ಮುಂಬೈ

ಮುಂಬೈ ಕಲಾವಿದೆ, ವಕೀಲ ಕೊಲೆ: ಮೂವರ ಬಂಧನ

ಮುಂಬೈ ನಗರದ ಖ್ಯಾತ ಚಿತ್ರಕಲಾವಿದೆ ಹೇಮಾ ಉಪಾಧ್ಯಾಯ ಮತ್ತು ಅವರ ವಕೀಲ ಹರೀಶ್‌ ಭಂಬಾನಿ ನಿಗೂಢ ಕೊಲೆ ಸಂಬಂಧ ಮುಂಬೈ ಪೊಲೀಸ್‌ ತಂಡ ಉತ್ತರ ಪ್ರದೇಶದಲ್ಲಿ ಮೂವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದೆ.

ಮುಂಬೈ(ಪಿಟಿಐ): ಮುಂಬೈ ನಗರದ ಖ್ಯಾತ ಚಿತ್ರಕಲಾವಿದೆ ಹೇಮಾ ಉಪಾಧ್ಯಾಯ ಮತ್ತು ಅವರ ವಕೀಲ ಹರೀಶ್‌ ಭಂಬಾನಿ ನಿಗೂಢ ಕೊಲೆ ಸಂಬಂಧ ಮುಂಬೈ ಪೊಲೀಸ್‌ ತಂಡ ಉತ್ತರ ಪ್ರದೇಶದಲ್ಲಿ ಮೂವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದೆ.

ಅಜಾದ್ ರಾಜ್‌ಬಹೂರ್, ಪ್ರದೀಪ್ ರಾಜ್‌ಬಹೂರ್ ಹಾಗೂ ವಿಜಯ್‌ ರಾಜ್‌ಬಹೂರ್ ಎಂಬುವರನ್ನು ಭಾನುವಾರ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸೋಮವಾರ ತಿಳಿಸಿದ್ದಾರೆ.

ಬಂಧಿತರು ಫೈಬರ್ ಗ್ಲಾಸ್ ಉತ್ಪಾದನೆ ಹಾಗೂ ಮಾರಾಟ ವ್ಯವಹಾರ ನಡೆಸುತ್ತಿದ್ದು, ಹೇಮಾ ಮತ್ತು ಅವರ ಪತಿ ಚಿಂತನ್ ಅವರು ಕಲಾಕೃತಿಗಳ ಸ್ಥಾಪನೆಗೆ ಫೈಬರ್ ಗ್ಲಾಸ್‌ಗಳನ್ನು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ಹೆಚ್ಚಿನ ಮಾಹಿತಿ ವಿಚಾರಣೆ ಬಳಿಕ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಹೇಮಾ (43) ಮತ್ತು ಹರೀಶ್‌ (65) ಶವಗಳು ಭಾನುವಾರ ನಸುಕಿನಲ್ಲಿ  ಮುಂಬೈನ ಹೊರವಲಯದ ಕಾಂಡಿವಲಿ ಪ್ರದೇಶದ ಕಾಲುವೆ ಸಮೀಪ ಪತ್ತೆಯಾಗಿದ್ದವು. ಇಬ್ಬರ ಕೈಕಾಲುಗಳನ್ನು ಕಟ್ಟಿ, ಪ್ಲಾಸ್ಟಿಕ್‌ ಹಾಳೆಯಲ್ಲಿ ಸುತ್ತಿ ಕಾರ್ಡ್‌ಬೋರ್ಡ್‌ ಪೆಟ್ಟಿಗೆಗಳಲ್ಲಿ ಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದರು.

Comments