ನೆನೆ ನೆನೆ ಆ ದಿನವ, ಓ ಭಾರತ ಬಾಂಧವ

ಜನರನ್ನು ಸಂಘಟಿಸಲು ಬಳಸಬಹುದಾದ  ಘೋಷಣೆಯನ್ನು ಒಗ್ಗಟ್ಟು ಮುರಿಯುವ ಅಸ್ತ್ರವಾಗಿಯೂ ಬಳಸಬಹುದೇ?

ನೆನೆ ನೆನೆ ಆ ದಿನವ, ಓ ಭಾರತ ಬಾಂಧವ

ಜನರನ್ನು ಸಂಘಟಿಸಲು ಬಳಸಬಹುದಾದ  ಘೋಷಣೆಯನ್ನು ಒಗ್ಗಟ್ಟು ಮುರಿಯುವ ಅಸ್ತ್ರವಾಗಿಯೂ ಬಳಸಬಹುದೇ?

‘ಭಾರತ್ ಮಾತಾ ಕೀ ಜೈ’. ಸ್ವಾತಂತ್ರ್ಯ ಚಳವಳಿಯ ದಿನಗಳಲ್ಲಿ ಶಕ್ತಿಸ್ರೋತವಾಗಿದ್ದ, ಹೋರಾಟದ ಕೆಚ್ಚನ್ನು ಉದ್ದೀಪಿಸಿದ ರಾಷ್ಟ್ರಮಂತ್ರ, ಇದೀಗ ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಿದೆ. ‘ಕುತ್ತಿಗೆಗೆ ಖಡ್ಗ ಹಿಡಿದರೂ ಈ ಘೋಷಣೆ ನನ್ನ ಬಾಯಿಂದ ಬಾರದು’ ಎಂಬ ಸಂಸದ ಓವೈಸಿ ಹೇಳಿಕೆ ಚರ್ಚೆಗೆ ಮೂಲ ಕಾರಣ.

ವಿಪರ್ಯಾಸವೆಂದರೆ ಹೈದರಾಬಾದಿನ ಜಾಮಿಯಾ ನಿಜಾಮಿಯ ಎಂಬ ಸಂಸ್ಥೆ ‘ಭಾರತ್ ಮಾತಾ ಕೀ ಜೈ’ ವಿರುದ್ಧ ಫತ್ವಾ ಹೊರಡಿಸಿ ಓವೈಸಿ ಮಾತನ್ನು ಪುರಸ್ಕರಿಸಿದೆ. ಬೃಂದಾ ಕಾರಟ್, ಯೆಚೂರಿಯಂಥ ಎಡಪಂಥೀಯ ನಾಯಕರು, ಕೆಲವು ಬುದ್ಧಿಜೀವಿಗಳು ‘ಒಂದು ಘೋಷಣೆಗೆ ಅಷ್ಟು ಮಹತ್ವ ಕೊಡಬೇಕೆ, ಘೋಷಣೆಯಿಂದ ರಾಷ್ಟ್ರಾಭಿಮಾನ ಅಳೆಯಬಹುದೇ, ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಜರೂರು ಇದೆಯೇ’ ಎಂಬ ತಥಾಕಥಿತ ಓಲೈಕೆಯ, ಅಡ್ಡಗೋಡೆಯ ಮೇಲೆ ದೀಪ ಇಡುವ ಮಾತುಗಳನ್ನು ಮುಂದುವರೆಸಿದ್ದಾರೆ.

ಹಾಗೆ ನೋಡಿದರೆ, ರಾಷ್ಟ್ರದ ಕಲ್ಪನೆಯೇ ಭಾವಪ್ರಧಾನವಾದುದು. ಇನ್ನು ಘೋಷಣೆ, ಅದೊಂದು ಬೀಜಮಂತ್ರ, ಭಾವ ಪ್ರಕಟೀಕರಣದ ಉದ್ಗಾರ. ಎಲ್ಲ ಮಾತುಗಳೂ ಘೋಷಣೆ ಆಗುವುದಿಲ್ಲ. ಘೋಷಣೆ ಬರಿಯ ಪದ ಅಥವಾ ಶಬ್ದವಲ್ಲ. ನೆಹರೂ ತಮ್ಮ ಆತ್ಮಕತೆ ‘An Autobiography’ಯಲ್ಲಿ ಒಂದು ಪ್ರಸಂಗವನ್ನು ಉಲ್ಲೇಖಿಸಿದ್ದಾರೆ.

