ಯೋಜನಾಬದ್ಧ ಆಗಲಿ ಕೃಷಿ

ಪುರಾಣ, ಇತಿಹಾಸ, ಮಣ್ಣಿನ ಮಗ, ಅಜ್ಜಿಕಥೆ... ಹೀಗೆ. ಇವು ನಮ್ಮ ಪ್ರಮುಖ ವಿಚಾರಧಾರೆಗಳು. ಕಾರ್ಯಕ್ರಮಗಳ ಶಿರ್ಷಿಕೆಗಳೇ ಹೇಳುವಂತೆ ಸಮಾಜದ ಎಲ್ಲಾ ವರ್ಗ ಹಾಗೂ ವಯೋಮಾನದವರ ಪ್ರಜ್ಞೆಯನ್ನು ವಿಕಾಸಗೊಳಿಸುವ ಪರಿಕಲ್ಪನೆ ಇದರ ಹಿಂದಿದೆ.

ಎಂ.ಎಸ್‌.ರಾಘವೇಂದ್ರ ಸರಳ ಜೀವನ ಸಂಪಾದಕ

*ನಿಮ್ಮ ಕಾರ್ಯಕ್ರಮದ ಸ್ವರೂಪ ಹೇಗಿದೆ?
ಪುರಾಣ, ಇತಿಹಾಸ, ಮಣ್ಣಿನ ಮಗ, ಅಜ್ಜಿಕಥೆ... ಹೀಗೆ. ಇವು ನಮ್ಮ ಪ್ರಮುಖ ವಿಚಾರಧಾರೆಗಳು. ಕಾರ್ಯಕ್ರಮಗಳ ಶಿರ್ಷಿಕೆಗಳೇ ಹೇಳುವಂತೆ ಸಮಾಜದ ಎಲ್ಲಾ ವರ್ಗ ಹಾಗೂ ವಯೋಮಾನದವರ ಪ್ರಜ್ಞೆಯನ್ನು ವಿಕಾಸಗೊಳಿಸುವ ಪರಿಕಲ್ಪನೆ ಇದರ ಹಿಂದಿದೆ. ಆರ್ಥಿಕ ಉದಾರೀಕರಣದ ಪ್ರಭಾವ ಗ್ರಾಮಗಳಿಗೂ ತಟ್ಟಿದೆ. ಅದು ಕುಟುಂಬದ ಮೇಲೆ ವಿವಿಧ ರೂಪದಲ್ಲಿ ಬೀರಿ ನಗರ- ಗ್ರಾಮಗಳ ಎಲ್ಲಾ ಮಕ್ಕಳು ಅಜ್ಜಿ ಕಥೆಗಳಿಂದ ವಂಚಿತರಾಗುತ್ತಿದ್ದಾರೆ. ಇಲ್ಲಿ ಕೇಳುವ- ನೋಡುವ ಇಬ್ಬಗೆಯ ಸೃಜನಶೀಲ ಕ್ರಿಯೆಯಲ್ಲಿ ಕಥೆ ಮಗುವನ್ನು ತಲುಪುವುದು ವಿಶೇಷ ಅನ್ನಿಸುತ್ತದೆ.

ಪುರಾಣದ ವಿಷಯಕ್ಕೆ ಬಂದರೆ ಇದು ಕೂಡ ಹೊಸತಲೆಮಾರಿಗೆ ಮರೆಯಾದಂತೆ ಗೋಚರಿಸುತ್ತಿದೆ. ಇದನ್ನು ಹಲವರು ಹಲವು ನೆಲೆಯಲ್ಲಿ  ಅನಾವರಣ ಮಾಡಿದ್ದಾರೆ. ನಾವು ಭಾರತೀಯ ಪರಂಪರೆಯೊಂದಿಗೆ ಅನುಸಂಧಾನ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಾವು ಓದುತ್ತಿರುವ ಇತಿಹಾಸದಲ್ಲಿ ಪ್ರಧಾನ ಧಾರೆ ಒಳಗೊಳ್ಳುವ ಕವಲು ಧಾರೆಗಳು ಅವಕೃಪೆಗೆ ಒಳಗಾಗುತ್ತಿವೆ ಎನ್ನುವ ಚಿಂತನೆಯ ಹಿನ್ನೆಲೆಯಲ್ಲಿ ಅದಕ್ಕೂ ಇತಿಹಾಸ ಕಟ್ಟುವ ಪ್ರಯತ್ನ. ಇನ್ನು ಬಹುಮುಖ್ಯ ಸಂಗತಿ ಎಂದರೆ ಈ ನಾಡಿನ ಬಹುಸಂಖ್ಯಾತ ವೃತ್ತಿ ಸಮುದಾಯ ಕೃಷಿಕರದು. ಅವರಿಗಾಗಿ  ಎಷ್ಟೇ ಕಾರ್ಯಕ್ರಮ ಬಂದರೂ ಕಡಿಮೆ. ಆದರೆ ಈಗಿರುವ ಅವಕಾಶ ಕಡಿಮೆ ಎನ್ನುವ ದೃಷ್ಟಿಯಲ್ಲಿ ಮಣ್ಣಿನಮಗ ರೂಪಿಸಿದ್ದೇವೆ.

