೂಪಿಸಿದವರ ಆಶಯಗಳು ಎಷ್ಟು ಉನ್ನತವಾಗಿದ್ದುವು ಎಂದು ಗೊತ್ತಾಗುತ್ತದೆ.

ಅದು ಒಂದು ಕಾಲವಿತ್ತು. ಅದೆಲ್ಲ ಬಹಳ ಹಿಂದೆಯೇನೂ ಅಲ್ಲ. ಮೂವತ್ತು ವರ್ಷ ಆಗಿರಬೇಕು. ಆಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ದಿ.ಬಿ.ಎಂ.ಮೆಣಸಿನಕಾಯಿ ಮತ್ತು ಎಂ.ಎಸ್‌.ಕಟಗಿ ಅವರು ಆಯ್ಕೆಯಾಗಿದ್ದರು. ಅವರು ಇಬ್ಬರೂ ಭಿನ್ನ ಪಕ್ಷಗಳಿಗೆ ಸೇರಿದವರು. ಒಬ್ಬರು ಜನತಾದಳದವರು. ಇನ್ನೊಬ್ಬರು ಕಾಂಗ್ರೆಸ್ಸಿಗರು. ಅಂದರೆ ಎರಡೂ ಪಕ್ಷಗಳಿಗೆ ಯಾರನ್ನು ಯಾವ ಕ್ಷೇತ್ರದಿಂದ ಕಣಕ್ಕೆ ಇಳಿಸಬೇಕು ಎಂಬುದು ಗೊತ್ತಿತ್ತು. ಅವರು ಸದನದಲ್ಲಿ ಏನನ್ನು ಪ್ರತಿನಿಧಿಸಬೇಕೋ ಅದನ್ನು ಪ್ರತಿನಿಧಿಸುತ್ತಿದ್ದರು. ಅವರಿಗೆಲ್ಲ ವಿಷಯದ ಆಳವಾದ ಜ್ಞಾನವಿರುತ್ತಿತ್ತು, ಮಿಗಿಲಾಗಿ ಕಾಳಜಿ ಇರುತ್ತಿತ್ತು. ಆದರೆ, ಕಾಲಾನುಕ್ರಮದಲ್ಲಿ ಎಲ್ಲ ಮೌಲ್ಯಗಳು ಸವಕಲು ಆಗುವಂತೆ ಕಾಣುತ್ತದೆ.

ಈಗ ಮೇಲ್ಮನೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಎಷ್ಟು ಮಂದಿ ಗ್ರಾಮ ಪಂಚಾಯ್ತಿಗೋ ಅಥವಾ ಪಟ್ಟಣ ಪಂಚಾಯ್ತಿಗೋ ಆಯ್ಕೆಯಾಗಿ ಅಲ್ಲಿನ ಕಷ್ಟನಷ್ಟಗಳನ್ನು ಅರಿತಿದ್ದಾರೆ? ಸ್ಪರ್ಧೆ ಮಾಡಿದವರಲ್ಲಿ ಒಬ್ಬರೋ ಇಬ್ಬರೋ ಇರಬಹುದು. ಆದರೆ, ರಾಷ್ಟ್ರೀಯ ಪಕ್ಷಗಳು ಕಣಕ್ಕೆ ಹೂಡಿರುವ ಅಭ್ಯರ್ಥಿಗಳಲ್ಲಿ ಎಷ್ಟು ಮಂದಿಗೆ ಆ ಹಿನ್ನೆಲೆ ಇದೆ? ಒಬ್ಬರಿಗೂ ಇದ್ದಂತೆ ಇಲ್ಲ. ಹಾಗಾದರೆ, ರಾಷ್ಟ್ರೀಯ ಪಕ್ಷಗಳಿಗೆ ಆ ಪರಿಣತಿ ಮತ್ತು ವಿವೇಕ ಬೇಡವೇ? ಗೆಲ್ಲುವ ಸಾಮರ್ಥ್ಯ ಎಂಬುದು ಒಂದೇ ಇದ್ದರೆ ಸಾಕೇ? ಗೆಲ್ಲುವ ಸಾಮರ್ಥ್ಯ ಎಂದರೆ ಹಣದ ಥೈಲಿಗಳು ಎಂದು ಮಾತ್ರ ಅರ್ಥವೇ? ಅಭ್ಯರ್ಥಿಗಳು ಘೋಷಿಸಿರುವ ಆಸ್ತಿಯನ್ನು ನೋಡಿದರೆ ಅದರಲ್ಲಿ ಅನುಮಾನವೇನೂ ಉಳಿಯುವುದಿಲ್ಲ. ಜಯಪ್ರಕಾಶ್ ಹೆಗ್ಡೆಯಂಥವರಿಗೆ ಕಾಂಗ್ರೆಸ್‌ ಪಕ್ಷ ಏಕೆ ಟಿಕೆಟ್‌ ನಿರಾಕರಿಸುತ್ತದೆ ಎಂದು ಅರ್ಥವಾಯಿತೇ?

