ಮಾರಾಟದ ಒತ್ತಡದಲ್ಲಿ ವಹಿವಾಟು

ಷೇರುಪೇಟೆ ಸಂವೇದಿ ಸೂಚ್ಯಂಕವು ಸತತವಾದ ಇಳಿಕೆಯನ್ನು (ಗುರುವಾರದ 216 ಅಂಶಗಳ ಏರಿಕೆಯನ್ನು ಹೊರತುಪಡಿಸಿ) ದಾಖಲಿಸಿ ವಾರ್ಷಿಕ ಕನಿಷ್ಠ ಮಟ್ಟವಾದ 24,833 ರ ಸಮೀಪಕ್ಕೆ ಅಂದರೆ 24,930 ರತನಕ ಕುಸಿಯಿತು. ನಂತರ ಪುಟಿದೆದ್ದು 25,044ರಲ್ಲಿ ವಾರಾಂತ್ಯಕಂಡಿತು.

ಷೇರುಪೇಟೆ ಸಂವೇದಿ ಸೂಚ್ಯಂಕವು ಸತತವಾದ ಇಳಿಕೆಯನ್ನು (ಗುರುವಾರದ 216 ಅಂಶಗಳ ಏರಿಕೆಯನ್ನು ಹೊರತುಪಡಿಸಿ) ದಾಖಲಿಸಿ ವಾರ್ಷಿಕ ಕನಿಷ್ಠ ಮಟ್ಟವಾದ 24,833 ರ ಸಮೀಪಕ್ಕೆ ಅಂದರೆ 24,930 ರತನಕ ಕುಸಿಯಿತು. ನಂತರ ಪುಟಿದೆದ್ದು 25,044ರಲ್ಲಿ ವಾರಾಂತ್ಯಕಂಡಿತು.

ಎಲ್ಲಾ ದಿಕ್ಕಿನಿಂದಲೂ ಋಣಾತ್ಮಕವಾದ ಸುದ್ದಿಗಳು ಜೊತೆಗೆ ವಿದೇಶಿ ವಿತ್ತೀಯ ಸಂಸ್ಥೆಗಳ ಮಾರಾಟದ ಒತ್ತಡ ಈ ಇಳಿಕೆಗೆ ಕಾರಣವಾಗಿತ್ತು. ಈ ವಾರದ ಪ್ರಮುಖ  ಬೆಳವಣಿಗೆ ಎಂದರೆ ದೆಹಲಿಯಲ್ಲಿ ನೋಂದಾಯಿಸಿ ಕೊಂಡಿರುವ ಡೀಸಲ್ ಉಪಯೋಗಿ ಸುವ ವಾಹನಗಳು ಹತ್ತು ವರ್ಷ ಹಳೆಯ ದಾದರೇ ಅವುಗಳ ನೋಂದಾವಣೆ ನವೀಕರಿಸಬಾರದು ಮತ್ತು ಹೊಸ ಡೀಸಲ್ ವಾಹನಗಳಿಗೆ ನೋಂದಾವಣೆ ಮಾಡುವಂತಿಲ್ಲ ಎಂಬ ನಿರ್ಬಂಧವನ್ನು ರಾಷ್ಟ್ರೀಯ ಹಸಿರು ಪ್ರಾಧಿಕಾರ ಆದೇಶ ನೀಡಿದೆ.

