ಧಾರ್ಮಿಕ ನಿಷೇಧ ಮೀರುವ ಅದ್ಭುತ ರೂಪಕ

ಹೆದರದೇ ಇಟ್ಟ ಈ ಹೆಜ್ಜೆ ಮೊದಲಿನದೂ ಅಲ್ಲ ಕೊನೆಯದೂ ಅಲ್ಲ...

ಧಾರ್ಮಿಕ ನಿಷೇಧ ಮೀರುವ ಅದ್ಭುತ ರೂಪಕ

ಜಗತ್ತಿನಲ್ಲಿ ಹೆಣ್ಣುಮಕ್ಕಳ ಹೋರಾಟ ಎಲ್ಲಿ ನಡೆದರೂ ಅದರ ಗೊತ್ತುಗುರಿ ಸಮಾನತೆ. ಏಕೆಂದರೆ ಅವರು ಎಲ್ಲಾದರೂ ಇರಲಿ ಎಂತಾದರೂ ಇರಲಿ, ಅವರ ಸ್ಥಿತಿಗತಿಯ ನೆಲೆ ಎಂದೆಂದಿಗೂ ಅಸಮಾನತೆ. ಮೊನ್ನೆ ಭಾನುವಾರ ಜೆರುಸಲೇಮ್‌ನಲ್ಲಿ ‘ಪಶ್ಚಿಮ ಪ್ರಾಕಾರ’ ಎಂದು ಕರೆಯಲಾಗುವ ಪವಿತ್ರ ಸ್ಥಳದಲ್ಲಿ ಪುರುಷರಂತೆ ತಮಗೂ ಪ್ರಾರ್ಥನೆ ಮಾಡಲು ಅವಕಾಶ ಕೊಡಬೇಕೆಂದು ನೂರಾರು ಯೆಹೂದಿ ಹೆಣ್ಣುಮಕ್ಕಳು ಪ್ರತಿಭಟನೆ ನಡೆಸಿದರು. ಈಗ ಪುರುಷರು ಮಾತ್ರ ಪ್ರಾರ್ಥನೆ ಮಾಡಬಹುದಾದ ಆ ಸ್ಥಳದಲ್ಲೇ ನಾವೂ ಏಕೆ ಪ್ರಾರ್ಥನೆ, ಆಶೀರ್ವಚನ ನಡೆಸಬಾರದು ಎಂದು ಪ್ರಶ್ನಿಸಿದರು. ಪ್ರಾರ್ಥನೆ ಸಮಯದಲ್ಲಿ ಪುರುಷರು ಧರಿಸುವ ಶಾಲುಗಳನ್ನೇ ಸುತ್ತಿಕೊಂಡು ಧರ್ಮಗ್ರಂಥವನ್ನು ಪಠಿಸುತ್ತಾ ಅವರು ಸಮಾನತೆಗೆ ಆಗ್ರಹಿಸಿದರು. ಯೆಹೂದಿ ಧರ್ಮಗುರುಗಳು, ಸನಾತನವಾದಿಗಳು, ಅಟಾರ್ನಿ ಜನರಲ್ ಮುಂತಾದವರೆಲ್ಲ ಮಹಿಳೆಯರ ಈ ಪ್ರದರ್ಶನವನ್ನು ಎಂದಿನಂತೆ ವಿರೋಧಿಸಿದರು.

