‘ಆ ಕಾಯಿಲೆ-ಈ ಕಾಯಿಲೆ’ ಎಂಬ ಆತಂಕ!

“ಡಾಕ್ಟ್ರೇ, ಇವರಿಗೆ ಯಾವಾಗಲೂ ತಮ್ಮ ಆರೋಗ್ಯದ ಬಗ್ಗೆ ಅತಿಯಾದ ಆತಂಕ. ಯಾವುದೇ ದಿನಪತ್ರಿಕೆಯಲ್ಲಿ ಯಾವುದಾದರೂ ಕಾಯಿಲೆಯ ಬಗ್ಗೆ ಬಂದರೆ ಅದರ ಬಗ್ಗೆ ಓದಿ, ತನಗೆ ಅದೇ ಕಾಯಿಲೆ ಇದೆ ಅಂದುಕೊಳ್ಳೋದು. ಆಮೇಲೆ ಇದ್ದಬದ್ದ ಪರೀಕ್ಷೆ ಎಲ್ಲಾ ಮಾಡಿಸೋದು. ‘ತಲೆನೋವು’ ಅಂದ್ರೆ ನಾವೆಲ್ಲಾ ಏನು ಮಾಡ್ತೀವಿ? ‘ಓ, ಇವತ್ತು ಊಟ ಮಾಡೋದು ಲೇಟಾಯ್ತಲ್ಲ’ ಅಂತ ಅಂದ್ಕೋತೀವಿ. ಸುಮ್ಮನಾಗ್ತೀವಿ.

‘ಆ ಕಾಯಿಲೆ-ಈ ಕಾಯಿಲೆ’ ಎಂಬ ಆತಂಕ!

ನಮ್ಮಲ್ಲಿ ಬಹಳ ಜನ ಆರೋಗ್ಯದ ಬಗ್ಗೆ ‘ಹೆದರು’ತ್ತೇವೆ! ಅಂದರೆ ವೈದ್ಯರ ಬಳಿ ಹೋದರೆ ಅವರು ನಮಗೆ ಏನಾದರೂ ಕಾಯಿಲೆ ಇದೆ ಎಂದುಬಿಟ್ಟರೆ? ಅಥವಾ ರಕ್ತ ಪರೀಕ್ಷೆಗೆ ಕೊಟ್ಟು ‘ಸಕ್ಕರೆ ಕಾಯಿಲೆ’ ಇದೆ ಎಂದು ಬಂದರೆ? ಅಥವಾ ನಮ್ಮ ಆತ್ಮೀಯರಿಗೆ ಕಾಯಿಲೆಯಾದಾಗ ಅಂಥದ್ದೇ ಕಾಯಿಲೆ ನಮಗೇ ಬಂದರೆ ಇತ್ಯಾದಿ ಇತ್ಯಾದಿ.

ಹಾಗೆಯೇ ಸಾವಿನ ಬಗೆಗೂ. ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಕೇಳಿದಾಗ ‘ಅಬ್ಬಾ ಇವರಿಗೆ ಸಾಯಲು ಧೈರ್ಯವಾದರೂ ಎಲ್ಲಿಂದ ಬಂತು?’ ಎಂದು ಅಚ್ಚರಿ ಪಡುತ್ತೇವೆ. ಆದರೆ ಇಂಥ ಆತಂಕ ನಮಗಿರುವುದು ಕೆಲಕ್ಷಣ ಅಥವಾ ಕೆಲ ಗಂಟೆಗಳು ಮಾತ್ರ. ಅದನ್ನು ಬದಿಗಿರಿಸಿ ನಮ್ಮ ಕೆಲಸ-ಕಾರ್ಯಗಳಲ್ಲಿ ಮಗ್ನವಾಗುವುದು ನಮಗೆ ಸುಲಭ ಸಾಧ್ಯ.

ಕೆಲವರಿಗೆ  ಈ ರೀತಿಯ ಆತಂಕ ಬಂದು ಕಾಯಿಲೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಅದನ್ನು ಮನೋವೈದ್ಯಕೀಯ ಪರಿಭಾಷೆಯಲ್ಲಿ ‘ಹೈಪೋಕಾಂಡ್ರಿಯಾಸಿಸ್-hypochondriasis-ಅಥವಾ Health anxiety- ‘ಆರೋಗ್ಯದ ಆತಂಕ’ ಎಂದು ಕರೆಯಲಾಗುತ್ತದೆ. ಕೆಳಗಿನ ಉದಾಹರಣೆ ಅಂಥ ‘ಆರೋಗ್ಯದ ಆತಂಕ’ ಹೊಂದಿರುವ ರೋಗಿಯ ಲಕ್ಷಣಗಳನ್ನು ಹೊರತರುತ್ತದೆ.

