ಆರೋಗ್ಯ ಪಾಲನೆಯಲ್ಲಿ ಅಸ್ವಸ್ಥ ಎಳೆಗಳು

ಆರೋಗ್ಯ ಪಾಲನೆ ಸಾಮಾಜಿಕ ಹಕ್ಕು. ಇದು ಮಾರಾಟ ಮಾಡುವ ಹಾಗೂ ಖರೀದಿಸುವ ಗ್ರಾಹಕ ಉತ್ಪನ್ನದಂತಾಗಬಾರದು.

ಆರೋಗ್ಯ ಪಾಲನೆಯಲ್ಲಿ ಅಸ್ವಸ್ಥ ಎಳೆಗಳು

ಆರೋಗ್ಯ ಪಾಲನೆ ಸಾಮಾಜಿಕ ಹಕ್ಕು. ಇದು ಮಾರಾಟ ಮಾಡುವ ಹಾಗೂ ಖರೀದಿಸುವ ಗ್ರಾಹಕ ಉತ್ಪನ್ನದಂತಾಗಬಾರದು.

‘ವೈದ್ಯನೊಬ್ಬ ತಪ್ಪು ಮಾಡಿದಾಗ ಆತನೇ ಅಪರಾಧಿಗಳಲ್ಲಿ ಮೊದಲನೆಯವನು. ಆತನಿಗೆ ಶಕ್ತಿಯಿದೆ. ಆತನಿಗೆ ಜ್ಞಾನವಿದೆ’. ವಿಶ್ವಖ್ಯಾತಿಯ ಷೆರ್ಲಾಕ್ ಹೋಮ್ಸ್ ಪಾತ್ರವನ್ನು  ಸೃಷ್ಟಿಸಿದ ಹಾಗೂ ಸ್ವತಃ ವೈದ್ಯನಾಗಿದ್ದ ಸರ್ ಆರ್ಥರ್ ಕಾನನ್ ಡಯಲ್, ‘ದಿ ಸ್ಪೆಕಲ್ಡ್ ಬ್ಯಾಂಡ್’ ಕತೆಯಲ್ಲಿ  ಹೇಳುವ ಮಾತುಗಳಿವು. ಶತಮಾನದ ಹಿಂದೆಯೇ ಹೇಳಿದಂತಹ ಈ ಮುನ್ನೋಟದ ನುಡಿಗಳು ಇಂದು ಕಹಿ ಸತ್ಯಗಳಾಗಿ ನಮ್ಮೆದುರು ಅನಾವರಣಗೊಳ್ಳುತ್ತಿರುವುದನ್ನು ದಿನನಿತ್ಯ ಕಾಣುತ್ತಿದ್ದೇವೆ. ವೈದ್ಯಕೀಯ ವೃತ್ತಿ ಹಾಗೂ ವೈದ್ಯಕೀಯ ಶಿಕ್ಷಣ ಗುಣಮಟ್ಟದ ನಿಯಂತ್ರಕ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಸುಧಾರಣೆಗೇ ನ್ಯಾಯಮೂರ್ತಿ ಆರ್.ಎಂ.ಲೋಧಾ ನೇತೃತ್ವದ ಮೂವರು ಸದಸ್ಯರ ನಿಗಾ ಸಮಿತಿಯನ್ನು ಸುಪ್ರೀಂಕೋರ್ಟ್ ಇತ್ತೀಚೆಗೆ ರಚಿಸಿದೆ.

ಎಂದರೆ ಪರಿಸ್ಥಿತಿ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂದು ಊಹಿಸಿ. ಹಾಗೆಯೇ ಕೇಂದ್ರ ಸರ್ಕಾರ ನಡೆಸುವಂತಹ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರಾಷ್ಟ್ರದಾದ್ಯಂತ ಕಡ್ಡಾಯ ಮಾಡಿ ಸುಪ್ರೀಂ ಕೋರ್ಟ್ ಕಡೆಗೂ ಇತ್ತೀಚೆಗೆ ನೀಡಿದ ನಿರ್ದೇಶನ ವೈದ್ಯಕೀಯ ಶಿಕ್ಷಣದ ವ್ಯಾಪಾರೀಕರಣಕ್ಕೆ ನಿಯಂತ್ರಣ ಹೇರುವಲ್ಲಿ ಮೊದಲ ಹೆಜ್ಜೆ. ಭಾರತೀಯ ವೈದ್ಯಕೀಯ ಮಂಡಳಿ ಕಾಯಿದೆಗೆ ತಿದ್ದುಪಡಿ ಮೂಲಕ ಸ್ವರೂಪಾತ್ಮಕ ಬದಲಾವಣೆಗಳಿಗೆ ಡಾ. ರಂಜಿತ್ ರಾಯ್ ಚೌಧುರಿ ತಜ್ಞ ಸಮಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸದೀಯ ಸ್ಥಾಯಿ ಸಮಿತಿ ಈ ಹಿಂದೆಯೇ ಶಿಫಾರಸು ಮಾಡಿದ್ದವು. 1990ರ ದಶಕದ ನಂತರ ಭಾರತೀಯ ಸಮಾಜದ ಎಲ್ಲಾ ವಲಯಗಳಂತೆ ಆರೋಗ್ಯ ಕ್ಷೇತ್ರವೂ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ಅಲೆಯಲ್ಲಿ ಸಿಲುಕಿತು.

