ಫೋಕ್ಸ್‌ವ್ಯಾಗನ್‌ಗೆ ಹಸಿರು ನ್ಯಾಯಮಂಡಳಿ ನೋಟಿಸ್‌

ಮಾಲಿನ್ಯ ತಪಾಸಣೆಯ ಮಾನದಂಡ ನಿಯಮ ಉಲ್ಲಂಘನೆ ಆರೋಪಕ್ಕೆ ಗುರಿಯಾಗಿರುವ ಜರ್ಮನ್‌ ವಾಹನ ತಯಾರಿಕಾ ಕಂಪೆನಿ ಫೋಕ್ಸ್‌ವ್ಯಾಗನ್‌ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೋಟಿಸ್‌ ಜಾರಿ ಮಾಡಿದೆ.

ನವದೆಹಲಿ (ಐಎಎನ್‌ಎಸ್‌): ಮಾಲಿನ್ಯ ತಪಾಸಣೆಯ ಮಾನದಂಡ ನಿಯಮ ಉಲ್ಲಂಘನೆ ಆರೋಪಕ್ಕೆ ಗುರಿಯಾಗಿರುವ ಜರ್ಮನ್‌ ವಾಹನ ತಯಾರಿಕಾ ಕಂಪೆನಿ ಫೋಕ್ಸ್‌ವ್ಯಾಗನ್‌ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೋಟಿಸ್‌ ಜಾರಿ ಮಾಡಿದೆ.

ಎನ್‌ಜಿಟಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಸ್ವತಂತ್ರ ಕುಮಾರ್‌ ನೇತೃತ್ವದ ನ್ಯಾಯಪೀಠ ಸೋಮವಾರ ನೋಟಿಸ್‌ ಜಾರಿಗೊಳಿಸಿದೆ.

ಫೋಕ್ಸ್‌ವ್ಯಾಗನ್‌ ಕಂಪೆನಿ ಜತೆಗೆ ಭಾರಿ ಕೈಗಾರಿಕೆಗಳು, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಆಟೊಮೋಟಿವ್‌ ರಿಸರ್ಚ್‌ ಆಸೋಸಿಯೇಷನ್‌ ಆಫ್‌ ಇಂಡಿಯಾ (ಎಆರ್‌ಎಐ)ಗೆ ನೋಟಿಸ್‌ ನೀಡಲಾಗಿದೆ.

ಡಿಸೆಂಬರ್‌ 23ರೊಳಗೆ ನೋಟಿಸ್‌ಗೆ ಉತ್ತರಿಸುವಂತೆ ನ್ಯಾಯಪೀಠ ನಿರ್ದೇಶನ ನೀಡಿದೆ.

ಫೋಕ್ಸ್‌ವ್ಯಾಗನ್‌ ಕಂಪೆನಿ ತನ್ನ ಕಾರುಗಳ ಮೂಲಕ ಪರಿಸರ ಮಾಲಿನ್ಯ ಮಾಡುತ್ತಿದೆ ಎಂದು ಆರೋಪಿಸಿ ಸತ್ವಿಂದರ್‌ ಸಿಂಗ್‌ ಸೋಧಿ ಹಾಗೂ ಇನ್ನಿತರ ದೆಹಲಿ ನಿವಾಸಿಗಳು ಹಸಿರು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

ಭಾರತದಲ್ಲಿರುವ ಮೂರು ಲಕ್ಷಕ್ಕೂ ಹೆಚ್ಚಿನ ಫೋಕ್ಸ್‌ವ್ಯಾಗನ್‌ ವಾಹನಗಳನ್ನು ಕಂಪೆನಿ ಕಳೆದ ವಾರ ವಾಪಸ್‌ ಪಡೆದಿದೆ. ಆದರೆ, ಮಾಲಿನ್ಯ ತಪಾಸಣೆಯ ಮಾನದಂಡ ನಿಯಮ ಉಲ್ಲಂಘನೆ ಆರೋಪವನ್ನು ಕಂಪೆನಿ ಅಲ್ಲಗಳೆದಿದೆ.

Comments