“ಡಾಕ್ಟ್ರೇ, ಇವರಿಗೆ ಯಾವಾಗಲೂ ತಮ್ಮ ಆರೋಗ್ಯದ ಬಗ್ಗೆ ಅತಿಯಾದ ಆತಂಕ. ಯಾವುದೇ ದಿನಪತ್ರಿಕೆಯಲ್ಲಿ ಯಾವುದಾದರೂ ಕಾಯಿಲೆಯ ಬಗ್ಗೆ ಬಂದರೆ ಅದರ ಬಗ್ಗೆ ಓದಿ, ತನಗೆ ಅದೇ ಕಾಯಿಲೆ ಇದೆ ಅಂದುಕೊಳ್ಳೋದು. ಆಮೇಲೆ ಇದ್ದಬದ್ದ ಪರೀಕ್ಷೆ ಎಲ್ಲಾ ಮಾಡಿಸೋದು. ‘ತಲೆನೋವು’ ಅಂದ್ರೆ ನಾವೆಲ್ಲಾ ಏನು ಮಾಡ್ತೀವಿ? ‘ಓ, ಇವತ್ತು ಊಟ ಮಾಡೋದು ಲೇಟಾಯ್ತಲ್ಲ’ ಅಂತ ಅಂದ್ಕೋತೀವಿ.

ಸುಮ್ಮನಾಗ್ತೀವಿ. ಇವರು? ತಲೆನೋವು ಬಂದ್ರೆ ತಲೆ ಒಳಗೆ ಗಡ್ಡೇನೇ ಆಗಿದೆ ಅಂದ್ಕೊಳ್ಳೋದು, ತಕ್ಷಣ ಸ್ಕ್ಯಾನ್ ಮಾಡ್ಸು, ನಮ್ಮ ಮನೆ ಪಕ್ಕ ಯಾರಿಗೋ ಬ್ರೈನ್‌ಟ್ಯೂಮರ್ ಆಗಿತ್ತು, ಅದೇನೋ ಅವರು ಸತ್ತುಹೋದ್ರು, ನನಗೂ ಹಾಗೇ ಆಗ್ಬಿಟ್ರೆ ಅಂಥ ಹೆದರೋದು. ಡಾಕ್ಟ್ರ ಹತ್ರ ಹೋದ್ರೆ  ಅವರು ಹೇಳೋದು ‘ಎಲ್ಲಾ ನಾರ್ಮಲ್, ಇವರಿಗೆ ಏನೂ ಕಾಯಿಲೆ ಇಲ್ಲ’ ಅಂತ. ಇವರಿಗೆ ಹೇಳಿದ್ರೆ ಆ ಡಾಕ್ಟ್ರನ್ನೇ ಬದಲಿಸಿ, ಬೇರೆಯವ್ರ ಹತ್ತಿರ ಹೋಗ್ತಾರೆ. ನಾವು ‘ಬೇಡ’ಅಂದ್ರೆ ‘ನಿಮಗೇನು ಗೊತ್ತಾಗತ್ತೆ ನನ್ನ ಕಷ್ಟ. ನನಗಾಗೋದು ನನಗೇ ಗೊತ್ತಾಗತ್ತೆ’ ಅಂತಾರೆ!”.

45 ವರ್ಷದ ಒಬ್ಬ ಎಂಜಿನಿಯರ್ ವೈದ್ಯರ ಬಳಿ ಬಂದದ್ದು ಅಂತರ್ಜಾಲದಿಂದ ‘ಕ್ಯಾನ್ಸರ್’ ಬಗ್ಗೆ ಹುಡುಕಿದ ಮಾಹಿತಿಗಳ ರಾಶಿಯಿಂದ. ಅವನು ಹೇಳುವುದು “ನನಗೆ ಗೊತ್ತು, ನನಗೆ ಕರುಳಿನ ಕ್ಯಾನ್ಸರ್ ಇದೆ” ಅಂತ. ಈ ತೊಂದರೆಗಳು ಅವನ ಪ್ರಕಾರ “ನನಗೆ ವರ್ಷಗಳಿಂದ ಈ ಸಮಸ್ಯೆ ಇರುವುದರ ಬಗ್ಗೆ ಗೊತ್ತು”. ಆತನ ಲಕ್ಷಣಗಳ ಬಗ್ಗೆ ವಿಚಾರಿಸಿದರೆ ಹೊಟ್ಟೆಯ ಒಂದು ಪಕ್ಕಕ್ಕೆ ಕೈ ತೋರಿಸಿ ‘ಇಲ್ಲಿ ನೋವು ಬರ್ತಾ ಇರುತ್ತೆ.