ಈ ಆದೇಶದಿಂದ ಆಟೊ ವಲಯದ ಅಶೋಕ್ ಲೆಲ್ಯಾಂಡ್, ಮಾರುತಿ ಸುಜುಕಿ, ಟಾಟಾ ಮೋಟಾರ್, ಮಹೀಂದ್ರ ಆ್ಯಂಡ್ ಮಹಿಂದ್ರ  ಕಂಪೆನಿ ಷೇರುಗಳ ದರಗಳು ಹೆಚ್ಚಿನ ಮಾರಾಟದ ಒತ್ತಡದಿಂದ ಹಾನಿ ಗೊಳಗಾದವು. ಈ ಮಧ್ಯೆ ಚೆನ್ನೈನಲ್ಲಿನ ಪ್ರವಾಹದಿಂದ ಹಲವಾರು ಕಂಪೆನಿ ಗಳು ನಿಷ್ಕ್ರಿಯವಾಗಿವೆ, ಹಾನಿಗೊಳ ಗಾಗಿವೆ,  ಕೇಂದ್ರ ಸರ್ಕಾರ ಜಾರಿಗೊಳಿ ಸಬೇಕೆಂದಿರುವ ಜಿಎಸ್‌ಟಿ ಮಸೂದೆಗೆ ಉಂಟಾಗಿರುವ ವಿಜ್ಞಗಳು ಪೇಟೆಯಲ್ಲಿ ನಿರುತ್ಸಾಹವನ್ನು ಮೂಡಿಸಿವೆ.

ಕೈಗಾರಿಕಾ ಪ್ರಗತಿ: ಶುಕ್ರವಾರ ಪೇಟೆಯ ವಹಿವಾಟಿನ ನಂತರ ಪ್ರಕಟವಾದ ಕೈಗಾರಿಕಾ ತಯಾರಿಕಾ ಸೂಚ್ಯಂಕವು ಶೇ9.8 ರಷ್ಟಿದ್ದು ಇದು ನಿರೀಕ್ಷೆಗೂ ಮೀರಿ ಏರಿಕೆ ಕಂಡಿರುವುದು ಸೋಮವಾರದ ಪೇಟೆಯನ್ನು, ಆರಂಭಿಕ ಕ್ಷಣದಲ್ಲಾದರೂ, ಚುರುಕಾ ಗಿಸಲು ಪೂರಕ ಅಂಶವಾಗಿದೆ. 

ಸಿಸಿಐ ಆದೇಶ: ಮತ್ತೊಂದು ಪ್ರಮುಖ ಬೆಳವಣಿಗೆ ಎಂದರೆ ಈ ಹಿಂದೆ ಸೀಮೆಂಟ್ ಕಂಪೆನಿಗಳು ಚಕ್ರವ್ಯೂಹ ರಚಿಸಿಕೊಂಡು ಕೃತಕವಾದ ವಾತಾವರಣದಿಂದ ವ್ಯವಹಾರಿಕ ಲಾಭ ಗಳಿಸಿವೆ ಎಂದು ಸ್ಪರ್ಧಾ ಆಯೋಗ ಆರೋಪಿಸಿ ಭಾರಿ ಪ್ರಮಾಣದ ದಂಡವನ್ನು ವಿಧಿಸಿತ್ತು.  ಈ ತೀರ್ಪನ್ನು  ನ್ಯಾಯಾಧಿಕರಣವು ತಳ್ಳಿಹಾಕಿ  ಆಯೋಗಕ್ಕೆ ಸತ್ಯಾಂಶಗಳನ್ನು ವಾದ ವಿವಾದಗಳನ್ನರಿತು ಮುಂದಿನ ಮೂರು ತಿಂಗಳೊಳಗೆ ಹೊಸ ಆದೇಶ ಹೊರಡಿಸಲು ತಿಳಿಸಿದೆ.

