ಕಿಡ್ನಿ ಕಲ್ಲು; ಪಥ್ಯಾಹಾರ ಪರಿಹಾರ

ಕಿಡ್ನಿಯಲ್ಲಿ ಕಲ್ಲು ಕಾಣುವುದು ಮೂತ್ರವಹ ಸ್ರೋತಸ್ಸಿನ ಮುಖ್ಯ ಮತ್ತು ಸಾಮಾನ್ಯ ತೊಂದರೆಗಳಲ್ಲಿ ಒಂದು. ಬಹಳಷ್ಟು ಜನರು ಇದರ ನೋವು ಅನುಭವಿಸಿದಾಗಲೇ ಇದರ ಬಗ್ಗೆ ತಿಳಿದುಕೊಳ್ಳುವುದು. ಮೂತ್ರದ ಕಲ್ಲಿನ ಬಗ್ಗೆ ತಿಳಿದುಕೊಂಡಿದ್ದು, ಬಾರದಂತೆ ಗಮನವಹಿಸುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಕಿಡ್ನಿ ಕಲ್ಲು; ಪಥ್ಯಾಹಾರ ಪರಿಹಾರ

ಕಿಡ್ನಿಯಲ್ಲಿ ಕಲ್ಲು ಕಾಣುವುದು ಮೂತ್ರವಹ ಸ್ರೋತಸ್ಸಿನ ಮುಖ್ಯ ಮತ್ತು ಸಾಮಾನ್ಯ ತೊಂದರೆಗಳಲ್ಲಿ ಒಂದು. ಬಹಳಷ್ಟು ಜನರು ಇದರ ನೋವು ಅನುಭವಿಸಿದಾಗಲೇ ಇದರ ಬಗ್ಗೆ ತಿಳಿದುಕೊಳ್ಳುವುದು. ಮೂತ್ರದ ಕಲ್ಲಿನ ಬಗ್ಗೆ ತಿಳಿದುಕೊಂಡಿದ್ದು, ಬಾರದಂತೆ ಗಮನವಹಿಸುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಕಿಡ್ನಿಯಲ್ಲಿ ಕಲ್ಲುಂಟಾಗಲು ಮುಖ್ಯ ಕಾರಣ ಮೂತ್ರದಲ್ಲಿರುವ ಖನಿಜಾಂಶಗಳು ಮತ್ತು ನೀರಿನಾಂಶ ಕಡಿಮೆಯಾಗಿ ದೇಹದಲ್ಲಿ ಕಾಣಿಸುವ ಶುಶ್ಕತೆ (ಡೀಹೈಡ್ರೇಶನ್). ಒಂದು ಲೋಟ ನೀರಿನಲ್ಲಿ ಉಪ್ಪು ಅಥವಾ ಸಕ್ಕರೆ ಹಾಕಿದಾಗ ಕರಗುವುದು ಸಹಜ. ಸಕ್ಕರೆ/ಅಥವಾ ಉಪ್ಪನ್ನು ಹೆಚ್ಚಿಸುತ್ತಾ ಹೋದಲ್ಲಿ (ನೀರು ಕರಗಿಸಲಾರದಷ್ಟು) ಅದು ತಳದಲ್ಲಿ ಶೇಖರಣೆ ಗೊಳ್ಳುವುದನ್ನು ನೀವು ನೋಡಿರಬಹುದು.

ಇಲ್ಲೂ ಅದೇ ರೀತಿ. ಮೂತ್ರದಲ್ಲಿನ ನೀರಿನಾಂಶ ಕಡಿಮೆಯಾಗಿ ಖನಿಜಾಂಶ ಹೆಚ್ಚಿರುವಾಗ ಅವು ಶೇಖರಣೆಗೊಂಡು ಹರಳಿನ ರೂಪ ಪಡೆದು ಕಲ್ಲಾಗುತ್ತವೆ. ಬೇಸಿಗೆಯಲ್ಲಿ ಬೆವರುವುದು ಹೆಚ್ಚುವುದರಿಂದ ದೇಹದಲ್ಲಿ ನೀರಿನಾಂಶದ ಕೊರತೆ ಯಾಗುತ್ತದೆ. ಮತ್ತು ಮೂತ್ರದಲ್ಲಿ ಖನಿಜಾಂಶ ಹೆಚ್ಚಿ ಈ ಕಾಲದಲ್ಲಿ ಈ ರೋಗದ ಸಂಭವ ಹೆಚ್ಚು.

