ನಟನೆ ಇಷ್ಟದ ಆಯ್ಕೆ

ಯಶೋದೆಯ ಮೂಲಕ ಕಿರುತೆರೆಯ ಪಯಣ ಆರಂಭವಾಗಿದೆ. ಅಲ್ಲಿನ ರಮ್ಯಾಳಿಗೂ ಇಲ್ಲಿನ ಸರಯೂಳಿಗೆ ಕಲ್ಪನೆ ಮಾಡದಷ್ಟು ಅಂತರವಿದೆ. ಈಕೆ ವೃತ್ತಿಯಿಂದ ವೈದ್ಯೆ. ಅದರಲ್ಲೂ ಸಾಮಾಜಿಕ ಬದ್ಧತೆಯುಳ್ಳ ವೈದ್ಯೆ ತನ್ನ ಆದರ್ಶಕ್ಕಾಗಿ ಎಂತಹ ಸವಾಲುಗಳನ್ನಾದರೂ ಎದುರಿಸಬಲ್ಲಳು. ಅವಳ ಈ ಸೇವೆಗೆ ಪ್ರತಿಫಲಗಳನ್ನು ಅಪೇಕ್ಷಿಸುವುದಿಲ್ಲ.

ಸಹನಾ ಅಣ್ಣಪ್ಪ ಉದಯದ ‘ಸಾಕ್ಷಿ’ಯ ಸರಯೂ

* ರಮ್ಯಾಳ ನೆಗೆಟಿವ್‌ ಗುಣ  ಸರಯೂಳಲ್ಲಿ ಎಲ್ಲಿ ಹೋಯಿತು?
ಯಶೋದೆಯ ಮೂಲಕ ಕಿರುತೆರೆಯ ಪಯಣ ಆರಂಭವಾಗಿದೆ. ಅಲ್ಲಿನ ರಮ್ಯಾಳಿಗೂ ಇಲ್ಲಿನ ಸರಯೂಳಿಗೆ ಕಲ್ಪನೆ ಮಾಡದಷ್ಟು ಅಂತರವಿದೆ. ಈಕೆ ವೃತ್ತಿಯಿಂದ ವೈದ್ಯೆ. ಅದರಲ್ಲೂ ಸಾಮಾಜಿಕ ಬದ್ಧತೆಯುಳ್ಳ ವೈದ್ಯೆ ತನ್ನ ಆದರ್ಶಕ್ಕಾಗಿ ಎಂತಹ ಸವಾಲುಗಳನ್ನಾದರೂ ಎದುರಿಸಬಲ್ಲಳು. ಅವಳ ಈ ಸೇವೆಗೆ ಪ್ರತಿಫಲಗಳನ್ನು ಅಪೇಕ್ಷಿಸುವುದಿಲ್ಲ. ಅತ್ಯಂತ ಸರಳ ಬದುಕಿನ ಸರಯೂ ನಟನೆಯಲ್ಲಿ ಹೆಚ್ಚು ಸವಾಲನ್ನು ಒಡ್ಡುವ ಪಾತ್ರ. ಆದರೆ ರಮ್ಯಾ ಅಪಕ್ವ ಹುಡುಗಿ. ಚಾಡಿ ಮಾತಿಗೆ ಕಿವಿಗೊಟ್ಟು ತನಗೆ ತಿಳಿದಿದ್ದನ್ನು ಮಾಡುತ್ತಾಳೆ.

