‘ನ್ಯಾಷನಲ್‌ ಹೆರಾಲ್ಡ್’ ಪ್ರಕರಣದಲ್ಲಿ ಮೋದಿ ಸಿಲುಕಿದ್ದರೆ?

ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ಸಿನ ನಡುವೆ ಒಂದು ಪ್ರಮುಖ ವ್ಯತ್ಯಾಸ ಇದೆ. ಸಾಕಷ್ಟು ಜನ ಷೇರುದಾರರಾಗಿರುವ ಕಂಪೆನಿಯ ಮಾದರಿಯಲ್ಲಿದೆ ಬಿಜೆಪಿ. ಆದರೆ ಕಾಂಗ್ರೆಸ್‌ ಎಂಬುದು ಖಾಸಗಿ ಕಂಪೆನಿ ಇದ್ದಂತೆ. ಇದರ ಷೇರುಗಳು ಒಂದು ಕುಟುಂಬದ ನಿಯಂತ್ರಣದಲ್ಲಿವೆ.

ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ಸಿನ ನಡುವೆ ಒಂದು ಪ್ರಮುಖ ವ್ಯತ್ಯಾಸ ಇದೆ. ಸಾಕಷ್ಟು ಜನ ಷೇರುದಾರರಾಗಿರುವ ಕಂಪೆನಿಯ ಮಾದರಿಯಲ್ಲಿದೆ ಬಿಜೆಪಿ. ಆದರೆ ಕಾಂಗ್ರೆಸ್‌ ಎಂಬುದು ಖಾಸಗಿ ಕಂಪೆನಿ ಇದ್ದಂತೆ. ಇದರ ಷೇರುಗಳು ಒಂದು ಕುಟುಂಬದ ನಿಯಂತ್ರಣದಲ್ಲಿವೆ.

ಬಿಜೆಪಿಯಲ್ಲಿ ಷೇರು ಹೊಂದಿರುವವರೆಲ್ಲ ಆ ಕಂಪೆನಿಯನ್ನು ಗಟ್ಟಿಯಾಗಿ, ಒಂದುಗೂಡಿಸಿ ಇಟ್ಟಿದ್ದಾರೆ. ಏಕೆಂದರೆ ಈ ಕಂಪೆನಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆ ನಂಟು ಹೊಂದಿದೆ. ಸಂಘ ಕೂಡ ಒಂದು ರೀತಿಯಲ್ಲಿ ಕುಟುಂಬದಂತೆಯೇ ಇದೆ ಎಂದು ಹೇಳಬಹುದು. ಆದರೆ ಸಂಘವು ‘ವಂಶಪಾರಂಪರ್ಯ’ಕ್ಕೆ ಒತ್ತು ನೀಡುವುದಿಲ್ಲ. ಹಾಗಾಗಿ ಬಿಜೆಪಿ ಎಂಬ ಕಂಪೆನಿಯನ್ನು, ಚಾಣಾಕ್ಷನೊಬ್ಬ ಪ್ರತಿಭೆಯ ಆಧಾರದಲ್ಲಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬಹುದು. ಹೇಗೆ ತೆಗೆದುಕೊಳ್ಳಬಹುದು ಎಂಬುದನ್ನು ನಮ್ಮ ಪ್ರಧಾನಿ ತೋರಿಸಿದ್ದಾರೆ.

ಕಾಂಗ್ರೆಸ್‌ ಕಂಪೆನಿಯಲ್ಲಿ ಕೆಲಸ ಮಾಡುವ ವ್ಯಕ್ತಿ ಎಷ್ಟೇ ಬುದ್ಧಿವಂತ, ಪ್ರತಿಭಾವಂತ ಆಗಿದ್ದರೂ, ಆ ಕಂಪೆನಿಯ ಮೊದಲ ಎರಡು ಸ್ಥಾನಗಳು ಒಂದು ಕುಟುಂಬದ ಸದಸ್ಯರಿಗೆ ಮಾತ್ರ ಮೀಸಲು. ಅಷ್ಟೇ ಅಲ್ಲ, ಕುಟುಂಬದ ಸದಸ್ಯರ ಪ್ರತಿಭೆ, ಸ್ಪರ್ಧಾತ್ಮಕತೆ ಅದೆಷ್ಟೇ ಕೆಳಮಟ್ಟದಲ್ಲಿರಲಿ, ಕಂಪೆನಿಯ ಅಷ್ಟೂ ಷೇರು ಕುಟುಂಬದ ಒಡೆತನದಲ್ಲಿರುವ ಕಾರಣ ಅವರು ಮಾಡುವ ಕೆಲಸಗಳನ್ನು ಆ ಕಂಪೆನಿಯಲ್ಲಿ ಕೆಲಸ ಮಾಡುವ ಯಾರೊಬ್ಬರೂ ಪ್ರಶ್ನಿಸಲಾಗದು.