ರೋಗಿಗಳ ಸೇವೆಯೇ ಕೇಂದ್ರವಾಗಿದ್ದ ವೈದ್ಯಕೀಯ ವೃತ್ತಿ, ಮಾರುಕಟ್ಟೆ ಕೇಂದ್ರಿತ ಕಾರ್ಪೊರೆಟ್ ಉದ್ಯಮವಾಗಿ ಬದಲಾಗಿ ಹೋದದ್ದು ಎದ್ದು ಕಾಣಿಸುವಂತಹದ್ದು. ಕೆಲವೇ ದಶಕಗಳಲ್ಲಿ ಖಾಸಗಿ ವೈದ್ಯಕೀಯ ವಲಯದ ಚಿತ್ರಣವೇ ಬದಲಾಯಿತು. ಔಷಧ ಕಂಪೆನಿಗಳು, ವಿಮಾ ಕಂಪೆನಿಗಳು, ಖಾಸಗಿ ವೈದ್ಯಕೀಯ ಕಾಲೇಜುಗಳು, ವೈದ್ಯಕೀಯ ಉಪಕರಣ ಕಂಪೆನಿಗಳು, ಕಾರ್ಪೊರೆಟ್ ಆಸ್ಪತ್ರೆಗಳು, ಬಹುರಾಷ್ಟ್ರೀಯ ಲಸಿಕೆ ತಯಾರಕರು  ಮುಂತಾದ ಎಲ್ಲಾ ಪ್ರಮುಖ ಪಾತ್ರಧಾರಿಗಳಿಗೆ ಲಾಭಾಂಶ ಹೆಚ್ಚಳವೇ ಗುರಿಯಾಯಿತು. ಈ ಪ್ರಕ್ರಿಯೆಯಲ್ಲಿ ಆರೋಗ್ಯಪಾಲನೆ ಎಂಬುದು ಏರುತ್ತಿರುವ ವೈದ್ಯಕೀಯ ವೆಚ್ಚವನ್ನು ಭರಿಸುವವರಿಗೆ ಲಭ್ಯವಿರುವ ಮಾರುಕಟ್ಟೆ ಉತ್ಪನ್ನವಾಗಿಹೋಯಿತು ಎಂಬುದು ದುರಂತ. ವೈದ್ಯಕೀಯ ವೃತ್ತಿಗಿರಬೇಕಾದ ಸಾಮಾಜಿಕ ತರ್ಕಕ್ಕೆ ಬೆಲೆಯೇ ಇಲ್ಲದಾಯಿತು.