* ನಟನೆಯನ್ನು ಆಯ್ಕೆ ಮಾಡಿಕೊಂಡಿದ್ದು ಹೇಗೆ?
ಶಾಲಾ ದಿನಗಳಿಂದಲೂ ಪಠ್ಯದ ಓದಿಗಿಂತ ಪಠ್ಯೇತರ ವಿಷಯಕ್ಕೆ ಮೊದಲ ಆದ್ಯತೆಯಾಗಿತ್ತು. ಶಾಲೆಯಲ್ಲಿ ಕ್ರಾಫ್ಟ್‌ ಹಾಗೂ ಕ್ರಿಯಾಶೀಲ ಕೆಲಸಗಳನ್ನು ತುಂಬಾ ಆಸಕ್ತಿಯಿಂದ ಮಾಡುತ್ತಿದ್ದೆ. ಬೆಂಗಳೂರಿನ ನ್ಯಾಷನಲ್‌ ಕಾಲೇಜಿಗೆ ಪಿಯು ಸೇರಿದ ಮೇಲೆ ಕಾಲೇಜು ರಂಗಭೂಮಿ ಪರಿಚಯವಾಯಿತು. ಮೊದಲ ಪರ್ವದಲ್ಲೇ ‘ಚಿತ್ರಪಟ’ದಲ್ಲಿ ರಾವಣ ಪಾತ್ರ ಮಾಡಿದೆ. ‘ಕಿರುಗೂರಿನ ಗಯ್ಯಾಳಿಗಳು’ ಸೇರಿದಂತೆ ಅನೇಕ ನಾಟಕಗಳಲ್ಲಿ ನಟಿಸಿದೆ. ಅಷ್ಟರಲ್ಲಿ  ನಮ್ಮ ತಂದೆ ಮೊದಲು ಓದು, ನಂತರ ನಿನ್ನ ಆಯ್ಕೆ ಎಂದರು. ಅದರಂತೆ ಎಂಎಸ್‌ಡಬ್ಲು ಮುಗಿಸಿ ಒಂದು ವರ್ಷ ವಿಪ್ರೊದಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸವನ್ನೂ ಮಾಡಿದೆ. ನಂತರ ನಿರೀಕ್ಷೆಗಳಿಲ್ಲದೆ, ಪ್ರೀತಿ ಹಾಗೂ ಖುಷಿಯಿಂದ ಕೆಲಸ ಮಾಡಬೇಕು ಎಂದು ನಟನೆಗೆ ಬಂದೆ.

* ಎಚ್‌ಆರ್‌ ಹಾಗೂ ನಟನಾ ವೃತ್ತಿ ಹೋಲಿಸಿದರೆ...
ಎಚ್‌ಆರ್‌ ಬೌದ್ಧಿಕ ಕಸರತ್ತು. ನಟನೆ ಬದ್ಧಿ, ಭಾವ ಹಾಗೂ ದೈಹಿಕ ಕಸರತ್ತನ್ನು ಒರೆಗೆ ಹಚ್ಚುವಂತೆ ಮಾಡುತ್ತದೆ. ಇಲ್ಲಿ ನಮ್ಮ ಶ್ರಮ ಹಾಗೂ ಪ್ರತಿಭೆಗೆ ಬೇಗ ಮನ್ನಣೆ ಸಿಗುತ್ತದೆ. ಅದನ್ನು ಗುರುತಿಸುವುದೂ ಸುಲಭದ ಸಂಗತಿಯಾಗಿದೆ. ಕೆಲಸ ಎಷ್ಟೇ ಒತ್ತಡವನ್ನು ಉಂಟುಮಾಡಿದರೂ ತಲೆನೋವು ಎನಿಸುವುದಿಲ್ಲ. ಏಕೆಂದರೆ ಇದು ನನ್ನ ಇಷ್ಟದ ಆಯ್ಕೆ. ಹೊತ್ತು- ಗೊತ್ತಿಲ್ಲದೆ ದುಡಿದರೂ ಶ್ರಮ ಎನಿಸುವುದಿಲ್ಲ. ಹೊಸತನ್ನು ಕಲಿಯುತ್ತೇನೆ ಎನ್ನುವ ಉತ್ಸಾಹ ಇರುತ್ತದೆ. ನೌಕರಿ ಆದರೆ ಹಾಗೆ ಆಗುವುದಿಲ್ಲ. ಹೋಗಬೇಕಲ್ಲ... ಮಾಡಬೇಕಲ್ಲಾ... ಎನ್ನುವ ಒತ್ತಾಯವೇ ಕೆಲವೊಮ್ಮೆ ತಲೆ ನೋವು ತಂದಿಡುತ್ತದೆ.