ಮೂತ್ರಕೋಶ ಅಥವಾ ಮೂತ್ರ ಹರಿಯುವ ನಾಳದಲ್ಲಿ ಈ ಕಲ್ಲುಗಳು ಸಿಕ್ಕಿಹಾಕಿಕೊಂಡು ಅಪಾರ ವೇದನೆಯನ್ನು ತಂದೊಡ್ಡಿದಾಗಲೇ ಹೆಚ್ಚಿನವರಿಗೆ ಮೂತ್ರದ ಕಲ್ಲಿನ ಅರಿವಾಗುವುದು. ಅತಿ ಚಿಕ್ಕ ಹರಳುಗಳಂಥವು ಹೆಚ್ಚು ತೊಂದರೆ ಕೊಡದೇ ಮೂತ್ರದೊಂದಿಗೆ ಹೊರಹೋಗಬಹುದು. ಮೂರು ಮಿಲಿಮೀಟರಿಗಿಂತ ಹೆಚ್ಚಿದ್ದಲ್ಲಿ ಬಾಧೆಯ ಅರಿವಾಗುತ್ತದೆ. ಮೂತ್ರದ ಕಲ್ಲಿನ ನೋವು ತುಂಬಾ ವಿಶಿಷ್ಟವಾಗಿರುತ್ತದೆ.

ಸಾಮಾನ್ಯವಾಗಿ ಇದು ಪಕ್ಕೆ ಅಥವಾ ಪಾರ್ಶ್ವ ಭಾಗದಲ್ಲಿ ಆರಂಭವಾಗಿ ಮುಂಭಾದಲ್ಲಿ ತೊಡೆಸಂಧಿನವರೆಗೂ ಹರಿದು ಬರುತ್ತದೆ. ಹಾಗೆಯೇ ಬಿಟ್ಟು ಬಿಟ್ಟು ಜೋರಾಗಿ ಅತೀವ ಪ್ರಮಾಣದಲ್ಲಿ ನೋಯಿಸುತ್ತದೆ. ಇದರೊಂದಿಗೆ ಕೆಲವೊಮ್ಮೆ ರಕ್ತ ಮಿಶ್ರಿತ/ಕೆಂಪು ಬಣ್ಣದ ಮೂತ್ರ ಕಾಣಿಸಬಹುದು.

ಕೆಳಭಾಗದ ಹೊಟ್ಟೆಯೂ ನೋಯಬಹುದು. ಇದರೊಂದಿಗೆ ವಾಕರಿಕೆ, ವಾಂತಿ, ಮೂತ್ರಮಾಡುವಾಗ ನೋವು, ಕೀವು, ಜ್ವರ ಕೂಡಾ ಕಾಣಿಸಬಹುದು. ಕಲ್ಲಿನಿಂದ ಮೂತ್ರವಹನೆಗೆ ಅಡ್ಡಿಯಾದಾಗ ಮೂತ್ರಕೋಶದ ಕಾರ್ಯಕ್ಷಮತೆ ಕಮ್ಮಿಯಾಗಬಹುದು. ಮತ್ತು ಊತ ಕಾಣಿಸಿಕೊಳ್ಳಬಹುದು.
ಈ ತೊಂದರೆಯನ್ನು ಸಾಮಾನ್ಯವಾಗಿ ಲಕ್ಷಣಗಳು, ಮೂತ್ರಪರೀಕ್ಷೆ, ಕೆಲವು ರಕ್ತ ಪರೀಕ್ಷೆ, ಎಕ್ಸ್-ರೇ ಹಾಗೂ ಸ್ಕ್ಯಾನ್‌ಗಳಿಂದ ತಿಳಿಯಬಹುದು.

ಅಪಾಯಕರ ಕಾರಣಗಳು

1. ನೀರು ಸರಿಯಾಗಿ ಕುಡಿಯದಿರುವುದು

2. ಬೊಜ್ಜು-ಇವರಲ್ಲಿ ಯೂರಿಕ್ ಆಸಿಡ್ ಉಳ್ಳ ಕಲ್ಲು ಹೆಚ್ಚು.

