ಬಾಳೆ ಬೆಳೆದವರ ಸಂಕಷ್ಟ ನಿವಾರಿಸಿ

ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಕನಿಷ್ಠ ಮಟ್ಟದ  ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದು ಇಂದಿನ ತುರ್ತು ಅಗತ್ಯ.

ಕೃಷಿ ಉತ್ಪನ್ನಗಳ ಬೆಲೆ ಅಸ್ಥಿರತೆಗೂ ನಮ್ಮ ರೈತರ ನೆಮ್ಮದಿಯ ಹೊಯ್ದಾಟಕ್ಕೂ ನೇರ ಸಂಬಂಧ ಇದೆ. ಪ್ರಕೃತಿಯ ಪೆಟ್ಟುಗಳನ್ನು ಎದುರಿಸಿ ಕೃಷಿಕ ನಿಲ್ಲಬಲ್ಲ. ಬೆಳೆ ತೆಗೆಯಬಲ್ಲ. ಆದರೆ ಮಾರುಕಟ್ಟೆಯ ಚಂಚಲತೆ ಅವನ ಜಂಘಾಬಲವನ್ನೇ ಉಡುಗಿಸುತ್ತಿದೆ. ಈ ಅನಿಶ್ಚಿತತೆಯ ಹೊಡೆತಕ್ಕೆ ಅಡಕೆ, ತೆಂಗು, ಟೊಮೆಟೊ, ದಾಳಿಂಬೆ, ಬಾಳೆಹಣ್ಣು, ಹತ್ತಿ, ಜೋಳ, ರಾಗಿ ಎಲ್ಲವೂ ಒಳಗಾಗಿವೆ. ಇದಕ್ಕೆ ಯಾವ ಬೆಳೆಯೂ ಹೊರತಲ್ಲ. ಈಗ ನೋಡಿ, ಬಾಳೆಹಣ್ಣು ಬೆಳೆದವರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಬಾಳೆಹಣ್ಣಿಗೆ ಬೇಡಿಕೆ ದಿಢೀರನೆ ಕುಸಿದಿದೆ. ಎರಡು ತಿಂಗಳ ಹಿಂದಿನ ಸ್ಥಿತಿಗೂ ಈಗಿನ ಸ್ಥಿತಿಗೂ ಅಜಗಜಾಂತರ. ಅದರಲ್ಲೂ ಪಚ್ಚಬಾಳೆ  ಬೆಳೆದವರ ಪಾಡು ಹೇಳತೀರದು. ಒಂದು ರೂಪಾಯಿಗೊ ಎರಡು ರೂಪಾಯಿಗೊ ಕೆ.ಜಿ. ಬಾಳೆಹಣ್ಣು ಮಾರಬೇಕಾದ ಸ್ಥಿತಿಗೆ ಬೆಳೆಗಾರರನ್ನು ನೂಕಿದೆ ನಿರ್ದಯಿ ಮಾರುಕಟ್ಟೆ. ಕೊಯ್ಲಿನ ಕೂಲಿ ಕೂಡ ಹುಟ್ಟದೇ ಹೋದರೆ ಬೆಳೆಗಾರನ ಸ್ಥಿತಿ ಏನಾಗಬಹುದು!? ಬೆಳೆಗಾರರ ಈ ಶೋಚನೀಯ ಸ್ಥಿತಿಯನ್ನು ಆಡಳಿತ ನಡೆಸುವವರ ಗಮನಕ್ಕೆ ತರಲು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ದಾವಣಗೆರೆಯಲ್ಲಿ ಈಚೆಗೆ ಬಾಳೆಹಣ್ಣುಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚುವ ಮೂಲಕ ಒಡಲುರಿಯನ್ನು ಹೊರಗೆ ಹಾಕಿದ್ದಾರೆ.