ಕೆಲವು ಸಲ ಇರುತ್ತೆ, ಕೆಲವು ಸಲ ಇರಲ್ಲ’ ಎನ್ನುತ್ತಾನೆ. ಬೇಕಾದಷ್ಟು ರೀತಿಯ  ಸ್ಕ್ಯಾನ್ ಮಾಡಿಸಿ ಆಗಿದೆ. ಅದೆಲ್ಲವೂ ಯಾವ ದೋಷವೂ ಇಲ್ಲ ಎನ್ನುತ್ತವೆ. “ನನಗೆ ಅನ್ನಿಸುವ ಹಾಗೆ ಅವರು ಏನೋ ‘ಮಿಸ್’ ಮಾಡಿದ್ದಾರೆ”ಎನ್ನುತ್ತಾನೆ ಈತ. ಈಗ ಬಂದಿರುವ ಬಗ್ಗೆ ಕೇಳಿದರೆ “ಇನ್ನೊಂದು ಕೊಲೊನೋಸ್ಕೋಪಿ ಅಥವಾ ಹೊಟ್ಟೆಯ ಸಿಟಿ ಸ್ಕ್ಯಾನ್ ಮಾಡಿಸಿ” ಎನ್ನುತ್ತಾನೆ!

ಇಲ್ಲಿರುವ ಉದಾಹರಣೆಯಂತೆ, ಈ ಸಮಸ್ಯೆಯಿರುವ ಬಹಳಷ್ಟು ರೋಗಿಗಳು ಎಲ್ಲ ವೈದ್ಯರನ್ನೂ ಮುಗಿಸಿ, ಮನೋವೈದ್ಯರ ಬಳಿಗೆ ಬರುವ ವೇಳೆಗೆ ಬಹುತೇಕ ಎಲ್ಲ ಪರೀಕ್ಷೆಗಳೂ ಮುಗಿದಿರುತ್ತವೆ. ರೋಗಿಯ ಆತಂಕದೊಂದಿಗೇ, ಕುಟುಂಬದ ಆತಂಕವೂ ಬೆಳೆದು, ಹತಾಶೆಗೆ ಕಾರಣವಾಗಿರುತ್ತದೆ. ‘ಆರೋಗ್ಯದ ಆತಂಕ ’ ಎಂಬ ಈ ಸಮಸ್ಯೆಯ ಮುಖ್ಯ, ಕೇಂದ್ರ ಲಕ್ಷಣ ರೋಗಿ ವಿವರಿಸುವ ವಿವಿಧ ದೈಹಿಕ ಸಮಸ್ಯೆಗಳಲ್ಲ. ಬದಲಾಗಿ ‘ಅವು ಇರಬಹುದು’ ಎಂಬ ಆತಂಕ-ಹೆದರಿಕೆ.

ಈ ಆತಂಕದ ಸುತ್ತಲೇ ತಿರುಗುವ ವ್ಯಕ್ತಿಯ ಯೋಚನಾ ರೀತಿ ಒಂದು ತಲೆನೋವು/ಸಹಜವಾಗಿ ಹೆಚ್ಚುವ ಹೃದಯ ಬಡಿತ/ ಆತ್ಮೀಯರಲ್ಲಿ ಗಂಭೀರವಾದ ಆರೋಗ್ಯದ ಸಮಸ್ಯೆಗಳು ಯಾವುದಾದರೂ ಆತಂಕವನ್ನು ಈ ವ್ಯಕ್ತಿಯಲ್ಲಿ ಹುಟ್ಟಿಸಲು ಸಾಕು. ವೈದ್ಯರ ಪರೀಕ್ಷೆಗಳು, ಸಮಾಧಾನ, ‘ಅಂಥ ಕಾಯಿಲೆ ಇಲ್ಲ’ಎಂದು ತೋರಿಸುವ ಸ್ಕ್ಯಾನ್/ಎಕ್ಸ್‌ರೇ/ ರಕ್ತಪರೀಕ್ಷೆ ಇತ್ಯಾದಿ ರೋಗಿಯ ಮನಸ್ಸಿಗೆ ಯಾವ ಸಾಂತ್ವನವನ್ನು ನೀಡಲಾರವು.

