ಅನಕ್ಷರಸ್ಥರಿಗೆ ಅವಕಾಶ ತಪ್ಪಿಸುವುದು ಸರಿಯೇ?

‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ತತ್ವಕ್ಕೆ ತಿಲಾಂಜಲಿ

ಓದು– ಬರಹ ಗೊತ್ತಿಲ್ಲದ ಅನಕ್ಷರಸ್ಥರು ಇನ್ನು ಮುಂದೆ ಹರಿಯಾಣದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲುವಂತಿಲ್ಲ. ವಿಧಾನಸಭೆ ಸೆಪ್ಟೆಂಬರ್‌ನಲ್ಲಿ ಅಂಗೀಕಾರ  ಮಾಡಿರುವ ಪಂಚಾಯತ್‌ ರಾಜ್‌ (ತಿದ್ದುಪಡಿ) ಮಸೂದೆ– 2015,  ಪಂಚಾಯಿತಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗೆ ವಿದ್ಯಾರ್ಹತೆ ಕಡ್ಡಾಯಗೊಳಿಸಿದೆ. ಅದರಂತೆ  ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮೆಟ್ರಿಕ್ ಪಾಸಾಗಿರಬೇಕು. ಸಾಮಾನ್ಯ ಗುಂಪಿನ ಮಹಿಳೆಯರು, ಪರಿಶಿಷ್ಟ ಜಾತಿ ಪುರುಷರು ಎಂಟನೇ ತರಗತಿ ಕಲಿತಿರಬೇಕು. ಪರಿಶಿಷ್ಟ ವರ್ಗದ ಮಹಿಳೆಯರು ಐದನೇ ತರಗತಿ ಓದಿರಬೇಕು. ಇದಲ್ಲದೆ, ವಿದ್ಯುತ್‌ ಬಿಲ್‌, ಸಹಕಾರಿ ಸಂಘಗಳ ಸಾಲ ಬಾಕಿ ಉಳಿಸಿರಬಾರದು. ಮನೆಗಳಲ್ಲಿ ಕಡ್ಡಾಯವಾಗಿ ಶೌಚಾಲಯ ಇರಬೇಕು...!

ಹರಿಯಾಣ ವಿಧಾನಸಭೆ ಅಂಗೀಕರಿಸಿದ ‘ಪಂಚಾಯತ್‌ ರಾಜ್‌ (ತಿದ್ದುಪಡಿ) ಮಸೂದೆ’ಯನ್ನು ಸುಪ್ರೀಂ ಕೋರ್ಟ್‌ ದ್ವಿಸದಸ್ಯ ಪೀಠ ಎತ್ತಿಹಿಡಿದಿದೆ. ಮನೋಹರ ಲಾಲ್‌ ಖಟ್ಟರ್‌ ನೇತೃತ್ವದ ಸರ್ಕಾರ ಒಳ್ಳೆಯ ಉದ್ದೇಶದಿಂದಲೇ ಈ ಕಾಯ್ದೆ ತಂದಿರಬಹುದು. ಅದೇ ಕಾರಣಕ್ಕೆ  ಸುಪ್ರೀಂ ಕೋರ್ಟ್‌  ಬೆಂಬಲಿಸಿರಬಹುದು. ಆದರೆ, ಇದು ನಾವು ಒಪ್ಪಿಕೊಂಡಿರುವ ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾಗಿದೆಯೇ ಎಂದು ವಿಸ್ತೃತವಾದ ಚರ್ಚೆ ನಡೆಯಬೇಕು, ಅವಸರದಲ್ಲಿ ಕಾಯ್ದೆ ತರುವ ಮೊದಲು ಮಸೂದೆ ಸಾರ್ವಜನಿಕ ಚರ್ಚೆಗೆ ಒಳ ಪಡಿಸಬೇಕಿತ್ತು. ಎಲ್ಲರಿಂದಲೂ ಬಂದ ಅಭಿಪ್ರಾಯಗಳನ್ನು ಒಟ್ಟುಗೂಡಿಸಿ ಬಳಿಕ ತೀರ್ಮಾನ ಕೈಗೊಳ್ಳಬಹುದಿತ್ತು.

