ವೈದ್ಯ ಪದ್ಧತಿಗಳ ಜತೆ ಗಾಂಧೀಜಿ ಅನುಸಂಧಾನ

‘ಆಯುರ್ವೇದದ ಈ ಹಿಂದಿನ ಯಶಸ್ಸಿನ ಭರವಸೆ ಮೇಲೆಯೇ ಆಯುರ್ವೇದ ವೈದ್ಯರು ಈಗ ಬದುಕುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆಯರ್ವೇದದಲ್ಲಿ ರೋಗ ಪತ್ತೆ ವಿಧಾನವು ಈಗಲೂ ತುಂಬ ಹಳೆಯ ವಿಧಾನದಲ್ಲಿಯೇ ಇದೆ. ಅದನ್ನು ಈಗ ಯಾವುದೇ ಬಗೆಯಲ್ಲಿಯ ಪಾಶ್ಚಿಮಾತ್ಯ ವೈದ್ಯ ಪದ್ಧತಿ ಜತೆ ಹೋಲಿಸಲಿಕ್ಕಾಗದು’ ಎಂದು ಹೇಳಿದ್ದರು.

ವೈದ್ಯ ಪದ್ಧತಿಗಳ ಜತೆ ಗಾಂಧೀಜಿ ಅನುಸಂಧಾನ

ಆಧುನಿಕ ಅಥವಾ ಪಾಶ್ಚಿಮಾತ್ಯ ವೈದ್ಯಕೀಯದಲ್ಲಿ ತರಬೇತಿ ಪಡೆದ ವೈದ್ಯರುಗಳನ್ನು ಒಳಗೊಂಡ ಕುಟುಂಬದಲ್ಲಿ ಜನಿಸಿದವನು ನಾನು. ನನಗೆ ನೆನಪಿರುವಂತೆ, 1980ರ ದಶಕದಲ್ಲಿ ನನ್ನ ಸಂಪರ್ಕಕ್ಕೆ ಬಂದ ವೈದ್ಯರೆಲ್ಲ ಪರ್ಯಾಯ ಆರೋಗ್ಯ ರಕ್ಷಣೆ ವಿಧಾನಗಳನ್ನು ನಂಬುತ್ತಿರಲಿಲ್ಲ. ಹೋಮಿಯೊಪಥಿ, ಆಯುರ್ವೇದ ಅಥವಾ ಆಕ್ಯುಪಂಚರ್‌ ಬಗ್ಗೆ ತಿಳಿದುಕೊಳ್ಳಲು ಅವರಲ್ಲಿ ಕಿಂಚಿತ್ತೂ ಕುತೂಹಲ ಇದ್ದಿರಲಿಲ್ಲ. ಯೋಗ ಮಾಡಲು ಅವರ ಬಳಿ ಸಮಯವೂ ಇರಲಿಲ್ಲ.

ದಶಕಗಳು ಉರುಳಿದಂತೆ ಇಂತಹ ವೈದ್ಯರ ನಿಲುವು ಬದಲಾಗಿದೆ. ಗಿಡಮೂಲಿಕೆ ಚಿಕಿತ್ಸಾ ವಿಧಾನಗಳ ಪ್ರಯೋಜನಗಳ ಬಗ್ಗೆ ಅವರೆಲ್ಲ ಈಗ ಮಾತನಾಡುತ್ತಿದ್ದಾರೆ. ಅಪರೂಪಕ್ಕೊಮ್ಮೆ ಆಕ್ಯುಪಂಚರ್‌ ಬಗ್ಗೆಯೂ ಕುತೂಹಲ ತಾಳಿದ್ದಾರೆ.

ಯೋಗದ ಲಾಭಗಳ ಬಗ್ಗೆಯೂ ಇನ್ನಿಲ್ಲದ ಉತ್ಸಾಹ ತೋರಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಉಸಿರಾಟದ ಸಮಸ್ಯೆ, ಮಾನಸಿಕ ಅನಾರೋಗ್ಯ, ಬೆನ್ನು ನೋವುಗಳಿಗೆ ಯೋಗವು ರಾಮಬಾಣವಾಗಿದೆ ಎಂದು ಮನಗಂಡಿದ್ದಾರೆ. ಆದರೆ, ಅವರು ಈಗಲೂ ಹೋಮಿಯೊಪಥಿ ಬಗ್ಗೆ ದ್ವೇಷಭಾವನೆ ಮೈಗೂಡಿಸಿಕೊಂಡಿದ್ದಾರೆ.

ಮಹಾತ್ಮ ಗಾಂಧಿ ಅವರು ಈ ನಿಟ್ಟಿನಲ್ಲಿ ತುಳಿದ ಪಥವು ಮಾತ್ರ ಸಂಪೂರ್ಣ ಭಿನ್ನವಾಗಿತ್ತು. ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಅವರು ನಿಸರ್ಗ ಚಿಕಿತ್ಸೆಯತ್ತ ಆಕರ್ಷಿತರಾಗಿದ್ದರು. ಕೆಲ ಯೋಗಾಸನಗಳನ್ನೂ ಅವರು ಕಲಿತಿದ್ದರು.