ಹಿಂದೆಲ್ಲಾ ಮನುಷ್ಯರ ನೋವು ಅಥವಾ ಸಾವನ್ನು ಗೆಲ್ಲಲು ಔಷಧಗಳನ್ನು ಬಳಸುವಾಗ ರೋಗಿಯ ಹಿತವೇ ಮುಖ್ಯವಾಗಿರುತ್ತಿತ್ತು. ಆದರೆ ಈಗ ಲಾಭವೇ ಮುಖ್ಯ ಮಂತ್ರವಾಗಿದೆ. ಈ ಮಾತುಗಳೇನೂ ಹೊಸದಲ್ಲ. ಅನಗತ್ಯ ಪರೀಕ್ಷೆ, ಶಸ್ತ್ರಚಿಕಿತ್ಸೆ ಹಾಗೂ ದುಬಾರಿ ಔಷಧಗಳ ಬಗ್ಗೆ  ಜನಸಾಮಾನ್ಯರು ದೂರುತ್ತಲೇ ಇರುತ್ತಾರೆ. ಆದರೆ ಈ ದೂರುಗಳಲ್ಲಿ ನಿಜಾಂಶ ಇದೆ ಎಂಬುದನ್ನು ಇತ್ತೀಚೆಗೆ ಬಿಡುಗಡೆಯಾಗಿರುವ ‘ಡಿಸೆಂಟಿಂಗ್ ಡಯಾಗ್ನಸಿಸ್’ (ಪ್ರಕಾಶಕರು: ರ‍್ಯಾಂಡಮ್ ಹೌಸ್ ಇಂಡಿಯಾ) ಪುಸ್ತಕದಲ್ಲಿ ವೈದ್ಯರೇ ದೃಢಪಡಿಸುತ್ತಾರೆ ಎಂಬುದು ಮುಖ್ಯ. ಪುಣೆ ಮೂಲದ ಸಾಥಿ ಸಂಸ್ಥೆ ನಡೆಸಿದ ಅಧ್ಯಯನ ಆಧರಿಸಿ ವೈದ್ಯರಾದ  ಡಾ.ಅರುಣ್ ಗದ್ರೆ ಹಾಗೂ ಡಾ.ಅಭಯ್ ಶುಕ್ಲ ಈ ಪುಸ್ತಕ ಬರೆದಿದ್ದಾರೆ. ಈ ಅಧ್ಯಯನ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 78 ವೈದ್ಯರನ್ನು ಸಂದರ್ಶಿಸಲಾಗಿದೆ.

ಬೆಂಗಳೂರು ಸೇರಿದಂತೆ ಮಹಾರಾಷ್ಟ್ರ, ಛತ್ತೀಸಗಡ, ದೆಹಲಿ, ಕೋಲ್ಕತ್ತ , ಚೆನ್ನೈ ಆಸ್ಪತ್ರೆಗಳ ವೈದ್ಯರ ಮಾತುಗಳು ಈ ಪುಸ್ತಕದಲ್ಲಿವೆ. ಖಾಸಗಿ ವಲಯದಲ್ಲಿ ನಿಯಂತ್ರಣದ ಕೊರತೆ, ದಿನನಿತ್ಯ ವೈದ್ಯರು ಅನುಸರಿಸುವ ಅಕ್ರಮ ಹಾಗೂ ಅನೈತಿಕ ಆಚರಣೆಗಳು, ಔಷಧ ಕಂಪೆನಿಗಳ ಪ್ರಭಾವ, ವೈದ್ಯಕೀಯ ಶಿಕ್ಷಣದ ವ್ಯವಸ್ಥೆ ಹಾಗೂ ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯ ಸಾಧ್ಯತೆಯನ್ನು ಈ ವೈದ್ಯಕೀಯ ವೃತ್ತಿನಿರತರು  ಈ ಪುಸ್ತಕದಲ್ಲಿ ಚರ್ಚಿಸಿದ್ದಾರೆ. ‘ಔಷಧ ಕಂಪೆನಿಗಳು ತೋಳಗಳ ಗುಂಪಿನಂತೆ’ ಎಂದು ವೈದ್ಯರೊಬ್ಬರು ವರ್ಣಿಸಿದ್ದಾರೆ. ವೈದ್ಯರು ಸಲಹೆ ನೀಡುವ ಔಷಧದ ಬಗ್ಗೆ ಔಷಧ ಕಂಪೆನಿಗಳು ಹಿಡಿತ ಹೊಂದಿರುತ್ತವೆ. ಉಡುಗೊರೆ, ವಿದೇಶ ಪ್ರವಾಸ ಆಮಿಷಗಳ ಜೊತೆಗೆ ಪಟ್ಟು ಬಿಡದೆ ಕಾಡುವ ಔಷಧ ಕಂಪೆನಿಗಳ ಪ್ರತಿನಿಧಿಗಳು, ದುಬಾರಿ ಹಾಗೂ ಅನಗತ್ಯ ಔಷಧಗಳನ್ನು ರೋಗಿಗಳಿಗೆ ನೀಡುವಂತೆ ಮಾಡಲು ವೈದ್ಯರನ್ನು ಸೆಳೆದುಕೊಳ್ಳುವಲ್ಲಿ  ಸಫಲರಾಗುತ್ತಾರೆ.