ಈ ವ್ಯತ್ಯಾಸದ ಕಾರಣ, ಕಾಂಗ್ರೆಸ್‌ ಪಕ್ಷದ ಸದಸ್ಯರು ವಿಲಕ್ಷಣ ರೀತಿಯಲ್ಲಿ ವರ್ತಿಸುತ್ತಾರೆ. ಕಳೆದ ಕೆಲವು ದಿನಗಳಲ್ಲಿ, ಆಸ್ತಿ ವಿಚಾರವೊಂದರಲ್ಲಿ ಗಾಂಧಿ ಕುಟುಂಬ ವಿಚಾರಣೆ ಎದುರಿಸುತ್ತಿದೆ ಎಂಬುದು ಗೊತ್ತಾದ ನಂತರ, ವಿಲಕ್ಷಣ ವರ್ತನೆಗೆ ಪೂರಕ ಆಧಾರಗಳು ಕಂಡುಬಂದಿವೆ.

ಪ್ರಕರಣವನ್ನು ಅವರು ನ್ಯಾಯಾಲಯದಲ್ಲೇ ಎದುರಿಸುತ್ತಾರೆ ಎಂದು ಮೊದಲಿಗೆ ಹೇಳಲಾಯಿತು. ಹಾಗೆ ಮಾಡುವುದು ವಿವೇಕಯುತವಾಗಿತ್ತು. ಆದರೆ, ಇದು ರಾಜಕೀಯ ವಿಚಾರ (ಇದು ಖಂಡಿತವಾಗಿಯೂ ರಾಜಕಾರಣಕ್ಕೆ ಸಂಬಂಧಿಸಿದ್ದಲ್ಲ) ಇದಕ್ಕೆ ಸರ್ಕಾರವೇ ಕಾರಣ ಎಂದು ಪಕ್ಷ ನಂತರದ ದಿನಗಳಲ್ಲಿ ಹೇಳಿತು.

ಗಾಂಧಿ ಕುಟುಂಬ ಮಾಡಿರುವುದು ಕ್ರಿಮಿನಲ್‌ ಅಪರಾಧ ಅಲ್ಲದಿದ್ದರೂ, ಅದು ಅನುಚಿತವಂತೂ ಹೌದು ಎಂಬುದು ಪ್ರಕರಣವನ್ನು ಗಮನಿಸಿದ ಯಾರಿಗಾದರೂ ಗೊತ್ತಾಗುತ್ತದೆ. ತಾವು ಈ ವ್ಯವಹಾರದಿಂದ ಹಣಕಾಸಿನ ಲಾಭ ಪಡೆದಿಲ್ಲ, ಈ ವ್ಯವಹಾರದಲ್ಲಿ ಕೆಲವು ಕಾನೂನುಗಳನ್ನು ಉಲ್ಲಂಘಿಸಿದ್ದರೂ ಅದರಿಂದ ಯಾರಿಗೂ ಹಣಕಾಸಿನ ಲಾಭ ಆಗಿಲ್ಲ ಎಂದು ಅವರು ವಾದಿಸುತ್ತಿದ್ದಾರೆ.

ಅವರು ಇಡೀ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದ್ದನ್ನು ನೋಡಿ ಆಶ್ಚರ್ಯಪಡಬೇಕಿಲ್ಲ. ಜೀವನೋಪಾಯಕ್ಕೆ ಕೆಲಸ ಮಾಡಬೇಕಾದ ಅಗತ್ಯವೇ ಇಲ್ಲದ, ನಮ್ಮ–ನಿಮ್ಮಂತೆ ಕೆಲಸ ಹುಡುಕಬೇಕಾದ ಅಗತ್ಯವನ್ನೇ ಕಾಣದ, ಜೀವಮಾನವಿಡೀ ಸರ್ಕಾರಿ ಬಂಗಲೆಗಳಲ್ಲೇ ಕಾಲ ಕಳೆದ ಅವರಿಗೆ ವೈಯಕ್ತಿಕ ಆಸ್ತಿ ಮತ್ತು ಬೇರೆಯದರ ನಡುವೆ ವ್ಯತ್ಯಾಸ ಕಾಣದೇ ಇರುವುದು ಸಹಜ.