ರಾಜಸ್ತಾನ ಈ ವರ್ಷದ ಮಾರ್ಚ್‌ನಲ್ಲಿ ಮೊದಲಿಗೆ ಇಂತಹದೇ ಮಸೂದೆಯನ್ನು ರೂಪಿಸಿ, ಜಾರಿಗೊಳಿಸಿತು. ರಾಜಸ್ತಾನದ ಜಾಡಿನಲ್ಲೇ ಈಗ ಹರಿಯಾಣವೂ ಹೆಜ್ಜೆ ಹಾಕಿದೆ. ವಿಧಾನಸಭೆಯಲ್ಲಿ ಮಸೂದೆ ಅಂಗೀಕರಿಸುವಾಗ ವಿರೋಧ ಪಕ್ಷಗಳ ಅಭಿಪ್ರಾಯಗಳನ್ನು ಕಡೆಗಣಿಸಲಾಗಿದೆ. ಸಂಖ್ಯಾಬಲದ ಮೇಲೆ ನಿರ್ಧಾರ ಮಾಡಲಾಗಿದೆ. ನಮಗೇ ಬಹುಮತವಿದ್ದಾಗ ಯಾರನ್ನು  ಕೇಳಬೇಕೆಂಬ ಧೋರಣೆ ಯಲ್ಲಿ ಉಭಯ ಸರ್ಕಾರಗಳು ನಡೆದುಕೊಂಡಿವೆ. ಇವೆರಡೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಎಂಬುದು ಗಮನಿಸಬೇಕಾದ ಅಂಶ. ಪಂಚಾಯತ್‌ ರಾಜ್‌ ಒಂದು ಉತ್ತಮ ವ್ಯವಸ್ಥೆ. ‘ಜನರ ಮನೆ ಬಾಗಿಲಿಗೆ ಅಧಿಕಾರ’ ಎಂಬ ಪರಿಕಲ್ಪನೆಯೊಂದಿಗೆ ಹುಟ್ಟಿಕೊಂಡಿರುವ ಈ ವ್ಯವಸ್ಥೆಗೆ ಸುದೀರ್ಘವಾದ ಇತಿಹಾಸವಿದ್ದರೂ, ಸಂವಿಧಾನದ 73ನೇ ತಿದ್ದುಪಡಿ ಮೂಲಕ ಶಕ್ತಿ ತುಂಬಲಾಗಿದೆ.

ಕಾಲಕಾಲಕ್ಕೆ ಪಂಚಾಯಿತಿಗಳ ಚುನಾವಣೆ,  ಅಧಿಕಾರ– ಜವಾಬ್ದಾರಿಗಳ ವಿಂಗಡಣೆ, ಸಂಪನ್ಮೂಲಗಳ ಹಂಚಿಕೆ, ಪರಿಶಿಷ್ಟ ಜಾತಿ– ಪಂಗಡ ಮತ್ತು ಮಹಿಳೆಯರಿಗೆ ಮೀಸಲಾತಿ ಮುಂತಾದ ವಿಷಯಗಳ ಬಗ್ಗೆ 73ನೇ ತಿದ್ದುಪಡಿಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಪಂಚಾಯಿತಿ ಸದಸ್ಯರಿಗೆ ವಿದ್ಯಾರ್ಹತೆ ಮುಖ್ಯವಾಗಿದ್ದರೆ, ಈ ಮಸೂದೆ ಸಿದ್ಧಪಡಿಸುವಾಗಲೇ ಚಿಂತಿಸುತ್ತಿದ್ದರು. ಅವರಿಗೆ ಓದು– ಬರಹ ಮಹತ್ವದ ವಿಷಯವಾಗಿ ಕಂಡಿಲ್ಲದೆ ಇರಬಹುದು.