3. ಕೆಲವು ಆಹಾರಗಳು: ಅತಿ ಹೆಚ್ಚು ಪ್ರೋಟೀನ್ ಸೇವನೆ (ವಿಶೇಷತಃ ಮಾಂಸಾಹಾರ), ಉಪ್ಪು ಅಥವಾ ಸೋಡಿಯಂ ಹೆಚ್ಚಿರುವ ಪದಾರ್ಥ, ಫ್ರಕ್ಟೋಸ್ ಹೆಚ್ಚಿರುವ ಪೇಯಗಳ ಸೇವನೆ, ಅತಿಹೆಚ್ಚು ಕಾಫಿ, ಚಹಾ ಸೇವನೆ, ಆಕ್ಸಲೇಟ್ಸ್ ಹೆಚ್ಚಿರುವ ಪಾಲಕ್ ಸೊಪ್ಪು, ರೂಬಾರ್ಬ್ ಮುಂತಾದ ಪದಾರ್ಥಗಳು, ಕೃತಕ ಸಿಹಿಕಾರಕಯುಕ್ತ ದ್ರವ್ಯಗಳು, ಪ್ಯೂರಿನ್ ಹೆಚ್ಚಿರುವ ಪದಾರ್ಥಗಳು,
ಉದಾ: ಮೀನು, ಮಾಂಸ, ಸೋಡಾ, ಕೋಲ ಮುಂತಾದ ದ್ರವ್ಯಗಳು, ಅತಿ ಹೆಚ್ಚು ಕ್ಯಾಲ್ಸಿಯಂ ಅಥವಾ ಕ್ಯಾಲ್ಸಿಯಂ ಇರುವ ಆಹಾರ ಸೇವನೆ ಉದಾ: ಹಾಲು, ಪನ್ನೀರು, ಚೀಸ್ ಇತ್ಯಾದಿಗಳು, ಚಿಪ್ಸ್ ಮುಂತಾದ ಸಂಸ್ಕರಿಸಿದ ಪದಾರ್ಥಗಳು, ಮದ್ಯಪಾನ ಇತ್ಯಾದಿ.

4. ಕೆಲವು ಔಷಧಿಗಳು: ಅತಿ ಹೆಚ್ಚು ಕ್ಯಾಲ್ಸಿಯಂ, ವಿಟಮಿನ್ ‘ಡಿ’ ಸೇವನೆ, ವಿಟಮಿನ್ ‘ಸಿ’ ಹೆಚ್ಚಿನ ಸೇವನೆ.

5. ಕೆಲವು ರೋಗಗಳು: ಹೈಪರ್ ಪ್ಯಾರಾಥೈರಾಯಿಡ್, ಮೂತ್ರವಹ ಡಿಸ್ಟಲ್ ಆಸಿಡೋಸಿಸ್, ದೊಡ್ಡ ಕರುಳಿನ ಹುಣ್ಣು, ಕ್ರಾನ್ಸ್ ರೋಗ, ಇತ್ಯಾದಿ.
ಲಿಂಬೆ, ಕಿತ್ತಲೆ ಮತ್ತು ತರಕಾರಿಗಳಲ್ಲಿ ಹೆಚ್ಚಿರುವ ಸಿಟ್ರೇಟ್ ಅಂಶ ಕಡಿಮೆಯಾದಾಗ ಕಲ್ಲು ಕಾಣಿಸಿಕೊಳ್ಳುವುದು. ಅಂತೆಯೇ ಸೋಡಿಯಂ ಹೆಚ್ಚಿ, ಪೊಟಾಶಿಯಂ ಕಡಿಮೆಯಾದಾಗಲೂ ಕಲ್ಲುಂಟಾಗುತ್ತದೆ. ಹೀಗಾಗಿ ಒಮ್ಮೆ ಮೂತ್ರದಲ್ಲಿ ಕಲ್ಲು ಕಂಡ ನಂತರ ಇದು ಮತ್ತೆ ಮತ್ತೆ ಬಾರದಂತೆ ನೋಡಿಕೊಳ್ಳಲು ಆಹಾರದಲ್ಲಿ ಗಮನ ವಹಿಸಬೇಕಾಗುವುದು ಬಹಳ ಮುಖ್ಯ.