*ಮಣ್ಣಿನ ಮಗನ ವಿಶೇಷತೆಗಳೆನು?
ಸಮಾಜಶಾಸ್ತ್ರದ ಹಿನ್ನಲೆಯಲ್ಲಿ ನೋಡಿದರೆ ಪ್ರತಿ ನಾಗರಿಕನ ಮೂಲ ಕೃಷಿ. ವಿಚಿತ್ರ ಎಂದರೆ ಕೃಷಿಕ ದೇಶಕ್ಕೆ ಅಮೃತವಿಟ್ಟು ತಾನು ವಿಷ ಕುಡಿಯುತ್ತಿದ್ದಾನೆ. ಅವನಲ್ಲಿ ಆತ್ಮವಿಶ್ವಾಸ ಈ ಮಟ್ಟಿಗೆ ನಾಶವಾಗಲು ಹಳೆಯ ಪದ್ಧತಿ, ಹಾಗೂ ಅದರ ಮೇಲೆ ಹೇರಲಾಗುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳ ವ್ಯಾವಹಾರಿಕ ತಂತ್ರಗಾರಿಕೆ ಕಾರಣ. ಇಂತಹ ಸಂಕೀರ್ಣ ಸಂದರ್ಭದಲ್ಲಿಯೂ ನಿಗದಿತ ಆದಾಯ ಮೂಲದ ಉದ್ಯೋಗ ಬಿಟ್ಟು ಹೊಸಬರು ಕೃಷಿ ಮಾಡಲು ಬರುತ್ತಿದ್ದಾರೆ. ಅಂದರೆ, ಇಲ್ಲಿ ಯಶಸ್ಸಿನ ಭರವಸೆ ಇದೆ ಎನ್ನುವುದು ನಿಶ್ಚಿತ. ಅಂತಹದ್ದನ್ನು ನಾವು ಹೇಳಿಕೊಡಬೇಕು. ಉದಾಹರಣೆಗೆ ರಾಜ್ಯದ ಹವಾಗುಣದಲ್ಲಿಯೇ ಸ್ಟ್ರಾಬೆರಿಯನ್ನು ಕುಂಡದಲ್ಲೇ ಬೆಳೆದು ಸಂಪಾದಿಸಲು ಅವಕಾಶವಿದೆ.

*ಕೃಷಿಕರ ಸಮಸ್ಯೆಗೆ ಏನು ಪರಿಹಾರ?
ಕೃಷಿಗೆ ಆರ್ಥಿಕ ಸಮಸ್ಯೆ, ಕಾರ್ಮಿಕರ ಸಮಸ್ಯೆ, ಹವಾಮಾನ ವೈಪರಿತ್ಯ, ಅವೈಜ್ಞಾನಿಕ ಬೆಲೆ ಹೀಗೆ ನಾನಾ ಸಮಸ್ಯೆಗಳು ಇರುವುದು ವಾಸ್ತವ. ಇಂತಹ ವಿಷಮ ಪರಿಸ್ಥಿತಿಯಲ್ಲೂ ಯಶಸ್ವಿ ರೈತರು ನಮ್ಮ ಕಣ್ಣ ಮುಂದಿದ್ದಾರೆ. ಅವರ ಯಶಸ್ಸಿಗೆ ಅವರ ಕೌಶಲ್ಯ ಹಾಗೂ ಬದ್ಧತೆ ಕಾರಣವಾಗಿರುತ್ತದೆ. ಅವರ ಬುದ್ಧಿವಂತಿಕೆ, ಅವರ ತಾಂತ್ರಿಕ ಆವಿಷ್ಕಾರಗಳನ್ನು ಪರಿಚಯಿಸುವುದು ತುಂಬಾ ಮುಖ್ಯ. ನಮ್ಮ ರೈತರು ಸಿಕ್ಕಾಪಟ್ಟೆ ಬುದ್ಧಿವಂತರು. ಕೆಟ್ಟುಹೋದ ಬೈಕ್‌ ಮೋಟಾರ್‌ಗಳನ್ನೇ ತಮ್ಮ ಶ್ರಮ ಕಡಿಮೆ ಮಾಡಲು ಬಳಸುತ್ತಿದ್ದಾರೆ. ಇಂತಹ ತಂತ್ರ ಹತ್ತಾರು. ಅವನ್ನು ಎಲ್ಲರೂ ಸುಲಭವಾಗಿ ಮಾಡಿಕೊಳ್ಳಲು ಸಾಧ್ಯ. ಅದಕ್ಕೆ ಪ್ರಾಥಮಿಕ ಮಾಹಿತಿ ನೀಡುವುದು ನಮ್ಮ ಕೆಲಸ.

