ಪರಿಣತರಿಗೊಂದು ನಿಕಾನ್ ಡಿ7200 ಕ್ಯಾಮೆರಾ

ದುಡ್ಡಿರುವ ಪರಿಣತರಿಗಾಗಿ ಮಧ್ಯಮ ಮೇಲ್ದರ್ಜೆಯ ಒಂದು ಡಿಎಸ್‌ಎಲ್‌ಆರ್‌ ಕ್ಯಾಮೆರಾ ನಿಕಾನ್ ಡಿ7200

ಪರಿಣತರಿಗೊಂದು ನಿಕಾನ್ ಡಿ7200 ಕ್ಯಾಮೆರಾ

ಡಿಜಿಟಲ್ ಕ್ಯಾಮೆರಾಗಳಲ್ಲಿ ಏಮ್ ಆಂಡ್ ಶೂಟ್ ಮತ್ತು ಡಿಜಿಟಲ್ ಎಸ್‌ಎಲ್‌ಆರ್ ಎಂಬ ಎರಡು ವಿಧ. ವೃತ್ತಿಪರಿಣತರು ಬಳಸುವುದು ಏನಿದ್ದರೂ ಜಾಸ್ತಿ ಬೆಲೆಯ ಅಂತೆಯೇ ಅಧಿಕ ಗುಣಮಟ್ಟದ ಡಿಜಿಟಲ್ ಎಸ್‌ಎಲ್‌ಆರ್  (ಡಿಎಸ್‌ಎಲ್‌ಆರ್) ಕ್ಯಾಮೆರಾಗಳನ್ನು. ಅಂತಹ ಒಂದು ಕ್ಯಾಮೆರಾ ನಿಕಾನ್ ಡಿ7200 (Nikon D7200). ಇದರ ಬಗ್ಗೆ ಪೂರ್ತಿಯಾಗಿ ಬರೆಯಲು ಕಾಮನಬಿಲ್ಲು ಪುರವಣಿಯ ಎಲ್ಲ ಪುಟಗಳು ಬೇಕು. ಒಂದು ಪುಟದಲ್ಲಿ ಎಷ್ಟು ಬರೆಯಬಹುದೋ ಅಷ್ಟು ವಿಮರ್ಶೆ ಇಲ್ಲಿದೆ.

ಗುಣವೈಶಿಷ್ಟ್ಯಗಳು
24.2 ಮೆಗಾಪಿಕ್ಸೆಲ್, ಅತ್ಯಧಿಕ ಎಂದರೆ 6000x 4000 ಪಿಕ್ಸೆಲ್ ರೆಸೊಲೂಶನ್, ಉದ್ದ:ಅಗಲ ಅನುಪಾತ 3:2 ಮತ್ತು 16:9, 23.5 x 15.6 ಮಿ.ಮೀ. ಗಾತ್ರದ ಸಿಮೋಸ್ (CMOS) ಸೆನ್ಸರ್, 100ರಿಂದ 25,600ರ ತನಕ ಐಎಸ್‌ಓ ಆಯ್ಕೆಗಳು, ಸ್ವಯಂಚಾಲಿತ ಮತ್ತು ಮ್ಯಾನ್ಯುವಲ್ ಫೋಕಸ್, 51 ಬಿಂದು ಫೋಕಸ್, ಹಲವು ನಮೂನೆಯ ದೃಶ್ಯಗಳ ಆಯ್ಕೆ, ಲೈವ್ ವ್ಯೂ, ಪೂರ್ತಿ ಹೈಡೆಫಿನಿಶನ್ ವಿಡಿಯೊ ಚಿತ್ರೀಕರಣ, 3.2 ಇಂಚು ಗಾತ್ರದ ಪರದೆ, 30 ರಿಂದ 1/8000 ಸೆಕೆಂಡುಗಳ ತನಕ ಷಟ್ಟರ್ ವೇಗ, 12 ಮೀ. ವ್ಯಾಪ್ತಿಯ ಫ್ಲಾಶ್, ಎರಡು ಮೆಮೊರಿ ಕಾರ್ಡ್ ಹಾಕುವ ಸೌಲಭ್ಯ, ಯುಎಸ್‌ಬಿ ಮತ್ತು ಎಚ್‌ಡಿಎಂಐ ಕಿಂಡಿಗಳು, ವೈಫೈ ಮತ್ತು ಎನ್‌ಎಫ್‌ಸಿ ಸಂಪರ್ಕ, ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು 1150 ಫೋಟೊ ತೆಗೆಯಬಹುದಾದ ಬ್ಯಾಟರಿ, 765 ಗ್ರಾಂ ತೂಕ, ಇತ್ಯಾದಿ. 18-140 ಮಿ.ಮೀ. ಝೂಮ್ ಲೆನ್ಸ್ ಸಮೇತ ನಿಗದಿತ ಬೆಲೆ 1,05,000 ಸಾವಿರ ರೂ.

