ಹಿಂದಿ ಚಿತ್ರರಂಗಕ್ಕೆ ನೀಡಿದ ಅಪೂರ್ವ ಕೊಡುಗೆಗಾಗಿ ರಾಷ್ಟ್ರೀಯ ಗೌರವ

ನಟ ದಿಲೀಪ್ ಕುಮಾರ್‌ಗೆ ಪದ್ಮವಿಭೂಷಣ ಪ್ರದಾನ

ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್ ಅವರಿಗೆ ಪದ್ಮ ವಿಭೂಷಣ ಗೌರವವನ್ನು ಭಾನುವಾರ ಪ್ರದಾನ ಮಾಡಲಾಯಿತು. ಇಲ್ಲಿನ ಬಾಂದ್ರಾ ಉಪನಗರದಲ್ಲಿರುವ ಅವರ ನಿವಾಸದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಮುಂಬೈ (ಪಿಟಿಐ): ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್ ಅವರಿಗೆ ಪದ್ಮ ವಿಭೂಷಣ ಗೌರವವನ್ನು ಭಾನುವಾರ ಪ್ರದಾನ ಮಾಡಲಾಯಿತು. ಇಲ್ಲಿನ ಬಾಂದ್ರಾ ಉಪನಗರದಲ್ಲಿರುವ ಅವರ ನಿವಾಸದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಆರು ದಶಕಗಳ ಕಾಲ ದಿಲೀಪ್ ಕುಮಾರ್ ಅವರು ಹಿಂದಿ ಚಿತ್ರರಂಗಕ್ಕೆ ನೀಡಿದ ಅಪೂರ್ವ ಕೊಡುಗೆಗಾಗಿ ಉನ್ನತ ರಾಷ್ಟ್ರೀಯ ಗೌರವವನ್ನು ಪ್ರದಾನ ಮಾಡಲಾಯಿತು. ‘ಟ್ರಾಜಿಡಿ ಕಿಂಗ್ ಆಫ್ ಬಾಲಿವುಡ್’ ಎಂದೇ ಖ್ಯಾತರಾಗಿದ್ದ 93 ವರ್ಷ ವಯೋಮಾನದ ದಿಲೀಪ್ ಕುಮಾರ್ ಅವರನ್ನು ಅವರ ಪತ್ನಿ ಸಾಯಿರಾ ಭಾನು ಉಪಸ್ಥಿತಿಯಲ್ಲಿ  ಗೌರವಿಸಲಾಯಿತು. ಈ  ವೇಳೆ ಮಹಾರಾಷ್ಟ್ರ ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್, ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

‘ನಯಾ ದೌರ್’, ‘ಅಂದಾಜ್’, ‘ದೇವ್‌ದಾಸ್’ ಮೊದಲಾದ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ದಿಲೀಪ್ ಕುಮಾರ್ ಅಭೂತಪೂರ್ವವಾಗಿ ಅಭಿನಯಿಸಿದ್ದಾರೆ.  ಹಿರಿಯ ಬಾಲಿವುಡ್ ನಟರಾದ ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್ ಸೇರಿ ಇತರರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಜನವರಿ 26ರ ಗಣರಾಜ್ಯೋತ್ಸವದಂದು ಘೋಷಿಸಲಾಗಿತ್ತು. ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಾರೋಗ್ಯದ ಕಾರಣ ದಿಲೀಪ್ ಕುಮಾರ್ ಭಾಗಿಯಾಗಿರಲಿಲ್ಲ. 

ಪಾಕಿಸ್ತಾನದ ಪೆಶಾವರದಲ್ಲಿ ಜನಿಸಿದ ಮೊಹಮ್ಮದ್ ಯೂಸುಫ್ ಖಾನ್, (ದಿಲೀಪ್ ಕುಮಾರ್ ಮೊದಲ ಹೆಸರು)  ಬಾಂಬೆ ಟಾಕೀಸ್ ನಿರ್ಮಾಣದ ‘ಜ್ವರ್ ಭತಾ’ ಚಿತ್ರದ ಮೂಲಕ 1944ರಲ್ಲಿ ದಿಲೀಪ್ ಕುಮಾರ್ ಎಂಬ ಹೆಸರಿನಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ವಿಭಿನ್ನವಾದ ಪಾತ್ರಗಳಿಂದ ದಿಲೀಪ್ ಕುಮಾರ್ ಚಿತ್ರರಂಗದಲ್ಲಿ ಹೆಸರಾಗಿದ್ದಾರೆ. ನಾಯಕತ್ವ ಪ್ರಧಾನವಾದ ‘ಆನ್’ (1952), ಹಾಸ್ಯಮಯ ‘ಆಝಾದ್’ (1955), ಐತಿಹಾಸಿಕ ‘ಮೊಘಲ್–ಎ–ಆಜಂ’ (1960), ಮತ್ತು ಸಾಮಾಜಿಕ ಕಳಕಳಿಯ ‘ಗಂಗಾ ಜಮುನಾ’ (1961) ಚಿತ್ರಗಳ ಮೂಲಕ ಮನೆಮಾತಾಗಿದ್ದರು.

ಇದಲ್ಲದೇ ‘ರಾಮ್‌ ಔರ್ ಶ್ಯಾಮ್’, ‘ಕ್ರಾಂತಿ’, ‘ಕರ್ಮ’, ‘ಸೌದಾಗರ್’ ನಂತಹ ಚಿತ್ರಗಳಲ್ಲೂ ಅಭಿನಯಿಸಿದ್ದರು. ಇವರ ಆಭಿನಯದ ಕೊನೆಯ ಚಿತ್ರ ‘ಕ್ವಿಲಾ’ (1998). ಭಾರತ ಸರ್ಕಾರವು ಇವರಿಗೆ 1991ರಲ್ಲಿ ಪದ್ಮ ಭೂಷಣ ನೀಡಿ ಗೌರವಿಸಿದೆ. 1994ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿತ್ತು. ಭಾರತೀಯ ಚಿತ್ರರಂಗಕ್ಕೆ ನೀಡಿದ ಅಸಾಧಾರಣ ಹಾಗೂ ವಿಶೇಷ ಕೊಡುಗೆ ಸ್ಮರಿಸಿ 2015ರ ಆರಂಭದಲ್ಲಿ ಪದ್ಮ ವಿಭೂಷಣ ಗೌರವವನ್ನು ಪ್ರಕಟಿಸಲಾಗಿತ್ತು.
*
‘ನಾನು ಬಹಳ ವರ್ಷಗಳಿಂದಲೂ ದಿಲೀಪ್ ಕುಮಾರ್ ಅವರ ದೊಡ್ಡ ಅಭಿಮಾನಿ. ನಮಗೆಲ್ಲರಿಗೂ ಇದು ಹೆಮ್ಮೆ ಹಾಗೂ ಸಂತೋಷದ ವಿಚಾರ’
-ಅಮಿತಾಭ್ ಬಚ್ಚನ್, ಬಾಲಿವುಡ್ ಹಿರಿಯ ನಟ

 

Comments