ಸುದ್ದಿ ವಿವರಣೆ

ದೆಹಲಿ ವಾಯು ಮಾಲಿನ್ಯ: ಕಾರು ಸಂಚಾರಕ್ಕೆ ನಿರ್ಬಂಧ

ಒಂದೆಡೆ ಚೆನ್ನೈ ಮಹಾನಗರದ ಜನರು ಮಳೆಯ ಅಬ್ಬರಕ್ಕೆ ಸಿಲುಕಿ ಒದ್ದಾಡಿದರೆ, ಇನ್ನೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯ ಜನರಿಗೆ ವಾಯು ಮಾಲಿನ್ಯದ ಬಿಸಿ ತಟ್ಟುತ್ತಿದೆ. ಈ ಎರಡೂ ಮಹಾನಗರಗಳು ಎದುರಿಸುತ್ತಿರುವ ಸಂಕಷ್ಟದ ದಿನಗಳು ಅಂತರರಾಷ್ಟ್ರೀಯ ಗಮನ ಸೆಳೆದಿವೆ.

ಒಂದೆಡೆ ಚೆನ್ನೈ ಮಹಾನಗರದ ಜನರು ಮಳೆಯ ಅಬ್ಬರಕ್ಕೆ ಸಿಲುಕಿ ಒದ್ದಾಡಿದರೆ, ಇನ್ನೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯ ಜನರಿಗೆ ವಾಯು ಮಾಲಿನ್ಯದ ಬಿಸಿ ತಟ್ಟುತ್ತಿದೆ. ಈ ಎರಡೂ ಮಹಾನಗರಗಳು ಎದುರಿಸುತ್ತಿರುವ ಸಂಕಷ್ಟದ ದಿನಗಳು ಅಂತರರಾಷ್ಟ್ರೀಯ ಗಮನ ಸೆಳೆದಿವೆ.

ದೆಹಲಿಯಲ್ಲಿ ವಾಯುಮಾಲಿನ್ಯವು ಚೀನಾದ ಬೀಜಿಂಗ್‌ಗಿಂತ ಅಪಾಯಕಾರಿ ಮಟ್ಟ ತಲುಪಿರುವುದರಿಂದ ರಾಜ್ಯ ಸರ್ಕಾರವು ಪ್ರಯಾಣಿಕರ ಕಾರುಗಳ ಸಂಚಾರದ ಮೇಲೆ ಆಂಶಿಕ ನಿರ್ಬಂಧ ವಿಧಿಸಲು ಮುಂದಾಗಿದೆ. ಹೊಸ ವರ್ಷದಿಂದ ಸಮ ಮತ್ತು ಬೆಸ ಸಂಖ್ಯೆಯ ಕಾರುಗಳು ವಾರದ ನಿರ್ದಿಷ್ಟ ದಿನ ರಸ್ತೆಗೆ   ಇಳಿಯುವ ನಿಯ ಮವನ್ನು  ಜಾರಿಗೊಳಿಸಲು ಸರಕಾರ ಮುಂದಾಗಿದೆ. ಭಾರತದ ಮಟ್ಟಿಗೆ ಇದೊಂದು ಹೊಸ ಪ್ರಯೋಗ. ಚೀನಾದಲ್ಲಿ ಈಗಾಗಲೇ ಇಂತಹ ಪ್ರಯೋಗ ಜಾರಿಯಲ್ಲಿ ಇದೆ.

ಈ ಪ್ರಯೋಗದ ಬಗ್ಗೆ ಈಗಾಗಲೇ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಜನವರಿ 2ನೆ ವಾರದ ಹೊತ್ತಿಗೆ ಈ ಪ್ರಯೋಗದ ಫಲಿತಾಂಶ ತಿಳಿದು ಬರಲಿದೆ. ವಿಶ್ವ ಆರೋಗ್ಯ ಸಂಸ್ಥೆಯು ಕಳೆದ ವರ್ಷವೇ ದೆಹಲಿಯು ವಿಶ್ವದಲ್ಲಿಯೇ ಗರಿಷ್ಠ ವಾಯುಮಾಲಿನ್ಯದ ನಗರ ಎಂದು ಘೋಷಿಸಿತ್ತು.