ಈ ಪ್ರಕರಣವನ್ನು ಕಾನೂನು ಸಮರದ ಬದಲು ರಾಜಕೀಯ ಸಮರದ ಮೂಲಕ ಎದುರಿಸುವ ನಿಲುವು ತಾಳುವ ಮುನ್ನ ಸೋನಿಯಾ ಗಾಂಧಿ ಅವರಿಗೆ ಗುಲಾಂ ನಬಿ ಆಜಾದ್, ಅಹಮದ್ ಪಟೇಲ್, ಭೂಪಿಂದರ್ ಸಿಂಗ್ ಹೂಡಾ, ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಸಲಹೆ ನೀಡಿದ್ದರು ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಮೋತಿಲಾಲ್‌ ವೋರಾ, ಆಸ್ಕರ್ ಫರ್ನಾಂಡೀಸ್‌ ಮತ್ತು ಸ್ಯಾಮ್‌ ಪಿತ್ರೊಡಾ ಹೆಸರೂ ವರದಿಯಲ್ಲಿದೆ.

ಈ ಎಲ್ಲ ವ್ಯಕ್ತಿಗಳಲ್ಲಿ ಇರುವ ಸಮಾನ ಅಂಶ ಯಾವುದು? ಇವರಲ್ಲಿ ಯಾರೂ ಕೂಡ ಲೋಕಸಭೆಯ ಸದಸ್ಯರಲ್ಲ. ಅಂದರೆ, ಯಾರೂ ಚುನಾಯಿತರಾಗಬೇಕಾದವರಲ್ಲ, ಜನರನ್ನು ಎದುರಿಸುವ ಅವಶ್ಯಕತೆ ಇವರಿಗಿಲ್ಲ. ಅವರು ನೀಡಿರುವ ಸಲಹೆಗಳು ರಾಜಕೀಯ ದೃಷ್ಟಿಕೋನಕ್ಕಿಂತ ಹೆಚ್ಚಾಗಿ ವೈಯಕ್ತಿಕ ನೆಲೆಯಲ್ಲಿ ಇರುತ್ತವೆ. ಅವರು ಸಲಹೆ ನೀಡುವಾಗ ಕುಟುಂಬವನ್ನು ರಕ್ಷಿಸಲು ಹೆಚ್ಚು ಗಮನ ನೀಡಿರುವ ಸಾಧ್ಯತೆ ಇರುತ್ತದೆಯೇ ಹೊರತು, ಅವರ ಸಲಹೆಯಲ್ಲಿ ಪಕ್ಷದ ಹಿತ ಕಾಯುವುದು ಅಥವಾ ಪಕ್ಷಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ಇರಲಿಕ್ಕಿಲ್ಲ.

ಈ ಪ್ರಕರಣವನ್ನು ಕುಟುಂಬವು ನ್ಯಾಯಾಲಯದಲ್ಲಿ ಎದುರಿಸಬೇಕು, ಇದನ್ನು ರಾಜಕೀಯ ವಿಷಯವನ್ನಾಗಿಸಬಾರದು, ಈ ವಿಚಾರದಿಂದ ಪಕ್ಷ ದೂರ ಉಳಿಯಬೇಕು ಎಂದು ಕಾಂಗ್ರೆಸ್ಸಿನಲ್ಲಿ ಯಾರೊಬ್ಬರೂ ಹೇಳಿಲ್ಲ. ಈ ರೀತಿಯ ಸಲಹೆ ನೀಡುವ ಮಾತು ಬದಿಗಿರಲಿ, ಸಲಹೆ ಕೊಡುವ ಬಗ್ಗೆ ಯಾರಾದರೂ ಆಲೋಚಿಸಿದರೆ ಅವರನ್ನು ಪಕ್ಷದಿಂದ ತಕ್ಷಣ ಹೊರಹಾಕಲಾಗುತ್ತದೆ. ಕಾಂಗ್ರೆಸ್ಸಿಗೂ ಬಿಜೆಪಿಗೂ ಇರುವ ಇನ್ನೊಂದು ವ್ಯತ್ಯಾಸ ಇದು.