ಈ ವಿಚಾರವು ಪ್ರಮುಖ ಕಂಪೆನಿಗಳಾದ ಎಸಿಸಿ, ಅಂಬುಜಾ ಸೀಮೆಂಟ್, ಅಲ್ಟ್ರಾಟೆಕ್ ಸೀಮೆಂಟ್ ಮುಂತಾದವುಗಳ ಷೇರಿನ ಬೆಲೆಯನ್ನು ಗಗನ್ನಕ್ಕೇರಿಸಿ ನಂತರ ಇಳಿಕೆ ಕಾಣುವಂತೆ ಮಾಡಿತು.   ಸುದ್ದಿ ಪ್ರಕಟವಾದ ನಂತರದಲ್ಲಿ ತ್ವರಿತವಾದ ಏರಿಕೆ ಕಂಡು ನಂತರ ತಣ್ಣಗಾಯಿತು. ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕವು ಸಾಕಷ್ಟು ಒತ್ತಡದಿಂದ 593 ಅಂಶಗಳ ಇಳಿಕೆ ಕಂಡು ತನ್ನೊಂದಿಗೆ ಮದ್ಯಮ ಶ್ರೇಣಿಯ ಸೂಚ್ಯಂಕ ೩೫೯ ಪಾಯಿಂಟುಗಳ, ಕೆಳ ಮದ್ಯಮ ಶ್ರೇಣಿಯ ಸೂಚ್ಯಂಕ 344 ಅಂಶಗಳ ಇಳಿಕೆ ಕಾಣುವಂತೆ ಮಾಡಿತು.
 
ವಿದೇಶಿ ವಿತ್ತೀಯ ಸಂಸ್ಥೆಗಳು ₹1,438 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ₹1,033ಕೋಟಿ ಮೌಲ್ಯದ ಷೇರು ಖರೀದಿಸಿದವು. ವಾರಾಂತ್ಯದಲ್ಲಿ  ಷೇರುಪೇಟೆಯ ಬಂಡವಾಳ  ಮೌಲ್ಯವು ₹95.37 ಲಕ್ಷ ಕೋಟಿಗೆ ಕುಸಿದಿತ್ತು.

ತೆರಿಗೆ ಮುಕ್ತ  ಬಾಂಡ್:  ಮಂಗಳವಾರ ಆರಂಭಗೊಂಡ ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಶ ನ  ತೆರಿಗೆ ಮುಕ್ತ  ಬಾಂಡ್ ಮಾರಾಟಕ್ಕೆ ಸಿಕ್ಕ  ಸ್ಪಂಧನ ಅಭೂತ ಪೂರ್ವವಾದುದು. ಈ ವರ್ಷ ವಿತರಣೆಗೊಂಡ ಬಾಂಡ್‌ಗಳಲ್ಲಿ  ಅತಿ ದೊಡ್ಡ  ಪ್ರಮಾಣದ ವಿತರಣೆ ಇದಾಗಿತ್ತು.  

ಗ್ರೀನ್ ಶೂ ಭಾಗವು ಸೇರಿ ಒಟ್ಟು ₹4532ಕೋಟಿ ಸಂಗ್ರಹಣೆ ಗುರಿಗೆ ₹10,796 ಕೋಟಿ ಹಣವು ಮೊದಲನೇ ದಿನವೇ ಸಂಗ್ರಹವಾಗಿ ದ್ದುದು ಅಚ್ಚರಿಯ ಸಂಗತಿ. ಸಣ್ಣ ಹೂಡಿಕೆದಾರಾರ ಮೀಸಲು ಭಾಗವು ಸುಮಾರು 1.3 ರಷ್ಟು ಹೆಚ್ಚು ಸಂಗ್ರಹವಾದರೆ, ಸಾಹುಕಾರಿ ವ್ಯಕ್ತಿಗಳಿಗೆ ಮೀಸಲಿಟ್ಟ ಭಾಗವು 1.8ರ ಷ್ಟು ಹೆಚ್ಚು ಸಂಗ್ರಹವಾಗಿದೆ.

ಉಳಿದಂತೆ ಸಾಂಸ್ಥಿಕ ಹೂಡಿಕೆ ದಾರರ ಬೆಂಬಲವು ಹೆಚ್ಚಾಗಿತ್ತು. ಅಂತಿಮವಾಗಿ 45,611 ಅರ್ಜಿಗಳಿಂದ ₹10,835 ಕೋಟಿ ಸಂಗ್ರಹವಾಗಿದೆ.  ಸಣ್ಣ ಹೂಡಿಕೆದಾರರಿಗೆ ಮೀಸಲಿಟ್ಟ ಭಾಗವು 1.35 ರಷ್ಟು ಹೆಚ್ಚು ಸಂಗ್ರಹ ವಾಗಿರುವುದು ಅಲಾಟ್‌ಮೆಂಟ್ ಪಡೆಯುವ ಅವಕಾಶ ಹೆಚ್ಚಾಗಿಸಿದೆ.