1920ರ ಜೂನ್ ತಿಂಗಳಿನಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ರೈತ ಕುಟುಂಬಗಳು ಪ್ರತಾಪಗಡದಿಂದ  ಅಲಹಾಬಾದಿಗೆ ಬಂದು ನೆಹರೂರನ್ನು ಭೇಟಿ ಮಾಡಿ, ಜಮೀನುದಾರರಿಂದ ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ವಿವರಿಸಿದ್ದರು. ಕೆಲದಿನಗಳ ಬಳಿಕ ನೆಹರೂ ಆ ಹಳ್ಳಿಗೆ ಭೇಟಿ ಕೊಟ್ಟರು. ಅಲ್ಲಿನ ಜನ ಚಿಕ್ಕಪುಟ್ಟ ಗುಡಿಸಿಲಿನಲ್ಲಿ ವಾಸಿಸುತ್ತಿದ್ದರು. ಬಡತನ ರಾಚುತ್ತಿತ್ತು. ಆದರೆ ಜನರ ಕಣ್ಣುಗಳಲ್ಲಿ ಹೊಳಪಿತ್ತು. ಉತ್ಸಾಹ ಹೇರಳವಾಗಿತ್ತು.

ಕೆಲವೇ ಕ್ಷಣಗಳಲ್ಲಿ ನೆಹರೂ ಭೇಟಿಕೊಟ್ಟ ಸುದ್ದಿ ಬಾಯಿಂದ ಬಾಯಿಗೆ ತಲುಪಿ, ಹಳ್ಳಿಯಿಂದ ಹಳ್ಳಿಗೆ ಮುಟ್ಟಿ, ಸುತ್ತ ಮುತ್ತಲಿನ ನಾಲ್ಕಾರು ಹಳ್ಳಿಯಿಂದ ಹೆಂಗಸರು, ಮಕ್ಕಳು, ರೈತರು ‘ಸೀತಾರಾಮ್ ಸೀತಾರಾಮ್’ ಘೋಷಣೆಯೊಂದಿಗೆ ಒಂದು ಹೊಲದಲ್ಲಿ ಜಮಾಯಿಸಿದ್ದರು. ‘ಸೀತಾರಾಮ್’ ಘೋಷಣೆಯ ಚಮತ್ಕಾರ ಕಂಡು ನೆಹರೂ ಚಕಿತಗೊಂಡರು. ಆ ಘೋಷಣೆ ಹಳ್ಳಿಗರಲ್ಲಿ ಉತ್ಸಾಹ ತುಂಬುತ್ತಿತ್ತು. ಆಪತ್ಕಾಲದಲ್ಲಿ ಒಗ್ಗಟ್ಟಿನ ಮಂತ್ರವಾಗಿ, ಹಳ್ಳಿ ಹಳ್ಳಿಗಳ ನಡುವಿನ ಸಂಪರ್ಕ ಕೊಂಡಿಯಾಗಿ ಬಳಕೆಯಾಗುತ್ತಿತ್ತು.

ಇಂತಹ ಹಲವು ಘೋಷಣೆಗಳು ಸ್ವಾತಂತ್ರ್ಯ ಚಳವಳಿಯ ದಿನಗಳಲ್ಲಿ ಜನರ ಚೈತನ್ಯವನ್ನು ನೂರ್ಮಡಿಗೊಳಿಸಿದ್ದವು. ಅದರಲ್ಲೂ ನಾಡವಿಮೋಚನೆಯ ಪಂಚಾಕ್ಷರಿ ‘ವಂದೇ ಮಾತರಂ’ ಉಂಟುಮಾಡಿದ ಸಂಚಲನ ಅಮೋಘ. ‘ವಂದೇ ಮಾತರಂ’ ಘೋಷಣೆ ರೂಪುತಳೆದದ್ದು ಭಾರತ ಇತಿಹಾಸದ ರೋಚಕ ಕಾಲಘಟ್ಟದಲ್ಲಿ. ವಿಲ್ ಡ್ಯೂರಂಟ್ ‘ಭಾರತ ಸ್ವಾತಂತ್ರ್ಯ ಹೋರಾಟದ ಶಂಖನಾದ’ ಎಂದು ಕರೆದ ‘ವಂಗ-ಭಂಗ’ ಚಳವಳಿಯ ದಿನಗಳಲ್ಲಿ.