ತಮ್ಮ ಮೂವತ್ತು ಮತ್ತು ನಲವತ್ತನೇ ವಯಸ್ಸಿನಲ್ಲಿ ಅವರು ತಮ್ಮ ಬಳಿ ನೈಸರ್ಗಿಕ ಮತ್ತು ಗಿಡಮೂಲಿಕೆಗಳ ಔಷಧಿಗಳ ಸಂಗ್ರಹ ಹೊಂದಿದ್ದರು. ಇಂತಹ ಔಷಧಿಗಳನ್ನು ತಾವು ಬಳಸುವುದರ ಜತೆಗೆ ತಮ್ಮ ಸ್ನೇಹಿತರು ಮತ್ತು ಅನುಯಾಯಿಗಳಿಗೂ ಬಳಸಲು ನೀಡುತ್ತಿದ್ದರು.

ಐವತ್ತನೇ ವರ್ಷ ಹತ್ತಿರ ಬರುತ್ತಿದ್ದಂತೆ, ಆಧುನಿಕ ವೈದ್ಯ ಪದ್ಧತಿ ಬಗ್ಗೆ ಅವರ ನಿಲುವು ಸಕಾರಾತ್ಮಕವಾಗಿ ಬದಲಾಯಿತು. ಮೂಲವ್ಯಾಧಿಯಿಂದ ತೀವ್ರವಾಗಿ ಬಳಲುತ್ತಿದ್ದ ಗಾಂಧೀಜಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಸಲಹೆಗೆ ಕೊನೆಗೂ ಮಣಿದರು. ಡಾ.ದಲಾಲ್‌ ಅವರು 1919ರ ಜನವರಿಯಲ್ಲಿ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದರು. 

ತಮ್ಮನ್ನು ಕಾಡುತ್ತಿದ್ದ ಸಮಸ್ಯೆಯಿಂದ ಮುಕ್ತರಾದ ಗಾಂಧೀಜಿ, ಮೂಲವ್ಯಾಧಿಯಿಂದ ಬಳಲುತ್ತಿದ್ದ ತಮ್ಮ ಪರಿಚಿತರನ್ನೆಲ್ಲ ಡಾ.ದಲಾಲ್‌ ಅವರ ಹತ್ತಿರ ಕಳುಹಿಸಿಕೊಡುತ್ತಿದ್ದರು.

1921ರ ಫೆಬ್ರುವರಿಯಲ್ಲಿ, ದೆಹಲಿಯಲ್ಲಿ ವೈದ್ಯಕೀಯ ಕಾಲೇಜು ಉದ್ಘಾಟಿಸಬೇಕಾದ ಸಂದರ್ಭ ಅವರಿಗೆ ಎದುರಾಯಿತು. ಯುನಾನಿ ತಜ್ಞ ಹಕೀಂ ಅಜ್ಮಲ್‌ ಖಾನ್‌ ಅವರು ಈ  ಕಾಲೇಜಿನ ಪ್ರೇರಕ ಶಕ್ತಿಯಾಗಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಗಾಂಧೀಜಿ, ‘ಆಧುನಿಕ ವಿಜ್ಞಾನಿಗಳಲ್ಲಿ ಭಾರಿ ಬದಲಾವಣೆಗೆ ಕಾರಣವಾದ ಸಂಶೋಧನೆಯ ಉತ್ಸಾಹಕ್ಕೆ ನಾನು ವಿನಯಪೂರ್ವಕ ನಮನ ಸಲ್ಲಿಸುತ್ತೇನೆ.

ವಿಜ್ಞಾನಿಗಳಲ್ಲಿ ಕಂಡು ಬರುತ್ತಿರುವ ಉತ್ಸಾಹದ ವಿರುದ್ಧ ನನ್ನ ಸಂಘರ್ಷ ಇಲ್ಲ. ಈ ಉತ್ಸಾಹ ಅಥವಾ ಪ್ರೇರಣಾ ಶಕ್ತಿಯನ್ನು ಬಳಸಿಕೊಳ್ಳುತ್ತಿರುವ ವಿಧಾನದ ಬಗ್ಗೆ ನನ್ನಲ್ಲಿ ಆಕ್ಷೇಪ ಇದೆ. ಅದು ತನ್ನ ಬೆಂಬಲಿಗರ ಲೌಕಿಕ ಪ್ರಗತಿಯತ್ತ ಹೆಚ್ಚು ಗಮನ ಕೇಂದ್ರೀಕರಿಸಿದೆ. ಇಷ್ಟಾಗಿಯೂ ಸತ್ಯದ ಅನ್ವೇಷಣೆಯಲ್ಲಿ ಆಧುನಿಕ ವಿಜ್ಞಾನಿಗಳಲ್ಲಿ ಕಂಡು ಬರುವ ಹುರುಪು, ತ್ಯಾಗವನ್ನು ನಾನು ಶ್ಲಾಘಿಸುತ್ತೇನೆ’ ಎಂದಿದ್ದರು.

ದೇಶಿ ಔಷಧಿಗಳ ಬಗ್ಗೆ ತೃಪ್ತಭಾವ ಹೊಂದಿದ ವೈದ್ಯರುಗಳಿಗೆ ಹೋಲಿಸಿದರೆ, ಆಧುನಿಕ ವೈದ್ಯವಿಜ್ಞಾನ ತುಳಿಯುತ್ತಿರುವ ವಿಭಿನ್ನ ಹಾದಿಯನ್ನು ಗಾಂಧೀಜಿ ಪ್ರಶಂಸಿಸಿದ್ದರು.‘ಆದರೆ, ನಮ್ಮ ಹಕೀಮರು ತಮ್ಮಲ್ಲಿನ ಸಂಶೋಧನಾ  ಉತ್ಸಾಹವನ್ನು ಇದುವರೆಗೂ ಪ್ರದರ್ಶನಗೊಳಿಸಿಲ್ಲ. ಅವರು ಆರೋಗ್ಯ ಸೂತ್ರಗಳನ್ನು ಪ್ರಶ್ನಿಸದೆ ಅನುಸರಿಸುತ್ತಿದ್ದಾರೆ. ತನಿಖೆ, ಸಂಶೋಧನೆ ಬಗ್ಗೆ ಅವರಿಗೆ ಹೆಚ್ಚಿನ ಅರಿವು ಇಲ್ಲವೇ ಇಲ್ಲ. ನನ್ನ ವ್ಯಾಪಕ ಅನುಭವ ಆಧರಿಸಿ ನಾನು ನನ್ನ ಈ ಹೇಳಿಕೆ ದಾಖಲಿಸಲು ವಿಷಾದಿಸುತ್ತೇನೆ’ ಎಂದೂ ಹೇಳಿಕೊಂಡಿದ್ದರು.

