ಪಳೆಯುಳಿಕೆ ಇಂಧನ ನಿಯಂತ್ರಣಕ್ಕೆ ಪ್ಯಾರಿಸ್‌ ಒಪ್ಪಂದ- 196 ದೇಶಗಳ ಸಹಿ

ಭೂಮಿತೂಕದ ಭರವಸೆ

ಪ್ಯಾರಿಸ್‌ನಲ್ಲಿ ಹನ್ನೊಂದು ದಿನಗಳ ಜಟಾಪಟಿಯ ನಂತರ 196 ರಾಷ್ಟ್ರಗಳು ಭೂಮಿಯ ಹೊಗೆ ಹೊದಿಕೆಯನ್ನು ಸರಿಸಲು ಒಪ್ಪಿಗೆ ಸೂಚಿಸಿವೆ. ಹೊಸ ‘ಸೂರ್ಯೋದಯ’ದ ಲಕ್ಷಣಗಳು ದೂರದಲ್ಲಿ ಕಾಣತೊಡಗಿವೆ.

ಪ್ಯಾರಿಸ್‌ನಲ್ಲಿ ಹನ್ನೊಂದು ದಿನಗಳ ಜಟಾಪಟಿಯ ನಂತರ 196 ರಾಷ್ಟ್ರಗಳು ಭೂಮಿಯ ಹೊಗೆ ಹೊದಿಕೆಯನ್ನು ಸರಿಸಲು ಒಪ್ಪಿಗೆ ಸೂಚಿಸಿವೆ. ಹೊಸ ‘ಸೂರ್ಯೋದಯ’ದ ಲಕ್ಷಣಗಳು ದೂರದಲ್ಲಿ ಕಾಣತೊಡಗಿವೆ.

ಪೆಟ್ರೋಲ್, ಡೀಸೆಲ್, ಕಲ್ಲಿದ್ದಲಿನಂಥ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕ್ರಮೇಣ ತಗ್ಗಿಸುತ್ತ ಹೋಗಲು ಇದೇ ಮೊದಲ ಬಾರಿಗೆ ಸಾರ್ವತ್ರಿಕ ಒಪ್ಪಂದವೊಂದು ರೂಪುಗೊಂಡಿದೆ.

ಈ ಒಪ್ಪಂದ ಜಾರಿಗೆ ಬಂದಿದ್ದೇ ಆದರೆ ಮುಂದಿನ 30-40 ವರ್ಷಗಳಲ್ಲಿ ದೊಡ್ಡದೊಂದು ಕ್ರಾಂತಿಯೇ ಅನಾವರಣವಾಗಲಿದೆ. ಜಗತ್ತಿನ ಎಲ್ಲ ಕಾರು, ಲಾರಿ, ರೈಲು, ಹಡಗು ವಿಮಾನಗಳು ಪೆಟ್ರೋಲ್/ ಡೀಸೆಲ್ ಬದಲಿಗೆ ಚಲನ ಶಕ್ತಿಗಾಗಿ ಸೂರ್ಯನನ್ನೇ ಅವಲಂಬಿಸಬೇಕಾಗುತ್ತದೆ. ಜಗತ್ತಿನ ಬಹುತೇಕ ಎಲ್ಲ ಕಾರ್ಖಾನೆಗಳು ಕಲ್ಲಿದ್ದಲು, ಪೆಟ್ರೋಶಕ್ತಿಯನ್ನು ಬದಿಗೊತ್ತಿ ಬದಲೀ ಇಂಧನವನ್ನು ಬಳಸಬೇಕಾಗುತ್ತದೆ. ಕಚ್ಚಾತೈಲದಿಂದ ತಯಾರಾಗುತ್ತಿದ್ದ ಬಹುತೇಕ ಎಲ್ಲ ಬಗೆಯ ಪ್ಲಾಸ್ಟಿಕ್, ಪಾಲಿಯೆಸ್ಟರ್‌ಗಳಿಗೆ ವಿದಾಯ ಹೇಳಬೇಕಾಗುತ್ತದೆ. ಜೈವಿಕ ಪ್ಲಾಸ್ಟಿಕ್‍ಗಳ ಹೊಸ ಯುಗ ಬರಲಿದೆ. ಕೃಷಿ, ತಂತ್ರಜ್ಞಾನ, ನಗರ ನಿರ್ವಹಣೆ, ವ್ಯಾಪಾರ, ವಹಿವಾಟುಗಳು ಆಮೂಲಾಗ್ರ ಬದಲಾಗುತ್ತದೆ. ಸಾಮಾಜಿಕ ಸಂಬಂಧಗಳು ಪಲ್ಲಟಗೊಳ್ಳುತ್ತವೆ.