‘ವಿಮೆನ್ ಆಫ್ ದ ವಾಲ್’- ಪ್ರಾಕಾರದ ಮಹಿಳೆಯರು- ಎಂದೇ ತಮ್ಮ ಸಂಘಟನೆಗೆ ಹೆಸರಿಟ್ಟುಕೊಂಡಿರುವ ಇವರ ಬೇಡಿಕೆಗೆ ಬೆಳ್ಳಿಹಬ್ಬವೂ ಆಗಿಬಿಟ್ಟಿದೆ. ಅವರ ಈ ಪ್ರತಿಭಟನೆ, ಯೆಹೂದಿ ಧರ್ಮ ನಡೆಸುತ್ತಿರುವ ಹೋರಾಟದೊಳಗಿನ ಹೋರಾಟ. ಸುಮಾರು ಆರು ಶತಮಾನಗಳ ಇತಿಹಾಸವಿರುವ ಮುಂಬೈನ ಹಾಜಿ ಅಲಿ ದರ್ಗಾವನ್ನು ಪ್ರವೇಶಿಸಲು ಮತ್ತು ಮಜರ್-ಇ-ಷರೀಫ್ ಸ್ಪರ್ಶಿಸಲು ಮಹಿಳೆಯರಿಗೆ ಅವಕಾಶವಿಲ್ಲ. ದರ್ಗಾ ಪ್ರವೇಶಿಸಲು ಮಹಿಳೆಯರಿಗೂ ಸಮಾನ ಅವಕಾಶ ಇರಬೇಕು ಎಂದು ಆಗ್ರಹಿಸಿರುವ ‘ಹಾಜಿ ಅಲಿ ಫಾರ್ ಆಲ್’ ಎಂಬ ಸಂಘಟನೆ ಇನ್ನೆರಡು ದಿನಗಳಲ್ಲಿ (ಏ. 28) ಅದಕ್ಕೆ ಪ್ರಯತ್ನಿಸಲಿದೆ. ಧಾರ್ಮಿಕ ಸಮಾನತೆಗೆ ಒತ್ತಾಯಿಸುವ ಈ ಚಳವಳಿಯಲ್ಲಿ ವಿವಿಧ ಹೋರಾಟಗಳ ಹಿನ್ನೆಲೆಯಿರುವ ರಣರಾಗಿಣಿಯರು ಸೇರಿಕೊಂಡಿದ್ದಾರೆ.

ಆದರೆ ಇದನ್ನು ವಿರೋಧಿಸಿರುವ ಶಿವಸೇನೆಯ ಸದಸ್ಯ ಹಾಜಿ ಅರಾಫತ್ ಶೇಖ್ ‘ಹಾಜಿ ಅಲಿ ದರ್ಗಾ ಪ್ರವೇಶಕ್ಕೆ ಯತ್ನಿಸುವ ತೃಪ್ತಿ ದೇಸಾಯಿ ಮತ್ತಿತರ ಮಹಿಳೆಯರಿಗೆ ಚಪ್ಪಲಿ ಸ್ವಾಗತ ಕೊಡಲಾಗುವುದು’ ಎಂದು ಅಧಾರ್ಮಿಕ ಅತೃಪ್ತಿ ಕಾರಿಕೊಂಡಿದ್ದಾರೆ. ‘ಅದಕ್ಕೆ ಹೆದರುವುದಿಲ್ಲ’ ಎಂಬ ಸಹಜ ಪ್ರತಿಕ್ರಿಯೆ ಸಿಕ್ಕಿದೆ. ಪಾದಗಳಂತೆ ಪಾದುಕೆಗಳೂ ನಮಗೆ ಪೂಜಾರ್ಹವಾಗಿರುವುದರಿಂದ, ಪಾದುಕೆಗಳಿಂದ ಪೂಜೆ ಮಾಡಿದರೆ ಯಾರು ತಾನೇ ಹೆದರುತ್ತಾರೆ? ಅದರಲ್ಲೂ ಸಾಮಾಜಿಕವಾಗಿ ಅನೇಕ ಅರ್ಥಗಳಲ್ಲಿ ‘ಫುಟ್‌ರಗ್’ ಆಗಿರುವ ಮಹಿಳೆಯರಂತೂ ಯಾಕೆ ತಾನೇ ಹೆದರುತ್ತಾರೆ! ಮಹಾರಾಷ್ಟ್ರದ ಶನಿಶಿಂಗ್ಣಾಪುರ ಶನಿ ದೇವಾಲಯ ಪ್ರವೇಶಕ್ಕೆ ಮಹಿಳೆಯರು ಮಾಡಿದ ಹೋರಾಟಕ್ಕೇನೋ ಸ್ವಲ್ಪ ಗುರುಬಲ ಮತ್ತು ಶುಕ್ರದೆಸೆ ಕೂಡಿಬಂತು.