ನರೇಂದ್ರ ಮೋದಿ ಅವರು ಇಂಥದ್ದೇ ಪರಿಸ್ಥಿತಿಗೆ ಸಿಲುಕಿದ್ದರೆ, ಪಕ್ಷದಲ್ಲಿ ಆಂತರಿಕ ಭಿನ್ನಮತ ಭುಗಿಲೇಳುತ್ತಿತ್ತು. ಭಿನ್ನಮತ ಮೂಡದಿರಲು ಸಾಧ್ಯವೇ ಇರುತ್ತಿರಲಿಲ್ಲ. ಕಷ್ಟಪಟ್ಟು ಪ್ರಯತ್ನಿಸಿದ ನಂತರವೂ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಆಗದ ಕಾರಣ, ಮೋದಿ ಪಕ್ಷದಲ್ಲಿ ಕೆಲವರ ಕೋಪ ಎದುರಿಸಬೇಕಾಯಿತು. ಹೀಗಿರುವಾಗ, ಹಣಕಾಸಿನ ಅಕ್ರಮ ನಡೆಸಿಯೂ ಉಳಿದುಕೊಳ್ಳುವುದು ಬಹಳ ಕಷ್ಟವಾಗುತ್ತಿತ್ತು. ಬಿಜೆಪಿಯಲ್ಲಿನ ಅಸಹಿಷ್ಣುತೆ ಬಗ್ಗೆ ಸಾಕಷ್ಟು ಮಾತನಾಡಬಹುದು. ಆದರೆ, ಭ್ರಷ್ಟಾಚಾರದ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ಸಿಗಿಂತ ಕಡಿಮೆ ಸಹಿಷ್ಣುತೆ ಹೊಂದಿದೆ.

‘ನ್ಯಾಷನಲ್‌ ಹೆರಾಲ್ಡ್‌’ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ನಿರ್ಧರಿಸಿರುವ ಕಾರಣ, ಸಂಸತ್ತಿನ ಕಲಾಪಕ್ಕೆ ಅಡ್ಡಿಮಾಡಲು ಕಾಂಗ್ರೆಸ್ಸಿಗೆ ಇರುವ ಹಲವು ವಿಷಯಗಳ ಪೈಕಿ ನ್ಯಾಯಾಲಯದಲ್ಲಿರುವ ಪ್ರಕರಣವೂ ಒಂದಾಗಿ ಸೇರಿತು. ತಾನು ಅಸಂಗತ ಆಗದಂತೆ ಮತ್ತೊಮ್ಮೆ ನೋಡಿಕೊಳ್ಳಲು ಕಾಂಗ್ರೆಸ್ ಪಕ್ಷ ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ತಂತ್ರಗಾರಿಕೆ ಬಳಸಿಕೊಳ್ಳುತ್ತಿದೆ. ಎಲ್ಲ ಪಕ್ಷಗಳೂ ಈ ತಂತ್ರ ಅನುಸರಿಸುತ್ತವೆ, ಅದು ಪರಿಣಾಮಕಾರಿಯೂ ಹೌದು. ಹಾಗಾಗಿ ತಂತ್ರಗಾರಿಕೆ ಸರಿ ಎನ್ನೋಣ. ಆದರೆ, ವಿಚಾರದಿಂದ ವಿಚಾರಕ್ಕೆ ಹಾರುವುದು ವಿವೇಕಯುತ ಕೆಲಸ ಎನ್ನೋಣವೇ?

