ಇರಲಿ ಲಯಬದ್ಧ ನಡೆ, ಸಮಷ್ಟಿಗಾನದೆಡೆ

ಗಾಂಧಿ ಮತ್ತು ಅಂಬೇಡ್ಕರ್ ಎಂಬ ನೈತಿಕ ಬಲವನ್ನಾದರೂ ತಾಜಾ ಆಗಿ ಉಳಿಸಿಕೊಳ್ಳುವ ಪ್ರಯತ್ನ ಆಗಬೇಕಿದೆ.

ಇರಲಿ ಲಯಬದ್ಧ ನಡೆ, ಸಮಷ್ಟಿಗಾನದೆಡೆ

ಗಾಂಧಿ ಮತ್ತು ಅಂಬೇಡ್ಕರ್ ಎಂಬ ನೈತಿಕ ಬಲವನ್ನಾದರೂ ತಾಜಾ ಆಗಿ ಉಳಿಸಿಕೊಳ್ಳುವ ಪ್ರಯತ್ನ ಆಗಬೇಕಿದೆ.

ಇತ್ತೀಚೆಗೆ ಯಾತ್ರಾ ಡಾಟ್ ಕಾಮ್ ಬಿಡುಗಡೆಗೊಳಿಸಿದ ಜಾಹೀರಾತನ್ನು ನೀವು ಗಮನಿಸಿರಬಹುದು. ವಿಮಾನ ನಿಲ್ದಾಣದಲ್ಲಿ ಏರ್‌ಲೈನ್ ಒಂದರ ಚೆಕ್ ಇನ್ ಕೌಂಟರಿಗೆ ಬಂದ ತರುಣ, ತನಗೆ ಕಿಟಕಿ ಬದಿ ಸೀಟು ಬೇಕೆಂದು ಕೇಳುತ್ತಾನೆ. ‘ಕಿಟಕಿ ಬದಿಯ ಸೀಟುಗಳೆಲ್ಲವೂ ಆಗಲೇ ಭರ್ತಿಯಾಗಿವೆ’ ಎಂಬ ಉತ್ತರ ಸಿಬ್ಬಂದಿಯಿಂದ ಬಂದಾಗ, ಕೋಪಗೊಂಡ ಆತ ಅಲ್ಲೇ ಇದ್ದ ಮೈಕ್ ಹಿಡಿದು, ಭಾಷಣವನ್ನೇ ಆರಂಭಿಸುತ್ತಾನೆ ‘ಸಹೋದರ ಸಹೋದರಿಯರೇ, ನಮ್ಮ ಆಯ್ಕೆಯ ಸೀಟು ಪಡೆದುಕೊಳ್ಳುವ ಸ್ವಾತಂತ್ರ್ಯವೂ ನಮಗೆ ಬೇಡವೇ? ಹಮೇ ಚಾಯಿಯೇ ಆಜಾದಿ, ಅಪ್ನೇ ಸೀಟ್ ಚುನುನೇಕಿ ಆಜಾದಿ, ವಿಂಡೋ ಸೀಟ್ ಕೀ ಆಜಾದಿ, ಲಂಬಿ ಲೈನ್ ಸೇ ಆಜಾದಿ’ ಎಂಬ ಘೋಷಣೆ ಸಾಗುತ್ತದೆ. ‘ಘೋಷಣೆ ಕೂಗುವುದು ಬಿಡಿ, ವಿವೇಕ ಬಳಸಿ’ ಎಂಬ ಸಾಲಿನೊಂದಿಗೆ ಜಾಹೀರಾತು ಮುಗಿಯುತ್ತದೆ. 