ಕೇರಳದ ಒಂದು ದರ್ಗಾದಲ್ಲಿ ಮಹಿಳೆಯರಿಗೂ ಪ್ರವೇಶಾವಕಾಶ  ಕೊಡಲು ನಿರ್ಧಾರ ಮಾಡಲಾಗಿದೆ. ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಕೊಡಲು ಏನು ಕಷ್ಟವಿದೆ ಎಂದು ನಿನ್ನೆ ಸರ್ವೋಚ್ಚ ನ್ಯಾಯಾಲಯ ಗದರಿಸಿದೆ. ಇದುವರೆಗಿನ ಇವೆಲ್ಲಾ ಅಲ್ಪತೃಪ್ತಿಯ ಸಂಗತಿಗಳು. ಆದ್ದರಿಂದ ಇನ್ನೂ ತೆರೆಯಬೇಕಾಗಿರುವ, ಎಲ್ಲಾ ಅರ್ಥಗಳಲ್ಲಿ ಮುಚ್ಚಿರುವ ಸಾವಿರಾರು ಬಾಗಿಲುಗಳಿವೆ. ತೆರೆದದ್ದು ಮೊದಲಿನದೂ ಅಲ್ಲ, ಕೊನೆಯದೂ ಅಲ್ಲ. ಪ್ರತೀ ದೇವಾಲಯದ ಸುತ್ತ ಇರುವ ಸಂಗತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಮಹಿಳೆಯರಿಗೆ ಬಾಗಿಲನು ತೆರೆದು ಸೇವೆಯನು ಕೊಡುವುದು, ಕೊಡದಿರುವುದು ಹರಿ ಅಲ್ಲ, ದೇವಾಲಯಗಳನ್ನು ತಮ್ಮ ಮುಷ್ಟಿಯಲ್ಲಿ ಇಟ್ಟುಕೊಂಡಿರುವ ಆಡಳಿತ ಮಂಡಳಿಗಳೆಂಬ ಮಾಫಿಯಾ ಗುಂಪುಗಳು ಅಥವಾ ಧಾರ್ಮಿಕ ‘ಖಾಪ್’ಗಳು. ಅವರು ಹೇಳುವುದೇ ದೇವರ ಇಷ್ಟಾನಿಷ್ಟ.

ದೇಶದ ಪ್ರತಿಯೊಂದು ದೇವಾಲಯ ಅಥವಾ ದರ್ಗಾ ಬರೀ ಧಾರ್ಮಿಕ ನಂಬಿಕೆಯ ಕೇಂದ್ರ ಮಾತ್ರವಾಗಿರದೆ, ಒಂದು ‘ಪವರ್ ಸೆಂಟರ್’ ಕೂಡ ಆಗಿರುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವೇ ಇಲ್ಲ. ಅವುಗಳಿಗೂ ಪವಾಡಗಳ ‘ಬಿಲ್ಡಪ್’ ಅಭಯ ಇರುತ್ತದೆ; ಹಾಗೆಯೇ ‘ನಿಷಿದ್ಧ’ಗಳ ಭಯ ಇರುತ್ತದೆ. ಈ ನಿಷಿದ್ಧಗಳ ಪಟ್ಟಿಯಲ್ಲಿ ಮಹಿಳೆಗೆ ಮೊದಲ ಸ್ಥಾನ ಇದ್ದರೆ ದೇವಾಲಯಕ್ಕೆ ಮಹಿಮೆ ಹೆಚ್ಚುತ್ತದೆ. ಗರ್ಭವತಿಯರಾಗುವ ಮಹಿಳೆಯರು ಒಳಗೆ ಬರುವುದನ್ನು ಗರ್ಭಗುಡಿಯಲ್ಲಿರುವ ದೇವರು ಇಷ್ಟಪಡುವುದಿಲ್ಲ, ಮಹಿಳೆಯರು ಹೊರಗಾಗುವುದರಿಂದ ಅವರನ್ನು ದೇವಾಲಯದಿಂದ ಹೊರಗಿಡೋಣ ಎನ್ನುವುದೇ ದೇವಾಲಯದ ಹೆಚ್ಚುಗಾರಿಕೆ ಎಂದು ಭಾವಿಸಲಾಗುತ್ತದೆ. ಪುರೋಹಿತಶಾಹಿ ಮತ್ತು ಆಡಳಿತಶಾಹಿ ಎರಡೂ ಯಾವಾಗಲೂ ಪುರುಷಶಾಹಿ ಆಗಿರುವುದರಿಂದ ಇದು ಸುಲಭ.

