ಸಂಸತ್‌ ಭವನ ದಾಳಿ: ಹುತಾತ್ಮ ಯೋಧರಿಗೆ ಗೌರವ ನಮನ

ಸಂಸತ್‌ ಭವನದ  ದಾಳಿಯಲ್ಲಿ ಮಡಿದ ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ  ಸೇರಿದಂತೆ ಹಲವು ಗಣ್ಯರು ಭಾನುವಾರ ಸಂಸತ್‌ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೌರವ ನಮನ ಸಲ್ಲಿಸಿದರು.

ನವದೆಹಲಿ (ಐಎಎನ್‌ಎಸ್‌,ಪಿಟಿಐ): ಸಂಸತ್‌ ಭವನದ  ದಾಳಿಯಲ್ಲಿ ಮಡಿದ ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ  ಸೇರಿದಂತೆ ಹಲವು ಗಣ್ಯರು ಭಾನುವಾರ ಸಂಸತ್‌ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆ  ಸ್ಪೀಕರ್‌ ಸುಮಿತ್ರಾ ಮಹಾಜನ್‌, ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಸೇರಿದಂತೆ ಹಲವು ಗಣ್ಯರು ಮಡಿದ ಯೋಧರಿಗೆ ಗೌರವ ಅರ್ಪಿಸಿದರು.

ಈ ಮಧ್ಯೆ, ‘ಪ್ರಜಾಪ್ರಭುತ್ವದ ಅಸ್ತಿತ್ವಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು  ನಾವು ಸ್ಮರಿಸಬೇಕು’ ಎಂದು ಮೋದಿ ‘ಟ್ಟೀಟ್‌‘ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ    ಹುತಾತ್ಮ ಯೋಧರ ಕೆಲವು ಕುಟುಂಬ ಸದಸ್ಯರನ್ನು ಪ್ರಧಾನಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. 2001ರ ಡಿ. 13ರಂದು ಐವರು ಉಗ್ರರು  ಸಂಸತ್‌ ಭವನದ ಮೇಲೆ ನಡೆಸಿದ ದಾಳಿಯಲ್ಲಿ ಆರು ಜನ  ದೆಹಲಿ ಪೊಲೀಸರು, ಇಬ್ಬರು ಭದ್ರತಾ ಸಿಬ್ಬಂದಿ ಸೇರಿ 9 ಜನರು ಮೃತಪಟ್ಟಿದ್ದರು. 

ಭಯೋತ್ಪಾದನೆ ಸಹಿಸಲಾಗದು: ಎನ್‌ಡಿಎ ಸರ್ಕಾರ ಭಯೋತ್ಪಾದನೆಯನ್ನು ಸಹಿಸಬಾರದು ಎಂಬ ಸಿದ್ದಾಂತವನ್ನು ಅಳವಡಿಸಿ ಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಭಾನುವಾರ ಸಂಸತ್‌ ಭವನದ ದಾಳಿಯಲ್ಲಿ ಮಡಿದ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿ  ಅವರು ಮಾತನಾಡಿದರು.

‘ದೇಶವನ್ನು ಇನ್ನಷ್ಟು ಸುರಕ್ಷಿತ ವಾಗಿಡುವ ಉದ್ದೇಶವನ್ನು ಎನ್‌ಡಿಎ ಸರ್ಕಾರ ಹೊಂದಿದೆ. ಯಾವುದೇ ಕಾರಣಕ್ಕೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ’ ಎಂದು ಅವರು ಹೇಳಿದರು. ‘14 ವರ್ಷಗಳ ಹಿಂದೆ ನಡೆದ ಸಂಸತ್‌ ಭವನದ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಎಂದಿಗೂ ಮರೆಯಲಾಗದು, ಆ ವೀರ ಯೋಧರ ಧೈರ್ಯ ಸಾಹಸಕ್ಕೆ ನಾನು ನಮಿಸುತ್ತೇನೆ’ ಎಂದರು.

Comments