ಕಾರ್ಯಾಚರಣೆ ವೇಳೆ ಉಸಿರುಗಟ್ಟಿ ಮಗು ಸಾವು

ರೈಲ್ವೆ ಒತ್ತುವರಿ ತೆರವು: ಕೇಂದ್ರದ ವಿರುದ್ಧ ಕೇಜ್ರಿವಾಲ್‌ ಸಮರ

ದೆಹಲಿಯಲ್ಲಿ ರೈಲ್ವೆ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಮಗು ಉಸಿರುಗಟ್ಟಿ ಮೃತಪಟ್ಟ ಘಟನೆಯು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಕೇಂದ್ರದ ನಡುವೆ ಜಟಾಪಟಿಗೆ ಕಾರಣವಾಗಿದೆ.

ನವದೆಹಲಿ (ಪಿಟಿಐ): ದೆಹಲಿಯಲ್ಲಿ ರೈಲ್ವೆ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಮಗು ಉಸಿರುಗಟ್ಟಿ ಮೃತಪಟ್ಟ ಘಟನೆಯು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಕೇಂದ್ರದ ನಡುವೆ ಜಟಾಪಟಿಗೆ ಕಾರಣವಾಗಿದೆ.

ಶನಿವಾರ ರಾತ್ರಿ ಪಶ್ಚಿಮ ದೆಹಲಿಯ ಶಕುರ್‌ ಬಸ್ತಿಯಲ್ಲಿ ರೈಲ್ವೆ ಭೂಮಿ ಒತ್ತುವರಿ ಮಾಡಿಕೊಂಡಿದ್ದ ಕೊಳಗೇರಿ ತೆರವುಗೊಳಿಸುವಾಗ ಮಗು ಮೃತಪಟ್ಟಿತ್ತು.

ಆದರೆ, ಈ ಕಾರ್ಯಾಚರಣೆ ನಡೆಸುವುದಕ್ಕಿಂತ ಮೊದಲೇ ಮಗು ಮೃತಪಟ್ಟಿತ್ತು, ಕಾರ್ಯಾಚರಣೆ ರಾತ್ರಿ 12 ಗಂಟೆ ನಂತರ ನಡೆಯಿತು. ಇದಕ್ಕೂ ಮೊದಲು ಕೊಳಗೇರಿ ನಿವಾಸಿಗಳು ತಮ್ಮ ಬಟ್ಟೆ, ಸರಕು ಸಾಮಾನುಗಳನ್ನು ಎತ್ತಿಟ್ಟುಕೊಳ್ಳುವ ತರಾತುರಿಯಲ್ಲಿದ್ದರು. ಈ ಸಂದರ್ಭದಲ್ಲಿ ಮುಖದ ಮೇಲೆ ಬಟ್ಟೆ ಬಿದ್ದು ಉಸಿರುಗಟ್ಟಿ ಮಗು ಮೃತಪಟ್ಟಿದೆ.     ತೆರವು ಕಾರ್ಯಾಚರಣೆ ನಂತರ ನಡೆಯಿತು ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

ಇದಕ್ಕೆ ರೈಲ್ವೆ ಇಲಾಖೆಯೇ ಕಾರಣ ಎಂದಿರುವ ಕೇಜ್ರಿವಾಲ್‌ ಸರಣಿ ಟ್ವೀಟ್‌ ಮಾಡಿದ್ದಾರೆ. ಘಟನೆಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರೈಲ್ವೆ ಇಲಾಖೆ ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಿ  ಕೊಳೆಗೇರಿ ತೆರವುಗೊಳಿಸಿದೆ.  ಸಾವಿರಕ್ಕೂ ಹೆಚ್ಚು ಮಂದಿ ಬೀದಿಗೆ ಬಿದ್ದಿದ್ದು,  ಗಡಗಡ ನಡುಗುವ ಚಳಿಯಲ್ಲಿ ಇಡೀ ರಾತ್ರಿ ಕಳೆದಿದ್ದಾರೆ. ಈ ಕಾರ್ಯಾಚರಣೆ ವೇಳೆ ಮಗು ಮೃತಪಟ್ಟಿದೆ. ಖಂಡಿತ ಇದನ್ನು ದೇವರು ಕೂಡ ಕ್ಷಮಿಸಲಾರ. ಆಹಾರ ಮತ್ತು ಸ್ಥಳಾಂತ ವ್ಯವಸ್ಥೆ ಮಾಡುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಿದ್ದರೂ,  ಅಧಿಕಾರಿಗಳು ಅಗತ್ಯ ಸಿದ್ಧತೆ  ಮಾಡಿಕೊಂಡಿರಲಿಲ್ಲ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ರೈಲ್ವೆ ಸ್ಪಷ್ಟನೆ: ಕೊಳೆಗೇರಿ ನಿವಾಸಿಗಳಿಗೆ ಮೂರು ಬಾರಿ ನೊಟೀಸ್‌ ನೀಡಲಾಗಿತ್ತು. ಯಾವುದಕ್ಕೂ ಜಗ್ಗದಿದ್ದಾಗ ಶನಿವಾರ ರಾತ್ರಿ ಪೊಲೀಸ್‌ ನೆರವಿನೊಂದಿಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಎಂದು ದೆಹಲಿ ರೈಲ್ವೆ ವಿಭಾಗದ ವ್ಯವಸ್ಥಾಪಕ ಅರುಣ್‌ ಆರೊರಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Comments