ಇದೊಂದು ಮಧ್ಯಮ ಮೇಲ್ದರ್ಜೆಯ ಡಿಎಸ್‌ಎಲ್‌ಆರ್ ಕ್ಯಾಮೆರಾ. ಗುಣಮಟ್ಟ ಉತ್ತಮವಾಗಿದೆ. ಒಬ್ಬ ಪರಿಣತ ವೃತ್ತಿನಿರತರಿಗೆ ಬೇಕಾದ ಎಲ್ಲ ಸೌಕರ್ಯಗಳು ಇದರಲ್ಲಿವೆ. ಇದರ ರಚನೆ, ವಿನ್ಯಾಸ ಎಲ್ಲ ಡಿಎಸ್‌ಎಲ್‌ಆರ್‌ಗಳಂತೆಯೇ ಇದೆ. ಕೈಯಲ್ಲಿ ಹಿಡಿದಾಗಿನ ಅನುಭವ ಚೆನ್ನಾಗಿದೆ. ಕಡಿಮೆ ಬೆಲೆಯ ಡಿಎಸ್‌ಎಲ್‌ಆರ್ ಬಳಸಿದ ಅನುಭವವಿರುವವರಿಗೆ ಸ್ವಲ್ಪ ತೂಕ ಅನ್ನಿಸಬಹುದು.

ನಿಕಾನ್‌ ಕ್ಯಾಮೆರಾಗಳಲ್ಲಿ ಲಭ್ಯವಿರುವ ಹಲವು ಆಯ್ಕೆಗಳಿವೆ. ಎಂದಿನಂತೆ ಈ ಆಯ್ಕೆಗಳನ್ನು ಹುಡುಕಾಡಲು ಸ್ವಲ್ಪ ಕಷ್ಟ ಪಡಬೇಕು. ಈ ಒಂದು ವಿಷಯದಲ್ಲಿ ನಿಕಾನ್‌ಗಿಂತ ಕ್ಯಾನನ್ ಉತ್ತಮ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಅಂದರೆ ಕ್ಯಾನನ್ ಕ್ಯಾಮೆರಾಗಳ ನಿಯಂತ್ರಕಗಳು ಮತ್ತು ಮೆನು ಹೆಚ್ಚು ಗ್ರಾಹಕಸ್ನೇಹಿ (user friendly) ಎನ್ನಬಹುದು.

ಇದರ ಪರದೆ ಚೆನ್ನಾಗಿದೆ. ಹಿಡಿದ ಚಿತ್ರವನ್ನು ತೋರಿಸುವಾಗ ಬಣ್ಣ ನೈಜ ಬಣ್ಣದ್ದಾಗಿರುತ್ತದೆ. ಇದರ ವ್ಯೂಫೈಂಡರ್ ಬಳಸುವುದು ಪೆಂಟಾಪ್ರಿಸಂ. ಫೋಟೊ ತೆಗೆಯುವ ಮುನ್ನ ಇದರ ಮೂಲಕ ನೋಡಿದಾಗ ಕಾಣುವ ದೃಶ್ಯ ದೊಡ್ಡದಾಗಿದೆ. ಇತರೆ ಕಡಿಮೆ ಬೆಲೆಯ ಕ್ಯಾಮೆರಾಗಳಲ್ಲಿ ಕಂಡಂತೆ ಚಿಕ್ಕದಾಗಿರುವುದಿಲ್ಲ.