ಹಾಗಾದರೆ ಹಿರಿಯರು, ವಿವೇಕಿಗಳು ಮತ್ತು ಸಾಧ್ಯವಾದಷ್ಟು ಎಲ್ಲ ಕ್ಷೇತ್ರಗಳ ಪರಿಣತರು ಇರಬೇಕಾದ ಮೇಲ್ಮನೆಯನ್ನು ಎಲ್ಲ ರಾಜಕೀಯ ಪಕ್ಷಗಳು ಸೇರಿಕೊಂಡು ಏನು ಮಾಡಲು ಹೊರಟಿವೆ? ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕ ಆರಿಸಿ ಬರುವುದು ಈಗ ಕಡುಕಷ್ಟ ಎಂದು ಕಳೆದ ವರ್ಷದ ಜೂನ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ನಮಗೆ ಗೊತ್ತಾಗಿದೆ. ಪದವೀಧರರ ಕ್ಷೇತ್ರದಲ್ಲಿ ಏನಾಗುತ್ತದೆ ಎಂದು ಮೂರು ವರ್ಷಗಳ ಹಿಂದೆ ನೋಡಿದ್ದೇವೆ.

ಒಂದು ರೀತಿ ಎಲ್ಲ ಕ್ಷೇತ್ರಗಳಲ್ಲಿಯೂ ಮತದಾರರು ಮಾರಾಟಕ್ಕೆ ಲಭ್ಯವಿದ್ದಾರೆ ಎಂದು ಅನಿಸತೊಡಗಿದೆ. ಚುನಾವಣೆಗೆ ನಿಂತ ರಾಜಕಾರಣಿಗಳು ಮತದಾರರ ಬೆಲೆ ನಿಗದಿ ಮಾಡಿದರೇ ಅಥವಾ ಮತದಾರರಾದ ನಾವೇ, ಇಂತಿಷ್ಟು ಬೆಲೆಗೆ ಮಾರಾಟಕ್ಕೆ ಲಭ್ಯ ಇದ್ದೇವೆ ಎಂದು, ಮೊದಲೇ ಸೂಚನೆ ಕೊಟ್ಟುಬಿಟ್ಟಿದ್ದೇವೆಯೇ? ಇಲ್ಲಿ ಯಾರು ಯಾರನ್ನು ಸೋಲಿಸುತ್ತಿದ್ದಾರೆ? ಹಣದ ಥೈಲಿ ಇರುವ ಒಬ್ಬ ಅಭ್ಯರ್ಥಿ ಬಂದು ಚುನಾವಣೆಗೆ ನಿಂತು ತನ್ನ ಗೆಲುವಿಗೆ ಎಷ್ಟು ಬೇಕೋ ಅಷ್ಟು ಮತಗಳನ್ನು ಖರೀದಿಸಿ ಆರು ವರ್ಷ ಮೇಲ್ಮನೆಯಲ್ಲಿ ಹಾಯಾಗಿ ಇರುತ್ತಾನೆ ಎಂದರೆ ಏನು ಅರ್ಥ?