ದಿನಪತ್ರಿಕೆಯಲ್ಲಿನ ಆರೋಗ್ಯದ ಕುರಿತ ಲೇಖನಗಳಲ್ಲಿ ಇರಬಹುದಾದ ಹತ್ತು ಲಕ್ಷಣಗಳಲ್ಲಿ ಯಾವುದೋ ಒಂದು ಲಕ್ಷಣ ತನಗಿದೆ ಎಂದು ‘ಸ್ವಂತವಾಗಿ ಡಯಗ್ನೊಸ್’ ಮಾಡಿಕೊಳ್ಳುವುದು, ಆತಂಕ ಪಡುವುದು ಇಂಥ ರೋಗಿಗಳಲ್ಲಿ ತುಂಬ ಸಾಮಾನ್ಯ. ವೈದ್ಯರಿಗೂ ಸಹಾ ದೊಡ್ಡ ‘ಸವಾಲು’ ಎನಿಸುವ ಈ ರೋಗಿಗಳ ಲಕ್ಷಣಗಳು ‘ಲಕ್ಷಣಗಳು ಇಲ್ಲದಂತೆ ಹೇಗಾದರೂ ಮಾಡಿಬಿಡುವ ಆತಂಕ’ ಕ್ಕೆ ವೈದ್ಯನನ್ನೂ ಪ್ರೇರೇಪಿಸಲು ಸಾಧ್ಯವಿದೆ! 

ರೋಗಿ ಹೇಳುತ್ತಿರುವ ಸಮಸ್ಯೆ ನಿಜವಾಗಿ ಇಲ್ಲ ಎಂಬುದು ಎಲ್ಲಾ ವೈದ್ಯರಿಗೂ, ಕೊನೆಗೆ ಕುಟುಂಬದವರಿಗೂ ಗೊತ್ತಾದರೂ, ತೊಂದರೆ ನಿಜವಾಗಿ ಇರುವುದು ಎಲ್ಲಿ ಎಂಬುದು ಸ್ಪಷ್ಟವಾಗುವುದಿಲ್ಲ. ಪರಿಣಾಮ ರೋಗಿಗೆ ‘ಏನೂ ಕಾಯಿಲೆಯಿಲ್ಲ, ಸುಮ್ಮನೇ ಆತಂಕ ಪಡುತ್ತಾನೆ’ ಎಂಬ ಪಟ್ಟಿಯನ್ನು ಎಲ್ಲರೂ ತಗುಲಿಸುತ್ತಾರೆ. ಆದರೆ ಇಲ್ಲಿ ಕಾಯಿಲೆ ಇರಬಹುದೆಂಬ ‘ಆತಂಕ’ವೇ ಒಂದು ಲಕ್ಷಣದ ಬದಲು ಕಾಯಿಲೆಯ ಸ್ವರೂಪ ಪಡೆದುಕೊಂಡಿದೆ ಎಂಬುದನ್ನು ಆರ್ಥ ಮಾಡಿಕೊಳ್ಳುವುದು ಮುಖ್ಯ.

ರಕ್ತದಲ್ಲಿ ನ್ಯೂರೋಟ್ರೋಫಿನ್-3 ಎಂಬ ಅಂಶ, ರಕ್ತದ ಪ್ಲೇಟ್‌ಲೆಟ್‌ಗಳಲ್ಲಿ ಸೆರಟೋನಿನ್ ಎಂಬ ನರವಾಹಕದ ಅಂಶ ಕಡಿಮೆಯಾಗುವುದು ಈ ವ್ಯಕ್ತಿಗಳಲ್ಲಿ ಕಂಡು ಬರುವ ರಾಸಾಯನಿಕ ಬದಲಾವಣೆ ಗಳು. ಇವು ನಮ್ಮ ಮಿದುಳಿನಲ್ಲಿ ಆತಂಕವನ್ನು ನಿಯಂತ್ರಿಸುವ ನರವ್ಯೂಹಗಳ ಕಾರ್ಯಕ್ಷಮತೆಗೆ ಮುಖ್ಯ ಕಾರಣಗಳು.