ಈ ಕ್ಯಾಮೆರಾದಲ್ಲಿ ಎರಡು ಮೆಮೊರಿ ಕಾರ್ಡ್ ಹಾಕಬಹುದು. ಒಂದನ್ನು ಸ್ಥಿರಚಿತ್ರಗಳಿಗೆ ಹಾಗೂ ಇನ್ನೊಂದನ್ನು ವಿಡಿಯೊಗಳಿಗೆ ಎಂದು ಆಯ್ಕೆ ಮಾಡಿಕೊಂಡು ಬಳಸುವ ಸ್ವಾತಂತ್ರ್ಯ ನಿಮಗಿದೆ. ಇದು ಉತ್ತಮ ಸೌಲಭ್ಯ. 24 ಮೆಗಾಪಿಕ್ಸೆಲ್ ರೆಸೊಲೂಶನ್ ಇರುವುದರಿಂದ ಫೈಲ್‌ ಗಾತ್ರ ದೊಡ್ಡದಾಗಿರುತ್ತದೆ. ಬೇಗ ಬೇಗನೆ ಫೋಟೊ ತೆಗೆಯಬೇಕಿದ್ದರೆ ವೇಗದ ಮೆಮೊರಿ ಕಾರ್ಡ್ (ಕ್ಲಾಸ್ 10) ಬಳಸುವುದು ಉತ್ತಮ. ಈ ನಿಯಮ ವಿಡಿಯೊ ಚಿತ್ರೀಕರಣಕ್ಕೂ ಅನ್ವಯಿಸುತ್ತದೆ.

ಒಂದು ದೃಶ್ಯದ ಫೋಟೊ ತೆಗೆಯಬೇಕಿದ್ದರೆ ಯಾವ ಬಿಂದುವಿಗೆ ಫೋಕಸ್ ಮಾಡಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಲು ಎಲ್ಲ ಕ್ಯಾಮೆರಾಗಳಲ್ಲಿ ಸೌಲಭ್ಯ ಇರುತ್ತದೆ. ಇದರಲ್ಲೂ ಇದೆ. ಇದರಲ್ಲಿ ಅದು 51 ಬಿಂದುಗಳದ್ದಾಗಿದೆ. ಅಂದರೆ ಅತಿ ಸೂಕ್ಷ್ಮವಾಗಿ ಹಾಗೂ ತೀಕ್ಷ್ಣವಾಗಿ ಫೋಕಸ್ ಮಾಡಬಹುದು. ನನಗೆ ವಿಮರ್ಶೆಗೆ ಬಂದ ಕ್ಯಾಮೆರಾದ ದೋಷವೋ ಅಥವಾ ಈ ಮಾದರಿಯ ದೋಷವೋ ಗೊತ್ತಿಲ್ಲ. ಇದರ ಫೋಕಸ್ ಕೆಲವೊಮ್ಮೆ ಕೈಕೊಡುತ್ತದೆ. ಕೆಲವೊಮ್ಮೆ ಕ್ಲಿಕ್ ಕೂಡ ಆಗುವುದಿಲ್ಲ. ನಿಕಾನ್ ಕ್ಯಾಮೆರಾ ಬಳಸುವ ಪರಿಣತರು ಹೇಳಿದ್ದೇನೆಂದರೆ ಹಾಗೆ ಆದಾಗ ಲೆನ್ಸ್ ಅನ್ನು ಒಮ್ಮೆ ತೆಗೆದು ಹಾಕಿದರೆ ಸರಿಯಾಗುತ್ತದೆ ಎಂದು. ನಾನು ಹಾಗೆ ಮಾಡಿ ನೋಡಿದೆ.