ಅದಿರಲಿ, ಪುರುಷ ಅರ್ಚಕರೇ ದೇಶದಲ್ಲಿರುವ ಲಕ್ಷಾಂತರ ಸ್ತ್ರೀದೇವತೆಗಳ ದೇವಾಲಯಗಳಲ್ಲಿ ಅಮ್ಮನವರನ್ನು ಮುಟ್ಟಿ ಪೂಜಿಸುತ್ತಾರಲ್ಲ ಎಂಬ ಪ್ರಶ್ನೆಗೆ ಎಂದಿನಂತೆ ಉತ್ತರ ಇರುವುದಿಲ್ಲ. ದೇಶದಾದ್ಯಂತ ಅನೇಕ ಹಳೆಯ ಆಸೆ, ಆಶಯಗಳು ಹೊಸ ಅಲೆಗಳಾಗಿ ಮೇಲೇಳುತ್ತ ಆಂದೋಲನಗಳ ರೂಪ ಪಡೆಯುತ್ತಿರುವುದನ್ನು ಯಾರಾದರೂ ಗಮನಿಸಬಹುದು. ಕಾಲಘಟ್ಟಗಳ ಅಂತರದಲ್ಲಿ ‘ಮರಳಿ ಯತ್ನವ ಮಾಡು’ ಎಂಬಂತೆಯೂ ಇವು ತೋರಬಹುದು. ದೇವಾಲಯ ಪ್ರವೇಶ ನಿರ್ಬಂಧವಿರುವ ಕಡೆ ಆ ತಾರತಮ್ಯವನ್ನು ಪ್ರಶ್ನಿಸುವ, ಲಿಂಗ ಅಸಮಾನತೆಯನ್ನು ಮೀರುವ ಮಹಿಳೆಯರ ಈ ಪ್ರಯತ್ನಗಳನ್ನು ಅಂಥ ಆಂದೋಲನಗಳೆಂದು ಅರ್ಥೈಸಬಹುದೇ? ದೇಶದ ವಿಶ್ವವಿದ್ಯಾಲಯಗಳ ಆವರಣಗಳಲ್ಲಿ ವಿದ್ಯಾರ್ಥಿ ಯುವಜನರಲ್ಲಿ ಮೂಡುತ್ತಿರುವ ಹೊಸ ಎಚ್ಚರ,

ಅಸಹನೆಯನ್ನು ಧಿಕ್ಕರಿಸುವ ಬೌದ್ಧಿಕ ವಲಯದ ಹೊಸ ರೂಪದ ಪ್ರತಿರೋಧ, ಹುಸಿ ಧಾರ್ಮಿಕತೆಯನ್ನು ಹಲವು ರೂಪಗಳಲ್ಲಿ ಪ್ರಶ್ನಿಸುವ ಹೊಸ ಧರ್ಮಾತೀತ ದೃಷ್ಟಿಕೋನ- ಈ ಹೊಸ ಬೆಳವಣಿಗೆಗಳಂತೆಯೇ ಮಹಿಳೆಯರ ಈ ನಿರ್ಬಂಧಗಳನ್ನು ಪ್ರಶ್ನಿಸಿ ಮೀರುವ ಮೂಲಕ ಲಿಂಗ ಅಸಮಾನತೆಯನ್ನು ತೊಡೆದುಕೊಳ್ಳುವ ಹೋರಾಟವನ್ನೂ ಪರಿಗಣಿಸಬೇಕೇ? ದೇವಾಲಯ ಪ್ರವೇಶಕ್ಕೆ ಮಹಿಳೆಯರು ಹೋರಾಟ ಮಾಡುವುದನ್ನೇ ಅವರಲ್ಲಿ ಮೂಡಿದ ‘ಹೊಸ ಎಚ್ಚರ’ ಎಂದು ಪರಿಭಾವಿಸಬೇಕೇ ಅಥವಾ ದೇವರುದಿಂಡರು, ಜಾತಿಧರ್ಮ, ಮೂಢನಂಬಿಕೆ ಇವೆಲ್ಲವೂ ಶತಮಾನಗಳಿಂದ ಮಹಿಳೆಯರಿಗೆ ಕೊಟ್ಟ ಶೋಷಣೆ ಸಂಕೋಲೆಗಳನ್ನು ಕುರಿತು ಅವರಲ್ಲಿ ಹೊಸ ಎಚ್ಚರ ಮೂಡಿಸುವುದು ಸೂಕ್ತ ಎಂದು ತೀರ್ಮಾನಿಸಬೇಕೇ?