ವಹಿವಾಟು: ಪಿ.ಐ. ಇಂಡಸ್ಟ್ರೀಸ್  ಕಂಪೆನಿಯ ಪ್ರವರ್ತಕರು ತಮ್ಮ ಭಾಗಿತ್ವದ ಶೇ64 ರಷ್ಟನ್ನು ಶುಕ್ರವಾರ ಮಾರಾಟ ಮಾಡಿದ್ದಾರೆ. ಅಂದು ಎಸ್ ಬಿ ಐ ಮ್ಯೂಚುಯಲ್ ಫಂಡ್ 9 ಲಕ್ಷ ಷೇರನ್ನು,  ಇಂಡಿಯಾ ಮಿಡ್ ಕ್ಯಾಪ್ ಮಾರಿಷಸ್ ಸಂಸ್ಥೆಯು 10 ಲಕ್ಷ ಷೇರನ್ನು, ಜಿಎಂಓ ಎಮರ್ಜಿಂಗ್ ಡೊಮೆಸ್ಟಿಕ್ ಅಪಾರ್ಚುನಿಟೀಸ್ ಫಂಡ್ 8.65 ಲಕ್ಷ ಷೇರನ್ನು, ಸ್ಟಿಚಿಂಗ್ ಡೆಪಾಜಿಟರಿ ಎಪಿಜಿ ಎಮರ್ಜಿಂಗ್ ಮಾರ್ಕೆಟ್ ಈಕ್ವಿಟಿ ಪೂಲ್ 9.50 ಲಕ್ಷ ಷೇರನ್ನು ಕೊಂಡಿವೆ. ಪ್ರವರ್ತಕರು ಮಾರಾಟ ಮಾಡಿದ ಕಾರಣ ಷೇರಿನ ಬೆಲೆಯು ₹644 ರಿಂದ ₹580ರ ವರೆಗೂ ಕುಸಿದು ನಂತರ 598ರ ಸಮೀಪ ಅಂತ್ಯಕಂಡಿತು. ಮುಂದಿನ ದಿನಗಳಲ್ಲಿ ಈ ಸಂಸ್ಥೆಗಳ ಕೊಳ್ಳುವಿಕೆಯು ಷೇರಿನ ಬೆಲೆಯನ್ನು ಏರಿಕೆಯತ್ತ ತಳ್ಳುವ ಸಾಧ್ಯವಿದೆ.

ಬೋನಸ್ ಷೇರು: ಇ ಕ್ಲಾರ್ಕ್ಸ್ ಸರ್ವಿಸಸ್ ಕಂಪೆನಿಯು ವಿತರಿಸಲಿರುವ 1:3 ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 14 ನಿಗದಿತ ದಿನವಾಗಿದೆ. ವೆಂಕೀಸ್ (ಇಂಡಿಯಾ) ಲಿಮಿಟೆಡ್ ಕಂಪೆನಿ ವಿತರಿಸಲಿರುವ 1:2 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 22 ನಿಗದಿತ ದಿನವಾಗಿದೆ. ಮಂಗಲ್ ಕ್ರೆಡಿಟ್ ಅಂಡ್ ಫಿನ್ ಕಾರ್ಪ್ ಕಂಪೆನಿ ವಿತರಿಸಲಿರುವ 5:1 ರ ಅನುಪಾತದ ಬೋನಸ್ ಷೇರಿಗೆ 19 ನಿಗದಿತ ದಿನವಾಗಿದೆ.