ಬೆವರು ಸುರಿಸಿ ಬೆಳೆದ ಬೆಳೆಯನ್ನು ದಲ್ಲಾಳಿಗಳಿಗೆ ಪುಡಿಗಾಸಿಗೆ ಮಾರುವ ಬದಲು ಹಣ್ಣನ್ನು ಶಾಲಾ ಮಕ್ಕಳಿಗೂ ಉಚಿತವಾಗಿ ಹಂಚುವ ಇರಾದೆಯನ್ನು ತೋಡಿಕೊಂಡಿದ್ದಾರೆ. ಈ ದಯನೀಯ ಸ್ಥಿತಿಯಿಂದ ರೈತರನ್ನು ಪಾರು ಮಾಡಲು ಸರ್ಕಾರ ಕೂಡಲೇ ಮುಂದಾಗಬೇಕು.  ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಇರುವ ಅವಕಾಶಗಳನ್ನು ಶೋಧಿಸಬೇಕು. ರಾಜ್ಯದಲ್ಲಿ ಬಾಳೆಹಣ್ಣಿಗೆ ಇರುವ ಬೇಡಿಕೆ ಮತ್ತು ಪೂರೈಕೆ ಪ್ರಮಾಣದ ಮಾಹಿತಿಯನ್ನು ರೈತರಿಗೆ ಕಾಲಕಾಲಕ್ಕೆ ನೀಡುವ ವ್ಯವಸ್ಥೆಯನ್ನು ಬಲಗೊಳಿಸಬೇಕು.

ಬಾಳೆಹಣ್ಣಿನ ಬೆಲೆ ಕುಸಿದಿದೆ, ನಿಜ.  ಆದರೆ ಪೇಟೆ–ಪಟ್ಟಣಗಳ ಮಾರುಕಟ್ಟೆಯಲ್ಲಿ ಹಣ್ಣಿನ ಚಿಲ್ಲರೆ  ಮಾರಾಟ ದರ ಗಣನೀಯವಾಗಿ ಇಳಿದಿಲ್ಲ. ಬೆಂಗಳೂರಿನಲ್ಲಿ ಪಚ್ಚಬಾಳೆ ಬೆಲೆ ಈಗಲೂ ಕೆ.ಜಿ.ಗೆ ₹20ರಿಂದ 25ರ ವರೆಗೂ ಇದೆ. ಏಲಕ್ಕಿ ಬಾಳೆಹಣ್ಣಿನ ಬೆಲೆ ₹ 40ರಿಂದ 45ರ ವರೆಗೂ ಇದೆ. ಅಂದರೆ ಬೆವರು ಹರಿಸಿದ ಬೆಳೆಗಾರನಿಗೂ ಲಾಭ ಇಲ್ಲ, ಖರೀದಿಸುವ ಗ್ರಾಹಕನಿಗೂ ಪ್ರಯೋಜನ ಇಲ್ಲ. ನಡುವೆ ಬರುವ ಮಧ್ಯವರ್ತಿಗಳು ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿದ್ದಾರೆ. ಇದನ್ನು ತಪ್ಪಿಸುವ ಕುರಿತೂ ಸರ್ಕಾರ ಗಂಭೀರವಾಗಿ ಯೋಚಿಸಬೇಕು.

ತಮ್ಮ ಉತ್ಪನ್ನಗಳನ್ನು ರೈತರೇ ನೇರವಾಗಿ ಮಾರಲು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಕಡೆ ಚಿಂತನೆ ಹರಿಸಬೇಕು. ‘ಹಾಪ್‌ಕಾಮ್ಸ್‌’ ವ್ಯವಸ್ಥೆ  ದಿನೇ ದಿನೇ ದುರ್ಬಲವಾಗುತ್ತಿದೆ. ಅದರ ಮಾರುಕಟ್ಟೆ ಜಾಲವನ್ನು ಸದೃಢಗೊಳಿಸಬೇಕು ಹಾಗೂ ವಿಸ್ತರಿಸಬೇಕು. ಜಗತ್ತಿನ ಬಾಳೆಹಣ್ಣು ಉತ್ಪಾದನೆಯಲ್ಲಿ ಭಾರತದ ಪಾಲು ಸುಮಾರು ಶೇ 30ರಷ್ಟು. ಆದರೆ ರಫ್ತು ಪ್ರಮಾಣ ನಗಣ್ಯ. ಶೇ 1ಕ್ಕಿಂತ ಕಡಿಮೆ. ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ನಮ್ಮ ಬಾಳೆಹಣ್ಣು ರಫ್ತಾಗುತ್ತಿದೆಯಾದರೂ ರಫ್ತಿನ ಒಟ್ಟು ಪ್ರಮಾಣ ತೀರಾ ಕಡಿಮೆ. ರಫ್ತು ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡರೆ ಈ ಹಣ್ಣಿಗೆ ಬೇಡಿಕೆ ಹೆಚ್ಚಲಿದೆ.