ಜಾಹೀರಾತು ಆಕರ್ಷಕ ಎನಿಸಿದರೂ, ಅದು ಇತ್ತೀಚಿನ ದಿನಗಳಲ್ಲಿ ನಮ್ಮ ಯೂನಿವರ್ಸಿಟಿ ಕ್ಯಾಂಪಸ್ಸುಗಳಲ್ಲಿ ನಡೆಯುತ್ತಿರುವ ಚಳವಳಿ, ಆಂದೋಲನಗಳ ಅಣಕದಂತೆಯೂ ಕಾಣುತ್ತದೆ. ನಮ್ಮ ಆಂದೋಲನ, ಹೋರಾಟ, ಚಳವಳಿಗಳ ಧ್ಯೇಯ, ಗುರಿ ಮತ್ತು ಮಾರ್ಗ ಹೇಗೆ ಬದಲಾಗುತ್ತಿದೆ, ಒಂದು ಅರ್ಥದಲ್ಲಿ ಈ ಎಲ್ಲವೂ ಹೇಗೆ ಬೆಲೆ ಕಳೆದುಕೊಳ್ಳುತ್ತಿವೆ ಎನ್ನುವುದನ್ನು ವಿಮರ್ಶಿಸುವುದಕ್ಕೂ ನೆಪವಾಗುತ್ತದೆ. ದುರ್ದೈವ, ಒಂದು ಸಮರ್ಥ ಆಂದೋಲನವನ್ನು ರೂಪಿಸಲು ಸಾಧ್ಯವೇ ಇಲ್ಲವೇನೋ ಎಂದು ನಿರಾಶರಾಗುವ ಸ್ಥಿತಿಯಲ್ಲಿ ನಾವಿದ್ದೇವೆ. ಕಳೆದ ಒಂದು ದಶಕದಲ್ಲಿ ಬದಲಾವಣೆಯ ಕನಸು ಬಿತ್ತಿ, ಬೆಳೆದಷ್ಟೇ ವೇಗವಾಗಿ ಅವಸಾನ ಕಂಡ ಚಳವಳಿಗಳು ಆ ನಿರಾಶೆಗೆ ಕಾರಣ. ಜೊತೆಗೆ ಸ್ವಾರ್ಥರಹಿತ, ಅಧಿಕಾರ ರಾಜಕಾರಣವನ್ನು ಅಂಟಿಸಿಕೊಳ್ಳದ, ಧ್ಯೇಯನಿಷ್ಠ ಆಂದೋಲನಗಳು ಅಲ್ಪಾಯುಷಿ ಎಂಬುದೂ ಸಾಬೀತಾಗುತ್ತಾ ಬಂದಿದೆ.

ಹಾಗಾದರೆ ನಮ್ಮ ಚಳವಳಿ, ಆಂದೋಲನಗಳು ದುರ್ಬಲಗೊಳ್ಳುತ್ತಾ ಅಪಹಾಸ್ಯಕ್ಕೆ, ಅಪನಂಬಿಕೆಗೆ ಗುರಿಯಾಗುತ್ತಿರುವುದೇಕೆ? ಬೇರೆಯದೇ ಹಿನ್ನೆಲೆಯಲ್ಲಿ ನೋಡಬೇಕೆನಿಸುತ್ತದೆ. ಬಹುಶಃ ಕಳೆದ ಶತಮಾನದಲ್ಲಿ ಭಾರತದ ರಾಜಕೀಯ, ಸಾಮಾಜಿಕ ಚಳವಳಿಗಳನ್ನು ನಿರ್ದೇಶಿಸಿದ ಬಹುಮುಖ್ಯ ಚಾಲನಾ ಶಕ್ತಿಗಳು ಎಂದರೆ ಮಹಾತ್ಮ ಗಾಂಧಿ ಮತ್ತು ಡಾ. ಅಂಬೇಡ್ಕರ್. ಸ್ವಾತಂತ್ರ್ಯ ಚಳವಳಿಗೆ ಅಹಿಂಸೆ, ಸತ್ಯಾಗ್ರಹದ ಭೂಮಿಕೆ ನಿರ್ಮಿಸಿಕೊಟ್ಟ ಗಾಂಧೀಜಿ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಜಕೀಯ ವ್ಯವಸ್ಥೆಯ ಅಪಸವ್ಯ, ಭ್ರಷ್ಟಾಚಾರ ವಿರೋಧಿ ಚಳವಳಿಗಳ ಪ್ರೇರಕ ಶಕ್ತಿಯಾಗಿ ಮುಂದುವರೆದರು. ಸಾಮಾಜಿಕ ಅಸಮಾನತೆ ವಿರೋಧಿಸಿ ಶೋಷಿತರಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ವೃದ್ಧಿಸುವ ಹೋರಾಟಕ್ಕೆ ಚಾಲನೆ ಕೊಟ್ಟ ಅಂಬೇಡ್ಕರ್, ನೊಂದವರ, ದುರ್ಬಲರ ನೈತಿಕ ಬಲವಾಗಿ ಉಳಿದುಕೊಂಡರು.

