ಮುಂಬೈ

ಕಲಾವಿದೆ ಹೇಮಾ ಉಪಾಧ್ಯಾಯ, ಮತ್ತವರ ವಕೀಲ ಕೊಲೆ

ಚಿತ್ರಕಲಾ ಕಲಾವಿದೆ ಹೇಮಾ ಉಪಾಧ್ಯಾಯ ಮತ್ತವರ ವಕೀಲ ಹರೀಶ್‌ ಭಂಭಾನಿ ಅವರ ಶವಗಳು ಮುಂಬೈನ ಕಾಂಡಿವಲಿ ಪ್ರದೇಶದ ಚರಂಡಿಯೊಂದರಲ್ಲಿ ಪತ್ತೆಯಾಗಿವೆ.

ಮುಂಬೈ (ಪಿಟಿಐ): ಚಿತ್ರಕಲಾ ಕಲಾವಿದೆ ಹೇಮಾ ಉಪಾಧ್ಯಾಯ ಮತ್ತವರ ವಕೀಲ ಹರೀಶ್‌ ಭಂಭಾನಿ ಅವರ ಶವಗಳು ಮುಂಬೈನ ಕಾಂಡಿವಲಿ ಪ್ರದೇಶದ ಚರಂಡಿಯೊಂದರಲ್ಲಿ ಪತ್ತೆಯಾಗಿವೆ.

ಹೇಮಾ ಉಪಾಧ್ಯಾಯ (43) ಮತ್ತವರ ವಕೀಲ ಹರೀಶ್‌ ಭಂಭಾನಿ (65) ಅವರ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ, ಕೊಲೆ ಮಾಡಿ, ಶವಗಳನ್ನು ರಟ್ಟಿನ ಬಾಕ್ಸ್‌ಗಳಲ್ಲಿ ತುಂಬಿ ಚರಂಡಿಗೆ ಎಸೆಯಲಾಗಿದೆ ಎಂದು ಡಿಸಿಪಿ ಧನಂಜಯ್‌ ಕುಲಕರ್ಣಿ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಹೇಮಾ ಅವರ ಪತಿ ಚಿಂತನ್‌ ಉಪಾಧ್ಯಾಯ ಹಾಗೂ ಹೇಮಾ ಅವರ ಮನೆಗೆಲಸದವರ ವಿಚಾರಣೆ ನಡೆಸಲಾಗಿದೆ. ಈವರೆಗೆ ಯಾರನ್ನೂ ಬಂಧಿಸಿಲ್ಲ. ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಅರೆನಗ್ನ ಸ್ಥಿತಿಯಲ್ಲಿ ಶವಗಳು: ಪತ್ತೆಯಾಗಿರುವ ಶವಗಳು ಅರೆನಗ್ನಾವಸ್ಥೆಯಲ್ಲಿದ್ದವು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚಿತ್ರಕಲಾ ಕಲಾವಿದ ಚಿಂತನ್‌ ಉಪಾಧ್ಯಾಯ ಅವರನ್ನು ಮದುವೆಯಾಗಿದ್ದ ಹೇಮಾ 2010ರಲ್ಲಿ ಪತಿಯಿಂದ ವಿಚ್ಛೇದನ ಬಯಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಇದಲ್ಲದೆ ತಮ್ಮ ಮನೆಯ ಗೋಡೆಗಳ ಮೇಲೆ ಚಿಂತನ್‌ ಅವಹೇಳನಕಾರಿ ಚಿತ್ರಗಳನ್ನು ಬಿಡಿಸಿದ್ದಾರೆ ಎಂದು ಹೇಮಾ 2013ರಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಹರೀಶ್‌ ಭಂಭಾನಿ ಅವರು ಹೇಮಾ ಪರ ವಕಾಲತ್ತು ವಹಿಸಿದ್ದರು.

ಶುಕ್ರವಾರ ಮನೆಯಿಂದ ಹೊರಟಿದ್ದ ಹೇಮಾ ಶನಿವಾರವೂ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಗಾಬರಿಗೊಂಡ ಹೇಮಾ ಅವರ ಮನೆಗೆಲಸದವರು ಸಾಂಟಾ ಕ್ರೂಸ್‌ ಠಾಣೆಯಲ್ಲಿ ಶನಿವಾರ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಇತ್ತ ಕಕ್ಷಿದಾರರೊಬ್ಬರ ಭೇಟಿಗೆ ತೆರಳುತ್ತಿರುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದ ಭಂಭಾನಿ ಅವರೂ ಮನೆಗೆ ಮರಳಿರಲಿಲ್ಲ. ಭಂಭಾನಿ ಅವರ ಕುಟುಂಬ ಸದಸ್ಯರೂ ಅಂಟಾಪ್‌ ಹಿಲ್‌ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.

Comments