ಬೇಸಿಗೆಯಲ್ಲಿ ಅದರಲ್ಲೂ ಮಾವಿನ ಹಣ್ಣು ಮಾರುಕಟ್ಟೆಗೆ ಬಂದಾಗ ಬಾಳೆಹಣ್ಣಿನ ಬೆಲೆ ಇಳಿಯುವುದು ರೂಢಿ. ಆದರೆ ಈ ಸಲ ಚಳಿಗಾಲದಲ್ಲೇ ಬೆಲೆ ಕುಸಿದು ರೈತರ ಚಿಂತೆ ಹೆಚ್ಚಿಸಿದೆ. ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಾಳೆ ಬರುತ್ತಿರುವುದು ಇಲ್ಲಿ ಬೆಲೆ ಕುಸಿಯಲು ಕಾರಣವಾಗಿರಬಹುದು. ರಾಜ್ಯದ ಚಾಮರಾಜನಗರ ಜಿಲ್ಲೆಯಿಂದ ಬೀದರ್‌ವರೆಗೂ ಬಾಳೆ ಬೆಳೆಯಲಾಗುತ್ತಿದೆ. ಹನಿ ನೀರಾವರಿ ಸೌಲಭ್ಯ ಹಾಗೂ ಅದನ್ನು ಅಳವಡಿಸಿಕೊಳ್ಳಲು ಸರ್ಕಾರ ಸಬ್ಸಿಡಿ ನೀಡುತ್ತಿರುವುದರಿಂದ ಬಾಳೆ ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ಬಾಳೆ ಉತ್ಪನ್ನದ ಮೌಲ್ಯವರ್ಧನೆ ಆಗುತ್ತಿಲ್ಲ.

ಬಳಕೆಯ ಸಾಧ್ಯತೆಗಳನ್ನು  ಹಿಗ್ಗಿಸಿದರೆ ಬಾಳೆಹಣ್ಣಿನ ಬೇಡಿಕೆಯೂ ಹೆಚ್ಚುತ್ತದೆ. ಅದರಿಂದ ಉದ್ಯೋಗ ಅವಕಾಶಗಳೂ ಸೃಷ್ಟಿಯಾಗುತ್ತವೆ. ರೈತರ ಹೆಸರು ಹೇಳಿಕೊಂಡು ಅಸ್ತಿತ್ವ ಉಳಿಸಿಕೊಳ್ಳುವ ರಾಜಕೀಯ ಪಕ್ಷಗಳು ಕೃಷಿಯನ್ನು  ಲಾಭದಾಯಕವಾಗಿಸುವ ಕಡೆ ಗಮನಹರಿಸದಿರುವುದು ನೋವಿನ ಸಂಗತಿ. ರೈತರ ಸರ್ವ ಸಂಕಟಗಳಿಗೂ  ಸಾಲ ಮನ್ನಾ ಒಂದೇ ಮದ್ದು ಎಂಬಂತೆ ವರ್ತಿಸುತ್ತಿರುವ ರಾಜಕೀಯ ಮುಖಂಡರ ದೂರದೃಷ್ಟಿ ಕೊರತೆ ನಮ್ಮ ಕೃಷಿಕರನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿದೆ. ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಕನಿಷ್ಠ ಮಟ್ಟದ  ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದು ಇಂದಿನ ತುರ್ತು ಅಗತ್ಯ.

Comments