 ತಾನು ನೋಡುವ ರೋಗಿಗಳಲ್ಲಿ ಶೇ 40ರಷ್ಟು ಮಂದಿಯನ್ನು ಆಂಜಿಯೊಪ್ಲಾಸ್ಟಿಯಂತಹ ಸರ್ಜಿಕಲ್ ಪ್ರೊಸೀಜರ್‌ಗೆ ಶಿಫಾರಸು ಮಾಡದಿದ್ದಲ್ಲಿ ಕಾರ್ಪೊರೆಟ್ ಆಸ್ಪತ್ರೆಯಿಂದ ಹೊರಹಾಕಲಾಗುವುದು ಎಂದು ದೊಡ್ಡ ನಗರವೊಂದರ ಹೃದಯತಜ್ಞರೊಬ್ಬರಿಗೆ ಹೇಳಲಾಗಿತ್ತು. ಹೀಗಾಗಿ ಕೆಲಸ ಉಳಿಸಿಕೊಳ್ಳಲು ತನ್ನ ರೋಗಿಗಳಲ್ಲಿ ಶೇ 25ರಷ್ಟು ಮಂದಿಗೆ ಈ ಸರ್ಜಿಕಲ್ ಪ್ರೊಸೀಜರ್‌ಗಳಿಗೆ ಸಲಹೆ ನೀಡಬೇಕಾಗುತ್ತಿತ್ತು  ಎಂದು ಅವರು ಹೇಳಿಕೊಂಡಿದ್ದಾರೆ. ಸಮಾಜದ ಅವಾಸ್ತವ ನಿರೀಕ್ಷೆಗಳಿಂದಾಗಿ ಪ್ರಾಮಾಣಿಕ ವೈದ್ಯರೂ ಬಲಿಪಶುಗಳಾಗುವ ಸಂದರ್ಭವೂ ಇದೆ. ಅಗತ್ಯ ಇಲ್ಲದಿದ್ದಾಗಲೂ ಹಿಸ್ಟೆರಕ್ಟಮಿ, ಸಲೈನ್ ಡ್ರಿಪ್‌ಗಳು ತಮಗೆ ಅಗತ್ಯ ಎಂದು ಜನ ಭಾವಿಸುವ ಸ್ಥಿತಿ ಏರ್ಪಟ್ಟಿರುವುದೂ ಉಂಟು. ‘ಒಂದಿಷ್ಟು  ಉತ್ಪ್ರೇಕ್ಷೆಯಿಂದ ಹೇಳುತ್ತಿದ್ದೇನೆ.

ಗರ್ಭಕೋಶವನ್ನು ಹೊಂದಿರುವಂತಹ 35 -40 ವರ್ಷದ ಮಹಿಳೆಯನ್ನು ಈ ಕಾಲದಲ್ಲಿ ನೋಡುವುದು ಅಪರೂಪ’ ಎನ್ನುತ್ತಾರೆ ನಾಸಿಕ್ ಸಿಲ್ಲೆಯ ಚಾಂದವಾಡದ ವೈದ್ಯ ಡಾ. ರಾಜೇಂದ್ರ ಮಾಲೊಸ್. ದೆಹಲಿಯ ಶಿಶುತಜ್ಞ  ಡಾ.ಸಂಜಯ್   ಭಟ್ನಾಗರ್ ಹೇಳುವ ಮಾತುಗಳಿವು: ವಿಮೆ ಪಡೆದುಕೊಂಡ ರೋಗಿ ರಾಜನಂತೆ ತನ್ನನ್ನು ಭಾವಿಸುತ್ತಾನೆ. ಡೆಬಿಟ್ ಕಾರ್ಡ್ ತರಹ  ಇನ್ಷುರೆನ್ಸ್ ಕಾರ್ಡ್ ಬಳಸುತ್ತಾನೆ. ‘ಆಸ್ಪತ್ರೆಗೆ ಸೇರಿಸಲು ನೆರವಾಗಿ ಒಂದಿಷ್ಟು ಹಣ ಗಳಿಸಿಕೊಡಲು ನೆರವಾಗುತ್ತೀರಾ?’ ಎಂದಾತ ಕೇಳುತ್ತಾನೆ. ನಾನು ತಿರಸ್ಕರಿಸುತ್ತೇನೆ. ಆದರೆ ರೋಗಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳದೆಯೇ ಪೇಪರ್ ವರ್ಕ್ ಸಿದ್ಧ ಮಾಡುವ ಕೆಲವು ಆಸ್ಪತ್ರೆಗಳೂ ನನಗೆ ಗೊತ್ತಿವೆ. ಆಸ್ಪತ್ರೆ, ರೋಗಿ ಹಾಗೂ ಟಿಪಿಎ ( ನಿರ್ವಾಹಕರು) ನಡುವೆ ಲಾಭ ಹಂಚಿಕೆಯಾಗುತ್ತದೆ. 