‘ಒಪ್ಪಂದವೇನೋ ಆಗಿದೆ, ಆದರೆ ಮಾರುಕಟ್ಟೆ ಹೇಗೆ ಸ್ಪಂದಿಸುತ್ತದೆ ಎಂಬುದರ ಮೇಲೆ ಅದರ ಯಶಸ್ಸನ್ನು ಅಳೆಯಬೇಕಿದೆ’ ಎನ್ನುತ್ತಾರೆ   ವಿಶ್ಲೇಷಕರು. ಪಳೆಯುಳಿಕೆ ಇಂಧನಗಳ ಮೇಲೆ ಹೂಡಿದ್ದ ಹಣವನ್ನು ಕಂಪನಿಗಳು ಹಿಂತೆಗೆದುಕೊಂಡು ಸೌರಶಕ್ತಿ, ಗಾಳಿಶಕ್ತಿ ಮತ್ತು ಜೈವಿಕ ಇಂಧನಗಳ ಮೇಲೆ ಹೂಡತೊಡಗಿದರೆ ಮಾತ್ರ ಭೂಮಿಯನ್ನು ಹೊಗೆಮುಕ್ತ ಮಾಡುವ ಅಸಲೀ ಕೆಲಸ ಜಾರಿಗೆ ಬಂದಂತಾಗುತ್ತದೆ. 

ಹಾಗೆ ಹೂಡಿಕೆಯನ್ನು ಹಿಂತೆಗೆಯುವಂತೆ ಉದ್ಯಮಿಗಳ ಮನವೊಲಿಸಲು ರಾಜಕೀಯ ಶಕ್ತಿಗಳು ಸಮರ್ಥರಾದರೆ ಅದು ಇಡೀ ಮಾನವಕುಲದ ಇದುವರೆಗಿನ ಮಹಾಸಾಧನೆ ಎಂದೇ ಹೇಳಬಹುದು.

1980ರ ದಶಕದಲ್ಲಿ ರಷ್ಯ ಮತ್ತು ಅಮೆರಿಕ ಮಧ್ಯೆ ಪರಮಾಣು ಶಸ್ತ್ರಾಸ್ತ್ರ ಪೈಪೋಟಿ ಅತಿಯಾಗಿದ್ದಾಗ ಇಡೀ ಭೂಮಿ ಧ್ವಂಸವಾಗುವ ಹಂತಕ್ಕೆ ಬಂದಿತ್ತು. ವಿಶ್ವಸಂಸ್ಥೆಯ ಸತತ 15 ವರ್ಷಗಳ ಯತ್ನದಿಂದಾಗಿ ಪರಮಾಣು ಶಸ್ತ್ರ ಮತ್ತು ಕ್ಷಿಪಣಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಶಕ್ತರಾಷ್ಟ್ರಗಳು ನಿರ್ಧರಿಸಿದವು. ಮನುಕುಲ ತುಸು ನಿರಾಳವಾಗಿತ್ತು.

ಈಗಿನ ಬಿಸಿ ಪ್ರಳಯದ ಸಂಕಟ ನಿವಾರಣೆಗೆ ಎಲ್ಲ 196 ದೇಶಗಳನ್ನೂ ಒಂದುಗೂಡಿಸುವುದು ಸುಲಭದ್ದೇನೂ ಆಗಿರಲಿಲ್ಲ. ಭೂಮಿ ದುರಂತದತ್ತ ಸಾಗುತ್ತಿದೆಯೆಂದು ವಿಶ್ವಸಂಸ್ಥೆಯ ವಿಜ್ಞಾನಿಗಳು ಅದೆಷ್ಟೇ ಒಕ್ಕೊರಲಿನಿಂದ ಹೇಳಿದರೂ ಕಲ್ಲಿದ್ದಲು- ಕಚ್ಚಾತೈಲದಂಥ ಕರೀಶಕ್ತಿಯ ಬಳಕೆಯನ್ನು ನಿರ್ಬಂಧಿಸಲು ಯಾವ ಶಕ್ತದೇಶವೂ ಸಿದ್ಧವಿರಲಿಲ್ಲ. ಹೀಗಾಗಿ ಕಳೆದ 20 ಬಾರಿ ಶೃಂಗಸಭೆ ನಡೆದರೂ ಒಪ್ಪಂದಕ್ಕೆ ಬರಲು ವಿಫಲವಾಗಿದ್ದವು. ವಿಜ್ಞಾನಿಗಳಿಗಿಂತ ಜೋರಾಗಿ ಭೂಮಿಯೇ ಚೀತ್ಕರಿಸಬೇಕಾಯಿತು. ಅದು ತನ್ನ ವಾಯುಮಂಡಲವನ್ನು ಅಲ್ಲೋಲ ಕಲ್ಲೋಲ ಮಾಡುತ್ತ ಅತಿವೃಷ್ಟಿ, ಅತಿಬೇಸಿಗೆ, ಅತಿ ಚಳಿ, ಅತಿಮಾರುತಗಳ ಮೂಲಕ ತನ್ನ ಆಕ್ರಂದನ
ವನ್ನು ವ್ಯಕ್ತಪಡಿಸುತ್ತಲೇ ಬಂದಿತ್ತು. ಪ್ರಳಯದ ಕಾವು ಎಲ್ಲರಿಗೂ ತಟ್ಟತೊಡಗಿತ್ತು.   