‘ದೇಶಿ ವೈದ್ಯಕೀಯ ಪದ್ಧತಿಯ ಸ್ಥಿತಿಗತಿಯ ಬಗ್ಗೆ ನಿಜಕ್ಕೂ ವ್ಯಸನಪಡಬೇಕಾಗಿದೆ.  ಆಧುನಿಕ ವೈದ್ಯ ಪದ್ಧತಿಗೆ ಹೋಲಿಸಿದರೆ, ದೇಶಿ ವೈದ್ಯ ಪದ್ಧತಿ ಅನುಸರಿಸುವವರು ಅಪಖ್ಯಾತಿಗೆ ಗುರಿಯಾಗಿರುವುದು ಕಂಡುಬರುತ್ತದೆ’ ಎಂದು ವಿಷಾದ ಪಟ್ಟಿದ್ದರು.

‘ದೆಹಲಿಯಲ್ಲಿ ಹಕೀಮ್‌ ಅಜ್ಮಲ್‌ ಖಾನ್‌ ಅವರು ಆರಂಭಿಸಿರುವ ಕಾಲೇಜು ಈ ಲೋಪವನ್ನು ದೂರ ಮಾಡಲು ಶ್ರಮಿಸಿ, ಆಯುರ್ವೇದ ಮತ್ತು ಯುನಾನಿ ವೈದ್ಯ ವಿಜ್ಞಾನದ ವೈಭವವನ್ನು ಮರಳಿಸಲು ನೆರವಾಗಲಿ’ ಎಂದು ಗಾಂಧೀಜಿ ಆಶಿಸಿದ್ದರು.  ವೈದ್ಯಕೀಯ ಕಾಲೇಜು, ಆಧುನಿಕ ವೈದ್ಯ ವಿಭಾಗವನ್ನೂ ಹೊಂದಿದ್ದಕ್ಕೆ ಗಾಂಧೀಜಿ ಸಂತಸಪಟ್ಟಿದ್ದರು. ಮೂರು ಬಗೆಯ ವೈದ್ಯಕೀಯ ಮಾದರಿಗಳು ಒಂದೆಡೆಯೇ ಲಭ್ಯ ಇರುವುದು ಉತ್ತಮ ಬೆಳವಣಿಗೆ ಎಂದಿದ್ದರು. 

1924ರ ಜನವರಿಯಲ್ಲಿ ಪುಣೆ ಬಳಿಯ ಯೆರವಡಾ ಜೈಲಿನಲ್ಲಿ ಇದ್ದಾಗ ಗಾಂಧಿ ಅವರನ್ನು ಗಂಭೀರ ಸ್ವರೂಪದ ಕಾಯಿಲೆ ಬಹುವಾಗಿ ಕಾಡಿತು. ಚಿಕಿತ್ಸೆಗಾಗಿ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ಅಪೆಂಡಿಸೈಟಿಸ್‌ಗೆ (ಕರುಳುನಾಳದ ಕಾಯಿಲೆ) ಬ್ರಿಟನ್ನಿನ ವೈದ್ಯ ಮಡ್ಡೊಕ್‌ ಎನ್ನುವವರು ಶಸ್ತ್ರಚಿಕಿತ್ಸೆ ನಡೆಸಿದರು.

ಶಸ್ತ್ರಚಿಕಿತ್ಸೆಗೆ ಮುನ್ನಾ ದಿನ, ಗಾಂಧೀಜಿ ತುಂಬ ಯಾತನೆಯಿಂದಲೇ  ತಮ್ಮ ಆಲೋಚನೆಗಳಿಗೆ ಅಕ್ಷರ ರೂಪ ನೀಡಿದ್ದರು. ತಮ್ಮ ಅಂತ್ಯ ಸಮೀಪಿಸಿದೆ ಎಂದೇ ಅವರು ಭಾವಿಸಿದ್ದರು. ಆದರೆ ಅವರ ನಿರೀಕ್ಷೆಗೆ ವ್ಯತಿರಿಕ್ತವಾಗಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು. ಇದರಿಂದ ಆಧುನಿಕ ಔಷಧಿ ಬಗೆಗಿನ ಅವರ ನಂಬಿಕೆ ಇನ್ನಷ್ಟು ದೃಢಗೊಂಡಿತ್ತು.

ಪುಣೆಯ ಸೇನಾ ಆಸ್ಪತ್ರೆಯಲ್ಲಿ ಸಾವಿನ ಸನಿಹ ಹೋಗಿಬಂದ ಅನುಭವದ ಒಂದು ವರ್ಷದ ನಂತರ ಗಾಂಧಿ ಅವರು ಮದ್ರಾಸ್‌ನಲ್ಲಿದ್ದರು. ಸ್ಥಳೀಯ ಆಯುರ್ವೇದ
ಔಷಧಾಲಯದಲ್ಲಿ ಮಾತನಾಡಲು ಅವರನ್ನು ಆಹ್ವಾನಿಸಲಾಗಿತ್ತು.

