ಕೊಳೆಗೇರಿ ತೆರವು: ರೈಲ್ವೆ–ದೆಹಲಿ ಸರ್ಕಾರದ ನಡುವೆ ಗುದ್ದಾಟ

ಮಗು ಸಾವಿಗೆ ಕೇಜ್ರಿವಾಲ್‌ ಆಕ್ರೋಶ

ರೈಲ್ವೆ ಇಲಾಖೆ ಶನಿವಾರ ರಾತ್ರಿ ನಡೆಸಿದ ಕೊಳೆಗೇರಿ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮಗುವೊಂದು ಮೃತಪಟ್ಟಿರುವುದು ರೈಲ್ವೆ ಇಲಾಖೆ ಮತ್ತು ದೆಹಲಿ ಸರ್ಕಾರದ ನಡುವೆ ಗುದ್ದಾಟಕ್ಕೆ ಕಾರಣವಾಗಿದೆ.

ನವದೆಹಲಿ(ಪಿಟಿಐ): ರೈಲ್ವೆ ಇಲಾಖೆ ಶನಿವಾರ ರಾತ್ರಿ ನಡೆಸಿದ ಕೊಳೆಗೇರಿ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮಗುವೊಂದು ಮೃತಪಟ್ಟಿರುವುದು ರೈಲ್ವೆ ಇಲಾಖೆ ಮತ್ತು ದೆಹಲಿ ಸರ್ಕಾರದ ನಡುವೆ ಗುದ್ದಾಟಕ್ಕೆ ಕಾರಣವಾಗಿದೆ.

ಪಶ್ಚಿಮ ದೆಹಲಿಯ ಶಕೂರ್ ಬಸ್ತಿ ಎಂಬಲ್ಲಿ ಸುಮಾರು 1200 ಕೊಳೆಗೇರಿ ಗುಡಿಸಲುಗಳಿದ್ದವು. ಇವುಗಳನ್ನು ರೈಲ್ವೆ ಇಲಾಖೆಗೆ ಸೇರಿದ ಜಾಗವನ್ನು ಒತ್ತುವರಿ  ಮಾಡಿ ನಿರ್ಮಿಸಲಾಗಿದೆ ಎಂಬ ಕಾರಣ  ನೀಡಿ ಇಲಾಖೆ ತೆರವು ಕಾರ್ಯಾಚರಣೆ ನಡೆಸಿತು. ಈ ವೇಳೆ ಆರು ತಿಂಗಳ ಮಗುವೊಂದು ಮೃತಪಟ್ಟಿತು. ಇದನ್ನು ಖಂಡಿ ಸಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿ ವಾಲ್‌, ರೈಲ್ವೆ ಇಲಾಖೆ ವಿರುದ್ಧ ಹತ್ಯೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.

ಗುಡಿಸಲು ತೆರವು ಮಾಡಿದ ನಂತರ ನಿರಾಶ್ರಿತರಾದ ಜನರಿಗೆ ಆಹಾರ ಸೇರಿ ದಂತೆ ಅಗತ್ಯ ವ್ಯವಸ್ಥೆ ಮಾಡಲು ವಿಫಲರಾದ ಇಬ್ಬರು ಉಪ ವಿಭಾಗೀಯ ಅಧಿಕಾರಿಗಳನ್ನು ಅಮಾನತು ಮಾಡಿ ಕೇಜ್ರಿವಾಲ್‌ ಆದೇಶಿಸಿದ್ದಾರೆ.

ಆದರೆ ಆರೋಪ ಅಲ್ಲಗಳೆದಿ ರುವ ಇಲಾಖೆ, ಗುಡಿಸಲುಗಳನ್ನು ತೆರವು ಮಾಡುವಂತೆ ನೋಟಿಸ್‌ ಜಾರಿ ಮಾಡಿ ಮೂರು ತಿಂಗಳ  ನಂತರ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದೆ. ಅಲ್ಲದೆ ಪೋಷಕರು ತಮ್ಮ ಸಾಮಾನುಗಳನ್ನು ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿರುವಾಗ ಮಗುವಿನ ಮೇಲೆ ಬಟ್ಟೆ ಬಿದ್ದು ಮೃತ ಪಟ್ಟಿದೆ. ಇದಕ್ಕೂ ತೆರವು ಕಾರ್ಯಾ ಚರಣೆಗೂ ಯಾವುದೇ ಸಂಬಂಧ ಇಲ್ಲ ಎಂದು  ಸ್ಪಷ್ಟಪಡಿಸಿದೆ.

ಮಗುವಿನ ಸಾವಿಗೂ ತೆರವು ಕಾರ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರುಣ್‌ ಅರೋರಾ ತಿಳಿಸಿದ್ದಾರೆ. 
‘ಗುಡಿಸಲು ತೆರವು ಕಾರ್ಯವನ್ನು ಇಲಾಖೆ ಮಧ್ಯಾಹ್ನ 12ಕ್ಕೆ ಆರಂಭಿಸಿದೆ. ಆದರೆ ಮಗು ಬೆಳಿಗ್ಗೆ 10ಕ್ಕೆ ಸತ್ತಿದೆ. ಇದರಲ್ಲಿ ಇಲಾಖೆ ತಪ್ಪಿಲ್ಲ’ ಎಂದು ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು ಹೇಳಿದ್ದಾರೆ.

ವಿರೋಧಪಕ್ಷಗಳ ವಾಗ್ದಾಳಿ: ಘಟನೆ ಖಂಡಿಸಿರುವ ವಿರೋಧಪಕ್ಷಗಳು ದೆಹಲಿ ಸರ್ಕಾರದ ವಿರುದ್ಧ ಹರಿಹಾಯ್ದಿವೆ. ‘ಇದು ನಾಚಿಕೆಗೇಡಿನ ಸಂಗತಿ.  ಪರ್ಯಾಯ ವ್ಯವಸ್ಥೆ  ಮಾಡದೆ ತೆರವು ಕಾರ್ಯ ನಡೆಸಿದ್ದು ಸರಿಯಲ್ಲ’ ಎಂದು ದೂರಿವೆ.
*
ಗುಡಿಸಲು ವಾಸಿಗಳಿಗೆ ಹೊದಿಕೆ ಮತ್ತು ಆಹಾರ ಪದಾರ್ಥಗಳನ್ನು ಒದಗಿ ಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿ ಗಳಿಗೆ ಆದೇಶಿಸಿದ್ದೇನೆ.
– ಅರವಿಂದ ಕೇಜ್ರಿವಾಲ್‌
ದೆಹಲಿ ಮುಖ್ಯಮಂತ್ರಿ

Comments