ಸೋಮವಾರ ಸಭೆಯಲ್ಲಿ ಕಾಂಗ್ರೆಸ್‌ ನಿರ್ಧಾರ ನಿರ್ಣಾಯಕ

ಜಿಎಸ್‌ಟಿ ಮಸೂದೆ ಮಂಡನೆಗೆ ಸಿದ್ಧತೆ

ಕಾಂಗ್ರೆಸ್ ಅಸಹಕಾರದ ಮಧ್ಯೆಯೂ ಸಂಸತ್ತಿನ ಚಳಿಗಾಲದ ಅಧಿವೇಶನದ ಕೊನೆಯ ವಾರ ಮಹತ್ವದ ಜಿಎಸ್‌ಟಿ ಹಾಗೂ ರಿಯಲ್ ಎಸ್ಟೇಟ್‌ ಮಸೂದೆ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸಿದೆ.

ನವದೆಹಲಿ (ಪಿಟಿಐ): ಕಾಂಗ್ರೆಸ್ ಅಸಹಕಾರದ ಮಧ್ಯೆಯೂ ಸಂಸತ್ತಿನ ಚಳಿಗಾಲದ ಅಧಿವೇಶನದ ಕೊನೆಯ ವಾರ ಮಹತ್ವದ ಜಿಎಸ್‌ಟಿ ಹಾಗೂ ರಿಯಲ್ ಎಸ್ಟೇಟ್‌ ಮಸೂದೆ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸಿದೆ.

ಪ್ರಮುಖ ಜಿಎಸ್‌ಟಿ ಮಸೂದೆ ಅಂಗೀಕಾರಕ್ಕೆ ಯತ್ನಿಸುತ್ತಿರುವ ಸರ್ಕಾರವು, ಈ ಸಂಬಂಧ ಪ್ರಸ್ತಾವನೆ ಮುಂದಿಟ್ಟಿದ್ದು,  ವಿರೋಧ ಪಕ್ಷದ ಪ್ರತಿಕ್ರಿಯೆ ನಿರೀಕ್ಷಿಸುತ್ತಿದೆ. ಭಾನುವಾರ ಕಾಂಗ್ರೆಸ್ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ ಕೈಗೊಳ್ಳುವ ನಿರ್ಧಾರವು ಜಿಎಸ್‌ಟಿ ಹಾದಿಯನ್ನು ನಿರ್ಧರಿಸಲಿದೆ.

ರಾಜ್ಯಸಭೆಯಲ್ಲಿ ಪ್ರಮುಖವಾದ ಒಟ್ಟು 16 ವಿಷಯಗಳ ಬಗ್ಗೆ ಚರ್ಚೆ ಬಾಕಿ ಉಳಿದಿದೆ. ಲೋಕಸಭೆಯಲ್ಲಿ ಈಗಾಗಲೇ ಒಟ್ಟು 7 ವಿಧೇಯಕ  ಚರ್ಚೆಗೆ ಸಮಯ ನಿಗದಿಯಾಗಿದೆ. ಜಿಎಸ್‌ಟಿ ಮಸೂದೆಗೆ ನಾಲ್ಕು ಗಂಟೆ, ರಿಯಲ್ ಎಸ್ಟೇಟ್ ಮಸೂದೆಗೆ 3 ಗಂಟೆ ಹಾಗೂ ಭ್ರಷ್ಟಾಚಾರ ಬಯಲು ಮಾಡುವರ  ರಕ್ಷಣಾ ಮಸೂದೆಗೆ 2 ಗಂಟೆ ನಿಗದಿಪಡಿಸಲಾಗಿದೆ.

ಕೊನೆಯ ವಾರ ಎರಡೂ ಸದನ ಗಳಲ್ಲಿ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಯ ಲಿದೆ. ವಿಶೇಷವಾಗಿ ರಾಜ್ಯಸಭೆ ಯಲ್ಲಿ ದಿನಬಳಕೆ ವಸ್ತುಗಳು ಹಾಗೂ ಆಹಾರ ಧಾನ್ಯಗಳ ಬೆಲೆ ಏರಿಕೆ ಬಗ್ಗೆ ಚರ್ಚೆ ನಿಗದಿಯಾಗಿದೆ. ಇವುಗಳ ಜೊತೆ ದೇಶದಲ್ಲಿ ಹೆಚ್ಚುತ್ತಿರುವ ಹಾಗೂ ದೇಶದ ಏಕತೆಗೆ ಅಪಾಯಕಾರಿ ಎನಿಸಿರುವ ಅಸಹಿಷ್ಣುತೆ ಕುರಿತು ಸಮಗ್ರ ಚರ್ಚೆ ನಡೆಯಲಿದೆ.