‘ಆಯುರ್ವೇದದ ಈ ಹಿಂದಿನ ಯಶಸ್ಸಿನ ಭರವಸೆ ಮೇಲೆಯೇ ಆಯುರ್ವೇದ ವೈದ್ಯರು ಈಗ ಬದುಕುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆಯರ್ವೇದದಲ್ಲಿ ರೋಗ ಪತ್ತೆ ವಿಧಾನವು ಈಗಲೂ ತುಂಬ ಹಳೆಯ ವಿಧಾನದಲ್ಲಿಯೇ ಇದೆ. ಅದನ್ನು ಈಗ ಯಾವುದೇ ಬಗೆಯಲ್ಲಿಯ ಪಾಶ್ಚಿಮಾತ್ಯ ವೈದ್ಯ ಪದ್ಧತಿ ಜತೆ ಹೋಲಿಸಲಿಕ್ಕಾಗದು’ ಎಂದು ಹೇಳಿದ್ದರು.

‘ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ಸಂಶೋಧನೆಗೆ ತಮ್ಮೆಲ್ಲ ಸಮಯ ಮುಡಿಪಾಗಿಟ್ಟಿದ್ದರು, ಅವರ ಇಂತಹ ಪರಿಶ್ರಮ, ಬದ್ಧತೆ ಬಾಹ್ಯ ಜಗತ್ತಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಅಂತಹ ಕ್ರಿಯಾಶೀಲತೆ ಆಯುರ್ವೇದ ವೈದ್ಯರಲ್ಲಿಯೂ ಕಂಡುಬರಬೇಕು’ ಎನ್ನುವುದು ಅವರ ಆಶಯವಾಗಿತ್ತು.

1923ರ ಮಾರ್ಚ್‌ನಲ್ಲಿ ಗಾಂಧೀಜಿ ಈ ಅನಿಸಿಕೆ ವ್ಯಕ್ತಪಡಿಸಿದ್ದರು. ಏಪ್ರಿಲ್‌ ತಿಂಗಳಲ್ಲಿ ಅವರು ಆಯುರ್ವೇದ ವೈದ್ಯ ತಳ್ವಾಲ್ಕರ್‌ ಅವರಿಗೆ ಬರೆದ ಪತ್ರದಲ್ಲಿ, ‘ಆಯುರ್ವೇದ ಔಷಧದಲ್ಲಿ ನಾನು ನಂಬಿಕೆ ಹೊಂದಿರುವೆ.

ಆದರೆ, ಆಯುರ್ವೇದ ವೈದ್ಯರು ಕಾಯಿಲೆ ಗುರುತಿಸುವ ವಿಧಾನದ ಬಗ್ಗೆ ನನ್ನಲ್ಲಿ ಕೆಲ ಸಂದೇಹಗಳಿವೆ. ಹೀಗಾಗಿ ಆಯುರ್ವೇದ ವೈದ್ಯರು ರೋಗಿಯೊಬ್ಬನ ಕಾಯಿಲೆ ಗುರುತಿಸಿರುವುದನ್ನು ಪಾಶ್ಚಿಮಾತ್ಯ ವೈದ್ಯ ಪದ್ಧತಿ ಅನುಸರಿಸುವ ವಿಶ್ವಾಸಾರ್ಹ  ವೈದ್ಯರು ಖಚಿತಪಡಿಸುವವರೆಗೆ ನನಗೆ ನಂಬಿಕೆ ಬರುವುದಿಲ್ಲ’ ಎಂದು ಹೇಳಿದ್ದರು.

1925ರ ಮಾರ್ಚ್‌ನಲ್ಲಿ ಗಾಂಧೀಜಿ  ಕಲ್ಕತ್ತಾದಲ್ಲಿದ್ದರು. ನಗರದ ಅಷ್ಟಾಂಗ ಆಯುರ್ವೇದ ವಿದ್ಯಾಲಯದಲ್ಲಿ ನೀಡಿದ ಉಪನ್ಯಾಸದಲ್ಲಿ, ಹಿಂದೊಮ್ಮೆ ತಾವು ಆಯುರ್ವೇದ ಔಷಧದ ಕಟ್ಟಾ ಬೆಂಬಲಿಗರಾಗಿದ್ದನ್ನು ಸ್ಮರಿಸಿಕೊಂಡಿದ್ದರು. ‘ನನ್ನ ಸ್ನೇಹಿತರಿಗೂ ಈ ಔಷಧಿ ತೆಗೆದುಕೊಳ್ಳಲು ಶಿಫಾರಸು ಮಾಡಿದ್ದೆ. ಪಾಶ್ಚಿಮಾತ್ಯ ಔಷಧಿ ಸೇವಿಸುತ್ತಿದ್ದ ಅವರೆಲ್ಲ ನನ್ನ ಶಿಫಾರಸಿನಿಂದಾಗಿ ಆಯುರ್ವೇದ ವೈದ್ಯರ ಬಳಿ ತೆರಳುವುದನ್ನು ರೂಢಿಸಿಕೊಂಡಿದ್ದರು’ ಎಂದು ಹೇಳಿಕೊಂಡಿದ್ದರು.