ಹರಿಯಾಣ ಹಾಗೂ ರಾಜಸ್ತಾನದ ಪಂಚಾಯಿತಿ ಸದಸ್ಯರಿಗೆ ವಿದ್ಯಾರ್ಹತೆ ಕಡ್ಡಾಯಗೊಳಿಸಿ ಜಾರಿಗೆ ತಂದಿರುವ ಕಾಯ್ದೆ ಸಂವಿಧಾನದ ಕಲಂ 14ಕ್ಕೆ ಅನುಗುಣವಾಗಿ ಇದೆಯೇ ಎಂಬ ಪರಾಮರ್ಶೆ ನಡೆಯಬೇಕು. ಈ ಕಾಯ್ದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯಲ್ಲೂ ಇದೇ ಪ್ರಶ್ನೆಯನ್ನು ಪ್ರಮುಖವಾಗಿ ಎತ್ತಲಾಗಿದೆ.  ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ಅವರ ನೇತೃತ್ವದ ದ್ವಿಸದಸ್ಯ ನ್ಯಾಯಪೀಠವು ಸಾಕಷ್ಟು ಪ್ರಕರಣಗಳಲ್ಲಿ ಕಲಂ14 ಅನ್ನು ವ್ಯಾಖ್ಯಾನ ಮಾಡಿರುವ ಕುರಿತು ವಿಶ್ಲೇಷಿಸಿದೆ.

‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಎಂಬ ತತ್ವದ ತಳಹದಿಯ ಮೇಲೆ ನಿಂತಿರುವ ಸಮಾನತೆ ಕಾನೂನಿನ ಬೆಳಕಿನಲ್ಲಿ ಎರಡೂ ರಾಜ್ಯಗಳ ಪಂಚಾಯತ್‌ ರಾಜ್‌ ತಿದ್ದುಪಡಿ ಕಾಯ್ದೆ ಅವಲೋಕನ ಅಗತ್ಯ. ವಿಧಾನಸಭೆ, ಲೋಕಸಭೆ ಒಳಗೊಂಡಂತೆ ಎಲ್ಲ ಚುನಾವಣೆಗಳಿಗೂ ಸ್ಪರ್ಧಿಸುವ ಅಭ್ಯರ್ಥಿಗಳ ದೃಷ್ಟಿಯಿಂದ ನಿಜವಾದ ಅರ್ಥದಲ್ಲಿ ಇದೊಂದು ಚರ್ಚೆ ಬುನಾದಿ ಆಗಬೇಕು. ‘ಪಂಚಾಯಿತಿ ಸದಸ್ಯರಿಗೆ ವಿದ್ಯಾರ್ಹತೆ ಕಡ್ಡಾಯಗೊಳಿ ಸುವ ಅಧಿಕಾರ ರಾಜ್ಯಕ್ಕಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ಮಹತ್ವದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠದ ಮತ್ತೊಬ್ಬ ನ್ಯಾಯಮೂರ್ತಿ ಅಭಯ ಮನೋಹರ ಸಪ್ರೆ, ಉಳಿದ ರಾಜ್ಯಗಳು ಹರಿಯಾಣದ ಹಾದಿ ತುಳಿಯಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಇದು ಆಶಯ ಅಷ್ಟೇ. ಈ ಪ್ರಕರಣದಲ್ಲಿ ‘ಮತದಾನದ ಹಕ್ಕು’ ಮತ್ತು ‘ಚುನಾವಣೆಗೆ ಸ್ಪರ್ಧಿಸುವ ಹಕ್ಕು’ಗಳನ್ನು ಕುರಿತು ಸಮಗ್ರವಾಗಿ ಚರ್ಚಿಸಿರುವ ನ್ಯಾಯಪೀಠ ಇವೆರಡೂ ಸಂವಿಧಾನಾತ್ಮಕ ಹಕ್ಕುಗಳು ಎಂದೂ ವ್ಯಾಖ್ಯಾನಿಸಿದೆ.