ಹೌದು. ನನಗೂ ಅದೇ ಅನುಭವ ಆಯಿತು. ಈ ಹಿಂದೆ ಇತರೆ ನಿಕಾನ್ ಕ್ಯಾಮೆರಾ ಬಳಸಿದ್ದಾಗ ಈ ರೀತಿ ಆಗಿರಲಿಲ್ಲ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಹುಪಾಲು ಡಿಎಸ್‌ಎಲ್‌ಆರ್ ಕ್ಯಾಮೆರಾಗಳಂತೆ ಇದರಲ್ಲೂ ವಿಡಿಯೊ ಚಿತ್ರೀಕರಣ ಸೌಲಭ್ಯವಿದೆ. ವಿಡಿಯೊ ಶೂಟಿಂಗ್ ಮಾಡುವಾಗ ಜೊತೆಗಿನ ಆಡಿಯೊ ಸ್ಟಿರಿಯೊ ಆಗಿರುತ್ತದೆ. ಇದಕ್ಕಾಗಿ ಕ್ಯಾಮೆರಾದಲ್ಲೇ ಸ್ಟಿರಿಯೊ ಮೈಕ್ರೋಫೋನ್ ಇದೆ. ಹೊರಗಿನಿಂದ ಮೈಕ್ರೋಫೋನ್ ಜೋಡಿಸಬಹುದು. ಜೊತೆಗೆ ಹೆಡ್‌ಫೋನ್ ಕಿಂಡಿಯೂ ಇದೆ. ಎಚ್ಚರಿಕೆಯಿಂದ ಸರಿಯಾಗಿ ಯೋಜನೆ ಮಾಡಿಕೊಂಡು ಬಳಸಿದರೆ ಒಂದು ಸಣ್ಣಮಟ್ಟದ ಉತ್ತಮ ಗುಣಮಟ್ಟದ ವಿಡಿಯೊ ತಯಾರಿಸಬಹುದು.

ಕ್ಯಾಮೆರಾದಲ್ಲೇ ಎಚ್‌ಡಿಆರ್ ಸೌಲಭ್ಯವೂ ಇದೆ. ಇದರ ಎಚ್‌ಡಿಆರ್ ಫಲಿತಾಂಶ ಚೆನ್ನಾಗಿದೆ. ಈ ಕ್ಯಾಮೆರಾದಲ್ಲಿರುವ ಎಲ್ಲ ಆಯ್ಕೆಗಳನ್ನುಕಲಿಯಲು ಕನಿಷ್ಠ ಒಂದು ವಾರವಾದರೂ ಬೇಕು. ಈ ಕ್ಯಾಮೆರಾ ನಿಕಾನ್‌ನವರ ತುಂಬ ಜನಪ್ರಿಯ ಕ್ಯಾಮೆರಾ ಡಿ7100ಕ್ಕೆ ಬದಲಿಯಾಗಿ ಬಂದದ್ದು. ನಿಕಾನ್ ಡಿ7100 ಕ್ಯಾಮೆರಾದ ವಿಮರ್ಶೆ ಇದೇ ಅಂಕಣದಲ್ಲಿ ಪ್ರಕಟವಾಗಿತ್ತು. ಇದರಲ್ಲಿ ಕೆಲವು ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡಿದ್ದಾರೆ.