ಒಬ್ಬೊಬ್ಬರೂ ತಲಾ ಹತ್ತು ಕೋಟಿ, ಹದಿನೈದು ಕೋಟಿ ಖರ್ಚು ಮಾಡಿ ಅವರು ಏಕೆ ಮೇಲ್ಮನೆಗೆ ಸ್ಪರ್ಧಿಸುತ್ತಾರೆ? ಒಂದು ವೇಳೆ ಗೆದ್ದರೆ ಅಷ್ಟು ಹಣವನ್ನು ಮರಳಿ ಅವರು ಹೇಗೆ ಸಂಪಾದಿಸುತ್ತಾರೆ? ಮೇಲ್ಮನೆ ಅಥವಾ ಕೆಳಮನೆ ಸದಸ್ಯತ್ವ ಎಂಬುದು ಒಂದು ‘ರಹದಾರಿ’ಯಂತೆ ಆಗಿಬಿಟ್ಟಿದೆ. ಅದು ಅನೇಕ ಕೆಲಸಗಳನ್ನು ಮಾಡಿಸಿಕೊಡುತ್ತದೆ. ಅವರವರು ಕಟ್ಟಿಕೊಂಡ ಸಾಮ್ರಾಜ್ಯಗಳನ್ನು ರಕ್ಷಿಸಲು ಅದು ಕೋಟೆಯಂತೆ ರಕ್ಷಣೆ ಒದಗಿಸುತ್ತದೆ. ರಾಜ್ಯಸಭೆಗೂ ಉದ್ಯಮಿಗಳು ಇದೇ ರೀತಿ ಹಣ ಚೆಲ್ಲಿಯೇ ಅಲ್ಲವೇ ಗೆದ್ದು ಬರುವುದು? ಅವರ ಉದ್ದೇಶವೂ ಅದೇ: ಸಾಮ್ರಾಜ್ಯಗಳನ್ನು ಕಾಪಾಡಿಕೊಳ್ಳುವುದು. ರಾಜ್ಯಸಭೆಯ ಸದಸ್ಯತ್ವ ಹೇಗೆ ಯಾರು ಯಾರನ್ನೆಲ್ಲ ರಕ್ಷಿಸುತ್ತಿದೆ ಎಂಬುದು ನಮಗೆ ಕಾಣುತ್ತಿಲ್ಲವೇ?

ಉದ್ದೇಶಗಳು, ಗುರಿಗಳು ಹಾಳಾಗುವುದು ಹೇಗೆ ಎಂದರೆ ಹೀಗೇ ಇರಬೇಕು. ಇಂತಿಷ್ಟು ಹಣ ಚೆಲ್ಲಿದರೆ ಗೆದ್ದು ಬಿಡಬಹುದು ಎಂದು ಗೊತ್ತಾದ ಕೂಡಲೇ ಕುಟುಂಬದ ಆಕಾಂಕ್ಷೆಗಳು ಚಿಗುರು ಒಡೆಯಲು ಶುರುವಾಗುತ್ತದೆ. ಬಿಜೆಪಿಯಲ್ಲಿ ಮೂವರು ನಾಯಕರ ತಮ್ಮಂದಿರಿಗೆ ಟಿಕೆಟ್‌ ಸಿಕ್ಕಿರುವುದು ಇದೇ ಕಾರಣದಿಂದ. ಬಿಜೆಪಿ ನಾಯಕರು ಎಷ್ಟು ಜಾಗೃತ ಎಂದರೆ ತಮ್ಮನ ನಾಮಪತ್ರ ತಿರಸ್ಕೃತವಾದರೆ ಅಣ್ಣನದು ಇರಲಿ ಎಂದು ಅವರಿಂದಲೂ ನಾಮಪತ್ರ ಹಾಕಿಸುತ್ತಾರೆ. ಕಾಂಗ್ರೆಸ್ಸಿನವರೂ ಇದಕ್ಕೆ ಹೊರತಲ್ಲ.

