ಇಂದ್ರಾ ಹೇಳಿದ ಸತ್ಯ

ಇಂದ್ರಾ ಕೃಷ್ಣಮೂರ್ತಿ ನೂಯಿ. 60ರ ಹರೆಯದ ಪ್ರೌಢ ಮಹಿಳೆ. ನಿವ್ವಳ ಲಾಭ ಗಳಿಕೆಯಲ್ಲಿ ಜಗತ್ತಿನ ಎರಡನೇ ಅತ್ಯಂತ ದೊಡ್ಡ ಆಹಾರ ಕಂಪೆನಿ ಪೆಪ್ಸಿಕೋ ದ ಚೇರ್‌ಮನ್‌ ಮತ್ತು ಸಿಇಓ. ಫೋರ್ಬ್ಸ್‌್ ‘ಜಗತ್ತಿನ ನೂರು ಮಂದಿ ಅತ್ಯಂತ ಪ್ರಭಾವಶಾಲಿ ಮಹಿಳೆ’ಯರ ಪಟ್ಟಿಯಲ್ಲಿ ಹಲವು ವರ್ಷಗಳಿಂದ ಸ್ಥಾನ ಪಡೆದಿರುವಾಕೆ.

ಇಂದ್ರಾ ಹೇಳಿದ ಸತ್ಯ

ಇಂದ್ರಾ ಕೃಷ್ಣಮೂರ್ತಿ ನೂಯಿ. 60ರ ಹರೆಯದ ಪ್ರೌಢ ಮಹಿಳೆ. ನಿವ್ವಳ ಲಾಭ ಗಳಿಕೆಯಲ್ಲಿ ಜಗತ್ತಿನ ಎರಡನೇ ಅತ್ಯಂತ ದೊಡ್ಡ ಆಹಾರ ಕಂಪೆನಿ ಪೆಪ್ಸಿಕೋ ದ ಚೇರ್‌ಮನ್‌ ಮತ್ತು ಸಿಇಓ. ಫೋರ್ಬ್ಸ್‌್ ‘ಜಗತ್ತಿನ ನೂರು ಮಂದಿ ಅತ್ಯಂತ ಪ್ರಭಾವಶಾಲಿ ಮಹಿಳೆ’ಯರ ಪಟ್ಟಿಯಲ್ಲಿ ಹಲವು ವರ್ಷಗಳಿಂದ ಸ್ಥಾನ ಪಡೆದಿರುವಾಕೆ. (2014ರಲ್ಲಿ ಈ ಪಟ್ಟಿಯಲ್ಲಿ 13ನೇ ಸ್ಥಾನವಿತ್ತು.) ಮೇಲಾಗಿ ಇಬ್ಬರು ಹೆಣ್ಣುಮಕ್ಕಳ ತಾಯಿ. ಮೊದಲ ಮಗಳು ಜಗತ್ತಿನ ಅತ್ಯಂತ ಪ್ರತಿಷ್ಠಿತ ಯೇಲ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯಲ್ಲಿ ಕಲಿಯುತ್ತಿದ್ದಾಳೆ. ಇಂತಿರ್ಪ ಇಂದ್ರಾ ನೂಯಿ ಕಳೆದ ವಾರ ಹೇಳಿದ್ದು- ‘ನನ್ನ ಸಹೋದ್ಯೋಗಿಗಳು ನನ್ನನ್ನು ಹನೀ, ಸ್ವೀಟೀ ಎಂದು ಕರೆಯುತ್ತಾರೆ. ಇದು ಅಸಮಾನತೆಯ ಸಂಕೇತ. ಹೆಣ್ಣು ಎಷ್ಟೇ ಯಶಸ್ವೀ ವೃತ್ತಿಪರತೆಯನ್ನು ಸಾಧಿಸಿದರೂ, ಉದ್ಯಮಿಯಾದರೂ ಪುರುಷ ಪ್ರಧಾನ ಸಮಾಜದಲ್ಲಿ ಇನ್ನೂ ಸಮಾನತೆ ಸಿಕ್ಕಿಲ್ಲ.’