ಒಮ್ಮೆ ರಾಮಕೃಷ್ಣ ಪರಮಹಂಸ ಮತ್ತು ಬಂಕಿಮಚಂದ್ರರ ಭೇಟಿಯಾಯಿತು. ಬಂಕಿಮ ಎಂದರೆ ಹಿಂದಿಯಲ್ಲಿ ಬಾಗಿದ ಎಂದು ಅರ್ಥ. ಆ ಬಗ್ಗೆ ರಾಮಕೃಷ್ಣರು ಕೇಳಿದರು ‘ನೀನು ಬಂಕಿಮ ಆದದ್ದು ಹೇಗೆ?’ ‘ಬ್ರಿಟಿಷರ ಬೂಟು ನನ್ನ ಬೆನ್ನನ್ನು ಬಾಗಿಸಿದೆ’ ಎಂದು ಬಂಕಿಮ ಉತ್ತರಿಸಿದ್ದರು. ಅವರಲ್ಲಿ ಹೆಪ್ಪುಗಟ್ಟಿದ್ದ ಗುಲಾಮಗಿರಿಯ ನೋವು ಆ ಮಾತಿನಲ್ಲಿ ಪ್ರಕಟವಾಗಿತ್ತು.

ನಂತರ ಕಲ್ಕತ್ತಾದಿಂದ ಕಾಂಟಾಲ್ ಎಂಬ ತಮ್ಮ ಹಳ್ಳಿಗೆ ರೈಲಿನಲ್ಲಿ ಪ್ರಯಾಣಿಸುವಾಗ, ಪ್ರಕೃತಿಯ ಸಿರಿಯನ್ನು ನೋಡುತ್ತಾ ಬಂಕಿಮ ಮೈಮರೆತರು. ಮೂವತ್ತು ಕೋಟಿ ಮಕ್ಕಳಿದ್ದರೂ, ತಾಯಿಯ ದಾರಿದ್ರ್ಯ, ದಾಸ್ಯ ಅವರ ಕಣ್ಮುಂದೆ ಬಂತು. ದಾಸ್ಯದ ನೋವಿನಲ್ಲಿ, ತಾನು ಬಂಜೆಯಾಗಿದ್ದರೇ ಚೆನ್ನಿತ್ತು ಎಂದು ಭಾರತ ಮಾತೆ ಅಂದುಕೊಳ್ಳುತ್ತಿರಬಹುದೇ ಎಂಬ ಆಲೋಚನೆಗಳು ಸುಳಿದು ದುಃಖಿಸಿದರು.

ಮನೆಗೆ ಬಂದರೂ ಅದೇ ಭಾವ. ಊಟ ತೊರೆದು, ಮಹಡಿ ಏರಿ ಬೆಳದಿಂಗಳಿನಲ್ಲಿ ಅಡ್ಡಾದರು. ತಂಗಿಯ ಮಗನೂ ಮಾವನಿಗೆ ಜೊತೆಯಾದ. ಭಾವಪ್ರಪಂಚದ ತಾಕಲಾಟ, ಸಂಕಟ ಸರಿರಾತ್ರಿಯಲ್ಲಿ ಸ್ಫೋಟಗೊಂಡಿತು.

‘ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ, ಕೋಟಿ ಕೋಟಿ ಭುಜೈರ್ಧೃತ ಖರ ಕರವಾಲೇ, ಅಬಲಾ ಕೆನೊ ಮಾ ಎತೋ ಬಲೆ, ಬಹುಬಲಧಾರಿಣೀಂ ನಮಾಮಿ ತಾರಿಣೀಂ’ ಸಾಲುಗಳು ಸ್ಫುರಣವಾದವು. ಭಾವಲೋಕದಲ್ಲಿದ್ದಾಗ ಮಾವ ಆಡುವ ಪ್ರತೀ ಮಾತನ್ನೂ ದಾಖಲಿಸಿಕೊಳ್ಳುತ್ತಿದ್ದ ತಂಗಿಯ ಮಗ ಇದನ್ನೂ ದಾಖಲಿಸಿದ. ‘ವಂದೇ ಮಾತರಂ’ ರಚನೆಯಾಯಿತು.