ಪುಣೆಯ ಪ್ರಖ್ಯಾತ ಫಿಸಿಷಿಯನ್ ಡಾ.ಎಚ್.ವಿ. ಸರ್ದೇಸಾಯಿ ಅವರ ನುಡಿಗಳಿವು: ಸಮಾಜದಲ್ಲೇ ನೈತಿಕ ನಡವಳಿಕೆಗಳ ಮಟ್ಟ ಕ್ಷೀಣಿಸಿದೆ. ಹೀಗಾಗಿ, ವೈದ್ಯರಲ್ಲೂ ಇದು ಪ್ರತಿಬಿಂಬಿತ. ವೈದ್ಯನ ಬಳಿ ಮರ್ಸಿಡಿಸ್ ಕಾರು ಇದ್ದಲ್ಲಿ ಆತನನ್ನು ದೊಡ್ಡ ಮನುಷ್ಯ ಎಂದು ಸಮಾಜ ಪರಿಗಣಿಸುವಂತಾಗಿರುವುದೂ ಇದಕ್ಕೆ ಮುಖ್ಯ ಕಾರಣ. ಗ್ರಾಹಕ ವಸ್ತುಗಳನ್ನು ಮಾರಾಟ ಮಾಡಲು  ನಗರಗಳಲ್ಲಿ ಷಾಪಿಂಗ್ ಮಾಲ್‌ಗಳು ತಲೆ ಎತ್ತಿವೆ. ಹಾಗೆಯೇ ವೈದ್ಯಕೀಯ ಸೇವೆಗಳ ಮಾರಾಟಕ್ಕೆ ‘ಆಸ್ಪತ್ರೆ ಮಾಲ್‌’ಗಳು ತಲೆ ಎತ್ತಿವೆ ಎಂದು ವೈದ್ಯರೊಬ್ಬರು ಬಣ್ಣಿಸುತ್ತಾರೆ. ಖಾಸಗಿ ವೈದ್ಯಕೀಯ ವಲಯದಲ್ಲಿರುವ ಅಪಾರ ಲಾಭವನ್ನು ಮನಗಂಡು ರಾಜಕಾರಣಿಗಳು, ಉದ್ಯಮಿಗಳಂತಹ ವೈದ್ಯಕೀಯೇತರ ಹಣಹೂಡಿಕೆದಾರರು ನೂರಾರು ಕೋಟಿ ರೂಪಾಯಿಗಳನ್ನು ಹೂಡಿದ್ದಾರೆ. 

‘ವೈದ್ಯೋ ನಾರಾಯಣ ಹರಿ’ ಎಂದೇ ವೈದ್ಯರನ್ನು ಕರೆಯುವಂತಹ ಪರಂಪರೆ ನಮ್ಮದು. ಮತ್ತೊಬ್ಬ ವ್ಯಕ್ತಿಯ ಕಾಯಿಲೆಯ ಲಾಭ ಪಡೆದು ಹಣ ಮಾಡುವುದು ಈ ಪರಂಪರೆಗೆ ಸಲ್ಲದು. ಆದರೆ ಈಗ ಅದೇ ಆಗುತ್ತಿದೆ. ‘ಸಿಂಕ್ ಟೆಸ್ಟ್ಸ್’ ಎಂಬ ಪ್ರಕ್ರಿಯೆ ಬಗ್ಗೆ ಪೆಥಾಲಜಿಸ್ಟ್ ಒಬ್ಬರು ವಿವರಣೆ ನೀಡುತ್ತಾರೆ. ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ವೈದ್ಯರು ಸಲಹೆ ಮಾಡಿರುತ್ತಾರೆ. ಆದರೆ, ಪರಸ್ಪರ ತಿಳಿವಳಿಕೆ ಮೇರೆಗೆ ಯಾವುದೇ ಪರೀಕ್ಷೆ ಮಾಡದೆ ರೋಗಿಯಿಂದ ಸಂಗ್ರಹಿಸಲಾದ ಮಾದರಿಗಳನ್ನು ಸಿಂಕ್‌ಗೆ ಸುರಿದು ‘ನಾರ್ಮಲ್’ ವರದಿ ನೀಡಲಾಗುತ್ತದೆ. ಇವೆಲ್ಲಾ ಕಮಿಷನ್ ಹೆಚ್ಚು ಮಾಡಿಕೊಳ್ಳಲು ಆಡುವ ಆಟ. ದೇಹದ ಮೇಲ್ಮೈಯಲ್ಲಿ ಛೇದನ ಮಾಡಿ ಹೊಲಿಗೆ ಹಾಕಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಹಣ ಕೀಳುವ ವ್ಯವಸ್ಥೆಯೂ ಇದೆ ಎಂಬಂತಹ ಮೈನಡುಗಿಸುವ ವಿವರಗಳನ್ನು ವೈದ್ಯರು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. 