ಮುಖಬೆಲೆ ಸೀಳಿಕೆ : ಎಸ್ಎಂಎಸ್ ಫಾರ್ಮಾಸ್ಯುಟಿಕಲ್ಸ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲು  ಈ ತಿಂಗಳ 18 ನಿಗದಿತ ದಿನವಾಗಿದೆ. ಚಮನ್ ಲಾಲ್ ಸೇಥಿಯಾ ಎಕ್ಸ್ ಪೋರ್ಟ್ಸ್ ಲಿ. ಕಂಪೆನಿಯು ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಈ ತಿಂಗಳ 29 ನಿಗದಿತ ದಿನವಾಗಿದೆ. ನೋಬಲ್ ಪಾಲಿಮರ್ಸ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹5 ಕ್ಕೆ ಸೀಳಲು ಈ ತಿಂಗಳ 17 ನಿಗದಿತ ದಿನವಾಗಿದೆ. ಸಿಟಿಜನ್ ಯಾರ್ನ್ಸ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹5ಕ್ಕೆ ಸೀಳಲು ಈ ತಿಂಗಳ 17 ನಿಗದಿತ ದಿನವಾಗಿದೆ.
*
ವಾರದ ವಿಶೇಷ
ಇನ್ಫೊಸಿಸ್ ಕಂಪೆನಿಯ ಷೇರಿನಲ್ಲಿ, ವಿಪ್ರೊ ಷೇರಿನಲ್ಲಿ  ಈ ಹಿಂದೆ ಮಾಡಿದ ಹೂಡಿಕೆ  ಹತ್ತು ಹಲವು ಪಟ್ಟು ಏರಿಕೆ ಕಂಡಿದೆ ಈಗಲೂ ಅಂತಹುದು ಸಾಧ್ಯವೇ  ಎಂಬುದರ ಬಗ್ಗೆ ಹೂಡಿಕೆದಾರರೋರ್ವರು ಪ್ರಶ್ನಿಸಿದ್ದಾರೆ. ಈ ಹಿಂದೆ ಎಂಬತ್ತು, ತೊಂಬತ್ತರ ದಶಕದಲ್ಲಿದ್ದ ಹೂಡಿಕೆ ವಿಧ ಈಗಿನ ವಿಧಗಳಲ್ಲಿ ಹೆಚ್ಚು ವ್ಯತ್ಯಾಸವಿದೆ.  ಈಗ ಹೂಡಿಕೆ ಎಂದರೆ ಎಲ್ಲರೂ ಅಲ್ಪ ಕಾಲೀನ ದೃಷ್ಟಿಯಿಂದ ನೋಡುವರು. ಕಾರಣ ವಿಶ್ವದಲ್ಲಿ ಘಟಿಸುತ್ತಿರುವುದು ಅನಿರೀಕ್ಷಿತ ಮತ್ತು ತ್ವರಿತ. 

ಹಿಂದೆ ಹೂಡಿಕೆಗೆ ಆಂತರಿಕ ಮೂಲಭೂತಗಳು ಮುಖ್ಯವಾಗಿದ್ದವು. ಆಗ ಮೂಲಾಧಾರಿತ ಪೇಟೆಗಳಿರಲಿಲ್ಲ.  ತೊಂಬತ್ತರ ದಶಕದ ಅಂತಿಮ ಘಟ್ಟದಲ್ಲಿ ತಾಂತ್ರಿಕ ವಲಯದ ಕಂಪೆನಿಗಳಾದ ಹಿಮಾಚಲ್ ಫ್ಯೂಚರಿಸ್ಟಿಕ್,  ಡಿಎಸ್‌ಕ್ಯು ಸಾಫ್ಟ್ ವೇರ್, ಪೆಂಟಾ ಮೀಡಿಯಾ ಗ್ರಾಫಿಕ್ಸ್ ಗಳು ಪ್ರತಿ ಹತ್ತು ರೂಪಾಯಿ ಮುಖಬೆಲೆಯ ಷೇರುಗಳು ಪೇಟೆಯಲ್ಲಿ ಮೂರುಸಾವಿರಕ್ಕೂ ಹೆಚ್ಚಿನ ಬೆಲೆಯಲ್ಲಿ ವಹಿವಾಟಾಗುತ್ತಿದ್ದವು.  ಈಗ ಇವುಗಳ ಬೆಲೆಯು ಕ್ಷೀಣಿತಗೊಂಡು ತಿರಸ್ಕರಿಸಲ್ಪಟ್ಟಿದೆ. 