ಹೀಗೆ 1875ರಲ್ಲೇ ಬಂಕಿಮರು ‘ವಂದೇ ಮಾತರಂ’ ರಚಿಸಿದರೂ, ಅದು ಘೋಷಣೆಯಾಗಿ ಜನಮನ ತಲುಪಿದ್ದು 1905ರಲ್ಲಿ. ಮೆರವಣಿಗೆಯಲ್ಲಿ ತೆರಳುತ್ತಿದ್ದ ಕಾಲೇಜಿನ ತರುಣನೊಬ್ಬ ‘ವಂದೇ ಮಾತರಂ’ ಎಂದಾಗ, ಅದು ಘೋಷಣೆಯಾಗಿ ಮಾರ್ಪಾಟಾಯಿತು. ವಂಗ ಮಾತೆ, ಕಾಳೀ ಮಾತೆ, ಭಾರತ ಮಾತೆಯ ಬಗ್ಗೆ ಬಂಗಾಳ ಪ್ರಾಂತ್ಯದಲ್ಲಿ ಶ್ರದ್ಧೆ ಇತ್ತು.

ಆ ಮೂರು ತಾಯಂದಿರನ್ನು ಪೂಜಿಸಲು ಒಂದು ಮಂತ್ರದ ಅವಶ್ಯಕತೆ ಇತ್ತು. ಆ ಕೆಲಸವನ್ನು ‘ವಂದೇ ಮಾತರಂ’ ಮಾಡಿತು. ಬ್ರಿಟಿಷರು ಶಾಲೆಗಳಲ್ಲಿ ‘ವಂದೇ ಮಾತರಂ’ ಘೋಷಣೆಯನ್ನು ನಿಷೇಧಿಸಿದರು. ‘ವಂದೇ ಮಾತರಂ’ ಎಂದ ವಿದ್ಯಾರ್ಥಿಯಿಂದ, 5 ರೂಪಾಯಿ ದಂಡ ಪಡೆದುಕೊಳ್ಳಬೇಕು ಎಂಬ ಸುತ್ತೋಲೆ ಹೊರಡಿಸಲಾಯಿತು.

ಆದರೆ ರಂಗಪುರ ಎಂಬ ಹಳ್ಳಿಯ ವಿದ್ಯಾರ್ಥಿಗಳು ಘೋಷಣೆ ಬಿಡಲಿಲ್ಲ. ಪೋಷಕರು ದಂಡ ತೆರಲಿಲ್ಲ. ಮಕ್ಕಳನ್ನು ಶಾಲೆ ಬಿಡಿಸಿದರು. ರವೀಂದ್ರನಾಥ್ ಟ್ಯಾಗೋರ್, ಬಿಪಿನ್ ಚಂದ್ರಪಾಲ್, ಬ್ಯಾರಿಸ್ಟರ್ ಅಬ್ದುಲ್ ರಸೂಲ್, ಲಿಯಾಕತ್ ಮೌಲ್ವಿ ನೇತೃತ್ವದಲ್ಲಿ ‘ರಾಷ್ಟ್ರೀಯ ವಿದ್ಯಾಲಯ’ ಎಂಬ ಸ್ವದೇಶಿ ಶಾಲೆ ಆರಂಭವಾಯಿತು. ಐಸಿಎಸ್ ಧಿಕ್ಕರಿಸಿ ಭಾರತಕ್ಕೆ ಬಂದಿದ್ದ ಅರವಿಂದ ಘೋಷ್ ರಾಷ್ಟ್ರಿಯ ಮಹಾವಿದ್ಯಾಲಯಕ್ಕೆ ಪ್ರಿನ್ಸಿಪಾಲ್ ಆದರು.

‘ವಂದೇ ಮಾತರಂ’ ಆಬಾಲ ವೃದ್ಧರಾದಿಯಾಗಿ ಎಲ್ಲರ ಮೈ ಮನಸ್ಸುಗಳನ್ನು ಆಕ್ರಮಿಸಿಕೊಂಡಿತು. ಬ್ರಿಟಿಷರಿಗೆ ಪ್ರತಿಸ್ಪರ್ಧಿಯಾಗಿ ‘ವಂದೇ ಮಾತರಂ’ ಎಂಬ ಹಡಗು ಸೇವೆಯನ್ನು ಚಿದಂಬರಂ ಪಿಳ್ಳೆ ಆರಂಭಿಸಿದರೆ, ಅರವಿಂದರು ‘ವಂದೇ ಮಾತರಂ’ ಪತ್ರಿಕೆಯನ್ನು ಹೊರಡಿಸಿದರು. ಮೇಡಂ ಕಾಮಾ ‘ವಂದೇ ಮಾತರಂ’ ಹೆಸರಿನ ಮತ್ತೊಂದು ಪತ್ರಿಕೆಯನ್ನು ಇಂಗ್ಲೆಂಡಿನಲ್ಲಿ ಆರಂಭಿಸಿದರು.