ಪ್ರತಿವರ್ಷ 3.5 ಕೋಟಿ ಭಾರತೀಯರು ಆರೋಗ್ಯ ಪಾಲನೆ ವೆಚ್ಚಗಳಿಂದಾಗಿ ಬಡತನಕ್ಕೆ ಸಿಲುಕುತ್ತಿದ್ದಾರೆ ಎಂಬುದು ಅಂಕಿಅಂಶ. ಕುಟುಂಬದ ಯಾರಾದರೂ ಆಸ್ಪತ್ರೆಗೆ ಸೇರಿದರೆ ಸಾಲ ಮಾಡಬೇಕು, ಆಭರಣ ಮಾರಬೇಕು ಅಥವಾ ಆಸ್ತಿಪಾಸ್ತಿ ಮಾರಿ ಖರ್ಚು ಸರಿದೂಗಿಸಬೇಕೆಂಬ ಪರಿಸ್ಥಿತಿ ಇರುವುದು ಶೋಚನೀಯ. ಆದರೆ ವೈದ್ಯಕೀಯ ಪ್ರವಾಸೋದ್ಯಮದ ನೆಲೆಯಾಗುತ್ತಿರುವ ಪ್ರತಿಷ್ಠೆಯೂ ಇತ್ತೀಚಿನ ದಿನಗಳಲ್ಲಿ ಭಾರತದ್ದಾಗಿದೆ. ಭಾರತದ ಅಭಿವೃದ್ಧಿ ಕಥಾನಕದ ವಿಪರ್ಯಾಸವಿದು. ಭಾರತದ ಆರೋಗ್ಯ ಪಾಲನೆ ವಹಿವಾಟಿನಲ್ಲಿ ಶೇ 80ರಷ್ಟು ಪ್ರಮಾಣವನ್ನು ಖಾಸಗಿ ವೈದ್ಯಕೀಯ ವಲಯವೇ ಹೊಂದಿದ್ದು,  ವ್ಯಾಪಕ ವಾಣಿಜ್ಯೀಕರಣ  ವೈದ್ಯಕೀಯ ವೃತ್ತಿಯ ಸ್ವರೂಪವನ್ನೇ ಬದಲಿಸಿದೆ. ರಾಷ್ಟ್ರದಲ್ಲಿ ಸುಮಾರು 425 ವೈದ್ಯಕೀಯ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ.