ಹೈಪೋಕಾಂಡ್ರಿಯಾಸಿಸ್ ಜೊತೆಗೆ ಖಿನ್ನತೆ, ಆತಂಕದ ಇತರ ಸ್ವರೂಪಗಳೂ ಇರುವ ಸಾಧ್ಯತೆ ಹೆಚ್ಚು. ತಾವೇ ವಿವಿಧ ಮಾತ್ರೆಗಳನ್ನು ನುಂಗುವುದು, ಬಹು ಜನ ವೈದ್ಯರಿಗೆ ತೋರಿಸಿದರೂ, ಅವರ ಯಾವ ಸಲಹೆಯನ್ನೂ ಪಾಲಿಸದಿರುವುದು ಈ ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ರೋಗಿ ತಾನಂದುಕೊಂಡ ಕಾಯಿಲೆ ಹೊಂದಿರದೆ ಬೇರೆಯದೇ ಕಾಯಿಲೆ ಇರುವ ರೋಗಿಯನ್ನು ಚಿಕಿತ್ಸೆಗೆ ಒಪ್ಪಿಸುವುದು ಹೇಗೆ? ಸ್ಕ್ಯಾನ್‌ ಮಾಡಿಸಬೇಕು, ವಿವಿಧ ಪರೀಕ್ಷೆಗಳು ಬೇಕು ಎಂದು ಹಾತೊರೆಯುವ ರೋಗಿಗೆ ‘ಅವು ಯಾವುದೂ ಬೇಡ, ಮನೋವೈದ್ಯರ ಬಳಿ ಬಂದು ಚಿಕಿತ್ಸೆ ತೆಗೆದುಕೊಳ್ಳಬೇಕು’ ಎಂದು ಹೇಳಿದರೆ ಕೇಳಬಹುದೆ? !

ಹಾಗೆ ರೋಗಿ ಕೇಳಬೇಕೆಂದರೆ ಮೊದಲು ಕುಟುಂಬದವರು ಮಾಡಬೇಕಾದ್ದು “ರೋಗಿ ಹೇಳುವ ಕಾಯಿಲೆ ಇರಲಿಕ್ಕಿಲ್ಲ, ಆದರೆ ‘ಆರೋಗ್ಯದ ಬಗೆಗಿನ ಆತಂಕವೂ ಕಾಯಿಲೆಯ ಸ್ವರೂಪ ತಾಳುವ ಸಾಧ್ಯತೆ ಇದೆ” ಎಂಬುದನ್ನು ಒಪ್ಪಬೇಕಾದ್ದು. ಒಮ್ಮೆ ಹಾಗೆ ಸ್ವೀಕರಿಸಿದ ಮೇಲೆ ರೋಗಿಯ ನಡವಳಿಕೆಗಳು ‘ಅರ್ಥಹೀನ’ ಎನಿಸಲಾರವು.

ಮನೋವೈದ್ಯರ ಬಳಿ ಚಿಕಿತ್ಸೆಗೆ ಬರುವಾಗಾಗಲೇ ಸಾಕಷ್ಟು ಸಮಯ ಕಳೆದಿರುತ್ತದೆ. ಸೆರಟೋನಿನ್ ಹೆಚ್ಚಿಸುವ ಔಷಧಿಗಳು, ರೋಗಿಯೊಡನೆ ಉತ್ತಮ ಬಾಂಧವ್ಯ (‘ನಿನಗೆ ಯಾವುದೇ ಪರೀಕ್ಷೆ ಮಾಡಿಸಬೇಕೆನಿಸಿದರೂ ನನಗೆ ಹೇಳದೇ ಹೋಗುವಂತಿಲ್ಲ’, ‘ನಿನಗೆ ತೊಂದರೆಗಳಿವೆ ಎಂಬುದನ್ನು ನಾನು ಒಪ್ಪುತ್ತೇನೆ’, ‘ನನಗೆ ಹೇಳದೇ ಯಾವುದೇ ಮಾತ್ರೆಯನ್ನೂ ನೀನು ತೆಗೆದುಕೊಳ್ಳುವಂತಿಲ್ಲ’ ಇತ್ಯಾದಿ), ಮನೋಚಿಕಿತ್ಸೆ ಇವು ರೋಗಿಯ ಜೊತೆಗೆ ಆತ/ಆಕೆಯ ಕುಟುಂಬದವರ ಬದುಕನ್ನು ಸುಗಮಗೊಳಿಸಬಲ್ಲವು.