196 ದೇಶಗಳೆಂದರೆ ಅಭಿವೃದ್ಧಿಯ ಆಶೋತ್ತರಗಳ ನೂರೊಂದು ಗುಂಪು. ಹೂತಿದ್ದ ಇಂಧನಗಳನ್ನು ನೂರಿಪ್ಪತ್ತು ವರ್ಷಗಳಿಂದ ಮೇಲೆತ್ತಿ ಉಡಾಯಿಸಿ ಶ್ರೀಮಂತರಾದ ದೇಶಗಳ ಗುಂಪು; ಅಂಥ ‘ತಪ್ಪಿತಸ್ಥರ’ ಬಳಗಕ್ಕೆ ಸೇರದೆ, ಈಚೆಗಷ್ಟೇ ಭಾರೀ ಹೊಗೆ ಹಾಯಿಸು
ತ್ತಿರುವ ಕೊರಿಯಾ, ತೈವಾನ್, ಚೀನಾದಂಥ ನವಧನಿಕರ ಗುಂಪು; ಅಭಿವೃದ್ಧಿಯ ಕನಸು ಕಾಣುತ್ತ ಇದೀಗ ತಾನೇ ಹೊಗೆ ಹೊಮ್ಮಿಸಲು ಕಲಿಯುತ್ತಿರುವ ಭಾರತ, ಮೆಕ್ಸಿಕೊ, ಬ್ರಝಿಲ್, ಪಾಕಿಸ್ತಾನಗಳ ಗುಂಪು; ಏನನ್ನೂ ಉಡಾಯಿಸದೆ, ಯಾವ ತಪ್ಪನ್ನೂ ಮಾಡದೆ, ಹವಾಮಾನ ಸಂಕಟ ಅನುಭವಿಸುವ ಬಡದೇಶಗಳ ಗುಂಪು; ಕಚ್ಚಾತೈಲವನ್ನು ಮಾರುವ ಅರಬ್ ದೇಶಗಳ ಗುಂಪು; ಅವುಗಳಿಗೆ ಕುಮ್ಮಕ್ಕು ಕೊಡುವ ಪೆಟ್ರೋಲಿಯಂ ಕಂಪನಿಗಳ ಬಲಿಷ್ಠ ಗುಂಪು; ಇಂಥ ಗುಂಪುಗುಳಿತನದಿಂದ ಬೇಸತ್ತು ಬದಲೀ ತಂತ್ರಜ್ಞಾನಕ್ಕೆ ಒತ್ತಾಯಿಸುವ ಸರ್ಕಾರೇತರ ಸಂಸ್ಥೆಗಳ ಗುಂಪು, ಧಾರ್ಮಿಕ ನಾಯಕರ ಗುಂಪು, ಆದಿವಾಸಿಗಳ ಗುಂಪು, ಯುವಜನರ ಗುಂಪು.

ಒಂದೊಂದು ಗುಂಪಿಗೂ ಅದರದ್ದೇ ಹಕ್ಕೊತ್ತಾಯ; ಒಪ್ಪಂದದ ಕರಡುಗಳಿಗೆ ಅದರದ್ದೇ ಅಡ್ಡಗಾಲು. ಹಿಂದುಳಿದವರ ಗುಂಪಿಗೆ ಬದಲೀ ಉಚಿತ ತಂತ್ರಜ್ಞಾನ ಬೇಕು; ತೀರ ಹಿಂದುಳಿದವರ ಗುಂಪಿನ ನೈಸರ್ಗಿಕ ಸಂಕಷ್ಟಗಳಿಗೆ ನಗದು ಪರಿಹಾರ ಬೇಕು; ಜಗತ್ತಿನಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಬಡವರನ್ನು ಕಟ್ಟಿಕೊಂಡ ಭಾರತಕ್ಕೆ ಸೌರ ತಂತ್ರಜ್ಞಾನವೂ ಬೇಕು, ಹಣವೂ ಬೇಕು, ಬಡವರೆಲ್ಲ ಮೇಲಕ್ಕೆ ಬರುವವರೆಗೆ ಕಲ್ಲಿದ್ದಲನ್ನು ಸುಡಲು ಅನುಮತಿಯೂ ಬೇಕು.

ಈ ಎಲ್ಲ ಗುಂಪುಗಳನ್ನು ಒಗ್ಗೂಡಿಸುವುದು ಸುಲಭವೆ? ಹಾಗೆಂದು ಕೈಚೆಲ್ಲಿ ಕೂರುವಂತಿಲ್ಲ. ವಿಶ್ವಸಂಸ್ಥೆಯದ್ದು ಒಂದೇ ಗುರಿ: ‘ನೀವು ಹೇಗಾದರೂ ಹೊಣೆಗಾರಿಕೆಯನ್ನು ಹಂಚಿಕೊಳ್ಳಿ. ಇನ್ನು 50 ವರ್ಷಗಳಲ್ಲಿ, ಔದ್ಯಮಿಕ ಯುಗದ ಆರಂಭದಲ್ಲಿ ಜಾಗತಿಕ ತಾಪಮಾನ ಎಷ್ಟಿತ್ತೊ ಅದಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಮೀರಕೂಡದು’.

ಅದರರ್ಥ ಏನೆಂದರೆ, ವಾಯುಮಂಡಲಕ್ಕೆ ಇನ್ನು ಹೆಚ್ಚೆಂದರೆ 1000 ಗಿಗಾಟನ್ ಇಂಗಾಲವನ್ನು ಸೇರಿಸಬಹುದು. ಜಾಸ್ತಿ ಇಲ್ಲ. ತಾಪಮಾನ 2.5 ಡಿಗ್ರಿಗೆ ಏರಿದರೆ ಜೀವಮಂಡಲ ಉಳಿಯಲಿಕ್ಕಿಲ್ಲ. ಎಲ್ಲ ರಾಷ್ಟ್ರಗಳೂ ಒಟ್ಟಾಗಿ ಅದಕ್ಕಿಂತ ಹೆಚ್ಚಿಗೆ ಇಂಗಾಲವನ್ನು ಹೊರ ಹಾಕುವುದಿಲ್ಲ ಎಂದು ಒಪ್ಪಂದಕ್ಕೆ ಬರಬೇಕು.

ಅಂಥದ್ದೊಂದು ಒಪ್ಪಂದಕ್ಕೆ ದೇಶಗಳನ್ನು ಮಣಿಸಲಾಗದೆ ಹಿಂದೆ ಪದೇ ಪದೇ ವೈಫಲ್ಯಗಳನ್ನು ಕಂಡಿದ್ದ ವಿಶ್ವಸಂಸ್ಥೆ ಈ ಬಾರಿ ಹೊಸ ಉಪಾಯ ಹೂಡಿತ್ತು: ‘ಮುಂದಿನ 15 ವರ್ಷಗಳವರೆಗೆ ನಿಮ್ಮ ಯೋಜನೆ ಏನು ಎಂಬುದನ್ನು ಬರೆದು ತನ್ನಿ’ ಎಂದು ಎಲ್ಲ ರಾಷ್ಟ್ರಗಳಿಗೂ ಅದು ನಿರ್ದೇಶನ ನೀಡಿತ್ತು. ಎಲ್ಲ ದೇಶಗಳೂ ತಂದವು. ಪೆಟ್ರೋಲ್ ಬಳಕೆಗೆ ಹೊಸ ತೆರಿಗೆ ಹಾಕುತ್ತೇವೆ, ಹೊಸ ಉಷ್ಣ
ಸ್ಥಾವರಗಳಿಗೆ ನಿಷೇಧ ಹಾಕುತ್ತೇವೆ, ಸೌರಶಕ್ತಿಗೆ ಆದ್ಯತೆ ಕೊಡುತ್ತೇವೆ, ಗಿಡಮರ ಬೆಳೆಸುತ್ತೇವೆ ಇತ್ಯಾದಿ ಪ್ರತಿಜ್ಞಾವಚನ
ಗಳು ಬಂದವು. ಶೃಂಗಸಭೆಯ ಯಶಸ್ಸಿನ ಅರ್ಧ ಬಾಗಿಲು ಆಗಲೇ ತೆರೆದುಕೊಂಡಿತು. ಭೂತಾಪವನ್ನು 2 ಡಿಗ್ರಿಗಲ್ಲ, ಒಂದೂವರೆ ಡಿಗ್ರಿಗೇ ಮಿತಿ ಹಾಕುವ ಕನಸೂ ತೆರೆದುಕೊಂಡಿತು.

ಭಾರತವಂತೂ ಸೌರಶಕ್ತಿಯನ್ನು ಇನ್ನು ಏಳೇ ವರ್ಷಗಳಲ್ಲಿ ಐದು ಪಟ್ಟು ಹೆಚ್ಚಿಸುತ್ತೇನೆಂದಿತು. ಅಷ್ಟು ದೊಡ್ಡ ಶಪಥವನ್ನು ಬೇರೆ ಯಾವ ದೇಶವೂ ಕಟ್ಟಿರಲಿಲ್ಲ. ಸಾಲದ್ದಕ್ಕೆ ಕಲ್ಲಿದ್ದಲಿಗೆ ಹೆಚ್ಚಿನ ತೆರಿಗೆ ಆಗಲೇ ಹೇರಿದ್ದೇವೆ; ವರ್ಷಕ್ಕೆ ಐವತ್ತು ಲಕ್ಷ ಗಿಡಮರ ಬೆಳೆಸುತ್ತೇವೆ ಎಂದು ಹೇಳಿದ್ದೂ ಅಲ್ಲದೆ, ಪ್ಯಾರಿಸ್ಸಿಗೆ ಹೊರಡಲು ತುಸು ಮುಂಚೆ ಬಿಸಿಲ ರಾಷ್ಟ್ರಗಳನ್ನೆಲ್ಲ ಸೇರಿಸಿ ಒಂದು ಸಂಘಟನೆಯನ್ನೂ ಕಟ್ಟಿ ಶಾಭಾಸ್ ಗಿಟ್ಟಿಸಿತು.