‘ದಿನಗಳು ಕಳೆದಂತೆ ಆಯುರ್ವೇದ ಮತ್ತು ಯುನಾನಿ ವೈದ್ಯರಲ್ಲಿ ವಿವೇಕದ ಕೊರತೆ ಇರುವುದು ಮತ್ತು ನಮ್ರ ಭಾವ ಕಾಣದಿರುವುದು ನನ್ನ ಅನುಭವಕ್ಕೆ ಬಂದಿತು. ತಮಗೆ ಎಲ್ಲ ಗೊತ್ತು ಎನ್ನುವ  ಸೊಕ್ಕಿನ ಭಾವ ಅವರಲ್ಲಿ ಮನೆ ಮಾಡಿದೆ.

ತಾವು ವಾಸಿ ಮಾಡದ ಕಾಯಿಲೆಯೇ ಇಲ್ಲ ಎನ್ನುವುದು ಅವರ ಠೇಂಕಾರದ ಮಾತಾಗಿದೆ. ಬರೀ ನಾಡಿಮಿಡಿತದಿಂದಷ್ಟೇ ವ್ಯಕ್ತಿ ಅಪೆಂಡಿಸೈಟಿಸ್‌ ಅಥವಾ ಇತರ ಯಾವುದೇ ಕಾಯಿಲೆಯಿಂದ ಬಳಲುವುದನ್ನು ತಿಳಿದುಕೊಳ್ಳಲು ಸಾಧ್ಯ ಎಂದು ಅವರು ಭಾವಿಸಿದ್ದಾರೆ’ ಎಂದು ಗಾಂಧೀಜಿ ಅಭಿಪ್ರಾಯಪಟ್ಟಿದ್ದರು.

ಆ ಭಾಷಣವನ್ನು ದಿನಪತ್ರಿಕೆಗಳು ಯಥಾವತ್ತಾಗಿ ವರದಿ ಮಾಡಿದ್ದವು. ವರದಿಗಾರನೊಬ್ಬ ಗಾಂಧಿ ಅವರನ್ನು ಟೀಕಿಸಿ ಬರೆದಿದ್ದ. ‘ಆಯುರ್ವೇದದ ಪ್ರಾಮಾಣಿಕ ಮತ್ತು ಶ್ರದ್ಧಾ ಭಕ್ತಿಯ ಅನೇಕ ಬೆಂಬಲಿಗರಿದ್ದಾರೆ.  ಪ್ರಶ್ನಾರ್ಹ ರೀತಿಯಲ್ಲಿ ಆಯುರ್ವೇದ ಪಾಲಿಸುತ್ತಿರುವ ಕೆಲವೇ ಕೆಲ ವೈದ್ಯರ ಸಂಪರ್ಕಕ್ಕೆ ಬಂದಿರುವ ಗಾಂಧೀಜಿ ತಮ್ಮ ಸೀಮಿತ ಅನುಭವವನ್ನು ಹಂಚಿಕೊಂಡಿದ್ದಾರೆ’ ಎಂದು ವರದಿಗಾರ ಅಭಿಪ್ರಾಯಪಟ್ಟಿದ್ದ.

ಇದಕ್ಕೆ ಪ್ರತಿಕ್ರಿಯಿಸಿದ್ದ ಗಾಂಧೀಜಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರಲ್ಲದೆ, ತಮ್ಮ ಧೋರಣೆಯನ್ನು ವಿವರಿಸಿದ್ದರು. ‘ಪಾಶ್ಚಿಮಾತ್ಯ ವೈದ್ಯ ವಿಧಾನದ ಪ್ರತಿಭಾವಂತರ ಹಲವಾರು ಸಂಶೋಧನೆಗಳಿಗೆ ಹೋಲಿಸಿದರೆ ಆಯುರ್ವೇದ ವೈದ್ಯರು ಇದುವರೆಗೆ ಒಂದೇ ಒಂದು ಮಹತ್ವದ ಸಂಶೋಧನೆ ಮಾಡಿಲ್ಲ’ ಎಂದು ಉತ್ತರ ನೀಡಿದ್ದರು.

‘ನನ್ನ ಹೇಳಿಕೆಯು ಆಯುರ್ವೇದ ವೈದ್ಯರ ಚಿಕಿತ್ಸಾ ವಿಧಾನವನ್ನು ದೀರ್ಘಕಾಲದವರೆಗೆ ಪರಿಶೀಲಿಸಿ ಆಧರಿಸಿದ್ದಾಗಿತ್ತು. ನಮ್ಮ ವೈದ್ಯರು, ಹಕೀಮರು ವಿದೇಶಿ ವೈದ್ಯರ ನಮ್ರತೆಯನ್ನು ಅನುಕರಿಸಲಿ. ಹೊಸ ದೇಶಿ ಔಷಧಿಗಳನ್ನು ಸಂಶೋಧಿಸಲಿ. ಪಾಶ್ಚಿಮಾತ್ಯ ಔಷಧಿಗಳ ಮಹತ್ವವನ್ನು ಮನಗಾಣಲಿ ಮತ್ತು ವಿದೇಶಿ ವೈದ್ಯರಲ್ಲಿ ಕಾಣುವ ಸಂಶೋಧನಾ ಗುಣವನ್ನು ರಕ್ತಗತ ಮಾಡಿಕೊಳ್ಳಲಿ’ ಎಂದು ಗಾಂಧೀಜಿ ಆಶಿಸಿದ್ದರು.