ಆದರೆ ದೇವಾಲಯ ಪ್ರವೇಶದ ಸಮಾನ ಅವಕಾಶಕ್ಕಾಗಿ ಹೆಣ್ಣುಮಕ್ಕಳು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಸಾಮಾಜಿಕ ಸಂದರ್ಭದಲ್ಲಿ ನಿಜಕ್ಕೂ ಮಹತ್ವ ಇದ್ದೇ ಇದೆ. ಕಡಿವಾಣಗಳ ಬೇಲಿ ಕಿತ್ತೊಗೆಯುವ ಒಂದೊಂದು ಪ್ರಯತ್ನಕ್ಕೂ ಯಾವ ಕಾಲದಲ್ಲಾಗಲಿ ಬೆಲೆ ಇರುತ್ತದೆ. ಹೆಣ್ಣು ಬರೀ ಹೆಣ್ಣಲ್ಲ ‘ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ’ ಎಂದು ಹೆಣ್ಣು ದೇವರಪೂಜೆ ಮಾಡುವುದಿರಲಿ, ಅವಳೇ ದೇವರು ಎಂದದ್ದಕ್ಕೆ ಅಪಾರ ಅರ್ಥವಿದೆ. ದೇವಾಲಯ ಪ್ರವೇಶ ನಿರ್ಬಂಧವನ್ನು ಪ್ರಶ್ನಿಸುವುದಕ್ಕೆ ದಕ್ಕುವ ಮಹತ್ವ ಕನಕದಾಸರ ಕಾಲಕ್ಕೂ ಇತ್ತು ಇವತ್ತಿನ ಕಾಲಕ್ಕೂ ಇದೆ ಎನ್ನುವುದು ನಿಜವಲ್ಲವೇ? ದೇವಾಲಯ, ಆರಾಧನೆ, ಪೂಜೆ ಇವುಗಳಿಂದ ಹೆಣ್ಣುಮಕ್ಕಳನ್ನು ಹೊರಗಿಡುವ ದುಷ್ಟಹುನ್ನಾರವನ್ನು ಪ್ರಶ್ನಿಸಿದ ಸಂಗೀತ ಕಲಾವಿದೆ ಬೆಂಗಳೂರು ನಾಗರತ್ನಮ್ಮ ಅವರ ಧೈರ್ಯ ಚಾರಿತ್ರಿಕ ದಾಖಲೆಯ ಮಹತ್ವ ಪಡೆಯುತ್ತದೆ.

ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳು ಮತ್ತು ದಲಿತರ ಮೇಲೆ ಸಮಾನ ಧಾರ್ಮಿಕ ದೌರ್ಜನ್ಯಗಳು ನಡೆಯುತ್ತವೆ. ಕೆಲವು ದೇವಾಲಯಗಳಲ್ಲಿ ಅವರಿಗೆ ಪ್ರವೇಶ ಇಲ್ಲವಾದರೆ, ಸರ್ವತ್ರ ಎಲ್ಲ ದೇವಾಲಯಗಳಲ್ಲಿ ಇವರಿಗೆ ಪ್ರವೇಶ ನಿಷೇಧವಿದೆ. ಅದನ್ನು ಪ್ರಶ್ನಿಸುವ ಪ್ರತಿಯೊಂದು ಪ್ರಯತ್ನವೂ ಚರಿತ್ರಾರ್ಹವೇ; ಆದ್ದರಿಂದಲೇ ಗಾಂಧೀಜಿ, ಅಂಬೇಡ್ಕರ್, ನಂಬೂದಿರಿಪಾದ್, ವಿವೇಕಾನಂದರ ಕಾಳಜಿಗಳು ಅಷ್ಟು ಪ್ರಾಮುಖ್ಯ ಪಡೆದಿವೆ. ಹಾಸನ ಜಿಲ್ಲೆಯ ಸಿಗರನಹಳ್ಳಿಯ ದೇವಾಲಯದ ಸಾಮಾಜಿಕ ವಿಶ್ಲೇಷಣೆ ಅದರ ರಾಜಕೀಯ ನೆಲೆಯನ್ನೂ ಮೀರಿ ನಿಲ್ಲುವುದಿಲ್ಲವೇ? ‘ಇದೇನು ಮಹಾ! ದೇಶದಲ್ಲಿ ಅಲ್ಲೊಂದು ಇಲ್ಲೊಂದು ದೇವಾಲಯ ಪ್ರವೇಶ ಪ್ರಯತ್ನ ನಡೆದುಬಿಟ್ಟರೆ ದೇಶ ಉದ್ಧಾರ ಆಗಿಬಿಡುತ್ತದೆಯೇ? ಮಹಿಳೆಯರು, ದಲಿತರು ದೇವಾಲಯ ಪ್ರವೇಶ ಮಾಡಿಬಿಟ್ಟರೆ ಅವರ ಜೀವನ ಉದ್ಧಾರ ಆಗಿಬಿಡುತ್ತದೆಯೇ?