  ಅದು ಟೀನಾ ಬ್ರೌನ್‌ ಸಂಘಟಿಸಿದ್ದ ‘ವುಮೆನ್‌ ಇನ್‌ ದಿ ವರ್ಲ್ಡ್’ ಶೃಂಗಸಭೆ. ಆ ಸಭೆಯಲ್ಲಿ ಜಗತ್ತಿನ ಅತ್ಯಂತ ಯಶಸ್ವೀ ಮಹಿಳೆಯರೆಲ್ಲ ಸೇರುತ್ತಾರೆ. ಈ ಸಲದ್ದು ಏಳನೇ ಸಭೆ. ತುಂಬಿದ ಸಭೆಯಲ್ಲಿ ಇಂದ್ರಾ ನೂಯಿ ಹೇಳಿದ್ದು- ಕೆಲಸದ ಸ್ಥಳದಲ್ಲಿ ಮಹಿಳೆಯರನ್ನು ಸ್ವೀಟಿ, ಹನೀ ಎಂದು ಕರೆಯುವುದನ್ನು ಕಂಡರೆ ನನಗೆ ದ್ವೇಷ ಉಕ್ಕುತ್ತದೆ. ಹೆಣ್ಣನ್ನು ಒಬ್ಬ ವ್ಯಕ್ತಿಯಾಗಿ ನೋಡಲು ಇವರಿಗೆ ಏಕೆ ಆಗುವುದಿಲ್ಲ? ಪ್ರತಿಷ್ಠಿತ ಕಂಪೆನಿಗಳಲ್ಲೂ ಪುರುಷ ಮತ್ತು ಮಹಿಳಾ ಅಧಿಕಾರಿಗಳಿಗೆ ಸಮಾನ ವೇತನ ಇಲ್ಲ.’

  ಹಾಗೆ ನೋಡಿದರೆ ಇಂದ್ರಾ ನೂಯಿಯವರು ಪಡೆಯುತ್ತಿರುವ ವೇತನ ಕಡಿಮೆಯೇನಲ್ಲ. ಮೂಲ ವೇತನವೇ 1.6 ಕೋಟಿ ಡಾಲರ್‌. 2.5 ಕೋಟಿ ಡಾಲರ್‌ ಬೋನಸ್‌. ಅದರ ಜತೆಗೆ ಪ್ರೋತ್ಸಾಹ ಧನ, ಪಾಲುದಾರಿಕೆ ಮೊತ್ತ ಎಲ್ಲ ಸೇರಿದರೆ 3-4 ಪಟ್ಟು ಹೆಚ್ಚಾಗುತ್ತದೆ. ಇಂದ್ರಾ ಅವರು ಪೆಪ್ಸಿಕೋ ಕಂಪೆನಿಯನ್ನು ಸೇರಿದ್ದು 1994ರಲ್ಲಿ. ಕಂಪೆನಿಯಲ್ಲಿ ಒಂದೊಂದೇ ಮೆಟ್ಟಿಲು ಹತ್ತುತ್ತಾ 2001ರಲ್ಲಿ ಸಿಇಓ ಮತ್ತು ಅಧ್ಯಕ್ಷರಾದರು. ಕಂಪೆನಿಯ ಸಿಇಓ ಜವಾಬ್ದಾರಿ ವಹಿಸಿಕೊಂಡಾಗ ಕಂಪೆನಿಯ ನಿವ್ವಳ ಆದಾಯ 2.7 ಶತಕೋಟಿ ಡಾಲರ್‌ ಇತ್ತು. ಕಳೆದ 15 ವರ್ಷಗಳಲ್ಲಿ ನಿವ್ವಳ ಲಾಭ ಏರುತ್ತಾ ಹೋಗಿ ಈಗ 6.5 ಶತಕೋಟಿ ಡಾಲರ್‌ ತಲುಪಿದೆ. ಅಂದರೆ ಈಗ ಪಡೆಯುತ್ತಿರುವ ವೇತನ ಅರ್ಹತೆ ಮತ್ತು ಸಾಧನೆಗೆ ತಕ್ಕಂತೆಯೇ ಇದೆ. ಇಷ್ಟಿದ್ದೂ ದುಡಿಯುವ ಕ್ಷೇತ್ರದಲ್ಲಿ ಪುರುಷ ಮೇಲರಿಮೆಯ ಕಾವು ತಾಕಿದೆಯೆಂದರೆ ಸಮಸ್ಯೆ ನಿಜಕ್ಕೂ ಗಂಭೀರವೇ. ಭಾರತ ಬಿಡಿ, ಅಮೆರಿಕದಂತಹ ಪಾಶ್ಚಾತ್ಯ ದೇಶದಲ್ಲೂ ಲಿಂಗಭೇದದ ಅಸಮಾನತೆ ಜೀವಂತವಾಗಿದೆ ಎನ್ನುವುದು ಖಚಿತ.

