ಜಪಾನ್‌ನಿಂದ ₹79 ಸಾವಿರ ಕೋಟಿ ಸಾಲ: ಮರುಪಾವತಿ ಅವಧಿ 50 ವರ್ಷ

7 ವರ್ಷದಲ್ಲಿ ಬುಲೆಟ್‌ ರೈಲು

ಮುಂಬೈ– ಅಹಮದಾಬಾದ್‌ ಮಧ್ಯೆ ಅತಿ ವೇಗದ ಬುಲೆಟ್‌ ರೈಲು ಮತ್ತು ಚೆನ್ನೈ–ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಯೋಜನೆಗಳ ಅನುಷ್ಠಾನಕ್ಕಾಗಿ ಜಪಾನ್‌ ಸರ್ಕಾರ ಭಾರತಕ್ಕೆ ನೆರವು ನೀಡಲಿದೆ.

ನವದೆಹಲಿ (ಪಿಟಿಐ): ಮುಂಬೈ– ಅಹಮದಾಬಾದ್‌ ಮಧ್ಯೆ ಅತಿ ವೇಗದ ಬುಲೆಟ್‌ ರೈಲು ಮತ್ತು ಚೆನ್ನೈ–ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಯೋಜನೆಗಳ ಅನುಷ್ಠಾನಕ್ಕಾಗಿ ಜಪಾನ್‌ ಸರ್ಕಾರ ಭಾರತಕ್ಕೆ ನೆರವು ನೀಡಲಿದೆ.

505 ಕಿ.ಮಿ ಉದ್ದದ ಬುಲೆಟ್‌ ರೈಲು ಮಾರ್ಗಕ್ಕಾಗಿ ₹ 98 ಸಾವಿರ ಕೋಟಿ ವೆಚ್ಚವಾಗಲಿದೆ. ಇದಕ್ಕೆ ಜಪಾನ್‌ ₹ 79 ಸಾವಿರ ಕೋಟಿ ಸಾಲ ನೀಡಲಿದ್ದು, ಶೇ 0.1 ಬಡ್ಡಿ ವಿಧಿಸಲಿದೆ. ಮೊದಲ 15 ವರ್ಷ ಮರುಪಾವತಿ ಇಲ್ಲ. ನಂತರದ 50 ವರ್ಷಗಳಲ್ಲಿ ಸಾಲ ಹಿಂದಿರುಗಿಸಬೇಕು. ರೈಲು ಮಾರ್ಗ ನಿರ್ಮಾಣ 7 ವರ್ಷಗಳಲ್ಲಿ ಪೂರ್ಣ ಗೊಳ್ಳಲಿದೆ.

ಭಾರತಕ್ಕೆ ಭೇಟಿ ನೀಡಿರುವ ಜಪಾನ್‌ ಪ್ರಧಾನಿ ಶಿಂಜೊ ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಶನಿವಾರ ಇಲ್ಲಿ ದ್ವಿಪಕ್ಷೀಯ ಮಾತುಕತೆ ಬಳಿಕ ಇವೂ ಸೇರಿದಂತೆ ಒಟ್ಟು 16 ಒಪ್ಪಂದಗಳಿಗೆ ಸಹಿ ಮಾಡಲಾಯಿತು.

ಭಾರತದಲ್ಲಿ ನಡೆಯುವ ಮಲಬಾರ್‌ ನೌಕಾ ವಾರ್ಷಿಕ ಜಂಟಿ ಸಮರಾಭ್ಯಾಸದಲ್ಲಿ ಅಮೆರಿಕದ ಜತೆ ಇನ್ನು ಮುಂದೆ ಜಪಾನ್‌ ಕೂಡ ಪಾಲ್ಗೊಳ್ಳಲಿದೆ.

ವಿಶ್ವಾಸಾರ್ಹತೆ, ಸುರಕ್ಷತೆಗೆ ಒತ್ತು: ಮೋದಿ ಮತ್ತು ಅಬೆ ಅವರು, ವಿಶ್ವಸಂಸ್ಥೆಯ ಸುಧಾರಣೆ ಸೇರಿದಂತೆ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಮಸ್ಯೆಗಳ ಕುರಿತು ಚರ್ಚಿಸಿದರು. 