ಅದರಿಂದ ಹಣೆಬರಹ ಬದಲಾಗಿಬಿಡುತ್ತದೆಯೇ? ಅವರಲ್ಲಿ ಒಂದಿಷ್ಟು ಮಂದಿ ಮಾತ್ರ ಇಂಥದನ್ನು ಮಾಡಿಬಿಟ್ಟರೆ ಅವರೆಲ್ಲರೂ ಬಂದಂತಾಗುತ್ತದೆಯೇ? ಒಂದು ದಿನ ದೇವಸ್ಥಾನಕ್ಕೆ ಬಂದ ಮಾತ್ರಕ್ಕೆ ಮುಂದೆಯೂ ಸುಲಭವಾಗಿ ಬರಲಾಗುತ್ತದೆಯೇ? ಹಿಂದಿನಿಂದ ಬಂದದ್ದನ್ನು ಮೀರಿದರೆ ಅವರಿಗೆ ಒಳ್ಳೆಯದಾಗುತ್ತದೆಯೇ? ಇಂಥ ಕೆಲಸಕ್ಕೆ ಬಾರದ ವಿಚಾರ ಬಿಟ್ಟು ಅವರನ್ನು ಉದ್ಧಾರ ಮಾಡುವ ಬೇರೆ ಯೋಚನೆ ಮಾಡಬೇಕಲ್ಲವಾ?’ ಇತ್ಯಾದಿ ಸಿನಿಕ ಕಥಾನಕಗಳು ಎಲ್ಲ ಹೊಸ ಹೆಜ್ಜೆಗೂ ಇರುವಂತೆ ಇವಕ್ಕೂ ಇದ್ದೇ ಇರುತ್ತವೆ. ಒಂದು ದೃಷ್ಟಿಯಲ್ಲಿ ಈ ಮಾತುಗಳೆಲ್ಲ ನಿಜವೇ ಇರಬಹುದು. ಅವರ ಜೀವನದಲ್ಲಿ ಎಲ್ಲವೂ ಬದಲಾಗದಿರಬಹುದು. ಆದರೆ ಇದನ್ನೇಕೆ ನಾಸ್ತಿಕತೆಗೆ, ಧರ್ಮನಾಶಕ್ಕೆ ಸಮೀಕರಿಸಬೇಕು? ಹಿಂದಿಗಿಂತ ಇಂದು ಬೇರೇನೋ ಆಗುತ್ತದೆಯಲ್ಲ, ಅದು ಸಾಮಾಜಿಕ ಚರಿತ್ರೆಯಲ್ಲಿ ಹೊಸ ಅಧ್ಯಾಯ ಬರೆಯುವುದನ್ನು ಮರೆಯುವುದು ಹೇಗೆ?