  ಇಂದ್ರಾ ನೂಯಿ ಮೂಲತಃ ಮದ್ರಾಸ್‌ನವರು. ಕ್ರಿಶ್ಚಿಯನ್ ಕಾಲೇಜಿನಲ್ಲಿ ಪಿಸಿಎಂ ಡಿಗ್ರಿ ಪಡೆದು ಕೋಲ್ಕತ್ತಾದ ಪ್ರತಿಷ್ಠಿತ ಐಐಎಂ ನಲ್ಲಿ ಎಂಬಿಎ ಮುಗಿಸಿದವರು. ಜಾನ್ಸನ್‌ ಆ್ಯಂಡ್ ಜಾನ್ಸನ್‌ ಕಂಪೆನಿಯಲ್ಲಿ ಪ್ರಾಡಕ್ಟ್‌ ಮ್ಯಾನೇಜರ್‌ ಆಗಿ ವೃತ್ತಿಜೀವನ ಆರಂಭಿಸಿ, ಅದೇ ಸಮಯದಲ್ಲಿ ಯೇಲ್‌ ಮ್ಯಾನೇಜ್‌ಮೆಂಟ್‌ ಸ್ಕೂಲ್ ನಲ್ಲಿ ಮಾಸ್ಟರ್ಸ್‌ ಡಿಗ್ರಿ ಪಡೆದರು. ಬಾಸ್ಟನ್‌ ಕನ್ಸಲ್ಟಿಂಗ್‌ ಕಂಪೆನಿ, ಮೋಟೊರೋಲ, ಆಸೀ ಬ್ರೌನ್ ಬೋವೆರಿ ಮುಂತಾದ ಪ್ರತಿಷ್ಠಿತ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ ಬಳಿಕ ಪೆಪ್ಸಿಕೋ ಪ್ರವೇಶ. ಇಡೀ ಕಂಪೆನಿಯ ಮಾರುಕಟ್ಟೆ ಸ್ವರೂಪವನ್ನು ಬದಲಾಯಿಸಿದ ಕೀರ್ತಿ ಪಡೆದ ಗಟ್ಟಿಗಿತ್ತಿ. ಈಗ ಅಮೆರಿಕದ ಸಹಜ ಪ್ರಜೆ. ಫೋರ್ಬ್ಸ್‌ ಇತ್ತೀಚೆಗೆ ಪ್ರಕಟಿಸಿದ ‘ಜಗತ್ತಿನ ಅತ್ಯಂತ ಪ್ರಭಾವಶಾಲಿ ತಾಯಂದಿರ’ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದವರು.