ಇವುಗಳಲ್ಲಿ ಸುಮಾರು ಅರ್ಧದಷ್ಟು ಖಾಸಗಿಗೆ ಸೇರುತ್ತದೆ. ಭಾರಿ ಮೊತ್ತದ ಹಣ ನೀಡಿ ವೈದ್ಯಕೀಯ ಕೋರ್ಸ್  ಮಾಡುವ ಅನೇಕ ವೈದ್ಯರು ಅಷ್ಟೇನೂ ಹೆಚ್ಚಿನ ಸಂಬಳವಿಲ್ಲದ ಸರ್ಕಾರಿ ಉದ್ಯೋಗಗಳಿಗೆ ಲಭ್ಯರಿರುವುದಿಲ್ಲ. ವೈದ್ಯಕೀಯ ಹಾಗೂ ನರ್ಸಿಂಗ್ ಶಿಕ್ಷಣಕ್ಕೆ ಸರ್ಕಾರಗಳು ಹೆಚ್ಚಿನ ಹಣ ವ್ಯಯಿಸದಿದ್ದಲ್ಲಿ ಪ್ರಾಥಮಿಕ ಆರೋಗ್ಯ ಪಾಲನೆ ವ್ಯವಸ್ಥೆ ಬಲಗೊಳ್ಳುವುದು ಅಸಾಧ್ಯ ಎಂದು ಹೇಳುತ್ತಾರೆ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಕೇಂದ್ರದ ಮಾಜಿ ಆರೋಗ್ಯ ಕಾರ್ಯದರ್ಶಿ ಕೇಶವ ದೇಸಿರಾಜು. ಇತ್ತೀಚೆಗೆ ರಾಜ್ಯಸಭೆಯಲ್ಲಿ ಆರೋಗ್ಯ ಕುರಿತು ಮಂಡಿಸಲಾದ ಸಂಸದೀಯ ಸಮಿತಿ ವರದಿಯಲ್ಲೂ ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ಹಂಚಿಕೆ ಕಡಿಮೆಯಾಗಿರುವುದನ್ನು ಎತ್ತಿ ಹೇಳಲಾಗಿದೆ. ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಭಾರತ ತನ್ನ ಜಿಡಿಪಿಯ ಶೇ 1ರಷ್ಟನ್ನು ಮಾತ್ರ ಸಾರ್ವಜನಿಕ ಆರೋಗ್ಯದ ಮೇಲೆ ವ್ಯಯಿಸುತ್ತದೆ.

ಚೀನಾ  ಶೇ 3ರಷ್ಟು ಹಾಗೂ ಅಮೆರಿಕ ಶೇ 8.3ರಷ್ಟು ವ್ಯಯಿಸುತ್ತದೆ ಎಂಬುದನ್ನು ಗಮನಿಸಬೇಕು. ಭಾರತದಲ್ಲಿ ರಾಜ್ಯಗಳು ಪ್ರತ್ಯೇಕ ಆರೋಗ್ಯ ಬಜೆಟ್‌ಗಳನ್ನು ಹೊಂದಿರುತ್ತವೆ. ಆದರೆ ಈ ವಲಯ ಸಾಗುತ್ತಿರುವ ಒಟ್ಟಾರೆ ದಿಕ್ಕು ಆತಂಕಕಾರಿ. 2015ರಲ್ಲಿ ಆರೋಗ್ಯಪಾಲನೆಗೆ ಸಂಬಂಧಿಸಿದಂತೆ ಜಾಗತಿಕವಾಗಿ 190 ರಾಷ್ಟ್ರಗಳ ಪೈಕಿ ಭಾರತ 112ನೇ ಸ್ಥಾನದಲ್ಲಿತ್ತು. ಭಾರತದಂತಹ ದೊಡ್ಡ ಆರ್ಥಿಕತೆಗೆ ಇದು ದುರಂತದ ಸಂಗತಿ. ಹೆರಿಗೆ ಸಂದರ್ಭದಲ್ಲಿ ಮಹಿಳೆಯರ ಸಾವಿನ ಪ್ರಮಾಣ ಈಗಲೂ ನಮ್ಮಲ್ಲಿ ಅತ್ಯಂತ ಹೆಚ್ಚಿದೆ. ಗ್ರಾಮಗಳಲ್ಲಿ ವಾಸಿಸುತ್ತಿರುವ ಶೇ 70ರಷ್ಟು ಜನಸಂಖ್ಯೆಗೆ ಇರುವ ಆಸ್ಪತ್ರೆ ಸೌಲಭ್ಯ ಸೀಮಿತ. ಇಂಗ್ಲೆಂಡ್‌ನಲ್ಲಿ ಸಾರ್ವತ್ರಿಕ ಆರೋಗ್ಯ ಪಾಲನೆ ವ್ಯವಸ್ಥೆ (ಯೂನಿವರ್ಸಲ್ ಹೆಲ್ತ್ ಕೇರ್–ಯುಎಚ್‌ಸಿ) ಇದೆ. ಯಾವುದಾದರೂ ಚಿಕಿತ್ಸೆ ತೆಗೆದುಕೊಂಡಾಗ ರೋಗಿ ಹಣ ಕೊಡುವ ಅಗತ್ಯ ಅಲ್ಲಿಲ್ಲ.