ಆದರೆ ಬರಬರುತ್ತಾ ಹೀಗೆ ಸ್ಫೂರ್ತಿಯಾಗಿ, ಶಕ್ತಿಯಾಗಿ, ನೈತಿಕ ಬಲವಾಗಿ ನಿಂತ ಮಹನೀಯರ ವ್ಯಕ್ತಿತ್ವವನ್ನು ಕುಬ್ಜಗೊಳಿಸುವ, ಅವರ ನಡೆ, ಸಿದ್ಧಾಂತ, ತತ್ವಗಳನ್ನು ಅಪವ್ಯಾಖ್ಯಾನಿಸುವ ಹುನ್ನಾರಗಳು ನಡೆದವು. ಗಾಂಧಿ ಅವರಂತೂ ಮರಣಾನಂತರ ಅನೇಕ ಚರ್ಚೆ, ವಾದ, ವಿವಾದಗಳ ಹೂರಣವಾದರು. ಅಹಿಂಸೆ, ಸತ್ಯಾಗ್ರಹ, ಉಪವಾಸವನ್ನು ದುರ್ಬಲರ ಹೋರಾಟದ ಮಾರ್ಗ ಎಂಬಂತೆಯೇ ಬಿಂಬಿಸಲಾಯಿತು. ಭಾರತದ ಪ್ರಚಲಿತ ಸಮಸ್ಯೆಗಳಿಗೆಲ್ಲ ಗಾಂಧಿ ತೆಗೆದುಕೊಂಡ ನಿರ್ಧಾರಗಳೇ, ಅನುಸರಿಸಿದ ಮಾರ್ಗವೇ ಕಾರಣ ಎಂದು ಬೊಟ್ಟು ಮಾಡಲಾಯಿತು. ಒಳಿತು ಕೆಡುಕುಗಳ ಜವಾಬ್ದಾರಿಯನ್ನು ನೇತಾರ ಹೊರಬೇಕಾದ್ದು ಸಹಜವೇ ಆದರೂ ಇಂತಹ ಆರೋಪ, ಮೂದಲಿಕೆಗಳು ಗಾಂಧಿ ಅವರ ಒಟ್ಟು ಚಿಂತನೆಯ ಹೊಳಪನ್ನು ಕುಂದಿಸಿದವು.

ಅಂಬೇಡ್ಕರ್ ವಿಷಯದಲ್ಲಿ ಅವರ ವ್ಯಕ್ತಿತ್ವವನ್ನು ಕೀಳಂದಾಜಿಸುವ ಪ್ರಯತ್ನಗಳು ಅಷ್ಟಾಗಿ ಆಗಲಿಲ್ಲ. ಆದರೆ ಅವರ ಒಟ್ಟು ಚಿಂತನೆಗಳನ್ನು ಸಂಕುಚಿತಗೊಳಿಸಿ, ಒಂದು ಜಾತಿಗೆ ಸೀಮಿತಗೊಳಿಸುವ, ಅವರು ಮಂಡಿಸಿದ ತಾತ್ವಿಕ ವಿಚಾರಗಳನ್ನು ತಿರುಚಿ ಪ್ರಚುರಪಡಿಸುವ ಪ್ರಯತ್ನಗಳು ನಡೆದವು. ರಾಜಕೀಯ ಪಕ್ಷಗಳಂತೂ ಅಂಬೇಡ್ಕರರನ್ನು ದಲಿತ ಮತಬ್ಯಾಂಕಿನ ಕೀಲಿಕೈ ಎಂಬಂತೆಯೇ ಪರಿಗಣಿಸಿದವು. ದಲಿತ ಪರ ಎಂದರೆ ಬ್ರಾಹ್ಮಣ ವಿರೋಧಿ ಎಂದು ತೋರಿಸಲಾಯಿತು. ಇತ್ತ ಶೋಷಿತರ ನಾಯಕತ್ವವನ್ನು ವಹಿಸಿದ ಮುಖಂಡರು ಅಂಬೇಡ್ಕರ್ ಮಾರ್ಗದಿಂದ ಆಚೀಚೆ ಬಂದು ಕಾಲಕ್ಕೆ ತಕ್ಕಹಾಗೆ, ಸ್ವಾರ್ಥದ ಬೇಳೆಗೆ ಶಾಖ ಕೊಟ್ಟರು. ಇಂತಹ ಪ್ರಯತ್ನಗಳು ಹಲವು ಮಹನೀಯರ ವಿಷಯದಲ್ಲಿ ಈ ಹಿಂದೆಯೂ ಆಗಿದ್ದವು.

