ಶ್ರೀನಗರ

ಪ್ರಣವ್ ಜತೆ ಫೋಟೊ: ಹುಡುಗಿಯರಿಗೆ ಆನ್‌ಲೈನ್‌ನಲ್ಲಿ ಬೆದರಿಕೆ

ದೆಹಲಿಯ ರಾಷ್ಟ್ರಪತಿ ಭವನ ಪ್ರವೇಶಿಸಿ ರಾಷ್ಟ್ರಪತಿ ಜತೆ ಫೋಟೊ ತೆಗೆಸಿಕೊಳ್ಳುವುದು ಅಂದರೆ ಅದು ಎಲ್ಲರಿಗೂ ಹೆಮ್ಮೆಯ ವಿಚಾರ. ಆದರೆ ಕಾಶ್ಮೀರದ ಈ ಹುಡುಗಿಯರ ವಿಚಾರದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ.

ಶ್ರೀನಗರ:  ದೆಹಲಿಯ ರಾಷ್ಟ್ರಪತಿ ಭವನ ಪ್ರವೇಶಿಸಿ ರಾಷ್ಟ್ರಪತಿ ಜತೆ ಫೋಟೊ ತೆಗೆಸಿಕೊಳ್ಳುವುದು ಅಂದರೆ ಅದು ಎಲ್ಲರಿಗೂ ಹೆಮ್ಮೆಯ ವಿಚಾರ. ಆದರೆ ಕಾಶ್ಮೀರದ ಈ ಹುಡುಗಿಯರ ವಿಚಾರದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ.

ಇತ್ತೀಚೆಗೆ ಕಾಶ್ಮೀರದ ವಿದ್ಯಾರ್ಥಿನಿಯರ ತಂಡವೊಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಜೊತೆ ಗ್ರೂಪ್ ಫೋಟೊ ತೆಗೆಸಿಕೊಂಡು ಖುಷಿಪಟ್ಟಿತ್ತು. ಆದರೆ ಕೆಲ ರಾಷ್ಟ್ರವಿರೋಧಿ ಶಕ್ತಿಗಳು ಅಂತರ್ಜಾಲದಲ್ಲಿ ಈ ಬಾಲಕಿಯರ ವಿರುದ್ಧ ನಿಂದನೆ ಅಭಿಯಾನದಲ್ಲಿ ತೊಡಗಿದ್ದು, ಬೆದರಿಕೆಯನ್ನೂ ಹಾಕುತ್ತಿವೆ.

ಕಾಶ್ಮೀರದಲ್ಲಿ ಈ ಹುಡುಗಿಯರ ಬಗ್ಗೆ ತಿರಸ್ಕಾರ ಭಾವನೆ ಮೂಡಿಸುವ ಕರಪತ್ರಗಳನ್ನೂ ಹಂಚಲಾಗುತ್ತಿದೆ. ಆದರೆ ಜಮ್ಮು–ಕಾಶ್ಮೀರ ಸರ್ಕಾರ ಮಾತ್ರ ಮೌನವಾಗಿದೆ. ಭಾರತೀಯ ಸೇನೆ ಆಯೋಜಿಸಿದ್ದ ‘ಆಪರೇಷನ್ ಸದ್ಭಾವನಾ’ ಭಾರತ ಪ್ರವಾಸ ಕಾರ್ಯಕ್ರಮ ನಿಮಿತ್ತ ಕಾಶ್ಮೀರದ ಈ ಬಾಲಕಿಯರು ರಾಷ್ಟ್ರಪತಿ ಭವನಕ್ಕೂ ಭೇಟಿ ನೀಡಿದ್ದರು. ರಾಷ್ಟ್ರಪತಿ ಜತೆ ತೆಗೆಸಿಕೊಂಡ ಫೋಟೊ ಪ್ರಕಟವಾಗುತ್ತಿದ್ದಂತೆಯೇ ಇವರ ವಿರುದ್ಧ ಅಂತರ್ಜಾಲದಲ್ಲಿ ನಿಂದನಾ ಅಭಿಯಾನ (ಹೇಟ್ ಕ್ಯಾಂಪೇನ್) ಶುರುವಾಗಿತ್ತು.