ಆದರೆ ಇಷ್ಟಾಗಿಯೂ ‘ನಮಗೆ ಬಡವರನ್ನು ಮೇಲೆತ್ತಲು ಕಲ್ಲಿದ್ದಲು ಉರಿಸಲೇಬೇಕು’ ಎಂದು ಶೃಂಗಸಭೆಗೆ ಅಡ್ಡಗೋಲನ್ನಿಟ್ಟಿತು. ಈ ಹಠಮಾರಿತನಕ್ಕೆ ಟೀಕೆ ಎದುರಾದಾಗ ಭಾರತ ನೀಡಿದ ಸಮರ್ಥನೆ ಇಷ್ಟೆ: ‘ಇನ್ನೂ ಸಾವಿರ ಗಿಗಾಟನ್ ಇಂಗಾಲವನ್ನು ಉರಿಸಲು ಅವಕಾಶ ಇದೆಯೆಂದಾದರೆ ಶ್ರೀಮಂತ ರಾಷ್ಟ್ರಗಳು ಅದರಲ್ಲಿ ಪಾಲು ಕೇಳಲೇಕೂಡದು. ಅಭಿವೃದ್ಧಿಯ ಕನಸು ಕಾಣುತ್ತಿರುವವರಿಗೆ ಅದರಲ್ಲಿ ಸಿಂಹಪಾಲು ಬೇಕೇ ಬೇಕು’ ಎಂದಿತು. ಶ್ರೀಮಂತಿಕೆಯ ಹೆಬ್ಬಾಗಿಲಲ್ಲಿ ನಿಂತ ಇತರ ಬ್ರಿಕ್ ರಾಷ್ಟ್ರಗಳ ಅನುಮೋದನೆಯನ್ನೂ ಗಿಟ್ಟಿಸಿತು.  

ಧನಿಕ ದೇಶಗಳ ಪಾಲಿಗೆ ಭಾರತ ಖಳನಾಯಕ ಎನಿಸಿತು. ಉತ್ತರ ಧ್ರುವದ ಬಳಿ ಹಿಮದಾಳದ ಇಂಧನ ನಿಕ್ಷೇಪಕ್ಕೆ ಕೈಹಾಕಲು ಭಾರೀ ಬಂಡವಾಳ ಹೂಡಿದ್ದ ದೇಶಗಳು ಒಟ್ಟಾದವು. ಈ ಮಧ್ಯೆ ಅಮೆರಿಕ ಒಂದು ಕಿಲಾಡಿ ಕೆಲಸಕ್ಕೆ ಕೈಹಾಕಿತು. ಆಫ್ರಿಕ, ಲ್ಯಾಟಿನ್ ಅಮೆರಿಕ, ಶಾಂತಸಾಗರದ ಚಿಕ್ಕದೊಡ್ಡ 100 ರಾಷ್ಟ್ರಗಳ ‘ಛತ್ರಕೂಟ’ವನ್ನು ಪ್ಯಾರಿಸ್‌ನಲ್ಲೇ ನಿರ್ಮಿಸಿಕೊಂಡು ಗುಂಪುಗಾರಿಕೆ ನಡೆ
ಸಿತು. ಅದರ ಹುನ್ನಾರ ಏನೆಂದರೆ ತನ್ನ ಹೊಗೆ ಉದ್ಯಮಗಳನ್ನು ಈ ಬಡರಾಷ್ಟ್ರಗಳಿಗೆ ದಾಟಿಸುವುದು. ಅದು ಗೊತ್ತಾಗಿ ಮತ್ತೆ ಜಟಾಪಟಿ. ಇತ್ತ   ಭಾರತದ ನೆಲದಲ್ಲೇ ಕೊಳಕು ಉದ್ಯಮಗಳನ್ನು ಹೂಡಲು ಸಿದ್ಧತೆ ನಡೆಸಿದ್ದ ಕೆಲವು ಕಾರ್ಪೊರೇಟ್ ಶಕ್ತಿಗಳು ಭಾರತದ ನಿಲುವಿಗೆ ಪರೋಕ್ಷ ಬೆಂಬಲ ಸೂಚಿಸಿದವು. ಪ್ಯಾರಿಸ್‌ನಲ್ಲಿ ಸೇರಿದ್ದ 950 ಸರ್ಕಾರೇತರ ಸಂಸ್ಥೆಗಳೂ ಸೇರಿದಂತೆ 40 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳ ಒತ್ತಡಗಳ ಮಧ್ಯೆ ಹಗಲೂ ರಾತ್ರಿ ಮಾತುಕತೆಗಳು ನಡೆದವು. 2050ರವೇಳೆಗೆ ಭೂಮಿಯನ್ನು ಹೊಗೆರಹಿತ ಮಾಡುವ ಮಾತುಗಳೂ ಕೇಳಿಬಂದವು.