ಯಾವುದೇ ಪ್ರಕರಣದಲ್ಲಿ ಸಂವಿಧಾನಾತ್ಮಕ ಪ್ರಶ್ನೆಗಳು ಎದುರಾದಾಗ ವಿಚಾರಣೆಯನ್ನು ಐದು ಅಥವಾ ಹೆಚ್ಚು ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ಸಂವಿಧಾನ ಪೀಠಕ್ಕೆ ವರ್ಗಾಯಿಸಲು ಅವಕಾಶವಿದೆ. ಸಂವಿಧಾನದ 145ನೇ ಕಲಂ ಇಂಥದೊಂದು ಅವಕಾಶ ಕೊಟ್ಟಿದೆ. ಕಡ್ಡಾಯವಾಗಿ ವರ್ಗಾಯಿಸಬೇಕೆಂದೇನಿಲ್ಲ. ಆದರೆ, ಇದು ಮಹತ್ವದ ವಿಷಯವನ್ನು ಒಳಗೊಂಡಿರುವ ಗಂಭೀರ ಪ್ರಕರಣವಾಗಿರುವುದರಿಂದ ವಿಸ್ತೃತವಾದ ಸಂವಿಧಾನ ಪೀಠದಲ್ಲಿ ಚರ್ಚೆಯಾದರೆ ಒಳ್ಳೆಯದು.

ಹರಿಯಾಣ ಪಂಚಾಯತ್‌ ರಾಜ್‌ ತಿದ್ದುಪಡಿ ಕಾಯ್ದೆ ಕುರಿತು ಸಾರ್ವಜನಿಕ ವಲಯದಲ್ಲಿ ಎರಡು ರೀತಿಯ ಅಭಿಪ್ರಾಯಗಳಿವೆ. ಪಂಚಾಯಿತಿ ಸದಸ್ಯರಿಗೆ ವಿದ್ಯಾರ್ಹತೆ ನಿಗದಿಪಡಿಸಿರುವುದರಲ್ಲಿ ತಪ್ಪೇನಿದೆ ಎಂದು ಕೇಳುವವರಿದ್ದಾರೆ. ವಿದ್ಯಾರ್ಹತೆ ಕಡ್ಡಾಯಗೊಳಿಸುವುದರಿಂದ ಅಕ್ಷರ ಗೊತ್ತಿಲ್ಲದ ದೊಡ್ಡ ಸಮುದಾಯವೊಂದು ಅವಕಾಶ ವಂಚಿತವಾಗುತ್ತದೆ ಎನ್ನುವ ವಾದಗಳೂ ಇವೆ. ಎರಡನೇ ವಾದವನ್ನು ಖಂಡಿತವಾಗಿಯೂ ಒಪ್ಪಬೇಕಾಗುತ್ತದೆ. ಓದು–ಬರಹ ಗೊತ್ತಿಲ್ಲದ ಕಾರಣಕ್ಕೆ ಪಕ್ಷಪಾತಕ್ಕೆ ಒಳಗಾಗಬೇಕೇ ಎಂಬ ಪ್ರಶ್ನೆ ಎದುರಾಗುತ್ತದೆ.