ಒಬ್ಬರು ಹಿರಿಯ ಸಚಿವರ ಮಗ ಟಿಕೆಟ್ಟಿಗೆ ದುಂಬಾಲು ಬಿದ್ದಿದ್ದ. ಅದೇ ಕ್ಷೇತ್ರದಲ್ಲಿ ಒಬ್ಬ ಶಾಸಕರ ಮಗನೂ ಆಕಾಂಕ್ಷಿಯಾಗಿದ್ದ. ಕೊನೆಗೆ ಶಾಸಕರ ಮಗನೇ ಟಿಕೆಟ್ ಗಿಟ್ಟಿಸಿದ. ಪುಣ್ಯಕ್ಕೆ ಜೆ.ಡಿ.ಎಸ್‌ನಲ್ಲಿ ಸೊಸೆಗೆ ಟಿಕೆಟ್‌ ಕೊಡಬೇಕು ಎಂಬ ಒತ್ತಡವನ್ನು ದೇವೇಗೌಡರು ಮೀರಿ ನಿಂತರು. ಹಾಗೆಂದು ಜೆ.ಡಿ ಎಸ್‌ ಟಿಕೆಟ್‌ ಕೊಟ್ಟುದು ಕೂಡ ‘ಅರ್ಹರಿಗೆ’ ಎಂದು ಹೇಳುವುದು ಕಷ್ಟ. ಅದೂ ಹಣದ ಮೂಟೆಯನ್ನು ನೋಡಿಯೇ ಟಿಕೆಟ್‌ ಕೊಟ್ಟಿದೆ. ಅವರಿಗೂ ಈ ಚುನಾವಣೆಯಲ್ಲಿ ಗೆಲ್ಲುವುದು ಬಹಳ ಮುಖ್ಯ. ಅಂದರೆ ಯಾರೂ ಯಾರಿಗೂ ಬುದ್ಧಿ ಹೇಳುವ ಸ್ಥಿತಿಯಲ್ಲಿ ಇಲ್ಲ. ಯಾರೂ ಯಾರಿಗೂ ಮಾದರಿ ಎನ್ನುವಂತೆಯೂ ಇಲ್ಲ.

ನಾವು ಪ್ರತಿನಿಧಿಸುವ ಕ್ಷೇತ್ರದ ಬಗೆಗೆ ಕಾಳಜಿಯೇ ಇಲ್ಲದವರು ಆಯ್ಕೆಯಾಗಿ ಬಂದರೆ ಏನಾಗಬೇಕೋ ಈಗ ಅದೇ ಆಗುತ್ತಿದೆ. ಸದನದಲ್ಲಿ ಸ್ಥಳೀಯ ಸಂಸ್ಥೆಗಳ ಸ್ಥಿತಿಗತಿಯ ಸುಧಾರಣೆ ಕುರಿತು ಚರ್ಚೆಯಾದುದು ನಮಗೆ ನೆನಪು ಇದೆಯೇ? ಒಟ್ಟು ಸದಸ್ಯ ಬಲದ ಮೂರರಲ್ಲಿ ಒಂದರಷ್ಟು ಇರುವ ಸದಸ್ಯರು ಆ ಕ್ಷೇತ್ರದ ಕುರಿತು ಮಾತೇ ಆಡುವುದಿಲ್ಲ ಎಂದರೆ ಏನರ್ಥ? ಈಚಿನ ವಿಧಾನಮಂಡಲ ಅಧಿವೇಶನದಲ್ಲಿ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದ ಮಹತ್ವದ ಮತ್ತು ವಿಸ್ತೃತ ಮಸೂದೆ ಮಂಡನೆಯಾಗಿತ್ತು. ಅದರ ಬಗೆಗಾದರೂ ಕೆಳಮನೆಯಲ್ಲಿ ಬಿಡಿ, ಕನಿಷ್ಠ ಮೇಲ್ಮನೆಯಲ್ಲಿ ಚರ್ಚೆಯಾದುದು ನಮಗೆ ನೆನಪು ಇಲ್ಲ. ಅದು ಮೇಲ್ಮನೆಯ, ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ, ಸದಸ್ಯರ ಜವಾಬ್ದಾರಿಯಾಗಿತ್ತು ಅಲ್ಲವೇ? ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದವರು ಶಿಕ್ಷಕರ ಸಂಬಳ, ಸವಲತ್ತು ಹೆಚ್ಚಳ ಬಿಟ್ಟು ಒಟ್ಟು ಶಿಕ್ಷಣ ಕ್ಷೇತ್ರದ ಸುಧಾರಣೆ ಕುರಿತು ಚರ್ಚೆ ಮಾಡಿದ್ದೂ ನಮಗೆ ನೆನಪು ಇಲ್ಲ. ಇದೆಲ್ಲ ವಿಪರ್ಯಾಸದಂತೆ ಕಾಣಿಸುತ್ತದೆ.