ಭಾರತದಲ್ಲಿ ಸಾಮಾಜಿಕ ಜಾಗೃತಿಯ ಹೋರಾಟಗಳು ರಭಸ ಪಡೆದದ್ದು ಆಂಗ್ಲ ಶಿಕ್ಷಣದಿಂದ ಎನ್ನುವುದು ಸರ್ವವಿದಿತ. ವಿಷ್ಣು ಶಾಸ್ತ್ರಿಯವರು ಇಂಗ್ಲಿಷ್ ಶಿಕ್ಷಣವನ್ನು ‘ಸಿಂಹಿಣಿಯ ಹಾಲು’ ಎಂದಿದ್ದರು. ಆ ‘ಸಿಂಹಿಣಿಯ ಹಾಲು’ ಅನೇಕರ ಮನಸ್ಸಿನಲ್ಲಿ ಸಾಮಾಜಿಕ ಕ್ರಾಂತಿಯ ಕಿಡಿ ಹೊತ್ತಿಸಿತು. ಹಲವು ಸಮಾಜ, ಪರಿಷತ್, ಸಂಸ್ಥೆಗಳು ಸಮಾಜ ಸುಧಾರಣೆ ಉದ್ದೇಶದೊಂದಿಗೆ ಆರಂಭವಾದವು. ಮುಖ್ಯವಾಗಿ ಗುರುತಿಸಬಹುದಾದ ಮೂರು ತಾತ್ವಿಕ ಸುಧಾರಣಾ ಮಾರ್ಗಗಳು ಭಾರತೀಯರ ಎದುರು ತೆರೆದುಕೊಂಡವು. ನ್ಯಾಯಮೂರ್ತಿ ರಾನಡೆಯವರ ಅಧ್ಯಾತ್ಮನಿಷ್ಠ, ಉದಾರಮತವಾದ ಸುಧಾರಣಾ ಮಾರ್ಗ, ತಿಲಕರ ಸಂಪ್ರದಾಯನಿಷ್ಠ, ರಾಷ್ಟ್ರವಾದದ ಜೊತೆ ಬೆಸೆದುಕೊಂಡ ಸುಧಾರಣಾ ಮಾರ್ಗ, ಮಹಾತ್ಮ ಫುಲೆ ಅವರ ಕ್ರಾಂತಿಕಾರಿ ಸುಧಾರಣಾ ಮಾರ್ಗ.

‘ಸ್ವಾತಂತ್ರ್ಯ ಮೊದಲೋ, ಸಾಮಾಜಿಕ, ರಾಜಕೀಯ ಸುಧಾರಣೆಗಳು ಮೊದಲೋ’ ಎಂಬ ಚರ್ಚೆಗಳು ನಡೆಯುವಾಗ ರಾನಡೆ ಸಾಮಾಜಿಕ ಕ್ರಾಂತಿಗಿಂತ ಮಿಗಿಲಾಗಿ ಉತ್ಕ್ರಾಂತಿಗೆ (ಬದಲಾವಣೆ) ಮಹತ್ವ ಕೊಟ್ಟರು. ಸುಧಾರಣೆಗಳ ವೇಗ ನಿಧಾನವಾದರೂ, ಅವು ನಿರ್ದೋಷವಾದ ತಳಹದಿಯ ಮೇಲಿದ್ದಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂಬುದು ಅವರ ನಿಲುವಾಗಿತ್ತು. ‘ಭಗವಂತನೇನಾದರೂ ಅಸ್ಪೃಶ್ಯತೆಗೆ ಮನ್ನಣೆ ನೀಡಿದ್ದೇ ಆದಲ್ಲಿ, ನಾನು ಆ ಭಗವಂತನಿಗೇ ಮನ್ನಣೆ ನೀಡುವುದಿಲ್ಲ’ ಎಂದಿದ್ದ ತಿಲಕರು, ‘ನಾವು ಸ್ವಾತಂತ್ರ್ಯ ಕಳೆದುಕೊಂಡದ್ದೇ ನಮ್ಮ ಸಮಾಜದ ಪತನಕ್ಕೆ ಕಾರಣ, ಸಾಮಾಜಿಕ ಸುಧಾರಣೆಗಳಿಗೆ ತ್ವರಿತವಾಗಿ ಹೆಜ್ಜೆ ಇಟ್ಟರೆ, ಸಮಾಜ ವಿಘಟಿತವಾಗಿ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದ ಶಕ್ತಿ ಕುಂದಬಹುದು’ ಎಂಬ ಆತಂಕ ವ್ಯಕ್ತಪಡಿಸಿದ್ದರು.

