ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ

ಸೋನಿಯಾ, ರಾಹುಲ್‌ ಸಮರ್ಥಿಸಿದ ಕಾಂಗ್ರೆಸ್‌

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿಕೊಂಡಿರುವ ಪಕ್ಷದ ಹಿರಿಯ ಮುಖಂಡರು, ಈ ಆರೋಪ ಮತ್ತು ಕುಯುಕ್ತಿಯು ಉದ್ದೇಶಪೂರ್ವಕ ಮತ್ತು ಹಸಿ ಸುಳ್ಳು ಎಂದು ಪ್ರತಿಪಾದಿಸಿದ್ದಾರೆ.

ನವದೆಹಲಿ (ಪಿಟಿಐ): ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿಕೊಂಡಿರುವ ಪಕ್ಷದ ಹಿರಿಯ ಮುಖಂಡರು, ಈ ಆರೋಪ ಮತ್ತು ಕುಯುಕ್ತಿಯು ಉದ್ದೇಶಪೂರ್ವಕ ಮತ್ತು ಹಸಿ ಸುಳ್ಳು ಎಂದು ಪ್ರತಿಪಾದಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳೂ ಕಾನೂನುಬದ್ಧವಾಗಿ ನಡೆದಿದೆ ಎಂದಿರುವ ಪಕ್ಷದ ಹಿರಿಯ ಮುಖಂಡರಾದ ಪಿ. ಚಿದಂಬರಂ ಮತ್ತು ಅಶ್ವನಿಕುಮಾರ್‌ ಅವರು, ಸೋನಿಯಾ ಹಾಗೂ ರಾಹುಲ್‌, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಂಪೂರ್ಣ ದೋಷಮುಕ್ತರಾಗಿ ಹೊರಬರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಈ ವ್ಯವಹಾರದಲ್ಲಿ ಯಾವುದೇ ತಪ್ಪಿಲ್ಲ. ಸಂಪತ್ತಿನ ಒಂದೇ ಒಂದು ರೂಪಾಯಿ ಸಹ ಯಾವುದೇ ಖಾಸಗಿ ವ್ಯಕ್ತಿಗೆ ಹೋಗಲು ಅವಕಾಶ ನೀಡಲಿಲ್ಲ’ ಎಂದು ಚಿದಂಬರಂ ಹೇಳಿದರು. ‘ಯಂಗ್ ಇಂಡಿಯಾ ಲಾಭರಹಿತ ಕಂಪೆನಿಯಾಗಿದೆ. ಅದರ ಅರ್ಥ, ಈ ಕಂಪೆನಿ ಎಜೆಎಲ್‌ನ ಒಂದು ರೂಪಾಯಿ ಹಣವನ್ನೂ ಯಾರಿಗೂ ನೀಡಲು ಸಾಧ್ಯವಿಲ್ಲ ಅಥವಾ ಪಡೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

ಅಸೋಸಿಯೇಟ್‌ ಜರ್ನಲಿಸ್ಟ್‌ ಲಿಮಿಟೆಡ್‌ನ (ಎಜೆಎಲ್‌) ಷೇರುಗಳನ್ನು  ಸೋನಿಯಾ ಮತ್ತು ರಾಹುಲ್‌ ಪ್ರಮುಖ ಷೇರುದಾರರಾಗಿರುವ ಯಂಗ್ ಇಂಡಿಯಾ ಕಂಪೆನಿಗೆ ವರ್ಗಾವಣೆ ಮಾಡಿದ್ದನ್ನು ಸಹ ಅವರು ಸಮರ್ಥಿಸಿಕೊಂಡರು. ಸೋನಿಯಾ ಮತ್ತು ರಾಹುಲ್‌ ಇದರಿಂದ ಚಿಂತಿಸಬೇಕಾದ ಅಗತ್ಯವಿಲ್ಲ. ಏಕೆಂದರೆ ಅವರು ಇದರಿಂದ ಒಂದು ರೂಪಾಯಿ ಕೂಡ ಲಾಭ ಪಡೆದಿಲ್ಲ ಎಂದ ಅವರು, ಮುಚ್ಚಿಹೋಗಿದ್ದ ಪ್ರಕರಣವನ್ನು ಮತ್ತೆ ತೆರೆಯಲು ಮೋದಿ ಸರ್ಕಾರವು ಖಾಸಗಿ ದೂರು ನೀಡಿಸುವ ಮೂಲಕ ದುಡುಕುತನ ತೋರಿದೆ ಎಂದರು.

ಕಾಂಗ್ರೆಸ್‌ ನಾಯಕರು ಮತ್ತು ಇತರರ ವಿರುದ್ಧದ ಆರೋಪಗಳು ಉದ್ದೇಶಪೂರ್ವಕ ಕುಯುಕ್ತಿ, ಸ್ಪಷ್ಟ ಸುಳ್ಳು ಮತ್ತು ಮಾನಹಾನಿ ಮಾಡುವಂತಿವೆ ಎಂದು ದೂರಿರುವ ಪಕ್ಷದ ಮುಖಂಡ ಅಶ್ವನಿಕುಮಾರ್‌, ವ್ಯವಹಾರಕ್ಕೆ ಸಂಬಂಧಿಸಿದಂತೆ ಕಂಪೆನಿ ಬಳಿ ಸ್ಪಷ್ಟ ದಾಖಲೆಗಳಿವೆ ಎಂದು ಹೇಳಿಕೆ ನೀಡಿದ್ದಾರೆ.

Comments