‘ಪಾಶ್ಚಿಮಾತ್ಯ ವೈದ್ಯರಿಂದ ಆಯುರ್ವೇದ ವೈದ್ಯರು ಜ್ಞಾನವನ್ನು ಎರವಲು ಪಡೆಯಲಿ. ಪಾಶ್ಚಿಮಾತ್ಯ ವಿಜ್ಞಾನಿಗಳ ಧರ್ಮ ವಿರೋಧಿ ನಿಲುವನ್ನು ದೂರ ಇರಿಸಲಿ.ಆಯುರ್ವೇದದಲ್ಲಿ ದೇಹಚ್ಛೇದನಕ್ಕೆ ಅವಕಾಶ ಇರುವುದನ್ನು ಕೆಲವರು ಸಮರ್ಥಿಸಿಕೊಳ್ಳುತ್ತಾರೆ. ಅದು ಇರುವುದೇ ನಿಜವಾಗಿದ್ದರೆ ನನಗೆ ಖಂಡಿತವಾಗಿಯೂ ನಿರಾಶೆಯಾಗುತ್ತದೆ’ ಎಂದಿದ್ದರು.

1933ರ ಏಪ್ರಿಲ್‌ನಲ್ಲಿ ಗಾಂಧೀಜಿ  ಇನ್ನೊಂದು ಹೇಳಿಕೆ ನೀಡುತ್ತಾರೆ. ಈ ಬಾರಿ ಅವರು ಜೈಲಿನಲ್ಲಿ ಇರುತ್ತಾರೆ. ‘ವಿವಿಧ ವೈದ್ಯ ಪದ್ಧತಿಗಳ ಕುರಿತು ನಾನು ನಡೆಸಿದ ಅಧ್ಯಯನದ ಪ್ರಕಾರ, ಅಲೋಪಥಿ ಕೂಡ ಹಲವಾರು ಮಿತಿಗಳನ್ನು ಒಳಗೊಂಡಿದೆ. ಅದರ ಬಗ್ಗೆಯೂ ಅನೇಕ ಗೊಡ್ಡುನಂಬಿಕೆಗಳಿದ್ದರೂ ಅದು ಸಾರ್ವತ್ರಿಕ, ನ್ಯಾಯೋಚಿತ ಮತ್ತು ಅತ್ಯಂತ ಜನಪ್ರಿಯ ವೈದ್ಯ ಪದ್ಧತಿಯಾಗಿದೆ.

ಅಲೋಪಥಿಯು ಯಾವುದೇ ಕಾಯಿಲೆಗೆ ಆರಂಭಿಕ ಔಷಧಿ ನೀಡುವುದರ ಜತೆಗೆ, ಸುಟ್ಟ ಗಾಯಗಳಿಗೆ ಮುಲಾಮು, ಹಲವಾರು ಕಾಯಿಲೆಗಳಿಗೆ ಸಂಬಂಧಿಸಿದಂತೆ ಸೋಂಕು ನಿವಾರಕಗಳನ್ನೂ ಒದಗಿಸುತ್ತದೆ. ಶಸ್ತ್ರಚಿಕಿತ್ಸೆಯಂತೂ ಅದ್ಭುತ ಪರಿಣಾಮ ಬೀರುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದರು.

‘ಅಲೋಪಥಿಯು ಎಲ್ಲ ಬಗೆಯ ವೈದ್ಯ ವಿಜ್ಞಾನವನ್ನು ಒಳಗೊಂಡ ವ್ಯವಸ್ಥೆಯಾಗಿದೆ. ಅದರಲ್ಲಿ ಹೋಮಿಯೊಪಥಿ, ಜೈವಿಕ ರಸಾಯನ ಮತ್ತು ಇತ್ತೀಚಿನ ನಿಸರ್ಗ ಚಿಕಿತ್ಸೆಯೂ ಇದೆ. ದೇಹಚ್ಛೇದನ ಮತ್ತಿತರ ಕೆಲ ಪದ್ಧತಿಗಳನ್ನು ಕೈಬಿಟ್ಟರೆ ಅಲೋಪಥಿಯು ಅಷ್ಟೇನೂ ದುಬಾರಿಯಲ್ಲದ ವೈದ್ಯ ಪದ್ಧತಿಯಾಗಿ ಎಲ್ಲರನ್ನೂ  ಸಂತೃಪ್ತಿಗೊಳಿಸಲಿದೆ’ ಎಂದು ಹೇಳಿದ್ದರು.

‘ಆಧುನಿಕ ವೈದ್ಯ ವಿಜ್ಞಾನದ ಬಗ್ಗೆ ನೀವು ಅನುಮಾನ ಧೋರಣೆ ತಳೆದಿರುವುದು ನಿಜವೇ’ ಎಂದು 1937ರಲ್ಲಿ ಜರ್ಮನಿಯ ಪ್ರವಾಸಿಗನೊಬ್ಬ ಗಾಂಧಿ ಅವರನ್ನು ಪ್ರಶ್ನಿಸಿದ್ದ.