ವಿಪರ್ಯಾಸ ಇಷ್ಟಕ್ಕೇ ಮುಗಿಯುವುದಿಲ್ಲ. ಯಾವ ಒಂದು ರಾಜಕೀಯ ಪಕ್ಷವೂ ಒಬ್ಬ ಮಹಿಳೆಗೂ ಈ ಸಾರಿ ಟಿಕೆಟ್‌ ಕೊಟ್ಟಿಲ್ಲ. ಅಂದರೆ ಮಹಿಳೆಗೆ ಇಂಥ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಇಲ್ಲ ಎಂದು ಆ ಪಕ್ಷಗಳ ಅಭಿಪ್ರಾಯವೇ? ಎಲ್ಲ ಸ್ಥಳೀಯ ಸಂಸ್ಥೆಗಳ ಸದಸ್ಯರ ಪೈಕಿ ಅರ್ಧದಷ್ಟು ಸದಸ್ಯರು ಮಹಿಳೆಯರೇ ಇದ್ದಾರೆ. ಅವರು ಈ ಚುನಾವಣೆಯಲ್ಲಿ ಏಕೆ ಮತ ಹಾಕಬೇಕು? ಅವರೆಲ್ಲ ಸೇರಿಕೊಂಡು ಈ ಚುನಾವಣೆಯ ಮತದಾನದಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಹೇಳಿದರೆ ರಾಜಕೀಯ ಪಕ್ಷಗಳು ಏನು ಹೇಳುತ್ತವೆ? ಪರಿಸ್ಥಿತಿ ಎಷ್ಟು ನಿರಾಶಾದಾಯಕವಾಗಿದೆ ಎಂದರೆ ಯಾರಲ್ಲಿಯೂ ಅಷ್ಟು ಸೂಕ್ಷ್ಮತೆಯೇ ಉಳಿದಂತೆ ಕಾಣುವುದಿಲ್ಲ. ಏಕೆಂದರೆ ಯಾರಿಗೂ ನಾಳೆಯ ಬಗ್ಗೆ
ಚಿಂತೆಯೇ ಇಲ್ಲ.

Comments
ಈ ವಿಭಾಗದಿಂದ ಇನ್ನಷ್ಟು
ಈಗ ದಾರಿಗಳು ಅಗಲುವ ಸಮಯ...

ನಾಲ್ಕನೇ ಆಯಾಮ
ಈಗ ದಾರಿಗಳು ಅಗಲುವ ಸಮಯ...

27 Aug, 2017
ಚಾರಿತ್ರಿಕ ಅಡ್ಡಿ ಮತ್ತು ಇಂದಿರಾ ಕ್ಯಾಂಟೀನ್...

ನಾಲ್ಕನೇ ಆಯಾಮ
ಚಾರಿತ್ರಿಕ ಅಡ್ಡಿ ಮತ್ತು ಇಂದಿರಾ ಕ್ಯಾಂಟೀನ್...

20 Aug, 2017
ಅಕಾಡೆಮಿಗಳ ಮೂಗುದಾರ ಬಿಚ್ಚುವುದು ಯಾವಾಗ?

ನಾಲ್ಕನೇ ಆಯಾಮ
ಅಕಾಡೆಮಿಗಳ ಮೂಗುದಾರ ಬಿಚ್ಚುವುದು ಯಾವಾಗ?

13 Aug, 2017
ಮತ್ತೆ ಜಲಸಂಕಟದೆಡೆಗೆ ಕರ್ನಾಟಕ...

ನಾಲ್ಕನೇ ಆಯಾಮ
ಮತ್ತೆ ಜಲಸಂಕಟದೆಡೆಗೆ ಕರ್ನಾಟಕ...

6 Aug, 2017
ಧರ್ಮಸಿಂಗ್‌ ಕುರಿತು ಹೀಗೊಂದಿಷ್ಟು ನೆನಪುಗಳು...

ನಾಲ್ಕನೇ ಆಯಾಮ
ಧರ್ಮಸಿಂಗ್‌ ಕುರಿತು ಹೀಗೊಂದಿಷ್ಟು ನೆನಪುಗಳು...

30 Jul, 2017