ಈ ಕಲ್ಲುಗಳನ್ನು ಮೂತ್ರವಹ ಸ್ರೋತಸ್ಸಿನಲ್ಲಿ ಇರುವ ಜಾಗದ ಆಧಾರದ ಮೇಲೆ ಅಥವಾ ಅದರ ರಾಸಾಯನಿಕ ಸಂಯೋಜನೆಯ ಮೇಲೆ ವಿಂಗಡಿಸುತ್ತಾರೆ. ಮೂಲಭೂತವಾಗಿ ಎಲ್ಲ ಕಲ್ಲುಗಳೂ ಕ್ಯಾಲ್ಸಿಯಂನಿಂದ ಕೂಡಿರುತ್ತದೆ. ಅವುಗಳಲ್ಲಿ ಸಾಮಾನ್ಯವಾಗಿ ಬರುವ ಕಲ್ಲು ಅಂದರೆ 80% ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲಿರುತ್ತದೆ. ಇದು ದೊರಗಾಗಿದ್ದು ಹರಿಯುವಾಗ ಅತೀವ ನೋವು, ಉರಿಯನ್ನು ತಂದೊಡ್ಡುತ್ತದೆ.

ಹಾಗಾಗಿ 3-6 ಮಿಲಿಮೀಟರ್ ಇರುವಾಗಲೇ ಲಕ್ಷಣ ತೋರಿಸುತ್ತದೆ. ಇದನ್ನು ಔಷಧಿಗಳಿಂದ ಗುಣಪಡಿಸಬಹುದು. ಆದರೆ ಯೂರಿಕ್ ಆಸಿಡ್ ಹೆಚ್ಚಿ ಉಂಟಾಗಿರುವ ಕಲ್ಲು ಬಹಳ ದೊಡ್ಡ ಗಾತ್ರವಾಗುವವರೆಗೂ ಅರಿವಿಗೆ ಬರುವುದು ಕಮ್ಮಿ. ಏಕೆಂದರೆ ಇದರ ರಚನೆ ನುಣುಪಾಗಿರುತ್ತದೆ ಮತ್ತು ಹೆಚ್ಚಾಗಿ ಜಾಗ ಹೆಚ್ಚಿರುವ ಸ್ಥಳದಲ್ಲಿ ಸದ್ದಿಲ್ಲದೇ ಬೆಳೆಯುತ್ತದೆ. ಇದು ಹೆಚ್ಚಾಗಿ ಔಷಧಿಗೆ ಬಗ್ಗದು.

ಶಸ್ತ್ರ ಚಿಕಿತ್ಸೆ ಬೇಕಾಗಿ ಬರುತ್ತದೆ. ಇದು 5-10% ಜನರಲ್ಲಿ ಮಾತ್ರ ಕಾಣುತ್ತದೆ. ಇದು ಸಾಧಾರಣವಾಗಿ ಸ್ಥೂಲಕಾಯರಲ್ಲಿ ಕಾಣುವುದು. ಮತ್ತು ಮೂತ್ರ ಅತಿ ಹೆಚ್ಚು ಆಮ್ಲೀಯವಾದಾಗ ಕಂಡು ಬರುತ್ತದೆ. ಇದನ್ನು ಕ್ಷ-ಕಿರಣದಿಂದ ಪತ್ತೆ ಹಚ್ಚಬಹುದು. ಇನ್ನು ಕೆಲವು (ಸ್ಟ್ರುವೈಟ್, ಸಿಸ್ಟೀನ್) ಕಲ್ಲುಗಳು ಕಿಡ್ನಿಯಲ್ಲಿನ ಸೋಂಕಿನಿಂದ ತಲೆದೋರುತ್ತವೆ. 

ಚಿಕಿತ್ಸೆ: ಕಲ್ಲನ್ನು ಹೊರಹಾಕುವುದರೊಂದಿಗೆ ಮತ್ತೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಹೇರಳ ನೀರಿನೊಂದಿಗೆ ಮೂತ್ರ ಹೆಚ್ಚಿಸುವ ಔಷಧಿಗಳನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಇದರೊಂದಿಗೆ ಕಲ್ಲು ಹೊರಹೋಗುವಾಗ ಆಗಬಹುದಾದ ನೋವಿಗೆ ಶಾಮಕ ಔಷಧಿಗಳನ್ನು ಸೇರಿಸಬಹುದು. 6 ಮಿಲಿಮೀಟರಿಗಿಂತ ಚಿಕ್ಕ ಕಲ್ಲು ಹರಿದು ಬರುತ್ತದೆ.