ಹಾಗಾಗಿ ರಾನಡೆ ಮತ್ತು ತಿಲಕರ ಮಾರ್ಗದಲ್ಲಿ ತ್ವರಿತಗತಿಯ ಬದಲಾವಣೆಗಳು ಸಾಧ್ಯವಿಲ್ಲ ಎನಿಸಿತ್ತು. ಆಗ ‘ಶೂದ್ರಾತಿಶೂದ್ರರ ಏಳ್ಗೆಯೇ ಜೀವನದ ಗುರಿ’ ಎಂಬುದನ್ನು ಖಚಿತ ಮಾಡಿಕೊಂಡಿದ್ದ ಜ್ಯೋತಿಬಾ ಫುಲೆ, ಆ ನಿಟ್ಟಿನಲ್ಲಿ ರಭಸದಿಂದ ದಾಪುಗಾಲು ಇಟ್ಟರು. ಫುಲೆ ಮಾತಿನ ಮಲ್ಲ ಆಗಿರಲಿಲ್ಲ. ಪರರಿಗೆ ಉಪದೇಶ ಮಾಡುವುದು ಅವರ ಜಾಯಮಾನವಲ್ಲ. ನುಡಿದಂತೆ ನಡೆಯುವ ಜೀವನ ಮೌಲ್ಯಕ್ಕೆ ಆದ್ಯತೆ ಕೊಟ್ಟರು. ಮಹಿಳಾ ವಿಮುಕ್ತಿಯ ಚಿಂತನೆಗಳಿಗೆ ಕೃತಿರೂಪ ಕೊಟ್ಟರು. ತನ್ನ ಪತ್ನಿ ಸಾವಿತ್ರಿ ಬಾಯಿಯವರನ್ನು ಶಿಕ್ಷಿತರನ್ನಾಗಿಸಿದರು. ‘ಬ್ರಾಹ್ಮಣರಂತೆ ನೀವು ಶಿಕ್ಷಿತರಾಗಿ, ಅವರ ಸ್ಥಾನ ಗಳಿಸಿ’ ಎಂದು ಸಮಾಜ ಕಡೆಗಣಿಸಿದ ಸಮುದಾಯವನ್ನು ಹುರಿದುಂಬಿಸಿದರು. ಸತ್ಯಶೋಧಕ ಸಮಾಜ ಆರಂಭಿಸಿದರು.

ಹೀಗೆ ಅಲ್ಪಾವಧಿಯಲ್ಲಿ ಮಹತ್ವದ ಬದಲಾವಣೆ ತಂದ ಫುಲೆ ಕ್ರಾಂತಿ, ಅವರ ನಂತರ ಅಡ್ಡದಾರಿ ಹಿಡಿಯಿತು. ಜ್ಯೋತಿಬಾ ಬೆಳೆಸಿದ್ದ ಮಾನವೀಯತೆಯ ತೋಟಕ್ಕೆ ಅವರ ಅನುಯಾಯಿಗಳು ಮತ್ತು ರಾಜಕೀಯ ಆಸಕ್ತ ನಾಯಕರು ಬ್ರಾಹ್ಮಣೇತರವಾದದ ರೋಗಾಣು ತಗುಲಿಸಿದರು. ‘ಜ್ಯೋತಿಬಾ ಸಮಗ್ರ’ ಗ್ರಂಥದ ಮುನ್ನುಡಿಯಲ್ಲಿ ಗೋಪಾಲ ಗೋವಿಂದ ಅಧಿಕಾರಿಯವರು ‘ಜ್ಯೋತಿಬಾ ಬ್ರಾಹ್ಮಣ ಜಾತಿಯ ವಿರುದ್ಧ ಆಂದೋಲನ ನಡೆಸಿದುದು ನಿಜವೇ. ಅವರೇ ಈ ಆಂದೋಲನದ ಜನಕ ಎಂದರೂ ತಪ್ಪಲ್ಲ. ಆದರೆ ಅವರು ಮೊಳಗಿಸಿದ್ದು ಬ್ರಾಹ್ಮಣ್ಯದ ವಿರುದ್ಧದ ಶಂಖನಾದ. ಬ್ರಾಹ್ಮಣನೆಂಬ ಕಾರಣಕ್ಕಾಗಿ ಅವರು ಯಾರನ್ನೂ ದ್ವೇಷಿಸಲಿಲ್ಲ. ಅವರ ಮಿತ್ರರಾಗಿದ್ದವರಲ್ಲಿ ಅನೇಕರು ಬ್ರಾಹ್ಮಣರೇ. ಸರ್ ರಾಮಕೃಷ್ಣ ಭಂಡಾರಕರ್ ಅವರಿಗೆ ಸಹಪಾಠಿಯಾಗಿದ್ದವರು. ನ್ಯಾಯಮೂರ್ತಿ ರಾನಡೆ, ಜ್ಯೋತಿಬಾರನ್ನು ಹೊಗಳುತ್ತಿದ್ದರು. ತಿಲಕರು ಜ್ಯೋತಿಬಾ ಸಂಸ್ಥೆಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು.