ಅದು ಹೊಳೆಯಿಸುವ ಹೊಸ ಸಂಕೇತಕ್ಕೆ ಕಣ್ಮುಚ್ಚುವುದು ಹೇಗೆ? ಯೋಚಿಸಿ ನೋಡಿದರೆ, ಎಲ್ಲ ಧರ್ಮಗಳಲ್ಲಿ ಇಡೀ ಧಾರ್ಮಿಕ ಆಚರಣೆಯನ್ನು ಕೇವಲ ಸಂಜ್ಞೆಸಂಕೇತಗಳ ಮೂಲಕವೇ ಮಾಡಲಾಗುತ್ತದೆ. ಆದರೆ ಧಾರ್ಮಿಕ ನಿಷೇಧ ಮೀರುವ ಬಟಾಬಯಲು ಸಂಗತಿಗಳು ಹೊಮ್ಮಿಸುವ ಸಂಕೇತ ಮತ್ತು ರೂಪಕಗಳ ವಿಚಾರವನ್ನು, ಅವು ಹೇಳುವ ಅಪಾರ ಅರ್ಥವನ್ನು ಬೇಕೆಂದೇ ಅವಗಣನೆ ಮಾಡಲಾಗುತ್ತದೆ. ‘ಇಲ್ಲಿ ಬಿಡುವ ಉದಕ ಪರಲೋಕ ತಲುಪುತ್ತದೆ, ಇಲ್ಲಿ ಕೋಳಿ ಕಡಿದರೆ ಅಲ್ಲಿ ದೇವರಿಗೆ ಖುಷಿ ಆಗುತ್ತದೆ’ ಎಂದು ಬೇಕಾದರೆ ನಾವು ಕಣ್ಣು ಮುಚ್ಚಿಕೊಂಡು ನಂಬುತ್ತೇವೆ. ಆದರೆ ಹೆಣ್ಣುಮಕ್ಕಳು, ದಲಿತರು ಶತಮಾನಗಳ ನಿರ್ಬಂಧ ಮೀರಿ ದೇವಾಲಯ ಪ್ರವೇಶಿಸುವುದನ್ನು ಕಣ್ಣಾರೆ ನೋಡಿದರೂ ಅದರ ಮಹತ್ವವನ್ನು ನಂಬುವುದಿಲ್ಲ! ಕಾಣದ ಏನನ್ನಾದರೂ ನಂಬುವ ಮೌಢ್ಯದ ಹಾಗೆ, ಕಾಣುವ ಇಂಥವನ್ನು ನಂಬದ ಮೌಢ್ಯವೂ ಇರುತ್ತದೆ.

ಕೊನೆಗೆ, ದಲಿತರ ಹಾಗೆ ಹೆಣ್ಣುಮಕ್ಕಳು ಜಾತಿ ಮತ್ತು ಧರ್ಮ ಹೇರಿರುವ ನಿಷೇಧಗಳನ್ನು ಮೀರುವ ಸಂಗತಿಯನ್ನೂ ‘ಬರೀ ರಾಜಕೀಯ, ಬರೀ ರಾಜಕೀಯ ನಾಟಕ’ ಎಂದು ಹೀಗಳೆಯುವುದು ಸಹಜವೆನ್ನಿಸುವಷ್ಟು ಸಾಮಾನ್ಯ. ಆದರೆ ಜಗತ್ತಿನಲ್ಲಿ ಎಲ್ಲೂ ಎಂದೂ ಧರ್ಮ ಮತ್ತು ರಾಜಕೀಯ ಬೇರೆಯಾಗಿ ಉಳಿದಿಲ್ಲ ಎನ್ನುವುದು ಚರಿತ್ರೆಯ ಚಿದಂಬರ ರಹಸ್ಯ. ಕನ್ನಡದ ಸಾಹಿತ್ಯದ ಒಂದು ರಗಳೆ ಹೊಗಳುವ ಹಾಗೆ, ಸಾವಿರಾರು ಜೈನಬಸದಿಗಳನ್ನು ಒಡೆದುಹಾಕಿ ಅಲ್ಲಿ ಶಿವನನ್ನು ಸ್ಥಾಪಿಸಿದ ಏಕಾಂತ ರಾಮಯ್ಯ ಎಂಬ ಧರ್ಮಾತ್ಮನ ಸಂಗತಿಯೂ ನಮಗೆ ಗೊತ್ತು, ಕರ್ನಾಟಕದ ಕರಾವಳಿ ಸೇರಿ ದೇಶದುದ್ದಕ್ಕೂ ಕಾಣುವ ದೇವಾಲಯಗಳಲ್ಲಿ ಒಂದೊಂದೂ ಹೇಳುವ ಧರ್ಮರಾಜಕಾರಣದ ಕಥೆಯೂ ನಮಗೆ ಗೊತ್ತು.

