‘ಯು ಟರ್ನ್’

ಒಂದರೊಳಗೊಂದು... ಬಿಗಿ ಗೋಂದು!

ಚಿತ್ರ– ‘ಯು ಟರ್ನ್’ ನಿರ್ಮಾಪಕ, ನಿರ್ದೇಶಕ: ಪವನ್‌ಕುಮಾರ್ ತಾರಾಗಣ: ಶ್ರದ್ಧಾ ಶ್ರೀನಾಥ್, ದಿಲೀಪ್ ರಾಜ್, ರೋಜರ್ ನಾರಾಯಣ್, ರಾಧಿಕಾ ಚೇತನ್ ಇತರರು  

ಒಂದರೊಳಗೊಂದು... ಬಿಗಿ ಗೋಂದು!

ಚಿತ್ರ– ‘ಯು ಟರ್ನ್’
ನಿರ್ಮಾಪಕ, ನಿರ್ದೇಶಕ: ಪವನ್‌ಕುಮಾರ್
ತಾರಾಗಣ: ಶ್ರದ್ಧಾ ಶ್ರೀನಾಥ್, ದಿಲೀಪ್ ರಾಜ್, ರೋಜರ್ ನಾರಾಯಣ್, ರಾಧಿಕಾ ಚೇತನ್ ಇತರರು

ಸಿನಿಮಾದ ಆರಂಭದ ದೃಶ್ಯವೇ ತಲೆಕೆಳಗಾಗಿ ಕಾಣಿಸತೊಡಗಿದಾಗ ಪ್ರೇಕ್ಷಕರಲ್ಲಿ ಗೊಂದಲ, ಕುತೂಹಲ ಶುರುವಾಗುತ್ತದೆ.

ತಿರುವಿನ ಬಳಿಕ ಸಹಜ ಸ್ಥಿತಿಗೆ ಬರುವ ಕ್ಯಾಮೆರಾದಲ್ಲಿ ಚಿತ್ರಿತವಾಗುವ ದೃಶ್ಯಗಳೂ, ಕೇಳಿಸುವ ಸಂಭಾಷಣೆಗಳೂ ಚಿತ್ರದ ಮುಖ್ಯ ಕಥೆಗೆ ಏನೇನೂ ಸಂಬಂಧವಿಲ್ಲ ಎನಿಸುವಂತೆ ಮಾಡುತ್ತವೆ. ಆದರೆ ನಿರ್ದೇಶಕರ ಕುಶಲತೆ ಗೊತ್ತಾಗುವುದು ಚಿತ್ರದ ಅಂತ್ಯ ಸಮೀಪಿಸಿದಾಗಲಷ್ಟೇ.

ಸಂಚಾರ ನಿಯಮಗಳನ್ನು ಬೆಳ್ಳಿತೆರೆಯತ್ತ ಎಳೆದುತರುವ ಪ್ರಯತ್ನ ಮಾಡಿರುವ ಪವನ್ ಕುಮಾರ್, ತೆಳುವಾದ ಕಥೆಯನ್ನು ಸಿನಿಮಾಕ್ಕೆ ಒಗ್ಗಿಸಿರುವ ಪರಿ ಕುತೂಹಲಕರ. ಬೆಂಗಳೂರಿನಲ್ಲಿ ನಡೆಯುವ ಕಥೆಯಾದರೂ, ಇನ್ನಾವುದೇ ಮಹಾನಗರದಲ್ಲಿಯೂ ಕಾಣಬಹುದಾದ ಚಿತ್ರಣ ‘ಯು ಟರ್ನ್’ನಲ್ಲಿದೆ.

ಒಂದು ಡಜನ್ ಹಾಗೂ ಮೇಲೊಂದು ಸಾವು ಹೇಗೆ ಒಂದಕ್ಕೊಂದು ಸಂಬಂಧ ಹೊಂದಿರುತ್ತವೆ ಎಂಬುದೇ ಆಸಕ್ತಿ ಹುಟ್ಟಿಸುತ್ತದೆ. ಅಂದ ಹಾಗೆ, ಇದು ನೈಜ ಘಟನೆಯನ್ನು ಆಧರಿಸಿದ ಚಿತ್ರ.

ಮೇಲ್ಸೇತುವೆ ಮೇಲೆ ನಡೆಯುವ ಸಹಜ ವಿದ್ಯಮಾನವೊಂದರ ಬೆನ್ನಟ್ಟುವ ಪತ್ರಕರ್ತೆ ರಚನಾ, ತನಗರಿವಿಲ್ಲದಂತೆ ಜಾಲಕ್ಕೆ ಸಿಲುಕುತ್ತಾಳೆ. ಸಂಚಾರ ನಿಯಮ ಉಲ್ಲಂಘಿಸುವವರನ್ನು ರಹಸ್ಯವಾಗಿ ಕಂಡುಹಿಡಿದು, ಅವರನ್ನು ಸಂದರ್ಶಿಸಿ ವಿಶೇಷ ವರದಿ ಬರೆಯುವ ಉತ್ಸಾಹ ಆಕೆಯದು. ಆದರೆ ಅದು ಆಕೆಯನ್ನು ಕೊಲೆಗಾರ್ತಿಯ ಸ್ಥಾನದಲ್ಲಿ ನಿಲ್ಲಿಸುತ್ತದೆ.