* ಅಭಿನಯಕ್ಕೆ ಯಾವ ರೀತಿ ಸಿದ್ಧತೆ ಮಾಡಿಕೊಂಡು ಹೋಗುತ್ತೀರಿ?
ಮೂಲತಃ ನಾನು ಭರತನಾಟ್ಯ ಕಲಾವಿದೆ. ಇಂದಿನ ಕಥೆ ನನಗೆ ಗೊತ್ತಿರುತ್ತದೆ. ಅದಕ್ಕೆ ಸೂಕ್ತವಾಗುವ ನೋಟ, ಅಭಿನಯದ ಸಾಧ್ಯತೆಗಳನ್ನು ಲೆಕ್ಕಹಾಕಿ ಮೂರು ನಾಲ್ಕು ರೀತಿಯಲ್ಲಿ ಯೋಚಿಸಿರುತ್ತೇನೆ. ನಿರ್ದೇಶಕರ ನಿರೀಕ್ಷೆಗೆ ನನ್ನ ಯೋಚನೆ ಯಾವುದು ತಾಳೆಯಾಗುತ್ತದೆಯೋ ಅದೇ ಮಾದರಿಯನ್ನು ಅನುಸರಿಸುತ್ತೇನೆ.

ಮೊದಲು ನನಗೆ ಅವಕಾಶ ನೀಡಿ ಹುರಿದುಂಬಿಸಿದ ವಿನೋದ್‌ ಧೊಂಡಳೆ ಅವರು ಆತ್ಮವಿಶ್ವಾಸವನ್ನು ತುಂಬಿದರು. ಮಾತ್ರವಲ್ಲದೆ ನಟನೆಯ ವಿಷಯದಲ್ಲೂ ನನಗೆ ತುಂಬಾ ಸ್ವಾತಂತ್ರ್ಯ ನೀಡಿ ಪ್ರೋತ್ಸಾಹಿಸಿದರು. ಅದರಿಂದ ನಾನು ತುಂಬಾ ಕಲಿತಿದ್ದೇನೆ.

* ಕನಸಿನ ಬಗ್ಗೆ  ಹೇಳುವುದಾದರೆ...
ನನಗೆ ಸೂಕ್ತವಾಗುವ ಪಾತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಆದರೆ ಪಾತ್ರ ಏಕಮಾದರಿಯಂತೆ ಇರಬಾರದು. ಪ್ರತಿ ಪಾತ್ರವೂ ಹೊಸ ಸವಾಲನ್ನು ನೀಡಬೇಕು. ಅಲ್ಲಿ ನಾನು ಎಲ್ಲಿಯೂ ಇರಬಾರದು. ನಾನು ವಿವಿಧ ಪಾತ್ರಗಳಲ್ಲಿ ನಟಿಸುವ ಕನಸಿದೆ. ನಟನೆಯಲ್ಲಿ ಕಲಿಯುವುದು ತುಂಬಾ ಇದೆ. ಧಾರಾವಾಹಿಗಳಲ್ಲಿ ಮನೆಯ ವಾತಾವರಣವನ್ನು ಕಾಣುತ್ತಿದ್ದೇನೆ. ಹಾಗಾಗಿ ಸಿನಿಮಾದ ಬಗ್ಗೆ ಯೋಚನೆ ಮಾಡಿಲ್ಲ.

* ನಿಮ್ಮ ಕುಟುಂಬದ ಬಗ್ಗೆ ಹೇಳುವುದಾದರೆ...
ನನಗೊಬ್ಬ ಅಣ್ಣ. ಆತ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದಾನೆ. ಅಪ್ಪ ಅಣ್ಣಪ್ಪ ವಿಪ್ರೊ ಕಂಪೆನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕರಾಗಿದ್ದಾರೆ. ಅವರು ಕಡೂರಿನವರು. ಅಮ್ಮ  ಗೃಹಿಣಿ.

ಮನೆಯಲ್ಲಿ ಎಲ್ಲಾ ರೀತಿಯಿಂದಲೂ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಅಪ್ಪ ‘ನನ್ನಂತೆ ನಿನಗೆ ದುಡಿಯುವ ಅನಿವಾರ್ಯತೆ ಇಲ್ಲ. ನಿನಗೆ ಇಷ್ಟ ಬಂದಿದ್ದನ್ನು ಮಾಡು’ ಎಂದು ಹೇಳಿದ್ದಾರೆ. ಅವರ ಪ್ರೋತ್ಸಾಹ ನನಗೆ ಪ್ರೇರಣೆಯಾಗಿದೆ.

Comments