ಕವಿ ಟ್ಯಾಗೋರ್, ‘ಹರೆಯದ ಮಗುವಿನ ಹೃದಯದ ಗುಹೆಯಿಂದ, ಉಕ್ಕಿನ ಸ್ನಾಯುಗಳ ಯುವಕರ ಕಂಠದಿಂದ, ನೆಲ ತಾಯಿಯ ಮಕ್ಕಳ ಕುಣಿತ ಕೋಲಾಟಗಳಿಂದ, ನಮ್ಮ ಅಕ್ಕ ತಂಗಿಯರ ಹಾಡು ಹಸೆ ಹೆಣಿಗೆ ಹೊಲಿಗೆಗಳಿಂದ, ವಂದೇ ಮಾತರಂ ಮಾರ್ದನಿಗೊಳ್ಳಲಿ’ ಎಂಬ ಆಶಯ ವ್ಯಕ್ತಪಡಿಸಿದರು. 

ಹೀಗೆ ಜನರನ್ನು ಸಂಘಟಿಸಲು, ಸ್ಫೂರ್ತಿ ತುಂಬಲು ಘೋಷಣೆಗಳನ್ನು ಬಳಸಬಹುದಾದರೆ, ಅದೇ ಘೋಷಣೆಯನ್ನು ಒಗ್ಗಟ್ಟು ಮುರಿಯುವ ಅಸ್ತ್ರವಾಗಿಯೂ ಬಳಸಬಹುದೇ? ‘ವಂದೇ ಮಾತರಂ’ ವಿಷಯದಲ್ಲಿ ಆದದ್ದು ಅದೇ. 1885ರಿಂದ ‘ವಂದೇ ಮಾತರಂ’ ಗೀತೆಯನ್ನು ಕಾಂಗ್ರೆಸ್ ಅಧಿವೇಶನದಲ್ಲಿ ಹಾಡುವ ಪದ್ಧತಿ ಇತ್ತು. ಮುಸ್ಲಿಂ ನಾಯಕರು ಅಧಿವೇಶನದ ಅಧ್ಯಕ್ಷರಾದಾಗಲೂ ‘ವಂದೇ ಮಾತರಂ’ ಹಾಡುವ ಬಗ್ಗೆ ಅಪಸ್ವರ ಇರಲಿಲ್ಲ.

1887ರಲ್ಲಿ ಬದ್ರುದ್ದಿನ್ ಅಧ್ಯಕ್ಷರಾಗಿದ್ದರು, 1897ರಲ್ಲಿ ರಹೀಮ್ ಸಯಾನಿ, 1913ರಲ್ಲಿ ಸಯ್ಯದ್ ಮಹಮದ್ ಬಹದ್ದೂರ್ ಅಧ್ಯಕ್ಷ ಪದವಿಯಲ್ಲಿದ್ದರು. ‘ವಂದೇ ಮಾತರಂ’ಗೆ ಯಾವ ತಕರಾರೂ ಇರಲಿಲ್ಲ. ಆದರೆ 1923ರಲ್ಲಿ ಆಂಧ್ರಪ್ರದೇಶದ ಕಾಕಿನಾಡ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದ ಮೌಲಾನ ಮಹಮದ್ ಅಲಿ ಮೊದಲ ಬಾರಿಗೆ ‘ವಂದೇ ಮಾತರಂ’ ಹಾಡಿಗೆ ವಿರೋಧ ಮಾಡಿದರು. ವಿಷ್ಣು ದಿಗಂಬರ ಪಲುಸ್ಕರ್ ಹಾಡಲು ನಿಂತಾಗ, ವಿರೋಧಿಸಿ ಸಭಾತ್ಯಾಗ ಮಾಡಿದರು. ಒಗ್ಗಟ್ಟಿನ ಸಂಕೇತವಾಗಿದ್ದ ‘ವಂದೇ ಮಾತರಂ’ ಒಡಕಿಗೂ ನೆಪವಾಯಿತು.