ಏನೂ ಸಾಕ್ಷಿ ಸಿಗದೇ ಪೊಲೀಸರು ಆಕೆಯನ್ನು ಬಿಟ್ಟರೂ, ಆಕೆ ಪಟ್ಟು ಬಿಡದೇ ಪೊಲೀಸ್ ಅಧಿಕಾರಿ ಜಿ.ಕೆ. ನಾಯಕ್ ಜತೆಗೂಡಿ ಸಾವಿನ ಸರಣಿಯ ಬೆನ್ನು ಹತ್ತುತ್ತಾಳೆ. ಆ ಕೊಲೆಗೆ ಕಾರಣರಾರು ಎಂಬುದು ಕೊನೆಗೂ ಬಯಲಾಗುತ್ತದೆ. ಅದನ್ನು ನಂಬುವುದು ಬಿಡುವುದು ಪ್ರೇಕ್ಷಕರಿಗೆ ಬಿಟ್ಟಿದ್ದು.

ನಿಗೂಢತೆ, ಒಂದಷ್ಟು ಹಾರರ್, ಅಲ್ಪಸ್ವಲ್ಪ ರೊಮ್ಯಾನ್ಸ್‌ ಒಳಗೊಂಡ ‘ಯು ಟರ್ನ್’ನಲ್ಲಿ ಹಲವು ಘಟನೆಗಳನ್ನು ಒಂದರೊಳಗೊಂದು ಜೋಡಿಸಿದ್ದರಲ್ಲಿ ನಿರ್ದೇಶಕರ ಜಾಣ್ಮೆ ಕಾಣುತ್ತದೆ. ಟೈಮ್‌ ಪಾಸ್‌ಗೆಂದು ಹಾಡುಗಳು, ಫೈಟಿಂಗ್‌ ಅಥವಾ ಕಾಮಿಡಿಗೆ ಜಾಗವೇ ಇಲ್ಲ.

ಸಿನಿಮಾದ ಮೂಲಕ ಸಂದೇಶವನ್ನು ಢಾಳುಢಾಳಾಗಿ ತೋರಿಸುವ ಬದಲಿಗೆ ಸಾಮಾಜಿಕ ಜವಾಬ್ದಾರಿಯ ಮುಖವೊಂದನ್ನು ನಮ್ಮೆದುರಿಗೆ ಹಿಡಿಯುತ್ತಾರೆ ಪವನ್‌ಕುಮಾರ್.

ಶ್ರದ್ಧಾ ಶ್ರೀನಾಥ್ ಅವರದು ಕರಾರುವಾಕ್ಕು ಅಭಿನಯ. ದಿಲೀಪ್‌ ರಾಜ್‌ಗೆ ಹೆಚ್ಚೇನೂ ಅವಕಾಶವಿಲ್ಲ. ಅವರಿಗಿಂತ ಪೊಲೀಸ್ ಅಧಿಕಾರಿಯಾಗಿ ರೋಜರ್ ನಾರಾಯಣ್ ಖಡಕ್‌ ವರ್ತನೆಯಿಂದ ಗಮನ ಸೆಳೆಯುತ್ತಾರೆ. ರಾಧಿಕಾ ಚೇತನ್ ಪಾತ್ರ ಚಿಕ್ಕದಾದರೂ ಮಹತ್ವಕ್ಕೇನೂ ಕಡಿಮೆಯಿಲ್ಲ.

ಒಂದೇ ಸ್ಥಳ ಮತ್ತೆ ಮತ್ತೆ ಕಾಣಿಸಿದರೂ ಬೇಸರ ಅನಿಸದಂತೆ ಮೂವರು ಛಾಯಾಗ್ರಾಹಕರು (ಸತ್ಯ ಹೆಗಡೆ, ಅದ್ವೈತ, ಸಿದ್ಧಾರ್ಥ) ಕೈಚಳಕ ತೋರಿದ್ದಾರೆ.

ಸಹಜತೆಗೆ ಸಮೀಪವೆನಿಸುವ ದೃಶ್ಯಗಳು ಚಿತ್ರವನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತವೆ. ನಿರೂಪಣೆ ಸಾಕಷ್ಟು ಬಿಗಿಯಾಗಿದೆ. ಆಗಾಗ್ಗೆ ರಹಸ್ಯ ಸ್ಫೋಟಗೊಂಡಾಗ ಗೊಂದಲಕ್ಕೆ ಆಸ್ಪದವಿರುವುದಿಲ್ಲ; ಏಕೆಂದರೆ ಪವನ್‌ ಕುಮಾರ್ ಹೇಳುವುದು ಎಲ್ಲವೂ ನೇರಾನೇರ ಕಥೆ.

ಮೇಲ್ಸೇತುವೆಯನ್ನೂ ಅಲ್ಲಿ ನಡೆಯುವ ಅಪಘಾತವನ್ನೂ ಕೇಂದ್ರವಾಗಿಟ್ಟುಕೊಂಡು ನಿಗೂಢ ಕಥಾನಕವನ್ನು ಹೆಣೆದ ಪವನಕುಮಾರ್‌, ಹಾರರ್ ಸಿನಿಮಾದ ಮಾಮೂಲಿ ಪ್ರೇತಗಳನ್ನು ಯಾಕೆ ಅತ್ತ ತಳ್ಳಲಿಲ್ಲ ಎಂಬುದೇ ಸೋಜಿಗ.

Comments