ಒಂದು ಪ್ರಮುಖ ಸುಧಾರಣೆಯೆಂದರೆ ವೈಫೈ ಮತ್ತು ಎನ್‌ಎಫ್‌ಸಿ ಸಂಪರ್ಕ. ಇವನ್ನು ಬಳಸಿ ಸ್ಮಾರ್ಟ್‌ಫೋನ್ ಜೊತೆ ಸಂಪರ್ಕ ಮಾಡಿ ಫೋಟೊ ವರ್ಗಾವಣೆ ಮಾತ್ರವಲ್ಲ ಕ್ಯಾಮೆರಾದ ನಿಯಂತ್ರಣವನ್ನೂ ಮಾಡಬಹುದು. ಒಟ್ಟಿನಲ್ಲಿ ಹೇಳುವುದಾದರೆ, ನೀವು ಪರಿಣತ ಛಾಯಾಗ್ರಾಹಕರಾಗಿದ್ದು, ಕೈಯಲ್ಲಿ ಸಾಕಷ್ಟು ಹಣವಿದ್ದಲ್ಲಿ ಅತ್ಯುತ್ತಮ ಫಲಿತಾಂಶ ಬೇಕು ಎನ್ನುವವರಿಗೆ ಇದು ಒಳ್ಳೆಯ ಆಯ್ಕೆ. ಕೆಲವೊಮ್ಮೆ ಫೋಕಸ್ ಸಮಸ್ಯೆ ಎಲ್ಲ ಕ್ಯಾಮೆರಾಗಳಲ್ಲೂ ಇದೆಯೋ ಅಥವಾ ನನಗೆ ವಿಮರ್ಶೆಗೆ ಬಂದ ಕ್ಯಾಮೆರಾದಲ್ಲಿ ಮಾತ್ರವೋ ಎಂದು ಗೊತ್ತಿಲ್ಲ.
*
ವಾರದ ಆ್ಯಪ್
ನಿಕಾನ್ ಕ್ಯಾಮೆರಾ ದೂರನಿಯಂತ್ರಕ

ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಹಲವು ಕ್ಯಾಮೆರಾಗಳಲ್ಲಿ ವೈಫೈ ಸೌಲಭ್ಯವಿದೆ. ನಿಕಾನ್‌ ಕ್ಯಾಮೆರಾಗಳೂ ಇದಕ್ಕೆ ಹೊರತಲ್ಲ. ಇಂತಹ ಕ್ಯಾಮೆರಾಗಳನ್ನು ನಿಮ್ಮ ಆಂಡ್ರಾಯ್ಡ್‌ ಫೋನ್‌ಗೆ ಸಂಪರ್ಕ ಪಡಿಸಬೇಕಾದಲ್ಲಿ ನಿಮಗೆ ಸೂಕ್ತ ಕಿರುತಂತ್ರಾಂಶ (ಆ್ಯಪ್) ಬೇಕು. ಇದಕ್ಕಾಗಿ ನಿಕಾನ್‌ನವರೇ ಒಂದು ಕಿರುತಂತ್ರಾಂಶ ತಯಾರಿಸಿದ್ದಾರೆ. ಇದು ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ WirelessMobileUtility ಎಂದು ಹುಡುಕಬೇಕು. ನಿಕಾನ್ ಕಂಪೆನಿಯವರೇ ತಯಾರಿಸಿದುದನ್ನು ಮಾತ್ರ ಹಾಕಿಕೊಳ್ಳಿ.

ಇದರ ಮೂಲಕ ನಿಮ್ಮ ನಿಕಾನ್ ಕ್ಯಾಮೆರಾವನ್ನು ಫೋನಿಗೆ ಸಂಪರ್ಕಿಸಿ ಫೋಟೊ ವರ್ಗಾವಣೆ ಮಾತ್ರವಲ್ಲ ಕ್ಯಾಮೆರಾ ಕ್ಲಿಕ್ ಕೂಡ ಮಾಡಬಹುದು. ಕ್ಯಾಮೆರಾವನ್ನು ಸ್ಟ್ಯಾಂಡ್ ಮೇಲೆ ಇಟ್ಟು ದೂರದಿಂದ ಕ್ಲಿಕ್ ಮಾಡಲು ಇದು ಉಪಯುಕ್ತ. ಹಿಂದಿನ ಕಾಲದಲ್ಲಿ ಇಂತಹ ಕೆಲಸಕ್ಕೆ ಕೇಬಲ್‌ಗಳು ದೊರೆಯುತ್ತಿದ್ದವು. ಈಗಲೂ ದೊರೆಯುತ್ತವೆ. ಆದರೆ ಅದಕ್ಕಿಂತ ಈ ಕಿರುತಂತ್ರಾಂಶ ಬಳಕೆ ಬಹಳ ಸುಲಭ ಮಾತ್ರವಲ್ಲ ಇದು ಕೇಬಲ್ ಇಲ್ಲದೆಯೇ ವೈಫೈ ಮೂಲಕ ಕೆಲಸ ಮಾಡುತ್ತದೆ.
*
ಗ್ಯಾಜೆಟ್ ಸುದ್ದಿ
ಎಲುಬು ಮೂಲಕ ಸಂವಹನ