ಡಿಎಸ್‌ಕ್ಯು  ಸಾಫ್ಟ್ ವೇರ್ ವಹಿವಾಟಿನಿಂದ ಡಿ ಲಿಸ್ಟ್ ಆಗಿ ಹೂಡಿಕೆದಾರರನ್ನು ನಿರ್ಗಮನದ ಅವಕಾಶದಿಂದ ವಂಚಿತರನ್ನಾಗಿಸಿದೆ.  1992 ರ ಹಗರಣದ ವೇಳೆ ಮಜಡಾ ಇಂಡಸ್ಟ್ರೀಸ್ ನ ಒಂದು ಷೇರಿನ ಬೆಲೆಯು ₹1,400 ನ್ನು ದಾಟಿತ್ತು, ನಂತರದ ವರ್ಷಗಳಲ್ಲಿ ಅದು ಕೇವಲ ಕಾಗದವಾಗಿದೆ.  ಕಾಲ್ಗೇಟ್ ಕಂಪೆನಿ ಭಾರತದಲ್ಲಿ 1978ರಲ್ಲಿ ಅಂದಿನ ಫೆರಾ ನಿಯಮದಡಿ 11.79 ಷೇರುಗಳನ್ನು ಪ್ರತಿ ಷೇರಿಗೆ ₹15ರಂತೆ ವಿತರಿಸಿತು. 

ನಂತರ 1982ರಲ್ಲಿ, 1985ರಲ್ಲಿ, 1987ರಲ್ಲಿ, 1989ರಲ್ಲಿ, 1994ರಲ್ಲಿ  1:1 ರ ಅನುಪಾತದ ಬೋನಸ್ ಷೇರು ವಿತರಿಸಿ ಹೂಡಿಕೆದಾರರ ಮೆಚ್ಚುಗೆ ಗಳಿಸಿತು. 1991ರಲ್ಲಿ 3:5 ಅನುಪಾತದ ಬೋನಸ್ ಷೇರು ವಿತರಿಸಿತು.  ಅಂದರೆ ಮೊದಲ ವಿತರಣೆಯಲ್ಲಿ 100 ಷೇರು ಪಡೆದವರ ಹೂಡಿಕೆ 1994ರವರೆಗೆ 50 ಪಟ್ಟು ಬೆಳೆದಿದೆ. ಕಂಪೆನಿಯ ಷೇರು ಬಂಡವಾಳವು ಆರಂಭದ  ₹2  ಕೋಟಿಯಿಂದ ₹136 ಕೋಟಿಗೆ ತಲುಪಿದ್ದು, ಇದರಲ್ಲಿ ಸಿಂಹ ಪಾಲು ಬೋನಸ್ ಷೇರುಗಳದ್ದೇ ಆಗಿದೆ.

ಕಂಪೆನಿಯ ಷೇರು ಬಂಡವಾಳವು ಗಜಗಾತ್ರಕ್ಕೆ ಬೆಳೆದ ಕಾರಣ ಮತ್ತು ಕಂಪೆನಿಯ ಹೊಂದಿರುವ ಮೀಸಲು ನಿಧಿಯನ್ನು ಸದುಪಯೋಗ ಪಡಿಸಲು  2007ರಲ್ಲ ಷೇರುದಾರರಿಗೆ ಪ್ರತಿ ಷೇರಿನ ₹10ರಲ್ಲಿ ₹9ನ್ನು ಹಿಂದಿರುಗಿಸಿತು. ಈ ಮೂಲಕ ₹122ಕೋಟಿ ಹಣವನ್ನು ಹೂಡಿಕೆದಾರರಿಗೆ ಹಿಂದಿರುಗಿಸಿದೆ. 