ಅದಕ್ಕೆ ಉತ್ತರಿಸಿದ್ದ ಗಾಂಧೀಜಿ, ‘ನಾನು ಯಾವುದೇ ಬಗೆಯ ವೈದ್ಯಕೀಯ ಚಿಕಿತ್ಸೆಯನ್ನು ತಿರಸ್ಕಾರ ಮನೋಭಾವದಿಂದ ನೋಡುವುದಿಲ್ಲ. ಸುರಕ್ಷಿತ ಹೆರಿಗೆ ಮತ್ತು ಶಿಶುಗಳ ಆರೈಕೆ ಬಗ್ಗೆ ನಾವು ಪಾಶ್ಚಿಮಾತ್ಯ ದೇಶಗಳಿಂದ ಸಾಕಷ್ಟು ಕಲಿಯಬಹುದಾಗಿದೆ. ಸುರಕ್ಷಿತ ಹೆರಿಗೆಯ ಪರಿಕಲ್ಪನೆ ಇಲ್ಲದೆ ನಮ್ಮಲ್ಲೂ  ಮಕ್ಕಳು ಜನಿಸುತ್ತಾರೆ. ಮಕ್ಕಳನ್ನು ವೈಜ್ಞಾನಿಕವಾಗಿ ಬೆಳೆಸುವ ಬಗ್ಗೆ ನಮ್ಮ ಮಹಿಳೆಯರಲ್ಲಿ ಅಜ್ಞಾನ ಮನೆ ಮಾಡಿದೆ, ಈ ವಿಷಯದಲ್ಲಿ ನಾವು ಪಶ್ಚಿಮದ ದೇಶಗಳಿಂದ ಸಾಕಷ್ಟು ಕಲಿಯುವುದು ಇದೆ’ ಎಂದು ಗಾಂಧೀಜಿ  ಪ್ರತಿಕ್ರಿಯಿಸಿದ್ದರು.

‘ಮಾನವನ ಜೀವಿತಾವಧಿ ವಿಸ್ತರಿಸುವುದಕ್ಕೆ ಪಾಶ್ಚಿಮಾತ್ಯ ವೈದ್ಯಲೋಕವು ಹೆಚ್ಚು ಆದ್ಯತೆ ನೀಡಿದೆ. ವ್ಯಕ್ತಿಯ ಸಾವಿನ ಕೊನೆಯ ಕ್ಷಣದವರೆಗೂ ವೈದ್ಯರು ಆತನ ದೇಹಕ್ಕೆ ಔಷಧಿಯನ್ನು ಚುಚ್ಚುಮದ್ದು ಮೂಲಕ ನೀಡುತ್ತಲೇ ಇರುತ್ತಾರೆ. ಜೀವ ಉಳಿಸಲು ನಡೆಸುವ ಇಂತಹ ಹತಾಶ ಪ್ರಯತ್ನವು, ಪಾಶ್ಚಿಮಾತ್ಯರು ಯುದ್ಧಗಳಲ್ಲಿ ತಮ್ಮ ಜೀವ ಬಲಿಕೊಡುವುದಕ್ಕೆ ಹೋಲಿಸಿದರೆ  ತುಂಬ ಅಸಂಗತವಾಗಿ ಕಾಣುತ್ತದೆ’ ಎಂದು ಬರೆದಿದ್ದರು.

ಗಾಂಧೀಜಿ ಅನಿಸಿಕೆಗಳನ್ನು ಬಹುಸಂಖ್ಯಾತರು ಉಲ್ಲೇಖಿಸುತ್ತಾರೆ. ಆದರೆ, ಅನೇಕರು ಇವರ ಅಭಿಪ್ರಾಯಗಳನ್ನು ತಪ್ಪಾಗಿಯೂ ಅರ್ಥೈಸುತ್ತಾರೆ. ಗಾಂಧಿ ಅವರ ಟೀಕಾಕಾರರು ಮತ್ತು ಅಭಿಮಾನಿಗಳು ತಮಗೆ ಸರಿಕಂಡಂತೆ ಗಾಂಧಿ ಅವರ ಹೇಳಿಕೆಗಳನ್ನು ಉಲ್ಲೇಖಿಸುತ್ತಾರೆ. ಗಾಂಧೀಜಿ ಆಧುನಿಕ ವಿಜ್ಞಾನ ಮತ್ತು ಔಷಧಿಗಳನ್ನು  ವಿರೋಧಿಸುತ್ತಿದ್ದರು ಎಂದು ಅನೇಕರು ಪ್ರತಿಪಾದಿಸುತ್ತಾರೆ.  ಆದರೆ, ಕಾಲಾನುಕ್ರಮದಲ್ಲಿ ಗಾಂಧೀಜಿ ಅನಿಸಿಕೆಗಳನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದರೆ, ಕಾಲ ಗತಿಸಿದಂತೆ ಅವರ ಅಭಿಪ್ರಾಯಗಳು ಪ್ರಬುದ್ಧವಾಗಿರುವುದನ್ನು ಕಾಣಬಹುದು.

ಹಿಂದೊಮ್ಮೆ ಆಧುನಿಕ ಔಷಧಿ ಬಗ್ಗೆ ಅನುಮಾನದ ಧೋರಣೆ ತಳೆದಿದ್ದ ಗಾಂಧೀಜಿ, ಆನಂತರ ಅದರ ಬಳಕೆಯನ್ನು ಶ್ಲಾಘಿಸುವ ನಿಲುವು ರೂಢಿಸಿಕೊಂಡಿದ್ದರು. ಆಧುನಿಕ ಔಷಧಿಗಳ ಕುರಿತು ನಡೆಯುತ್ತಿದ್ದ  ಸಂಶೋಧನೆಗಳ ಬಗ್ಗೆಯೂ ಅವರು ತುಂಬ ಪ್ರಭಾವಿತರಾಗಿದ್ದರು.  ಆಸ್ಪತ್ರೆಗಳ ಮತ್ತು ಕೆಲ ವೈದ್ಯರಲ್ಲಿ ಕಾಣುತ್ತಿದ್ದ ಹಣ ಮಾಡುವ ದುರಾಸೆಯನ್ನು ಮಾತ್ರ  ಅವರು ಖಂಡಿಸುತ್ತಿದ್ದರು.