ಇಡೀ ದೇಶ ‘ಕ್ವಿಟ್ ಇಂಡಿಯಾ’ ಎಂದು ಬ್ರಿಟಿಷರ ವಿರುದ್ಧ ಸೆಟೆದು ನಿಂತಾಗ, ‘ಡಿವೈಡ್ ಅಂಡ್‌ ಕ್ವಿಟ್ ಇಂಡಿಯಾ’ ಎಂದು ಅಪದ್ಧ ನುಡಿದಿದ್ದ ಮಹಮದ್ ಅಲಿ ಜಿನ್ನಾ, 1938ರಲ್ಲಿ ‘ವಂದೇ ಮಾತರಂ’ ಗೀತೆಯನ್ನು ಮುಸ್ಲಿಮರು ಹಾಡುವಂತಿಲ್ಲ ಎಂದು ಮತೀಯ ಭಾವನೆಯನ್ನು ಮುಂದೆ ಇಟ್ಟರು.

ಗಾಂಧೀಜಿ, ಹರಿಜನ್ ಪತ್ರಿಕೆಯ ಜುಲೈ 31, 1939ರ ಸಂಚಿಕೆಯಲ್ಲಿ ‘ಆ ಗೀತೆಯ ಮೂಲ ಏನೇ ಆಗಿರಲಿ, ಯಾವ ಸಂದರ್ಭದಲ್ಲೇ ಅದು ರಚನೆಯಾಗಿರಲಿ, ಹಿಂದೂ ಮುಸ್ಲಿಂ ಎಂಬ ಭೇದವಿಲ್ಲದೆ ಎಲ್ಲರೂ ಅದನ್ನೊಂದು ರಣಮಂತ್ರವನ್ನಾಗಿ ಬಂಗಾಳ ವಿಭಜನೆಯ ಸಂದರ್ಭದಲ್ಲಿ ಬಳಸಿದರು.

ನಾನಿನ್ನೂ ಹರೆಯದವನಾಗಿದ್ದಾಗಲೇ, ಆನಂದಮಠ ಮತ್ತು ಬಂಕಿಮರ ಕುರಿತು ತಿಳಿದಿರದ ಸಂದರ್ಭದಲ್ಲೂ, ‘ವಂದೇ ಮಾತರಂ’ ನನ್ನನ್ನು ಆಕರ್ಷಿಸಿತ್ತು. ಮೊದಲ ಬಾರಿಗೆ ಆ ಗೀತೆಯ ಗಾಯನ ಕೇಳಿ ಪರವಶನಾಗಿದ್ದೆ. ಎಂದಿಗೂ ಇದು ಹಿಂದೂಗಳ ಗೀತೆ ಎನಿಸಿರಲಿಲ್ಲ. ವಂದೇ ಮಾತರಂ ಇಡೀ ರಾಷ್ಟ್ರಕ್ಕೆ ಬಂಗಾಲದ ಅಮೂಲ್ಯ ಕೊಡುಗೆ ಎನಿಸಿತ್ತು’ ಎಂದು ಬರೆದರು.

ಆದರೆ ವಿಪರ್ಯಾಸ, ರಾಷ್ಟ್ರ ಚಿಂತನೆಯೊಂದಿಗೆ, ಕೋಮು ಚಿಂತನೆ ಬೆರೆಸಬಾರದು ಎಂದು ಯಾರೊಬ್ಬರೂ ಗಟ್ಟಿದನಿಯಲ್ಲಿ ಹೇಳುವ ಧೈರ್ಯ ಮಾಡಲಿಲ್ಲ. ಅಡ್ಡಗೋಡೆಯ ಮೇಲೆ ದೀಪ ಇಡುವ, ಖುಷಿಪಡಿಸುವ ರಾಜಕಾರಣ ಮುಂದುವರೆಯಿತು. ವಂದೇ ಮಾತರಂ ಗೀತೆಯನ್ನು ತುಂಡು ಮಾಡಲಾಯಿತು.

‘ಶ್ರುತಿಗೆ ಹೊಂದುವುದಿಲ್ಲ’ ಎಂಬ ನೆಪ ಹೇಳಿ, ರಾಷ್ಟ್ರಗೀತೆಯನ್ನಾಗಿಸಲಾಗದು ಎಂದು ನೆಹರೂ ಸಂಸದೀಯ ಸಭೆಯಲ್ಲಿ ನುಡಿದರು. ಭಾವೈಕ್ಯತೆಯ ದೃಷ್ಟಿಯಿಂದ ಗಾಂಧೀಜಿ, ‘ರಘುಪತಿ ರಾಘವ ರಾಜಾರಾಂ’ ಗೀತೆಗೆ ‘ಈಶ್ವರ ಅಲ್ಲಾ ತೇರೇ ನಾಮ್’ ಸೇರಿಸಿದರೂ, ಯಾರಿಗಾಗಿ ಸೇರಿಸಲಾಯಿತೋ ಅವರು ಮಾತ್ರ ಅದನ್ನು ಹಾಡಲೇ ಇಲ್ಲ.