ಹೆಡ್‌ಫೋನ್‌, ಇಯರ್‌ಫೋನ್, ಇಯರ್‌ಬಡ್‌ ಬಗ್ಗೆ ಈ ಅಂಕಣದಲ್ಲಿ ಹಲವು ಸಲ ಬರೆಯಲಾಗಿದೆ. ಇವೆಲ್ಲವುಗಳ ಒಂದು ಪ್ರಮುಖ ಸಮಸ್ಯೆ ಎಂದರೆ ಇವು ಹೊರಗಿನ ಶಬ್ದಗಳನ್ನು ಬಹುತೇಕ ಇಲ್ಲವಾಗಿಸಿ ಅಥವಾ ಕಡಿಮೆ ಮಾಡಿ ಸಂಗೀತವನ್ನು ಕಿವಿಗೆ ತಲುಪಿಸುತ್ತವೆ. ಇದರಿಂದಾಗಿ ನಿಮ್ಮ ಸುತ್ತಮುತ್ತ ಏನು ನಡೆಯುತ್ತದೆ ಎಂಬುದು ತಿಳಿಯುವುದಿಲ್ಲ. ರಸ್ತೆ ನಡೆಯುವಾಗ ಹೀಗೆ ಇಯರ್‌ಬಡ್ ಹಾಕಿಕೊಂಡು ನಡೆದು ಅಪಘಾತಕ್ಕೆ ಈಡಾದವರು ತುಂಬ ಇದ್ದಾರೆ.

ಈ ಸಮಸ್ಯೆಗೆ ಪರಿಹಾರರೂಪವಾಗಿ ಎಲುಬಿನ ಮೂಲಕ ಧ್ವನಿಯನ್ನು ಮೆದುಳಿಗೆ ತಲುಪಿಸುವ ಹೆಡ್‌ಫೋನ್ ಬಂದಿದೆ. ಇದು ಮಾಮೂಲಿ ಇಯರ್‌ಫೋನ್‌ಗಳಂತೆ ತಲೆಗೆ ಹಾಕಿಕೊಳ್ಳುವುದಾದರೂ ಇದರ ಪ್ರಮುಖ ಅಂಗವಾದ ಧ್ವನಿಯನ್ನು ಪುನರುತ್ಪತ್ತಿ ಮಾಡುವ ಅಂಗ ಕಿವಿಯ ಪಕ್ಕ ತಲೆಬುರುಡೆಗೆ ಅಂಟಿ ಕುಳಿತುಕೊಳ್ಳುತ್ತದೆ. ಇದು ಸ್ಪೀಕರ್ ಅಲ್ಲ. ಬದಲಿಗೆ ಧ್ವನಿ ಕಂಪನಗಳನ್ನು ನೇರವಾಗಿ ಎಲುಬಿಗೆ ದಾಟಿಸುವ ಮೂಲಕ ಅದನ್ನು ಮೆದುಳಿಗೆ ತಲುಪಿಸುತ್ತದೆ. ಇದರ ಇನ್ನೂ ಒಂದು ಸಾಧಕವಿದೆ. ಕೆಲವು ವಿಧದ ಕಿವುಡುತನಗಳಲ್ಲಿ ಧ್ವನಿಯನ್ನು ನೇರವಾಗಿ ಮೆದುಳಿಗೆ ತಲುಪಿಸುವ ಮೂಲಕ ಅವರೂ ಧ್ವನಿಯನ್ನು ಆಲಿಸುವಂತೆ ಮಾಡುತ್ತದೆ.