‘ನನ್ನ ಜೀವನವಿಡೀ ನೀವು ಮಾತಾಡ್ತಾನೇ ಇದೀರಿ. ಒಪ್ಪಂದಕ್ಕೆ ಬರೋದು ಯಾವಾಗ?’ ಎಂದು ಕೆನಡಾದ 21ರ ತರುಣಿ ಅಂಜಲಿ ಅಪ್ಪಾದುರೈ 2011ರಲ್ಲಿ ಡರ್ಬಾನ್‍ನಲ್ಲಿ ನಡೆದ ಇಂಥದ್ದೇ ಶೃಂಗಸಭೆಯಲ್ಲಿ ಕೇಳಿದ್ದರು. ಅವರು ಹುಟ್ಟಿದ ಲಾಗಾಯ್ತಿನಿಂದಲೂ  ‘ಹವಾಗುಣ ಬದಲಾವಣೆ’ ಕುರಿತ ಜಾಗತಿಕ ಒಪ್ಪಂದದ ಮಾತುಕತೆ ನಡೆಯುತ್ತಲೇ ಇದೆ. ‘ಇನ್ನೆಷ್ಟು ವರ್ಷ ಕಾಯಬೇಕು?’ ಎಂಬ ಅವರ ಈ ಪ್ರಶ್ನೆಯನ್ನು ಪ್ಯಾರಿಸ್‌ನಲ್ಲಿ ಮೇಳವಿಸಿದ್ದ ಪ್ರಜ್ಞಾವಂತ ಯುವ ಜನತೆ ಮತ್ತೆ ಮತ್ತೆ ಕೇಳುತ್ತ ದಿನವೂ ಒತ್ತಡ ಹಾಕುತ್ತಲೇ ಇತ್ತು. 
 
ಸಮಸ್ಯೆ ಮುಗಿದಿಲ್ಲ:  ಕೊನೆಗೂ ಸಾರ್ವತ್ರಿಕ ಒಪ್ಪಂದ ಸಿದ್ಧವಾಗಿದೆ. ಪ್ರಪಾತದತ್ತ ಧಾವಿಸುತ್ತಿದ್ದ ಪೃಥ್ವಿಯ ರಕ್ಷಣೆಗೆ ಎಲ್ಲರೂ ಒಂದಾಗೋಣವೆಂದು ಮಾತಿನ ಭರವಸೆಯಂತೂ ಸಿಕ್ಕಂತಾಗಿದೆ. ಆದರೆ ಸಿಕ್ಕುಗಳು ಬಹಳಷ್ಟು ಉಳಿದಿವೆ. ಇದು ಕಾನೂನುಬದ್ಧ ವಾಗ್ದಾನ ಅಲ್ಲ. ಏಕೆಂದರೆ ಒಬಾಮಾ ಅಮೆರಿಕದ ಸೆನೆಟ್‌ ಅನುಮತಿ ಇಲ್ಲದೆ ಅಂಥ ಕಾನೂನಿಗೆ ಸಹಿ ಹಾಕುವಂತಿಲ್ಲ. ಅವರ ಪ್ರಸ್ತಾವನೆ
ಯನ್ನು ತಳ್ಳಿ ಹಾಕಲು ಸೆನೆಟ್‌ ಪ್ರತಿಪಕ್ಷದ ಸದಸ್ಯರು ಸಜ್ಜಾಗಿ ಕೂತಿದ್ದಾರೆ.

ಇನ್ನು, ಸಂಕಟಗ್ರಸ್ತ ದೇಶಗಳಿಗೆ 10 ಸಾವಿರ ಕೋಟಿ ಡಾಲರ್ (ಸುಮಾರು ₹6.6 ಲಕ್ಷ ಕೋಟಿ) ಪರಿಹಾರ ನಿಧಿಯ ಘೋಷಣೆಯಾದರೂ ಅದನ್ನು ಯಾವ ಯಾವ ದೇಶಗಳಿಂದ ಸಂಗ್ರಹಿಸಬೇಕು, ಅದು ಆಗಾಗ ನವೀಕರಣವಾಗಬೇಕು ಎಂಬುದು ನಿಗದಿಯಾಗಿಲ್ಲ. ದೊಡ್ಡ ದೊಡ್ಡ ಪ್ರತಿಜ್ಞಾ ಘೋಷಣೆ ಮಾಡಿದ ದೇಶಗಳಲ್ಲಿ ನಿಜಕ್ಕೂ ಬದಲಾವಣೆ ಕಾರ್ಯರೂಪಕ್ಕೆ ಬರುತ್ತಿದೆಯೆ ಎಂದು ವೀಕ್ಷಣೆ ಮಾಡಲು ಸಮಿತಿಯೂ ರೂಪುಗೊಂಡಿಲ್ಲ.