*ಗ್ರೀನ್‌ಹೌಸ್‌ ಪದ್ಧತಿ ಅಂದರೆ?
ಹೊಸಬಗೆಯ ತಂತ್ರದಿಂದ ಬೆಳೆ ಮಾಡುವುದರಿಂದ ದೀರ್ಘಕಾಲದ ಫಲ ಅನುಭವಿಸಲು ಸಾಧ್ಯ. ಉದಾಹರಣೆ ಟೊಮ್ಯಾಟೋ ಬಯಲು ಪ್ರದೇಶದಲ್ಲಿ ಬೆಳೆಯುವ ಸಸ್ಯಕ್ಕೆ ಮೂರು ತಿಂಗಳು ಆಯುಷ್ಯ. ಅದನ್ನೇ ಆರಂಭಿಕ ಬಂಡವಾಳ ಹೆಚ್ಚಾದರೂ ‘ಗ್ರೀನ್‌ಹೌಸ್‌’ (ಸೂರ್ಯನ ಕಿರಣಕ್ಕೆ ತಡೆ) ಬೆಳೆ ತೆಗೆಯುವುದರಿಂದ ಒಂದೆರಡು ವರ್ಷಕ್ಕೆ ಅದರ ಆಯುಷ್ಯ ಹೆಚ್ಚಿಸಬಹುದು. ಆ ಮೂಲಕ ಕೃಷಿ ಚಟುವಟಿಕೆಯ ಖರ್ಚು- ಶ್ರಮ ಕಡಿಮೆ ಮಾಡುವ ಜೊತೆಗೆ ಬೆಲೆ ಸಮರವನ್ನು ಎದುರಿಸಬಹುದು. ಯಾವುದೋ ಒಂದು ತಿಂಗಳು ಬೆಲೆಯಲ್ಲಿ ನಷ್ಟವಾದರೆ ನಂತರದ ತಿಂಗಳಲ್ಲಿ ಅದರ ನಷ್ಟವನ್ನು ಸರಿದೂಗಿಸಬಹುದು ಇದನ್ನು ಪರಿಚಯಿಸುವುದು ಮುಖ್ಯ.

*ಕೃಷಿಯ ಉಪ ಕಸುಬಿನ ಬಗ್ಗೆ ಏನೆಲ್ಲಾ ಇವೆ?
ಕೃಷಿಗೆ ಇರಬಹುದಾದ ಸರ್ಕಾರದ ವಿವಿಧ ಯೋಜನೆಗಳನ್ನು ಪರಿಚಯಿಸುವ ಮೂಲಕ ವಿಷಯ ಪರಿಣಿತರು, ಯಶಸ್ವಿ ರೈತರ ಅನುಭವವನ್ನು ದೃಶ್ಯದ ಮೂಲಕ ಕಟ್ಟಿಕೊಡುತ್ತೇವೆ. ಇದರ ಜತೆಗೆ ಹೈನುಗಾರಿಕೆ, ಕುರಿ- ಕೋಳಿ, ಮೊಲ ಸಾಕಾಣಿಕೆ, ಅದಕ್ಕೆ ತರಬೇತಿ ಹಾಗೂ ಮಾರುಕಟ್ಟೆ ಮಾಹಿತಿ ಎಲ್ಲವನ್ನೂ ನೀಡಿ ರೈತರಿಗೆ  ಪರಿಣಿತರು, ಯಶಸ್ವಿ ರೈತರ ಅನುಭವವನ್ನು ಕಟ್ಟಿಕೊಡುತ್ತೇವೆ.

Comments