ದೆಹಲಿಯಲ್ಲಿನ ಅಶುದ್ಧ ಗಾಳಿಯ ಪರಿಣಾಮವಾಗಿ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರ ಆರೋಗ್ಯವು ಚಳಿಗಾಲದಲ್ಲಿ ಇನ್ನಷ್ಟು ವಿಷಮಗೊಳ್ಳುತ್ತದೆ. ಆಸ್ಥಮಾದಿಂದ ಬಳಲುವ ಮಕ್ಕಳ ಸಂಖ್ಯೆಯೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ.

ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಲಗೊಳ್ಳಲು ಲಾರಿಗಳು ಮತ್ತು ರಸ್ತೆ ದೂಳು ಪ್ರಮುಖ ಕಾರಣವಾಗಿವೆ. ವಾಯು ಮಾಲಿನ್ಯಕ್ಕೆ ಕಾರು ಮತ್ತು ಜೀಪ್‌ಗಳ ಕೊಡುಗೆ ಕೇವಲ ಶೇ 10ರಷ್ಟಿದೆ.

ನಗರದ ವಾಯು ಮಾಲಿನ್ಯ ಹೆಚ್ಚಳಗೊಳ್ಳಲು  ಅಡುಗೆ ತಯಾರಿಕೆ, ವಿದ್ಯುತ್‌ ಉತ್ಪಾದನಾ ಸ್ಥಾವರಗಳು ಮತ್ತು ಕೈಗಾರಿಕೆಗಳೂ ಸಾಕಷ್ಟು ಕೊಡುಗೆ ನೀಡುತ್ತಿವೆ. ವಾಹನಗಳು ಹೊರಸೂಸುವ ಹೊಗೆಯ ಪ್ರಮಾಣ ಸರಾಸರಿ ಶೇ 25ರಷ್ಟು ಇರಲಿದ್ದು, ಚಳಿಗಾಲದಲ್ಲಿ ಇದು ಶೇ 36ಕ್ಕೆ ಏರಿಕೆಯಾಗುತ್ತದೆ.

ವಾಯು ಮಾಲಿನ್ಯಕ್ಕೆ ಲಾರಿಗಳು ಮತ್ತು ದ್ವಿಚಕ್ರ ವಾಹನಗಳು, ಪ್ರಯಾಣಿಕರ ಕಾರುಗಳಿಗಿಂತ ಹೆಚ್ಚಿನ ಕೊಡುಗೆ ನೀಡುತ್ತಿವೆ. ರಸ್ತೆಯಲ್ಲಿನ ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಯಿಂದ ಏಳುವ ದೂಳು ಕೂಡ ವಾಯು ಮಾಲಿನ್ಯಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿವೆ ಎಂದು ವರದಿ ತಿಳಿಸಿದೆ.

ಏನಿದು ಪಿಎಂ: ಗಾಳಿಯಲ್ಲಿ ಇರುವ ಕಣ್ಣಿಗೆ ಕಾಣದ  ಅತ್ಯಂತ ಸೂಕ್ಷ್ಮ ಕಣಗಳು ವಾಯು ಮಾಲಿನ್ಯಕ್ಕೆ ಕಾರಣವಾಗಿ ರುತ್ತವೆ. ಇವುಗಳಿಗೆ  particulate matter  ಎನ್ನುತ್ತಾರೆ. ಈ ಸೂಕ್ಷ್ಮ ಕಣಗಳು ಯಾವುದೇ ಆಕಾರ, ಗಾತ್ರ  ಘನ ಅಥವಾ ಹನಿಗಳ ಸ್ವರೂಪದಲ್ಲಿ ಇರಬಹುದು. ದೊಡ್ಡ ಗಾತ್ರದ ಕಣಗಳನ್ನು ಪಿಎಂ 10 ಮತ್ತು ಸಣ್ಣ ಗಾತ್ರದ ಕಣಗಳನ್ನು ಪಿಎಂ 2.5 ಎಂದು ಕರೆಯಲಾಗುತ್ತದೆ.