ಜಗತ್ತಿನಾದ್ಯಂತ ತಿರುಗಾಟ, ಸುದೀರ್ಘ ಮೀಟಿಂಗ್‌ಗಳು, ಕಂಪೆನಿಯ ಕೆಲಸಗಳ ಎಲ್ಲ ಒತ್ತಡಗಳ ಮಧ್ಯೆ ಇಂದ್ರಾ ನೂಯಿ ಇಬ್ಬರು ಹೆಣ್ಣುಮಕ್ಕಳನ್ನು ಸಾಕಿದ್ದು ಹಾಗೂ ಅಮ್ಮ ಮತ್ತು ಗಂಡನನ್ನು ಸಂಭಾಳಿಸಿದ್ದು ನಿಜಕ್ಕೂ ಕುತೂಹಲಕರ ಕಥೆ. ಹಿಂದೊಮ್ಮೆ ನಂದನ್‌ ನೀಲೇಕಣಿ ನಡೆಸಿದ ಸಂದರ್ಶನದಲ್ಲಿ ಈ ಬಗ್ಗೆ ಕುತೂಹಲಕರ ವಿವರಗಳನ್ನು ಬಿಚ್ಚಿಟ್ಟಿದ್ದರು.

‘ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಂದರೆ ಅಮ್ಮ ಹಾಲು ತಂದುಕೊಡು ಎನ್ನುತ್ತಿದ್ದುದುಂಟು. ನನಗೆ ಸುಸ್ತಾಗಿದೆ, ಯಾಕೆ ನಿನ್ನ ಅಳಿಯ ಮನೆಯಲ್ಲಿದ್ದಾರಲ್ಲ, ಅವರು ಕೊಡಲ್ಲವೆ.. ಎಂದು ಪ್ರಶ್ನಿಸಿದರೆ, ‘ಕಚೇರಿಯ ತಲೆನೋವು ಮನೆಗೆ ತರಬೇಡ. ಇಲ್ಲಿ ನೀನು ಮಗಳು, ಹೆಂಡತಿ ಮತ್ತು ತಾಯಿ. ಮನೆಯಲ್ಲಿ ನಿನ್ನ ಕೆಲಸ ಏನಿದೆಯೋ ಅದನ್ನು ನೀನೇ ನಿರ್ವಹಿಸಬೇಕು’ ಎಂದು ಅಮ್ಮ ಹೇಳಿದ್ದರಂತೆ. ಮಹಿಳೆ ಎದುರಿಸುವ ‘ಜೈವಿಕ ಗಡಿಯಾರ’ ಮತ್ತು ‘ಕೆಲಸದ ಗಡಿಯಾರ’ದ ನಡುವಣ ಬಿಕ್ಕಟ್ಟಿನ ಬಗ್ಗೆ ಅತ್ಯಂತ ಗಟ್ಟಿ ಧ್ವನಿಯಲ್ಲಿ ಮಾತನಾಡುವವರು ಇಂದ್ರಾ. ಅಷ್ಟಾದರೂ ಆಕೆ ಹೇಳುವುದು- ನನ್ನ ಈ ಗಟ್ಟಿ ವ್ಯಕ್ತಿತ್ವಕ್ಕೆ ಅಮ್ಮನೇ ಕಾರಣ. ಆಕೆ ನನ್ನನ್ನು ಸದೃಢವಾಗಿ ಬೆಳೆಸಿದಳು! ಅಮ್ಮನಿಗೆ ತಕ್ಕ ಮಗಳು. ‘ಆದರೆ ನನ್ನ ಹೆಣ್ಣುಮಕ್ಕಳನ್ನು ಕೇಳಿದರೆ ಅವರು ನನ್ನ ಬಗ್ಗೆ ಮಕ್ಕಳಿಗೆ ತಕ್ಕ ಅಮ್ಮ ಎಂಬ ಮಾತನ್ನು ಹೇಳುತ್ತಾರೆಂಬ ಭರವಸೆ ನನಗಿಲ್ಲ’ ಎಂದು ನಗುತ್ತಾರೆ ನೂಯಿ!

Comments