ಈ ಬಾರಿಯ ಅಧಿವೇಶನದಲ್ಲಿ ಮಂಡನೆಯಾದ 6 ಮಸೂದೆಗಳೂ ಅಂಗೀಕಾರ ಪಡೆದಿದ್ದರೆ, ರಾಜ್ಯಸಭೆ ಯಲ್ಲಿ ಒಂದು ಮಸೂದೆ ಮಾತ್ರ ಒಪ್ಪಿಗೆ ಪಡೆದಿದೆ. ಲೋಕಸಭೆಯಲ್ಲಿ ಅಂಗೀಕಾರ ಪಡೆದಿರುವ 10 ಮಸೂದೆಗಳು ರಾಜ್ಯಸಭೆಯ ಒಪ್ಪಿಗೆಗಾಗಿ ಕಾಯುತ್ತಿವೆ. ಶಾಸಕಾಂಗ ಹಾಗೂ ಆರ್ಥಿಕ ವ್ಯವಹಾರ ಪ್ರಸ್ತಾಪಿಸುವ 9 ಮಸೂದೆಗಳನ್ನು ಮುಂದಿನ ವಾರ ಲೋಕಸಭೆಯ ಮುಂದಿಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ಸಂಸದೀಯ ವ್ಯವಹಾರ ಇಲಾಖೆ ಪ್ರಕಟಣೆಯಲ್ಲಿತಿಳಿಸಿದೆ.

ಭಾರತ–ಪಾಕಿಸ್ತಾನ ನಡುವಿನ ಮಾತುಕತೆ ವಿವರಗಳನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೋಮವಾರ ಎರಡೂ ಸದನಗಳಲ್ಲಿ ನೀಡುವ ಸಾಧ್ಯತೆ ಇದೆ. ಇತ್ತೀಚೆಗೆ ಅವರು ಪಾಕಿಸ್ತಾನದ ಇಸ್ಲಾಮಾಬಾದ್‌ ನಲ್ಲಿ ಅಲ್ಲಿನ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದರು.

ಕೋಕ್‌ ಕೆಲವು ಘಟಕ ಸ್ಥಗಿತ
ನವದೆಹಲಿ (ಪಿಟಿಐ):
ಉದ್ದೇಶಿತ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ (ಜಿಎಸ್‌ಟಿ) ಜಾರಿಯಾದರೆ ಭಾರತದಲ್ಲಿ ತನ್ನ ಕೆಲವು ಘಟಕಗಳನ್ನು ಮುಚ್ಚಬೇಕಾಗುತ್ತದೆ ಎಂದು ಕೋಕಾ ಕೋಲಾದ  ಕಂಪೆನಿ ಹೇಳಿದೆ.

ತಂಪುಪಾನೀಯಗಳಿಗೆ ಶೇ 40ರಷ್ಟು ತೆರಿಗೆ ವಿಧಿಸಲು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ. ಇದಕ್ಕೆ ಕಂಪೆನಿ ಅಸಮಾಧಾನ ವ್ಯಕ್ತಪಡಿಸಿದೆ.

ಸಮಿತಿ ಶಿಫಾರಸ್ಸಿನಂತೆಯೇ ಶೇ 40 ರಷ್ಟು ತೆರಿಗೆ ವಿಧಿಸಿದರೆ ತಂಪುಪಾನೀಯ ಉದ್ಯಮದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಮಾರಾಟದಲ್ಲಿ ಗಣನೀಯ ಇಳಿಕೆಯಾಗಲಿದೆ. ಹೀಗಾದರೆ ಕೆಲವು ಘಟಕಗಳನ್ನು ಮುಚ್ಚುವುದು ಅನಿವಾರ್ಯವಾಗಲಿದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

Comments