ಬಳಿಕ ಅಬೆ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ ಅವರು, ‘ವೇಗ, ವಿಶ್ವಾಸಾರ್ಹತೆ ಮತ್ತು ಸುರಕ್ಷತೆಗೆ ಹೆಸರಾಗಿರುವ ಶಿಂಕನ್ಸೆನ್‌ ರೈಲಿನ ಮೂಲಕ ಮುಂಬೈ–ಅಹಮದಾಬಾದ್‌ ಮಧ್ಯೆ ಅತಿ ವೇಗದ ರೈಲು ಪರಿಚಯಿಸುವ ಪ್ರಯತ್ನ,  ಐತಿಹಾಸಿಕ ಗಳಿಗೆಗಿಂತ ಕಡಿಮೆಯಲ್ಲ’ ಎಂದರು.

‘ರಕ್ಷಣಾ ಒಪ್ಪಂದಗಳು ನಮ್ಮ ಭದ್ರತಾ ಸಹಕಾರದ ನಿರ್ಣಾಯಕ ಹೆಜ್ಜೆಗಳಾಗಿವೆ. ಇವು ರಕ್ಷಣಾ ಸಂಬಂಧವನ್ನು ಬಲಪಡಿಸುವ ಮತ್ತು ಭಾರತದಲ್ಲಿಯೇ ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಉತ್ತೇಜನ ನೀಡುವ ಕಾರ್ಯ ಮಾಡಲಿವೆ’ ಎಂದರು.

‘ನಾಗರಿಕ ಪರಮಾಣು ಇಂಧನ ಸಹಕಾರ ಒಪ್ಪಂದವು ವಾಣಿಜ್ಯ ಮತ್ತು ಸ್ವಚ್ಛ ಇಂಧನದ ಒಪ್ಪಂದಕ್ಕಿಂತಲೂ ಮಿಗಿಲು. ಇದು ಶಾಂತಯುತ ಮತ್ತು ಸುರಕ್ಷಿತ ಜಗತ್ತಿಗಾಗಿ ಮಾಡಿಕೊಂಡ ಕಾರ್ಯ ತಂತ್ರ, ಸಹಭಾಗಿತ್ವ ಹಾಗೂ ಪರಸ್ಪರ ವಿಶ್ವಾಸದ ಹೊಸ ಘಟ್ಟದ ಪ್ರಕಾಶಮಾನ ಸಂಕೇತ’ ಎಂದು ಅವರು ವರ್ಣಿಸಿದರು.

ತಾಂತ್ರಿಕ ವಿಷಯಗಳು ಅಂತಿಮಗೊಂಡ ಬಳಿಕ ಪರಮಾಣು ಇಂಧನದ ಶಾಂತಿಯುತ ಬಳಕೆಯ ಒಪ್ಪಂದಕ್ಕೆ ಸಹಿ ಬೀಳಲಿದೆ ಎಂದು ಉಭಯ ದೇಶಗಳ ನಾಯಕರು ತಿಳಿಸಿದರು.

‘ನಮ್ಮ ವಿಶೇಷ ಸಂಬಂಧವನ್ನು ಪರಿಗಣಿಸಿ, 2016ರ ಮಾರ್ಚ್‌ 1ರಿಂದ ಅನ್ವಯವಾಗುವಂತೆ ಭಾರತಕ್ಕೆ ಬರುವ ಜಪಾನ್‌ನ ಎಲ್ಲಾ ಪ್ರವಾಸಿಗಳಿಗೂ ಎಲೆಕ್ಟ್ರಾನಿಕ್‌  ವೀಸಾ (ಇ ವಿಸಾ) ನೀಡಲಾಗುವುದು’ ಎಂದು ಮೋದಿ ಪ್ರಕಟಿಸಿದರು.

ದೇಶವೂ, ನಾಯಕನೂ ಸ್ನೇಹಿತ: ಭದ್ರತೆ, ಸ್ಥಿರತೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಸವಾಲುಗಳನ್ನು ಎದುರಿಸಲು ದ್ವಿಪಕ್ಷೀಯ ಮಟ್ಟದಲ್ಲಿ ಇನ್ನಷ್ಟು ಗಟ್ಟಿಯಾದ ಹೊಂದಾಣಿಕೆ,   ಪರಿಣಾಮಕಾರಿ ಸಂವಹನದ ಅಗತ್ಯವನ್ನು ಉಭಯ ದೇಶಗಳು ಒತ್ತಿ ಹೇಳಿದವು.