ಮುಖ್ಯಮಂತ್ರಿಗಳು ಮತ್ತು ವಿದೇಶಾಂಗ ಸಚಿವರು ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಒಂದು ದಿನ,  ವಿ.ಕೆ. ಸಿಂಗ್‌ ಅವರು ಸಹಜವಾಗಿ ಎಚ್ಚರಗೇಡಿತನದಿಂದ (ಆದರೆ, ಉದ್ದೇಶಪೂರ್ವಕವಾಗಿ ಅಲ್ಲ) ಆಡಿದ ಮಾತಿನ ಬಗ್ಗೆ ಇನ್ನೊಂದು ದಿನ, ಅಸಹಿಷ್ಣುತೆ ಬಗ್ಗೆ ಮತ್ತೊಂದು ದಿನ, ಮಗದೊಂದು ದಿನ ನ್ಯಾಯಾಲಯದಲ್ಲಿರುವ ತನ್ನ ವೈಯಕ್ತಿಕ ಪ್ರಕರಣದ ವಿಚಾರ, ಮತ್ತೆ ಇನ್ನೊಂದು ದಿನ ಭ್ರಷ್ಟಾಚಾರದ ವಿಚಾರ ಮುಂದಿಟ್ಟು ಕಲಾಪಕ್ಕೆ ಅಡ್ಡಿ ಮಾಡುವುದು ಸರಿಯೇ?

ಹೀಗೆ ಮಾಡುವ ತಂತ್ರಗಾರಿಕೆ ನಿಜಕ್ಕೂ ಒಬ್ಬರ ತಲೆಗೆ ಹೊಳೆದು, ಇನ್ನೊಬ್ಬರು ಅದನ್ನು ಅನುಷ್ಠಾನಕ್ಕೆ ತರುತ್ತಿದ್ದಾರಾ ಎಂಬ ಅನುಮಾನ ಬರುತ್ತಿದೆ. ಸರ್ಕಾರದ ಕೆಲವು ಕೆಲಸಗಳ ಬಗ್ಗೆ ಗಂಭೀರ ಚರ್ಚೆ ಆಗಬೇಕಿರುವ ಹೊತ್ತಿನಲ್ಲಿ ವಿರೋಧ ಪಕ್ಷವು ಇಂಥ ಹೊಲಸು ಕೆಲಸ ಮಾಡುತ್ತಿರುವುದು ಭಾರತೀಯರ ದುರದೃಷ್ಟ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

Comments
ಈ ವಿಭಾಗದಿಂದ ಇನ್ನಷ್ಟು
ಏನಿದ್ದೀತು ಈ ಬಾರಿ ಚುನಾವಣಾ ವಿಷಯ?

ದೂರ ದರ್ಶನ
ಏನಿದ್ದೀತು ಈ ಬಾರಿ ಚುನಾವಣಾ ವಿಷಯ?

20 Mar, 2018
ನಮ್ಮ ತನಿಖಾ ಸಂಸ್ಥೆಗಳ ಕಥೆ-ವ್ಯಥೆ

ದೂರ ದರ್ಶನ
ನಮ್ಮ ತನಿಖಾ ಸಂಸ್ಥೆಗಳ ಕಥೆ-ವ್ಯಥೆ

12 Mar, 2018
ಅಧಿಕಾರದಲ್ಲಿರುವ ಪಕ್ಷದ ಏಳು ಅನುಕೂಲಗಳು

ದೂರ ದರ್ಶನ
ಅಧಿಕಾರದಲ್ಲಿರುವ ಪಕ್ಷದ ಏಳು ಅನುಕೂಲಗಳು

5 Mar, 2018
ಗುಜರಾತ್ ಮಾದರಿಯ ಇನ್ನೊಂದು ಮುಖ!

ದೂರ ದರ್ಶನ
ಗುಜರಾತ್ ಮಾದರಿಯ ಇನ್ನೊಂದು ಮುಖ!

26 Feb, 2018

ದೂರ ದರ್ಶನ
ಹಿಂಸೆಯಿಲ್ಲದ ಯುದ್ಧದಲ್ಲಿ ತಂತ್ರಜ್ಞಾನದ್ದೇ ಮೇಲುಗೈ

ಆಧುನಿಕ ರಾಷ್ಟ್ರವು ಯುದ್ಧದ ವೇಳೆ ಶತ್ರು ರಾಷ್ಟ್ರದ ಸಂಪರ್ಕ ಸಾಧನಗಳನ್ನು ನಿಷ್ಕ್ರಿಯಗೊಳಿಸುವತ್ತ ಗಮನ ನೀಡುತ್ತದೆ. ಇಂಟರ್ನೆಟ್‌ ಸೇವೆಗಳು ಸ್ಥಗಿತವಾಗುವಂತೆ ಮಾಡಿದರೆ ಯಾವುದೇ ಆಧುನಿಕ ರಾಷ್ಟ್ರ...

19 Feb, 2018