ಹರಿಯಾಣದ ಉದಾಹರಣೆಯನ್ನೇ ತೆಗೆದುಕೊಂಡರೆ, ಗ್ರಾಮೀಣ ಪ್ರದೇಶದ ಜನಸಂಖ್ಯೆ 1.65 ಕೋಟಿ. ಇದು 2011ರ ಜನಗಣತಿಯ ಅಂಕಿಅಂಶ. ಅವರಲ್ಲಿ ಇಪ್ಪತ್ತು ವರ್ಷಕ್ಕಿಂತ ಮೇಲ್ಪಟ್ಟವರು 96 ಲಕ್ಷ. ಶೇ 57ರಷ್ಟು ಜನರಿಗೆ ಹೊಸ ಕಾಯ್ದೆ ಜಾರಿಗೆ ಬಂದ ಬಳಿಕವೂ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ. ಉಳಿದ 36 ಲಕ್ಷ ಜನರು ಓದು– ಬರಹ ಗೊತ್ತಿಲ್ಲದವರು. ಐದು ಲಕ್ಷ  ಪ್ರಾಥಮಿಕ ಶಾಲೆ ಮಾತ್ರ ಕಂಡವರು. ಒಟ್ಟು 96 ಲಕ್ಷದಲ್ಲಿ ಪುರುಷರು 50 ಲಕ್ಷ, ಮಹಿಳೆಯರು 46 ಲಕ್ಷ. ಪರಿಶಿಷ್ಟರ ಸಂಖ್ಯೆ 21 ಲಕ್ಷ. ಅದರಲ್ಲಿ, 11 ಲಕ್ಷ ಪುರುಷರು ಹಾಗೂ 10 ಲಕ್ಷ ಮಹಿಳೆಯರು. ಪರಿಶಿಷ್ಟ ಜಾತಿ, ಪಂಗಡದವರಲ್ಲಿ ಅಕ್ಷರ ಬಲ್ಲವರ ಸಂಖ್ಯೆ ಪುರುಷರು ಶೇ 59 ಹಾಗೂ ಮಹಿಳೆಯರು ಶೇ 32. ಹರಿಯಾಣ ವಿಧಾನಸಭೆ ಅಂಗೀಕರಿಸಿದ ಕಾನೂನು ಹೆಚ್ಚುಕಡಿಮೆ ಅರ್ಧದಷ್ಟು ಗ್ರಾಮೀಣರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯುತ್ತದೆ.

ಅದರಲ್ಲೂ ಪರಿಶಿಷ್ಟರು, ಹಿಂದುಳಿದವರು ಮತ್ತು ಮಹಿಳೆಯರು ಹೆಚ್ಚು ಅವಕಾಶ ವಂಚಿತರಾಗುತ್ತಾರೆ ಎನ್ನುವುದು ನಿರ್ವಿವಾದ. ಹರಿಯಾಣ ಸರ್ಕಾರ ಕಾಯ್ದೆ ಜಾರಿಗೆ ತರುವ ಮೊದಲು ಈ ಅಂಶವನ್ನು ಗಮನಿಸಬಹುದಿತ್ತು. ಸ್ವಾತಂತ್ರ್ಯ ಬಂದು 68 ವರ್ಷಗಳಾದರೂ ಇನ್ನೂ ದೊಡ್ಡ ಸಂಖ್ಯೆಯಲ್ಲಿ ಅನಕ್ಷರಸ್ಥರಿದ್ದಾರೆ ಎಂದರೆ ಯಾರನ್ನು ದೂರಬೇಕು. ಶಿಕ್ಷಣ ಕೊಡಲು ಸೋತಿರುವ ಸರ್ಕಾರವನ್ನೇ ಅಥವಾ ಜನರ ಸಾಮಾಜಿಕ– ಆರ್ಥಿಕ ಪರಿಸ್ಥಿತಿಯನ್ನೇ. ಹರಿಯಾಣದಲ್ಲಿ ಮಾತ್ರವಲ್ಲ. ಎಲ್ಲ ರಾಜ್ಯಗಳಲ್ಲೂ ಇದೇ ಸ್ಥಿತಿಯಿದೆ. ಅನಕ್ಷರತೆ ರಾಷ್ಟ್ರೀಯ ಅಪಮಾನವೆಂದು ಭಾವಿಸಿ ಕೇಂದ್ರ, ರಾಜ್ಯಗಳು ಒಟ್ಟುಗೂಡಿ ಯೋಜನೆ ಹಾಕಿಕೊಳ್ಳಬೇಕು. ಶಿಕ್ಷಣ ಕಡ್ಡಾಯಗೊಳಿಸಿ, ಸಾಕ್ಷರತೆ ಪ್ರಮಾಣ ಹೆಚ್ಚಿಸಬೇಕು. ಅದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಇದಾಗದಿದ್ದರೆ ಇನ್ನೂ 100 ವರ್ಷ ಹೋದರೂ ಪರಿಸ್ಥಿತಿ ಬದಲಾಗುವುದು ಅನುಮಾನ.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ವಿದ್ಯಾರ್ಹತೆ ಕಡ್ಡಾಯ ಮಾಡಬೇಕೆಂಬ ವಿಷಯ ಸಂವಿಧಾನ ಸಭೆಯಲ್ಲೂ ಚರ್ಚೆಯಾಗಿತ್ತು. ಕೆಲವರು ವಿದ್ಯಾರ್ಹತೆ ನಿಗದಿ ಮಾಡುವುದರ ಪರವಾಗಿದ್ದರು. ಅನಕ್ಷರಸ್ಥರ ಪ್ರಮಾಣ ಹೆಚ್ಚಿರುವುದರಿಂದ ವಿದ್ಯಾರ್ಹತೆ ಕಡ್ಡಾಯ ಮಾಡುವುದು ಸರಿಯಲ್ಲ.  ದೊಡ್ಡ ಸಮುದಾಯವನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಯಿಂದ ಹೊರಗಿಡಬೇಕಾಗುತ್ತದೆ ಎಂದು ಅನೇಕರು ವಾದಿಸಿದ್ದರು. ಅಂತಿಮವಾಗಿ ಸಂವಿಧಾನ ಸಭೆ, ಅನಕ್ಷರತೆ ಇದ್ದರೂ ಜನರ ಮೇಲೆ ವಿಶ್ವಾಸವಿಟ್ಟು ಮತದಾನದ ಅವಕಾಶ ಕೊಡಲು ತೀರ್ಮಾನಿಸಿತು. ಅಲ್ಲಿಂದ ಇಲ್ಲಿವರೆಗೂ ಈ ವ್ಯವಸ್ಥೆ ಮುಂದುವರಿದುಕೊಂಡು ಬಂದಿದೆ.