ಅಂಥ ಪ್ರಗತಿಯ ಪರಿಶೀಲನೆ ಮಾಡಲು ಪ್ರತಿ ಐದು ವರ್ಷಗಳಿಗೊಮ್ಮೆ ಸಭೆ ಸೇರೋಣವೇ ಎಂದರೆ ಅದಕ್ಕೂ ಭಾರತ ಸೂಚಿಸಿದೆ. ತಾಪಮಾನ ಮಿತಿಯನ್ನು 1.5 ಡಿಗ್ರಿಗೆ ತಗ್ಗಿಸೋಣವೆಂಬ ವಿಶ್ವಸಂಸ್ಥೆಯ ಪ್ರಸ್ತಾವನೆಗೆ ಪೂರ್ಣ ಒಪ್ಪಿಗೆ ಸಿಕ್ಕಿಲ್ಲ. ‘2 ಡಿಗ್ರಿಗಿಂತ ಕಡಿಮೆ ಮಾಡಲು ಬದ್ಧರಾಗೋಣ’ ಎಂಬುದಷ್ಟೇ ತೀರ್ಮಾನವಾಗಿದೆ.

ಸುಲಭಕ್ಕೆ ಬದಲಾವಣೆ ಆದೀತೆ
ಅಂತೂ ಈ ಭೂಮಿಯ ಭವಿಷ್ಯದ ಹೊಣೆಗಾರಿಕೆ ಇದೀಗ ರಾಜಕೀಯ ಮುತ್ಸದ್ದಿಗಳ ಕೈಯಿಂದ ಜಾರಿ, ಕಂಪನಿಗಳ ತೆಕ್ಕೆಗೆ ಬರುವಂತಾಗಿದೆ. ಪೃಥ್ವಿಯ ಎಲ್ಲ 700 ಕೋಟಿ ಜನರನ್ನು ಪೆಟ್ರೊದಾಸರನ್ನಾಗಿಸಿ, ಭೋಗವಸ್ತುಗಳ ಸುನಾಮಿಯನ್ನೇ ಉಕ್ಕಿಸಿ, ಇಡೀ ಭೂಮಿಯನ್ನೇ ಕೊಳ್ಳುಬಾಕರ ಸಂತೆಯನ್ನಾಗಿಸಲು ಹೊರಟ ಇವು ಸುಲಭಕ್ಕೆ ಬದಲಾಗುತ್ತವೆಯೆ? ಭೂಮಿಯ ಒಟ್ಟಾರೆ ಒಳಿತಿಗೆ ಹೊಸ ತಂತ್ರಜ್ಞಾನವನ್ನು ಒಗ್ಗಿಸಿಕೊಳ್ಳುತ್ತವೆಯೆ?

ಅವರ ಯೋಜನೆಗಳ ಮೇಲೆ ನಾವೆಲ್ಲ ನಿರಂತರ ಕಣ್ಣಿಟ್ಟಿರಬೇಕೆ? ಎಲ್ಲಕ್ಕಿಂತ ಮುಖ್ಯ ಪ್ರಶ್ನೆಯೆಂದರೆ ಇಂದಿನ ಜನನಾಯಕರ ನಿರ್ಣಯವನ್ನು ನಾಳಿನ ರಾಜಕಾರಣಿಗಳು ಜಾರಿಯಲ್ಲಿಡುತ್ತಾರೆಯೆ? ಶ್ರೀಸಾಮಾನ್ಯರನ್ನು ಪೆಟ್ರೊಧನಿಕರ ಮುಷ್ಟಿಯಿಂದ ಬಿಡಿಸಿ ಸುಸ್ಥಿರ ಬದುಕಿನ, ಸಮಾನ ಸಮಾಜದತ್ತ ಕೊಂಡೊಯ್ಯುತ್ತಾರೆಯೆ?

‘ಹೊಸ ಇತಿಹಾಸವನ್ನು ಇದೀಗ ರೂಪಿಸಿದ್ದೇವೆ, ಭೂಗ್ರಹದ ಜೀವಲೋಕಕ್ಕೆ ಶ್ರೀರಕ್ಷೆ ಒದಗಿಸುತ್ತೇವೆ’ ಎಂದ ಫ್ರಾನ್ಸ್ ಅಧ್ಯಕ್ಷ ಹೊಲಾಂಡೆಯವರ ಭೂಮಿತೂಕದ ಭರವಸೆ ನಿಜವಾದೀತೆ?