ಫೇಸ್‌ಬುಕ್‌ನಿಂದ ಟ್ವಿಟರ್‌ವರೆಗೆ ಬಹುತೇಕ ಸಾಮಾಜಿಕ ಮಾಧ್ಯಮಗಳಲ್ಲೂ ಪ್ರವಾಸಕ್ಕೆ ತೆರಳಿದ್ದ ಕಾಶ್ಮೀರದ 30 ಬಾಲಕಿಯರ ತಂಡವನ್ನು ಹೀಗಳೆಯಲಾಗುತ್ತಿದೆ. ವಿದ್ಯಾರ್ಥಿನಿಯರ ನಡೆತೆಯನ್ನು ಕೆಲವು ದುಷ್ಕರ್ಮಿಗಳು ಪ್ರಶ್ನಿಸಿದ್ದರೆ, ಈ ಪ್ರವಾಸಕ್ಕೆ ತೆರಳಿದ್ದವರು ‘ಸೇನೆಯ ಸುಂದರವಾದ ಮಾಹಿತಿದಾರರು’ ಎಂದು ಮತ್ತೆ ಕೆಲವರು ಛೇಡಿಸಿದ್ದಾರೆ. ಅಲ್ಲದೆ ‘ವ್ಯಭಿಚಾರಿಣಿ’, ‘ವೇಶ್ಯೆ’ ಎಂಬ ಅಶ್ಲೀಲ ಪದಗಳಿಂದ ನಿಂದಿಸಿದ್ದೂ ಅಲ್ಲದೆ ಹುಡುಗಿಯರಿಗೆ ಶಿಕ್ಷೆಯಾಗಬೇಕು, ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಸೇನೆಯಿಂದ ‘ಹೆಮ್ಮೆಯ ಕಾಶ್ಮೀರದ ರಾಯಭಾರಿಗಳು’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಹುಡುಗಿಯರ  ಭಾರತ ಯಾತ್ರೆಯನ್ನು ಸರ್ಕಾರವು ಕೊಂಡಾಡಿದೆಯಾದರೂ ಇವರ ಬಗ್ಗೆ ಹರಡುತ್ತಿರುವ ‘ದ್ವೇಷದ ಪ್ರಚಾರ’ ವನ್ನು ತಡೆಯುವ ಯತ್ನವನ್ನೂ ಮಾಡುತ್ತಿಲ್ಲ. 92.7 ಬಿಗ್ ಎಫ್‌ಎಂ ಆರ್‌ಜೆ ನಾಸಿರ್ ಎಂಬಾತ ಬಾಲಕಿಯರ ಬೆಂಬಲಕ್ಕೆ ನಿಂತಿದ್ದಾರೆ.

ತಮ್ಮ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಅವರು, ‘ನನ್ನ ಸೋದರಿಯರನ್ನು  ಅಶ್ಲೀಲ ಮಾತುಗಳಲ್ಲಿ ಬೈದು ಅವಮಾನ ಮಾಡುವುದನ್ನು ನೋಡಿದರೆ ನೇಣು ಹಾಕಿಕೊಳ್ಳಬೇಕು ಎನಿಸುತ್ತದೆ. ಇದನ್ನು ಕಂಡ ಸರ್ಕಾರ ಹಾಗೂ ಸಾಮಾಜಿಕ ಸಂಘಟನೆಗಳು ಮೌನ ವಹಿಸಿರುವುದು ಸರಿಯಲ್ಲ’ ಎಂದಿದ್ದಾರೆ.

ಪೊಲೀಸರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಈ ಬೆಳವಣಿಗೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳುವ ಪೊಲೀಸರು ದೂರು ದಾಖಲಾಗದೇ ಕ್ರಮ ಕೈಗೊಳ್ಳುವುದು ಸಾಧ್ಯವಿಲ್ಲ ಎನ್ನುತ್ತಾರೆ’  ಎಂದು ನಾಸಿರ್ ಹೇಳಿದ್ದಾರೆ.

Comments