ಬರುವಾಗ ರಕ್ತ ಮೂತ್ರ, ಉರಿಮೂತ್ರ, ಬೆನ್ನು, ಪಕ್ಕೆ ಅಥವಾ ಕೆಳಹೊಟ್ಟೆಯಲ್ಲಿ ಅತೀವ ನೋವು ಕಾಣಿಸಬಹುದು. ಈ ಚಿಕಿತ್ಸೆಯ ಸಮಯ ಆದಷ್ಟು ಮಲಗಿರುವುದು ಉತ್ತಮ.

ಮಲಗಿದ ನಿಲುವಿನಲ್ಲಿ ಮೂತ್ರೋತ್ಪತ್ತಿ ಹೆಚ್ಚಿರುತ್ತದೆ. ಆಯುರ್ವೇದದಲ್ಲಿ ಇದೇ ಕಾರ್ಯ ಮಾಡುವಂತಹ ಹಾಗೂ ಕಲ್ಲನ್ನು ಕರಗಿಸಿ, ಹರಳಾಗಿಸಿ ಹೊರಹಾಕುವಂಥ ಅನೇಕ ಔಷಧಿಗಳಿವೆ. ಉದಾ: ಚಂದ್ರಪ್ರಭಾ, ಗೋಕ್ಷುರಾದಿ ಕಷಾಯ, ಬ್ರಹತ್ಯಾದಿ ಕಷಾಯ, ಪುನರ್ನವಾದಿ ಕಷಾಯ, ಪುನರ್ನವಾಸವ ಇತ್ಯಾದಿ.

ಇದರೊಂದಿಗೆ ಹೇರಳ ನೀರು, ಎಳನೀರು ಅತ್ಯಗತ್ಯ. ದೊಡ್ಡ ಕಲ್ಲುಗಳಿಗೆ ಲಿಥೋಟ್ರಿಪ್ಸಿ ಮುಂತಾದ ಚಿಕಿತ್ಸೆಯ ಮೊರೆ ಹೋಗಬೇಕಾಗುತ್ತದೆ. ತದನಂತರವೂ ಬಾರದಂತೆ ತಡೆಗಟ್ಟಲು ಆಯುರ್ವೇದೀಯ ಔಷಧಿಗಳು, ಆಹಾರದಲ್ಲಿ ಜಾಗ್ರತೆ ಮುಖ್ಯ.   

ಆಹಾರದಲ್ಲಿ ಈ ಕ್ರಮವಿರಲಿ
ಮೂತ್ರದ ಕಲ್ಲಿನಲ್ಲಿ, ಚಿಕಿತ್ಸೆಯೊಂದಿಗೆ ಆಹಾರದ ಪಾತ್ರ ಬಹಳ ಮಹತ್ವದ್ದು. ಇದರಿಂದ ಮುಂದೆ ಈ ತೊಂದರೆ ತಲೆದೋರದಂತೆಯೂ ನೋಡಿಕೊಳ್ಳಬಹುದು. ಆಹಾರದಲ್ಲಿ ಈ ಕೆಳಗಿನ ಅಂಶವನ್ನು ಪಾಲಿಸುವುದು ಅತ್ಯಗತ್ಯ.

*ದಿನಕ್ಕೆ ಮೂರು ಲೀಟರಿನಷ್ಟು ನೀರು ಕುಡಿಯುವುದು.

*ಸಿಟ್ರಿಕ್ ಆಮ್ಲ ಇರುವ ಆಹಾರವನ್ನು ಹೇರಳವಾಗಿ ಸೇವಿಸುವುದು. ಉದಾ: ಲಿಂಬೆ ಹಣ್ಣು, ಮೂಸಂಬಿ, ಕಿತ್ತಲೆ.

*ಮಾಂಸಾಹಾರವನ್ನು ಬಹಳ ಮಿತಗೊಳಿಸುವುದು.

*ಕಾಫಿ, ಚಹಾ, ಹಸಿರು ಚಹಾ, ಸೋಡಾ, ಮದ್ಯಪಾನದ ಸೇವನೆ ಬೇಡ.

*ಆಹಾರದಲ್ಲಿ ಉಪ್ಪಿನಂಶವನ್ನು ಕಮ್ಮಿ ಮಾಡಬೇಕು.

*ಆಕ್ಸಲೇಟ್ ಹೆಚ್ಚಿರುವ ಆಹಾರಗಳು ಮಿತವಾಗಿರಲಿ. ಉದಾ: ಬೀಟ್ರೂಟ್, ಸ್ಟ್ರಾಬೆರಿ, ಸೆಲೆರಿ, ಚಾಕೋಲೇಟ್ ಇತ್ಯಾದಿ.