‘ಭಾರತದ ಆರ್ಥಿಕತೆಯ ಕನಸನ್ನು ಜಪಾನ್‌ನಷ್ಟು ಅರ್ಥಮಾಡಿಕೊಳ್ಳಬಲ್ಲ ಸ್ನೇಹಿತ ದೇಶ ಮತ್ತೊಂದಿಲ್ಲ’ ಎಂದು ಮೋದಿ ಹೇಳಿದರು.
‘ಅಬೆ ಅವರು ವೈಯಕ್ತಿಕವಾಗಿ ನನಗೆ ಸ್ನೇಹಿತ ಮತ್ತು ಭಾರತ–ಜಪಾನ್‌ ಸಹಭಾಗಿತ್ವದಲ್ಲಿ ಮಹಾನ್ ಹೋರಾಟಗಾರ’ ಎಂದು ಮೋದಿ ಬಣ್ಣಿಸಿದರು.

ಉಭಯ ದೇಶಗಳ ಒಪ್ಪಂದಗಳ ವಿವರ
1. ಪರಮಾಣು ಇಂಧನದ ಶಾಂತಿಯುತ ಬಳಕೆ ಸಹಕಾರ

2. ಮುಂಬೈ–ಅಹಮದಾಬಾದ್‌ ಮಧ್ಯೆ ಬುಲೆಟ್‌ ರೈಲು

3. ರಕ್ಷಣಾ ಸಾಮಗ್ರಿ ಮತ್ತು ತಂತ್ರಜ್ಞಾನ ವರ್ಗಾವಣೆ

4. ವರ್ಗೀಕೃತ ಸೇನಾ ಮಾಹಿತಿ ರಕ್ಷಣೆ

5. ದ್ವಿಮುಖ ತೆರಿಗೆ ರದ್ದಿಗೆ ಒಪ್ಪಿಗೆ

6. ಎರಡೂ ದೇಶಗಳ ರೈಲ್ವೆ ಇಲಾಖೆ ಮಧ್ಯೆ ಸಹಕಾರ

7. ಭಾರತದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಹಾಗೂ ಜಪಾನ್‌ ರೈಲ್ವೆ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಜೆಆರ್‌ಟಿಆರ್‌ಐ) ಮಧ್ಯೆ ಸಹಕಾರ

8. ಎರಡು ರಾಷ್ಟ್ರಗಳ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳ ಮಧ್ಯೆ ಸಹಕಾರ

9. ಯುವ ಸಂಶೋಧಕರ ವಿನಿಮಯ ಕಾರ್ಯಕ್ರಮ

10. ಎರಡೂ ರಾಷ್ಟ್ರಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಮಧ್ಯೆ ಸಹಕಾರ

11. ಉಭಯ ದೇಶಗಳ ಶಿಕ್ಷಣ ಇಲಾಖೆಗಳ ಮಧ್ಯೆ ಸಹಕಾರ

12. ನೀತಿ ಆಯೋಗ ಮತ್ತು ಜಪಾನಿನ ಇಂಧನ ಆರ್ಥಿಕ ಸಂಸ್ಥೆಗಳ ಮಧ್ಯೆ ಸಹಕಾರ

13. ಆಂಧ್ರಪ್ರದೇಶ ಮತ್ತು ಟೊಯಾಮ ಕಂಪೆನಿಗಳ ಮಧ್ಯೆ ಸಹಕಾರ ವೃದ್ಧಿ

14. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅಭಿವೃದ್ಧಿಗೆ ಕೇರಳ ಮತ್ತು ಜಪಾನ್‌ ಮಧ್ಯೆ ಒಪ್ಪಂದ

15. ಅಹಮದಾಬಾದ್‌ ಐಐಎಂ ಮತ್ತು ಜಪಾನ್ ನ್ಯಾಷನಲ್ ಗ್ರಾಜುಯೇಟ್‌ ಸಂಸ್ಥೆಗಳ ನಡುವೆ ನೀತಿ ಅಧ್ಯಯನ ಒಡಂಬಡಿಕೆ

16. ಎರಡೂ ರಾಷ್ಟ್ರಗಳ ಪರಿಸರ, ಅರಣ್ಯ ಇಲಾಖೆಗಳ ಸಿಬ್ಬಂದಿಗೆ ತರಬೇತಿ ಒಡಂಬಡಿಕೆ

ಮುಖ್ಯಾಂಶಗಳು
* ಮುಂಬೈ–ಅಹಮದಾ ಬಾದ್ ಮಧ್ಯೆ ರೈಲು
* ಪರಮಾಣು ಇಂಧನ ಸಹಕಾರಕ್ಕೆ ಒಪ್ಪಿಗೆ
* ಯುವ ಸಂಶೋಧಕರ ವಿನಿಮಯ ಕಾರ್ಯಕ್ರಮ

Comments