ದೊಡ್ಡ ಕಣಗಳ ಗಾತ್ರವು 2.5 ರಿಂದ 10 ಮೈಕ್ರೊ ಮೀಟರ್‌ಗಳಷ್ಟಿದ್ದು, ಮಾನವನ ತಲೆಗೂದಲಿಗಿಂತ 25ರಿಂದ 100 ಪಟ್ಟು ತೆಳುವಾಗಿರುತ್ತವೆ. ಈ ಕಣಗಳು ಮಾನವನ ಆರೋಗ್ಯದ ಮೇಲೆ ಕಡಿಮೆ ಪ್ರಭಾವ ಬೀರುತ್ತವೆ. ಸಣ್ಣ ಕಣಗಳ ಗಾತ್ರವು 2.5 ಮೈಕ್ರೊಮೀಟರ್‌ಗಳಷ್ಟಿರುತ್ತವೆ. ಗಾಳಿಯಲ್ಲಿನ ಈ ಸೂಕ್ಷ್ಮ ಕಣಗಳು ಉಸಿರಾಟದ ಮೂಲಕ ದೇಹ ಪ್ರವೇಶಿಸಿ ಶ್ವಾಸಕೋಸ ಪ್ರವೇಶಿಸಿ ನೆಲೆಸುತ್ತವೆ. 

ಕಾರುಗಳಿಗೆ ನಿರ್ಬಂಧ: ದೆಹಲಿಯಲ್ಲಿನ ಕಾರುಗಳ ಸಂಖ್ಯೆ 88  ಲಕ್ಷದಷ್ಟಿದ್ದು, ವಾರದ ನಿರ್ದಿಷ್ಟ ದಿನಗಳಲ್ಲಿ ಅವುಗಳ ಸಂಚಾರವನ್ನು ನಿಯಮಾನುಸರ ನಿರ್ಬಂಧಿಸುವುದು ಅಷ್ಟು ಸುಲಭದ ಕೆಲಸವಲ್ಲ.

ಪರಿಹಾರ ಕ್ರಮಗಳು: ಭವಿಷ್ಯದಲ್ಲಿ ಕಾರುಗಳ ಬಳಕೆಗೆ ಕಡಿವಾಣ ವಿಧಿಸಲು ಭಾರಿ ಪ್ರಮಾಣದ ತೆರಿಗೆ ವಿಧಿಸಬೇಕು. ಇದು ಬರೀ ದೆಹಲಿಗೆ ಮಾತ್ರ ಸೀಮಿತಗೊಳಿಸ ಬಾರದು. ದೆಹಲಿ ನಿವಾಸಿಗಳು  ಗುಡಗಾಂವ್‌ ಅಥವಾ ನೋಯಿಡಾ ಗಳಲ್ಲಿ ಕಾರು ಖರೀದಿಸಲು ಮುಂದಾದರೆ ಯಾವುದೇ ಪ್ರಯೋಜನವಾಗದು.

ಆನಂತರ  ಕ್ರಮೇಣ ಇದನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸಬೇಕು. ರಸ್ತೆಗಳಲ್ಲಿ ಪಾದಚಾರಿಗಳು ಮತ್ತು ಸೈಕಲ್‌ ಸವಾರರಿಗೆ ಸಾಕಷ್ಟು ಅವಕಾಶ ಕಲ್ಪಿಸಿಕೊಡಬೇಕು. ನಗರ ವ್ಯಾಪ್ತಿಯಲ್ಲಿನ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳನ್ನು ಸ್ಥಳಾಂತರಿಸಬೇಕು ಇಲ್ಲವೆ ಸ್ಥಗಿತಗೊಳಿಸಬೇಕು ಎಂದು ಪರಿಸರ ತಜ್ಞರು ಸಲಹೆ ನೀಡಿದ್ದಾರೆ.

Comments