ಲೋಕಸಭೆ ಹಾಗೂ ವಿಧಾನಸಭೆಗೆ ವಿದ್ಯಾರ್ಹತೆ ಇನ್ನೂ ಕಡ್ಡಾಯಗೊಳ್ಳದೆ ಇರುವಾಗ ಹರಿಯಾಣ ಹಾಗೂ ರಾಜಸ್ತಾನದಲ್ಲಿ ಪಂಚಾಯಿತಿಗೆ ಏಕೆ ವಿದ್ಯಾರ್ಹತೆ ನಿಗದಿಪಡಿಸಲಾಯಿತು ಎನ್ನುವುದು ಅರ್ಥವಾಗದ ಅಚ್ಚರಿಯ ಸಂಗತಿ. ಈ ನಿಟ್ಟಿನಲ್ಲಿ ಚಿಂತನೆ ಮಾಡಲು ಕಾರಣವೇನು ಎಂಬ ಸಂಗತಿಯನ್ನಾದರೂ ಎರಡೂ ಸರ್ಕಾರಗಳು ಬಹಿರಂಗಪಡಿಸಬೇಕಿತ್ತು. ಹಿಂದೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೂ ವಿದ್ಯಾರ್ಹತೆ ಕಡ್ಡಾಯಗೊಳಿಸಬೇಕು ಎಂಬ ಸಲಹೆಗಳು ಬಂದಿದ್ದವು. ಆದರೆ, ಅವು ಕಾರ್ಯರೂಪಕ್ಕೆ ಬರಲಿಲ್ಲ.