*
ಗ್ಯಾಜೆಟ್ ಸಲಹೆ
ವಿನಯ್ ಅವರ ಪ್ರಶ್ನೆ:
ನೋಕಿಯಾ ಲುಮಿಯಾ 1520ಕ್ಕೆ ವಿಂಡೋಸ್ 10 ಅಪ್‌ಗ್ರೇಡ್ ದೊರೆಯುತ್ತಿದೆಯೇ?
ಉ: ಸದ್ಯದಲ್ಲೇ ನೀಡುವುದಾಗಿ ಕೆಲವು ತಿಂಗಳುಗಳಿಂದ ಮೈಕ್ರೋಸಾಫ್ಟ್‌ನವರು ಹೇಳುತ್ತಿದ್ದಾರೆ.
*
ಗ್ಯಾಜೆಟ್ ತರ್ಲೆ
ಬಾಳೆಹಣ್ಣಿನ ಆಕಾರದ ಫೋನ್ ಸ್ಪೀಕರ್

ನಿಮ್ಮ ಫೋನಿನ ಆಕಾರ ವಿನ್ಯಾಸ ಬೋರ್ ಆಗಿದೆಯೇ? ವಿಚಿತ್ರ ವಿನ್ಯಾಸದ ಫೋನ್ ಅಥವಾ ಸ್ಪೀಕರ್ ಬೇಕು ಅನ್ನಿಸುತ್ತಿದೆಯೇ? ನಿಮಗಾಗಿ ಬಾಳೆಹಣ್ಣಿನ ಆಕಾರದ ಫೋನ್ ಸ್ಪೀಕರ್ ತಯಾರಾಗಿದೆ. ಅದನ್ನು ಯಾವುದೇ ಫೋನಿಗೆ ಇಯರ್‌ಫೋನ್ ಕಿಂಡಿ ಮೂಲಕ ಜೋಡಿಸಬಹುದು. ನೋಡಿದವರಿಗೆ ನೀವು ಬಾಳೆಹಣ್ಣಿನ ಜೊತೆ ಮಾತನಾಡುತ್ತಿದ್ದೀರಿ ಅನ್ನಿಸಬಹುದು!

 

 

Comments
ಈ ವಿಭಾಗದಿಂದ ಇನ್ನಷ್ಟು
ಕಿಂಡಲ್ ಇ–ಬುಕ್ ರೀಡರ್‌; ಕನ್ನಡ ಬೇಡವಂತೆ

ಗ್ಯಾಜೆಟ್ ಲೋಕ
ಕಿಂಡಲ್ ಇ–ಬುಕ್ ರೀಡರ್‌; ಕನ್ನಡ ಬೇಡವಂತೆ

23 Nov, 2017
ಕಡಿಮೆ ಬೆಲೆಯ ಇನ್ನೊಂದು ಫೋನ್

ಗ್ಯಾಜೆಟ್ ಲೋಕ
ಕಡಿಮೆ ಬೆಲೆಯ ಇನ್ನೊಂದು ಫೋನ್

16 Nov, 2017
ಸ್ವಂತೀಪ್ರಿಯರಿಗಾಗಿ ಮತ್ತೊಂದು ಫೋನ್

ಗ್ಯಾಜೆಟ್ ಲೋಕ
ಸ್ವಂತೀಪ್ರಿಯರಿಗಾಗಿ ಮತ್ತೊಂದು ಫೋನ್

9 Nov, 2017
ಶಿಯೋಮಿ ಎಂಐ ಮಿಕ್ಸ್2 ಸುಂದರ ವಿನ್ಯಾಸದ ಫೋನ್

ಗ್ಯಾಜೆಟ್ ಲೋಕ
ಶಿಯೋಮಿ ಎಂಐ ಮಿಕ್ಸ್2 ಸುಂದರ ವಿನ್ಯಾಸದ ಫೋನ್

2 Nov, 2017
4 ಕ್ಯಾಮೆರಾಗಳ ಫೋನ್

ಗ್ಯಾಜೆಟ್ ಲೋಕ
4 ಕ್ಯಾಮೆರಾಗಳ ಫೋನ್

26 Oct, 2017