ನೌಖಾಲಿಯಲ್ಲಿ ನರಮೇಧ ನಡೆದಾಗ ಗಾಂಧೀಜಿ ಶಾಂತಿ ಸಭೆ ನಡೆಸಲು ನೌಖಾಲಿಗೆ ಭೇಟಿ ಇತ್ತರು. ಆದರೆ ಗಾಂಧೀಜಿ ‘ರಾಮಧುನ್’ ಆರಂಭಿಸಿದೊಡನೆ ಮುಸ್ಲಿಮರು ಸಭಾತ್ಯಾಗ ಮಾಡಿದರು. ಇದು ‘ವಂದೇ ಮಾತರಂ’ ವಿಷಯದಲ್ಲೂ ಆಯಿತು. ಗೀತೆ ತುಂಡಾದದ್ದೇ ಬಂತು, ಬಹಿಷ್ಕಾರ, ಫತ್ವಾಗಳು ಮುಂದುವರೆದವು!

ಇದೀಗ ‘ಭಾರತ್ ಮಾತಾ ಕೀ ಜೈ’ ಘೋಷಣೆಗೂ ಆ ಸೋಂಕು ತಗುಲಿಸಲಾಗುತ್ತಿದೆ! ನೆಹರೂ ತಮ್ಮ ‘ಡಿಸ್ಕವರಿ ಆಫ್ ಇಂಡಿಯಾ’ ಕೃತಿಯಲ್ಲಿ ‘ಭಾರತ್ ಮಾತಾ ಕೀ ಜೈ’ ಘೋಷಣೆಯ ಕುರಿತು ಬರೆದಿದ್ದಾರೆ. ‘ನಾನು ಹಳ್ಳಿಗಳಿಗೆ ಭೇಟಿಕೊಟ್ಟಾಗ, ಎಲ್ಲೆಡೆಯೂ ಭಾರತ್ ಮಾತಾ ಕೀ ಜೈ ಘೋಷಣೆ ಕೇಳಿಬರುತ್ತಿತ್ತು.

ಒಮ್ಮೆ ಹಳ್ಳಿಗರನ್ನು ಕೇಳಿದೆ. ನೀವು ಜಯವಾಗಲಿ ಎನ್ನುತ್ತಿರುವುದು ಯಾರಿಗೆ? ಭಾರತ ಮಾತೆ ಎಂದರೆ ಯಾರು? ತಕ್ಷಣವೇ ಕಸುವುಳ್ಳ ಜಾಟ್ ತರುಣನೊಬ್ಬ ಎದ್ದು ನಿಂತು, ‘ಭಾರತ ಮಾತೆ ಎಂದರೆ ನಮ್ಮನ್ನು ಪೋಷಿಸುವ ಈ ನಮ್ಮ ನೆಲ, ತೊರೆ, ಬೆಟ್ಟ, ಗುಡ್ಡ, ಕಾಡು’ ಎಂದು ಉತ್ತರಿಸಿದ. ಇದೆಲ್ಲವೂ ಹೌದು. ಜೊತೆಗೆ ನಮ್ಮೆಲ್ಲರನ್ನೂ ಒಳಗೊಂಡ ಈ ದೇಶದ ಜನ ಕೂಡ. ಭಾರತ ಮಾತೆಗೆ ಜಯವಾಗಲಿ ಎಂದರೆ, ನಮ್ಮೆಲ್ಲರಿಗೂ ಜಯವಾಗಲಿ ಎಂದೇ ಅರ್ಥ ಎಂದು ವಿವರಿಸಿದೆ’ ಎಂಬುದನ್ನು ಉಲ್ಲೇಖಿಸಿದ್ದಾರೆ.