ವರ್ತನಾ ಚಿಕಿತ್ಸೆಯ ಮುಖಾಂತರ ಆತಂಕವನ್ನು ನಿವಾರಿಸಲು ಪ್ರಯತ್ನಿಸಬಹುದು. ಆತಂಕವನ್ನು ಅರ್ಥಮಾಡಿಕೊಳ್ಳುವುದು, ಮತ್ತೆ ಮತ್ತೆ ದೇಹವನ್ನು ಲಕ್ಷಣಗಳಿಗಾಗಿ ಪರೀಕ್ಷಿಸಿಕೊಳ್ಳುವುದು-ಬೇರೆಯವರ ಬಳಿ ಸಮಾಧಾನ ಕೇಳುವುದು, ಆರೋಗ್ಯ -ಕಾಯಿಲೆಯ ಬಗೆಗಿನ ಅತಿಯಾದ ಆತಂಕ ಪಡುವುದು, ಸಾವಿನ ಬಗ್ಗೆ ಹೆದರಿಕೆ -ಇಂತಹ ಆತಂಕಗಳನ್ನು ನಿಭಾಯಿಸುವ ರೀತಿಯನ್ನು ಕಲಿಯುವುದು, ಸಾವಿನ ವಾಸ್ತವಿಕತೆಯನ್ನು ಒಪ್ಪಿಕೊಳ್ಳುವುದು ಮತ್ತು ಇಂದಿರುವ ಜೀವನವನ್ನು ಆನಂದಿಸುವುದು, ವಿಶ್ರಮಿಸುವ ತಂತ್ರಗಳು-ಉಸಿರಾಟದ ವ್ಯಾಯಾಮಗಳು, ದೈಹಿಕ ವ್ಯಾಯಾಮ ಇವೆಲ್ಲವೂ ವರ್ತನಾ ಚಿಕಿತ್ಸೆಯ ಮೂಲಕ ವ್ಯಕ್ತಿ ಕಲಿತು, ‘ಹೈಪೋಕಾಂಡ್ರಿಯಾಸಿಸ್’ ನಿಂದ, ಆರೋಗ್ಯದ ಕುರಿತ ಆತಂಕದಿಂದ ರೋಗಿ ಪಾರಾಗಲು ಸಾಧ್ಯವಿದೆ.

Comments
ಈ ವಿಭಾಗದಿಂದ ಇನ್ನಷ್ಟು

ಆರೋಗ್ಯ
ಯಶಸ್ಸಿನ ಬೆನ್ನೇರಿ...

ಅನೇಕ ಮಹಾಸಾಧಕರ ಜೀವನಚರಿತ್ರೆಯನ್ನು ನೋಡಿ; ಅವರಲ್ಲಿ ಯಾರು ಕೂಡ ಸುಲಭವಾಗಿ ಯಶಸ್ಸಿನ ಉತ್ತುಂಗಕ್ಕೇರಿದ ನಿದರ್ಶನಗಳಿಲ್ಲ. ಆದರೆ ಅವರು ಸಾಧನೆಯ ಹಾದಿಯಲ್ಲಿ ಎದುರಿಸಿದ ಕಷ್ಟಗಳನ್ನು ದೊಡ್ಡದಾಗಿ...

17 Jan, 2018
‘ಶ್ರದ್ಧೆಯೇ ಮದ್ದು’

ಆರೋಗ್ಯ
‘ಶ್ರದ್ಧೆಯೇ ಮದ್ದು’

17 Jan, 2018
ಕೃತಕ ವೀರ್ಯ ಸೃಷ್ಟಿ: ಸಂಶೋಧನೆಯ ಹಾದಿ...

ಅಂಕುರ
ಕೃತಕ ವೀರ್ಯ ಸೃಷ್ಟಿ: ಸಂಶೋಧನೆಯ ಹಾದಿ...

13 Jan, 2018
ನಾರಿನ ಮಹತ್ವಕ್ಕೆ ಮತ್ತಷ್ಟು ಒತ್ತು

ಆಹಾರ ಆರೋಗ್ಯ
ನಾರಿನ ಮಹತ್ವಕ್ಕೆ ಮತ್ತಷ್ಟು ಒತ್ತು

13 Jan, 2018
ಮರಳಿದೆ ಸಂಕ್ರಾಂತಿ

ಆಚರಣೆ
ಮರಳಿದೆ ಸಂಕ್ರಾಂತಿ

13 Jan, 2018