ಕೇಂದ್ರ ಚುನಾವಣಾ ಆಯೋಗ ಹದಿನೇಳು ವರ್ಷಗಳ ಹಿಂದೆ ಅಂದರೆ 1998ರಲ್ಲೇ ಇಂಥ ಸಲಹೆಯನ್ನು ಮುಂದಿಟ್ಟಿತ್ತು. ಶಾಸನಸಭೆ, ಸಂಸತ್ತಿನೊಳಗೆ ಚುನಾಯಿತ ಪ್ರತಿನಿಧಿಗಳ ಕಾರ್ಯಕ್ಷಮತೆ ಗುಣಮಟ್ಟ ಕಡಿಮೆಯಾಗುತ್ತಿದೆ ಎನ್ನುವ ಆತಂಕದಿಂದ ಚುನಾವಣಾ ಕಮಿಷನರ್‌ ಜಿ.ವಿ.ಜಿ ಕೃಷ್ಣಮೂರ್ತಿ ಈ ಸಲಹೆ ಕೊಟ್ಟಿದ್ದರು. ಆದರೆ, ಆ ಸಮಯದಲ್ಲಿ ಚುನಾವಣೆ ಸುಧಾರಣೆ ಕುರಿತು ಅಧ್ಯಯನ ನಡೆಸಲು ನೇಮಕಗೊಂಡಿದ್ದ ಇಂದ್ರಜಿತ್‌ ಗುಪ್ತಾ ನೇತೃತ್ವದ ಏಳು ಸದಸ್ಯರ ಸಮಿತಿ, ಕಮಿಷನರ್‌ ಸಲಹೆಗೆ ಕಿವಿಗೊಡಲಿಲ್ಲ. ಇಲ್ಲಸಲ್ಲದ ಮಾನದಂಡಗಳನ್ನು ನಿಗದಿಪಡಿಸಿ ಜನರ ಮತದಾನದ ಹಕ್ಕು ಅಥವಾ ಸ್ಪರ್ಧಿಸುವ ಹಕ್ಕು ಕಸಿದು ಕೊಳ್ಳುವುದಕ್ಕೆ ಇಂದ್ರಜಿತ್‌ ಗುಪ್ತಾ ವಿರುದ್ಧವಾಗಿದ್ದರು. ಎಡ ಪಕ್ಷದ ನಾಯಕರಾಗಿದ್ದ ಗುಪ್ತಾ ಅವರ ಚಿಂತನೆ ಸ್ಪಷ್ಟವಾಗಿತ್ತು.

ಅದಕ್ಕೆ ಅವರು ಬದ್ಧರಾದರು. ಚುನಾವಣಾ ಕಮಿಷನರ್‌ ಸಲಹೆಯನ್ನು ಆಧರಿಸಿ, ‘ಮಾಧ್ಯಮ ಹಾಗೂ ಸಾಂಸ್ಕೃತಿಕ ಸಂಶೋಧನಾ ಕೇಂದ್ರ’ ಸಮೀಕ್ಷೆಯೊಂದನ್ನು ನಡೆಸಿತ್ತು.  ಸುಮಾರು ಹತ್ತು ಸಾವಿರ ಜನರ ಅಭಿಪ್ರಾಯಗಳನ್ನು ಈ ಕೇಂದ್ರ ಸಂಗ್ರಹಿಸಿತ್ತು. ಬಹುತೇಕರು ನಮ್ಮ  ಚುನಾಯಿತ ಪ್ರತಿನಿಧಿಗಳಿಗೆ ವಿದ್ಯಾರ್ಹತೆ ನಿಗದಿಪಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಸುಪ್ರೀಂ ಕೋರ್ಟ್‌ ಮುಂದೆಯೂ ಅನೇಕ ಸಲ ಈ ವಿಷಯ ಪ್ರಸ್ತಾಪಕ್ಕೆ ಬಂದಿದೆ. ಓದು– ಬರಹ ಗೊತ್ತಿದ್ದವರು ಮಾತ್ರ ಬುದ್ಧಿವಂತರು. ಅನಕ್ಷರಸ್ಥರು ಬುದ್ಧಿವಂತರಲ್ಲ ಎಂಬ ವಾದಗಳಿಗೆ ಯಾವುದೇ ಆಧಾರಗಳಿಲ್ಲ.  ಚುನಾಯಿತ ಪ್ರತಿನಿಧಿಗಳು ಅಕ್ಷರಸ್ಥರಾಗಿದ್ದರೆ ಒಳ್ಳೆಯದು. ಆದರೆ, ಕೇವಲ ಅಕ್ಷರ ಕಲಿತಿಲ್ಲ ಎಂಬ ಕಾರಣದಿಂದ ಅವಕಾಶ ಕಿತ್ತುಕೊಳ್ಳುವುದು ಸರಿಯಲ್ಲ.