*ಹೆಚ್ಚಿನ ಹಣ್ಣು ತರಕಾರಿಗಳಲ್ಲಿ ಪೊಟಾಶಿಯಂ ಅಂಶ ಹೆಚ್ಚಿರುತ್ತದೆ. ಅವುಗಳ ಬಳಕೆ ಯಥೇಚ್ಛವಾಗಿರಲಿ. ಉದಾ: ಎಳನೀರು, ಪೈನಾಪಲ್, ಬಾಳೆಹಣ್ಣು, ಕರ್ಬೂಜ, ಕಲ್ಲಂಗಡಿ, ಒಣದ್ರಾಕ್ಷಿ ಇತ್ಯಾದಿ.

*ಪಾಲಕ್, ದಂಟಿನ ಸೊಪ್ಪು, ಹುಳಿಸೊಪ್ಪು, ಇತ್ಯಾದಿಗಳ ಬಳಕೆ ಬೇಡ.

*ಕ್ಯಾಲ್ಸಿಯಂ ಗುಳಿಗೆ ನಿಲ್ಲಿಸಿ. ಅಲ್ಲದೇ ವಿಟಮಿನ್ ‘ಸಿ’ ಗುಳಿಗೆಯೂ ಹೆಚ್ಚು ಬೇಡ.

*ಎಳನೀರು ಚೆನ್ನಾಗಿ ಕುಡಿಯಿರಿ.

*ಬಾಳೆದಿಂಡಿನ ರಸ ಉಪಯುಕ್ತ.

*ಪ್ಯುರಿನ್ ಮತ್ತು ಯುರಿಕ್ ಆಸಿಡ್ ಹೆಚ್ಚಿರುವ ಅಣಬೆ, ಪಾಲಕ್ ಸೊಪ್ಪು, ಹೂಕೋಸು, ಬ್ರೊಕೊಲಿ, ಮೀನು, ಮಾಂಸ ಇತ್ಯಾದಿಗಳು ಒಳ್ಳೆಯದಲ್ಲ.

*ಬಾರ್ಲಿ ನೀರು, ಹುರುಳಿ ಬೀಜವನ್ನು ಬೇಯಿಸಿದ ನೀರು ಒಳ್ಳೆಯದು.

ಬೇಸಿಗೆಯ ಬವಣೆಯಲ್ಲಿ ಒಂದಾದ ಮೂತ್ರದಲ್ಲಿನ ಕಲ್ಲಿನ ಬಗ್ಗೆ ಸರಿಯಾಗಿ ತಿಳಿದು ಕೊಂಡು ಸಮರ್ಪಕ ಆಹಾರ ಸೇವಿಸಿದಲ್ಲಿ ಈ ತೊಂದರೆಯಿಂದ ದೂರವಿರಲು ಸಾಧ್ಯವಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಯಾರ ಆರೋಗ್ಯ? ಯಾರಿಗೆ ಭಾಗ್ಯ?

ಆಯುಷ್ಮಾನ್ ಭಾರತ್
ಯಾರ ಆರೋಗ್ಯ? ಯಾರಿಗೆ ಭಾಗ್ಯ?

24 Feb, 2018
ಹದಿಹರೆಯದ ಸಮಸ್ಯೆ ಪಿಸಿಓಡಿ

ವೈದ್ಯಲೋಕ
ಹದಿಹರೆಯದ ಸಮಸ್ಯೆ ಪಿಸಿಓಡಿ

24 Feb, 2018
ಏನಿದು ಟೆನಿಸ್ ಮೊಣಕೈ ನೋವು?

ಚಿಕಿತ್ಸೆ
ಏನಿದು ಟೆನಿಸ್ ಮೊಣಕೈ ನೋವು?

24 Feb, 2018
ರಕ್ತದಿಂದ ಇದು ಸಾಧ್ಯವೇ?

ಆರೋಗ್ಯ
ರಕ್ತದಿಂದ ಇದು ಸಾಧ್ಯವೇ?

17 Feb, 2018
ಕಾಡದಿರಲಿ ಹುಳುಕಡ್ಡಿ

ಆರೋಗ್ಯ
ಕಾಡದಿರಲಿ ಹುಳುಕಡ್ಡಿ

17 Feb, 2018