ಜ್ಯೋತಿಬಾ ವಿದ್ಯಾಲಯ ಆರಂಭಿಸಿದಾಗ ಅದಕ್ಕೆ ಜಾಗ ಒದಗಿಸಿದವರು ಬ್ರಾಹ್ಮಣರು’ ಎಂಬುದನ್ನು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸ್ವತಃ ಅಂಬೇಡ್ಕರ್, ಸತ್ಯಶೋಧಕ ಸಮಾಜದ ಹದಿನಾರನೇ ಅಧಿವೇಶನಕ್ಕೆ ಕಳುಹಿಸಿದ್ದ ಸಂದೇಶದಲ್ಲಿ ‘ಬ್ರಾಹ್ಮಣೇತರ ವರ್ಗವು ಮಹಾತ್ಮಾ ಫುಲೆಯವರನ್ನು ಪೂರಾ ಮರೆತಿರುವುದಷ್ಟೇ ಅಲ್ಲ, ಅವರ ತತ್ವಜ್ಞಾನದ ವಿಷಯದಲ್ಲಿ ಭಾರೀ ನಾಚಿಕೆಗೇಡಿನ ವಂಚನೆಯನ್ನೇ ಮಾಡಿದೆ’ ಎಂದು ನೊಂದು ನುಡಿದಿದ್ದರು. ಇಂತಹ ವಂಚನೆ ಅಂಬೇಡ್ಕರ್ ವಿಷಯದಲ್ಲೂ ಆಯಿತೇ? ಜ್ಞಾನದಾಹಿ ಅಂಬೇಡ್ಕರ್ ವ್ಯಕ್ತಿತ್ವದ ಔನ್ನತ್ಯ, ಅವರ ಚಿಂತನೆಗಳಲ್ಲಿದ್ದ ವಿಶಾಲ ದೃಷ್ಟಿಕೋನವನ್ನು ಪಕ್ಕಕ್ಕೆ ತಳ್ಳಿ ಕೇವಲ ಒಂದು ಚೌಕಟ್ಟಿನಲ್ಲಷ್ಟೇ ಅವರನ್ನಿಟ್ಟು ನೋಡುವುದು ವಂಚನೆಯಲ್ಲದೆ ಮತ್ತೇನು? ನಮ್ಮ ಊರು, ಕೇರಿಯ ಹಲೆವೆಡೆ ಸಾರ್ವಜನಿಕ ಸ್ಥಳಗಳಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ಕಾಣಬಹುದಾದರೂ ಅವರ ಸುತ್ತ ಹಲವು ಗೋಡೆ ಎದ್ದಂತೆ ಕಾಣುತ್ತದೆ.