ಐತಿಹಾಸಿಕ ಒಪ್ಪಂದಕ್ಕೆ 196 ದೇಶಗಳ ಸಹಿ
ಪ್ಯಾರಿಸ್, 
ಲಾ ಬೌರ್ಗೆಟ್‌, ಫ್ರಾನ್ಸ್‌ (ರಾಯಿಟರ್ಸ್, ಪಿಟಿಐ): ಹವಾಮಾನ ವೈಪರೀತ್ಯ ತಡೆಯುವ 31 ಪುಟಗಳ ಐತಿಹಾಸಿಕ ಒಪ್ಪಂದಕ್ಕೆ ವಿಶ್ವದ 196 ದೇಶಗಳು ಶನಿವಾರ ಸಹಿ ಹಾಕಿವೆ.  ‘ಒಪ್ಪಂದಲ್ಲಿ ಭಾರತದ ಸಲಹೆಗಳಿಗೆ ಮಾನ್ಯತೆ ನೀಡಿರುವುದು ಸಂತಸದ ವಿಚಾರ’ ಎಂದು ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಪ್ರತಿಕ್ರಿಯಿದ್ದಾರೆ.

ತಾಪಮಾನ ಏರಿಕೆ ಮಿತಿಯನ್ನು 2 ಡಿಗ್ರಿ ಸೆಲ್ಸಿಯಸ್‌ಗೆ ನಿಗದಿಪಡಿಸಲು ಎಲ್ಲಾ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ.

ಒಪ್ಪಂದವನ್ನು ಸಮಗ್ರವಾಗಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಇದರ ಯಶಸ್ಸು ಆಯಾ ರಾಷ್ಟ್ರಗಳ ಕ್ರಮಗಳ ಮೇಲೆ ಅವಲಂಬಿತವಾಗಿದೆ. ಆದರೆ ಜಾಗತಿಕ ತಾಪಮಾನ ಏರಿಕೆ ತಡೆಯುವಲ್ಲಿ ಬಹುತೇಕ ಎಲ್ಲಾ ರಾಷ್ಟ್ರಗಳಿಗೆ ಈ ಒಪ್ಪಂದವು ಪ್ರೇರಣೆಯಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಒಪ್ಪಂದದ ಪ್ರಮುಖ ಅಂಶಗಳು
* ತಾಪಮಾನ ಏರಿಕೆ ತಡೆಯುವ ಒಪ್ಪಂದಕ್ಕೆ 196 ರಾಷ್ಟ್ರಗಳ ಸಹಿ

* ಏರಿಕೆ ಮಿತಿಯನ್ನು 2 ಡಿಗ್ರಿ ಸೆಲ್ಸಿಯಸ್‌ಗೆ ಇಳಿಸಲು ಪ್ಯಾರಿಸ್‌ ಹವಾಮಾನ ಶೃಂಗಸಭೆ ತೀರ್ಮಾನ

* ಇದರಿಂದ ಭಾರತ ಮತ್ತು ಚೀನಾದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇನ್ನೂ ಹಲವು ವರ್ಷಗಳ ಕಾಲ ಕಲ್ಲಿದ್ದಲು ಬಳಸಲು ಅವಕಾಶ.
* 13 ದಿನಗಳ  ಶೃಂಗಸಭೆ ಯಶಸ್ವಿ

* 2020ರಿಂದ ಜಾರಿ

* 2020ರಿಂದ ಅನ್ವಯವಾಗುವಂತೆ  ಶ್ರೀಮಂತ ರಾಷ್ಟ್ರಗಳು ಪ್ರತಿ ವರ್ಷ 10 ಸಾವಿರ ಕೋಟಿ ಡಾಲರ್‌ (ಸುಮಾರು ₹ 6.7 ಲಕ್ಷ ಕೋಟಿ) ಸಂಗ್ರಹಿಸಬೇಕು

* ಒಪ್ಪಂದದ ನಿಯಮಗಳು ಕಾನೂನುಬದ್ಧವಲ್ಲ: ಟೀಕೆ

* 31 ಪುಟಗಳ ಒಪ್ಪಂದದಲ್ಲಿನ ಅಂಶಗಳಿಗೆ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ರಾಷ್ಟ್ರಗಳ ಸಮ್ಮತಿ

ಜಾವಡೇಕರ್‌ ಸಂತಸ
ಒಪ್ಪಂದವನ್ನು ಭಾರತ ಸ್ವಾಗತಿಸಿದ್ದು, ಒಪ್ಪಂದ ಸಮತೋಲನದಿಂದ ಕೂಡಿದೆ ಎಂದು ಹೇಳಿದೆ.

‘ಭಾರತ ಮುಂದಿಟ್ಟ ಸಲಹೆಗಳಿಗೆ ಒಪ್ಪಂದದಲ್ಲಿ ಸ್ಥಾನ ದೊರೆತದ್ದು ಸಂತಸದ ವಿಚಾರ’ ಎಂದು ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಶನಿವಾರ ಪ್ರತಿಕ್ರಿಯಿಸಿದ್ದಾರೆ.

‘ಕೆಲವೊಂದು ವಿಷಯಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿತ್ತು. ಅವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

Comments