ಈ ಹಣವನ್ನು ಸ್ವಾಯತ್ತ ಸಂಸ್ಥೆ ನೀಡುತ್ತದೆ. ಇದಕ್ಕೆ ತೆರಿಗೆಗಳಿಂದ ಹಣ ಬರುತ್ತದೆ. ಈ ಆದರ್ಶದ ಸ್ಥಿತಿಯತ್ತ ಸಾಗಲು ಭಾರತವೂ ಯತ್ನಿಸಬೇಕು. ವೈದ್ಯ ಮತ್ತು ರೋಗಿಯ ಮಧ್ಯೆ ನೇರ ಹಣಕಾಸು ವಹಿವಾಟು ಇಲ್ಲದ ವೈದ್ಯಕೀಯ ಸೇವಾ ವ್ಯವಸ್ಥೆ ಭಾರತದಲ್ಲೂ ರೂಪಿಸುವುದು ಅಗತ್ಯ. ಸಾರ್ವತ್ರಿಕ ಆರೋಗ್ಯ ಪಾಲನೆ ಅಂತಹ ವ್ಯವಸ್ಥೆ. ಹಣದ ಕೊಡುಕೊಳ್ಳುವಿಕೆ ವ್ಯವಸ್ಥೆ ಇರುವವರೆಗೆ ವೈದ್ಯರು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಆಮಿಷ ಇದ್ದೇಇರುತ್ತದೆ. ಆರೋಗ್ಯವೇ ಸಂಪತ್ತು ಎಂಬುದನ್ನು ಮರೆಯಲಾಗದು. ತಡೆಯಬಹುದಾದ ಕಾಯಿಲೆ ಹಾಗೂ ಅಕಾಲಿಕ ಸಾವುಗಳಿಂದಾಗಿ ವಾರ್ಷಿಕ ಜಿಡಿಪಿಯ ಶೇ 6ರಷ್ಟನ್ನು ಭಾರತ ಕಳೆದುಕೊಳ್ಳುತ್ತದೆ ಎಂಬುದು ತಜ್ಞರ ಅಂದಾಜು. ಇಂತಹ ಸನ್ನಿವೇಶದಲ್ಲಿ ಆರೋಗ್ಯ ಪಾಲನೆ ಸಾಮಾಜಿಕ ಹಕ್ಕಾಗಬೇಕು. ಇದು ಮಾರಾಟ ಮಾಡುವ ಹಾಗೂ ಖರೀದಿಸುವ ಗ್ರಾಹಕ ಉತ್ಪನ್ನದಂತಾಗಬಾರದು.

Comments
ಈ ವಿಭಾಗದಿಂದ ಇನ್ನಷ್ಟು
ಯಥಾಸ್ಥಿತಿ ಬದಲಿಸಲು ಮುನ್ನುಡಿಯಾಗಲಿ

ಕಡೆಗೋಲು
ಯಥಾಸ್ಥಿತಿ ಬದಲಿಸಲು ಮುನ್ನುಡಿಯಾಗಲಿ

7 Mar, 2018
ಲಿಂಗತ್ವ ಸಂವೇದನಾಶೀಲ ನೀತಿಯ ಜೊತೆಗೆ ಹಣಹೂಡಿಕೆಯ ಅಗತ್ಯ

ಕಡೆಗೋಲು
ಲಿಂಗತ್ವ ಸಂವೇದನಾಶೀಲ ನೀತಿಯ ಜೊತೆಗೆ ಹಣಹೂಡಿಕೆಯ ಅಗತ್ಯ

21 Feb, 2018
ಗುಲಾಬಿ ಬಣ್ಣದ ಸಾಂಕೇತಿಕತೆ ಆಚೆಗೆ ದಕ್ಕಿದ್ದು ಏನು?

ಕಡೆಗೋಲು
ಗುಲಾಬಿ ಬಣ್ಣದ ಸಾಂಕೇತಿಕತೆ ಆಚೆಗೆ ದಕ್ಕಿದ್ದು ಏನು?

7 Feb, 2018
‘ದಿ ಪೋಸ್ಟ್’ ನೀಡುವ ಚೈತನ್ಯಶೀಲ ಸಂದೇಶ

ಕಡೆಗೋಲು
‘ದಿ ಪೋಸ್ಟ್’ ನೀಡುವ ಚೈತನ್ಯಶೀಲ ಸಂದೇಶ

24 Jan, 2018
ತಲಾಖ್ ಮಸೂದೆ: ನ್ಯಾಯ ದಕ್ಕುವುದೇ?

ಕಡೆಗೋಲು
ತಲಾಖ್ ಮಸೂದೆ: ನ್ಯಾಯ ದಕ್ಕುವುದೇ?

26 Dec, 2017