ಗಾಂಧೀಜಿ ಅವರೊಂದಿಗಿದ್ದ ವೈಚಾರಿಕ ಭಿನ್ನಾಭಿಪ್ರಾಯ, ಬ್ರಾಹ್ಮಣ್ಯದೆಡೆಗಿದ್ದ ತಾತ್ವಿಕ ವಿರೋಧವನ್ನೇ ವೈಭವೀಕರಿಸಿ, ಅಪವ್ಯಾಖ್ಯಾನಿಸಿದ್ದರ ಪರಿಣಾಮ ಒಂದು ವರ್ಗ ಅಂಬೇಡ್ಕರ್ ಅವರಿಂದ ದೂರವೇ ಉಳಿಯುವಂತಾಯಿತು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಡಾಕ್ಟರೇಟ್ ಪಡೆದ ಭಾರತದ ಮೊದಲ ರಾಜಕೀಯ ಧುರೀಣ ಎನಿಸಿಕೊಂಡಿದ್ದ ಅಂಬೇಡ್ಕರ್ ಒಳಗಿದ್ದ ಅರ್ಥಶಾಸ್ತ್ರಜ್ಞ ಯಾರಿಗೂ ಗೋಚರಿಸಲೇ ಇಲ್ಲ. ರಾಷ್ಟ್ರವಾದ ಎತ್ತಿ ಹಿಡಿದು ಅವರು ಆಡಿದ ಮಾತುಗಳಂತೂ ಮರೆಗೆ ಸರಿದವು. ಕೊನೆಗೆ ಉಳಿದದ್ದಿಷ್ಟೇ, ಅಂಬೇಡ್ಕರ್ ಎಂದರೆ ‘ಸಂವಿಧಾನ ಕರ್ತೃ’, ‘ದಲಿತ ನಾಯಕ’. ಹೀಗೆ ಅಂಬೇಡ್ಕರ್ ವ್ಯಕ್ತಿತ್ವವನ್ನು ಸಂಕುಚಿತಗೊಳಿಸಿ ಬಿಂಬಿಸುವ ಪ್ರಯತ್ನಗಳು ಪ್ರಜ್ಞಾಪೂರ್ವಕವಾಗಿಯೇ ಆದವು.

ಅಂತಹ ಕುಚೋದ್ಯಕ್ಕೆ ಸಣ್ಣ ಉದಾಹರಣೆಯೆಂದರೆ, ಬಾಬಾಸಾಹೇಬರ ಸುತ್ತಲಿದ್ದವರಿಗೆ ಅಂಬೇಡ್ಕರ್ ಕಾಲಾನಂತರ, ಅವರ ಬ್ರಾಹ್ಮಣ ಪತ್ನಿ ಡಾ. ಸವಿತಾ ಬೇಡದ ಅತಿಥಿಯಾದರು. ತಮ್ಮ ಪತ್ನಿ ಡಾ. ಸವಿತಾ ತಮ್ಮ ಕೊನೆಯ ದಿನಗಳಲ್ಲಿ ಮಾಡಿದ್ದ ಸೇವೆ, ಶುಶ್ರೂಷೆ ಮತ್ತು ವಹಿಸಿದ್ದ ಕಾಳಜಿಯ ಬಗ್ಗೆ ಅಂಬೇಡ್ಕರ್ ‘ದಿ ಬುದ್ಧ ಅಂಡ್ ಹಿಸ್ ಧಮ್ಮ’ ಕೃತಿಗೆ ಬರೆದ ಮುನ್ನುಡಿಯಲ್ಲಿ ಪ್ರಶಂಸಿಸಿದ್ದರು. 1956ರ ಮಾರ್ಚ್ 15ರಂದು ಬರೆದ ಆ ಮುನ್ನುಡಿಯನ್ನು ನಂತರ ಕೈಬಿಡಲಾಯಿತು! 25 ವರ್ಷಗಳ ತರುವಾಯ ‘Rare prefaces written by Dr. Ambedkar’ ಕೃತಿ ಬಂದಾಗಲಷ್ಟೇ ಆ ಬರಹ ಓದಲು ಸಿಕ್ಕಿತು. ಅಂಬೇಡ್ಕರ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ದತ್ತೋಪಂತ ಠೇಂಗಡಿ, ಅಂಬೇಡ್ಕರ್ ಕುರಿತ ತಮ್ಮ ಕೃತಿಯಲ್ಲಿ ‘ಬಾಬಾಸಾಹೇಬರು ಹುಟ್ಟುಹಾಕಿದ ಕ್ರಾಂತಿಯನ್ನು ಕೇವಲ ದಲಿತ ಕ್ರಾಂತಿಯಾಗಿ ತಿಳಿದಲ್ಲಿ, ಅವರ ಮಹಾನತೆ ಮತ್ತು ಜೀವನ ಕಾರ್ಯವನ್ನು ಕೇವಲ ದಲಿತರ ಮಡಿಲಿಗಷ್ಟೇ ಸೀಮಿತಗೊಳಿಸಿದಂತಾಗುತ್ತದೆ.

