ಮುಂಬೈ

ಮುಂಬೈ: ಕಲಾವಿದೆ, ವಕೀಲ ಕೊಲೆ

ಮುಂಬೈನ ಖ್ಯಾತ ಚಿತ್ರಕಲಾವಿದೆ ಹೇಮಾ ಉಪಾಧ್ಯಾಯ ಮತ್ತು ಅವರ ವಕೀಲ ಹರೀಶ್‌ ಭಂಬಾನಿ ನಿಗೂಢವಾಗಿ ಕೊಲೆಯಾಗಿದ್ದು, ಭಾನುವಾರ ನಸುಕಿನಲ್ಲಿ ಅವರ ಮೃತದೇಹಗಳು ಮುಂಬೈನ ಹೊರವಲಯದ ಕಾಲುವೆಯೊಂದರ ಸಮೀಪ ಪತ್ತೆಯಾಗಿವೆ.

ಮುಂಬೈ: ನಗರದ ಖ್ಯಾತ ಚಿತ್ರಕಲಾವಿದೆ ಹೇಮಾ ಉಪಾಧ್ಯಾಯ ಮತ್ತು ಅವರ ವಕೀಲ ಹರೀಶ್‌ ಭಂಬಾನಿ ನಿಗೂಢವಾಗಿ ಕೊಲೆಯಾಗಿದ್ದು, ಭಾನುವಾರ ನಸುಕಿನಲ್ಲಿ  ಅವರ ಮೃತದೇಹಗಳು ಮುಂಬೈನ ಹೊರವಲಯದ ಕಾಲುವೆಯೊಂದರ ಸಮೀಪ ಪತ್ತೆಯಾಗಿವೆ.

ಹೇಮಾ (43) ಮತ್ತು ಹರೀಶ್‌ (65) ಶವಗಳು ಕಾಂಡಿವಲಿ ಪ್ರದೇಶದ ಕಾಲುವೆ ಸಮೀಪದಲ್ಲಿ ಪತ್ತೆಯಾಗಿವೆ. ಇಬ್ಬರ ಕೈಕಾಲುಗಳನ್ನು ಕಟ್ಟಿ, ಪ್ಲಾಸ್ಟಿಕ್‌ ಹಾಳೆಯಲ್ಲಿ ಸುತ್ತಿ ಕಾರ್ಡ್‌ಬೋರ್ಡ್‌ ಪೆಟ್ಟಿಗೆಗಳಲ್ಲಿ ಹಾಕಲಾಗಿತ್ತು ಎಂದು ಪೊಲೀಸ್‌ ಉಪ ಆಯುಕ್ತ ಧನಂಜಯ್‌ ಕುಲಕರ್ಣಿ ತಿಳಿಸಿದರು.

‘ಎರಡೂ ದೇಹಗಳು ಅರೆಬೆತ್ತಲೆ ಸ್ಥಿತಿಯಲ್ಲಿದ್ದವು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಇಬ್ಬರೂ ಕಾಣೆಯಾಗಿದ್ದಾರೆ ಎಂದು ಶನಿವಾರ ಪ್ರತ್ಯೇಕವಾಗಿ ದೂರು ದಾಖಲಿಸಲಾಗಿತ್ತು. ಬರೋಡಾ ಮೂಲದ ಕಲಾವಿದೆ ಹೇಮಾ ಪತಿಯಿಂದ ದೂರವಾಗಿದ್ದರು. ಪತಿ ಚಿಂತನ್‌ ಸಹ ಕಲಾವಿದರಾಗಿದ್ದು, ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.

ಪತಿ ಚಿಂತನ್‌ ಮನೆಯ ಗೋಡೆಗಳ ಮೇಲೆ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಬಿಡಿಸಿದ್ದಾರೆ ಎಂದು ಆರೋಪಿಸಿದ್ದ ಹೇಮಾ, 2013ರಲ್ಲಿ ಅವರ ವಿರುದ್ಧ ಕಿರುಕುಳದ ದೂರು ಸಲ್ಲಿಸಿದ್ದರು. ವಕೀಲ ಹರೀಶ್‌ ಭಂಬಾನಿ ಅವರು ಹೇಮಾ ಪರ ವಕಾಲತ್ತು ವಹಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಿಂತನ್‌, ಹೇಮಾ ಅವರ ಚಾಲಕ ಮತ್ತು ಮನೆಕೆಲಸಗಾರರನ್ನು ತನಿಖೆಗೆ ಒಳಪಡಿಸಿದ್ದಾರೆ. ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ‘ಪೊಲೀಸರು ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಹೇಮಾ ಮತ್ತು ಹರೀಶ್‌ ಅವರೊಂದಿಗೆ ಸಂಪರ್ಕದಲ್ಲಿದ್ದವರ ತನಿಖೆ ನಡೆಸಲಾಗುತ್ತಿದೆ’ ಎಂದು ಕುಲಕರ್ಣಿ ತಿಳಿಸಿದರು.

ಹೇಮಾ ಶುಕ್ರವಾರ ಮನೆಗೆ ಬಂದಿರಲಿಲ್ಲ. ಇದರಿಂದ ಮನೆಕೆಲಸಗಾರನೊಬ್ಬ ಶನಿವಾರ ಸಂತಾ ಕ್ರೂಜ್‌ ಪೊಲೀಸ್‌ ಠಾಣೆಯಲ್ಲಿ ಹೇಮಾ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಅದೇ ರೀತಿ ಹರೀಶ್‌ ಅವರ ಕುಟುಂಬದ ಸದಸ್ಯರು ಆ್ಯಂಟಾಪ್‌ ಹಿಲ್‌ ಪೊಲೀಸ್‌ ಠಾಣೆಯಲ್ಲಿ ಇದೇ ರೀತಿಯ ದೂರು ದಾಖಲಿಸಿದ್ದರು.

ಹೇಮಾ ಅವರು ಗುಜರಾತ್‌ ಲಲಿತ ಕಲಾ ಅಕಾಡೆಮಿ ಮತ್ತು ರಾಷ್ಟ್ರೀಯ ಲಲಿತ ಕಲಾ ಅಕಾಡೆಮಿಯ ಪ್ರಶಸ್ತಿ ಪರಸ್ಕೃತರು.

Comments