ಈ ಹೃದಯ ವೈಶಾಲ್ಯ ಓವೈಸಿ ಅಂತಹ ಸಂಕುಚಿತ ಮನಸ್ಸುಗಳಿಗೆ ಸಿದ್ಧಿಸುವುದಿಲ್ಲವೇ? ಅಷ್ಟಕ್ಕೂ ಓವೈಸಿ ಪ್ರತಿನಿಧಿಸುವ ಎಂಐಎಂ ಪಕ್ಷದ ಹಿನ್ನೆಲೆ ತಿಳಿದಿದೆಯೇ? ಹೈದರಾಬಾದ್ ಪ್ರಾಂತ್ಯವನ್ನು ಪಾಕಿಸ್ತಾನದ ಭಾಗವಾಗಿಸಲು ತನ್ನದೇ ಸೇನೆ ಕಟ್ಟಿ ನಿಜಾಮರ ಮೇಲೆ ಒತ್ತಡ ತಂದ ಕ್ವಾಸೀಮ್ ರಜ್ವಿ ಹುಟ್ಟುಹಾಕಿದ ಸಂಘಟನೆ ಎಂಐಎಂ.

ಹೈದರಾಬಾದ್ ಭಾರತದ ಭಾಗವಾಗುತ್ತಿದ್ದಂತೆಯೇ, ಪಾಕಿಸ್ತಾನಕ್ಕೆ ಫಲಾಯನಗೈದ ಕ್ವಾಸೀಮ್, ಸಂಘಟನೆಯ ಚುಕ್ಕಾಣಿಯನ್ನು ಓವೈಸಿಯ ಅಜ್ಜನಿಗೆ ಒಪ್ಪಿಸಿ ಹೋದ. ಈ ಹಿನ್ನೆಲೆ ಹೊಂದಿರುವ ಪಕ್ಷದ ನಾಯಕನ ಬಾಯಲ್ಲಿ ಒಡಕಲ್ಲದೇ ಒಗ್ಗಟ್ಟಿನ, ಸಾಮರಸ್ಯದ ಮಾತು ನಿರೀಕ್ಷಿಸಬಹುದೇ? ಬಿಡಿ, ಅಡಿಗರು ಎಂದೋ ತಮ್ಮ ಕವನದಲ್ಲಿ ಈ ಬಗ್ಗೆ ಬರೆದಾಗಿದೆ ‘ನೀರಿನಲ್ಲೆಂದಿಗೂ ಕಲ್ಲೆಣ್ಣೆ ಬೆರೆಯುವುದಿಲ್ಲ. ಚಿಗುರುತ್ತಲೇ ಇರುವ ಪುರಾತನವಟಕ್ಕೆ ಲಾಠಿ ಕಸಿ ಕಟ್ಟಲಾಗುವುದಿಲ್ಲ!’

Comments
ಈ ವಿಭಾಗದಿಂದ ಇನ್ನಷ್ಟು
ಕ್ಸಿ ಜಿನ್ ಪಿಂಗ್ ಮತ್ತೊಬ್ಬ ಮಾವೊ ಆಗುವರೇ?

ಸೀಮೋಲ್ಲಂಘನ
ಕ್ಸಿ ಜಿನ್ ಪಿಂಗ್ ಮತ್ತೊಬ್ಬ ಮಾವೊ ಆಗುವರೇ?

9 Mar, 2018
ಸಮರೋತ್ಸಾಹದ ನಡುವೆ ಸಂಧಾನ ಅರ್ಥಹೀನ

ಸೀಮೋಲ್ಲಂಘನ
ಸಮರೋತ್ಸಾಹದ ನಡುವೆ ಸಂಧಾನ ಅರ್ಥಹೀನ

23 Feb, 2018
ಪೆಡಸು ಮೇಲ್ದುಟಿ ಜನರ ಒಂಟಿತನದ ಸಂಕಟ

ಸೀಮೋಲ್ಲಂಘನ
ಪೆಡಸು ಮೇಲ್ದುಟಿ ಜನರ ಒಂಟಿತನದ ಸಂಕಟ

9 Feb, 2018
ಎಂದೂ ಮುಗಿಯದ ಕದನ, ಏನೀ ಮೂರ್ಖತನ?

ಸೀಮೋಲ್ಲಂಘನ
ಎಂದೂ ಮುಗಿಯದ ಕದನ, ಏನೀ ಮೂರ್ಖತನ?

26 Jan, 2018
ವೇಲ್ಸ್ ರಾಜಕುಮಾರನಿಗೆ ಸಿಕ್ಕಳಲ್ಲ ಸಿಂಡ್ರೆಲಾ!

ಸೀಮೋಲ್ಲಂಘನ
ವೇಲ್ಸ್ ರಾಜಕುಮಾರನಿಗೆ ಸಿಕ್ಕಳಲ್ಲ ಸಿಂಡ್ರೆಲಾ!

29 Dec, 2017