ಅವರು ಸಂಪೂರ್ಣ ಭಾರತೀಯ ಸಮಾಜದ ಸರ್ವತೋಮುಖ ಕ್ರಾಂತಿಯ ಸಂಕೇತವಾಗಿದ್ದವರು. ‘ಮೂಕನಾಯಕ’ ಮತ್ತು ‘ಬಹಿಷ್ಕೃತ ಭಾರತ’ದಲ್ಲಿನ ಅವರ ಲೇಖನಗಳಿಂದ ಅವರ ಇಂತಹ ವ್ಯಾಪಕ ಭೂಮಿಕೆಯ ಅರಿವಾಗುತ್ತದೆ. ಅಸ್ಪೃಶ್ಯತೆ ಕೇವಲ ಆ ವರ್ಗದವರದಷ್ಟೇ ಸಮಸ್ಯೆಯಲ್ಲ. ಅದು ಸಂಪೂರ್ಣ ಹಿಂದೂ ಸಮಾಜದ ಮತ್ತು ಭಾರತದ ರಾಷ್ಟ್ರೀಯ ಸಮಸ್ಯೆಯಾಗಿದೆ ಎನ್ನುತ್ತಿದ್ದವರು ಅವರು’ ಎಂದಿದ್ದಾರೆ. ಇದು ಮಹತ್ವದ ಮಾತು ಎನಿಸುತ್ತದೆ. ಕೊನೆಯದಾಗಿ, ಫ್ರಾಯರ್ ತನ್ನ ‘Pedagogy of the Oppressed’ ಕೃತಿಯಲ್ಲಿ ‘ಶೋಷಕರ ವಿರುದ್ಧ ಶೋಷಿತರು ದಂಗೆ ಎದ್ದಾಗಲೆಲ್ಲ ಎರಡು ಬಗೆಯ ನಾಯಕರು ಹುಟ್ಟಿಕೊಳ್ಳುತ್ತಾರೆ.

ಒಂದು- ಶೋಷಕರನ್ನು ಪೂರಾ ಮುಗಿಸಿಬಿಡಲು ಅಪೇಕ್ಷಿಸುವವರು. ಅವರ ನಡವಳಿಕೆ, ಜೀವನ ಮೌಲ್ಯ ಶೋಷಕರಿಗಿಂತ ಭಿನ್ನವಾಗಿರುವುದಿಲ್ಲ. ಕ್ರಾಂತಿಯೇನೋ ಸಫಲವಾಗುತ್ತದೆ. ಆದರೆ ಹೊಸ ಶೋಷಕರು ಹುಟ್ಟಿಕೊಳ್ಳುತ್ತಾರೆ. ಎರಡು- ಶೋಷಕರನ್ನು ತೊಲಗಿಸಿ, ಬದಲಾವಣೆ ತರಲು ಇಚ್ಛಿಸುವವರು. ಆಡಳಿತ ಕೈಗೆ ಬಂದಮೇಲೆ ಅಧಿಕಾರ ಲೋಭಕ್ಕೆ ಒಳಗಾಗದೇ ಹೊಸ ಸಮಾಜ ರಚನೆಗೆ ಮುಂದಾಗುವವರು. ಆದರೆ ಇಂತಹವರು ಕಡಿಮೆ’ ಎನ್ನುತ್ತಾನೆ. ಪ್ರಸ್ತುತ ಭಾರತದಲ್ಲಿ ಈ ಎರಡನೆಯ ಬಗೆಯ ನಾಯಕರನ್ನು ಭೂತಗಾಜಿನಲ್ಲಿ ಹುಡುಕಿ ನೋಡಬೇಕೇನೋ. ಹಾಗಾಗಿ ಕನಿಷ್ಠ, ಗಾಂಧಿ ಮತ್ತು ಅಂಬೇಡ್ಕರ್ ಎಂಬ ನೈತಿಕ ಬಲವನ್ನಾದರೂ ತಾಜಾ ಉಳಿಸಿಕೊಳ್ಳುವ ಪ್ರಯತ್ನ ಆಗಬೇಕಿದೆ. ಆಗಷ್ಟೇ ನಮ್ಮ ಆಂದೋಲನಗಳಿಗೆ ಹೊಸ ಹುರುಪು ದೊರೆತೀತು.

Comments