ಆಧುನಿಕ ಔಷಧಿಗಳ ಬಗ್ಗೆ ಗಾಂಧಿ ಅವರ ಅಭಿಪ್ರಾಯಗಳು ವಿಭಿನ್ನ ಕಾಲಘಟ್ಟದಲ್ಲಿ ಬದಲಾವಣೆಯಾಗುತ್ತ ಬಂದಿರುವುದು ಅವರ ಮುಕ್ತ ಚಿಂತನೆಯ  ನಿಲುವಿಗೆ ಸಾಕ್ಷಿಯಾಗಿದೆ.

ವಿದ್ಯಮಾನಗಳು ಬದಲಾಗುತ್ತಿದ್ದಂತೆ ಅವರ ಅಭಿಪ್ರಾಯಗಳೂ ಬದಲಾಗುತ್ತಿದ್ದವು.  ಹೊಸ ಸಾಕ್ಷ್ಯಗಳು ಸಿಕ್ಕಾಗ ಹಿಂದಿನ ಅಭಿಪ್ರಾಯವನ್ನು ಕೈಬಿಡುತ್ತಿದ್ದರು. ನೈತಿಕ ಮತ್ತು ಬೌದ್ಧಿಕವಾಗಿ ಸಮರ್ಪಕವಾದ ಇಂತಹ ಚಿಂತನೆಯು ಅವರ ಬಹುಬಗೆಯ ವ್ಯಕ್ತಿತ್ವದ ಭಾಗವೇ ಆಗಿತ್ತು.

ಗಾಂಧೀಜಿ  ಕನಸಿನ ಭಾರತವು ಹಲವಾರು ಧರ್ಮ, ಅನೇಕ ಭಾಷೆಗಳ ಸಂಗಮವಾಗಿರುವಂತೆ, ವೈವಿಧ್ಯಮಯ ವೈದ್ಯಕೀಯ ವಿಧಾನಗಳ ಬಹುತ್ವದ ನೆಲೆಯೂ ಆಗಿತ್ತು.

1921ರಲ್ಲಿಯೇ ಗಾಂಧೀಜಿ ಪ್ರತಿಪಾದಿಸಿದ್ದ ಧೋರಣೆಯನ್ನೇ ಈಗಿನ ಶ್ರೇಷ್ಠ ವೈದ್ಯರು ಬೋಧಿಸಲು ಮುಂದಾಗುತ್ತಿದ್ದಾರೆ. ವಿಭಿನ್ನ ವೈದ್ಯ ಸಂಪ್ರದಾಯಗಳಾದ ಪಾಶ್ಚಿಮಾತ್ಯ ಅಥವಾ ಪೌರಾತ್ಯ, ಆಧುನಿಕ ಇಲ್ಲವೆ ಪ್ರಾಚೀನ ಪದ್ಧತಿಗಳು ಪರಸ್ಪರ ನೆರವಾಗುವಂತಹ ಭೂಮಿಕೆ ಈಗ ಏರ್ಪಟ್ಟಿದೆ. ಇದರ ಪರಿಣಾಮವಾಗಿ ಪ್ರತಿಯೊಂದರ ವಿಶೇಷ ದೋಷಗಳನ್ನು ಕೈಬಿಟ್ಟು ಪರಸ್ಪರ ಸಹಕರಿಸುವ  ಪ್ರಯತ್ನಗಳು ಹೆಚ್ಚಾಗಿ ಕಂಡು ಬರುತ್ತಿವೆ.

Comments
ಈ ವಿಭಾಗದಿಂದ ಇನ್ನಷ್ಟು
ಲೆನಿನ್‍ ಬದಲಿಗೆ ಭಗತ್‍ ಸಿಂಗ್‍ ಯಾಕಾಗದು?

ಗುಹಾಂಕಣ
ಲೆನಿನ್‍ ಬದಲಿಗೆ ಭಗತ್‍ ಸಿಂಗ್‍ ಯಾಕಾಗದು?

16 Mar, 2018
ಪ್ರಸಿದ್ಧಿಯ ಜತೆಗೇ ಇದೆ ವಿಶ್ವಾಸಾರ್ಹತೆಯ ಹೊಣೆ

ಗುಹಾಂಕಣ
ಪ್ರಸಿದ್ಧಿಯ ಜತೆಗೇ ಇದೆ ವಿಶ್ವಾಸಾರ್ಹತೆಯ ಹೊಣೆ

2 Mar, 2018
‘ಜೋಳಿಗೆದಾಸ’ ಅರ್ಥಶಾಸ್ತ್ರಜ್ಞನ ಜತೆಗೊಂದು ದಿನ

ಗುಹಾಂಕಣ
‘ಜೋಳಿಗೆದಾಸ’ ಅರ್ಥಶಾಸ್ತ್ರಜ್ಞನ ಜತೆಗೊಂದು ದಿನ

16 Feb, 2018
ಬುಡಕಟ್ಟು ಬದುಕಿಗಾಗಿ ಸೆಣಸಿದ ಆದಿವಾಸಿ

ಗುಹಾಂಕಣ
ಬುಡಕಟ್ಟು ಬದುಕಿಗಾಗಿ ಸೆಣಸಿದ ಆದಿವಾಸಿ

2 Feb, 2018
ಕೊಹ್ಲಿ: ಶ್ರೇಷ್ಠತೆ ಮೇಲೆ ಸೊಕ್ಕಿನ ನೆರಳು

ಗುಹಾಂಕಣ
ಕೊಹ್ಲಿ: ಶ್ರೇಷ್ಠತೆ ಮೇಲೆ ಸೊಕ್ಕಿನ ನೆರಳು

19 Jan, 2018