ಇಂತಹ ಕ್ರಮ ಕೈಗೊಂಡ ಪ್ರಥಮ ಕಂಪೆನಿ ಎನಿಸಿಕೊಂಡಿದೆ. ಈಗ ₹13.9 ಕೋಟಿ ಬಂಡವಾಳ ಹೊಂದಿರುವ ಕೋಲ್ಗೇಟ್‌, ₹756 ಕೋಟಿ ಮೀಸಲು ನಿಧಿಯಿಂದ  ಮತ್ತೊಮ್ಮೆ 1:1 ಅನುಪಾತದಲ್ಲಿ ಬೋನಸ್ ಷೇರು ವಿತರಿಸಿದೆ. ಈಗಿನ ದಿನಗಳಲ್ಲಿ ವಹಿವಾಟಿನ ವೇಗವು ಅತಿಯಾಗಿದ್ದು, ಸ್ಥಿರತೆ ಇಲ್ಲದೇ ಇರುವುದರಿಂದ  ಹಿಂದಿನ  ನಿಯಮ ಗಳನ್ನಾದರಿಸಿ ನಿರ್ಧರಿಸುವುದು ಸರಿಯಲ್ಲ. ಈಗ  ‘ವ್ಯಾಲ್ಯೂ ಪಿಕ್ - ಪ್ರಾಫಿಟ್  ಬುಕ್’ ಒಂದೇ ಉತ್ತಮ ಮಾರ್ಗವಾಗಿದೆ.  ಅಲ್ಪ ಬಡ್ಡಿ ಯುಗದಲ್ಲಿ ಅಧಿಕ ಲಾಭ ಪಡೆಯುವುದೊಂದೇ ಗುರಿಯಾಗಿದೆ.

ಮೊ: 9886313380 (ಸಂಜೆ 4.30ರ ನಂತರ)

 

Comments
ಈ ವಿಭಾಗದಿಂದ ಇನ್ನಷ್ಟು
ಒತ್ತಡದಲ್ಲಿ ಷೇರುಪೇಟೆ ವಹಿವಾಟು

ಷೇರು ಸಮಾಚಾರ
ಒತ್ತಡದಲ್ಲಿ ಷೇರುಪೇಟೆ ವಹಿವಾಟು

12 Mar, 2018
ಹೂಡಿಕೆದಾರರಲ್ಲಿ ಮೂಡಿದ ಗೊಂದಲ

ಷೇರು ಸಮಾಚಾರ
ಹೂಡಿಕೆದಾರರಲ್ಲಿ ಮೂಡಿದ ಗೊಂದಲ

5 Mar, 2018
ಎಣಿಕೆಗೆ ನಿಲುಕದ ಪೇಟೆಯ ಚಲನೆ

ಷೇರು ಸಮಾಚಾರ
ಎಣಿಕೆಗೆ ನಿಲುಕದ ಪೇಟೆಯ ಚಲನೆ

26 Feb, 2018

ಷೇರು ಸಮಾಚಾರ
ಲಾಭ ನಗದೀಕರಣಕ್ಕೆ ದೊರೆತ ಅವಕಾಶ

ಷೇರುಪೇಟೆಯಲ್ಲಿನ ಕೆಲವು ಬೆಳವಣಿಗೆಗಳು ಕೇವಲ ಭಾಷಣ, ವಿಶ್ಲೇಷಣೆಗೆ ಮಾತ್ರ ಸೀಮಿತವಾಗಿದ್ದು ಅವನ್ನು ಕೈಗೆ ಎಟುಕಿಸಿಕೊಳ್ಳಲು ಸಾಧ್ಯವಿಲ್ಲದಂತಿರುತ್ತವೆ.

18 Feb, 2018
ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

ಷೇರು ಸಮಾಚಾರ
ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

12 Feb, 2018