ಬೇರೆ ಬೇರೆ ಚುನಾವಣೆಗಳಿಗೆ ಸ್ಪರ್ಧೆ ಮಾಡುವವರಿಗೆ ಕಾನೂನು–ಕಾಯ್ದೆ ಮೂಲಕ ವಿದ್ಯಾರ್ಹತೆ ಕಡ್ಡಾಯ ಮಾಡುವ ಬದಲು ಎಲ್ಲ ರಾಜಕೀಯ ಪಕ್ಷಗಳು ಸ್ವಯಂ ಪ್ರೇರಣೆಯಿಂದ ಶುದ್ಧ ಹಿನ್ನೆಲೆಯವರಿಗೆ ಟಿಕೆಟ್‌ ಕೊಡುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಧಾನ ನಿರಾಸೆ ಉಂಟು ಮಾಡುತ್ತಿದೆ. ಅದಕ್ಕೆ ಆ ಪಕ್ಷ ಅಥವಾ ಈ ಪಕ್ಷ ಎಂದೇನಿಲ್ಲ. ಎಲ್ಲ ಪಕ್ಷಗಳಿಗೂ ಈ ಮಾತು ಅನ್ವಯಿಸುತ್ತದೆ. ಭಾರತ ಬದುಕಿರುವುದು ಹಳ್ಳಿಗಳಲ್ಲಿ ಎಂದು ಮಹಾತ್ಮ ಗಾಂಧಿ ನಂಬಿದ್ದರು. ಪ್ರತಿಯೊಂದು ಹಳ್ಳಿಯಲ್ಲೂ ಪಂಚಾಯಿತಿ ಆಗಬೇಕು ಎಂದಿದ್ದರು.

ಕೆಲವೇ ವ್ಯಕ್ತಿಗಳಿಂದ ಪ್ರಜಾಪ್ರಭುತ್ವ ನಡೆಯುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದರು. ಅವರೇನಾದರೂ ಈಗ ಬದುಕಿದ್ದರೆ  ಹರಿಯಾಣ, ರಾಜಸ್ತಾನದ ಪಂಚಾಯತ್‌ ರಾಜ್‌ ತಿದ್ದುಪಡಿ ಮಸೂದೆಯನ್ನು ಸುತರಾಂ ಒಪ್ಪುತ್ತಿರಲಿಲ್ಲ. ಖಂಡಿತವಾಗಿ ವಿರೋಧಿಸುತ್ತಿದ್ದರು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ವಿದ್ಯಾರ್ಹತೆ ನಿಗದಿ ಮಾಡುವುದರಿಂದ ಆ ವ್ಯವಸ್ಥೆ ಸುಧಾರಣೆ ಆಗುವುದಿಲ್ಲ. ಬದಲಿಗೆ ಇನ್ನೂ ಹೆಚ್ಚಿನ ಅಧಿಕಾರ, ಹಣಕಾಸು ಕೊಡುವ ಮೂಲಕ ಶಕ್ತಿ ತುಂಬಬೇಕು. ವಿಕೇಂದ್ರೀಕರಣದ ಪರವಾಗಿ ಮಾತನಾಡುವ ಬಹುತೇಕರದ್ದೂ ಇದೇ ಅಭಿಪ್ರಾಯ.

Comments