ಯಾವ ಧರ್ಮ ತನ್ನ ಕಾಲದ ದೇವಾಲಯಗಳನ್ನು ನಾಶ ಮಾಡಿಲ್ಲ? ನಿಷಿದ್ಧರಿಂದ ದೇವಾಲಯ ಪ್ರವೇಶವಾದರೆ ಧರ್ಮ ನಾಶವಾಗುತ್ತದೆ ಎಂದು ಕೂಗುವವರು ಇದನ್ನು ಬೇಕೆಂದೇ ಮರೆಯುತ್ತಾರೆ. ಧಾರ್ಮಿಕ ಲಾಭನಷ್ಟಗಳನ್ನು ಮೀರಿದ ಸಾಮಾಜಿಕ ಲೆಕ್ಕಾಚಾರ ಇಂಥವಕ್ಕೆ ಇರುತ್ತದೆ. ಇದನ್ನು ಒಪ್ಪದಿರುವುದು ಬದಲಾವಣೆಯನ್ನು ಒಪ್ಪದಿರುವ ರಾಜಕೀಯ ಅಲ್ಲವೇನು? ಮಹಿಳೆಯರ, ದಲಿತರ ದೇವಾಲಯ ಪ್ರವೇಶದಿಂದ ಏನಾಗುತ್ತದೋ ಆಗುವುದಿಲ್ಲವೋ, ‘ದೇವರ ದೃಷ್ಟಿಯಲ್ಲಿ ಎಲ್ಲ ಮನುಷ್ಯರೂ ಸಮಾನರು’ ಎಂಬ ಅವರ ಅನಾದಿಕಾಲದ ಬೋಧನೆ ಮತ್ತು ನಂಬಿಕೆಯಂತೂ ನಿಜವಾಗುತ್ತದಲ್ಲ!

Comments
ಈ ವಿಭಾಗದಿಂದ ಇನ್ನಷ್ಟು
ಪಾದುಕಾ ಪುರಾಣಕ್ಕೆ ಹೊಸ ಪ್ರಸಂಗ ಅನಗತ್ಯ

ಜೀವನ್ಮುಖಿ
ಪಾದುಕಾ ಪುರಾಣಕ್ಕೆ ಹೊಸ ಪ್ರಸಂಗ ಅನಗತ್ಯ

28 Feb, 2017
ಮಾತಿನ ಮಂಟಪದಲ್ಲೇ ಉಳಿದ ಮಹಿಳಾ ಮೀಸಲಾತಿ

ಜೀವನ್ಮುಖಿ
ಮಾತಿನ ಮಂಟಪದಲ್ಲೇ ಉಳಿದ ಮಹಿಳಾ ಮೀಸಲಾತಿ

14 Feb, 2017
ಜನಪ್ರತಿನಿಧಿಗಳ ‘ಪ್ರತಿಭಾ ಪ್ರದರ್ಶನ’ ಹೀಗಿರಬೇಕೆ?

ಜೀವನ್ಮುಖಿ
ಜನಪ್ರತಿನಿಧಿಗಳ ‘ಪ್ರತಿಭಾ ಪ್ರದರ್ಶನ’ ಹೀಗಿರಬೇಕೆ?

31 Jan, 2017
ಖಾದಿ ಬಿಟ್ಟು ಬೇರೆ ಯಾದಿ ತಯಾರಿಸಿ ಮೋದಿ

ಜೀವನ್ಮುಖಿ
ಖಾದಿ ಬಿಟ್ಟು ಬೇರೆ ಯಾದಿ ತಯಾರಿಸಿ ಮೋದಿ

17 Jan, 2017
ವಿರೋಧ ಪಕ್ಷವಾಗದ ಅದಕ್ಷ ರಾಜಕಾರಣ

ಜೀವನ್ಮುಖಿ
ವಿರೋಧ ಪಕ್ಷವಾಗದ ಅದಕ್ಷ ರಾಜಕಾರಣ

3 Jan, 2017